ಪಂಚಮೋSಧ್ಯಾಯಃ
ಮೈತ್ರೇಯ ಆಶ್ರಮ: ವಿದುರ-ಮೈತ್ರೇಯ ಸಂವಾದ
ಶ್ರೀಕೃಷ್ಣನ ಅವತಾರ ಸಮಾಪ್ತಿಯ ಸಂಕಲ್ಪದ ವಿವರವನ್ನು ವಿದುರನಿಗೆ ನೀಡಿದ ಉದ್ಧವ, ಆ ರಾತ್ರಿ ಯಮುನಾ ನದಿ ತೀರದಲ್ಲೇ ತಂಗುತ್ತಾನೆ. ಮರುದಿನ ಆತ ವಿದುರನಿಗೆ ಗಂಗಾನದಿ ತೀರದಲ್ಲಿರುವ ಮೈತ್ರೇಯನನ್ನು ಭೇಟಿಯಾಗುವಂತೆ ತಿಳಿಸಿ, ತಾನು ಬದರಿಗೆ ತೆರಳುತ್ತಾನೆ. ಉದ್ಧವನನ್ನು ಬೀಳ್ಕೊಟ್ಟ ವಿದುರ ನೇರವಾಗಿ ಗಂಗಾನದಿ ತೀರದಲ್ಲಿರುವ ಮೈತ್ರೇಯರ ಆಶ್ರಮಕ್ಕೆ ಬರುತ್ತಾನೆ.
ಈ ಹಿಂದೆ ಹೇಳಿದಂತೆ ಮೈತ್ರೇಯ ಶುಕಾಚಾರ್ಯರ ಪ್ರೀತಿಯ ಶಿಷ್ಯರಲ್ಲಿ ಒಬ್ಬ. ವೇದವ್ಯಾಸರು ಭಾಗವತದಲ್ಲಿ ಉಲ್ಲೇಖಿಸಿದಂತೆ: ಮೈತ್ರೇಯ ‘ಮಿತ್ರಾ’ ಎನ್ನುವವಳ ಮಗ (ಮಿತ್ರಾಸುತೋ ಮುನಿಃ). ಈತನ ತಂದೆ ಕುಶಾರವ. ಹೀಗಾಗಿ ಈತನನ್ನು ಕೌಶಾರವ ಎಂದೂ ಕರೆಯುತ್ತಾರೆ.[ ಕೌಶಾರವ : ಕುತ್ಸಿತ ಮತ್ತು ಸಾರಭೂತವಾದುದನ್ನು ಗುರುತಿಸಿ, ಅರಿತು ನಡೆಯಬಲ್ಲ ಜ್ಞಾನಿ]. ತತ್ತ್ವಜ್ಞಾನದ ಆದಿಪುರುಷರಾದ ವೇದವ್ಯಾಸರು ‘ಮಿತ್ರ’ ಎಂದು ಪರಿಗ್ರಹಿಸಿರುವ ಮೈತ್ರೇಯ ಬಹಳ ದೊಡ್ಡ ಜ್ಞಾನಿ. ಈಗಾಗಲೇ ಹೇಳಿರುವಂತೆ: ಶ್ರೀಕೃಷ್ಣ ಜಗತ್ತಿನ ಮೂಲ ಸತ್ಯವನ್ನು ಉದ್ಧವ ಮತ್ತು ಮೈತ್ರೇಯನಿಗೆ ಉಪದೇಶ ಮಾಡಿ, ಆ ಜ್ಞಾನವನ್ನು ವಿದುರನಿಗೆ ನೀಡುವ ಜವಾಬ್ದಾರಿಯನ್ನು ಮೈತ್ರೇಯನಿಗೆ ವಹಿಸಿದ್ದ.
ಮೈತ್ರೇಯನನ್ನು ಕಂಡ ತಕ್ಷಣ ವಿದುರನಿಗೆ ಆತನಿಂದ ಜ್ಞಾನ ಪಡೆಯಬೇಕು ಎನ್ನುವ ಹಂಬಲವಾಗುತ್ತದೆ. ವಾಸ್ತವವಾಗಿ ವಿದುರ ಜೀವಯೋಗ್ಯತೆಯಲ್ಲಿ ಮೈತ್ರೇಯನಿಗಿಂತ ಎತ್ತರದಲ್ಲಿರುವವನು. ಆದರೆ ಮೈತ್ರೇಯ ಸ್ವಯಂ ಭಗವಂತನಿಂದ ಜ್ಞಾನ ಪಡೆದು ಬಂದಿರುವವನು. ಅಂತಹ ಜ್ಞಾನವನ್ನು ಪಡೆಯುವುದು ವಿದುರನಿಗೆ ದೊಡ್ಡ ಭಾಗ್ಯ. [ಎಷ್ಟೋ ಬಾರಿ ಗುರುವಿಗಿಂತ ಶಿಷ್ಯ ಯೋಗ್ಯತೆಯಲ್ಲಿ ದೊಡ್ದವನಿದ್ದರೂ ಕೂಡಾ, ಅವರು ಲೋಕದ ಗುರು-ಶಿಷ್ಯ ಭಾವವನ್ನು ಅನುಸರಿಸುತ್ತಾರೆ. ಇದಕ್ಕೆ ಉತ್ತಮ ಉದಾಹರಣೆ: ಶ್ರೀಕೃಷ್ಣ ಸಾಂದೀಪನಿ ಮುನಿಯನ್ನು ಗುರುವಾಗಿ ಸ್ವೀಕರಿಸಿ ಅರವತ್ತು ದಿನ ವಿದ್ಯಾಭಾಸ ಮಾಡಿರುವುದು]. ಹೀಗೆ ಶ್ರೀಕೃಷ್ಣ ಮೈತ್ರೇಯನಿಗೆ ಉಪದೇಶ ಮಾಡಿರುವ ವಿದ್ಯೆಯನ್ನು ಅವನ ಬಾಯಿಯಿಂದ ಕೇಳಿ ತಿಳಿಯುವ ಅಭಿಲಾಷೆಯೊಂದಿಗೆ ವಿದುರ ಒಂದು ಸುಂದರವಾದ ಪೀಠಿಕೆಯನ್ನು ಹಾಕುತ್ತಾನೆ.
ವಿದುರ ಉವಾಚ
ಸುಖಾಯ ಕರ್ಮಾಣಿ ಕರೋತಿ ಲೋಕೋ ನ ತೈಃ ಸುಖಂ ಚಾನ್ಯದುಪಾರಮಂ ವಾ ।
ವಿನ್ದೇತ ಭೂಯಸ್ತತ ಏವ ದುಃಖಂ ಯದತ್ರ ಯುಕ್ತಂ ಭಗವಾನ್ ವದೇನ್ನಃ ॥೦೨॥
ಜನಸ್ಯ ಕೃಷ್ಣಾದ್ ವಿಮುಖಸ್ಯ ದೈವಾದಧರ್ಮಶೀಲಸ್ಯ ಸುದುಃ ಖಿತಸ್ಯ ।
ಅನುಗ್ರಹಾಯೇಹ ಚರಂತಿ ನೂನಂ ಭೂತಾನಿ ಭವ್ಯಾನಿ ಜನಾರ್ದನಸ್ಯ ॥೦೩॥
ಈ ಜಗತ್ತಿನಲ್ಲಿ ಪ್ರತಿಯೊಬ್ಬನೂ ಕೂಡಾ ಒಂದಲ್ಲಾ ಒಂದು ಕರ್ಮದಲ್ಲಿ ನಿರತನಾಗಿರುತ್ತಾನೆ. ಅದು ಲೌಕಿಕ ಕರ್ಮವಿರಬಹುದು ಅಥವಾ ವೈದಿಕ ಕರ್ಮವಿರಬಹುದು. ಯಾವ ಕರ್ಮವಿದ್ದರೂ ಕೂಡಾ ಆ ಕರ್ಮದ ಹಿಂದೆ ಒಂದು ಸುಖದ ಬಯಕೆ ಇದ್ದೇ ಇರುತ್ತದೆ. ಯಾರೂ ಕೂಡಾ ಸುಖದ ಬಯಕೆ ಇಲ್ಲದೆ ನಿರ್ವ್ಯಾಜ ಕರ್ಮ ಮಾಡುವುದಿಲ್ಲ. ಆದರೆ ಸುಖವನ್ನೇ ಗುರಿಯಾಗಿಟ್ಟುಕೊಂಡು ಕರ್ಮಮಾಡಿದವನಿಗೆ ಸುಖ ಸಿಗುತ್ತದೆ ಎಂದು ಹೇಳುವುದು ಕಷ್ಟ! ಇದರಿಂದಾಗಿ ಬಯಸಿದ ಸುಖ ಸಿಗದೇ ಇದ್ದವನು ತಾನು ಕಷ್ಟಪಡುವುದಲ್ಲದೆ, ಇನ್ನೊಬ್ಬರಿಗೂ ದುಃಖ ಕೊಡುತ್ತಾ ಜೀವನ ಸಾಗಿಸುತ್ತಾನೆ. ಇದು ಸಾರ್ವತ್ರಿಕ ಸಾಮಾಜಸತ್ಯ. ಹೀಗಾಗಿ ಇಲ್ಲಿ ವಿದುರ ಮೈತ್ರೇಯನನ್ನು ಕೇಳುತ್ತಾನೆ: “ಯಾವುದರಿಂದ ನಾವು ಬದುಕಿನಲ್ಲಿ ನೆಮ್ಮದಿ ಕಂಡುಕೊಳ್ಳಬಹುದು? ಸುಖದ ಭ್ರಮೆಯಿಂದಾಚೆಗಿರುವ ನಿಜವಾದ ಸುಖವನ್ನು ಕಾಣುವುದು ಹೇಗೆ? ಸ್ವಯಂ ಶ್ರೀಕೃಷ್ಣನಿಂದ ಉಪದೇಶ ಪಡೆದ ನೀವು ಇದಕ್ಕೆ ಪರಿಹಾರ ಸೂಚಿಸಬೇಕು” ಎಂದು.
“ನಮ್ಮ ದುಃಖವನ್ನು ನೀಗಿಸಬಲ್ಲ ಭಗವಂತ ಕಣ್ಮುಂದೆ ನಿಂತಿದ್ದರೂ, ದುರ್ದೈವದಿಂದ ಆತನನ್ನು ಗುರುತಿಸದೇ, ‘ನಮ್ಮ ಜೀವನವನ್ನು ನಾವೇ ರೂಪಿಸಿಕೊಳ್ಳಬೇಕು’ ಎಂದು, ದೇವರು-ಧರ್ಮದ ಬಗ್ಗೆ ನಂಬಿಕೆ ಕಳೆದುಕೊಂಡು ಬದುಕುವ ಜನರ ಉದ್ಧಾರಕ್ಕಾಗಿಯೇ ಇರುವ ನೀವು ಜನಾರ್ದನನ ಪ್ರತಿನಿಧಿಗಳು. ನಿಮ್ಮಂತಹ ಅನೇಕರು ಭಗವಂತನ ಸಂದೇಶಕಾರರಾಗಿ ಭೂತ-ವರ್ತಮಾನ ಕಾಲದಲ್ಲಷ್ಟೇ ಅಲ್ಲ, ಭವಿಷ್ಯತ್ ಕಾಲದಲ್ಲೂ ಇದ್ದೇ ಇರುತ್ತಾರೆ. ಹಾಗೆಯೇ ಜ್ಞಾನ ನಿರಾಕರಣೆ ಮಾಡುವವರೂ ಕೂಡಾ ಎಲ್ಲಾ ಕಾಲದಲ್ಲೂ ಇರುತ್ತಾರೆ. ಭಗವಂತನ ಸಂದೇಶವನ್ನು ಜನಾಂಗಕ್ಕೆ ಮುಟ್ಟಿಸುವ ಜ್ಞಾನಿಗಳು ಇದ್ದಾಗಲೂ ಕಣ್ಮುಚ್ಚಿ ಬದುಕುವುದು ಶ್ರೇಯಸ್ಕರವಲ್ಲ. ಹೀಗಾಗಿ ದುಃಖವನ್ನು ದಾಟಿ ಸುಖದಲ್ಲಿ ನಿಂತಿರುವ ನೀವು ನಮಗೆ ಜ್ಞಾನದ ದಾರಿ ತೋರಬೇಕು” ಎಂದು ವಿದುರ ಮೈತ್ರೇಯನಲ್ಲಿ ಕೇಳಿಕೊಳ್ಳುತ್ತಾನೆ.
ಇಲ್ಲಿ ಭಗವಂತನನ್ನು ‘ಜನಾರ್ದನ’ ಎಂದು ಸಂಬೋಧಿಸಲಾಗಿದೆ. ಜನ+ಅರ್ದನ-ಜನಾರ್ದನ. ಇಲ್ಲಿ ಅರ್ದನ ಎನ್ನುವ ಪದ ‘ಕೊನೆಗೊಳಿಸುವವನು’ ಎನ್ನುವ ಅರ್ಥವನ್ನು ಕೊಡುತ್ತದೆ. 'ಜನ' ಎನ್ನುವ ಪದಕ್ಕೆ ಅನೇಕ ಅರ್ಥಗಳಿವೆ: (೧)ಜನ ಎಂದರೆ ದುರ್ಜನ. ಜನಾರ್ದನ ಎಂದರೆ ದುರ್ಜನ ನಾಶಕ. (೨) ಜನ ಎಂದರೆ ಜನನ ಉಳ್ಳವರು. ಜನಾರ್ದನ ಎಂದರೆ ಜನನ ಮುಕ್ತಗೊಳಿಸುವವನು. ಅಂದರೆ ಮುಕ್ತಿಪ್ರದಾಯಕ. (೩) ಜನ ಎಂದರೆ ದೇಹ. ಜನಾರ್ದನ ಎಂದರೆ ಜೀವರಿಗೆ ದೇಹದಿಂದ ಮುಕ್ತಿ ಕೊಡುವವನು[ಮೋಕ್ಷಪ್ರದ]. (೪) ಜನ ಎಂದರೆ ಸಜ್ಜನ. ಜನಾರ್ದನ ಎಂದರೆ ಸಜ್ಜನರ ಪ್ರಾರ್ಥನೆ ಸ್ವೀಕರಿಸಿ ಅವರ ಅಭೀಷ್ಟವನ್ನು ಪೂರೈಸುವವನು. ಇದೇ ರೀತಿ ಭಗವಂತನ ಪ್ರತಿನಿಧಿಗಳಾದ ಜ್ಞಾನಿಗಳನ್ನು ಇಲ್ಲಿ ‘ಭೂತಗಳು’ ಎಂದು ಸಂಬೋಧಿಸಿದ್ದಾರೆ. ಭೂತಿ ಅಂದರೆ ಉನ್ನತಿ, ಎತ್ತರಕ್ಕೆ ಏರುವ ಸ್ಥಿತಿ. ಹೀಗಾಗಿ ಭಗವಂತನ ಅರಿವಿನಿಂದ ಎತ್ತರಕ್ಕೇರಿದವರನ್ನು ಇಲ್ಲಿ ‘ಭೂತಗಳು’ ಎಂದು ಸಂಬೋಧಿಸಿದ್ದಾರೆ. ಎಲ್ಲರಿಗಿಂತ ಎತ್ತರದಲ್ಲಿರುವ ಅರಿವಿನ ಕಡಲಾದ ಭಗವಂತ ಮಹಾಭೂತಃ.
ವಿದುರ ಹೇಳುತ್ತಾನೆ: “ಸುಖದ ದಾರಿಯನ್ನು ತೋರಬಲ್ಲವರು ನೀವು ಮಾತ್ರ. ಏಕೆಂದರೆ ನೀವು ದುಃಖವನ್ನು ದಾಟಿ ಆನಂದದಲ್ಲಿರುವವರು. ಹೀಗಾಗಿ ಯಾವುದನ್ನೂ ಅಂಟಿಸಿಕೊಳ್ಳದ ನೀವು ನಮಗೆ ದಾರಿ ತೋರಬಲ್ಲಿರಿ” ಎಂದು.
ಪರಾವರೇಷಾಂ ಭಗವನ್ ಕೃತಾನಿ ಶ್ರುತಾನಿ ಮೇ ವ್ಯಾಸಮುಖಾದಭೀಕ್ಷ್ಣಮ್ ।
ನ ತೃಪ್ನುಮಃ ಕರ್ಣಸುಖಾವಹಾನಾಮ್ ತೇಷಾಮೃತೇ ಕೃಷ್ಣಕಥಾಮೃತೌಘಾತ್ ॥೧೦॥
“ನನ್ನ ತಂದೆಯವರಾದ ವೇದವ್ಯಾಸರ ತರಬೇತಿಯಲ್ಲಿ ಬೆಳೆದ ನಾನೂ ಕೂಡ ಸಾಕಷ್ಟು ಅಧ್ಯಯನ ಮಾಡಿದ್ದೇನೆ. ಹಿಂದಿನ ಹಾಗು ಇಂದಿನ ಸಮಸ್ತ ಮಹಾನುಭಾವರ ಜೀವನಚರಿತ್ರೆಯನ್ನು ನನ್ನ ತಂದೆಯಿಂದ ನಿರಂತರ ಕೇಳುತ್ತಾ ಬೆಳೆದವನು ನಾನು. ಮಹಾತ್ಮರ ಜೀವನ ಚರಿತ್ರೆಯನ್ನು ಕೇಳುವುದು ಕಿವಿಗೆ ಆನಂದ. ಎಲ್ಲಾ ಮಹಾತ್ಮರ ಕಥೆಯನ್ನು ಕೇಳಿದಾಗ ನನಗೆ ತಿಳಿದದ್ದು ಏನೆಂದರೆ: ‘ಪ್ರತಿಯೊಬ್ಬ ಮಹಾತ್ಮನ ಕಥೆಯ ಹಿಂದಿರುವುದು ಶ್ರೀಕೃಷ್ಣನ ಕಥೆ ಮತ್ತು ಅವೆಲ್ಲವೂ ಶ್ರೀಕೃಷ್ಣನ ಕಥೆಯ ಅಮೃತದ ಹೊಳೆ’ ಎನ್ನುವ ವಿಷಯ. ಹೀಗಾಗಿ ಇನ್ನಷ್ಟು ಕೃಷ್ಣ ಕಥೆಯನ್ನು ನಿಮ್ಮ ಬಾಯಿಂದ ನಾನು ಕೇಳಬೇಕು” ಎಂದು ತನ್ನ ಅಪೇಕ್ಷೆಯನ್ನು ವಿದುರ ಮೈತ್ರೇಯನಲ್ಲಿ ವ್ಯಕ್ತಪಡಿಸುತ್ತಾನೆ.
No comments:
Post a Comment