Sunday, December 22, 2024

Shrimad BhAgavata in Kannada -Skandha-03-Ch-05_02

 ಮುನಿರ್ವಿವಕ್ಷುರ್ಭಗವದ್ಗುಣಾನಾಂ ಸಖಾSಪಿ ತೇ ಭಾರತಮಾಹ ಕೃಷ್ಣಃ ।

ಯಸ್ಮಿನ್  ನೃಣಾಂ ಗ್ರಾಮ್ಯಸುಖಾನುವಾದೈರ್ಮತಿರ್ಗೃಹೀತಾ ನ  ಹರೇಃ ಕಥಾಯಾಮ್ ॥೧೨॥


“ನಿಮ್ಮ ಗೆಳೆಯ ವೇದವ್ಯಾಸರು ಮಹಾಭಾರತವನ್ನು ಭಗವಂತನ ಗುಣಾನುಸಂದಾನಕ್ಕಾಗಿಯೇ ರಚನೆ ಮಾಡಿದರು. ನಿಜವಾದ ಭಗವಂತನ ಭಕ್ತಿಯಿಂದ, ಶ್ರದ್ಧೆಯಿಂದ ಭಾರತವನ್ನು ಓದಿದರೆ ಗ್ರಾಮ್ಯ ಸುಖದ ಕಡೆಗೆ ಮನಸ್ಸು ಹರಿಯುವುದೇ ಇಲ್ಲ” ಎನ್ನುತ್ತಾನೆ ವಿದುರ. 

ವ್ಯಾಸರು ಭಾರತವನ್ನು ಎರಡು ವಿಧದ ಅರ್ಥ ಬರುವಂತೆ ರಚನೆ ಮಾಡಿದ್ದಾರೆ.  ಜೀವಯೋಗ್ಯತೆಗನುಗುಣವಾಗಿ ಅದು ಅರ್ಥವಾಗಬೇಕು ಎನ್ನುವುದು ಅವರ ಉದ್ದೇಶ. ಯಾರಿಗೆ ಹರಿಯ ಕಥೆಯಲ್ಲೇ ಮನಸ್ಸು ನಿಲ್ಲುತ್ತದೋ ಅವರಿಗೆ ಅಲ್ಲಿ ಭಗವಂತನ ಗುಣಗಾನ ಬಿಟ್ಟು ಇನ್ನೇನೂ ಕಾಣುವುದಿಲ್ಲ.

ಈ ಶ್ಲೋಕದಲ್ಲಿ ಬಳಕೆಯಾದ ‘ಮತಿರ್ಗೃಹೀತಾ ನ’ ಎನ್ನುವ ಪದವನ್ನು ಅನೇಕ ವ್ಯಾಖ್ಯಾನಕಾರರು ತಪ್ಪಾಗಿ ಗ್ರಹಿಸಿ ‘ಮಹಾಭಾರತ ರಚನೆ ಮಾಡಿರುವುದು ಅನಧಿಕಾರಿಗಳಿಗಾಗಿ, ಭಗವಂತನ ಗುಣವನ್ನು ಹೇಳುವುದಕ್ಕಾಗಿ ಅಲ್ಲಾ’ ಎನ್ನುವಂತೆ ಹೇಳಿರುವುದೂ ಇದೆ. ಈ ತಪ್ಪು ತಿಳುವಳಿಕೆಯನ್ನು ಆಚಾರ್ಯ ಮಧ್ವರು ತಮ್ಮ ತಾತ್ಪರ್ಯ ನಿರ್ಣಯದಲ್ಲಿ ಪ್ರಮಾಣ ಸಹಿತ ಸರಿಪಡಿಸಿ ವಿವರಿಸಿದ್ದಾರೆ. 

ಪದ್ಮ ಪುರಾಣದಲ್ಲಿ ಹೇಳುವಂತೆ: ಯಸ್ಮಿನ್ ಭಾರತೇ । ಹರೇಃ ಕಥಾಯಾಂ ಗ್ರಾಮ್ಯಸುಖಾನುವಾದೈರ್ಮತಿರ್ನ ಗೃಹೀತಾ । “ಭಾರತಾನ್ನಾಧಿಕಂ ವಿಷ್ಣೋರ್ಮಹಿಮಾವಾಚಕಂ ಕ್ವಚಿತ್ । ಭಾರತಾನ್ನ ವಿರಾಗಾಯ ಭಾರತಾನ್ನ ವಿಮುಕ್ತಯೇ”  ಇತಿ ಪಾದ್ಮೇ ॥ 

ಭಾರತಕ್ಕೆ ಮಿಗಿಲಾಗಿ ಭಗವಂತನ ಮಹಿಮೆಯನ್ನು ಹೇಳುವ ಇನ್ನೊಂದು ಗ್ರಂಥ ಈ ದೇಶದಲ್ಲಿ ನಿರ್ಮಾಣವಾಗಿಲ್ಲ. ಅಧ್ಯಾತ್ಮ ಗ್ರಂಥಗಳಲ್ಲೇ ಸರ್ವಶ್ರೇಷ್ಠ ಗ್ರಂಥ ಭಾರತ. ಹರಿವಂಶದಲ್ಲಿ ಹೇಳುವಂತೆ: ವೇದೇ ರಾಮಾಯಣಂಚೈವ ಪುರಾಣೇ ಭಾರತೇ ತಥಾ, ಆದೌ ಅಂತೇ ಚ ಮಧ್ಯೆ ಚ, ವಿಷ್ಣುಃ ಸರ್ವತ್ರಗೀಯತೆ. ಮಹಾಭಾರತ ಮೊದಲಿನಿಂದ ಕೊನೆ ತನಕ ಅದು ವಿಷ್ಣುವಿನ ಗುಣಗಾತಾ. ಭಾರತಕ್ಕಿಂತ ಹೆಚ್ಚಿನ ವೈರಾಗ್ಯಜನಕವಾದ ಗ್ರಂಥ ಇನ್ನೊಂದಿಲ್ಲ. ಅದಕ್ಕಿಂತ ಹೆಚ್ಚು ಮೋಕ್ಷಸಾಧಕವಾದ ಗ್ರಂಥವೂ ಇನ್ನೊಂದಿಲ್ಲ.

ಇತಿಹಾಸಪುರಾಣಂ ಪಂಚಮಂ ವೇದಾನಾಂ ವೇದಃ. ಮಹಾಭಾರತವನ್ನು ವೇದಗಳಿಗೂ ಮಿಗಿಲಾದ ಗ್ರಂಥ ಎನ್ನುತ್ತಾರೆ. ಇದಕ್ಕೆ ಕಾರಣವೇನೆಂದರೆ: ವೇದದ ಅರ್ಥ ವೇದವನ್ನು ಭಗವಂತನಿಂದ ಉಪದೇಶವಾಗಿ ಪಡೆದ ಚತುರ್ಮುಖ ಸಂಪೂರ್ಣವಾಗಿ ತಿಳಿದಿದ್ದಾನೆ. ಆದರೆ ಮಹಾಭಾರತದ ಪೂರ್ತಿ ಅರ್ಥ ಚತುರ್ಮುಖನಿಗೂ ತಿಳಿದಿಲ್ಲ. ಭಾರತದಲ್ಲಿ ಭಗವಂತ ತನ್ನ ಪ್ರಜ್ಞೆಗೆ ಮಾತ್ರ ಗೋಚರವಾಗುವ ಅನೇಕ ರಹಸ್ಯವನ್ನು ಅಡಗಿಸಿಟ್ಟಿದ್ದಾನೆ. ಹೀಗಾಗಿ ಅದನ್ನು ವೇದಕ್ಕಿಂತ ಮಿಗಿಲಾದ ಗ್ರಂಥ ಎನ್ನಲಾಗಿದೆ. ಈ ಎಲ್ಲಾ ಹಿನ್ನೆಲೆಯಲ್ಲಿ ನೋಡಿದಾಗ ಮಹಾಭಾರತ ಅನಧಿಕಾರಿಗಳಿಗೆ ಅರ್ಥವಾಗದ ಗ್ರಂಥ ನಿಜ, ಆದರೆ ಅದು ಅನಧಿಕಾರಿಗಳಿಗಾಗಿ ರಚಿಸಿರುವ ಗ್ರಂಥವಲ್ಲ. ಆದರೆ ಅದು ಭಗವಂತನ ಗುಣವನ್ನು ಸಾರುವ ಮಹತ್ತರವಾದ ಗ್ರಂಥ ಎನ್ನುವ ಸತ್ಯ ಸ್ಪಷ್ಟವಾಗುತ್ತದೆ.   


ಸಾ ಶ್ರದ್ದಧಾನಸ್ಯ ವಿವರ್ದ್ಧಮಾನಾ ವಿರಕ್ತಿಮನ್ಯತ್ರ ಕರೋತಿ ಪುಂಸಃ ।

ಹರೇಃ  ಪದಾನುಸ್ಮೃತಿನಿರ್ವೃತಸ್ಯ ಸಮಸ್ತದುಃಖಾಪ್ಯಯಮಾಶು  ಧತ್ತೇ ॥೧೩॥


ಭಗವಂತನ ಕಥೆಯಲ್ಲಿ ಇರುವ ‘ಮತಿ’ ಶ್ರೆದ್ಧೆಯಿಂದ ಹೆಚ್ಚುತ್ತಾ ಹೋಗುತ್ತದೆ ಹೊರತು ಕಡಿಮೆಯಾಗುವುದಿಲ್ಲ. ಈ ‘ಮತಿ’  ಸಂಸ್ಮೃತಿ ಬಂಧವನ್ನು[ವಿಷಯ ಸುಖದ ಬಂಧವನ್ನು] ಬಿಡಿಸಿ ಬಿಡುತ್ತದೆ. ಇದರಿಂದ ದುಃಖವನ್ನು ಮೀರಿ ನಿಲ್ಲಲು ಸಾಧ್ಯವಾಗುತ್ತದೆ. ಹೃದಯದಲ್ಲಿ ಸಂಪೂರ್ಣ ಭಗವಂತನನ್ನು ತುಂಬಿಕೊಂಡಾಗ ಅಲ್ಲಿ ದುಃಖಕ್ಕೆ ಯಾವ ಸ್ಥಾನವೂ ಇಲ್ಲವಾಗುತ್ತದೆ.

ಈ ರೀತಿಯ ಪೀಠಿಕೆಯೊಂದಿಗೆ ಮಾತನ್ನಾರಂಭಿಸಿದ  ವಿದುರ  ಮೈತ್ರೇಯನಲ್ಲಿ ತನಗೆ ಶ್ರೀಕೃಷ್ಣನ ಕಥೆಯನ್ನು ವಿವರಿಸಿ ಹೇಳಬೇಕಾಗಿ ಕೋರಿಕೊಳ್ಳುತ್ತಾನೆ.


ಮೈತ್ರೇಯ ಉವಾಚ

ಸಾಧು ಪೃಷ್ಟಂ ತ್ವಯಾ ಸಾಧೋ ಲೋಕಾನ್ ಸಾಧ್ವನುಗೃಹ್ಣತಾ ।

ಕೀರ್ತಿಂ ವಿತನ್ವತಾ ಲೋಕೇ ಆತ್ಮನೋSಧೋಕ್ಷಜಾತ್ಮನಃ ॥೧೮॥


ನೈತಚ್ಚಿತ್ರಂ ತ್ವಯಿ ಕ್ಷತ್ತರ್ಬಾದರಾಯಣವೀರ್ಯಜೇ ।

ಗೃಹೀತೋSನನ್ಯಭಾವೇನ ಯತ್ ತ್ವಯಾ ಹರಿರೀಶ್ವರಃ ॥೧೯॥


ಮಾಣ್ಡವ್ಯಶಾಪಾದ್ ಭಗವಾನ್ ಪ್ರಜಾಸಂಯಮನೋ ಯಮಃ ।

ಭ್ರಾತುಃ ಕ್ಷೇತ್ರೇ ಭುಜಿಷ್ಯಾಯಾಂ ಜಾತಃ ಸತ್ಯವತೀಸುತಾತ್ ॥೨೦॥


ಭವಾನ್ ಭಗವತೋ ನಿತ್ಯಂ ಸಮ್ಮತಃ ಸಾನುಗಸ್ಯ ಹಿ ।

ಜ್ಞಾನೋಪದೇಶಾಯ ಚ ಮಾಮಾದಿಶದ್ ಭಗವಾನ್ ವ್ರಜನ್ ॥೨೧॥


 “ಸರ್ವ ಸಮರ್ಥನಾದ ಭಗವಂತನನ್ನು ಅನನ್ಯ ಭಕ್ತಿಯಿಂದ  ಹೃದಯದಲ್ಲಿ ಹೊತ್ತುಕೊಂಡಿರುವ ನೀನು ಇಂಥಹ ಪ್ರಶ್ನೆ ಹಾಕಿರುವುದು ಆಶ್ಚರ್ಯದ ಸಂಗತಿಯೇನಲ್ಲ.  ನೀನೇನೂ ಸಾಮಾನ್ಯ ವ್ಯಕ್ತಿಯಲ್ಲ.  ಬೇಕೆಂದೇ ಮಾಂಡವ್ಯನಿಂದ ಶಾಪಗ್ರಸ್ತನಾಗಿ  ಮನುಷ್ಯ ಜನ್ಮದಲ್ಲಿ ಹುಟ್ಟಿರುವ, ಅಧರ್ಮಿಗಳಿಗೆ ಶಿಕ್ಷೆಯನ್ನು ನೀಡುವ ಯಮಧರ್ಮನಲ್ಲವೇ ನೀನು? ವಿಚಿತ್ರವೀರ್ಯನ ಕ್ಷೇತ್ರದಲ್ಲಿ ಜನಿಸಬೇಕಾಗಿದ್ದ ನೀನು, ಅರಮನೆಯ ದಾಸಿಯಲ್ಲಿ ವೇದವ್ಯಾಸರಿಂದ ಜನಿಸಿದೆ. ಇಂತಹ ದೇವಾಂಶ ಸಂಭೂತನಾಗಿರುವ ನಿನಗೆ ನಾನು ಉಪದೇಶಿಸುವುದೇನಿದೆ” ಎಂದು ವಿದುರನನ್ನು ಮೈತ್ರೇಯ ಪ್ರಶ್ನಿಸುತ್ತಾನೆ. 

 “ಶ್ರೀಕೃಷ್ಣನಿಗೆ ನೀನೆಂದರೆ ಅತ್ಯಂತ ಪ್ರೀತಿ. ನೀನು ನನ್ನಿಂದ ಹಿರಿಯನಾದರೂ ಕೂಡಾ, ನಾನು ಭಗವಂತನಿಂದ ಪಡೆದ ಜ್ಞಾನವನ್ನು ನಿನಗೆ ನೀಡಬೇಕೆಂಬುದು ಶ್ರೀಕೃಷ್ಣನ ಆದೇಶ. ಆದ್ದರಿಂದ ನಾನು ನಿನಗೆ ಜ್ಞಾನೋಪದೇಶ ಮಾಡುತ್ತೇನೆ”   ಎನ್ನುತ್ತಾನೆ ಮೈತ್ರೇಯ. 


ಅಥ ತೇ ಭಗವಲ್ಲೀಲಾ ಯೋಗಮಾಯೋಪಬೃಂಹಿತಾಃ ।

ವಿಶ್ವಸ್ಥಿತ್ಯುದ್ಭವಾನ್ತಾರ್ಥಾ ವರ್ಣಯಾಮ್ಯನುಪೂರ್ವಶಃ ॥೨೨॥


“ತನ್ನ ಯೋಗಮಾಯೆಯಿಂದ(ಸ್ವರೂಪ ಸಾಮರ್ಥ್ಯದಿಂದ) ಈ ಭೂಮಿಯ ಮೇಲೆ ಭಗವಂತನಾಡಿದ ಜಗತ್ತಿನ ಸೃಷ್ಟಿ-ಸ್ಥಿತಿ-ಸಂಹಾರಗಳಿಗೆ ಕಾರಣವಾದ  ಲೀಲೆಗಳನ್ನು,   ಶ್ರೀಕೃಷ್ಣನಿಂದ  ನನಗೆ ಉಪದೇಶಿಸಲ್ಪಟ್ಟ ಸಮಸ್ತ  ಅಧ್ಯಾತ್ಮದ ಮತ್ತು ಸೃಷ್ಟಿಯ ರಹಸ್ಯವನ್ನು ಕ್ರಮವಾಗಿ ನಿನಗೆ ಉಪದೇಶಿಸುತ್ತೇನೆ” ಎಂದು ಮೈತ್ರೇಯ ವಿದುರನಿಗೆ ಹೇಳಿದ ಎನ್ನುವಲ್ಲಿಗೆ ಐದನೇ ಅಧ್ಯಾಯ ಕೊನೆಗೊಳ್ಳುತ್ತದೆ.  


॥ ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ತೃತೀಯಸ್ಕಂಧೇ ಪಂಚಮೋSಧ್ಯಾಯಃ  ॥


ಭಾಗವತ ಮಹಾಪುರಾಣದ ಮೂರನೇ  ಸ್ಕಂಧದ ಐದನೇ ಅಧ್ಯಾಯ ಮುಗಿಯಿತು

*********


Monday, December 2, 2024

Shrimad BhAgavata in Kannada -Skandha-03-Ch-05_01

 ಪಂಚಮೋSಧ್ಯಾಯಃ


ಮೈತ್ರೇಯ ಆಶ್ರಮ: ವಿದುರ-ಮೈತ್ರೇಯ ಸಂವಾದ


ಶ್ರೀಕೃಷ್ಣನ ಅವತಾರ ಸಮಾಪ್ತಿಯ ಸಂಕಲ್ಪದ ವಿವರವನ್ನು ವಿದುರನಿಗೆ ನೀಡಿದ ಉದ್ಧವ, ಆ ರಾತ್ರಿ ಯಮುನಾ ನದಿ ತೀರದಲ್ಲೇ ತಂಗುತ್ತಾನೆ. ಮರುದಿನ ಆತ ವಿದುರನಿಗೆ ಗಂಗಾನದಿ ತೀರದಲ್ಲಿರುವ ಮೈತ್ರೇಯನನ್ನು ಭೇಟಿಯಾಗುವಂತೆ ತಿಳಿಸಿ, ತಾನು ಬದರಿಗೆ ತೆರಳುತ್ತಾನೆ. ಉದ್ಧವನನ್ನು ಬೀಳ್ಕೊಟ್ಟ ವಿದುರ ನೇರವಾಗಿ ಗಂಗಾನದಿ ತೀರದಲ್ಲಿರುವ ಮೈತ್ರೇಯರ ಆಶ್ರಮಕ್ಕೆ ಬರುತ್ತಾನೆ.

ಈ ಹಿಂದೆ ಹೇಳಿದಂತೆ ಮೈತ್ರೇಯ ಶುಕಾಚಾರ್ಯರ ಪ್ರೀತಿಯ ಶಿಷ್ಯರಲ್ಲಿ ಒಬ್ಬ. ವೇದವ್ಯಾಸರು ಭಾಗವತದಲ್ಲಿ ಉಲ್ಲೇಖಿಸಿದಂತೆ:  ಮೈತ್ರೇಯ ‘ಮಿತ್ರಾ’ ಎನ್ನುವವಳ ಮಗ (ಮಿತ್ರಾಸುತೋ ಮುನಿಃ). ಈತನ ತಂದೆ ಕುಶಾರವ. ಹೀಗಾಗಿ ಈತನನ್ನು ಕೌಶಾರವ ಎಂದೂ ಕರೆಯುತ್ತಾರೆ.[ ಕೌಶಾರವ : ಕುತ್ಸಿತ ಮತ್ತು ಸಾರಭೂತವಾದುದನ್ನು ಗುರುತಿಸಿ,  ಅರಿತು ನಡೆಯಬಲ್ಲ ಜ್ಞಾನಿ]. ತತ್ತ್ವಜ್ಞಾನದ ಆದಿಪುರುಷರಾದ ವೇದವ್ಯಾಸರು ‘ಮಿತ್ರ’ ಎಂದು ಪರಿಗ್ರಹಿಸಿರುವ ಮೈತ್ರೇಯ ಬಹಳ ದೊಡ್ಡ ಜ್ಞಾನಿ. ಈಗಾಗಲೇ ಹೇಳಿರುವಂತೆ: ಶ್ರೀಕೃಷ್ಣ  ಜಗತ್ತಿನ ಮೂಲ ಸತ್ಯವನ್ನು ಉದ್ಧವ ಮತ್ತು ಮೈತ್ರೇಯನಿಗೆ ಉಪದೇಶ ಮಾಡಿ, ಆ ಜ್ಞಾನವನ್ನು ವಿದುರನಿಗೆ ನೀಡುವ ಜವಾಬ್ದಾರಿಯನ್ನು ಮೈತ್ರೇಯನಿಗೆ ವಹಿಸಿದ್ದ. 

ಮೈತ್ರೇಯನನ್ನು ಕಂಡ ತಕ್ಷಣ ವಿದುರನಿಗೆ ಆತನಿಂದ ಜ್ಞಾನ ಪಡೆಯಬೇಕು ಎನ್ನುವ ಹಂಬಲವಾಗುತ್ತದೆ. ವಾಸ್ತವವಾಗಿ ವಿದುರ ಜೀವಯೋಗ್ಯತೆಯಲ್ಲಿ ಮೈತ್ರೇಯನಿಗಿಂತ ಎತ್ತರದಲ್ಲಿರುವವನು. ಆದರೆ ಮೈತ್ರೇಯ ಸ್ವಯಂ ಭಗವಂತನಿಂದ ಜ್ಞಾನ ಪಡೆದು ಬಂದಿರುವವನು. ಅಂತಹ ಜ್ಞಾನವನ್ನು ಪಡೆಯುವುದು ವಿದುರನಿಗೆ ದೊಡ್ಡ ಭಾಗ್ಯ. [ಎಷ್ಟೋ ಬಾರಿ ಗುರುವಿಗಿಂತ ಶಿಷ್ಯ ಯೋಗ್ಯತೆಯಲ್ಲಿ ದೊಡ್ದವನಿದ್ದರೂ ಕೂಡಾ, ಅವರು ಲೋಕದ ಗುರು-ಶಿಷ್ಯ ಭಾವವನ್ನು ಅನುಸರಿಸುತ್ತಾರೆ. ಇದಕ್ಕೆ ಉತ್ತಮ ಉದಾಹರಣೆ: ಶ್ರೀಕೃಷ್ಣ ಸಾಂದೀಪನಿ ಮುನಿಯನ್ನು ಗುರುವಾಗಿ ಸ್ವೀಕರಿಸಿ ಅರವತ್ತು ದಿನ ವಿದ್ಯಾಭಾಸ ಮಾಡಿರುವುದು].  ಹೀಗೆ ಶ್ರೀಕೃಷ್ಣ ಮೈತ್ರೇಯನಿಗೆ ಉಪದೇಶ ಮಾಡಿರುವ ವಿದ್ಯೆಯನ್ನು ಅವನ ಬಾಯಿಯಿಂದ ಕೇಳಿ ತಿಳಿಯುವ ಅಭಿಲಾಷೆಯೊಂದಿಗೆ ವಿದುರ ಒಂದು ಸುಂದರವಾದ ಪೀಠಿಕೆಯನ್ನು ಹಾಕುತ್ತಾನೆ.


ವಿದುರ ಉವಾಚ

ಸುಖಾಯ ಕರ್ಮಾಣಿ ಕರೋತಿ ಲೋಕೋ ನ ತೈಃ ಸುಖಂ ಚಾನ್ಯದುಪಾರಮಂ ವಾ ।

ವಿನ್ದೇತ ಭೂಯಸ್ತತ ಏವ ದುಃಖಂ ಯದತ್ರ ಯುಕ್ತಂ ಭಗವಾನ್ ವದೇನ್ನಃ ॥೦೨॥


ಜನಸ್ಯ ಕೃಷ್ಣಾದ್ ವಿಮುಖಸ್ಯ ದೈವಾದಧರ್ಮಶೀಲಸ್ಯ ಸುದುಃ ಖಿತಸ್ಯ ।

ಅನುಗ್ರಹಾಯೇಹ ಚರಂತಿ ನೂನಂ ಭೂತಾನಿ ಭವ್ಯಾನಿ ಜನಾರ್ದನಸ್ಯ ॥೦೩॥


ಈ ಜಗತ್ತಿನಲ್ಲಿ ಪ್ರತಿಯೊಬ್ಬನೂ ಕೂಡಾ ಒಂದಲ್ಲಾ ಒಂದು ಕರ್ಮದಲ್ಲಿ ನಿರತನಾಗಿರುತ್ತಾನೆ. ಅದು ಲೌಕಿಕ ಕರ್ಮವಿರಬಹುದು ಅಥವಾ ವೈದಿಕ ಕರ್ಮವಿರಬಹುದು. ಯಾವ ಕರ್ಮವಿದ್ದರೂ ಕೂಡಾ ಆ ಕರ್ಮದ ಹಿಂದೆ ಒಂದು ಸುಖದ ಬಯಕೆ ಇದ್ದೇ ಇರುತ್ತದೆ. ಯಾರೂ ಕೂಡಾ ಸುಖದ ಬಯಕೆ ಇಲ್ಲದೆ ನಿರ್ವ್ಯಾಜ ಕರ್ಮ ಮಾಡುವುದಿಲ್ಲ. ಆದರೆ ಸುಖವನ್ನೇ ಗುರಿಯಾಗಿಟ್ಟುಕೊಂಡು ಕರ್ಮಮಾಡಿದವನಿಗೆ ಸುಖ ಸಿಗುತ್ತದೆ ಎಂದು ಹೇಳುವುದು ಕಷ್ಟ! ಇದರಿಂದಾಗಿ ಬಯಸಿದ ಸುಖ ಸಿಗದೇ ಇದ್ದವನು ತಾನು ಕಷ್ಟಪಡುವುದಲ್ಲದೆ, ಇನ್ನೊಬ್ಬರಿಗೂ ದುಃಖ ಕೊಡುತ್ತಾ  ಜೀವನ ಸಾಗಿಸುತ್ತಾನೆ. ಇದು ಸಾರ್ವತ್ರಿಕ ಸಾಮಾಜಸತ್ಯ. ಹೀಗಾಗಿ ಇಲ್ಲಿ ವಿದುರ ಮೈತ್ರೇಯನನ್ನು ಕೇಳುತ್ತಾನೆ:  “ಯಾವುದರಿಂದ ನಾವು ಬದುಕಿನಲ್ಲಿ ನೆಮ್ಮದಿ ಕಂಡುಕೊಳ್ಳಬಹುದು?  ಸುಖದ ಭ್ರಮೆಯಿಂದಾಚೆಗಿರುವ ನಿಜವಾದ ಸುಖವನ್ನು ಕಾಣುವುದು ಹೇಗೆ? ಸ್ವಯಂ ಶ್ರೀಕೃಷ್ಣನಿಂದ ಉಪದೇಶ ಪಡೆದ ನೀವು ಇದಕ್ಕೆ ಪರಿಹಾರ ಸೂಚಿಸಬೇಕು” ಎಂದು.

“ನಮ್ಮ ದುಃಖವನ್ನು ನೀಗಿಸಬಲ್ಲ ಭಗವಂತ  ಕಣ್ಮುಂದೆ ನಿಂತಿದ್ದರೂ, ದುರ್ದೈವದಿಂದ ಆತನನ್ನು ಗುರುತಿಸದೇ, ‘ನಮ್ಮ ಜೀವನವನ್ನು ನಾವೇ ರೂಪಿಸಿಕೊಳ್ಳಬೇಕು’ ಎಂದು, ದೇವರು-ಧರ್ಮದ ಬಗ್ಗೆ ನಂಬಿಕೆ ಕಳೆದುಕೊಂಡು ಬದುಕುವ ಜನರ ಉದ್ಧಾರಕ್ಕಾಗಿಯೇ ಇರುವ ನೀವು  ಜನಾರ್ದನನ ಪ್ರತಿನಿಧಿಗಳು. ನಿಮ್ಮಂತಹ ಅನೇಕರು ಭಗವಂತನ ಸಂದೇಶಕಾರರಾಗಿ ಭೂತ-ವರ್ತಮಾನ ಕಾಲದಲ್ಲಷ್ಟೇ ಅಲ್ಲ,  ಭವಿಷ್ಯತ್ ಕಾಲದಲ್ಲೂ   ಇದ್ದೇ ಇರುತ್ತಾರೆ. ಹಾಗೆಯೇ  ಜ್ಞಾನ ನಿರಾಕರಣೆ ಮಾಡುವವರೂ ಕೂಡಾ ಎಲ್ಲಾ ಕಾಲದಲ್ಲೂ ಇರುತ್ತಾರೆ. ಭಗವಂತನ ಸಂದೇಶವನ್ನು ಜನಾಂಗಕ್ಕೆ ಮುಟ್ಟಿಸುವ ಜ್ಞಾನಿಗಳು ಇದ್ದಾಗಲೂ  ಕಣ್ಮುಚ್ಚಿ ಬದುಕುವುದು ಶ್ರೇಯಸ್ಕರವಲ್ಲ. ಹೀಗಾಗಿ  ದುಃಖವನ್ನು ದಾಟಿ ಸುಖದಲ್ಲಿ ನಿಂತಿರುವ ನೀವು  ನಮಗೆ ಜ್ಞಾನದ ದಾರಿ ತೋರಬೇಕು” ಎಂದು ವಿದುರ ಮೈತ್ರೇಯನಲ್ಲಿ ಕೇಳಿಕೊಳ್ಳುತ್ತಾನೆ.

ಇಲ್ಲಿ ಭಗವಂತನನ್ನು ‘ಜನಾರ್ದನ’ ಎಂದು ಸಂಬೋಧಿಸಲಾಗಿದೆ.  ಜನ+ಅರ್ದನ-ಜನಾರ್ದನ. ಇಲ್ಲಿ ಅರ್ದನ ಎನ್ನುವ ಪದ  ‘ಕೊನೆಗೊಳಿಸುವವನು’ ಎನ್ನುವ ಅರ್ಥವನ್ನು ಕೊಡುತ್ತದೆ. 'ಜನ' ಎನ್ನುವ ಪದಕ್ಕೆ ಅನೇಕ ಅರ್ಥಗಳಿವೆ: (೧)ಜನ ಎಂದರೆ ದುರ್ಜನ. ಜನಾರ್ದನ ಎಂದರೆ ದುರ್ಜನ ನಾಶಕ. (೨) ಜನ ಎಂದರೆ ಜನನ ಉಳ್ಳವರು. ಜನಾರ್ದನ ಎಂದರೆ ಜನನ ಮುಕ್ತಗೊಳಿಸುವವನು. ಅಂದರೆ ಮುಕ್ತಿಪ್ರದಾಯಕ. (೩) ಜನ ಎಂದರೆ ದೇಹ. ಜನಾರ್ದನ ಎಂದರೆ ಜೀವರಿಗೆ ದೇಹದಿಂದ ಮುಕ್ತಿ ಕೊಡುವವನು[ಮೋಕ್ಷಪ್ರದ]. (೪) ಜನ ಎಂದರೆ ಸಜ್ಜನ. ಜನಾರ್ದನ ಎಂದರೆ ಸಜ್ಜನರ ಪ್ರಾರ್ಥನೆ ಸ್ವೀಕರಿಸಿ ಅವರ ಅಭೀಷ್ಟವನ್ನು ಪೂರೈಸುವವನು. ಇದೇ ರೀತಿ ಭಗವಂತನ ಪ್ರತಿನಿಧಿಗಳಾದ ಜ್ಞಾನಿಗಳನ್ನು ಇಲ್ಲಿ ‘ಭೂತಗಳು’ ಎಂದು ಸಂಬೋಧಿಸಿದ್ದಾರೆ. ಭೂತಿ ಅಂದರೆ ಉನ್ನತಿ, ಎತ್ತರಕ್ಕೆ ಏರುವ ಸ್ಥಿತಿ. ಹೀಗಾಗಿ ಭಗವಂತನ ಅರಿವಿನಿಂದ ಎತ್ತರಕ್ಕೇರಿದವರನ್ನು ಇಲ್ಲಿ  ‘ಭೂತಗಳು’ ಎಂದು ಸಂಬೋಧಿಸಿದ್ದಾರೆ. ಎಲ್ಲರಿಗಿಂತ ಎತ್ತರದಲ್ಲಿರುವ ಅರಿವಿನ ಕಡಲಾದ ಭಗವಂತ ಮಹಾಭೂತಃ.


ವಿದುರ ಹೇಳುತ್ತಾನೆ: “ಸುಖದ ದಾರಿಯನ್ನು ತೋರಬಲ್ಲವರು ನೀವು ಮಾತ್ರ. ಏಕೆಂದರೆ ನೀವು ದುಃಖವನ್ನು ದಾಟಿ ಆನಂದದಲ್ಲಿರುವವರು. ಹೀಗಾಗಿ ಯಾವುದನ್ನೂ ಅಂಟಿಸಿಕೊಳ್ಳದ ನೀವು ನಮಗೆ ದಾರಿ ತೋರಬಲ್ಲಿರಿ” ಎಂದು.


ಪರಾವರೇಷಾಂ ಭಗವನ್ ಕೃತಾನಿ  ಶ್ರುತಾನಿ ಮೇ ವ್ಯಾಸಮುಖಾದಭೀಕ್ಷ್ಣಮ್ ।

ನ ತೃಪ್ನುಮಃ ಕರ್ಣಸುಖಾವಹಾನಾಮ್  ತೇಷಾಮೃತೇ ಕೃಷ್ಣಕಥಾಮೃತೌಘಾತ್ ॥೧೦॥


“ನನ್ನ ತಂದೆಯವರಾದ ವೇದವ್ಯಾಸರ ತರಬೇತಿಯಲ್ಲಿ ಬೆಳೆದ ನಾನೂ ಕೂಡ ಸಾಕಷ್ಟು ಅಧ್ಯಯನ ಮಾಡಿದ್ದೇನೆ. ಹಿಂದಿನ ಹಾಗು ಇಂದಿನ ಸಮಸ್ತ  ಮಹಾನುಭಾವರ ಜೀವನಚರಿತ್ರೆಯನ್ನು ನನ್ನ ತಂದೆಯಿಂದ ನಿರಂತರ ಕೇಳುತ್ತಾ ಬೆಳೆದವನು ನಾನು. ಮಹಾತ್ಮರ  ಜೀವನ ಚರಿತ್ರೆಯನ್ನು ಕೇಳುವುದು ಕಿವಿಗೆ ಆನಂದ. ಎಲ್ಲಾ  ಮಹಾತ್ಮರ ಕಥೆಯನ್ನು ಕೇಳಿದಾಗ ನನಗೆ ತಿಳಿದದ್ದು ಏನೆಂದರೆ: ‘ಪ್ರತಿಯೊಬ್ಬ ಮಹಾತ್ಮನ ಕಥೆಯ ಹಿಂದಿರುವುದು ಶ್ರೀಕೃಷ್ಣನ ಕಥೆ ಮತ್ತು  ಅವೆಲ್ಲವೂ ಶ್ರೀಕೃಷ್ಣನ ಕಥೆಯ ಅಮೃತದ ಹೊಳೆ’ ಎನ್ನುವ ವಿಷಯ. ಹೀಗಾಗಿ ಇನ್ನಷ್ಟು ಕೃಷ್ಣ ಕಥೆಯನ್ನು ನಿಮ್ಮ ಬಾಯಿಂದ ನಾನು ಕೇಳಬೇಕು” ಎಂದು ತನ್ನ ಅಪೇಕ್ಷೆಯನ್ನು ವಿದುರ ಮೈತ್ರೇಯನಲ್ಲಿ ವ್ಯಕ್ತಪಡಿಸುತ್ತಾನೆ.


Tuesday, April 16, 2024

Shrimad BhAgavata in Kannada -Skandha-03-Ch-04_02

 

ನೋದ್ಧವೋSಣ್ವಪಿ ಮನ್ನ್ಯೂನೋ ಯದ್ಗುಣೈರ್ನಿರ್ಜಿತಃ[1] ಪ್ರಭುಃ ।

 ಅತೋ ಮದ್ವತ್ ಪುನರ್ಲೋಕಂ ಗ್ರಾಹಯನ್ನಿಹ ತಿಷ್ಠತು ॥೩೨॥

 

ಶ್ರೀಕೃಷ್ಣ ಉದ್ಧವನ ಬಗ್ಗೆ  ಯಾವ ನಿಲುವು ಹೊಂದಿದ್ದ ಎನ್ನುವುದನ್ನು ಈ ಶ್ಲೋಕ ವಿವರಿಸುತ್ತದೆ. ಈ ಶ್ಲೋಕ ಮೇಲ್ನೋಟದಲ್ಲಿ ಒಂದು ಅರ್ಥವನ್ನು ನೀಡಿದರೆ ಇದರ ಅಂತರಂಗದ ಅರ್ಥ ಭಿನ್ನವಾಗಿದೆ. ಮೇಲ್ನೋಟದಲ್ಲಿ ನೋಡಿದರೆ: “ಉದ್ಧವ ಜ್ಞಾನದಲ್ಲಿ ನನಗಿಂತ ಯಾವ ನಿಟ್ಟಿನಲ್ಲೂ ಕಡಿಮೆ ಇಲ್ಲ; ಆತ ತನ್ನ ಗುಣಗಳಿಂದ ನನ್ನನ್ನು ಸೋಲಿಸಿದವನು.  ಹೀಗಾಗಿ ಆತ ನಾನು ಅವತಾರ ಸಮಾಪ್ತಿ ಮಾಡಿದ ಮೇಲೆ ಲೋಕದ ಜನರಿಗೆ ಜ್ಞಾನೋಪದೇಶ ಮಾಡುತ್ತಾ ಇಲ್ಲೇ ಇರಲಿ” ಎಂದು ಶ್ರೀಕೃಷ್ಣ ಸಂಕಲ್ಪ ಮಾಡಿದ. ಆದ್ದರಿಂದ ಪ್ರಭಾಸ ಕ್ಷೇತ್ರದಲ್ಲಿ ಉಳಿದವರಂತೆ ಉದ್ಧವ ಹೊಡೆದಾಡಿಕೊಂಡು ಸಾಯಲಿಲ್ಲ ಎಂದು ಹೇಳಿದಂತಿದೆ. ಆದರೆ ನಮಗೆ ತಿಳಿದಂತೆ: ಉದ್ಧವ ಶ್ರೀಕೃಷ್ಣನ ಪರಮ ಭಕ್ತ. ಹೀಗಾಗಿ ಶ್ರೀಕೃಷ್ಣ ಆತನಿಗೆ ಎರಡು ಬಾರಿ ಉಪದೇಶ ಮಾಡಿ, ಆ ಜ್ಞಾನ ಸಂದೇಶವನ್ನು ಲೋಕಕ್ಕೆ ನೀಡುವಂತೆ ಹೇಳಿದ್ದ. ಹೀಗಿರುವಾಗ ಜ್ಞಾನದಲ್ಲಿ ಸಮಾನ ಮತ್ತು  ನನ್ನನ್ನು ಗೆದ್ದವನು ಇತ್ಯಾದಿಯಾಗಿ ಇಲ್ಲಿ ಹೇಳಿರುವ ಮಾತಿನ ಅರ್ಥವೇನು ಎನ್ನುವುದನ್ನು ನಾವು ನೋಡಬೇಕು.

 

ಆಚಾರ್ಯ ಮಧ್ವರು ‘ಈ ಶ್ಲೋಕವನ್ನು ನಾವು ಬೇರೆಬೇರೆ ನಿಟ್ಟಿನಲ್ಲಿ ನೋಡಿ ಅರ್ಥ ಮಾಡಿಕೊಳ್ಳಬೇಕು’ ಎನ್ನುವುದನ್ನು ತಮ್ಮ ತಾತ್ಪರ್ಯ ನಿರ್ಣಯದಲ್ಲಿ ವಿವರಿಸಿ ಹೇಳಿದ್ದಾರೆ. ಬ್ರಹ್ಮತರ್ಕದಲ್ಲಿ ಹೇಳುವಂತೆ: ಉತ್ತಮೈರಧಿಕತ್ವಂ ವಾ ಸಾಮ್ಯಂ ವಾ ವಿಜಯೋSಪಿ ವಾ ಉಚ್ಯತೇSಪಿತು ನೀಚಾನಾಂ ಮೋಹನಾರ್ಥೇ ವ್ಯಪೇಕ್ಷಯಾ[2]   ಮೂಢದೃಷ್ಟ್ಯನುಸಾರಾದ್ ವಾ ಕಿಞ್ಚಿತ್ಸಾಮ್ಯೇನ ವಾ ಕ್ವಚಿತ್  ಅಂದರೆ: ಒಂದು ಗ್ರಂಥದಲ್ಲಿ  ಒಬ್ಬ ವ್ಯಕ್ತಿಗಿಂತ ಕೆಳಗಿರುವವನನ್ನು ಆ ವ್ಯಕ್ತಿಗಿಂತ ಎತ್ತರದವನು ಎಂದು ಬಿಂಬಿಸಲು ನಾಲ್ಕು ಕಾರಣಗಳಿರುತ್ತವೆ. (೧). ತಾಮಸರನ್ನು ಮೋಹಗೊಳಿಸುವುದಕ್ಕಾಗಿ ಹೇಳುವುದು, (೨). ಒಬ್ಬ ವ್ಯಕ್ತಿಯಲ್ಲಿರುವ ಒಳ್ಳೆಯ ಗುಣವನ್ನು ಅತಿಶಯೋಕ್ತಿಯಿಂದ ಪ್ರಶಂಸಿಸುವುದಕ್ಕಾಗಿ ಹೇಳುವುದು, (೩). ದರ್ಶನ ಭಾಷೆಯಲ್ಲಿ ಹೇಳುವುದು. ಅಂದರೆ: ಒಬ್ಬ ಸಾಮಾನ್ಯ ವ್ಯಕ್ತಿಗೆ ಹೇಗೆ ಕಂಡಿತೋ ಹಾಗೆ ಹೇಳುವುದು (ಒಬ್ಬ ಅಜ್ಞಾನಿಗೆ ಉದ್ಧವ ಶ್ರೀಕೃಷ್ಣನಿಗಿಂತ ದೊಡ್ಡ ಜ್ಞಾನಿ ಎಂದು ಕಾಣಿಸಿರಬಹುದು) ಮತ್ತು (೪) ಸ್ವಲ್ಪ ಮಟ್ಟಿನ ಸಾಮ್ಯವಿರುವಲ್ಲಿ  ಸಾಮ್ಯವಿವಕ್ಷೆಯಿಂದ ಹೇಳುವುದು[ಉದ್ಧವ ಜ್ಞಾನಿಗಳ ಸಾಲಿನಲ್ಲಿ ಅತ್ಯಂತ ಶ್ರೇಷ್ಠ ಸ್ಥಾನದಲ್ಲಿ ನಿಂತಿರುವುದರಿಂದ).

 

ಒಟ್ಟಿನಲ್ಲಿ ಹೇಳಬೇಕೆಂದರೆ: ಒಬ್ಬ ವ್ಯಕ್ತಿ ನಾಶವಾಗುವಾಗ ಆತನ ಜೊತೆಗೆ ಅವನಲ್ಲಿರುವ ಜ್ಞಾನ ನಾಶವಾಗಬಾರದು ಎನ್ನುವುದು ಶ್ರೀಕೃಷ್ಣನ ಸಂಕಲ್ಪ. ಈ ತತ್ತ್ವವನ್ನು ಶ್ರೀಕೃಷ್ಣ ತನ್ನ ಅವತಾರ ಸಮಾಪ್ತಿಯಲ್ಲೂ  ಜಗತ್ತಿಗೆ ತೋರಿಸಿಕೊಟ್ಟ. ತಾನು ಅವತಾರ ಸಮಾಪ್ತಿ ಮಾಡುವ ಮುನ್ನ ಜ್ಞಾನಿಯಾದ ಉದ್ಧವನಿಗೆ ಅಪೂರ್ವವಾದ ತತ್ತ್ವಜ್ಞಾನವನ್ನು ಶ್ರೀಕೃಷ್ಣ ಭೋದಿಸಿದ. ಅದನ್ನು ಬದರಿ ಕ್ಷೇತ್ರದಲ್ಲಿರುವ  ಸಮಸ್ತ ಋಷಿಗಳಿಗೆ ಉದ್ಧವನ ಮುಖೇನ ತಲುಪುವಂತೆ ಮಾಡಿದ. ಇದರಿಂದಾಗಿ ಆ ಜ್ಞಾನ ಪರಂಪರೆ  ಅಲ್ಲಿನ ಎಲ್ಲಾ ಋಷಿಗಳ ಮುಖೇನ ಗಂಗಾ ನದಿಯಂತೆ ಈ ದೇಶದಲ್ಲಿ ಹರಿದು ಬಂತು.

 

॥ ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ತೃತೀಯಸ್ಕಂಧೇ ಚತುರ್ಥೋSಧ್ಯಾಯಃ ॥

ಭಾಗವತ ಮಹಾಪುರಾಣದ ಮೂರನೇ  ಸ್ಕಂಧದ ನಾಲ್ಕನೇ ಅಧ್ಯಾಯ ಮುಗಿಯಿತು

*********



[1] “ಗುಣೈರ್ನಿರ್ದಿತಃ” – ಪ್ರಚಲಿತ ಪಾಠ

[2] “ಮೋಹಾರ್ಥಂ ವಾSಪ್ಯುಪೇಕ್ಷಯಾ” – ಪ್ರಚಲಿತ ಪಾಠ

Thursday, April 4, 2024

Shrimad BhAgavata in Kannada -Skandha-03-Ch-04_01

 

ಚತುರ್ಥೋSಧ್ಯಾಯಃ

 

ಉದ್ಧವ ವಿದುರ ಸಂವಾದ- ಭಗವಂತನ ಅವತಾರ ಸಮಾಪ್ತಿ ಸಂಕಲ್ಪ

 

ಉದ್ಧವ ಉವಾಚ

ಭಗವಾನಾತ್ಮಮಾಯಾಯಾ[1] ಗತಿಂ ತಾಮವಲೋಕ್ಯ ಸಃ ।

 ಸರಸ್ವತೀಮುಪಸ್ಪೃಶ್ಯ ವೃಕ್ಷಮೂಲ ಉಪಾವಿಶತ್[2] ॥೦೩॥

 

 ಅಹಂ ಚೋಕ್ತೋ ಭಗವತಾ ಪ್ರಪನ್ನಾರ್ತಿಹರೇಣ ಹ ।

 ಬದರೀಂ ತ್ವಂ ಪ್ರಯಾಹೀತಿ ಸ್ವಕುಲಂ ಸಞ್ಜಿಹೀರ್ಷುಣಾ ॥೦೪॥

 

ವಿದುರನಿಗೆ ಕೃಷ್ಣಕಥೆಯನ್ನು ವಿವರಿಸುತ್ತಿರುವ ಉದ್ಧವ, ಮುಂದೆ ಇಪ್ಪತ್ತಾರು ವರ್ಷಗಳ ನಂತರ ನಡೆಯುವ ಕಥೆಯನ್ನು ಇಲ್ಲಿ ವಿವರಿಸಿದ್ದಾನೆ. ಮುಂದೆ ಯಾದವರೆಲ್ಲರೂ ಹೊಡೆದಾಡಿಕೊಂಡು ಸಾಯಬೇಕು ಎನ್ನುವುದು ಭಗವಂತನ ಇಚ್ಛೆಯಾಗಿತ್ತು.  ಇದರ ಹಿಂದೆ ಋಷಿ ಶಾಪ ಮತ್ತು ಗಾಂಧಾರಿಯ ಶಾಪವಿರುವ ವಿಷಯ ನಮಗೆ ತಿಳಿದಿದೆ. ಗಾಂಧಾರಿ ತನ್ನ ಜೀವಮಾನದಲ್ಲಿ ಸಂಯಮ ಕಳೆದುಕೊಂಡು ಮಾತನಾಡಿದ ಏಕಮಾತ್ರ ಘಟನೆ ಅದಾಗಿದೆ. ಎಂದೂ ತನ್ನ ಮಕ್ಕಳ ಮೇಲೆ ಮೋಹಪಟ್ಟು ಮಾತನಾಡದ ಆಕೆ,  ಯುದ್ಧದ ನಂತರ, ತನಗೆ ನಮಸ್ಕರಿಸಲು ಬಂದ ಶ್ರೀಕೃಷ್ಣನಿಗೆ ಸಂಯಮ ಕಳೆದುಕೊಂಡು: “ಹೇಗೆ ನನ್ನ ವಂಶ ನಿರ್ವಂಶವಾಯಿತೋ ಹಾಗೇ  ನಿನ್ನ ವಂಶವೂ ನಿರ್ವಂಶವಾಗಲಿ” ಎಂದು ಶಾಪ ನೀಡುತ್ತಾಳೆ.  ಈ ಶಾಪವನ್ನು ಸಂತೋಷವಾಗಿ ಸ್ವೀಕರಿಸಿದ ಶ್ರೀಕೃಷ್ಣ : “ಪತಿವೃತೆಯ ಆಶೀರ್ವಾದ” ಎಂದು ನಗುತ್ತಾ ಹೇಳಿ ಹೊರಟು ಹೋಗುತ್ತಾನೆ. “ಅಂತಹ ಪತಿವೃತೆ ಗಾಂಧಾರಿಯ ಮಾತನ್ನು ಉಳಿಸುವುದಕ್ಕಾಗಿ: ‘ಯಾದವರೆಲ್ಲರೂ ಹೊಡೆದಾಡಿಕೊಂಡು ಸಾಯಬೇಕು’ ಎಂದು  ಶ್ರೀಕೃಷ್ಣ ಸಂಕಲ್ಪಿಸಿದ” ಎನ್ನುತ್ತಾನೆ ಉದ್ಧವ.

ಹೇಗೆ ಮಹಾಭಾರತ ಯುದ್ಧದಲ್ಲಿ ಭಗವಂತ ಯಾವುದೇ ಆಯುಧ ಹಿಡಿಯದೆ ಇಡೀ ಹದಿನೆಂಟು ಅಕ್ಷೋಹಿಣಿ ಸೇನೆಯ ಆಯಸ್ಸನ್ನು ತನ್ನ ಕಣ್ಣಿನಿಂದ ಹೀರಿದನೋ, ಅದೇ ರೀತಿ, ತನ್ನ ಸಾಮರ್ಥ್ಯದಿಂದ, ತಾನು ಯಾರನ್ನೂ ಕೊಲ್ಲದೆ, ಸಮಸ್ತ ಯಾದವ ಕುಲವನ್ನು ಸಂಹಾರ ಮಾಡುವ ಸಂಕಲ್ಪವನ್ನು ಭಗವಂತ ಮಾಡುತ್ತಾನೆ.

ಪ್ರಭಾಸ ಕ್ಷೇತ್ರಕ್ಕೆ ಬಂದ ಯಾದವರು ದಾನ ಧರ್ಮಾದಿ ಪುಣ್ಯಕರ್ಮಗಳನ್ನು ಮಾಡಿ ಮುಗಿಸಿದ ಮೇಲೆ,  ಶ್ರೀಕೃಷ್ಣನ ಅನುಮತಿಯಂತೆ ಎಲ್ಲರೂ ಮಧ್ಯಪಾನ ಮಾಡುತ್ತಾರೆ. [ಕ್ಷತ್ರಿಯರಿಗೆ ಮಧ್ಯಪಾನ, ಮಾಂಸ ಭಕ್ಷಣೆ ನಿಷಿದ್ಧವಲ್ಲ].  ಮಧ್ಯಪಾನ ಮಾಡಿ ಮೈಮರೆತ ಎಲ್ಲರೂ ಒಬ್ಬರಿಗೊಬ್ಬರು ಹೊಡೆದಾಡಿಕೊಳ್ಳಲು ಪ್ರಾರಂಭಿಸುತ್ತಾರೆ. ಆದರೆ ಶ್ರೀಕೃಷ್ಣ ಸರಸ್ವತೀ ನದಿ ನೀರನ್ನು ಆಚಮನ ಮಾಡಿ, ದೂರದಲ್ಲಿನ ಒಂದು ವೃಕ್ಷದ ಕೆಳಗೆ ನಗುತ್ತಾ ಕುಳಿತಿದ್ದ. ತನಗೆ ಶರಣಾದವರ ಸಮಸ್ತ ದುಃಖವನ್ನು ಪರಿಹರಿಸುವ, ಯಾವ ದೋಷದ ಸ್ಪರ್ಶವೂ ಇಲ್ಲದ ನಿರ್ದುಷ್ಟ ಸ್ವರೂಪಿ ಭಗವಂತ, ಯಾದವರ ಸಂಸಾರ ದುಃಖವನ್ನು ಈ ರೀತಿ ಪರಿಹರಿಸಿದ.   ಯಾದವರೆಲ್ಲರೂ ಹೊಡೆದಾಡಿಕೊಂಡು ಸಾಯುತ್ತಿದ್ದಂತೆ ಶ್ರೀಕೃಷ್ಣ ತನ್ನ ಅವತಾರ ಸಮಾಪ್ತಿ ಮಾಡುತ್ತಾನೆ.

ಮುಂದೆ ನಡೆಯಲಿರುವ ಈ ಎಲ್ಲಾ ಘಟನೆಗಳನ್ನು ಶ್ರೀಕೃಷ್ಣ ಇಪ್ಪತ್ತಾರು ವರ್ಷಗಳ ಹಿಂದೆ ಸಂಕಲ್ಪ ಮಾಡಿ ಉದ್ಧವನಿಗೆ ವಿವರಿಸಿ, ಆತನಿಗೆ ಸಮಸ್ತ ಧರ್ಮೋಪದೇಶ ಮಾಡಿ ಹೇಳುತ್ತಾನೆ: “ಇದು ನನ್ನ ಸಂದೇಶ. ಇದನ್ನು ನೀನು ಬದರಿಗೆ ಹೋಗಿ ಅಲ್ಲಿರುವ ಋಷಿಗಳಿಗೆ ನೀಡು” ಎಂದು. ಶ್ರೀಕೃಷ್ಣನಿಂದ ಉಪದೇಶ ಪಡೆದು ಬದರಿಗೆ ಹೋಗತ್ತಿರುವ ಉದ್ಧವನಿಗೆ  ದಾರಿ ಮಧ್ಯೆ ವಿದುರ ಸಿಕ್ಕಿದ್ದಾನೆ. ಅಲ್ಲಿ ಉದ್ಧವ ಈ ಎಲ್ಲಾ ವಿವರಗಳನ್ನು ವಿದುರನಿಗೆ ವಿವರಿಸಿದ್ದಾನೆ.

ಈ ಮೇಲಿನ ಶ್ಲೋಕದಲ್ಲಿ ‘ಸ್ವಕುಲಂ ಸಂಜಿಹೀರ್ಷುಣಾ’ ಎನ್ನುವಲ್ಲಿ ‘ಮುಂದೆ(ಇಪ್ಪತ್ತಾರು ವರ್ಷಗಳ ನಂತರ) ಯದುಕುಲ ನಾಶ ಮಾಡುವ ಸಂಕಲ್ಪವನ್ನು ಶ್ರೀಕೃಷ್ಣ ಮಾಡಿದ’ ಎಂದು ಹೇಳಲಾಗಿದೆ. ಆದರೆ ‘ಯದುಕುಲ ನಾಶವಾಗುವ ಕಾಲದಲ್ಲಿ ಶ್ರೀಕೃಷ್ಣ ಉದ್ಧವನಿಗೆ ಉಪದೇಶ ಮಾಡಿದ’ ಎನ್ನುವ ವಿಷಯವೂ ಈ ಅಧ್ಯಾಯದಲ್ಲಿ ಬರುತ್ತದೆ. ಇದು ನಮಗೆ ಸ್ವಲ್ಪ ಗೊಂದಲವನ್ನುಂಟು ಮಾಡುತ್ತದೆ. ಈ ಗೊಂದಲವನ್ನು ಆಚಾರ್ಯ ಮಧ್ವರು ತಮ್ಮ ತಾತ್ಪರ್ಯ ನಿರ್ಣಯದಲ್ಲಿ ಪ್ರಮಾಣ ಸಹಿತ ಪರಿಹರಿಸಿದ್ದಾರೆ. ‘ಆತ್ಮಮಾಯಾಯಾಃ ಆತ್ಮಸಾಮರ್ಥ್ಯಸ್ಯ ಗತಿಂ ಪೂರ್ವಮೇವಾವಲೋಕ್ಯ[3] ಅಂದರೆ: ಯದುಕುಲ ನಾಶದ ತನ್ನ ಸಾಮರ್ಥ್ಯದ ಮುಂದಿನ ಕಾರ್ಯತಂತ್ರವನ್ನು ಭಗವಂತ ಮೊದಲೇ ನಿರ್ಧರಿಸಿದ್ದ.

ಗರುಡ ಪುರಾಣದಲ್ಲಿ ಹೇಳುವಂತೆ: ಜ್ಞಾತ್ವಾ ಕತಿಪಯೈರ್ವಷ್ಯೈಃ ಪೂರ್ವಮೇವ ಜನಾರ್ದನಃ ಮೌಸಲಂ ಜ್ಞಾನಸನ್ತತ್ಯಾ[4] ಉದ್ಧವಂ ಬದರೀಂ ನಯತ್[5] ಸ ಜ್ಞಾನಂ[6] ತತ್ರ ವಿಸ್ತೀರ್ಯ ಪುನರ್ದ್ವಾರವತೀಂ ಯಯೌ  ಪೂರ್ವಮೇವೋಪದಿಷ್ಟೋSಪಿ ಹರಿಣಾ ಜ್ಞಾನಮುದ್ಧವಃ | ಸ್ವರ್ಗಾರೋಹಣಕಾಲೇ ತು ಪುನಃ ಪಪ್ರಚ್ಛ ಕೇಶವಮ್ ಪುನಃ ಶ್ರುತ್ವಾ ಬದರ್ಯೇ ತು[7] ವಷತ್ರಯಮುವಾಸ ಹ ಜ್ಞಾನಂ ಸಂಸ್ಥಾಪ್ಯ ಪಶ್ಚಾಚ್ಚ ಸ್ವೇಚ್ಛಯಾ ಸ್ವರ್ಗತಃ ಪ್ರಭುಃ” ಇತಿ ಗಾರುಡೇ[8] ಮುಂದೆ ಇಪ್ಪತ್ತಾರು ವರ್ಷಗಳ ನಂತರ ನಡೆಯಲಿರುವ ಯದುಕುಲ ನಾಶದ ವಿಷಯವನ್ನು ಉದ್ಧವನಿಗೆ ಹೇಳಿ ಆಗಲೇ ಆತನಿಗೆ ತತ್ವೋಪದೇಶ ನೀಡಿದ ಶ್ರೀಕೃಷ್ಣ,  ಆತನಲ್ಲಿ ಆ ಜ್ಞಾನವನ್ನು ಬದರಿಗೆ ತೆರಳಿ ಅಲ್ಲಿನ ಋಷಿಗಳಿಗೆ ನೀಡುವಂತೆ ಹೇಳಿದ್ದ.  ಬದರಿಗೆ ತೆರಳಿದ ಉದ್ಧವ ಶ್ರೀಕೃಷ್ಣನಿಂದ ಪಡೆದ ಜ್ಞಾನವನ್ನು ಅಲ್ಲಿನ ಋಷಿಗಳಿಗೆ ನೀಡಿ ಮತ್ತೆ ಮರಳಿ ದ್ವಾರಕೆಗೆ ಬಂದಿದ್ದ.  ಮುಂದೆ ಯಾದವ ಸಂಹಾರ ಕಾಲದಲ್ಲಿ ಮರಳಿ ಶ್ರೀಕೃಷ್ಣ ಉದ್ಧವನಿಗೆ ಉಪದೇಶ ನೀಡಿ ಮತ್ತೆ ಬದರಿಗೆ ಕಳುಹಿಸಿಕೊಡುತ್ತಾನೆ. ಈ ರೀತಿ ಮತ್ತೆ ಬದರಿಗೆ ಬಂದ ಉದ್ಧವ ಅಲ್ಲಿ ಮೂರುವರ್ಷಗಳ ಕಾಲ ವಾಸವಿದ್ದು, ತಾನು ಶ್ರೀಕೃಷ್ಣನಿಂದ ಪಡೆದ ಜ್ಞಾನವನ್ನು ಅಲ್ಲಿನ ಋಷಿಗಳಿಗೆ ನೀಡಿ, ಆನಂತರ ಸ್ವಇಚ್ಛೆಯಿಂದ ದೇಹತ್ಯಾಗ ಮಾಡುತ್ತಾನೆ.  ಈ ಹಿನ್ನೆಲೆ ತಿಳಿದಾಗ ಮೇಲಿನ ಮಾತಿನಲ್ಲಿನ ಗೊಂದಲ ಪರಿಹಾರವಾಗುತ್ತದೆ.

ಹೀಗೆ ಉದ್ಧವ ಶ್ರೀಕೃಷ್ಣನ ಅವತಾರ ಸಮಾಪ್ತಿಯ ಸಂಕಲ್ಪದ ವಿವರಣೆಯನ್ನು ವಿದುರನಿಗೆ ನೀಡಿ, “ಗಂಗಾನದಿ ತೀರದಲ್ಲಿರುವ ಮೈತ್ರೇಯರು ನಿನಗೆ ಶ್ರೀಕೃಷ್ಣ ನೀಡಿರುವ ಜ್ಞಾನೋಪದೇಶವನ್ನು ನೀಡಲಿದ್ದಾರೆ” ಎಂದು ಹೇಳಿ ಬದರಿಗೆ ಹೊರಟು ಹೋಗುತ್ತಾನೆ.

 

 ರಾಜೋವಾಚ

 ನಿಧನಮುಪಗತೇಷು ವೃಷ್ಣಿಭೋಜೇಷ್ವಧಿರಥಯೂಥಪಯೂಥಪೇಷು ಮುಖ್ಯಃ ।

 ಸ ತು ಕಥಮವಶಿಷ್ಟ ಉದ್ಧವೋ ಯತ್[9] ಪ್ರಭುರಪಿ ತತ್ಯಜ ಆಕೃತಿಂ ತ್ರ್ಯಧೀಶಃ ॥೨೮॥

 

ಈ ಹಂತದಲ್ಲಿ  ಶುಕಾಚಾರ್ಯರಿಂದ ಭಾಗವತ ಶ್ರವಣ ಮಾಡುತ್ತಿರುವ ಪರೀಕ್ಷಿತನಿಗೊಂದು ಪ್ರಶ್ನೆ ಬರುತ್ತದೆ.  ಋಷಿ ಶಾಪ ಮತ್ತು ಗಾಂಧಾರಿಯ ಶಾಪದಿಂದಾಗಿ ಇಡೀ ಯಾದವ ಕುಲ ನಾಶವಾಯಿತು. ಮಹಾರಥಿಗಳ ಸಮುದಾಯ ಮತ್ತು ಅಂತಹ ಮಹಾರಥಿಗಳ ಮುಖಂಡರೆಲ್ಲರೂ ಹೊಡೆದಾಡಿಕೊಂಡು ಸತ್ತರು. ಮೂರು ಲೋಕದ ಒಡೆಯನಾದ(ತ್ರ್ಯಧೀಶಃ) ಸ್ವಯಂ ಶ್ರೀಕೃಷ್ಣನೇ ಆಕೃತಿಯನ್ನು ತೊರೆದ (ಅವತಾರ ಸಮಾಪ್ತಿ ಮಾಡಿದ). ಹೀಗಿರುವಾಗ ಯಾದವರಲ್ಲಿ ಮುಖ್ಯನಾದ, ಮಹಾಜ್ಞಾನಿ ಉದ್ಧವ ಹೇಗೆ ಬದುಕುಳಿದ? ಇದು ಪರೀಕ್ಷಿತನ ಪ್ರಶ್ನೆ.

ಈ ಮೇಲಿನ ಶ್ಲೋಕದಲ್ಲಿ  ಆಕೃತಿಂ ತತ್ಯಜೇ’ ಎನ್ನುವ ಮಾತು ಬಳಕೆಯಾಗಿದೆ. ಈ ಮಾತನ್ನು ಮೇಲ್ನೋಟದಲ್ಲಿ ನೋಡಿದರೆ ‘ಶ್ರೀಕೃಷ್ಣ ಶರೀರ ತ್ಯಾಗ  ಮಾಡಿದ’ ಎಂದು ಹೇಳಿದಂತೆ ಕಾಣುತ್ತದೆ.  ಜ್ಞಾನಾನಂದಸ್ವರೂಪನಾದ ಭಗವಂತನಿಗೆ ಅದೆಲ್ಲಿಯ ದೇಹ? ಅಂತಹ ಭಗವಂತ ದೇಹ ತೊರೆಯುವುದು ಎಂದರೇನು? ಈ ಎಲ್ಲಾ ಗೊಂದಲಗಳನ್ನು ಆಚಾರ್ಯ ಮಧ್ವರು ತಮ್ಮ ತಾತ್ಪರ್ಯ ನಿರ್ಣಯದಲ್ಲಿ ಬಗೆಹರಿಸಿದ್ದಾರೆ: ಆಕೃತಿಂ  ಪೃಥಿವೀಮ್ -  ಶರೀರಮಾಕೃತಿರ್ದೇಹಃ ಕುಃ ಪೃಥ್ವೀ ಚ ಮಹೀ ತಥಾ”  ಹ್ಯಭಿಧಾನೇ[10] ಇಲ್ಲಿ ಹೇಳುವಂತೆ:  ‘ಆಕೃತಿ, ದೇಹ, ಕಂ, ಪೃಥ್ವಿ ಮತ್ತು  ಮಹೀ’  ಈ ಎಲ್ಲಾ ಶಬ್ದಗಳು ಸಮನಾರ್ಥಕ ಪದಗಳು.  ಈ ಅರ್ಥದಂತೆ ನೋಡಿದಾಗ: ಮೇಲಿನ ಮಾತು “ಭಗವಂತ ಭೂಮಿಯನ್ನು ತ್ಯೆಜಿಸಿದ” ಎಂದು ಹೇಳಿದಂತಾಗುತ್ತದೆ. ಆದರೆ ಸರ್ವಾಂತರ್ಯಾಮಿ, ಸರ್ವವ್ಯಾಪ್ತ ಭಗವಂತ ಭೂಮಿಯನ್ನು ತ್ಯಜಿಸಿದ ಎನ್ನುವುದು ಇಲ್ಲಿ  ಕೂಡುವುದಿಲ್ಲ. ಈ ಸಮಸ್ಯೆಗೆ  ಸ್ಕಾಂಧ ಪುರಾಣದಲ್ಲಿ ಉತ್ತರವಿದೆ. ಅಲ್ಲಿ ಹೇಳುವಂತೆ: ಪೃಥಿವೀಲೋಕಸನ್ತ್ಯಾಗೋ ದೇಹತ್ಯಾಗೋ ಹರೇಃ ಸ್ಮೃತಃ ನಿತ್ಯಾನನ್ದಸ್ವರೂಪತ್ವಾದನ್ಯನ್ನೈವೋಣ್ಪದ್ಯತೇ[11] ದರ್ಶಯೇಜ್ಜನಮೋಹಾಯ ಸದೃಶೀಂ ಮೃತಕಾಕೃತಿಮ್ ನಟವದ್ ಭಗವಾನ್ ವಿಷ್ಣುಃ ಪರಜ್ಞಾನಾತ್ಮಕೋ ವಿಭುಃ[12]ಇತಿ ಸ್ಕಾನ್ದೇ  ಮಾನವ ರೂಪಿಯಾಗಿ ನಮ್ಮ ಕಣ್ಣಿಗೆ ಕಂಡ ಭಗವಂತ,  ಅವತಾರ ಸಮಾಪ್ತಿ ಮಾಡಿದಾಗ, ನಮ್ಮ ಕಣ್ಣಿಗೆ ಕಾಣುತ್ತಿದ್ದ ಆತನ ಶರೀರ ಅದೃಶ್ಯವಾಗುತ್ತದೆ. ಉಳಿದಂತೆ ಅಲ್ಲಿ  ಮೃತ ದೇಹ ಕಾಣುವಂತೆ ಮಾಡಿ ಜನರಿಗೆ ಭ್ರಮೆ ಬರಿಸಿರುವುದು ಭಗವಂತನ ಲೀಲಾ ನಾಟಕದ ಒಂದು ಭಾಗವಷ್ಟೇ. ಮುಂದೆ ಭಾಗವತದಲ್ಲೇ ಹೇಳುವಂತೆ(೧೧.೩೧): ರಾಜನ್ ಪರಸ್ಯ ತನುಭೃಜ್ಜನನಾಪ್ಯಯೇಹಾ[13] ಮಾಯಾವಿಡಮ್ಬನಮವೈಹಿ ಯಥಾ ನಟಸ್ಯ’ ಇತಿ ಚ  : ನಮಗೆ ಕಾಣುವ ಭಗವಂತನ ಜನನ-ಮರಣ  ಇತ್ಯಾದಿ ವ್ಯಾಪಾರಗಳು ಕೇವಲ ಆತನ ಲೀಲಾ ನಾಟಕವಷ್ಟೇ. ಹೀಗಾಗಿ ಶ್ರೀಕೃಷ್ಣ ಶರೀರ ತ್ಯಾಗ  ಮಾಡಿದ ಎಂದರೆ : ನಮ್ಮ ಪಾಲಿಗೆ ಅದೃಶ್ಯನಾದ ಎಂದರ್ಥ.

 

[ಯದುಕುಲ ನಾಶಕ್ಕೆ ಕೇವಲ ಗಾಂಧಾರಿಯ ಶಾಪವೊಂದೇ ಕಾರಣವಲ್ಲ. ಜೊತೆಗೆ ಋಷಿ ಶಾಪವೂ ಕಾರಣವಾಗಿದೆ. ಶ್ರೀಕೃಷ್ಣನ ಮಗ ಸಾಂಬ ಯದುಕುಲದಲ್ಲಿ ಅತ್ಯಂತ ಸುಂದರ ವ್ಯಕ್ತಿಯಾಗಿದ್ದ. ಒಮ್ಮೆ ಯಾದವರು ಸಾಂಬನಿಗೆ ಗರ್ಭಿಣಿ ವೇಷ ತೊಡಿಸಿ, ಆತನನ್ನು ದೂರ್ವಾಸ ಮುನಿ ತಪಸ್ಸಿಗೆ ಕುಳಿತಿದ್ದ ಸ್ಥಳಕ್ಕೆ ಕರೆತಂದು, ಅವರಲ್ಲಿ: “ಈಕೆಗೆ ಗಂಡು ಮಗುವಾಗುತ್ತದೋ ಅಥವಾ ಹೆಣ್ಣು ಮಗುವಾಗುತ್ತದೋ” ಎಂದು ಕೇಳುತ್ತಾರೆ. ಜ್ಞಾನ ದೃಷ್ಟಿಯಲ್ಲಿ ಎಲ್ಲವನ್ನೂ ಕಂಡ ದುರ್ವಾಸರು: “ಈತನ ಹೊಟ್ಟೆಯಲ್ಲಿ ಕಬ್ಬಿಣದ ಸಲಾಖೆ ಹುಟ್ಟುತ್ತದೆ ಮತ್ತು ಅದರಿಂದ ನಿಮ್ಮ ವಂಶ ನಾಶವಾಗುತ್ತದೆ” ಎಂದು ಶಾಪ ನೀಡುತ್ತಾರೆ. ಇದರಿಂದಾಗಿ ಸಾಂಬ ಕಬ್ಬಿಣದ ಸಲಾಖೆಗೆ ಜನ್ಮ ನೀಡುತ್ತಾನೆ. ಈ ಘಟನೆಯಿಂದ ಬೆದರಿದ ಯಾದವರು  ಆ ಸಲಾಖೆಯನ್ನು ಗಂಧದಂತೆ ತೇಯ್ದು ಸಮುದ್ರಕ್ಕೆ ಎಸೆಯುತ್ತಾರೆ. ಈ ಗಂಧ ಸಮುದ್ರದ ತಡಿಯಲ್ಲಿ ಬೆಳೆಯುವ ಮುಳ್ಳಿನ ಗಿಡಕ್ಕೆ ಗೊಬ್ಬರವಾಗುತ್ತದೆ. ಮುಂದೆ ಇದೇ ಮುಳ್ಳಿನ ಗಿಡಗಳಿಂದ ಯಾದವರು ಒಬ್ಬರಿಗೊಬ್ಬರು ಹೊಡೆದಾಡಿಕೊಂಡು  ಸಾಯುವಂತಾಗುತ್ತದೆ. ಭಗವಂತ ಎಂದೂ ಜ್ಞಾನಿಗಳ ಮಾತನ್ನು ಸುಳ್ಳಾಗಿಸುವುದಿಲ್ಲ. ಸಮುದ್ರದ ತಡಿಯಲ್ಲಿ ಸಿಕ್ಕ ಆ ಕಬ್ಬಿಣದ ಸಲಾಖೆಯ ಒಂದು ಚಿಕ್ಕ ಭಾಗವನ್ನು ಬೇಡನೊಬ್ಬ ತನ್ನ ಬಾಣದ ತುದಿಯಲ್ಲಿ ಬಳಸುತ್ತಾನೆ. ಈ ಬಾಣವೇ ಶ್ರೀಕೃಷ್ಣನ ಅವತಾರ ಸಮಾಪ್ತಿಗೆ ಕಾರಣವಾಗುತ್ತದೆ.  ಈ ಎಲ್ಲಾ ಘಟನೆಗಳ ಹಿನ್ನೆಲೆಯಲ್ಲಿ ಪರೀಕ್ಷತ ಮೇಲಿನ ಪ್ರಶ್ನೆ ಹಾಕಿದ್ದಾನೆ. ಪತಿವೃತೆ ಮತ್ತು ಋಷಿ ಶಾಪವನ್ನು ನಿಜವಾಗಿಸುವುದಕ್ಕೆ ಸ್ವಯಂ ಭಗವಂತನೇ ಸಾಕ್ಷಿಯಾಗಿ ನಿಂತು ತನ್ನ ಅವತಾರ ಸಮಾಪ್ತಿ ಮಾಡಿದ. ಆದರೆ ಯಾದವರಲ್ಲೇ ಒಬ್ಬನಾದ ಉದ್ಧವ ಹೇಗೆ  ಈ ಘಟನೆಯಿಂದ ಪಾರಾದ ಎನ್ನುವುದು ಆತನ ಪ್ರಶ್ನೆ].



[1] “ಭಗವಾನ್ ಸ್ವಾತ್ಮಮಾಯಾಯಾಃ” -ಪ್ರಚಲಿತ ಪಾಠ, “ಭಗವಾಂಸ್ತ್ವಾತ್ಮಮಾಯಾಯಾ” – ಎಂದು ಕೆಲವರು.

[2] “ವೃಕ್ಷಮೂಲಮುಪಾವಿಶತ್” – ಪ್ರಚಲಿತ ಪಾಠ

[3]“ಪೂರ್ವಮೇವಾsಲೋಚ್ಯ”-ಪಾಠಾನ್ತರ

[4] “ಜ್ಞಾನಸಮ್ಪತ್ತ್ಯೈ” – ಎಂದು ಕೆಲವರು

[5] “ನಯನ್” – ಪಾಠಾನ್ತರ

[6] “ತಜ್ಞಾನಂ” – ಎಂದು ಕೆಲವರು

[7] “ಬದರ್ಯಾಂ ಚ” – ಎಂದು ಕೆಲವರು

[8] “ಇತಿ ಚ ಗಾರುಡೇ” – ಎಂದು ಕೆಲವರು

[9] ಉದ್ಧವೋsಯಮ್ - ಪಾಠಾನ್ತರ

[10] “ಇತ್ಯಾಭಿಧಾನಮ್”- ಪ್ರಚಲಿತ ಪಾಠ

[11] “ನೈವೋಪಲಭ್ಯತೇ” – ಪ್ರಚಲಿತ ಪಾಠ, “ಅನ್ಯೋ ನೈವೋಪಲಭ್ಯತೇ” – ಎಂದು ಕೆಲವರು.

[12] “ಪರಜ್ಞಾನಾಕೃತಿಃ ಸ್ವಯಮ್” – ಪ್ರಚಲಿತ ಪಾಠ, ““ಪರಜ್ಞಾನಾಕೃತಿಃ ಸದಾ”, “ಪರಂ ಪರಜ್ಞಾನಾಕೃತಿಃ ಸದಾ” ಎಂದೂ ಹೇಳುತ್ತಾರೆ.

[13] “-ಪ್ಯಯೇಹಾಂ ಮಾಯಾವಿಡಮ್ಬನ-“ , [13] “-ಪ್ಯಯೇಹಾಂ ಮಾಯಾಂ ವಿಡಮ್ಬನ-“ ಎಂದು ಕೆಲವರು.

Sunday, March 3, 2024

Shrimad BhAgavata in Kannada -Skandha-03-Ch-03_02

ಉದ್ಧವ ವಿದುರ ಸಂವಾದ-ಜ್ಞಾನೋಪದೇಶ ಮತ್ತು ವಿರಕ್ತಿ

 

ಭಗವಾನಪಿ ವಿಶ್ವಾತ್ಮಾ ಲೋಕವೇದಪಥಾನುಗಃ ।

ಕಾಮಂ[1] ಸಿಷೇವೇ ದ್ವಾರ್ವತ್ಯಾಮಸಕ್ತಃ ಸಾಙ್ಖ್ಯಮಾಸ್ಥಿತಃ ॥೧೯॥

 

ಇಲ್ಲಿಯ ತನಕ ಸಂಸಾರ, ಮಕ್ಕಳು, ಈ ರೀತಿ ಒಂದು ರೀತಿ ಕೃಷ್ಣಕಥೆಯ ಲೌಕಿಕ ಮುಖವನ್ನು ಹೇಳಿದ್ದ ಉದ್ಧವ, ಭಗವಂತನ ಈ ಎಲ್ಲಾ ಲೀಲೆಗಳ ಹಿಂದಿನ ಸತ್ಯವೇನು ಎನ್ನುವುದನ್ನು ಇಲ್ಲಿ ವಿವರಿಸಿದ್ದಾನೆ. [ಈ ಶ್ಲೋಕದಲ್ಲಿ ‘ಅಪಿ’ ಎನ್ನುವ ಪದ ‘ಭಗವಾನ್’ ಮತ್ತು ‘ವಿಶ್ವಾತ್ಮಾ’ ಎನ್ನುವ ಎರಡು ಶಬ್ದಗಳ ನಡುವೆ ಬಂದಿದ್ದು, ಸಂಸ್ಕೃತ ಭಾಷೆಯ  ‘ದೇಹಲಿ ದೀಪ ನ್ಯಾಯ’  ಎನ್ನುವ ನಿಯಮದಂತೆ : ಅಪಿ ಶಬ್ದ ಈ ಎರಡೂ ಶಬ್ದಗಳಿಗೂ ಅನ್ವಯವಾಗುತ್ತದೆ. ಅಂದರೆ  ಭಗವಾನಪಿ, ವಿಶ್ವಾತ್ಮಾಪಿ ಎಂದು ನಾವು ಅನ್ವಯ ಮಾಡಿಕೊಳ್ಳಬೇಕು]. ಜಗತ್ತಿನ ಎಲ್ಲಾ ಭಾಗ್ಯಗಳಿಗೂ ಒಡೆಯ[ಭಗವಾನ್]; ಸಮಸ್ತಜೀವಜಾತದ ಅಂತರ್ಯಾಮಿಯಾಗಿರುವ[ವಿಶ್ವಾತ್ಮಾ] ಶ್ರೀಕೃಷ್ಣನಿಗೆ, ಈ ಲೌಕಿಕ ಭೋಗದ ಅವಶ್ಯಕತೆ ಏನಿದೆ? ಎಲ್ಲವನ್ನೂ ಸೃಷ್ಟಿಮಾಡಿ, ಎಲ್ಲವುದರ ಒಳಗೂ ಹೊರಗೂ ತುಂಬಿ, ಕೊನೆಗೊಂದು ದಿನ ಎಲ್ಲವನ್ನೂ ಸಂಹಾರ ಮಾಡುವ ಶಕ್ತಿಯಾದ(ಆತ್ಮಾ) ಶ್ರೀಕೃಷ್ಣನಿಗೆ ಮದುವೆಯಾಗಿ, ಮಕ್ಕಳನ್ನು ಪಡೆದು ಏನೂ ಆಗಬೇಕಿಲ್ಲ. ಆದರೂ ಕೂಡಾ ಭಗವಂತ ಈ ಎಲ್ಲಾ ಲೀಲೆಗಳನ್ನಾಡಿದ. ಶಾಸ್ತ್ರದಲ್ಲಿ ಹೇಳುವಂತೆ: ಪ್ರಾಪ್ತೇ ನರೇಷು ಜನನೇ ನರವತ್ ಪ್ರವೃತ್ತಿಃ. ಮಹಾಪುರುಷರು  ಭೂಮಿಯಲ್ಲಿ ಅವತರಿಸಿದಾಗ, ಅತಿಮಾನುಷ ಲೀಲೆಗಳನ್ನು ಹೊರತುಪಡಿಸಿದರೆ,  ಅವರು ಮನುಷ್ಯರಂತೆಯೇ ವರ್ತಿಸಿ ಮನುಷ್ಯರು ಏನು ಮಾಡಬೇಕು ಎನ್ನುವುದನ್ನು ತೋರಿಸಿ ಕೊಡುತ್ತಾರೆ. ಇದೇ ರೀತಿ ಶ್ರೀಕೃಷ್ಣ ಲೌಕಿಕವಾದ ಮತ್ತು ವೈದಿಕವಾದ ನಿಯಮಗಳಿಗೆ ಬದ್ದನಾಗಿದ್ದು ತನ್ನ ಲೀಲೆಗಳನ್ನು ತೋರಿದ.

ಯುದ್ಧದಲ್ಲಿ ತನ್ನ ಪ್ರಜೆಗಳಿಗೆ ತೊಂದರೆ ಆಗಬಾರದು ಎಂದು ಶ್ರೀಕೃಷ್ಣ ಸಮುದ್ರದ ನಡುವಿನಲ್ಲಿ ದ್ವಾರಾವತಿ ನಗರವನ್ನು ನಿರ್ಮಿಸಿದ.[ಕೃಷ್ಣಾವತಾರ ಸಮಾಪ್ತಿಯಾದ ಏಳನೇ ದಿನ ಈ ನಗರ ನೀರಿನಲ್ಲಿ ಮುಳುಗಿತು]. ಅಲ್ಲಿ ಶ್ರೀಕೃಷ್ಣ ಯಾವ ಲೇಪವೂ ಇಲ್ಲದೇ, ತಾನು ನಿರ್ಲಿಪ್ತನಾಗಿದ್ದು[ಸ್ವರೂಪಾನಂದದಲ್ಲಿದ್ದು], ತನ್ನನ್ನು ವರಿಸಿದ ರಾಜಕುಮಾರಿಯರಿಗೆ ದಾಂಪತ್ಯ ಸುಖವನ್ನು ಕರುಣಿಸಿದ. 

ಈ ಶ್ಲೋಕದಲ್ಲಿ ಬಳಕೆಯಾಗಿರುವ ‘ಸಾಂಖ್ಯ’ ಎನ್ನುವ ಪದ ಭಗವಂತನ ಸ್ವರೂಪಾನಂದವನ್ನು ಸೂಚಿಸುತ್ತದೆ. ಆಚಾರ್ಯ ಮಧ್ವರು ತಮ್ಮ ತಾತ್ಪರ್ಯನಿರ್ಣಯದಲ್ಲಿ ಹೇಳಿರುವಂತೆ:  ಕೇವಲಂ ಭಗವಜ್ಜ್ಞಾನಂ ಸಾಙ್ಖ್ಯಮಿತ್ಯಭಿಧೀಯತೇಇತ್ಯಧ್ಯಾತ್ಮೇ. ಸ್ವರೂಪಾನಂದವೆನ್ನುವ ಅಪರಿಮಿತವಾದ ಆನಂದದ ಕಡಲಾದ ಭಗವಂತನಿಗೆ ವಿಷಯ ಭೋಗದಲ್ಲಿ  ಎಲ್ಲಿಯ ಆಸಕ್ತಿ?  ಆತ ಸದಾ ವಿಷಯವಿರಕ್ತ.

ಶ್ರೀಕೃಷ್ಣ ದ್ವಾರಕೆಯಿಂದ ಆಗಾಗ ಹಸ್ತಿನಪುರಕ್ಕೆ ಬಂದು ಹೋಗುತ್ತಿದ್ದ. ಹೀಗೆ ಬಂದವನು ಸುಮಾರು ಐದು ಆರು ತಿಂಗಳು ಹಸ್ತಿನಪುರದಲ್ಲೇ ನಿಲ್ಲುತ್ತಿದ್ದ. ಆ ಸಮಯದಲ್ಲಿ ದ್ವಾರಕೆಯ ಸಮಸ್ತ ಜನರೂ ಶ್ರೀಕೃಷ್ಣ ಹಿಂತಿರುಗಿ ಬರುವ ದಿನಕ್ಕಾಗಿ ಕಾಯುತ್ತಿದ್ದರು. ಶ್ರೀಕೃಷ್ಣ ಹಸ್ತಿನಪುರದಿಂದ ಹಿಂತಿರುಗಿ ಬರುವಾಗ ದ್ವಾರಕೆಯ ಸಮೀಪ ಬಂದು ತನ್ನ ಶಂಖನಾದ ಮಾಡುತ್ತಿದ್ದ. ಈ ಶಂಖನಾದ ಕೇಳಿದ ತಕ್ಷಣ ಇಡೀ ದ್ವಾರಕೆಯ ಜನ  ಶ್ರೀಕೃಷ್ಣನನ್ನು ಸ್ವಾಗತ ಮಾಡಲು ಓಡಿ ಬರುತ್ತಿದ್ದರು. ಈ ರೀತಿ ವಿಹಾರ ಮಾಡಿಕೊಂಡು ಶ್ರೀಕೃಷ್ಣ ದ್ವಾರಕೆಯಲ್ಲಿದ್ದ.

ಈ ಹಿಂದೆ ವಿವರಿಸಿದಂತೆ ಮಹಾಭಾರತ ಯುದ್ಧ ನಡೆದಾಗ ಶ್ರೀಕೃಷ್ಣನಿಗೆ ಸುಮಾರು ೭೦ ವರ್ಷ ವಯಸ್ಸು. ಯುದ್ಧ ನಡೆದು ಸುಮಾರು ಹತ್ತುವರ್ಷಗಳ ನಂತರ ಯಾದವರು ಋಷಿಶಾಪಕ್ಕೊಳಗಾಗುತ್ತಾರೆ. ಆದರೆ ಈ ಘಟನೆಗೂ ಮೊದಲೇ ಶ್ರೀಕೃಷ್ಣ ಮುಂದೆ ನಡೆಯಲಿರುವ ಘಟನೆಗಳ ಜೊತೆಗೆ ತನ್ನ ಅವತಾರ ಸಮಾಪ್ತಿ ವಿಷಯವನ್ನು ಉದ್ಧವನಿಗೆ ತಿಳಿಸಿದ್ದ. ಶ್ರೀಕೃಷ್ಣ ಉದ್ಧವನಿಗೆ ಅಧ್ಯಾತ್ಮದ ಉಪದೇಶ ನೀಡಿ, “ನೀನು ಬದರಿಗೆ ಹೋಗಿ ಈ ಜ್ಞಾನವನ್ನು ಅಲ್ಲಿರುವ ಋಷಿಗಳಿಗೆ ಬಿತ್ತರಿಸು” ಎಂದು ಹೇಳಿದ್ದ. ಶ್ರೀಕೃಷ್ಣನ ಸೂಚನೆಯಂತೆ ಉದ್ಧವ ಬದರಿಗೆ ಹೋಗಿದ್ದರೂ ಅಲ್ಲೇ ನಿಲ್ಲದೆ, ಆಗಾಗ  ಹಸ್ತಿನಪುರಕ್ಕೆ ಬಂದು ಹೋಗುತ್ತಿದ್ದ. ಹೀಗೆ ಶ್ರೀಕೃಷ್ಣ ಅವತಾರ ಸಮಾಪ್ತಿ ಮಾಡಲಿರುವ ಸಮಯ ಸಮೀಪಿಸುತ್ತಿರುವ ಕಾಲದಲ್ಲಿ ಉದ್ಧವ ಶ್ರೀಕೃಷ್ಣನ ಜೊತೆಗಿದ್ದ. ಹೀಗಾಗಿ ಅವತಾರ ಸಮಾಪ್ತಿಗೂ ಮೊದಲು ಶ್ರೀಕೃಷ್ಣ ಉದ್ಧವನಿಗೆ ಮತ್ತೆ ಉಪದೇಶ ನೀಡಿದ. ಇದೇ ಸಮಯದಲ್ಲಿ ಶ್ರೀಕೃಷ್ಣನನ್ನು ಕಾಣಲು ಅಲ್ಲಿಗೆ  ಮೈತ್ರೇಯ ಬರುತ್ತಾನೆ. ಶ್ರೀಕೃಷ್ಣ ಉದ್ಧವನ ಜೊತೆಗೆ ಮೈತ್ರೇಯನಿಗೂ ಕೂಡಾ ಮುಂದೆ ನಡೆಯಲಿರುವ ತನ್ನ ಅವತಾರ ಸಮಾಪ್ತಿ ವಿಷಯವನ್ನು ಹೇಳಿ,  ಸೃಷ್ಟಿಯ ಆದಿಯಲ್ಲಿ ತಾನು ಚತುರ್ಮುಖನಿಗೆ ನೀಡಿದ ಜ್ಞಾನವನ್ನು ಅವರಿಗೆ ಉಪದೇಶಿಸುತ್ತಾನೆ.  ಹೀಗೆ ಅವರಿಬ್ಬರಿಗೂ  ಅದ್ಭುತವಾದ ಆದಿವಿಜ್ಞಾನವನ್ನು ಉಪದೇಶ ಮಾಡಿದ ಶ್ರೀಕೃಷ್ಣ, ತನ್ನ ಅವತಾರ ಸಮಾಪ್ತಿ ವಿಷಯವನ್ನು ವಿದುರನಿಗೆ ತಿಳಿಸುವ ಜವಾಬ್ದಾರಿಯನ್ನು ಉದ್ಧವನಿಗೆ ನೀಡಿದರೆ,   ತಾನು ನೀಡಿದ ಅಧ್ಯಾತ್ಮ ವಿದ್ಯೆಯನ್ನು ವಿದುರನಿಗೆ ಉಪದೇಶಿಸುವಂತೆ ಮೈತ್ರೇಯನಿಗೆ ತಿಳಿಸುತ್ತಾನೆ.

 

ತಸ್ಯೇತ್ಥಂ[2] ರಮಮಾಣಸ್ಯ ಸಂವತ್ಸರಗಣಾನ್ ಬಹೂನ್ ।

ಗೃಹಮೇಧೇಷು ಯೋಗೇಷು ವಿರಾಗಃ ಸಮಜಾಯತ ॥೨೨॥

 

ತನ್ನ ಅವತಾರ ಸಮಾಪ್ತಿಯ ವಿಷಯವನ್ನು ವಿದುರನಿಗಲ್ಲದೆ ಇನ್ನಾರಿಗೂ ತಿಳಿಸಕೂಡದು ಎಂದು ಹೇಳಿದ ಶ್ರೀಕೃಷ್ಣ , ಉದ್ಧವ-ಮೈತ್ರೇಯರಿಗೆ ಆದಿವಿಜ್ಞಾನದ ಉಪದೇಶ ನೀಡಿ, ತಾನು ವಿರಕ್ತಿಯನ್ನು ತೋರಿದ. ಈ ಶ್ಲೋಕದಲ್ಲಿ “ಗೃಹಮೇಧೇಷು ಯೋಗಃ” ಎನ್ನುವ ಪದ ಬಳಕೆಯಾಗಿದೆ. ಶ್ರೀಕೃಷ್ಣ ದಾಂಪತ್ಯದ ಯೋಗದಲ್ಲಿದ್ದನೇ ಹೊರತು ಭೋಗದಲ್ಲಲ್ಲ.  ಭೋಗದಲ್ಲಿರುವ ಬಿಡಲಾರದ ಮಮತೆ ಯೋಗದಲ್ಲಿಲ್ಲ. ಹೀಗಾಗಿ ಅಂಟಿಸಿಕೊಳ್ಳದೇ ಮಾಡುವ ಗಾರ್ಹಪತ್ಯ(ದಾಂಪತ್ಯ ಜೀವನ) ಬ್ರಹ್ಮಚರ್ಯದಂತೆ  ಯೋಗವಾಗುತ್ತದೆ ಎನ್ನುವ ಸತ್ಯವನ್ನು ಈ ಶ್ಲೋಕ ನಮಗೆ ನೀಡುತ್ತದೆ.

“ಇಲ್ಲಿಯ ತನಕ ಬಾಹ್ಯವಾಗಿ ಸಂಸಾರ ರಸ ಭೋಗದಲ್ಲಿದ್ದವನಂತೆ ತೋರಿದ ಶ್ರೀಕೃಷ್ಣ,  ಬಳಿಕ ಎಲ್ಲದರಲ್ಲೂ ವಿರಕ್ತಿ ಹೊಂದಿದವನಂತೆ ತೋರಿಸಿಕೊಂಡ” ಎಂದಿದ್ದಾನೆ ಉದ್ಧವ.  ಈ ಶ್ಲೋಕದಲ್ಲಿ “ವಿರಾಗಃ ಸಮಜಾಯಾತ” ಎಂದು ಹೇಳಲಾಗಿದೆ. ಇದರ ಅರ್ಥ ವೈರಾಗ್ಯ ಉಂಟಾಯಿತು ಎಂದರ್ಥವಲ್ಲ. ಪಾದ್ಮಪುರಾಣದಲ್ಲಿ ಹೇಳುವಂತೆ: ಸರ್ವದಾSಪಿ ವಿರಕ್ತಃ ಸನ್ ಭಾಸಯೀತ ವಿರಾಗವತ್[3] | ಕಾದಾಚಿತ್ಕಃ ಕುತಸ್ತಸ್ಯ ಲೋಕಶಿಕ್ಷಾರ್ಥಮಿಷ್ಯತೇ. ಭಗವಂತ ಸದಾ ವಿಷಯ ವಿರಕ್ತ. ಆದರೆ ಲೋಕಕಲ್ಯಾಣಕ್ಕಾಗಿ ಈ ತನಕ ಆಸಕ್ತಿ ಉಳ್ಳವನಂತೆ ತೋರಿಸಿಕೊಂಡಿದ್ದ ಆತ ಬಳಿಕ ವಿರಕ್ತನಾಗಿ ತೋರಿಸಿಕೊಂಡ.

 

 ದೈವಾಧೀನೇಷು ಕಾಮೇಷು ದೈವಾಧೀನಃ ಸ್ವಯಂ ಪುಮಾನ್ ।

ಕೋ ವಿಸ್ರಮ್ಭೇತ ಯೋಗೇನ ಯೋಗೇಶ್ವರಮನುವ್ರತಃ ॥೨೩॥

 

ಭಗವಂತನ ವಿರಕ್ತಿಯ ಕುರಿತು ಹೇಳುತ್ತಾ ಇಲ್ಲಿ ಒಂದು ಸುಂದರವಾದ ವ್ಯಾಖ್ಯಾನವನ್ನು ಉದ್ಧವನ ಮುಖೇನ ವ್ಯಾಸರು ನೀಡಿದ್ದಾರೆ. ಮನುಷ್ಯನಿಗೆ ಬಯಕೆ/ಕಾಮ ಸರ್ವೇ ಸಾಮಾನ್ಯ. ಆದರೆ ಆಸೆಪಟ್ಟಿದ್ದೆಲ್ಲಾ ಆತನಿಗೆ ಸಿಗುವುದಿಲ್ಲ. ಮನುಷ್ಯ ಬಯಸಬಹುದು, ಆದರೆ ಸಿಗುವುದು-ಬಿಡುವುದು ದೈವಾದೀನ. ನಮ್ಮ ಹಣೆಬರಹ ಏನಿದೆಯೋ ಅದಕ್ಕನುಗುಣವಾಗಿ, ಭಗವಂತನ ಸಂಕಲ್ಪದಂತೆ, ನಮಗೆ ಎಷ್ಟು ದಕ್ಕಬೇಕೋ ಅಷ್ಟೇ ದಕ್ಕುತ್ತದೆ. ಹೀಗೆ ಎಷ್ಟು ಸುಖ-ದುಃಖದ ಯೋಗ ನಮ್ಮ ಪಾಲಿಗೆ ಬರೆದಿದೆಯೋ, ಅಷ್ಟೇ ನಮಗೆ ಸಿಗುತ್ತದೆ. ಹೀಗಿರುವಾಗ ‘ಕಾಮವೊಂದೇ ಪುರುಷಾರ್ಥಾ, ಉಳಿದುದನ್ನು ನಾನು ನಂಬುವುದಿಲ್ಲ’ ಎಂದು ಹೇಳುವುದು ಕೇವಲ  ಹುಚ್ಚುತನ.

ಮನಸ್ಸಿನ ಮೇಲೆ ನಿಯಂತ್ರಣ ಇಲ್ಲದಿರುವುದೇ ಮನುಷ್ಯ ಕಾಮದ ಬಗ್ಗೆ ಹುಚ್ಚುಕಟ್ಟಲು ಮುಖ್ಯ ಕಾರಣ. ಯಾರು ಯೋಗ ಬಲದಿಂದ(ಚಿತ್ತವೃತ್ತಿ ನಿರೋಧದಿಂದ) ಎಲ್ಲಾ ಯೋಗಗಳ ಒಡೆಯನಾದ ಭಗವಂತನನ್ನು ನಂಬಿ ಬದುಕುತ್ತಾನೋ, ಆತನಿಗೆ ‘ಕಾಮ’ ಕ್ಷುಲ್ಲಕ ಎನಿಸುತ್ತದೆ. ಆದ್ದರಿಂದ ಅಂತಹ ಕಾಮದ ಬೆನ್ನು ಹತ್ತುವುದು ಎಷ್ಟು ವ್ಯರ್ಥ ಎನ್ನುವ ವಿಷಯವನ್ನು ಆತ ತಿಳಿದಿರುತ್ತಾನೆ.

ಜೀವನದಲ್ಲಿ ‘ಕಾಮ’ ಬೇಕು. ಆದರೆ ಮನುಷ್ಯ ಕಾಮದ ದಾಸನಾಗಬಾರದು. ಒಂದು ಕ್ಷಣದ ಆನಂದ ಪಡೆಯಲು ಹಾತೊರೆದು ಇಡೀ ಜೀವನವನ್ನೇ ಹಾಳು ಮಾಡಿಕೊಳ್ಳುವವರಿದ್ದಾರೆ. ಇಷ್ಟೇ ಅಲ್ಲ, ದುಃಖ ಪಡುವುದೇ ಆನಂದ ಎನ್ನುವ ಭ್ರಮೆಯಲ್ಲಿ ಬದುಕುವ ಜನರೂ ಇದ್ದಾರೆ. ಈ ಎಲ್ಲಾ ಹಿನ್ನೆಲೆಯಲ್ಲಿ ನಾವು ಬದುಕನ್ನು ನೋಡಿದರೆ: ಯಾವುದನ್ನು ನಾವು ಸುಖ ಎಂದುಕೊಂಡಿದ್ದೆವೋ ಅದು ಬಹಳ ದುರ್ಬಲವಾದ ವಿಷಯ ಎನ್ನುವುದು ತಿಳಿಯುತ್ತದೆ. ಈ ಎಚ್ಚರದಿಂದ ಬದುಕನ್ನು ನೋಡಿದಾಗ  ಎಲ್ಲಕ್ಕಿಂತ ಆಚೆಗಿನ ಸತ್ಯದ ಅರಿವಾಗುತ್ತದೆ. ಆಗ ಸಿಗುವ ಆನಂದ/ಸುಖ ಅಪರಂಪಾರವಾದುದು.

 

 ತತಃ ಕತಿಪಯೈರ್ಮಾಸೈ ರ್ವೃಷ್ಣಿಭೋಜಾನ್ಧಕಾದಯಃ ।

 ಯಯುಃ ಪ್ರಭಾಸಂ ಸಂಹೃಷ್ಟಾ ರಥೈರ್ದೇವವಿಮೋಹಿತಾಃ ॥೨೫॥

 

 ತತ್ರ ಸ್ನಾತ್ವಾ ಪಿತೄನ್ ದೇವಾನ್ ಋಷೀಂಶ್ಚೈವ ತದಮ್ಭಸಾ ।

 ತರ್ಪಯಿತ್ವಾSಥ  ವಿಪ್ರೇಭ್ಯೋ ಗಾವೋ ಬಹುಗುಣಾ ದದುಃ ॥೨೬॥

 

 ಹಿರಣ್ಯಂ ರಜತಂ ಶಯ್ಯಾಂ ವಾಸಾಂಸ್ಯಜಿನಕಮ್ಬಳಾನ್ ।

 ಹಯಾನ್ ರಥಾನಿಭಾನ್ ಕನ್ಯಾಂ ಧರಾಂ ವೃತ್ತಿಕರೀಮಪಿ ॥೨೭॥

 

 ಅನ್ನಂ ಚೋರುರಸಂ ತೇಭ್ಯೋ ದತ್ತ್ವಾ ಭಗವದರ್ಪಣಮ್ ।

 ಗೋವಿಪ್ರಾರ್ಥಾಸವಃ ಶೂರಾಃ ಪ್ರಣೇಮುರ್ಭುವಿ ಮೂರ್ಧಭಿಃ ॥೨೮॥

 

ಮುಂದುವರಿದು ಉದ್ಧವ ಹೇಳುತ್ತಾನೆ: “ಕೆಲವು ತಿಂಗಳುಗಳ ಬಳಿಕ ಶ್ರೀಕೃಷ್ಣ ಯಾದವರೆಲ್ಲರಲ್ಲಿ  ‘ನಾವು ಪ್ರಭಾಸಕ್ಕೆ ಹೋಗಿ, ಅಲ್ಲಿ ಸಮುದ್ರ ಸ್ನಾನ ಮಾಡಿ ದಾನ-ಧರ್ಮ ಮಾಡೋಣ’ ಎಂದು ಹೇಳುತ್ತಾನೆ. ಆಗ ಎಲ್ಲಾ ಯಾದವರು ಕೃಷ್ಣನ ಮಾತನ್ನು ಒಪ್ಪಿ ಸಂತೋಷವಾಗಿ ಪ್ರಭಾಸಕ್ಕೆ ಹೋಗುತ್ತಾರೆ. ಪ್ರಭಾಸ ಕ್ಷೇತ್ರದಲ್ಲಿ ಸ್ನಾನ ಮುಗಿಸಿದ ಆ ಎಲ್ಲಾ ಶೂರರು ಪಿತೃಗಳಿಗೂ, ದೇವತೆಗಳಿಗೂ, ಋಷಿಗಳಿಗೂ ತರ್ಪಣಕೊಟ್ಟು, ಅನೇಕ ವಿಧದ ದಾನ-ಧರ್ಮಾದಿಗಳನ್ನು ಮಾಡುತ್ತಾರೆ”.

ಉದ್ಧವ ಇಪ್ಪತ್ತಾರು ವರ್ಷಗಳ ನಂತರ ನಡೆಯಲಿರುವ ಯಾದವರ ಪ್ರಭಾಸ ಯಾತ್ರೆಯ ವಿವರವನ್ನು ಭೂತಕಾಲದಲ್ಲಿ, ಈಗಾಗಲೇ ಘಟನೆ ನೆಡೆದು ಹೋದಂತೆ ವಿವರಿಸಿರುವುದನ್ನು ನಾವಿಲ್ಲಿ ಕಾಣುತ್ತೇವೆ. ಇದು ಈಗಾಗಲೇ ನಾವು ಮೊದಲ ಸ್ಕಂಧದಲ್ಲಿ(೧-೧-೬) ವಿವರಿಸಿದ ಪುರಾಣ ನಿರೂಪಣೆಯ ಏಳು ವಿಧದಲ್ಲಿ  ಒಂದಾದ ‘ವ್ಯತ್ಯಾಸ’ ಶೈಲಿಯ ನಿರೂಪಣೆ.  ಏಕೆ ಈ ರೀತಿ ವಿವರಿಸಿದ್ದಾರೆ ಎನ್ನುವುದನ್ನು ಆಚಾರ್ಯ ಮಧ್ವರು ತಮ್ಮ ತಾತ್ಪರ್ಯ ನಿರ್ಣಯದಲ್ಲಿ ಪ್ರಮಾಣ ಸಹಿತ ಸುಂದರವಾಗಿ ವಿವರಿಸಿದ್ದಾರೆ. ಏಷ್ಯಚ್ಚ[4] ನಿಶ್ಚಿತಂ ಯತ್ ತದತೀತತ್ವೇನ ಭಣ್ಯತೇ ಚಕ್ರವತ್ ಪರಿವೃತ್ತೇರ್ವಾ ದುಷ್ಟಾನಾಂ ಮೋಹನಾಯ ಚ[5] ಇತಿ ನಾರದೀಯೇ[6] ನಾರದೀಯ ಸಮ್ಮಿತದಲ್ಲಿ ಹೇಳಿರುವಂತೆ: ಈ ರೀತಿಯ ಪುರಾಣ ಪ್ರಸ್ತುತಿಗೆ ಮುಖ್ಯವಾಗಿ ಮೂರು ಕಾರಣಗಳಿವೆ. (೧). ಮುಂದೆ ಯಾವುದು ಖಚಿತವಾಗಿ ನಡೆಯುತ್ತದೆಯೋ ಅದನ್ನು ನಡೆದು ಹೋದ ಘಟನೆಯಂತೆ ಹೇಳುತ್ತಾರೆ  (೨). ಈ ಎಲ್ಲಾ ವಿದ್ಯಮಾನಗಳೂ ಪ್ರತಿಕಲ್ಪದಲ್ಲಿ  ನಡೆಯುವುದರಿಂದ ಹಿಂದಿನ ಕಲ್ಪದ ಘಟನೆಯ ದೃಷ್ಟಾಂತವಾಗಿ ಹೇಳುತ್ತಾರೆ ಹಾಗು (೩). ದುರ್ಜನರಿಗೆ ಪುರಾಣವನ್ನು ಅರ್ಥ ಮಾಡಿಕೊಳ್ಳುವುದರಲ್ಲಿ ಗೊಂದಲ ಉಂಟಾಗಲಿ ಎಂದು ಈ ರೀತಿ  ಪ್ರಸ್ತುತಿ ಮಾಡಲಾಗುತ್ತದೆ.   

 

॥ ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ತೃತೀಯಸ್ಕಂಧೇ ತೃತೀಯೋSಧ್ಯಾಯಃ ॥

ಭಾಗವತ ಮಹಾಪುರಾಣದ ಮೂರನೇ  ಸ್ಕಂಧದ ಮೂರನೇ ಅಧ್ಯಾಯ ಮುಗಿಯಿತು

 

*********

 




[1] “ಕಾಮಾನ್ “ ಎಂದು ಪ್ರಚಲಿತ ಪಾಠ

[2] “ತಸ್ಯೈವಮ್” – ಪಾಠಾನ್ತರ

[3] “ವಿರಾಗಿವತ್” – ಪ್ರಚಲಿತ ಪಾಠ

[4] “ಏಷ್ಯಂ” – ಎಂದು ಕೆಲವರು

[5]ಮೋಹನಾಯ ವಾ” ಎಂದು ಕೆಲವರು

[6] “ಇತಿ ಸ್ಕಾನ್ದೇ” – ಪ್ರಚಲಿತ ಪಾಠ