Download in PDF Format :

ಸುಮಾರು ಐದು ಸಾವಿರ ವರ್ಷಗಳ ಹಿಂದೆ, ದ್ವಾಪರದ ಕೊನೆಯಲ್ಲಿ, ವೇದಗಳನ್ನು ವಿಂಗಡಿಸಿ ಬಳಕೆಗೆ ತಂದ ಮಹರ್ಷಿ ವೇದವ್ಯಾಸರೇ ಅವುಗಳ ಅರ್ಥವನ್ನು ತಿಳಿಯಾಗಿ ವಿವರಿಸಲು ಹದಿನೆಂಟು ಪುರಾಣಗಳನ್ನು ರಚಿಸಿದರು. ಈ ಪುರಾಣಗಳಲ್ಲಿ ಹೆಚ್ಚು ಪ್ರಸಿದ್ಧವಾದುದು ಹಾಗೂ ಪುರಾಣಗಳ ರಾಜ ಎನ್ನಬಹುದಾದ ಮಹಾಪುರಾಣ ಭಾಗವತ.
ಸಾವು ಎನ್ನುವ ಹಾವು ಬಾಯಿ ತೆರೆದು ನಿಂತಿದೆ. ಜಗತ್ತಿನ ಎಲ್ಲಾ ಜೀವಜಾತಗಳು ಅಸಾಯಕವಾಗಿ ಅದರ ಬಾಯಿಯೊಳಗೆ ಸಾಗುತ್ತಿವೆ. ಈ ಹಾವಿನಿಂದ ಪಾರಾಗುವ ಉಪಾಯ ಉಂಟೇ? ಉಂಟು, ಶುಕಮುನಿ ನುಡಿದ ಶ್ರೀಮದ್ಭಾಗವತವೇ ಅಂಥಹ ದಿವ್ಯೌಷಧ. ಜ್ಞಾನ-ಭಕ್ತಿ ವಿರಳವಾಗಿರುವ ಕಲಿಯುಗದಲ್ಲಂತೂ ಇದು ತೀರಾ ಅವಶ್ಯವಾದ ದಾರಿದೀಪ.
ಇಲ್ಲಿ ಅನೇಕ ಕಥೆಗಳಿವೆ. ಆದರೆ ನಮಗೆ ಕಥೆಗಳಿಗಿಂತ ಅದರ ಹಿಂದಿರುವ ಸಂದೇಶ ಮುಖ್ಯ. ಒಂದು ತತ್ತ್ವದ ಸಂದೇಶಕ್ಕಾಗಿ ಒಂದು ಕಥೆ ಹೊರತು, ಅದನ್ನು ವಾಸ್ತವವಾಗಿ ನಡೆದ ಘಟನೆ ಎಂದು ತಿಳಿಯಬೇಕಾಗಿಲ್ಲ.
ಮನಸ್ಸು ಶುದ್ಧವಾಗಿದ್ದರೆ ಎಲ್ಲವೂ ಶುದ್ಧ. ಮನಸ್ಸು ಮಲೀನವಾದರೆ ಮೈತೊಳೆದು ಏನು ಉಪಯೋಗ? ನಮ್ಮ ಮನಸ್ಸನ್ನು ತೊಳೆದು ಶುದ್ಧ ಮಾಡುವ ಸಾಧನ ಈ ಭಾಗವತ. ಶ್ರದ್ಧೆಯಿಂದ ಭಾಗವತ ಓದಿದರೆ ಮನಸ್ಸು ಪರಿಶುದ್ಧವಾಗಿ ಭಗವಂತನ ಚಿಂತನೆಗೆ ತೊಡಗುತ್ತದೆ. ಬಿಡುಗಡೆಯ ದಾರಿಯನ್ನು ತೆರೆದು ತೋರಿಸುತ್ತದೆ.
ಪೂಜ್ಯ ಬನ್ನಂಜೆ ಗೋವಿಂದಾಚಾರ್ಯರು ತಮ್ಮ ಭಾಗವತ ಪ್ರವಚನದಲ್ಲಿ ಒಬ್ಬ ಸಾಮಾನ್ಯನಿಗೂ ಅರ್ಥವಾಗುವಂತೆ ವಿವರಿಸಿದ ಭಾಗವತದ ಅರ್ಥಸಾರವನ್ನು ಇ-ಪುಸ್ತಕ ರೂಪದಲ್ಲಿ ಸೆರೆ ಹಿಡಿದು ಆಸಕ್ತ ಭಕ್ತರಿಗೆ ತಲುಪಿಸುವ ಒಂದು ಕಿರುಪ್ರಯತ್ನವನ್ನು ಇಲ್ಲಿ ಮಾಡಲಾಗುತ್ತಿದೆ. ಚಿತ್ರಕೃಪೆ: ಅಂತರ್ಜಾಲ.
Download in PDF Format :
Skandha-01:All 20 Chapters e-Book
Skandha-02 All 10 chapters e-Book

Note: due to unavoidable reason we are unable to publish regular posts. But we will come back soon.......

Saturday, October 21, 2017

Shrimad BhAgavata in Kannada -Skandha-03-Ch-06(10)

ತಥಾSಪರೇ ತ್ವಾತ್ಮಸಮಾಧಿಯೋಗ ಬಲೇನ ಜಿತ್ವಾ ಪ್ರಕೃತಿಂ ಬಲಿಷ್ಠಾಮ್ ।
ತ್ವಾಮೇವ ಧೀರಾಃ ಪುರುಷಂ ವಿಶಂತಿ ತೇಷಾಂ ಶ್ರಮಃ ಸ್ಯಾನ್ನ ತು ಸೇವಯಾ ತೇ ॥೨೫॥

ತಾವು ಯಾವ ಕಾರ್ಯವನ್ನು ಮಾಡಲು ಸೃಷ್ಟಿಯಾಗಿದ್ದೇವೋ, ಆ ಕಾರ್ಯ ಮಾಡಲು ಬೇಕಾದ ಶಕ್ತಿ ಮತ್ತು ಮಾರ್ಗದರ್ಶನವನ್ನು ಬೇಡಿ ಭಗವಂತನನ್ನು ಸ್ತೋತ್ರ ಮಾಡುತ್ತಿರುವ ದೇವತೆಗಳು ಮುಂದುವರಿದು ಹೇಳುತ್ತಾರೆ: “ಇನ್ನು ಕೆಲವರು ಆತ್ಮಸಮಾಧಿಯೋಗದಿಂದ ಬಲಿಷ್ಠವಾದ ಪ್ರಕೃತಿಯನ್ನು ಗೆದ್ದು ನಿನ್ನನ್ನು ಹೋಗಿ ಸೇರುತ್ತಾರೆ. ಧೀರರಾದ ಇಂಥವರಿಗೆ ಇದು ಶ್ರಮ ಎನಿಸುವುದಿಲ್ಲ”  ಎಂದು.
ಇಲ್ಲಿ ಪ್ರಕೃತಿಯನ್ನು ಗೆಲ್ಲುವುದು  ಎಂದರೆ ಸಂಸಾರ ಬಂಧನದಿಂದ ಕಳಚಿಕೊಳ್ಳುವುದು ಎಂದರ್ಥ. ನಾವು ಬಲಿಷ್ಟವಾದ ಪ್ರಕೃತಿ ಬಂಧನದಿಂದ ಕಳಚಿಕೊಳ್ಳಬೇಕೆಂದರೆ ನಮ್ಮನ್ನು ಈ ಸಂಸಾರದಲ್ಲಿರಿಸಿರುವ ಚಿತ್ಪ್ರಕೃತಿಯಾದ ತಾಯಿ  ಶ್ರೀಲಕ್ಷ್ಮಿಯನ್ನು ಗೆಲ್ಲಬೇಕು. ದತ್ತಾತ್ರೇಯನು ತನ್ನ ಯೋಗಶಾಸ್ತ್ರದಲ್ಲಿ ಹೇಳುವಂತೆ: ವಾಯೋಶ್ಚ ಪ್ರಕೃತೇರ್ವಿಷ್ಣೋರ್ಜಯೋ ಭಕ್ತ್ಯೈವ ನಾನ್ಯಥಾ. ಅಂದರೆ: ವಾಯುದೇವನನ್ನು ಜಯಿಸುವುದಾಗಲಿ, ಚಿತ್ಪ್ರಕೃತಿಯನ್ನು ಜಯಿಸುವುದಾಗಲಿ ಕೇವಲ ಭಕ್ತಿಯಿಂದ ಮಾತ್ರ ಸಾಧ್ಯ ಹೊರತು ಇನ್ಯಾವ ಉಪಾಯದಿಂದಲೂ ಸಾಧ್ಯವಿಲ್ಲ ಎಂದರ್ಥ. ಹೀಗಾಗಿ ಪ್ರಕೃತಿಮಾತೆ ಶ್ರಿಲಕ್ಷ್ಮಿಯನ್ನು ಭಕ್ತಿಯಿಂದ ಒಲಿಸಿಕೊಳ್ಳುವುದೇ ಸಂಸಾರ ಬಂಧನವನ್ನು ದಾಟುವ ಉಪಾಯ. ಆದ್ದರಿಂದ ಅವಿನಾಭಾವಿಯರಾದ ಲಕ್ಷ್ಮೀನಾರಾಯಣರಲ್ಲಿ ಮನಸ್ಸನ್ನು ಏಕಾಗ್ರಗೊಳಿಸುವುದೇ(ಆತ್ಮ ಸಮಾಧಿಯೋಗ) ಪ್ರಕೃತಿ ಬಂಧದಿಂದ ಕಳಚಿಕೊಳ್ಳುವ ಏಕೈಕ ಮಾರ್ಗ. ಈ ರೀತಿ  ಸಾಧನೆಯ ಮಾರ್ಗದಲ್ಲಿ ಭಗವಂತನ ಅನುಗ್ರಹವಾಗುವ ತನಕ ಬಿಡದೆ ಸಾಧನೆ ಮಾಡುವ ಗಟ್ಟಿಗರು ಮೋಕ್ಷವನ್ನು ಪಡೆಯುತ್ತಾರೆ.

ಯಾರು ಭಗವಂತನ ಅರಿವಿನ ರುಚಿಯನ್ನು ಅನುಭವಿಸುತ್ತಾರೋ ಅವರಿಗೆ ಸಾಧನೆ ಎನ್ನುವುದು ಶ್ರಮ ಎನಿಸುವುದಿಲ್ಲ. ಏಕೆಂದರೆ ಜ್ಞಾನ ಮಾರ್ಗದ ಸಮಸ್ತ ಪ್ರಯತ್ನವೂ ಕೇವಲ ಆನಂದದ ಅನುಭವವೇ ಹೊರತು ಶ್ರಮವಲ್ಲ. 

Sunday, October 8, 2017

Shrimad BhAgavata in Kannada -Skandha-03-Ch-06(9)

ಮಾರ್ಗಂತಿ ಯತ್ ತೇ ಮುಖಪದ್ಮನೀಡೈಶ್ಛಂದಃಸುಪರ್ಣೈರೃಷಯೋ ವಿವಿಕ್ತೇ ।
ಯಚ್ಚಾಘಮರ್ಷೋ ದ್ಯುಸರಿದ್ದರಾಯಾಃ ಪರಂ ಪದಂ ತೀರ್ಥಪದಃ ಪ್ರಪನ್ನಾಃ ॥೧೯॥

ವೇದಾಧ್ಯಯನದಿಂದ ಜ್ಞಾನ ಪಡೆದ ಋಷಿಗಳು ಏಕಾಂತದಲ್ಲಿ  ಭಗವಂತನ ಮುಖಕಮಲವೆನ್ನುವ ಗೂಡಿನಿಂದ ಹೊರಬಂದ ವೇದಮಂತ್ರವೆನ್ನುವ ಹಕ್ಕಿಯ ಮುಖೇನ ಭಗವಂತನ ಪಾದವನ್ನು ಹುಡುಕುತ್ತಾರೆ.
ಭಗವಂತನ ಪಾದ ಭಕ್ತರ ಪಾಪವನ್ನು ಕಳೆಯುತ್ತದೆ. ಪವಿತ್ರಳಾದ ಗಂಗೆ ಮತ್ತು ತಾಯಿ ಸ್ಥಾನದಲ್ಲಿರುವ ಈ ಭೂಮಿ ಭಗವಂತನ ಪಾದದಿಂದಲೇ ಹುಟ್ಟಿರುವುದು. 'ದ್ಯುಸರಿತೋ ಧರಾಯಾಶ್ಚ' ಗಂಗೆಗೂ ಧರೆಗೂ ಆಶ್ರಯ  ಆ ಭಗವಂತನ ಪವಿತ್ರವಾದ ಪಾದ. ಹೀಗೆ ದೇವತೆಗಳು ಭಗವಂತನನ್ನು ಧ್ಯಾನಿಸುತ್ತಾರೆ.  


Wednesday, March 15, 2017

Shrimad BhAgavata in Kannada -Skandha-03-Ch-06(8)

ಋತೇ ಯದಸ್ಮಿನ್ ಭವ ಈಶ ಜೀವಾಸ್ತಾಪತ್ರಯೇಣಾಭಿಹತಾ ನ ಶರ್ಮ
ಆತ್ಮನ್ಲಭಂತೇ ಭಗವಂಸ್ತವಾಂಘ್ರಿ ಚ್ಛಾಯಾಂಶವಿದ್ಯಾಮತ ಆಶ್ರಯೇಮ ॥೧೮॥

“ಈ ಸಾಂಸಾರಿಕ ಬದುಕಿನಲ್ಲಿ ನೀನು ಈಶ(ಸರ್ವಸಮರ್ಥ). ನಿನ್ನ ಪಾದಮೂಲದ ಸೇವೆ ಇಲ್ಲದಿದ್ದರೆ ಜೀವರು ಎಲ್ಲಾ ಕಡೆಯಿಂದಲೂ ತಾಪತ್ರಯದ ದುಃಖಕ್ಕೆ ಒಳಗಾಗಿ ಮಾನಸಿಕ ನೆಮ್ಮದಿಯನ್ನು ಕಳೆದುಕೊಳ್ಳುತ್ತಾರೆ. ಇಂತಹ ಸ್ಥಿತಿಯಿಂದ ಪಾರಾಗಲು ಇರುವ ಏಕಮಾತ್ರ ಮಾರ್ಗ: ನಿನ್ನ ಪಾದದ ನೆರಳಿನ ಒಂದು ಕ್ಲೇಶ ವಿದ್ಯೆಯ ಸೇವನೆ” ಎನ್ನುತ್ತಾರೆ ದೇವತೆಗಳು.
 ಇಲ್ಲಿ  “ಅಂಘ್ರಿ ಚ್ಛಾಯಾಂಶವಿದ್ಯಾ” ಎನ್ನುವ ಪದ ಬಳಕೆಯಾಗಿದೆ. ಇದರ ಸ್ಥೂಲ ಅರ್ಥ: ಯೋಗ್ಯತಾನುಸಾರವಾದ ಭಗವಂತನ ಪ್ರಜ್ಞೆ. ಇದನ್ನು ಬ್ರಹ್ಮಪುರಾಣದ ಪ್ರಮಾಣ ಶ್ಲೋಕದೊಂದಿಗೆ ಆಚಾರ್ಯ ಮಧ್ವರು ತಮ್ಮ ತಾತ್ಪರ್ಯ ನಿರ್ಣಯದಲ್ಲಿ ವಿವರಿಸಿರುವುದನ್ನು ನಾವು ಕಾಣಬಹುದು.  [ಕೆಲವೆಡೆ ಅಂಘ್ರಿ ಚ್ಛಾಯಾಂಶ ಸವಿದ್ಯಾ ಎನ್ನುವ ಪಾಠ ಬಳಸುತ್ತಾರೆ. ಆದರೆ ಸರಿಯಾದ ಪಾಠ  ಅಂಘ್ರಿ ಚ್ಛಾಯಾಂಶವಿದ್ಯಾ ಎನ್ನುವುದಾಗಿದೆ].  ಬ್ರಹ್ಮಪುರಾಣದಲ್ಲಿ ಹೇಳುವಂತೆ:  ಬ್ರಹ್ಮವಿದ್ಯಾ ಹರೇಶ್ಛಾಯಾ ತದಂಶೋ ಹಿ ಸುರೇಷ್ವಪಿ  ಸರ್ವವಿದ್ಯಾಃ ಶ್ರಿಯಃ ಪ್ರೋಕ್ತಾಃ ಪ್ರಧಾನಾಂಶಶ್ಚತುರ್ಮುಖಃ॥ |  ಹರಿಯಲ್ಲಿರುವ ಸ್ವರೂಪಭೂತವಾದ ತನ್ನ ಬಗೆಗಿನ ಜ್ಞಾನಕ್ಕೆ ಛಾಯೆಯಂತೆ ಸಾಕ್ಷಾತ್ ಪ್ರತಿಬಿಂಬಭೂತವಾದ ಬ್ರಹ್ಮವಿದ್ಯೆಯಲ್ಲಿ ಕೆಲವೇ ಅಂಶಗಳು ಮಾತ್ರ ದೇವತೆಗಳಲ್ಲಿ, ಋಷಿಗಳಲ್ಲಿ ಮತ್ತು ಸಾತ್ತ್ವಿಕ ಜೀವರುಗಳಲ್ಲಿ ಅವರವರ ಯೋಗ್ಯತಾನುಸಾರವಾಗಿರುತ್ತದೆ. ಈ ದೇವಾದಿಗಳ ಎಲ್ಲಾ ಬ್ರಹ್ಮವಿದ್ಯೆಗೂ ಬಿಂಬರೂಪವಾದ ವಿದ್ಯೆ ಇರುವುದು ಶ್ರಿಲಕ್ಷ್ಮಿಯಲ್ಲಾದರೆ,  ಪ್ರತಿಬಿಂಬರೂಪವಾದ ವಿದ್ಯೆ  ಇತರ ಎಲ್ಲಾ ದೇವತೆಗಳಿಗಿಂತ ಅಧಿಕವಾಗಿ ಚತುರ್ಮುಖನಲ್ಲಿರುತ್ತದೆ.

ಮೇಲಿನ ಶ್ಲೋಕದಲ್ಲಿ ‘ತಾಪತ್ರಯ’ ಎನ್ನುವ ಪದ ಬಳಕೆಯಾಗಿದೆ. ಈ ಪದವನ್ನು ಸಾಮಾನ್ಯವಾಗಿ ಎಲ್ಲರೂ  ಬಳಸುತ್ತಾರೆ. ಆದರೆ ಹೆಚ್ಚಿನವರು ಇದರ ಹಿಂದಿರುವ ಅರ್ಥವನ್ನು ತಿಳಿದಿರುವುದಿಲ್ಲ. ಕೆಲವರು ತಾಪತ್ರಯ ಎಂದರೆ ‘ಸಮಸ್ಯೆ’ ಎಂದಷ್ಟೇ ತಿಳಿದಿರುತ್ತಾರೆ. ಆದರೆ ತಾಪತ್ರಯ ಎಂದರೆ ಮೂರು ಬಗೆಯ ತಾಪಗಳು:   ೧. ಆಧ್ಯಾತ್ಮಿಕ: ಅಂದರೆ ಮಾನಸಿಕವಾದ ದುಃಖ, ವ್ಯಥೆ, ರೋಗ, ವೇದನೆ ಇತ್ಯಾದಿ. ೨. ಆದಿದೈವಿಕ: ಪ್ರಕೃತಿಯಿಂದ ಬರುವ ತಾಪಗಳು. ಉದಾಹರಣೆಗೆ: ಅತಿವೃಷ್ಟಿಅನಾವೃಷ್ಟಿ, ಸಿಡಿಲು ಇತ್ಯಾದಿ ಪ್ರಾಕೃತಿಕ ತಾಪ. ೩. ಆದಿಭೌತಿಕ: ಅಪಘಾತ, ದರೋಡೆ, ಇತ್ಯಾದಿ ಭೌತಿಕ ತಾಪ. ಇದಲ್ಲದೆ ಸಂಚಿತ, ಪ್ರಾರಾಬ್ಧ ಮತ್ತು ಆಗಾಮಿ ಪಾಪಗಳೂ ಕೂಡಾ ತಾಪತ್ರಯಗಳು.  ಅದೇ ರೀತಿ ಸ್ವಕೃತ, ಮಿತ್ರಕೃತ ಮತ್ತು ಶತ್ರುಕೃತ ತಾಪಗಳೂ ತಾಪತ್ರಯಗಳು. ಈ ತಾಪತ್ರಯಗಳನ್ನು ಮೀರಿನಿಲ್ಲುವ ಏಕೈಕ ಸ್ಥಿತಿ ‘ಭಗವದ್ ಪ್ರಜ್ಞೆಯಿಂದ ಪಡೆಯುವ ಮೋಕ್ಷಸ್ಥಿತಿ’. 

Friday, March 10, 2017

Shrimad BhAgavata in Kannada -Skandha-03-Ch-06(7)

ಎಲ್ಲಾ ದೇವತೆಗಳಿಗೂ ಶರೀರ, ಶಕ್ತಿ, ಎಲ್ಲವೂ ಬಂದಿದೆ, ಆದರೆ ಅವರಲ್ಲಿ ಸಮಷ್ಟಿಪ್ರಜ್ಞೆ ಇರಲಿಲ್ಲ. ಹೀಗಾಗಿ ಒಬ್ಬೊಬ್ಬರು ಪ್ರತ್ಯೇಕವಾಗಿ ಸೃಷ್ಟಿ ಕಾರ್ಯ ಮುಂದುವರಿಸಲಾಗದೇ ಕಂಗಾಲಾಗುತ್ತಾರೆ. ಭಗವಂತ ಸೃಷ್ಟಿ ಮುಂದುವರಿಸುವ ಜವಾಬ್ದಾರಿ ನೀಡಿದ್ದಾನೆ, ಆದರೆ ಹೇಗೆ ಎನ್ನುವ ಯುಕ್ತಿ  ತಿಳಿಯದ ದೇವತೆಗಳು ಭಗವಂತನ ಮುಂದೆ ಕೈಜೋಡಿಸಿ ಪ್ರಾರ್ಥಿಸಿಕೊಳ್ಳುತ್ತಾರೆ. ಮುಂದೆ ಬರುವ ಶ್ಲೋಕಗಳು ದೇವತೆಗಳ ಪ್ರಾರ್ಥನಾ ಮಂತ್ರಗಳಾಗಿವೆ. ಇದು ಬಹಳ ರೋಚಕವಾದ ಭಗವದ್ ಸ್ತುತಿ.  

ನತಾಃ ಸ್ಮ ತೇ  ನಾಥ ಪದಾರವಿಂದಂ ಪ್ರಪನ್ನತಾಪೋಪಶಮಾತಪತ್ರಮ್
ಯನ್ಮೂಲಕೇತಾ ಯತಯೋಽಞ್ಜಸೋರು ಸಂಸಾರದುಃಖಂ ಬಹಿರುತ್ಕ್ಷಿಪಂತಿ ॥೧೭॥

 “ಭಗವಂತ, ನೀನು ನಮ್ಮನ್ನು ಸೃಷ್ಟಿ ಮಾಡಿ ನಮಗೆ ಶಕ್ತಿ ನೀಡಿದೆ. ಆದರೆ ಆ ಶಕ್ತಿಯನ್ನು ಬಳಸಿ, ನಾವೆಲ್ಲರೂ ಒಟ್ಟು ಸೇರಿ ಹೇಗೆ ಪ್ರಪಂಚ ಸೃಷ್ಟಿ ಮಾಡಬಹುದು ಎನ್ನುವುದು ನಮಗೆ ಹೊಳೆಯುತ್ತಿಲ್ಲ. ಶರಣು ಬಂದವರ ಸಮಸ್ಯೆ ಎನ್ನುವ ಬಿಸಿಲಿಗೆ ನಿನ್ನ ಪಾದ ಕೊಡೆಯಂತೆ. ಆದ್ದರಿಂದ ನಾವು ನಿನ್ನ ಪಾದ ಕಮಲಗಳಿಗೆ ಮಣಿದಿದ್ದೇವೆ.” ಎಂದು ದೇವತೆಗಳು ಭಗವಂತನ ಮುಂದೆ ಕೈ ಮಗಿದು ಪ್ರಾರ್ಥಿಸುತ್ತಾರೆ.  ಸಂಸಾರವೆಂದರೆ ಅದು ದುಃಖದ  ಸಾಗರ. ಈ ದುಃಖದಿಂದ ಪಾರಾಗುವ ಒಂದೇ ಒಂದು ಸಾಧನ ಎಂದರೆ ಅದು ಭಗವಂತನ ಪಾದದಲ್ಲಿ ಶರಣಾಗುವುದು. ಭಗವಂತನನ್ನು ನಿರಂತರ ಆರಾಧಿಸುವ ಪ್ರಯತ್ನಶೀಲರು ‘ಯತಿ’ಗಳೆನಿಸುತ್ತಾರೆ. ದುಃಖ ನಿವಾರಣೆಗಿರುವ ಒಂದೇ ಒಂದು ಮಾರ್ಗ ಎಂದರೆ ಅದು ನಿರ್ಲಿಪ್ತತೆ. ಅಂತಹ ನಿರ್ಲಿಪ್ತತೆಯನ್ನು   ಭಗವಂತನ ಪಾದದಲ್ಲಿ ಶರಣಾಗಿ ನಾವು ಪಡೆಯಬಹುದು. ಇಲ್ಲಿ ದೇವತೆಗಳಿಗೆ ಇನ್ನೂ ಸಂಸಾರ ದುಃಖ ಪ್ರಾರಂಭವಾಗಿಲ್ಲ. ಆದರೆ ಅವರು ಮುಂದೆ ಸೃಷ್ಟಿ ಮಾಡಲು ಹೊರಟಿರುವುದು ಸಂಸಾರವನ್ನು. ಅಂತಹ ಸಂಸಾರವನ್ನು ಸೃಷ್ಟಿ ಮಾಡಲು ಶಕ್ತಿ ಕೊಡು ಎಂದು ಅವರು ಇಲ್ಲಿ ಭಗವಂತನನ್ನು ಪ್ರಾರ್ಥಿಸಿದ್ದಾರೆ. 

Wednesday, March 8, 2017

Shrimad BhAgavata in Kannada -Skandha-03-Ch-06(6)

ಏತೇ ದೇವಾಃ ಕಲಾ ವಿಷ್ಣೋಃ ಕಾಲಮಾಯಾಂಶಲಿಂಗಿನಃ
ನಾನಾತ್ವಾತ್ ಸ್ವಕ್ರಿಯಾನೀಶಾಃ ಪ್ರೋಚುಃ ಪ್ರಾಂಜಲಯೋ ವಿಭುಮ್ ॥೧೬॥

ಈ ಅಧ್ಯಾಯದಲ್ಲಿ ಇಲ್ಲಿಯ ತನಕ ಅನೇಕ ತತ್ತ್ವಗಳ ಸೃಷ್ಟಿಯ ಕುರಿತಾದ ವಿವರಣೆಯನ್ನು ನೋಡಿದೆವು. ಆದರೆ ಈ ಮೇಲಿನ ಶ್ಲೋಕದಲ್ಲಿ ಬಹಳ ಸ್ಪಷ್ಟವಾಗಿ ಹೇಳುತ್ತಾರೆ: “ಯಾವುದೇ ತತ್ತ್ವದ ಸೃಷ್ಟಿ ಬರೀ ತತ್ತ್ವದ ಸೃಷ್ಟಿಯಲ್ಲ, ಅದು ಅದರ ಅಭಿಮಾನಿ ದೇವತೆಗಳ ಸೃಷ್ಟಿ” ಎಂದು. ಈ ಹಿಂದೆ ಹೇಳಿದಂತೆ: ಮಹತತ್ತ್ವದ ದೇವತೆ ಚತುರ್ಮುಖ, ಅಹಂಕಾರ ತತ್ತ್ವದ ದೇವತೆ ಶಿವ. ಆನಂತರ ಹತ್ತು ಇಂದ್ರಿಯಾಭಿಮಾನಿ ದೇವತೆಗಳು, ಪಂಚಭೂತಗಳ ದೇವತೆಗಳು, ಪಂಚ ತನ್ಮಾತ್ರೆಗಳ ದೇವತೆಗಳು. ಹೀಗೆ ಇದು ಮುಂದುವರಿಯುತ್ತದೆ.
ನಮಗೆ ತಿಳಿದಂತೆ ಪಂಚಭೂತಗಳು ಅಭಿಮಾನಿ ದೇವತೆಗಳ ಹಾಗು ಅವರಿಂದ ಅಭಿಮನ್ಯವಾದ ಪಂಚಭೂತಗಳ ಸೃಷ್ಟಿ ಈಗಾಗಲೇ ಆಗಿದೆ. ಆದರೆ ಈ ಪಂಚಭೂತಗಳು ಇಂದು ನಾವು ಕಾಣುವ ಪಂಚಭೂತದಂತೆ ಸೃಷ್ಟಿಯಾಗಿಲ್ಲ. ಏಕೆಂದರೆ ಇಂದು ನಾವು ಕಾಣುವ ಮಣ್ಣು, ನೀರು, ಬೆಂಕಿ ಶುದ್ಧವಾದುದಲ್ಲ. ಅದು  ಮಣ್ಣು-ನೀರು-ಬೆಂಕಿಯ ಮಿಶ್ರಣ. ಆದರೆ ಸೃಷ್ಟಿಯ ಈ ಘಟ್ಟದಲ್ಲಿ ಪರಿಶುದ್ಧ ಪಂಚಭೂತಗಳು ಮಾತ್ರ ಸೃಷ್ಟಿಯಾಗಿವೆ. ಅವು ಇನ್ನೂ ಬೆರಕೆ ಆಗಿಲ್ಲ.
ಈವರೆಗೆ ಸೃಷ್ಟಿಯಾಗಿರುವ ಎಲ್ಲಾ ತತ್ತ್ವಗಳ ಅಭಿಮಾನಿ ದೇವತೆಗಳನ್ನು ಇಲ್ಲಿ ‘ಭಗವಂತನ ಕಲೆಗಳು’ ಎಂದು ಕರೆದಿದ್ದಾರೆ. ಭಗವಂತನ ಕಲೆಗಳು ಎಂದರೆ ಏನು ಎನ್ನುವ ವಿವರಣೆಯನ್ನು ನಾವು ಪ್ರಶ್ನೋಪನಿಷತ್ತಿನಲ್ಲಿ ಕಾಣುತ್ತೇವೆ. “ಪ್ರಾಣಾಚ್ಛ್ರದ್ಧಾಂ ಖಂ ವಾಯುರ್ಜ್ಯೋತಿರಾಪಃ ಪೃಥಿವೀಂದ್ರಿಯಂ ಮನೋSನ್ನಮನ್ನಾದ್ ವೀರ್ಯಂ ತಪೋ ಮಂತ್ರಾಃ ಕರ್ಮ ಲೋಕಾ ಲೋಕೇಷು ನಾಮ ಚ ॥೬-೪॥  ಭಗವಂತನ ಅಧೀನವಾಗಿರುವ ಹದಿನಾರು ದೇವತೆಗಳೇ ಆ ಹದಿನಾರು  ಕಲೆಗಳು. “ಈ ಎಲ್ಲಾ ದೇವತೆಗಳು ಕಾಲಾಧೀನವಾಗಿ ದೇಹವನ್ನು ಪಡೆದರು” ಎಂದಿದ್ದಾರೆ ಮೈತ್ರೆಯರು. ಇಲ್ಲಿ ‘ಕಾಲ’ ಎಂದರೆ ಸಹಜವಾಗಿ ಸರ್ವಸಂಹಾರಕನಾದ ಭಗವಂತ ಎಂದರ್ಥ. ಇದಲ್ಲದೆ ಕಾಲಾಭಿಮಾನಿಯಾದ ಚತುರ್ಮುಖನೂ ಕಾಲ ಶಬ್ದ ವಾಚ್ಯ. ಏಕೆಂದರೆ ಯಾರು ಎಂದು ಹುಟ್ಟಬೇಕು ಎನ್ನುವ ವ್ಯವಸ್ಥೆಯ ಜವಾಬ್ಧಾರಿಯನ್ನು ಭಗವಂತ ಚತುರ್ಮುಖನಿಗೆ ನೀಡಿದ್ದಾನೆ. ಹಾಗಾಗಿ ಚತುರ್ಮುಖ ಒಂದು ರೂಪದಲ್ಲಿ ಕಾಲ ನಿಯಾಮಕ. ಇನ್ನು ಕಾಲ ಶಬ್ದದ ಪ್ರಸಿದ್ಧವಾದ ಅರ್ಥ ಲಕ್ಷ್ಮೀದೇವಿ. ಭಗವಂತನ ಕೈಯಲ್ಲಿರುವ ಲಕ್ಷ್ಮೀಸ್ವರೂಪವಾಗಿರುವ ಸುದರ್ಶನ ಚಕ್ರವನ್ನು ಶ್ರೀಚಕ್ರ ಅಥವಾ ಕಾಲ ಎಂದು ಕರೆಯುತ್ತಾರೆ. ಹೀಗಾಗಿ ಕಾಲ ಎಂದರೆ ಚಿತ್ ಪ್ರಕೃತಿ. ಒಟ್ಟಿನಲ್ಲಿ ಹೇಳಬೇಕೆಂದರೆ ಚತುರ್ಮುಖನ ಎರಡು ರೂಪಗಳು(ಕಾಲಾಭಿಮಾನಿ ಹಾಗು ಜೀವಾಭಿಮಾನಿ) ಮತ್ತು ಪ್ರಕೃತಿ ಅಭಿಮಾನಿನಿಯಾದ ಶ್ರೀಲಕ್ಷ್ಮಿ (ಚಿತ್ಪ್ರಕೃತಿ) ಈ ಮೂವರಿಂದ ಭಗವತನ ಕೃಪಾದೃಷ್ಟಿ ಬಿದ್ದ ಸಮಯದಲ್ಲಿ  ದೇವತೆಗಳ ಶರೀರ ಸೃಷ್ಟಿಯಾಯಿತು. ಈ ಮೇಲಿನ ವಿವರಣೆಯನ್ನು ಆಚಾರ್ಯ ಮಧ್ವರು ತಮ್ಮ ತಾತ್ಪರ್ಯ ನಿರ್ಣಯದಲ್ಲಿ ಪಾದ್ಮಪುರಾಣದ ಪ್ರಮಾಣಶ್ಲೋಕವನ್ನು ನೀಡಿ ಸುಂದರವಾಗಿ ವಿವರಿಸಿರುವುದನ್ನು ನಾವು ಕಾಣುತ್ತೇವೆ.  ಕಾಲಮಾಯಾಂಶಲಿಙ್ಗಿನಃ ತನ್ನಿಮಿತ್ತಶರೀರಾಃ ಹಿರಣ್ಯಗರ್ಭಸ್ಯೈವ ಕಾಲಾಭಿಮಾನೀ ಜೀವಾಭಿಮಾನೀತಿ ದ್ವಿವಿಧಂ ರೂಪಮ್  ‘ಕಾಲಜೀವಾಭಿಮಾನೇನ ರೂಪದ್ವನ್ದ್ವೀ ಚತುರ್ಮುಖಃ॥

ಮೇಲಿನ ಶ್ಲೋಕದಲ್ಲಿ ಲಿಂಗ ಎನ್ನುವ ಪದ ಬಳಕೆಯಾಗಿದೆ. ಸಾಮಾನ್ಯವಾಗಿ ಲಿಂಗ ಎಂದು ಹೇಳಿದಾಗ ನಮಗೆ ನೆನಪಿಗೆ ಬರುವುದು ಶಿವಲಿಂಗ. ಆದರೆ ಇತರ ದೇವತೆಗಳನ್ನೂ  ಲಿಂಗ ರೂಪದಲ್ಲಿ ಪೂಜಿಸುತ್ತಾರೆ.  ವಿಷ್ಣುಲಿಂಗವುಳ್ಳ ಅನೇಕ ದೇವಾಲಯಗಳೂ ನಮ್ಮಲ್ಲಿವೆ(ಉದಾಹರಣೆಗೆ ಶಂಕರನಾರಾಯಣ ದೇವಸ್ಥಾನ). ಮೇಲಿನ ಶ್ಲೋಕದಲ್ಲಿ ಲಿಂಗ ಎನ್ನುವ ಪದವನ್ನು ಕಾಣದ ವಸ್ತುವನ್ನು ಕಾಣುವಂತೆ ಮಾಡುವ ಸಾಧನ ಅಥವಾ ‘ಶರೀರ’ ಎನ್ನುವ ಅರ್ಥದಲ್ಲಿ ಬಳಸಲಾಗಿದೆ. ಒಟ್ಟಿನಲ್ಲಿ ಹೇಳಬೇಕೆಂದರೆ: ಚತುರ್ಮುಖನ ಎರಡು ರೂಪಗಳು ಮತ್ತು ಚಿತ್ ಪ್ರಕೃತಿಯಿಂದ ದೇವತೆಗಳಿಗೆ ಪರಸ್ಪರ ಕಾಣುವಂತಹ ಶರೀರ ಬಂತು.

Sunday, March 5, 2017

Shrimad BhAgavata in Kannada -Skandha-03-Ch-06(5)

ಕಾಲಮಾಯಾಂಶಯೋಗೇನ ಭಗವದ್ವೀಕ್ಷಿತಂ ನಭಃ
ತಾಮಸಾನುಸೃತಂ ಸ್ಪರ್ಶಂ ವಿಕುರ್ವನ್ನಿರ್ಮಮೇಽನಿಲಮ್ ॥೧೧॥

ಮೊದಲು ಆಕಾಶದ(ನಭಃ) ಸೃಷ್ಟಿಯಾಯಿತು. ಇಲ್ಲಿ ಆಕಾಶದ ಸೃಷ್ಟಿ ಎಂದರೆ ಅವಕಾಶದ(space) ಸೃಷ್ಟಿ ಅಲ್ಲ. ಅವಕಾಶ ಮೊದಲಿನಿಂದಲೂ ಇತ್ತು. ಅಂತಹ ಅವಕಾಶದಲ್ಲಿ ಸೃಷ್ಟಿ ಸಾಪೇಕ್ಷವಾದ ವಾತಾವರಣ ಸೃಷ್ಟಿಯಾಯಿತು. ಇದನ್ನು ಇಂದು ನಾವು ಕಣ್ಣಿಗೆ ಕಾಣದ ನೀಲ ವರ್ಣ  (ultraviolet rays) ಎಂದು ಕರೆಯುತ್ತೇವೆ. ಇದನ್ನೇ ಆಚಾರ್ಯ ಮಧ್ವರು “ಆಕಾಶೋ ನೀಲಿಮೋ ದೇಹಿಃ” ಎಂದು ವರ್ಣಿಸಿದ್ದಾರೆ. [ಇಂದು ವೈಜ್ಞಾನಿಕವಾಗಿ ಏನನ್ನು ಹೇಳುತ್ತಿದ್ದಾರೋ, ಅದನ್ನು  ಅತ್ಯಂತ ನಿಖರವಾಗಿ ವೇದದಲ್ಲಿ ಮೊದಲೇ ಹೇಳಿರುವುದನ್ನು ನಾವು ಕಾಣುತ್ತೇವೆ]. ಹೀಗೆ ಅಹಂಕಾರತತ್ತ್ವಮಾನಿನಿ ಶಿವನಿಂದ ಆಕಾಶತತ್ತ್ವದ ದೇವತೆಯಾದ ಗಣಪತಿಯ ಸೃಷ್ಟಿಯಾಯಿತು.
ಯಾವ ಕಾಲದಲ್ಲಿ ಏನು ಸೃಷ್ಟಿಯಾಗಬೇಕು ಎನ್ನುವುದು ತಿಳಿದಿರುವುದು ಕೇವಲ ಭಗವಂತನಿಗೆ ಮಾತ್ರ. ಹಾಗಾಗಿ ಆತನನ್ನು ಕಾಲಪುರುಷ ಎಂದು ಕರೆಯುತ್ತಾರೆ. ಚತುರ್ಮುಖ, ಪ್ರಕೃತಿ ಮತ್ತು ಕಾಲದ ಸಮಾವೇಶದಿಂದ ಸೃಷ್ಟಿ ಬೆಳೆದುಕೊಂಡು ಬರುತ್ತದೆ. ಅಂದರೆ ಮುಂದಿನ ಸೃಷ್ಟಿಗೆ ನಿಯತ ಕಾಲ ಕೂಡಿ ಬರಬೇಕು, ಶ್ರೀಲಕ್ಷ್ಮಿ ಅನುಗ್ರಹವಾಗಬೇಕು,  ಚತುರ್ಮುಖನ ಸಹಕಾರ ಬೇಕು, ಇಷ್ಟೇ ಅಲ್ಲ, ಜೊತೆಗೆ ಭಗವಂತನ ಕೃಪಾದೃಷ್ಟಿ ಬೀಳಬೇಕು.
ಆಕಾಶದ ಸೃಷ್ಟಿಯ ನಂತರ ಮುಂದಿನ ಸೃಷ್ಟಿ ಆಗಬೇಕು ಎಂದು ಭಗವಂತ ದೃಷ್ಟಿಹಾಯಿಸಿದ. ಅವನ ಕೃಪಾದೃಷ್ಟಿ  ಬೀಳುತ್ತಲೇ ಮುಂದಿನ ಸೃಷ್ಟಿಗೆ ಶ್ರೀಲಕ್ಷ್ಮಿ ಮತ್ತು ಚತುರ್ಮುಖ ಸಿದ್ಧರಾದರು.

ಅನಿಲೋಽಪಿ ವಿಕುರ್ವಾಣೋ ನಭಸೋರುಬಲಾನ್ವಿತಃ
ಸಸರ್ಜ ರೂಪತನ್ಮಾತ್ರಾಂ ಜ್ಯೋತಿರ್ಲೋಕಸ್ಯ ಲೋಚನಮ್ ॥೧೨॥

ತಾಮಸ ಅಹಂಕಾರದಿಂದ ಅನುಗತವಾಗಿ, ಚತುರ್ಮುಖ ಮತ್ತು ಪ್ರಕೃತಿಯಿಂದ ಕಾಲಬದ್ಧವಾದ ಸಮಯದಲ್ಲಿ ಭಗವಂತನ ಅನುಗ್ರಹದಿಂದ ತಮೋಮಾನಿನಿಯಾದ ಶಿವನ ಪ್ರೇರಣೆಯಿಂದ ನಿಷ್ಪಂಧವಾದ ಆಕಾಶದಲ್ಲಿ ಕಂಪನ ಹುಟ್ಟಿ ಅದು ಸ್ಪರ್ಶ ತನ್ಮಾತ್ರಾರೂಪವಾಗಿ ಪರಿಣಮಿಸಿ ಆಮೂಲಕ ಗಾಳಿಯನ್ನು ನಿರ್ಮಿಸಿತು. ಗಾಳಿ ಬೀಸತೊಡಗಿತು. ಗಾಳಿಯಿಂದ ಜಗತ್ತಿಗೆಲ್ಲಾ ಕಣ್ಣಾದ ಬೆಳಕಿನ(ಬೆಂಕಿಯ) ಸೃಷ್ಟಿಯಾಯಿತು. ಅಂದರೆ ರೂಪ ತನ್ಮಾತ್ರೆ  ಸೃಷ್ಟಿಯಾಯಿತು. ಇದರಿಂದ ಕಣ್ಣಿಂದ ಕಾಣಬಹುದಾದ ಪ್ರಪಂಚ ಸೃಷ್ಟಿಯಾಯಿತು.

ಅನಿಲೇನಾನ್ವಿತಂ ಜ್ಯೋತಿರ್ವಿಕುರ್ವತ್ ಪರವೀಕ್ಷಿತಮ್
ಆಧತ್ತಾಂಭೋ ರಸಮಯಂ ಕಾಲಮಾಯಾಂಶಯೋಗತಃ ॥೧೩॥

ನೀರು ಸೃಷ್ಟಿಯಾಗುವ ಕಾಲ ಕೂಡಿ ಬರುತ್ತಿದ್ದಂತೆ ಭಗವಂತನ ಕೃಪಾದೃಷ್ಟಿಯಲ್ಲಿ, ಬೆಳಕಿನಿಂದ ಅನುಶಕ್ತವಾಗಿ,  ಹಿಂದೆ ಸೃಷ್ಟಿಯಾಗಿರುವ ಗುಣಗಳನ್ನು ಹೊತ್ತುಕೊಂಡು ರಸ ತನ್ಮಾತ್ರೆ ಸೃಷ್ಟಿಯಾಯಿತು. ಇದರಿಂದ ಜಲ ನಿರ್ಮಾಣವಾಯಿತು. ಪ್ರಪಂಚದಲ್ಲಿ ನಾನಾ ಬಗೆಯ ‘ರುಚಿ’ ಹುಟ್ಟಿಕೊಂಡಿತು.

ಜ್ಯೋತಿಷಾಂಭೋಽನುಸಂಸೃಷ್ಟಂ ವಿಕುರ್ವತ್ ಪರವೀಕ್ಷಿತಮ್
ಮಹೀಂ ಗಂಧಗುಣಾಮಾಧಾತ್ ಕಾಲಮಾಯಾಂಶಯೋಗತಃ ॥೧೪॥

ತೇಜಸ್ಸಿನ ಪರಿಣಾಮವಾದ ಜಲವು ಭಗವಂತನ ಕೃಪಾದೃಷ್ಟಿಗೆ ಗೋಚರವಾಗಿ, ಪರಿಣಾಮಕಾಲ, ಚಿತ್ಪ್ರಕೃತಿ ಮತ್ತು ಚತುರ್ಮುಖರ ಪರಸ್ಪರ ಮೇಲನದಿಂದ ಗಂಧ ತನ್ಮಾತ್ರಾ ಪರಿಣಾಮವಾದ ಮಣ್ಣಿನ ಸೃಷ್ಟಿಯಾಯಿತು. ನೀರು ಹಿಮಗಲ್ಲಿನ ಬಂಡೆಯಾಗಿ, ಮಣ್ಣಾಗಿ, ಭೂಮಿಯಾಯಿತು. ಹೀಗೆ ಪಂಚಜ್ಞಾನೇಂದ್ರಿಯಗಳು, ಪಂಚಭೂತಗಳು, ಪಂಚತನ್ಮಾತ್ರೆಗಳು ಸೃಷ್ಟಿಯಾದವು. 

 ಇಲ್ಲಿ ಪ್ರತಿಯೊಂದು ಹಂತದಲ್ಲೂ ಒಂದನ್ನು ಹಿಂದಿನುದರ ಅನುಗತ ಎಂದು ಹೇಳಿರುವುದನ್ನು ಕಾಣುತ್ತೇವೆ. ಅಂದರೆ: ಮೊದಲು ಕೇವಲ ಶಬ್ದವಿತ್ತು. ನಂತರ ವಾಯುವಿನ ಸೃಷ್ಟಿಯಾಯಿತು. ವಾಯುವಿನಲ್ಲಿ ಶಬ್ದವೂ ಇದೆ, ಸ್ಪರ್ಶವೂ ಇದೆ. ನಂತರ ಅಗ್ನಿ. ಅಲ್ಲಿ ಶಬ್ದ-ಸ್ಪರ್ಶದ ಜೊತೆಗೆ ರೂಪವಿದ್ದರೆ, ನಂತರ ಸೃಷ್ಟಿಯಾದ ನೀರಿನಲ್ಲಿ ಶಬ್ದ-ಸ್ಪರ್ಶ-ರೂಪದ ಜೊತೆಗೆ ರಸ ಹುಟ್ಟಿಕೊಂಡಿತು. ಕೊನೆಯಲ್ಲಿ ಹುಟ್ಟಿದ ಮಣ್ಣಿನಲ್ಲಿ ಮೇಲಿನ ನಾಲ್ಕು ಗುಣಗಳ ಜೊತೆಗೆ ಗಂಧ ಸೇರಿತು. ಹೀಗೆ ಪಂಚಗುಣಗಳು ಉಪೇತವಾದ ಪ್ರಪಂಚ ಸೃಷ್ಟಿಯಾಯಿತು. [ಇನ್ನೂ ಬ್ರಹ್ಮಾಂಡ ಸೃಷ್ಟಿ ಆಗಿಲ್ಲ, ಇದು ಕೇವಲ ಮೂಲವಸ್ತುವಿನ(raw material) ಸೃಷ್ಟಿ ಎನ್ನುವುದನ್ನು ಓದುಗರು ಇಲ್ಲಿ ಗಮನದಲ್ಲಿಟ್ಟುಕೊಂಡು ಮುಂದುವರಿಯಬೇಕು].

Tuesday, February 21, 2017

Shrimad BhAgavata in Kannada -Skandha-03-Ch-06(4)

ವೈಕಾರಿಕಸ್ತೈಜಸಶ್ಚ ತಾಮಸಶ್ಚೇತ್ಯಹಂ ತ್ರಿಧಾ
ಅಹಂತತ್ತ್ವಾದ್ವಿಕುರ್ವಾಣಾನ್ಮನೋ ವೈಕಾರಿಕಾದಭೂತ್ ॥೦೮॥

ವೈಕಾರಿಕಾಶ್ಚ ಯೇ ದೇವಾ ಅರ್ಥಾಭಿವ್ಯಂಜನಂ ಯತಃ
ತೈಜಸಾನೀಂದ್ರಿಯಾಣ್ಯೇವ ಜ್ಞಾನಕರ್ಮಮಯಾನಿ ಚ ॥೦೯॥

ತಾಮಸೋ ಭೂತಸೂಕ್ಷ್ಮಾದಿರ್ಯತಃ ಖಂ ಲಿಂಗಮಾತ್ಮನಃ ॥೧೦॥

ಯಾವಾಗ ಅಹಂಕಾರ ತತ್ತ್ವ ಸೃಷ್ಟಿಯಾಯಿತೋ, ಅದು  ಮೂರು ಮುಖದಲ್ಲಿ ವಿಸ್ತಾರ ಹೊಂದಿತು. ಅಹಂಕಾರ ತತ್ತ್ವದ ದೇವತೆಯಾದ ಶಿವ  ಆ ತತ್ತ್ವವನ್ನು ಮೂರು ವಿಧವಾಗಿ  ವಿಂಗಡಿಸಿದ. (೧) ವೈಕಾರಿಕ ಅಹಂಕಾರ/ಸಾತ್ವಿಕ ಅಹಂಕಾರ (೨) ತೈಜಸ ಅಹಂಕಾರ/ರಾಜಸ ಅಹಂಕಾರ  (೩)ತಾಮಸ ಅಹಂಕಾರ. ವೈಕಾರಿಕ ಅಹಂಕಾರದಿಂದ ವಿಷಯಗಳ ಅರಿವು ಬರುವ ‘ಮನಸ್ಸು’ ಮತ್ತು ಹತ್ತು ಇಂದ್ರಿಯಾಭಿಮಾನಿ ದೇವತೆಗಳ (ವೈಕಾರಿಕರ)ಸೃಷ್ಟಿಯಾಯಿತು. ಇಲ್ಲಿ ವೈಕಾರಿಕಾ ಸೃಷ್ಟಿ ಎಂದರೆ: ಯಾವುದರಿಂದ ವಿಷಯಗಳ ಗ್ರಹಣವಾಗಿ ಅರಿವು ಬರುತ್ತದೋ ಅಂತಹ ಮನಸ್ಸು ಮತ್ತು ದೇವತೆಗಳ ಸೃಷ್ಟಿ [ವಿಷಯಗಳ ಅನುಭವವಾಗುವುದು ದೇವತೆಗಳ ಮೂಲಕ. ಉದಾಹರಣೆಗೆ ಕಣ್ಣಿನಲ್ಲಿರುವ ಸೂರ್ಯನಿಂದ ನಮಗೆ ಅರಿವು ಬರುತ್ತದೆ ಮತ್ತು ಅಲ್ಲಿ ಕಣ್ಣು ಕೇವಲ ಉಪಕರಣ ಅಷ್ಟೇ. ಸೂರ್ಯನಿಂದ ಬಂದ ಅರಿವನ್ನು ಗ್ರಹಣ ಮಾಡಲು ಮನಸ್ಸು ಬೇಕು. ಸ್ವಯಂ ಶಿವನೇ ಮನಸ್ಸಿನ ಅಭಿಮಾನಿ ದೇವತೆ]. ಈ ಹಿಂದೆ ಎರಡನೇ ಸ್ಕಂಧದಲ್ಲಿ ಈಗಾಗಲೇ ನೋಡಿದಂತೆ: ದಿಗ್ವಾತಾರ್ಕಪ್ರಚೇತೋSಶ್ವಿವಹ್ನೀಂದ್ರೋಪೇಂದ್ರಮಿತ್ರಕಾಃ  ಭಾಗವತ ೨-೫-೩೦ ಸಾತ್ತ್ವಿಕ ಅಹಂಕಾರ ನಿಯಾಮಕನಾದ ಶಿವನಿಂದ ಮನಸ್ಸು ಮತ್ತು ಈ ಕೆಳಗೆ ಹೇಳಿರುವ ಹತ್ತು ಇಂದ್ರಿಯಾಭಿಮಾನಿ ದೇವತೆಗಳ ಸೃಷ್ಟಿಯಾಯಿತು.
(೧) ಕಿವಿಯ ಅಭಿಮಾನಿ ದಿಗ್ಧೇವತೆಗಳು. [ಪೂರ್ವದಿಕ್ಕಿಗೆ ಮಿತ್ರ, ಪಶ್ಚಿಮದಿಕ್ಕಿಗೆ    ವರುಣ, ಉತ್ತರ ದಿಕ್ಕಿಗೆ ಕುಬೇರ ಮತ್ತು ದಕ್ಷಿಣ ದಿಕ್ಕಿಗೆ ಯಮ ಅಭಿಮಾನಿ ದೇವತೆಗಳು. ಇವರೆಲ್ಲರ ಮುಖಂಡ ಹಾಗೂ  ಶ್ರೋತ್ರಾಭಿಮಾನಿ: ಸೋಮ(ಚಂದ್ರ)].
 (೨) ಸ್ಪರ್ಶದ ದೇವತೆ ವಾಯು. ಇಲ್ಲಿ ವಾಯು ಎಂದರೆ ಪ್ರಧಾನ ವಾಯು(ಪ್ರಾಣ) ಅಲ್ಲ, ಸ್ಪರ್ಶ ಶಕ್ತಿಯನ್ನು ಕೊಡುವ ಅಹಂಪ್ರಾಣ.
(೩) ಕಣ್ಣಿನ ದೇವತೆ ಅರ್ಕ(ಸೂರ್ಯ).
(೪)ನಾಲಿಗೆ ಅಥವಾ ರಸದ ಅಭಿಮಾನಿ ದೇವತೆ ಪ್ರಚೇತ(ವರುಣ).
(೫) ಮೂಗಿನ ಅಥವಾ ಗಂಧದ ಅಭಿಮಾನಿ ದೇವತೆ ಆಶ್ವೀದೇವತೆಗಳು.
(೬) ಬಾಯಿ ಅಥವಾ ವಾಗೀನ್ದ್ರಿಯದ ದೇವತೆ ವಹ್ನಿ(ಅಗ್ನಿ).
(೭) ಕೈಯ ಅಭಿಮಾನಿ ದೇವತೆ ಇಂದ್ರ.
(೮) ಕಾಲಿನ ಅಭಿಮಾನಿ ದೇವತೆಯಾಗಿ ಸ್ವಯಂ ಭಗವಂತನೇ ಉಪೇಂದ್ರನಾಗಿ ಶಿವನಿಂದ ಹುಟ್ಟಿದ. ಇಂದ್ರ ಪುತ್ರ ಜಯಂತ ಕೂಡಾ ಕಾಲಿನ ಅಭಿಮಾನಿ ದೇವತೆ.
(೯) ದೇಹಕ್ಕೆ ಬೇಡವಾದುದನ್ನು ಹೊರ ಹಾಕುವ ಪಾಯುವಿನ ಅಭಿಮಾನಿ ಮಿತ್ರ ಹಾಗೂ
(೧೦) ಮೂತ್ರ ಮತ್ತು ರೇತಸ್ಸಿನ ವಿಸರ್ಜನೆ ಹಾಗೂ ರೇತಸ್ಸಿನ ಸ್ವೀಕಾರದ ಜನನೇಂದ್ರಿಯದ ಅಭಿಮಾನಿ, ಸಂತಾನ ದೇವತೆಯಾದ ದಕ್ಷಪ್ರಜಾಪತಿ. 
ಹೀಗೆ ವೈಕಾರಿಕ ಅಹಂಕಾರದಿಂದ ಹತ್ತು ಇಂದ್ರಿಯಾಭಿಮಾನಿ ದೇವತೆಗಳ ಹಾಗು ಮನಸ್ಸಿನ ಸೃಷ್ಟಿಯಾಯಿತು. ಅಭಿಮಾನಿ ದೇವತೆಗಳ ಸೃಷ್ಟಿಯಾದ ನಂತರ  ಅವರಿಂದ ಅಭಿಮನ್ಯಮಾನವಾದ ದಶ ಇಂದ್ರಿಯಗಳ ಸೃಷ್ಟಿ ತೈಜಸ ಅಹಂಕಾರದಿಂದಾದರೆ, ತಾಮಸ ಅಹಂಕಾರದಿಂದ ಪಂಚಭೂತಗಳ ಸೃಷ್ಟಿಯಾಯಿತು. ತೈತ್ತಿರೀಯ ಉಪನಿಷತ್ತಿನಲ್ಲಿ ಹೇಳುವಂತೆ:  ಆತ್ಮನಃ ಆಕಾಶ ಸಂಭೂತಃ । ಆಕಾಶಾದ್ವಾಯುಃ । ವಾಯೋರಗ್ನಿಃ । ಅಗ್ನೇರಾಪಃ । ಆಪ್ಯಃ ಪೃಥಿವೀ ।  ಹೀಗೆ ಪಂಚಭೂತಗಳ ಸೃಷ್ಟಿ ಶಿವನಿಂದಾಯಿತು. ಶಿವನ ಮುಖೇನ ಪ್ರಪಂಚ ಪಂಚಮುಖವಾದುದರಿಂದ ಆತನನ್ನು  “ಧ್ಯೇಯಂ ಪಂಚಮುಖೋ ರುದ್ರಃ”  ಎಂದು ಸ್ತುತಿಸುತ್ತಾರೆ.

ಭಗವಂತ ಮೊದಲು ಸೃಷ್ಟಿ ಮಾಡಿದ್ದು ಭೂತ ಸೂಕ್ಷ್ಮವನ್ನು.  ಆನಂತರ ಅದಕ್ಕೆ  ಸ್ಥೂಲರೂಪ ಬಂದಿರುವುದು. ಇಲ್ಲಿ ಭೂತಸೂಕ್ಷ್ಮ ಎಂದರೆ ಅವ್ಯಕ್ತವಾದುದು(non vibratory sound).  ಅದರಿಂದ ಆಕಾಶವಾಯಿತು. ಆಕಾಶದಲ್ಲಿ ಸ್ಪರ್ಶವಾಗುವಂತಹದ್ದು ಹುಟ್ಟಿತು. ಅದು ಗಾಳಿಯಾಯಿತು. ಸ್ಪರ್ಶದಿಂದ ರೂಪವೆನ್ನುವಂತಹದ್ದು ಹುಟ್ಟಿತು. ಅದು ಜ್ಯೋತಿ ಅಥವಾ ಬೆಂಕಿಯಾಯಿತು. ರೂಪದಿಂದ ರಸ ಹುಟ್ಟಿತು. ಅದೇ ನೀರಾಯಿತು. ರಸದಿಂದ ಗಂಧ ಹುಟ್ಟಿತು. ಅದೇ ಮಣ್ಣಾಯಿತು. ಹೀಗೆ ಭೂತಸೂಕ್ಷ್ಮ ಕಾರಣವಾಗಿ ಮುಂದೆ ಎಲ್ಲವೂ ಬೆಳೆದುಕೊಂಡು ಬಂತು. ಇಲ್ಲಿ “ಖಂ ಲಿಂಗಮಾತ್ಮನಃ ಎಂದಿದ್ದಾರೆ. ಖಂ ಎಂದರೆ ಶಬ್ದ. ಆಕಾಶದ ಜೊತೆಗೆ ಭಗವಂತನನ್ನು ಪರಿಚಯಿಸುವಂತಹ ಶಬ್ದ ಹುಟ್ಟಿತು. 

Friday, February 3, 2017

Shrimad BhAgavata in Kannada -Skandha-03-Ch-06(3)

ಇಲ್ಲಿ ಮೊದಲು ನಾವು ಮಹತತ್ತ್ವ ಅಂದರೆ ಏನು ಎನ್ನುವುದನ್ನು ಸ್ಪಷ್ಟವಾಗಿ ತಿಳಿಯಬೇಕಾಗುತ್ತದೆ. “ಅಸ್ಥಿತಾ ಸ್ಥಿತಿಃ ಮಹತತ್ತ್ವಂ” ಅಂದರೆ ಇರವಿನ ಅರಿವು ಅಥವಾ ‘ಇದೆ’ ಎನ್ನುವ ಎಚ್ಚರವೇ ಮಹತತ್ತ್ವ. ಮಹಾತತ್ತ್ವದ ಸೃಷ್ಟಿಯಾಯಿತು ಎಂದರೆ: ದೀರ್ಘ ನಿದ್ರೆಯಲ್ಲಿದ್ದ ಜೀವರುಗಳಿಗೆ ಇರವಿನ ಅರಿವು(ಅಸ್ಮಿ) ಬಂತು ಅಥವಾ ಜೀವಾತ್ಮರಿಗೆ ಎಚ್ಚರವಾಯಿತು ಎಂದರ್ಥ. [ನಮ್ಮ ದೇಹದಲ್ಲಿ ಮಹತತ್ತ್ವವನ್ನು ನಾವು ಚಿತ್ತ ಎಂದು ಕರೆಯುತ್ತೇವೆ]. ಭಗವಂತನ ಸೃಷ್ಟಿ ಕ್ರಿಯೆಯಲ್ಲಿ ಇನ್ನೂ ಸ್ಥೂಲವಾಗಿ ಯಾವುದೂ ಸೃಷ್ಟಿಯಾಗಿಲ್ಲ.  ಚತುರ್ಮುಖನ ಸೃಷ್ಟಿ ಎನ್ನುವುದು ಸೃಷ್ಟಿ ಪ್ರಕ್ರಿಯೆಯ ಅತ್ಯಂತ ಸೂಕ್ಷ್ಮಾತಿ ಸೂಕ್ಷ್ಮ  ಸ್ಥಿತಿ. [ಚತುರ್ಮುಖನಿಗೆ  ಅನೇಕ ಹುಟ್ಟಿದೆ. ಮೊದಲು ಶ್ರೀಲಕ್ಷ್ಮಿಯ ಶಿರಸ್ಸಿನಲ್ಲಿ ಸೂಕ್ಷ್ಮರೂಪದಲ್ಲಿ ಹುಟ್ಟುದ ಆತ ನಂತರ ಭಗವಂತನ ನಾಭಿಯಲ್ಲಿ. ಸ್ಥೂಲರೂಪದಲ್ಲಿ  ಹುಟ್ಟಲಿಕ್ಕಿದ್ದಾನೆ. ಹೀಗೆ ಯಾವ ರೀತಿ ಸೃಷ್ಟಿ ಬೆಳೆಯುತ್ತದೆ ಎನ್ನುವುದನ್ನು ಮುಂದೆ ನೋಡೋಣ].

ಸೋಽಪ್ಯಂಶಗುಣಕಾಲಾತ್ಮಾ ಭಗವದ್ದೃಷ್ಟಿಗೋಚರಃ
ಆತ್ಮಾನಂ ವ್ಯಕರೋದಾತ್ಮಾ ವಿಶ್ವಸ್ಯಾಸ್ಯ ಸಿಸೃಕ್ಷಯಾ ॥೦೬॥

ಚತುರ್ಮುಖ ಹುಟ್ಟುವುದರೊಂದಿಗೆ ಎಲ್ಲ ಜೀವರಿಗೂ ಎಚ್ಚರವಾಯಿತು. ಚತುರ್ಮುಖ ಹುಟ್ಟುವುದಕ್ಕೂ ಮೊದಲು ಕಾಲ ಮತ್ತು ಜೀವಜಾತದ ಅಭಿಮಾನಿನಿಯಾಗಿದ್ದ ಲಕ್ಷ್ಮಿ, ಚತುರ್ಮುಖ ಜನಿಸಿದಾಕ್ಷಣ ಆ ಸ್ಥಾನವನ್ನು ಆತನಿಗೆ ನೀಡುತ್ತಾಳೆ. ಈ ರೀತಿ ಭಗವಂತನ ಪ್ರತಿಬಿಂಬರಾದ(ಅಂಶ ಸ್ಥಾನೀಯರಾದ) ಜೀವರುಗಳಿಗೆ ಚತುರ್ಮುಖ ಅಭಿಮಾನಿ ದೇವತೆಯಾದ. ಒಟ್ಟಿನಲ್ಲಿ ಹೇಳಬೇಕೆಂದರೆ: ಚತುರ್ಮುಖನ ಸೂಕ್ಷ್ಮರೂಪದ ಸೃಷ್ಟಿಯಾಗುತ್ತಿದ್ದಂತೆಯೇ ಆತನಿಗೆ ಜೀವರ ಅಭಿಮಾನ, ತ್ರಿಗುಣಗಳ ಅಭಿಮಾನ ಮತ್ತು ಕಾಲದ ಅಭಿಮಾನವನ್ನು ನೀಡಿ ಅನುಗ್ರಹಿಸುತ್ತಾರೆ ಲಕ್ಷ್ಮೀ ನಾರಾಯಣರು. ಇದರಿಂದಾಗಿ ಚತುರ್ಮುಖನಿಗೆ ಎರಡು ರೂಪಗಳು. ಒಂದು ರೂಪದಲ್ಲಿ ಆತ ಜೀವರನ್ನು ಮತ್ತು ತ್ರಿಗುಣಗಳನ್ನೂ ನಿಯಂತ್ರಿಸಿದರೆ, ಮತ್ತೊಂದು ರೂಪದಲ್ಲಿ ಆತ ಕಾಲವನ್ನು ನಿಯಂತ್ರಿಸುತ್ತಾನೆ. [ಇಲ್ಲಿ ಪ್ರಯೋಗಿಸಿರುವ ‘ಅಂಶ’ ಎನ್ನುವ ಪದದ ಅರ್ಥ ‘ಪ್ರತಿಬಿಂಬ’ ಎಂಬುದಾಗಿದೆ. ಇದನ್ನು ಗೀತೆಯಲ್ಲಿ ವಿವರಿಸಿರುವುದನ್ನು ನಾವು ಕಾಣಬಹುದು. ಮಮೈವಾಂಶೋ ಜೀವಲೋಕೇ ಜೀವಭೂತಃ ಸನಾತನಃ     । (೧೫-೦೭)]. ಹೀಗೆ ಚತುರ್ಮುಖ ‘ಆತ್ಮ’ ನೆನಿಸಿ ಸೃಷ್ಟಿ ಕ್ರಿಯೆಯನ್ನು ಮುಂದುವರಿಸಿದ. [ಮುಖ್ಯ ಅರ್ಥದಲ್ಲಿ ಆತ್ಮಾ ಎಂದರೆ ಭಗವಂತ. ಎರಡನೇ ಅರ್ಥದಲ್ಲಿ ಚತುರ್ಮುಖ]
“ಚತುರ್ಮುಖ ಸೃಷ್ಟಿ ಕಾರ್ಯವನ್ನು ಮುಂದುವರಿಸಿರುವುದು ಸ್ವತಂತ್ರನಾಗಿ ಅಲ್ಲ” ಎನ್ನುವುದನ್ನು ಮೈತ್ರೇಯ ಮಹರ್ಷಿಗಳು ಇಲ್ಲಿ ಸ್ಪಷ್ಟವಾಗಿ ಹೇಳಿರುವುದನ್ನು ನಾವು ಕಾಣುತ್ತೇವೆ. ಭಗವಂತ ಚತುರ್ಮುಖನ ಮೇಲೆ ಕಣ್ಣು ಹಾಯಿಸಿದನಂತೆ. ಅಂದರೆ ಸೃಷ್ಟಿ ಮಾಡುವ ಶಕ್ತಿಯನ್ನು ಆಧಾನ ಮಾಡಿ, ಆತನೊಳಗೆ ಕುಳಿತ ಆ ಭಗವಂತ. ಈ ರೀತಿ ಭಗವಂತನ ಅನುಗ್ರಹದೊಂದಿಗೆ ಚತುರ್ಮುಖ ಸೃಷ್ಟಿ ಕಾರ್ಯವನ್ನು ವಿಸ್ತರಿಸಿದ.

ಮಹತ್ತತ್ತ್ವಾದ್ವಿಕುರ್ವಾಣಾದಹಂತತ್ತ್ವಮಜಾಯತ
ಕಾರ್ಯಕಾರಣಕರ್ತ್ರಾತ್ಮಾ ಭೂತೇಂದ್ರಿಯಮನೋಭವಃ ॥೦೭॥

ಮೊಟ್ಟಮೊದಲು ಚತುರ್ಮುಖ ತನ್ನಿಂದ ಅಭಿಮನ್ಯಮಾನವಾಗಿರುವ ಮಹತತ್ತ್ವವನ್ನು ವಿಕಾರ/ವಿಸ್ತಾರಗೊಳಿಸಿದ. ಇದರಿಂದ ಅಹಂಕಾರ ತತ್ತ್ವದ ಉದಯವಾಯಿತು. ಅಂದರೆ ಅಹಂಕಾರ ತತ್ತ್ವದ ಅಭಿಮಾನಿ ಶಿವನ ಜನನವಾಯಿತು. ಅಹಂಕಾರತತ್ತ್ವದ ಜನನದಿಂದ ಜೀವರಾಶಿಗೆ ‘ತನ್ನತನದ ಅರಿವು’ (Awareness of Self) ಮೂಡಿತು. ಇದು ಜೀವರಾಶಿಗೆ ಶಿವನ ಕೊಡುಗೆಯಾಯಿತು.

Thursday, February 2, 2017

Shrimad BhAgavata in Kannada -Skandha-03-Ch-06(2)

ತತೋಽಭವನ್ಮಹತ್ತತ್ತ್ವಮವ್ಯಕ್ತಾತ್ಕಾಲಚೋದಿತಾತ್
ವಿಜ್ಞಾನಾತ್ಮಾಽಽತ್ಮದೇಹಸ್ಥಂ ವಿಶ್ವಂ ವ್ಯಂಜಂಸ್ತಮೋನುದನ್ ॥೦೫॥

ಪ್ರಳಯಕಾಲ ಉರುಳಿ ಸೃಷ್ಟಿ ಕಾಲ ಬರುತ್ತಿದ್ದಂತೆಯೇ ಪ್ರಪಂಚದ ಯೋಚನೆಯೇ ಇಲ್ಲದೆ ನಿರಂತರ ಭಗವಂತನನ್ನು ಸ್ತೋತ್ರಮಾಡುತ್ತಿದ್ದ ಶ್ರೀಲಕ್ಷ್ಮಿಗೆ ‘ಕಣ್ಣಿಗೆ ಕಾಣುವ ಪ್ರಪಂಚವೊಂದನ್ನು ಸೃಷ್ಟಿಮಾಡಬೇಕು’ ಎನ್ನುವ ಚಿಂತನೆ ಮೂಡಿತು. ಇದೇ ಪ್ರಪಂಚ ಸೃಷ್ಟಿಗೆ ನಾಂದಿಯಾಯಿತು. ಶ್ರೀಲಕ್ಷ್ಮಿ ಚಿಂತನೆ ಮಾಡುತ್ತಿದ್ದಂತೆಯೇ ಸರ್ವಗತನಾದ ಭಗವಂತ ಪುರುಷರೂಪಿಯಾಗಿ ನಿಂತ. ಶ್ರೀಲಕ್ಷ್ಮಿ ಸ್ತ್ರೀರೂಪ ತೊಟ್ಟು ನಿಂತಳು. ಹೀಗೆ ಸಹಜವಾದ ದಾಂಪತ್ಯಕ್ಕೆ ಬೇಕಾದ ಸ್ತ್ರೀ-ಪುರುಷ ರೂಪದಲ್ಲಿ ಲಕ್ಷ್ಮೀ-ನಾರಾಯಣರ ಸಮಾಗಮವಾಯಿತು. ಪುರುಷರೂಪಿ ಭಗವಂತ ತನ್ನ ರೇತಸ್ಸನ್ನು ಲಕ್ಷ್ಮಿಯ ಗರ್ಭದಲ್ಲಿರಿಸಿದ.

ಭಗವಂತ ಸೃಷ್ಟಿಪೂರ್ವದಲ್ಲಿ ಅನುಸರಿಸಿದ ವಿಧಾನವೇ ಇಂದು ಪ್ರಪಂಚದಲ್ಲಿರುವ ವಿಧಾನ. ಆದರೆ ಮುಂದೆ ಜನನದ ವಿಧಾನ ಮಾತ್ರ ಸೃಷ್ಟಿಯ ಆದಿಯಲ್ಲಿ ಭಿನ್ನವಾಗಿರುವುದನ್ನು ನಾವಿಲ್ಲಿ ಕಾಣುತ್ತೇವೆ. ಭಗವಂತ ಲಕ್ಷ್ಮಿಯಿಂದ ಮಹತತ್ತ್ವದ ಅಭಿಮಾನಿಯಾದ ಚತುರ್ಮುಖನನ್ನು ಸೃಷ್ಟಿ ಮಾಡಿದ. ಈ ಹಿಂದೆ ಭಾಗವತದ ಮೊದಲ ಸ್ಕಂಧದಲ್ಲಿ ವಿಶ್ಲೇಶಿಸಿದಂತೆ: ಲಕ್ಷ್ಮಿ ಚತುರ್ಮುಖನನ್ನು ತನ್ನ ಶಿರಸ್ಸಿನಿಂದ  ಸೃಷ್ಟಿಸಿದಳು. [ಅಹಂ ಸುವೇ ಪಿತರಮಸ್ಯ ಮೂರ್ಧನ್ಮಮ ಯೋನಿರಪ್ಸ್ವಂತಃ ಸಮುದ್ರೇ  ತತೋ ವಿ ತಿಷ್ಠೇ ಭುವನಾನು ವಿಶ್ವೋತಾಮೂಂ ದ್ಯಾಂ ವರ್ಷ್ಮಣೋಪ ಸ್ಪೃಶಾಮಿ   ಋಗ್ವೇದ ೧೦-೧೨೫-೦೭ ].  ಈ ಸೃಷ್ಟಿಗೆ ಕಾರಣ ಎರಡು: ಅವ್ಯಕ್ತ ಮತ್ತು ಕಾಲ. ಇಲ್ಲಿ ಅವ್ಯಕ್ತ(ಶ್ರಿತತ್ತ್ವ) ಎಂದರೆ ಚಿತ್ಪ್ರಕೃತಿ ಮತ್ತು ಜಡಪ್ರಕೃತಿ. ತ್ರಿಗುಣಾತ್ಮಕವಾದ ಜಡಪ್ರಕೃತಿಯ ಸತ್ವಾಂಶದಿಂದ, ಉತ್ಪತ್ತಿಕಾಲದಲ್ಲಿ  ಚತುರ್ಮುಖನ ಸೃಷ್ಟಿಯಾಯಿತು. ಉತ್ಪತ್ತಿಕಾಲ ಜಡವಾದುದರಿಂದ  ಕಾಲನಾಮಕ ಭಗವಂತ ಯಾವ ಕಾಲದಲ್ಲಿ ಸೃಷ್ಟಿಯ ಮೊಟ್ಟಮೊದಲ ಜೀವ ಸೃಷ್ಟಿಯಾಗಬೇಕೋ ಆ ಕಾಲದಲ್ಲಿ, ಲಕ್ಷ್ಮಿಯ ಮೂಲಕ,  ಸತ್ವಗುಣದಿಂದ ಚತುರ್ಮುಖನನ್ನು ಸೃಷ್ಟಿಸಿದ. ಲಕ್ಷ್ಮಿ ಚತುರ್ಮುಖನನ್ನು ತನ್ನ ಬೈತಲೆಯಲ್ಲಿ(ಶಿರಸ್ಸಿನಲ್ಲಿ) ಹಡೆದಳು. ಈ ರೀತಿ ಮಹತತ್ತ್ವದ ಅಭಿಮಾನಿ ದೇವತೆಯಾದ ಚತುರ್ಮುಖನ ಮತ್ತು ಮಹತತ್ತ್ವದ ಸೃಷ್ಟಿಯಾಯಿತು.

Tuesday, January 31, 2017

Shrimad BhAgavata in Kannada -Skandha-03-Ch-06(1)

 ಷಷ್ಠೋಽಧ್ಯಾಯಃ

ವಿದುರ-ಮೈತ್ರೇಯ ಸಂವಾದ: ಭಗವಂತನ ಸೃಷ್ಟಿಲೀಲೆಯ ವಿವರಣೆ

ವೇದವ್ಯಾಸರ ಸಹಪಾಠಿ ಮತ್ತು ಗೆಳೆಯನಾದ ಮೈತ್ರೇಯ ಮಹರ್ಷಿ ವೇದವ್ಯಾಸರ ಪುತ್ರನಾದ ವಿದುರನಿಗೆ ತಾನು ಶ್ರೀಕೃಷ್ಣನಿಂದ ಪಡೆದ ಅಧ್ಯಾತ್ಮದ ಸಾರವನ್ನು ವಿವರಿಸಲು ಆರಂಭಿಸುತ್ತಾರೆ. ಪ್ರತಿಯೊಬ್ಬ ಶಾಸ್ತ್ರಕಾರನೂ ಕೂಡಾ ಮೊತ್ತಮೊದಲಿಗೆ ವಿಶ್ಲೇಷಿಸುವುದು ‘ಈ ಪ್ರಪಂಚ ಸೃಷ್ಟಿಯಾದ ಬಗೆ ಹೇಗೆ’ ಎನ್ನುವ ವಿಷಯವನ್ನು.  ಕೆಲವರು ಈ ಪ್ರಪಂಚ ತನ್ನಿಂದ ತಾನೇ ಸೃಷ್ಟಿಯಾಯಿತು ಎನ್ನುತ್ತಾರೆ. ಇನ್ನು ಕೆಲವರು ಎಲ್ಲವೂ ಆಕಸ್ಮಿಕ ಎನ್ನುತ್ತಾರೆ. ಆದರೆ ನಾವು ನಮ್ಮ ಜೀವನದುದ್ದಕ್ಕೂ ಪ್ರತಿಯೊಂದು ಸಂದರ್ಭದಲ್ಲೂ ನೋಡುವಂತೆ ಯಾವುದೂ ಕೂಡಾ ತನ್ನಿಂದ ತಾನೇ ಅಥವಾ ಆಕಸ್ಮಿಕವಾಗಿ  ಸೃಷ್ಟಿಯಾಗುವುದಿಲ್ಲ. ಕಾರಣವಿಲ್ಲದೇ ಕಾರ್ಯವಾಗುವುದಿಲ್ಲ.
ಪ್ರಾಚೀನ ಸಂಪ್ರದಾಯದ ಸೃಷ್ಟಿಕ್ರಮವನ್ನು ನಂಬಿದವರಿಗೂ ಕೂಡಾ ಪ್ರಪಂಚ ಸೃಷ್ಟಿಯ ಕುರಿತು ಅನೇಕ ಗೊಂದಲಗಳಿವೆ. ಕೆಲವರು ಜಗತ್ತನ್ನು ನಾರಾಯಣ ಸೃಷ್ಟಿಸಿದ ಎಂದರೆ, ಇನ್ನು ಕೆಲವರು ಚತುರ್ಮುಖನಿಂದ ಈ ಜಗತ್ತು ನಿರ್ಮಾಣವಾಯಿತು ಎನ್ನುತ್ತಾರೆ. ಇಲ್ಲಿ ಮೈತ್ರೆಯರು ಮೊತ್ತಮೊದಲಿಗೆ ಈ ವಿಷಯವನ್ನೇ  ವಿವರಿಸುವುದನ್ನು ನಾವು ಕಾಣಬಹುದು.
ನಮ್ಮ ಕಣ್ಣಮುಂದಿರುವ ಈ ಪ್ರಪಂಚ ಸೃಷ್ಟಿಯಾದುದು ಯಾವುದರಿಂದ? ಪ್ರಪಂಚ ಸೃಷ್ಟಿಗೂ ಮುನ್ನ ಏನಿತ್ತು? ಯಾವುದೋ ಮೂಲವಸ್ತುವಿನಿಂದ ಈ ಪ್ರಪಂಚ ಸೃಷ್ಟಿಯಾಯಿತೋ ಅಥವಾ ಏನೂ ಇಲ್ಲದೇ ಎಲ್ಲವೂ ಸೃಷ್ಟಿಯಾಯಿತೋ? ಐತರೇಯಾ ಉಪನಿಷತ್ತಿನಲ್ಲಿ ಹೇಳುತ್ತಾರೆ:  ಆತ್ಮಾ ವಾ ಇದಮೇಕ ಏವಾಗ್ರ ಆಸೀತ್ | ನಾನ್ಯತ್ ಕಿಂಚನ ಮಿಷತ್ | [ಐತರೇಯಾ ಉಪನಿಷತ್ತು ೧.೧.೧].   ಉಪನಿಷತ್ತಿನ ಈ ಮಾತಿನ ಅರ್ಥವೇನು?  ಈ ಎಲ್ಲ ವಿಷಯವನ್ನು ಇಲ್ಲಿನ ಮೊದಲ  ಎರಡು ಶ್ಲೋಕಗಳ ಮುಖೇನ ಮೈತ್ರೇಯ ಮಹರ್ಷಿಗಳು ವಿದುರನಿಗೆ ವಿವರಿಸಿರುವುದನ್ನು ನಾವಿಲ್ಲಿ ಕಾಣುತ್ತೇವೆ.

ಭಗವಾನ್ ಏಕ ಆಸೇದಮ್ ಅಗ್ರೇ ಆತ್ಮಾಽಽತ್ಮನಾಂ ವಿಭುಃ
ಆತ್ಮೇಚ್ಛಾನುಗತೋ ಹ್ಯಾತ್ಮಾ ನಾನಾಶಕ್ತ್ಯುಪಲಕ್ಷಿತಃ ॥೦೧॥

‘ಭಗವಾನ್ ಏಕಃ ಆಸೇದ ಇದಮ್ ಅಗ್ರೇ’. “ಮೊದಲು ಆ ಭಗವಂತನೊಬ್ಬನೇ ಇದ್ದ” ಎನ್ನುತ್ತಾರೆ ಮೈತ್ರೆಯರು. ಆ ಭಗವಂತ ಯಾರು ಎನ್ನುವುದನ್ನು ನಾವು ಈಗಾಗಲೇ ಭಾಗವತದಲ್ಲಿ ನೋಡಿದ್ದೇವೆ. [ಬ್ರಹ್ಮೇತಿ ಪರಮಾತ್ಮೇತಿ ಭಗವಾನಿತಿ ಶಬ್ದ್ಯತೇ ೧.೨.೧೧] ಯಾರನ್ನು ವೇದದಲ್ಲಿ ಬ್ರಹ್ಮಾ, ಪರಮಾತ್ಮಾ ಎಂದು ಕರೆಯುತ್ತಾರೋ, ಅಂತಹ ಅನೇಕ ಜೀವರುಗಳ ಸ್ವಾಮಿಯಾದ ಭಗವಂತ ಒಬ್ಬನೇ ಈ ಪ್ರಪಂಚ ಸೃಷ್ಟಿಯಾಗುವ ಮುಂಚೆ ಇದ್ದ.
ಇಲ್ಲಿ ಆತ್ಮಾ ಎನ್ನುವ ಪದ ಬಳಕೆಯಾಗಿದೆ. ಜೀವನನ್ನೂ ಆತ್ಮಾ ಎಂದು ಕರೆದರೂ ಕೂಡಾ, ಆತ್ಮಾ ಪದದ ಮುಖ್ಯ ಅರ್ಥ ಭಗವಂತ. ಯಾರು ಇಚ್ಛಿಸಿದ್ದೆಲ್ಲವನ್ನೂ ಪಡೆಯಬಲ್ಲನೋ, ಯಾರು ಸಮಸ್ತ ಶಕ್ತಿ ಸಾಮರ್ಥ್ಯವನ್ನು ಹೊಂದಿದ್ದಾನೋ, ಅಂತಹ ಸರ್ವಸಮರ್ಥನಾದ ಭಗವಂತನೇ ಆತ್ಮಾ. “ಇಂತಹ ಎಲ್ಲ ಜೀವರುಗಳ ಸ್ವಾಮಿಯಾದ [ಆತ್ಮನಾಂ ವಿಭುರ್ಜೀವಾಧಿಪಃ] ಭಗವಂತ ಪ್ರಳಯಕಾಲದಲ್ಲಿ ಒಬ್ಬನೇ ಇದ್ದ” ಎಂದಿದ್ದಾರೆ ಮೈತ್ರೆಯರು.
ಈ ಮೇಲಿನ ಮಾತು ನಮಗೆ ಗೊಂದಲವನ್ನುಂಟುಮಾಡುತ್ತದೆ. “ಎಲ್ಲ ಜೀವರುಗಳ ಸ್ವಾಮಿಯಾದ ಭಗವಂತ ಒಬ್ಬನೇ ಇದ್ದ” ಎನ್ನುವ ಮಾತಿನ ಅರ್ಥವೇನು? ಜೀವರುಗಳ ಸ್ವಾಮಿಯಾಗಬೇಕಾದರೆ ಅಲ್ಲಿ ಜೀವರುಗಳೂ ಇರಬೇಕಲ್ಲವೇ? ಈ ಗೊಂದಲವನ್ನು ಮೈತ್ರೇಯ ಮಹರ್ಷಿಗಳು ಮುಂದಿನ ಶ್ಲೋಕದಲ್ಲಿ ಬಗೆಹರಿಸಿದ್ದಾರೆ:


ಸ ವಾ ಏಷ ಯದಾ ದ್ರಷ್ಟಾ ನಾಪಶ್ಯದ ವಿಶ್ವಮೇಕರಾಟ್
ಮೇನೇಽಸಂತಮಿವಾತ್ಮಾನಂ ಸುಪ್ತಶಕ್ತಿರಸುಪ್ತದೃಕ್ ॥೦೨॥

“ಎಲ್ಲಾ ಕಾಲದಲ್ಲೂ ಎಲ್ಲವನ್ನೂ ಕಾಣಬಲ್ಲ ಭಗವಂತ, ಪ್ರಳಯಕಾಲದಲ್ಲಿದ್ದ ಜೀವಾತ್ಮರನ್ನು ‘ಇದ್ದಾರೆ’ ಎಂದು ಕಾಣಲಿಲ್ಲ” ಎಂದಿದ್ದಾರೆ ಮೈತ್ರೆಯರು. ಇದ್ದದ್ದನ್ನು ಇಲ್ಲಾ ಎಂದು ಕಂಡರೆ ಅದು ಭ್ರಮೆಯಾಗುತ್ತದಲ್ಲವೇ? ಹಾಗಿದ್ದರೆ ಈ ಮಾತಿನ ಅರ್ಥವೇನು?
ಈ ಮಾತಿನ ಒಳಾರ್ಥವನ್ನು ಪ್ರಮಾಣ ಸಹಿತ ಆಚಾರ್ಯ ಮಧ್ವರು ತಮ್ಮ ತಾತ್ಪರ್ಯ ನಿರ್ಣಯದಲ್ಲಿ ಸುಂದರವಾಗಿ ವಿವರಿಸಿರುವುದನ್ನು ನಾವು ಕಾಣುತ್ತೇವೆ. ಅಗ್ನಿ ಪುರಾಣದಲ್ಲಿ ಹೇಳಿರುವಂತೆ: ಪರಮಾತ್ಮಾ ಯತೋ ಜೀವಂ ಮೇನೇಽಸನ್ತಮಶಕ್ತಿತಃ ಅಸನ್ನಸಾವತೋ ನಿತ್ಯಂ ಸತ್ಯಜ್ಞಾನೋ ಯತೋ ಹರಿಃ  ಪ್ರಳಯಕಾಲದಲ್ಲಿ ಸಮಸ್ತ ಜೀವಾತ್ಮರು ಯಾವ ಶಕ್ತಿಯೂ ಇಲ್ಲದೇ ನಿದ್ರಾವಸ್ಥೆಯಲ್ಲಿದ್ದರು. ಅವರಿಗೆ ಯಾವ ಪ್ರಜ್ಞೆಯೂ ಇರಲಿಲ್ಲ. ಈ ರೀತಿ ಎಚ್ಚರತಪ್ಪಿ ಮೂರ್ಛಾವಸ್ಥೆಯಲ್ಲಿದ್ದುದರಿಂದ ಅಂತಹ ಜೀವಾತ್ಮರನ್ನು ಭಗವಂತ ಇಲ್ಲವೆಂಬಂತೆ ಕಂಡ. 
ನಮಗೆ ತಿಳಿದಂತೆ ಪ್ರಳಯಕಾಲದಲ್ಲಿ ಚತುರ್ಮುಖ-ಪ್ರಾಣದೇವರು ಎಚ್ಚರ ತಪ್ಪುವುದಿಲ್ಲ. [ಪ್ರಳಯೇಪಿ ಪ್ರತಿಭಾತ ಪರಾ-ವರಾಹ]. ಆದರೆ ಅವರೂ ಕೂಡಾ ನಿಷ್ಕ್ರೀಯರಾಗಿರುವುದರಿಂದ ಇದ್ದೂ ಇಲ್ಲದಂತಾಗುತ್ತಾರೆ.
ಜೀವಾತ್ಮರೇನೋ ಎಚ್ಚರದಲ್ಲಿರಲಿಲ್ಲ ಅಥವಾ ನಿಷ್ಕ್ರೀಯರಾಗಿದ್ದರು ಸರಿ, ಆದರೆ ಶ್ರೀಲಕ್ಷ್ಮಿ?  ಎಂದರೆ ಮೈತ್ರೆಯರು ಹೇಳುತ್ತಾರೆ: “ಆಕೆ ಸುಪ್ತಳಾಗಿದ್ದಳು” ಎಂದು. ಶ್ರೀಲಕ್ಷ್ಮಿಯ ಸುಪ್ತಾವಸ್ಥೆ ಎಂದರೆ ಅದು ಜೀವಾತ್ಮರಂತೆ ಸಂಪೂರ್ಣ ಎಚ್ಚರ ತಪ್ಪಿರುವುದಲ್ಲ. ಬ್ರಹ್ಮತರ್ಕದಲ್ಲಿ ಹೇಳುವಂತೆ: ಶಕ್ಯತ್ವಾಚ್ಛಕ್ತಯೋ ಭಾರ್ಯಾಃ ಶಕ್ತಿಃ ಸಾಮರ್ಥ್ಯಮುಚ್ಯತೇ ಸುಪ್ತಾವಸ್ಥೆಯಲ್ಲಿ ಆಕೆ ಕೇವಲ ಭಗವಂತನಲ್ಲಿ ಮಾತ್ರ ಆಸ್ಥೆ  ಹೊಂದಿದ್ದು, ಇನ್ನ್ಯಾವುದರ ಬಗೆಗೂ ಎಚ್ಚರ/ಆಸಕ್ತಿ ಹೊಂದಿರುವುದಿಲ್ಲ. [ಆಚಾರ್ಯ ಮಧ್ವರು ತಮ್ಮ ಭಾಷ್ಯದಲ್ಲಿ ಭಾರ್ಯಾಃ(ಪತ್ನಿಯರು) ಎಂದು ಬಹುವಚನ ಪ್ರಯೋಗ ಮಾಡಿರುವುದನ್ನು ನಾವು ಕಾಣುತ್ತೇವೆ. ಇಲ್ಲಿ ಶ್ರೀಲಕ್ಷ್ಮಿ ಒಬ್ಬಳೇ ಇರುವಾಗ ಬಹುವಚನ ಪ್ರಯೋಗವೇಕೆ ಎನ್ನುವ ಪ್ರಶ್ನೆ ನಿಮ್ಮಲ್ಲಿ ಬರಬಹುದು. ಇದಕ್ಕೆ ಕಾರಣವೆಂದರೆ: ಪ್ರಳಯ ಕಾಲದಲ್ಲಿ ಶ್ರಿಲಕ್ಷ್ಮಿಯು ತನ್ನ ಶ್ರೀ-ಭೂ-ದುರ್ಗಾ ರೂಪದಲ್ಲಿ  ಭಗವಂತನ ಜೊತೆಗೆ ಯೋಗ ನಿದ್ರೆಯಲ್ಲಿರುತ್ತಾಳೆ. ಇಷ್ಟೇ ಅಲ್ಲ, ವೇದದ ಒಂದೊಂದು ಮಂತ್ರಕ್ಕೂ ಅಭಿಮಾನಿಯಾಗಿರುವ ಶ್ರೀಲಕ್ಷ್ಮಿಯ ಅನಂತ ರೂಪಗಳಿವೆ. ಆ ಅನಂತ ರೂಪಗಳೊಂದಿಗೆ ಆಕೆ ಭಗವಂತನನ್ನು ನಿರಂತರ ಸ್ತೋತ್ರಮಾಡುತ್ತಿರುತ್ತಾಳೆ].

ಈ ರೀತಿ ಒಂದಕ್ಕೊಂದನ್ನು ತಳಕುಹಾಕಿ ನೋಡುತ್ತಾ ಹೋದಾಗ ಒಂದು ಅದ್ಭುತವಾದ ಪ್ರಳಯಕಾಲದ ಪ್ರಪಂಚ ನಮ್ಮ ಕಣ್ಣಮುಂದೆ ನಿಲ್ಲುತ್ತದೆ. ಯಾವುದೂ ಇಲ್ಲ, ಆದರೆ ಎಲ್ಲವೂ ಇದೆ. ಎಚ್ಚರವಾಗಿದ್ದಾರೆ ಆದರೂ ನಿಷ್ಕ್ರೀಯರಾಗಿದ್ದಾರೆ. ವ್ಯೋಮಸಂಹಿತದಲ್ಲಿ ಹೇಳುವಂತೆ: ಸುಪ್ತಿಸ್ತುಪ್ರಕೃತೇಃ ಪ್ರೋಕ್ತಾ ಅತೀವ ಭಗವದ್ರತಿಃ| ಅನಾಸ್ಥಾಽನ್ಯತ್ರ ಚ ಪ್ರೋಕ್ತಾ ವಿಷ್ಣೋಶ್ಚಕ್ಷುರ್ನಿಮೀಲನಮ್ ॥ ಜಡ ಪ್ರಕೃತಿಯೂ ಕೂಡಾ ಪರಿಣಾಮವಿಲ್ಲದೇ ಸುಪ್ತವಾಗಿರುತ್ತದೆ. ಕೇವಲ ಭಗವಂತ ಮಾತ್ರ ತನ್ನ ಶಕ್ತಿ ಸಾಮರ್ಥ್ಯದೊಂದಿಗೆ ಯೋಗನಿದ್ರೆಯಲ್ಲಿರುತ್ತಾನೆ. ಭಗವಂತನ ನಿದ್ರೆ ಎಂದರೆ ಅದು ‘ಚಿಂತಿಸುವ ಅಥವಾ ಯೋಚಿಸುತ್ತಿರುವ ಎಚ್ಚರದ ಸ್ಥಿತಿ. ಆತನಲ್ಲಿ ಮಾತ್ರ ಸಮಸ್ತ ಕಾಲದಲ್ಲಿ ಎಲ್ಲವೂ ಜಾಗೃತವಾಗಿರುತ್ತದೆ. ಇದು ಸೃಷ್ಟಿಪೂರ್ವದ ಒಂದು ಅತ್ಯದ್ಭುತ ಚಿತ್ರಣ.


ಸೃಷ್ಟಿಪೂರ್ವದ ಸ್ಥಿತಿಯನ್ನು ಒಟ್ಟಿನಲ್ಲಿ ಹೇಳಬೇಕೆಂದರೆ: ಭಗವಂತ ಕಣ್ಮುಚ್ಚಿ ತನ್ನ ಆನಂದವನ್ನು ತಾನೇ ಅನುಭವಿಸುತ್ತಿದ್ದಾನೆ. ಅಷ್ಟೇ ಅಲ್ಲ, ತನ್ನನ್ನು ಸ್ತೋತ್ರಮಾಡುತ್ತಿರುವ ಪತ್ನಿ ಲಕ್ಷ್ಮೀದೇವಿಯ ಶ್ರುತಿಗೀತೆಯನ್ನು ಕೇಳುತ್ತಾ ಅದನ್ನು ಆಸ್ವಾದಿಸುತ್ತಿದ್ದಾನೆ. ಶ್ರೀಲಕ್ಷ್ಮಿ ಪ್ರಳಯಕಾಲದ ಪ್ರಾರಂಭದಿಂದ ಕೊನೆಯತನಕ ಇತರ ಯಾವುದೇ ವಿಷಯದಲ್ಲಿ ಆಸಕ್ತಿ ತೋರದೇ, ಅಖಂಡ ವೇದಮಂತ್ರಗಳಿಂದ ಭಗವಂತನನ್ನು ಸ್ತೋತ್ರ ಮಾಡುತ್ತಿದ್ದಾಳೆ. ಚತುರ್ಮುಖ ನಿಷ್ಕ್ರೀಯನಾಗಿದ್ದಾನೆ. ಉಳಿದ ಸಮಸ್ತ ಜೀವಾತ್ಮರುಗಳಿಗೆ ಎಚ್ಚರವೇ ಇಲ್ಲ. ಈ ರೀತಿ ಭಗವಂತನೊಬ್ಬನೆ ಯಾವುದೇ ಜ್ಞಾನ ಲೋಪವಿಲ್ಲದೆ ಎಚ್ಚರದ ಯೋಗನಿದ್ರೆಯಲ್ಲಿದ್ದುದರಿಂದ, ಇತರ ಯಾವುದೇ ಜೀವಜಾತ ಸಕ್ರೀಯವಾಗಿಲ್ಲವಾದ್ದರಿಂದ, ಶ್ರಿಲಕ್ಷ್ಮಿಯೂ ಕೂಡಾ ಭಗವಂತನಲ್ಲಿ ಮಾತ್ರ ಆಸ್ಥೆ  ಹೊಂದಿದ್ದು, ಇನ್ನ್ಯಾವುದರ ಬಗೆಗೂ ಎಚ್ಚರ/ಆಸಕ್ತಿ ಹೊಂದಿಲ್ಲವಾದ್ದರಿಂದ,   ಸರ್ವಸಮರ್ಥನಾದ, ಎಲ್ಲಾ ಕಾಲದಲ್ಲೂ ಎಲ್ಲವನ್ನೂ ಕಾಣಬಲ್ಲ ಭಗವಂತ,  ತನ್ನನ್ನು ಬಿಟ್ಟು ಇನ್ನೇನೂ ಇಲ್ಲವೆಂಬಂತೆ ಪ್ರಪಂಚವನ್ನು ಕಂಡ ಸ್ಥಿತಿಯೇ ಸೃಷ್ಟಿಪೂರ್ವ ಸ್ಥಿತಿ.   

Sunday, January 29, 2017

Shrimad BhAgavata in Kannada (Shloka) Skandha-03 Chapter-06

ಅಥ ಷಷ್ಠೋಽಧ್ಯಾಯಃ


 ಭಗವಾನೇಕ ಆಸೇದಮಗ್ರ ಆತ್ಮಾಽಽತ್ಮನಾಂ ವಿಭುಃ
 ಆತ್ಮೇಚ್ಛಾನುಗತೋ ಹ್ಯಾತ್ಮಾ ನಾನಾಶಕ್ತ್ಯುಪಲಕ್ಷಿತಃ ॥೦೧॥

 ಸ ವಾ ಏಷ ತದಾ ದ್ರಷ್ಟಾ ನಾಪಶ್ಯದ ವಿಶ್ವಮೇಕರಾಟ್
 ಮೇನೇಽಸಂತಮಿವಾತ್ಮಾನಂ ಸುಪ್ತಶಕ್ತಿರಸುಪ್ತದೃಕ್ ॥೦೨॥

 ಸಾ ವಾ ಏತಸ್ಯ ಸಂದ್ರಷ್ಟುಃ ಶಕ್ತಿಃ ಸದಸದಾತ್ಮಿಕಾ
 ಮಾಯಾ ನಾಮ ಮಹಾಭಾಗ ಯಯೇದಂ ನಿರ್ಮಮೇ ವಿಭುಃ ॥೦೩॥

 ಕಾಲವೃತ್ತ್ಯಾಂತು ಮಾಯಾಯಾಂ ಗುಣಮಯ್ಯಾಮಧೋಕ್ಷಜಃ
 ಪುರುಷೇಣಾತ್ಮಭೂತೇನ ವೀರ್ಯಮಾಧತ್ತ ವೀರ್ಯವಾನ್ ॥೦೪॥

 ತತೋಽಭವನ್ಮಹತ್ತತ್ತ್ವಮವ್ಯಕ್ತಾತ್ಕಾಲಚೋದಿತಾತ್
 ವಿಜ್ಞಾನಾತ್ಮಾಽಽತ್ಮದೇಹಸ್ಥಂ ವಿಶ್ವಂ ವ್ಯಂಜಂಸ್ತಮೋನುದನ್ ॥೦೫॥

 ಸೋಽಪ್ಯಂಶಗುಣಕಾಲಾತ್ಮಾ ಭಗವದ್ದೃಷ್ಟಿಗೋಚರಃ
 ಆತ್ಮಾನಂ ವ್ಯಕರೋದಾತ್ಮಾ ವಿಶ್ವಸ್ಯಾಸ್ಯ ಸಿಸೃಕ್ಷಯಾ ॥೦೬॥

 ಮಹತ್ತತ್ತ್ವಾದ್ವಿಕುರ್ವಾಣಾದಹಂತತ್ತ್ವಮಜಾಯತ
 ಕಾರ್ಯಕಾರಣಕರ್ತ್ರಾತ್ಮಾ ಭೂತೇಂದ್ರಿಯಮನೋಭವಃ ॥೦೭॥

 ವೈಕಾರಿಕಸ್ತೈಜಸಶ್ಚ ತಾಮಸಶ್ಚೇತ್ಯಹಂ ತ್ರಿಧಾ
 ಅಹಂತತ್ತ್ವಾದ್ವಿಕುರ್ವಾಣಾನ್ಮನೋ ವೈಕಾರಿಕಾದಭೂತ್ ॥೦೮॥

 ವೈಕಾರಿಕಾಶ್ಚ ಯೇ ದೇವಾ ಅರ್ಥಾಭಿವ್ಯಂಜನಂ ಯತಃ
 ತೈಜಸಾನೀಂದ್ರಿಯಾಣ್ಯೇವ ಜ್ಞಾನಕರ್ಮಮಯಾನಿ ಚ ॥೦೯॥

 ತಾಮಸೋ ಭೂತಸೂಕ್ಷ್ಮಾದಿರ್ಯತಃ ಖಂ ಲಿಂಗಮಾತ್ಮನಃ ॥೧೦॥

 ಕಾಲಮಾಯಾಂಶಯೋಗೇನ ಭಗವದ್ವೀಕ್ಷಿತಂ ನಭಃ
 ತಾಮಸಾನುಸೃತಂ ಸ್ಪರ್ಶಂ ವಿಕುರ್ವನ್ನಿರ್ಮಮೇಽನಿಲಮ್ ॥೧೧॥

 ಅನಿಲೋಽಪಿ ವಿಕುರ್ವಾಣೋ ನಭಸೋರುಬಲಾನ್ವಿತಃ
 ಸಸರ್ಜ ರೂಪತನ್ಮಾತ್ರಾಂ ಜ್ಯೋತಿರ್ಲೋಕಸ್ಯ ಲೋಚನಮ್ ॥೧೨॥

 ಅನಿಲೇನಾನ್ವಿತಂ ಜ್ಯೋತಿರ್ವಿಕುರ್ವತ್ ಪರವೀಕ್ಷಿತಮ್
 ಆಧತ್ತಾಂಭೋ ರಸಮಯಂ ಕಾಲಮಾಯಾಂಶಯೋಗತಃ ॥೧೩॥

 ಜ್ಯೋತಿಷಾಂಭೋಽನುಸಂಸೃಷ್ಟಂ ವಿಕುರ್ವತ್ ಪರವೀಕ್ಷಿತಮ್
 ಮಹೀಂ ಗಂಧಗುಣಾಮಾಧಾತ್ ಕಾಲಮಾಯಾಂಶಯೋಗತಃ ॥೧೪॥

ಭೂತಾನಾಂ ನಭಆದೀನಾಂ ಯದ್ಯದ್ ಭಾವ್ಯಂ ಪರಾತ್ ಪರಮ್
ತೇಷಾಂ ಪರಾನುಸಂಸರ್ಗಾದ್ ಯಾಥಾ ಸಂಖ್ಯಂ ಗುಣಾನ್ ವಿದುಃ ॥೧೫॥

ಏತೇ ದೇವಾಃ ಕಲಾ ವಿಷ್ಣೋಃ ಕಾಲಮಾಯಾಂಶಲಿಂಗಿನಃ
ನಾನಾತ್ವಾತ್ ಸ್ವಕ್ರಿಯಾನೀಶಾಃ ಪ್ರೋಚುಃ ಪ್ರಾಂಜಲಯೋ ವಿಭುಮ್ ॥೧೬॥

ದೇವಾ ಊಚುಃ
ನತಾಃ ಸ್ಮ ತೇ  ನಾಥ ಪದಾರವಿಂದಂ ಪ್ರಪನ್ನತಾಪೋಪಶಮಾತಪತ್ರಮ್
ಯನ್ಮೂಲಕೇತಾ ಯತಯೋಽಞ್ಜಸೋರು ಸಂಸಾರದುಃಖಂ ಬಹಿರುತ್ಕ್ಷಿಪಂತಿ ॥೧೭॥

ಋತೇ ಯದಸ್ಮಿನ್ ಭವ ಈಶ ಜೀವಾಸ್ತಾಪತ್ರಯೇಣಾಭಿಹತಾ ನ ಶರ್ಮ
ಆತ್ಮನ್ಲಭಂತೇ ಭಗವಂಸ್ತವಾಂಘ್ರಿ ಚ್ಛಾಯಾಂ ಸವಿದ್ಯಾಮತ ಆಶ್ರಯೇಮ ॥೧೮॥

 ಮಾರ್ಗಂತಿ ಯತ್ ತೇ ಮುಖಪದ್ಮನೀಡೈಶ್ಛಂದಃಸುಪರ್ಣೈರೃಷಯೋ ವಿವಿಕ್ತೇ
ಯಚ್ಚಾಘಮರ್ಷೋ ದ್ಯುಸರಿದ್ದರಾಯಾಃ ಪರಂ ಪದಂ ತೀರ್ಥಪದಃ ಪ್ರಪನ್ನಾಃ ॥೧೯॥

ಯಚ್ಛ್ರದ್ಧಯಾ ಶ್ರುತವತ್ಯಾ ಚ ಭಕ್ತ್ಯಾ ಸಂಮೃಜ್ಯಮಾನೇ ಹೃದಯೇಽವಧಾಯ
ಜ್ಞಾನೇನ ವೈರಾಗ್ಯಬಲೇನ ಧೀರಾ ವ್ರಜಂತಿ ಯತ್ತೇಽಙ್ಘ್ರಿಸರೋಜಪೀಠಮ್ ॥೨೦॥

ವಿಶ್ವಸ್ಯ ಜನ್ಮಸ್ಥಿತಿಸಂಯಮಾರ್ಥೇ ಕೃತಾವತಾರಸ್ಯ ಪದಾಂಬುಜಂ ತೇ
ವ್ರಜೇಮ ಸರ್ವೇ ಶರಣಂ ಯದೀಶ ಸ್ಮೃತಂ ಪ್ರಯಚ್ಛತ್ಯಭಯಂ ಸ್ವಪುಂಸಾಮ್ ॥೨೧॥

ಯತ್ಸಾನುಬಂಧೇಽಸತಿ ದೇಹಗೇಹೇ ಮಮಾಹಮಿತ್ಯೂಢದುರಾಗ್ರಹಾಣಾಮ್
ಪುಂಸಾಂ ಸುದೂರಂ ವಸತೋಽಪಿ ಪುರ್ಯಾಂ ಭಜೇಮ ತತ್ತೇ ಭಗವನ್ಪದಾಬ್ಜಮ್ ॥೨೨॥

ತಂ ತ್ವಾಮಸದ್ವೃತ್ತಿಭಿರಕ್ಷಿಭಿರ್ಯೇ ಪರಾಹೃತಾಂತರ್ಮನಸಃ ಪರೇಶ
ಅಥೋ ನ ಪಶ್ಯಂತ್ಯುರುಗಾಯ ನೂನಮೇತೇ ಪದನ್ಯಾಸವಿಲಾಸಲಕ್ಷ್ಯಾಃ ॥೨೩॥

ಪಾನೇನ ತೇ ದೇವ ಕಥಾಸುಧಾಯಾಃ ಪ್ರವೃದ್ಧಭಕ್ತ್ಯಾ ವಿಶದಾಶಯಾ ಯೇ
ವೈರಾಗ್ಯಸಾರಂ ಪ್ರತಿಲಭ್ಯ ಬೋಧಂ ಯಥಾಂಜಸಾ ತ್ವೇಯುರಕುಂಠಧಿಷ್ಣ್ಯಮ್ ॥೨೪॥

ತಥಾಽಪರೇ ತ್ವಾತ್ಮಸಮಾಧಿಯೋಗ ಬಲೇನ ಜಿತ್ವಾ ಪ್ರಕೃತಿಂ ಬಲಿಷ್ಠಾಮ್
ತ್ವಾಮೇವ ಧೀರಾಃ ಪುರುಷಂ ವಿಶಂತಿ ತೇಷಾಂ ಶ್ರಮಃ ಸ್ಯಾನ್ನ ತು ಸೇವಯಾ ತೇ ॥೨೫॥

ತತ್ತೇ ವಯಂ ಲೋಕಸಿಸೃಕ್ಷಯಾಽದ್ಯ ತ್ವಯಾ ವಿಸೃಷ್ಟಾಸ್ತ್ರಿಭಿರಾತ್ಮಭಿರ್ಯೇ
ಸರ್ವೇ ವಿಯುಕ್ತಾಃ ಸ್ವವಿಹಾರತಂತ್ರಂ ನ ಶಕ್ನುಮಸ್ತತ್ ಪ್ರತಿಕರ್ತವೇ ತೇ ॥೨೬॥

ಯಾವದ್ ಬಲಿಂ ತೇಽಜ ಹರಾಮ ಕಾಲೇ ಯಥಾ ವಯಂ ಚಾನ್ನಮದಾಮ ಯತ್ರ
ಯಥೋಭಯೇಷಾಂ ತ ಇಮೇ ಹಿ ಲೋಕಾ ಬಲಿಂ ಹರಂತೋಽನ್ನಮದಂತ್ಯನೀಶಾಃ ॥೨೭॥

ತ್ವಂ ನಃ ಸುರಾಣಾಮಸಿ ಸಾನ್ವಯಾನಾಂ ಕೂಟಸ್ಥ ಆದ್ಯಃ ಪುರುಷಃ ಪುರಾಣಃ
ತ್ವಂ ದೇವ ಶಕ್ತ್ಯಾಂ ಗುಣಕರ್ಮಯೋನೌ ರೇತಸ್ತ್ವಜಾಯಾಂ ಕವಿರಾದಧೇಽಜಃ ॥೨೮॥

ತತೋ ವಯಂ ಸತ್ಪ್ರಮುಖಾ ಯದರ್ಥೇ ಬಭೂವಿಮಾತ್ಮನ್ ಕರವಾಮ ಕಿಂ ತೇ
ತ್ವಂ ನಃ ಸ್ವಚಕ್ಷುಃ ಪರಿದೇಹಿ ಶಕ್ತಾ  ದೇವ ಕ್ರಿಯಾರ್ಥೇ ಯದನುಗ್ರಹೇಣ ॥೨೯॥

ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ತೃತೀಯಸ್ಕಂಧೇ ಷಷ್ಠೋಽಧ್ಯಾಯಃ ॥
ಭಾಗವತ ಮಹಾಪುರಾಣದ ಮೂರನೇ  ಸ್ಕಂಧದ ಆರನೇ ಅಧ್ಯಾಯ ಮುಗಿಯಿತು


*********