ಮುನಿರ್ವಿವಕ್ಷುರ್ಭಗವದ್ಗುಣಾನಾಂ ಸಖಾSಪಿ ತೇ ಭಾರತಮಾಹ ಕೃಷ್ಣಃ ।
ಯಸ್ಮಿನ್ ನೃಣಾಂ ಗ್ರಾಮ್ಯಸುಖಾನುವಾದೈರ್ಮತಿರ್ಗೃಹೀತಾ ನ ಹರೇಃ ಕಥಾಯಾಮ್ ॥೧೨॥
“ನಿಮ್ಮ ಗೆಳೆಯ ವೇದವ್ಯಾಸರು ಮಹಾಭಾರತವನ್ನು ಭಗವಂತನ ಗುಣಾನುಸಂದಾನಕ್ಕಾಗಿಯೇ ರಚನೆ ಮಾಡಿದರು. ನಿಜವಾದ ಭಗವಂತನ ಭಕ್ತಿಯಿಂದ, ಶ್ರದ್ಧೆಯಿಂದ ಭಾರತವನ್ನು ಓದಿದರೆ ಗ್ರಾಮ್ಯ ಸುಖದ ಕಡೆಗೆ ಮನಸ್ಸು ಹರಿಯುವುದೇ ಇಲ್ಲ” ಎನ್ನುತ್ತಾನೆ ವಿದುರ.
ವ್ಯಾಸರು ಭಾರತವನ್ನು ಎರಡು ವಿಧದ ಅರ್ಥ ಬರುವಂತೆ ರಚನೆ ಮಾಡಿದ್ದಾರೆ. ಜೀವಯೋಗ್ಯತೆಗನುಗುಣವಾಗಿ ಅದು ಅರ್ಥವಾಗಬೇಕು ಎನ್ನುವುದು ಅವರ ಉದ್ದೇಶ. ಯಾರಿಗೆ ಹರಿಯ ಕಥೆಯಲ್ಲೇ ಮನಸ್ಸು ನಿಲ್ಲುತ್ತದೋ ಅವರಿಗೆ ಅಲ್ಲಿ ಭಗವಂತನ ಗುಣಗಾನ ಬಿಟ್ಟು ಇನ್ನೇನೂ ಕಾಣುವುದಿಲ್ಲ.
ಈ ಶ್ಲೋಕದಲ್ಲಿ ಬಳಕೆಯಾದ ‘ಮತಿರ್ಗೃಹೀತಾ ನ’ ಎನ್ನುವ ಪದವನ್ನು ಅನೇಕ ವ್ಯಾಖ್ಯಾನಕಾರರು ತಪ್ಪಾಗಿ ಗ್ರಹಿಸಿ ‘ಮಹಾಭಾರತ ರಚನೆ ಮಾಡಿರುವುದು ಅನಧಿಕಾರಿಗಳಿಗಾಗಿ, ಭಗವಂತನ ಗುಣವನ್ನು ಹೇಳುವುದಕ್ಕಾಗಿ ಅಲ್ಲಾ’ ಎನ್ನುವಂತೆ ಹೇಳಿರುವುದೂ ಇದೆ. ಈ ತಪ್ಪು ತಿಳುವಳಿಕೆಯನ್ನು ಆಚಾರ್ಯ ಮಧ್ವರು ತಮ್ಮ ತಾತ್ಪರ್ಯ ನಿರ್ಣಯದಲ್ಲಿ ಪ್ರಮಾಣ ಸಹಿತ ಸರಿಪಡಿಸಿ ವಿವರಿಸಿದ್ದಾರೆ.
ಪದ್ಮ ಪುರಾಣದಲ್ಲಿ ಹೇಳುವಂತೆ: ಯಸ್ಮಿನ್ ಭಾರತೇ । ಹರೇಃ ಕಥಾಯಾಂ ಗ್ರಾಮ್ಯಸುಖಾನುವಾದೈರ್ಮತಿರ್ನ ಗೃಹೀತಾ । “ಭಾರತಾನ್ನಾಧಿಕಂ ವಿಷ್ಣೋರ್ಮಹಿಮಾವಾಚಕಂ ಕ್ವಚಿತ್ । ಭಾರತಾನ್ನ ವಿರಾಗಾಯ ಭಾರತಾನ್ನ ವಿಮುಕ್ತಯೇ” ಇತಿ ಪಾದ್ಮೇ ॥
ಭಾರತಕ್ಕೆ ಮಿಗಿಲಾಗಿ ಭಗವಂತನ ಮಹಿಮೆಯನ್ನು ಹೇಳುವ ಇನ್ನೊಂದು ಗ್ರಂಥ ಈ ದೇಶದಲ್ಲಿ ನಿರ್ಮಾಣವಾಗಿಲ್ಲ. ಅಧ್ಯಾತ್ಮ ಗ್ರಂಥಗಳಲ್ಲೇ ಸರ್ವಶ್ರೇಷ್ಠ ಗ್ರಂಥ ಭಾರತ. ಹರಿವಂಶದಲ್ಲಿ ಹೇಳುವಂತೆ: ವೇದೇ ರಾಮಾಯಣಂಚೈವ ಪುರಾಣೇ ಭಾರತೇ ತಥಾ, ಆದೌ ಅಂತೇ ಚ ಮಧ್ಯೆ ಚ, ವಿಷ್ಣುಃ ಸರ್ವತ್ರಗೀಯತೆ. ಮಹಾಭಾರತ ಮೊದಲಿನಿಂದ ಕೊನೆ ತನಕ ಅದು ವಿಷ್ಣುವಿನ ಗುಣಗಾತಾ. ಭಾರತಕ್ಕಿಂತ ಹೆಚ್ಚಿನ ವೈರಾಗ್ಯಜನಕವಾದ ಗ್ರಂಥ ಇನ್ನೊಂದಿಲ್ಲ. ಅದಕ್ಕಿಂತ ಹೆಚ್ಚು ಮೋಕ್ಷಸಾಧಕವಾದ ಗ್ರಂಥವೂ ಇನ್ನೊಂದಿಲ್ಲ.
ಇತಿಹಾಸಪುರಾಣಂ ಪಂಚಮಂ ವೇದಾನಾಂ ವೇದಃ. ಮಹಾಭಾರತವನ್ನು ವೇದಗಳಿಗೂ ಮಿಗಿಲಾದ ಗ್ರಂಥ ಎನ್ನುತ್ತಾರೆ. ಇದಕ್ಕೆ ಕಾರಣವೇನೆಂದರೆ: ವೇದದ ಅರ್ಥ ವೇದವನ್ನು ಭಗವಂತನಿಂದ ಉಪದೇಶವಾಗಿ ಪಡೆದ ಚತುರ್ಮುಖ ಸಂಪೂರ್ಣವಾಗಿ ತಿಳಿದಿದ್ದಾನೆ. ಆದರೆ ಮಹಾಭಾರತದ ಪೂರ್ತಿ ಅರ್ಥ ಚತುರ್ಮುಖನಿಗೂ ತಿಳಿದಿಲ್ಲ. ಭಾರತದಲ್ಲಿ ಭಗವಂತ ತನ್ನ ಪ್ರಜ್ಞೆಗೆ ಮಾತ್ರ ಗೋಚರವಾಗುವ ಅನೇಕ ರಹಸ್ಯವನ್ನು ಅಡಗಿಸಿಟ್ಟಿದ್ದಾನೆ. ಹೀಗಾಗಿ ಅದನ್ನು ವೇದಕ್ಕಿಂತ ಮಿಗಿಲಾದ ಗ್ರಂಥ ಎನ್ನಲಾಗಿದೆ. ಈ ಎಲ್ಲಾ ಹಿನ್ನೆಲೆಯಲ್ಲಿ ನೋಡಿದಾಗ ಮಹಾಭಾರತ ಅನಧಿಕಾರಿಗಳಿಗೆ ಅರ್ಥವಾಗದ ಗ್ರಂಥ ನಿಜ, ಆದರೆ ಅದು ಅನಧಿಕಾರಿಗಳಿಗಾಗಿ ರಚಿಸಿರುವ ಗ್ರಂಥವಲ್ಲ. ಆದರೆ ಅದು ಭಗವಂತನ ಗುಣವನ್ನು ಸಾರುವ ಮಹತ್ತರವಾದ ಗ್ರಂಥ ಎನ್ನುವ ಸತ್ಯ ಸ್ಪಷ್ಟವಾಗುತ್ತದೆ.
ಸಾ ಶ್ರದ್ದಧಾನಸ್ಯ ವಿವರ್ದ್ಧಮಾನಾ ವಿರಕ್ತಿಮನ್ಯತ್ರ ಕರೋತಿ ಪುಂಸಃ ।
ಹರೇಃ ಪದಾನುಸ್ಮೃತಿನಿರ್ವೃತಸ್ಯ ಸಮಸ್ತದುಃಖಾಪ್ಯಯಮಾಶು ಧತ್ತೇ ॥೧೩॥
ಭಗವಂತನ ಕಥೆಯಲ್ಲಿ ಇರುವ ‘ಮತಿ’ ಶ್ರೆದ್ಧೆಯಿಂದ ಹೆಚ್ಚುತ್ತಾ ಹೋಗುತ್ತದೆ ಹೊರತು ಕಡಿಮೆಯಾಗುವುದಿಲ್ಲ. ಈ ‘ಮತಿ’ ಸಂಸ್ಮೃತಿ ಬಂಧವನ್ನು[ವಿಷಯ ಸುಖದ ಬಂಧವನ್ನು] ಬಿಡಿಸಿ ಬಿಡುತ್ತದೆ. ಇದರಿಂದ ದುಃಖವನ್ನು ಮೀರಿ ನಿಲ್ಲಲು ಸಾಧ್ಯವಾಗುತ್ತದೆ. ಹೃದಯದಲ್ಲಿ ಸಂಪೂರ್ಣ ಭಗವಂತನನ್ನು ತುಂಬಿಕೊಂಡಾಗ ಅಲ್ಲಿ ದುಃಖಕ್ಕೆ ಯಾವ ಸ್ಥಾನವೂ ಇಲ್ಲವಾಗುತ್ತದೆ.
ಈ ರೀತಿಯ ಪೀಠಿಕೆಯೊಂದಿಗೆ ಮಾತನ್ನಾರಂಭಿಸಿದ ವಿದುರ ಮೈತ್ರೇಯನಲ್ಲಿ ತನಗೆ ಶ್ರೀಕೃಷ್ಣನ ಕಥೆಯನ್ನು ವಿವರಿಸಿ ಹೇಳಬೇಕಾಗಿ ಕೋರಿಕೊಳ್ಳುತ್ತಾನೆ.
ಮೈತ್ರೇಯ ಉವಾಚ
ಸಾಧು ಪೃಷ್ಟಂ ತ್ವಯಾ ಸಾಧೋ ಲೋಕಾನ್ ಸಾಧ್ವನುಗೃಹ್ಣತಾ ।
ಕೀರ್ತಿಂ ವಿತನ್ವತಾ ಲೋಕೇ ಆತ್ಮನೋSಧೋಕ್ಷಜಾತ್ಮನಃ ॥೧೮॥
ನೈತಚ್ಚಿತ್ರಂ ತ್ವಯಿ ಕ್ಷತ್ತರ್ಬಾದರಾಯಣವೀರ್ಯಜೇ ।
ಗೃಹೀತೋSನನ್ಯಭಾವೇನ ಯತ್ ತ್ವಯಾ ಹರಿರೀಶ್ವರಃ ॥೧೯॥
ಮಾಣ್ಡವ್ಯಶಾಪಾದ್ ಭಗವಾನ್ ಪ್ರಜಾಸಂಯಮನೋ ಯಮಃ ।
ಭ್ರಾತುಃ ಕ್ಷೇತ್ರೇ ಭುಜಿಷ್ಯಾಯಾಂ ಜಾತಃ ಸತ್ಯವತೀಸುತಾತ್ ॥೨೦॥
ಭವಾನ್ ಭಗವತೋ ನಿತ್ಯಂ ಸಮ್ಮತಃ ಸಾನುಗಸ್ಯ ಹಿ ।
ಜ್ಞಾನೋಪದೇಶಾಯ ಚ ಮಾಮಾದಿಶದ್ ಭಗವಾನ್ ವ್ರಜನ್ ॥೨೧॥
“ಸರ್ವ ಸಮರ್ಥನಾದ ಭಗವಂತನನ್ನು ಅನನ್ಯ ಭಕ್ತಿಯಿಂದ ಹೃದಯದಲ್ಲಿ ಹೊತ್ತುಕೊಂಡಿರುವ ನೀನು ಇಂಥಹ ಪ್ರಶ್ನೆ ಹಾಕಿರುವುದು ಆಶ್ಚರ್ಯದ ಸಂಗತಿಯೇನಲ್ಲ. ನೀನೇನೂ ಸಾಮಾನ್ಯ ವ್ಯಕ್ತಿಯಲ್ಲ. ಬೇಕೆಂದೇ ಮಾಂಡವ್ಯನಿಂದ ಶಾಪಗ್ರಸ್ತನಾಗಿ ಮನುಷ್ಯ ಜನ್ಮದಲ್ಲಿ ಹುಟ್ಟಿರುವ, ಅಧರ್ಮಿಗಳಿಗೆ ಶಿಕ್ಷೆಯನ್ನು ನೀಡುವ ಯಮಧರ್ಮನಲ್ಲವೇ ನೀನು? ವಿಚಿತ್ರವೀರ್ಯನ ಕ್ಷೇತ್ರದಲ್ಲಿ ಜನಿಸಬೇಕಾಗಿದ್ದ ನೀನು, ಅರಮನೆಯ ದಾಸಿಯಲ್ಲಿ ವೇದವ್ಯಾಸರಿಂದ ಜನಿಸಿದೆ. ಇಂತಹ ದೇವಾಂಶ ಸಂಭೂತನಾಗಿರುವ ನಿನಗೆ ನಾನು ಉಪದೇಶಿಸುವುದೇನಿದೆ” ಎಂದು ವಿದುರನನ್ನು ಮೈತ್ರೇಯ ಪ್ರಶ್ನಿಸುತ್ತಾನೆ.
“ಶ್ರೀಕೃಷ್ಣನಿಗೆ ನೀನೆಂದರೆ ಅತ್ಯಂತ ಪ್ರೀತಿ. ನೀನು ನನ್ನಿಂದ ಹಿರಿಯನಾದರೂ ಕೂಡಾ, ನಾನು ಭಗವಂತನಿಂದ ಪಡೆದ ಜ್ಞಾನವನ್ನು ನಿನಗೆ ನೀಡಬೇಕೆಂಬುದು ಶ್ರೀಕೃಷ್ಣನ ಆದೇಶ. ಆದ್ದರಿಂದ ನಾನು ನಿನಗೆ ಜ್ಞಾನೋಪದೇಶ ಮಾಡುತ್ತೇನೆ” ಎನ್ನುತ್ತಾನೆ ಮೈತ್ರೇಯ.
ಅಥ ತೇ ಭಗವಲ್ಲೀಲಾ ಯೋಗಮಾಯೋಪಬೃಂಹಿತಾಃ ।
ವಿಶ್ವಸ್ಥಿತ್ಯುದ್ಭವಾನ್ತಾರ್ಥಾ ವರ್ಣಯಾಮ್ಯನುಪೂರ್ವಶಃ ॥೨೨॥
“ತನ್ನ ಯೋಗಮಾಯೆಯಿಂದ(ಸ್ವರೂಪ ಸಾಮರ್ಥ್ಯದಿಂದ) ಈ ಭೂಮಿಯ ಮೇಲೆ ಭಗವಂತನಾಡಿದ ಜಗತ್ತಿನ ಸೃಷ್ಟಿ-ಸ್ಥಿತಿ-ಸಂಹಾರಗಳಿಗೆ ಕಾರಣವಾದ ಲೀಲೆಗಳನ್ನು, ಶ್ರೀಕೃಷ್ಣನಿಂದ ನನಗೆ ಉಪದೇಶಿಸಲ್ಪಟ್ಟ ಸಮಸ್ತ ಅಧ್ಯಾತ್ಮದ ಮತ್ತು ಸೃಷ್ಟಿಯ ರಹಸ್ಯವನ್ನು ಕ್ರಮವಾಗಿ ನಿನಗೆ ಉಪದೇಶಿಸುತ್ತೇನೆ” ಎಂದು ಮೈತ್ರೇಯ ವಿದುರನಿಗೆ ಹೇಳಿದ ಎನ್ನುವಲ್ಲಿಗೆ ಐದನೇ ಅಧ್ಯಾಯ ಕೊನೆಗೊಳ್ಳುತ್ತದೆ.
॥ ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ತೃತೀಯಸ್ಕಂಧೇ ಪಂಚಮೋSಧ್ಯಾಯಃ ॥
ಭಾಗವತ ಮಹಾಪುರಾಣದ ಮೂರನೇ ಸ್ಕಂಧದ ಐದನೇ ಅಧ್ಯಾಯ ಮುಗಿಯಿತು
*********