Monday, March 17, 2025

Shrimad BhAgavata in Kannada -Skandha-03-Ch-09_02

ತಸ್ಯಾಂ ಸ ಚಾಮ್ಭೋರುಹಕರ್ಣಿಕಾಯಾಮವಸ್ಥಿತೋ ಲೋಕಮಪಶ್ಯಮಾನಃ ।

ಪರಿಕ್ರಮನ್ ವ್ಯೋಮ್ನಿ ವಿವೃತ್ತನೇತ್ರಶ್ಚತ್ವಾರಿ ಭೇಜೇSನುದಿಶಂ ಮುಖಾನಿ ॥ ೧೬॥


ತಸ್ಮಾದ್ ಯುಗಾನ್ತಶ್ವಸನಾವಘೂರ್ಣಮಹೋರ್ಮಿಚಕ್ರಾತ್ ಸಲಿಲಾದ್ ವಿರೂಢಮ್  ।

ಅಪಾಶ್ರಿತಃ ಕಞ್ಜಮು ಲೋಕತನ್ತ್ರಂ ನಾತ್ಮಾನಮದ್ಧಾSವಿದದಾದಿದೇವಃ ॥೧೭ ॥


ಬ್ರಹ್ಮಾಂಡವೆಂಬ ಕಮಲದ ಮೇಲೆ ಕುಳಿತ ಚತುರ್ಮುಖ ಎಲ್ಲಾ ಕಡೆ ನೋಡಿದ ಮತ್ತು ಆಗ ಏಕಕಾಲದಲ್ಲಿ ಎಲ್ಲಾ ಕಡೆ ನೋಡಬಲ್ಲ ನಾಲ್ಕು ಮುಖವನ್ನು ಪಡೆದ. ಆಗ ಜೋರಾಗಿ ಗಾಳಿ ಬೀಸಿ(ಕಂಪನದಿಂದ) ಪದ್ಮ ಅಲುಗಾಡಿತು ಮತ್ತು ಲೋಕವೆಂಬ ತಾವರೆಯ ಮೇಲೆ ಕುಳಿತ ಚತುರ್ಮುಖ ತಾನ್ಯಾರು ಎಂದು ತಿಳಿಯದೇ ಚಿಂತನೆಯನ್ನಾರಮ್ಭಿಸಿದ.


ಕ ಏಷ ಯೋSಸಾವಹಮಬ್ಜಪೃಷ್ಠ ಏತತ್ ಕುತೋ ವಾSಬ್ಜಮನನ್ಯದಪ್ಸು । 

 ಅಸ್ತಿ ಹ್ಯಧಸ್ತಾದಿಹ ಕಿಞ್ಚಚನೈತದಧಿಷ್ಠಿತಂ ಯತ್ರ ಸತಾ ನು ಭಾವ್ಯಮ್ ॥೧೮ ॥


ಕಮಲದ ಮೇಲಿರುವ ನಾನು ಹುಟ್ಟಿರುವುದು ಹೇಗೆ? ಏನಿದು ಕಮಲ? ಇದು ಎಲ್ಲಿಂದ ಬಂತು? ಇದರಲ್ಲಿ ನಾನು ಹೇಗೆ ಬಂದೆ?, ಇತ್ಯಾದಿ ಪ್ರಶ್ನೆಗಳಿಗೆ ಉತ್ತರ ಕಾಣದ ಬ್ರಹ್ಮ ಒಂದು ತೀರ್ಮಾನಕ್ಕೆ ಬಂದ. ಈ ಅಘಾದವಾದ ನೀರು, ಅದರಲ್ಲಿ ಕಮಲ, ಇದೆಕ್ಕೆಲ್ಲವೂ ಒಂದು ಅಧಿಷ್ಠಾನ ಇರಲೇಬೇಕು ಮತ್ತು ಅದು ಭಗವಂತನೇ ಇರಬೇಕು ಎನ್ನುವ ತೀರ್ಮಾನ ಅವನದ್ದಾಗಿತ್ತು. ಹೀಗೆ ತೀರ್ಮಾನಿಸಿದ ಬ್ರಹ್ಮ ಪರಮಾತ್ಮನನ್ನು ಕಾಣಲು ನಾಭೀಕಮಲದಲ್ಲಿ ಕೆಳಕ್ಕೆ ಹೋದ. ಆದರೆ ಅಲ್ಲೂ ಅವನಿಗೆ ಏನೂ ಕಾಣಲಿಲ್ಲ. ಪುನಃ ಮೇಲೆ ಬಂದು, ಕಮಲದಲ್ಲಿ ಕುಳಿತು ತನ್ನ ಪೂರ್ವಜನ್ಮದ ಸಂಸ್ಕಾರದಿಂದ ಅಂತರಂಗದಲ್ಲಿ ಭಗವಂತನ ಧ್ಯಾನವನ್ನು ಮಾಡಲಾರಂಭಿಸಿದ. ಚತುರ್ಮುಖ ದೇವತೆಗಳ ೧೦೦ ವರ್ಷಗಳ ಕಾಲ ಅಂದರೆ ಮಾನವರ ೩೬,೦೦೦ ವರ್ಷಗಳ ಕಾಲ ಭಗವಂತನ ಧ್ಯಾನ ಮಾಡಿದ. ಈ ಸಮಯ ಬ್ರಹ್ಮನಿಗೆ ಕೇವಲ ಒಂದು ಕ್ಷಣವಷ್ಟೇ. ಆಗ ಶೇಷಶಾಯಿ ಭಗವಂತನ ದರ್ಶನ ಬ್ರಹ್ಮದೇವರಿಗೆ ಅವರ ಹೃದಯದಲ್ಲಾಯಿತು.

ಇಲ್ಲಿ ಪೂರ್ವ ಜನ್ಮದ ಸಂಸ್ಕಾರದಿಂದ ಚತುರ್ಮುಖ ಶ್ರೀಹರಿಯೇ ನನ್ನ ಜನಕ ಎನ್ನುವುದನ್ನು ಊಹಿಸಿದ್ದಾನೆ. 

ಸತಾ ಬ್ರಹ್ಮಣಾ-

“ಸ ಬ್ರಹ್ಮಾSಚಿನ್ತಯತ್ ಕುತೋ ನು ಪದ್ಮಂ ಬ್ರಹ್ಮಣಃ ಸ್ಯಾದಿತಿ”  ಇತಿ ಸೌಕರಾಯಣಶ್ರುತಿಃ  ॥ * ॥

ಪದ್ಮ ಯಾರಿಂದ ಜನಿಸಿತು ಎಂದು ಆಲೋಚಿಸಿದ ಚತುರ್ಮುಖ, ಬಳಿಕ ಅದು ಭಗವಂತನಿಂದಲೇ ಜನಿಸಿರುವುದು ಎನ್ನುವ ತೀರ್ಮಾನಕ್ಕೆ ಬಂದ. ಆಗಷ್ಟೇ ಹುಟ್ಟಿದ ಮಗು ಪೂರ್ವಜನ್ಮದ ಸಂಸ್ಕಾರದಿಂದ ಹೇಗೆ ಮೊಲೆಹಾಲು ಕುಡಿಯಲು ತಿಳಿದಿರುತ್ತದೋ ಹಾಗೇ, ಇಲ್ಲಿ ಚತುರ್ಮುಖ ‘ಭಗವಂತನೇ ತನ್ನ ಜನಕ’ ಎನ್ನುವುದನ್ನು ತಾನೇ ತಿಳಿದ. ಆಗ ಅವನಿಗೆ ಭಗವಂತನ ದರ್ಶನವಾಯಿತು.

ಚತುರ್ಮುಖ ಕಂಡ ಪರಮಾತ್ಮನ ವರ್ಣನೆ


ಮೃಣಾಳಗೌರಾಯತಶೇಷಭೋಗಪರ್ಯಙ್ಕ ಏಕಂ ಪುರುಷಂ ಶಯಾನಮ್ ।

ಫಣಾಸಹಸ್ರಾಯುತಮೂರ್ಧರತ್ನದ್ಯುಭಿರ್ಹತಧ್ವಾನ್ತಯುಗಾನ್ತತೋಯೇ ॥ ೨೩ ॥


ಪ್ರೇಕ್ಷಂ ಕ್ಷಿಪನ್ತಂ ಹರಿತೋಪಲಾದ್ರೋಃ ಸನ್ಧ್ಯಾಭ್ರನೀವೇರುರುರುಗ್ಮಮೂರ್ಧ್ನಃ ।

ರತ್ನೋದಧೇರೋಷಧಿಸೌಮನಸ್ಯವನಸ್ರಜೋ ವೇಣುಭುಜಾಙ್ಘ್ರಿಪಾಙ್ಘ್ರೇಃ ॥ ೨೪ ॥


ಆಯಾಮತೋ ವಿಸ್ತರತಃ ಸಮಾನದೇಹೇನ ಲೋಕತ್ರಯಸಙ್ಗ್ರಹೇಣ ।

ವಿಚಿತ್ರದಿವ್ಯಾಭರಣಾಂಶುಕಾನಾಂ ಕೃತಶ್ರಿಯೋಪಾಶ್ರಿತದಿವ್ಯವೇಷಮ್ ॥ ೨೫ ॥


ಪುಂಸಾಂ ಸ್ವಕಾಮಾಯ ವಿವಿಕ್ತಮಾರ್ಗೈರಭ್ಯರ್ಚತಾಂ ಕಾಮದುಘಾಙ್ಘ್ರಿಪದ್ಮಮ್

ಪ್ರದರ್ಶಯನ್ತಂ ಕೃಪಯಾ ನಖೇಂದುಮಯೂಖಭಿನ್ನಾಙ್ಗುಲಿಚಾರುಪತ್ರಮ್ ॥ ೨೬ ॥


ಮುಖೇನ ಲೋಕಾರ್ತಿಹರಸ್ಮಿತೇನ ಪರಿಸ್ಫುರತ್ಕುಣ್ಡಲಮಣ್ಡಿತೇನ ।

ಶೋಣಾಯಿತೇನಾಧರಬಿಮ್ಬಭಾಸಾ ಪ್ರತ್ಯರ್ಹಯನ್ತಂ ಸುನಸೇನ ಸುಭ್ರ್ವಾ ॥ ೨೭ ॥


ಕದಮ್ಬಕಿಞ್ಜಲ್ಕಪಿಶಙ್ಗವಾಸಸಾ ಸ್ವಲಙ್ಕೃತಂ ಮೇಖಲಯಾ ನಿತಮ್ಬೇ ।

 ಹಾರೇಣ ಚಾನನ್ತಧನೇನ ವತ್ಸ ಶ್ರೀವತ್ಸವಕ್ಷಃಸ್ಥಲವಲ್ಲಭೇನ ॥ ೨೮ ॥


 ಪರಾರ್ಧ್ಯಕೇಯೂರಮಣಿಪ್ರವೇಕಪರ್ಯಸ್ತದೋರ್ದಣ್ಡಸಹಸ್ರಶಾಖಮ್ ।

 ಅವ್ಯಕ್ತಮೂಲಂ ಭುವನಾಙ್ಘ್ರಿಪೇನ್ದ್ರಮಹೀನ್ದ್ರಭೋಗೈರಧಿವೀತವಲ್ಕಮ್  ॥ ೨೯ ॥


 ಚರಾಚರೌಕೋ ಭಗವನ್ಮಹೀಧ್ರಮಹೀನ್ದ್ರಬನ್ಧುಂ ಸಲಿಲೋಪಗೂಢಮ್ ।

 ಕಿರೀಟಸಾಹಸ್ರಹಿರಣ್ಯಶೃಙ್ಗಮಾವಿರ್ಭವತ್ಕೌಸ್ತುಭರತ್ನಗರ್ಭಮ್ ॥ ೩೦ ॥


 ನಿವೀತಮಾಮ್ನಾಯಮಧುವ್ರತಾಶ್ರಯ  ಸ್ವಕೀರ್ತಿಮಯ್ಯಾ ವನಮಾಲಯಾ ಹರಿಮ್ ।

 ಸೂರ್ಯೇನ್ದುವಾಯ್ವಗ್ನ್ಯಗಮತ್ತ್ರಿಧಾಮಭಿಃ  ಪರಿಕ್ರಮತ್ಪ್ರಾಧನಿಕೈರ್ದುರಾಸದಮ್ ॥ ೩೧ ॥


 ತರ್ಹ್ಯೇವ ತನ್ನಾಭಿಸರಃಸರೋಜ ಆತ್ಮಾನಮಮ್ಭಃ ಶ್ವಸನಂ ವಿಯಚ್ಚ ।

 ದದರ್ಶ ದೇವೋ ಜಗತಾಂ ವಿಧಾತಾ ನಾತಃ ಪರಂ ಲೋಕವಿಸರ್ಗದೃಷ್ಟಿಃ ॥ ೩೨ ॥


 ಸ್ವಕರ್ಮಬೀಜಂ  ರಜಸೋಪರಕ್ತಃ ಪ್ರಜಾಃ ಸಿಸೃಕ್ಷನ್ನಿಯದೇವ ದೃಷ್ಟ್ವಾ ।

 ಅಸ್ತೌದ್ ವಿಸರ್ಗಾಭಿಮುಖಸ್ತಮೀಶ  ಮವ್ಯಕ್ತವರ್ತ್ಮನ್ಯಭಿವೇಶಿತಾತ್ಮಾ ॥ ೩೩ ॥


ತಾವರೆಯಂತಹ, ಬಯಸಿದ್ದನ್ನು ಕೊಡುವ ಪಾದಕಮಲ, ಅಲ್ಲಿ ಬೆರಳುಗಳೇ ದಳಗಳು. ಉಗುರು ಎನ್ನುವ ಚಂದ್ರನಿಂದ ಹೊರಟ ಬೆಳದಿಂಗಳ ಕಿರಣಗಳಿಂದ ಅಂಗುಲಿಗಳು  ವಿಲಕ್ಷಣವಾಗಿ ಕಾಣುತ್ತಿವೆ. [ಇಲ್ಲಿ ಭಿನ್ನ ಎಂದರೆ ವಿಲಕ್ಷಣ. ಭಗವಂತನ ಅಂಗ ಬೇರೆ, ಭಗವಂತ ಬೇರೆ ಅಲ್ಲ. ಭಿನ್ನಮನ್ಯೇಭ್ಯೋ ವಿಲಕ್ಷಣಮ್ ॥*॥] ಹೀಗೆ ಬೆಳ್ಳಗಿರುವ ಶೇಷನ ಮೈಯೆಂಬ ಮಂಚದಮೇಲೆ ಕುಳಿತ ಪರಮಾತ್ಮನ ಪಾದಪದ್ಮವೆಂಬ ಕಲ್ಪವೃಕ್ಷವನ್ನು ಚತುರ್ಮುಖ ಕಂಡ. ಶೇಷನ ಹೆಡೆಯನ್ನಲಂಕರಿಸಿದ ರತ್ನಗಳಿಂದ ಹೊರಹೊಮ್ಮುವ ಕಿರಣಗಳು ಕತ್ತಲನ್ನು ದೂರಮಾಡುವಾಗ ಚತುರ್ಮುಖನಿಗೆ ಭಗವಂತ ಕಂಡ. ಭಗವಂತ ನೀಲಿ ಬಣ್ಣದ ಬೆಟ್ಟದಂತೆ ಕಾಣುತ್ತಿದ್ದ. ಅವನು ಪೀತಾಮ್ಭಾರವನ್ನು ಧರಿಸಿದ್ದು, ಕಿರೀಟವನ್ನು ಧರಿಸಿದ್ದ. ಕೊರಳಲ್ಲಿ ವನಮಾಲೆಯನ್ನು ಧರಿಸಿದ್ದ.  ಅವನು ಕೈ ಅಗಲಿಸಿದರೆ ಎಷ್ಟು ಅಗಲವಿದ್ದನೋ ಅಷ್ಟೇ ಅವನ ಎತ್ತರವಿತ್ತು. ಎಲ್ಲರೂ ಬೇರೆಬೇರೆ ರೀತಿಯಿಂದ ಅವನನ್ನು ಪೂಜಿಸುತ್ತಿದ್ದರು. ಶ್ರೀಲಕ್ಷ್ಮಿ ಅವನನ್ನು ಆಶ್ರಯಿಸಿಕೊಂಡಿದ್ದಳು. [ಇಲ್ಲಿ ಬಟ್ಟೆ , ಕಿರೀಟ.. ಅರಳಿದ ಹೂ, ಇತ್ಯಾದಿ ಎಲ್ಲವೂ ಅಲೌಕಿಕ ಎಂದು ತಿಳಿಯಬೇಕು.]

ತೋಳ್ಬಂಧಿ, ಶ್ರೇಷ್ಠವಾದ ಬಳೆಗಳಿಂದ ಅಲಂಕರಿಸಿದ ಸಹಸ್ರಾರು ತೊಳುಗಳು. ಕೊರಳಲ್ಲಿ ಧರಿಸಿದ್ದ ವನಮಾಲೆ ತುಂಬೆಲ್ಲಾ ದುಂಬಿಗಳು, (ಪ್ರಳಯಕಾಲದಲ್ಲಿ ವೇದಮಾತೆ ಶ್ರೀಲಕ್ಷ್ಮಿ ಭಗವಂತನನ್ನು ಸ್ತೋತ್ರಮಾಡುತ್ತಿರುವಂತೆ, ಮೋಕ್ಷದಲ್ಲಿರುವ ಮುಕ್ತಜೀವರು ಭಗವಂತನನ್ನು ಸದಾ ಭೃಂಗರೂಪದಲ್ಲಿ ಸ್ತೋತ್ರಮಾಡುತ್ತಿರುತ್ತಾರೆ.) ಹೀಗೆ ಶ್ವೇತದ್ವೀಪ, ಅನಂತಾಸನ ಮತ್ತು ವೈಕುಂಠಗಳೆಂಬ ಮೂರು ಮನೆಯುಳ್ಳ,  ಎಂದೂ ಬಿಟ್ಟಿರದ ಮುಕ್ತರೊಂದಿಗಿರುವ ಭಗವಂತನನ್ನು ಚತುರ್ಮುಖ ಪಾದದಿಂದ ತಲೆಯತನಕ ನೋಡಿದ್ದಾನೆ. ಅಲ್ಲಿ ಹಿಂದಿನ ಕಲ್ಪದ(ಈಗಾಗಲೇ ಮೋಕ್ಷವನ್ನು ಸೇರಿರುವ) ಸೂರ್ಯನಿದ್ದ, ಚಂದ್ರ, ವಾಯು, ಪ್ರಾಣಾಗ್ನಿ, ಎಲ್ಲರೂ ಭಗವಂತನ ಪದಾತಿಗಳಾಗಿದ್ದರು.


 ಮೈತ್ರೇಯರು ವಿದುರನನ್ನು ಕುರಿತು ಹೇಳುತ್ತಾರೆ: ಧ್ಯಾನ ಮಾಡುವವರ ಸಮಸ್ತ ಬೇಗೆಗಳನ್ನು ಪರಿಹರಿಸುವ ಕೆಂದುಟಿಯ ಮುಗುಳ್ನಗೆ ಭಗವಂತನ ಮುಖದಲ್ಲಿತ್ತು. ಕರ್ಣಕುಂಡಲದಿಂದ ಅಲಂಕೃತನಾದ ಭಗವಂತನ ತುಟಿ, ನಾಸಿಕ ಹಾಗು ಹುಬ್ಬು ಸೊಗಸಿನಿಂದ ಕಣ್ಣು ಕೋರೈಸುವಂತಿತ್ತು. ಭಗವಂತನ ನಡುವು ಕದಂಬಪುಷ್ಪದ ಕೇಸರವನ್ನು ಹೋಲುವ ಪೀತಾಂಬರದಿಂದ ಆವೃತವಾಗಿತ್ತು. ಅವನ ವಕ್ಷಸ್ಥಲ ಶ್ರೀವತ್ಸಚಿಹ್ನೆ ಮತ್ತು ಕಂಠೀಹಾರದಿಂದ ಅಲಂಕೃತವಾಗಿತ್ತು.  

ಹೇಗೆ ಚಂದನ ವೃಕ್ಷವು ರೆಂಬೆಗಳಿಂದ, ಸುಗಂಧ ಪುಷ್ಪಗಳಿಂದ ಅಲಂಕೃತವಾಗಿರುತ್ತದೋ, ಹಾಗೇ ತೋಳ್ಬಂಧಿಗಳುಳ್ಳ ಸಾವಿರಾರು ತೋಳುಗಳಿಂದ ಕೂಡಿರುವ ಭಗವಂತನ ಶರೀರ ಅಲೌಕಿಕವಾದ ಮುತ್ತು-ರತ್ನಗಳಿಂದ ಅಲಂಕೃತವಾಗಿ ಕಂಗೊಳಿಸುತ್ತಿತ್ತು. ಚಂದನ ವೃಕ್ಷವು ಸರ್ಪಗಳಿಂದ ಆವೃತವಾಗಿರುವಂತೆಯೇ, ಭಗವಂತನ ಶರೀರ ಶೇಷನ ಹೆಡೆಗಳಿಂದ ಆಚ್ಛಾದಿತವಾಗಿತ್ತು. ಇಂತಹ ಭಗವಂತನು ಅವ್ಯಕ್ತಮೂಲ. ಅಂದರೆ ತ್ರಿಗುಣಾತ್ಮಕವಾದ ಪ್ರಕೃತಿಯ ಉತ್ಪತ್ತಿ ಕಾರಣ. [“ತಸ್ಮಾದವ್ಯಕ್ತಮುತ್ಪನ್ನಂ ತ್ರಿಗುಣಂ ದ್ವಿಜಸತ್ತಮ” -ಮೊಕ್ಷಧರ್ಮಪರ್ವ. ಪರಮಾತ್ಮನಿಂದ ತ್ರಿಗುಣಾತ್ಮಕವಾದ ಪ್ರಕೃತಿ ಸೃಷ್ಟಿಯಾಯಿತು ಎಂದು ಮೋಕ್ಷಧರ್ಮಪರ್ವದಲ್ಲಿ ಹೇಳಿದ್ದಾರೆ]

ಮಹಾಪರ್ವತದಂತೆ ಸಮಸ್ತ ಚರಾಚರ ಜೀವರಿಗೆ ನೆಲೆಯಾಗಿರುವ, ಸಾವಿರಾರು ಹೆಡೆಗಳ, ಸಾವಿರಾರು ಕಿರೀಟವನ್ನು ಧರಿಸಿರುವ ಶೇಷನ ಗೆಳೆಯನಾದ, ಆಘಾದವಾದ ಪರಮಾಣು ಸಮುದ್ರದಲ್ಲಿ ಮಲಗಿರುವ   ಭಗವಂತನನ್ನು ನಾವು ಚಿಂತಿಸಬೇಕು.

ಈ ಹಿಂದೆ ಹೇಳಿದಂತೆ ತ್ರಿಧಾಮನಾದ ಭಗವಂತನನ್ನು ಬಿಟ್ಟು ಎಂದೂ ಬೇರೆಡೆ ಹೋಗದ, ಮುಕ್ತರಾಗಿರುವ ಸೂರ್ಯ, ಚಂದ್ರ, ಅಗ್ನಿ, ವಾಯು, ಮುಂತಾದವರು ಅಂಗರಕ್ಷಕರಂತೆ ಭಗವಂತನ ಸುತ್ತಲೂ ಸಂಚರಿಸುತ್ತಿರುತ್ತಾರೆ. ಸೂರ್ಯೇಂದುವಾಯ್ವಗ್ನ್ಯಾದಿಭಿಸ್ತ್ರಿದಾಧಾಮ್ನೋ ವಿಷ್ಟೋರಗಚ್ಛದ್ಭಿಃ ಪ್ರಾಧನಿಕೈಃ  ।   ಈ ವಿವರಣೆಗೆ ಪೂರಕವಾಗಿ ಆಚಾರ್ಯರು ಬ್ರಹ್ಮಾಂಡ ಪುರಾಣದ ಪ್ರಮಾಣವಚನ ನೀಡಿರುವುದನ್ನು ನಾವು ಕಾಣಬಹುದು-

“ಮುಕ್ತವಾಯ್ವಾದಿಭಿರ್ವಿಷ್ಣುಂ ವೃತಂ ಬ್ರಹ್ಮಾ ದದರ್ಶ ಹ । ತದನ್ಯಾಭಾವತೋ ನಾನ್ಯದತಸ್ತತ್ ಸ್ರಷ್ಟುಮೈಚ್ಛತ”

ಇತಿ ಬ್ರಹ್ಮಾ ಣ್ಡೇ  ॥ * ॥ ಚತುರ್ಮುಖ-ಬ್ರಹ್ಮ ಅಲ್ಲಿ  ಮುಕ್ತರಾದ ವಾಯು ಮುಂತಾದವರನ್ನು ಕಂಡು, ಅದೇ ಮಾದರಿಯಲ್ಲಿ, ತನಗೆ ತಿಳಿಯದ ದಾರಿಯಲ್ಲಿ (ಪ್ರಕೃತಿಮಾತೆ ಶ್ರೀಲಕ್ಷಿಯಲ್ಲಿ) ತನ್ನ ಮನಸ್ಸನ್ನು ಇಟ್ಟು, ಸೃಷ್ಟಿ ಮಾಡಲು ತೊಡಗಿದ. 



॥ ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ತೃತೀಯಸ್ಕಂಧೇ ನವಮೋSಧ್ಯಾಯಃ ॥


Sunday, March 2, 2025

Shrimad BhAgavata in Kannada -Skandha-03-Ch-09_01

 ನವಮೋSಧ್ಯಾಯಃ

ಚತುರ್ಮುಖ ಬ್ರಹ್ಮನ ಅವತರಣ

ಯಾವ ರೀತಿ ಈ ಪ್ರಪಂಚ ಸೃಷ್ಟಿಯಾಗಿ ವಿಸ್ತಾರಗೊಂಡಿತು? ಪ್ರಾಣಿಗಳು, ಮನುಷ್ಯರು, ದೇವತೆಗಳು, ವನಸ್ಪತಿಗಳು, ಹೀಗೆ ಇತ್ಯಾದಿ, ಎಲ್ಲವೂ ಹೇಗೆ ಸೃಷ್ಟಿಯಾಯಿತು ಎನ್ನುವುದು ಪ್ರಶ್ನೆ. 

ಕಾಲ ಅನಾದಿನಿತ್ಯ. ಆದರೆ ಕಾಲದ ವಿಭಾಗ ಅನಿತ್ಯ. ಪ್ರಳಯಕಾಲದಲ್ಲಿ ಕಾಲದ ವಿಭಾಗವಿರಲಿಲ್ಲ. ಆಗ ಸೂರ್ಯ-ಚಂದ್ರರಿರರಿಲ್ಲ, ಹಗಲು-ರಾತ್ರಿಗಳಿರಲಿಲ್ಲ. ಭಗವಂತನ ಸೃಷ್ಟಿಯಲ್ಲಿ ಕಾಲದ ವಿಭಾಗ ಸೃಷ್ಟಿಯಾಯಿತು. ಕಾಲದಲ್ಲಿ ಅತ್ಯಂತ ಸೂಕ್ಷ್ಮ ಕಾಲ ಎಂದರೆ ಅದು ಪರಮಾಣು ಕಾಲ ಮತ್ತು ಅತ್ತ್ಯಂತ ದೊಡ್ಡದು ಬ್ರಹ್ಮಕಲ್ಪ.

ಇಲ್ಲಿ ಮೈತ್ರೇಯರು ವಿದುರನ ಪ್ರಶ್ನೆಗೆ ಉತ್ತರಿಸುತ್ತಾ, ಸೃಷ್ಟಿಯ ರೋಚಕ ವಿಷಯಗಳನ್ನು ಹಂತಹಂತವಾಗಿ  ಹೇಳುವುದನ್ನು ಕಾಣಬಹುದು. ಅದಕ್ಕೆ ಪೀಠಿಕೆಯಾಗಿ ಮೊಟ್ಟಮೊದಲು ನಾವು ತಿಳಿಯಬೇಕಾಗಿರುವುದು ಚತುರ್ಮುಖ ಬ್ರಹ್ಮನ ಆಯುಸ್ಸು ಮುಗಿದಾಗ ನಡೆಯುವ ಮಹಾಪ್ರಳಯ. ಬ್ರಹ್ಮನಿಗೆ ನೂರು ವರ್ಷವಾದಾಗ ಇಡೀ ಬ್ರಹ್ಮಾಂಡ ನಾಶವಾಗುತ್ತದೆ. ನಂತರ ಅಷ್ಟೇ ಕಾಲ ಮಹಾಪ್ರಳಯಕಾಲವಾಗಿದ್ದು, ಮತ್ತೆ ಮರುಸೃಷ್ಟಿಯಾಗುತ್ತದೆ. ಆ ರೀತಿ ಸೃಷ್ಟಿಯಾಗುವಾಗ ಚತುರ್ಮುಖ ಬ್ರಹ್ಮ ಭಗವಂತನ ನಾಭೀಕಮಲದಲ್ಲಿ ಸೃಷ್ಟಿಸಲ್ಪಡುತ್ತಾನೆ. ಪ್ರತೀ ಬ್ರಹ್ಮಕಲ್ಪದಲ್ಲಿ ಭಗವಂತನ ನಾಭೀಕಮಲದಲ್ಲಿ ಚತುರ್ಮುಖ ಸೃಷ್ಟಿಯಾಗುವ ಕಾಲವನ್ನು ಪಾದ್ಮಕಲ್ಪ ಎನ್ನುತ್ತಾರೆ.

ಪ್ರಳಯದಲ್ಲಿ ಮೂರು ವಿಧ. ಮೊದಲನೆಯದು ಮನ್ವಂತರ ಪ್ರಳಯ. ಒಂದು ಮನ್ವಂತರ ಎಂದರೆ 30ಕೋಟಿ, 85 ಲಕ್ಷ, 70 ಸಾವಿರ ವರ್ಷಗಳು. ಇಂತಹ ಒಂದು ಮನ್ವಂತರ ಮುಗಿದಾಗ ಒಂದು ಪ್ರಳಯವಾಗುತ್ತದೆ. ಆಗ ಭೂಮಿಯ ಬಹುಭಾಗ ನಾಶವಾಗುತ್ತದೆ, ಆದರೆ ಇತರ ಲೋಕಗಳು ನಾಶವಾಗುವುದಿಲ್ಲ.  ಎರಡನೇಯದು ದಿನಕಲ್ಪ ಪ್ರಳಯ. ಚತುರ್ಮುಖನ ಒಂದು ಹಗಲು ಎಂದರೆ ನಮ್ಮ 432 ಕೋಟಿ ಮಾನವ ವರ್ಷಗಳು. ಈ 432 ಕೋಟಿ ವರ್ಷಗಳು ಮುಗಿದಮೇಲೆ ಮತ್ತೆ 432 ಕೋಟಿ ವರ್ಷಗಳು ಚತುರ್ಮುಖನ ಒಂದು ರಾತ್ರಿ. ಅದೇ ದಿನಪ್ರಳಯ. ಚತುರ್ಮುಖನ ಒಂದು ಹಗಲಿನಲ್ಲಿ (432 ಕೋಟಿ ಮಾನವ ವರ್ಷಗಳಲ್ಲಿ) 14 ಮನ್ವಂತರಗಳಿವೆ. ಒಂದೊಂದು ಮನ್ವಂತರದ ಕಾಲ 30 ಕೋಟಿ 45 ಲಕ್ಷ 70 ಸಾವಿರ ವರ್ಷಗಳು. ಹಾಗಾಗಿ 14 ಮನ್ವಂತರಗಳ ಒಟ್ಟು ಕಾಲ 431 ಕೋಟಿ 99 ಲಕ್ಷ 80 ಸಾವಿರ ವರ್ಷಗಳು. ಮನ್ವಂತರಗಳ ನಡುವಿನ ಒಟ್ಟು ಪ್ರಳಯಕಾಲ 20 ಸಾವಿರ ವರ್ಷಗಳು. ಈ ಇಪ್ಪತ್ತು ಸಾವಿರ ವರ್ಷಗಳಲ್ಲಿ ಮೊದಲನೇ ಮನ್ವಂತರದ ನಂತರ ನಡೆಯುವ ಪ್ರಳಯ 2000 ವರ್ಷಗಳ ಪ್ರಳಯ. ಉಳಿದ ಮನ್ವಂತರಗಳ ನಡುವಿನ ಪ್ರಳಯ 1500 ವರ್ಷಗಳ ಪ್ರಳಯ. ಕೊನೇಯ ಮನ್ವಂತರದ ನಂತರ ಮಹಾಪ್ರಳಯ. (2000+1500x12=20000 ಮಾನವ ವರ್ಷಗಳು). 

ನಾಕು ಯುಗಗಳು ಎಂದರೆ 43 ಲಕ್ಷ 20 ಸಾವಿರ ವರ್ಷಗಳು. ನಾಲ್ಕು ಯುಗಗಳ 1000 ಆವೃತ್ತಿ ಬ್ರಹ್ಮನ ಒಂದು ಹಗಲು(ನಮ್ಮ 432 ಕೋಟಿ ವರ್ಷಗಳು. ಇದು ಚತುರ್ಮುಖನ 12 ಗಂಟೆ). ಚತುರ್ಮುಖನ ಒಂದು ದಿನ(24 ಗಂಟೆ) ಎಂದರೆ 864 ಕೋಟಿ ಮಾನವ ವರ್ಷಗಳು. ಚತುರ್ಮುಖನ ಆಯಸ್ಸು(100 ವರ್ಷ) ಎಂದರೆ ನಮ್ಮ 31,104 ಸಾವಿರ ಕೋಟಿ ಮಾನವ ವರ್ಷಗಳು. ಆನಂತರ ಅಷ್ಟೇ ಕಾಲ ಮಹಾಪ್ರಳಯ. ಇವೆಲ್ಲವೂ ಭಗವಂತನಿಗೆ ಒಂದು ಕ್ಷಣವೂ ಅಲ್ಲ!

ಈ ಮಹಾಪ್ರಳಯದ ನಂತರ ನಡೆಯುವ ಸೃಷ್ಟಿ ಚತುರ್ಮುಖನ ಸೃಷ್ಟಿಯೊಂದಿಗೆ ಆರಂಭವಾಗುತ್ತದೆ. ಅದೇ ಪಾದ್ಮಕಲ್ಪ. ಪ್ರಳಯಕಾಲದಲ್ಲಿ ಎಲ್ಲವೂ ಭಗವಂತನ ಉದರದೊಳಗಿದ್ದು, ಅದು ಪಾದ್ಮಕಲ್ಪದಲ್ಲಿ ಬ್ರಹ್ಮಾಂಡಕಮಲ ರೂಪದಲ್ಲಿ ಹೊರಗೆ ಚಿಮ್ಮಿ ಅದರಲ್ಲಿ ಚತುರ್ಮುಖ ಹೊರ ಬರುತ್ತಾನೆ.  ಭಗವಂತನ ಉದರದಿಂದ ಪದ್ಮ ಹೊರಬರುವುದು, ಅದರಲ್ಲಿ ಚತುರ್ಮುಖ ಉತ್ಪನ್ನನಾಗುವುದು, ಇದರ ಪರಿಕಲ್ಪನೆಯ ಸ್ಪಷ್ಟಚಿತ್ರಣದ ಅಪೂರ್ವ ಸಂಗತಿಯನ್ನು ಮೈತ್ರೇಯರು ವಿದುರನ ಮುಖೇನ ಲೋಕಕ್ಕೆ ನೀಡಿದ್ದಾರೆ.      


ಸೋSಹಂ ನೃಣಾಂ ಕ್ಷುಲ್ಲಸುಖಾಯ ದುಃಖಂ ಮಹದ್ ಗತಾನಾಂ ವಿರಮಾಯ ತುಭ್ಯಮ್ । 

ಪ್ರವರ್ತಯೇ ಭಾಗವತಂ ಪುರಾಣಂ ಯದಾಹ ಸಾಕ್ಷಾದ್ ಭಗವಾನ್ ಋಷಿಭ್ಯಃ ॥೦೨॥


ಮೈತ್ರೇಯರು ಹೇಳುತ್ತಾರೆ-

ನಾನು ನಿನಗೋಸ್ಕರ ಮನುಕುಲಕ್ಕೆ ಈ ಜ್ಞಾನವನ್ನು ನೀಡುತ್ತಿದ್ದೇನೆ. ಲೋಕದಲ್ಲಿನ ಮನುಜರ ಪಾಡು ನೋಡಿದರೆ ಅಯ್ಯೋಪಾಪ ಎನಿಸುತ್ತದೆ. ನಗಣ್ಯವಾದ ಒಂದು ಕ್ಷಣದ ಆನಂದದ ಬೆನ್ನುಹತ್ತಿ ಇಡೀ ಜೀವನವನ್ನೇ ಬಲಿಕೊಡುವ ಅಂತಹ ಜನರ ಏಳಿಗೆಗಾಗಿ, ಭಗವಂತನೇ ಹೇಳಿದ, ಭಗವಂತನ ಬಗೆಗೆ ಇದ್ದ ಅತ್ಯಂತ ಪ್ರಾಚೀನವಾದ ಅಧ್ಯಾತ್ಮವನ್ನು ನಾನು ನಿನಗೆ ಹೇಳುತ್ತೇನೆ.


ಆಸೀನಮುರ್ವ್ಯಾಂ ಭಗವಂತಮಾದ್ಯಂ ಸಙ್ಕರ್ಷಣಂ ದೇವಮಕುಣ್ಠಸತ್ವಮ್ ।

ವಿವಿತ್ಸವಸ್ತತ್ತ್ವಮತಃ ಪರಸ್ಯ ಕುಮಾರಮುಖ್ಯಾ ಮುನಯೋSನ್ವಪೃಚ್ಛನ್ ॥೦೩॥


ಸ್ವಮೇವ ಧಿಷ್ಣ್ಯಂ ಬಹು ಮಾನಯನ್ತಂ ಯಂ ವಾಸುದೇವಾಭಿಧಮಾಮನನ್ತಿ ।

ಪ್ರತ್ಯಗ್ಧೃತಾಕ್ಷಾಮ್ಬುಜಕೋಶಮೀಷದುನ್ಮೀಲಯನ್ತಂ ವಿಬುಧೋದಯಾಯ ॥೦೪॥


ಸೃಷ್ಟಿಯ ಆದಿಯಲ್ಲಿ ಚತುರ್ಮುಖ ಸನಕಾದಿಗಳನ್ನು(ಸನಕ, ಸನಂದನ, ಸನಾತನ ಮತ್ತು ಸನತ್ಕುಮಾರರನ್ನು ) ಸೃಷ್ಟಿಮಾಡಿದ. ಇವರಲ್ಲಿ ಸನತ್ಕುಮಾರ ಜ್ಞಾನದಲ್ಲಿ ಬಹಳ ಎತ್ತರದಲ್ಲಿದ್ದವನು. (ಈತ ಬೇರೆ ಯಾರೂ ಅಲ್ಲ. ದೇವರ ಮಗನಾಗಿ ಕಾಮ, ಬ್ರಹ್ಮನ ಮಗನಾಗಿ ಸನತ್ಕುಮಾರ, ರುದ್ರನ ಮಗನಾಗಿ ಷಣ್ಮುಖ. ಇವನೇ ಸ್ಕಂಧ, ಸುಬ್ರಮಣ್ಯ, ಪ್ರದ್ಯುಮ್ನ, ಸಾಂಬ, ಇತ್ಯಾದಿ.  ಶೇಷ ಮತ್ತು ಸ್ಕಂಧನಿಗೆ ಅವಿನಾಭಾವ ಸಂಬಂಧ. ಇವರಿಬ್ಬರನ್ನು  ಬಲರಾಮ-ಪ್ರದ್ಯುಮ್ನ ರೂಪದಲ್ಲಿ ಮಹಾಭಾರತದಲ್ಲಿ ಕಾಣುತ್ತೇವೆ. ಹೀಗಾಗಿ ನಮ್ಮಲ್ಲಿ ಹೆಚ್ಚಾಗಿ ಶೇಷ ಮತ್ತು ಸುಬ್ರಮಣ್ಯ ಒಟ್ಟಿಗಿರುವ ದೇವಸ್ಥಾನಗಳನ್ನು ಕಾಣುತ್ತೇವೆ). ಆತ ತನ್ನ ಮೂರುಮಂದಿ ಸಹೋದರರೊಂದಿಗೆ ಸಂಕರ್ಷಣನ (ಶೇಷನ) ಬಳಿಗೆ ಹೋದ.  ಈ ಸಂದರ್ಭದಲ್ಲಿ ಸಂಕರ್ಷಣರೂಪಿ ಸಾಕ್ಷಾತ್ ಭಗವಂತ ಶೇಷದೇವರಲ್ಲಿ ಸನ್ನಿಹಿತನಾಗಿ ಸನಕಾದಿಗಳಿಗೆ ಉಪದೇಶಿಸಿದ. ಆ ಪ್ರಾಚೀನ ಅಧ್ಯಾತ್ಮ ವಿದ್ಯೆಯನ್ನೇ ನಾನು ನಿನಗೆ ಹೇಳುತ್ತೇನೆ  ಎಂದು ಇಲ್ಲಿ ಮೈತ್ರೇಯರು ವಿದುರನಿಗೆ ಹೇಳುತ್ತಾರೆ.

ಸನಕಾದಿಗಳು ಶೇಷನಲ್ಲಿಗೆ ಹೋದಾಗ ಶೇಷ ತನ್ನ ನಾಸಾಗ್ರದಲ್ಲಿ ಕಣ್ಣಿಟ್ಟು(ಅರೆಮುಚ್ಚಿದ ಕಣ್ಣುಗಳಿಂದ) ತನಗೆ ಆಶ್ರಯದಾತನಾದ, ಮೋಕ್ಷಪ್ರದ ವಾಸುದೇವನನ್ನು ಸ್ಮರಿಸುತ್ತಾ (ಧ್ಯಾನಮಗ್ನನಾಗಿ) ಕುಳಿತಿದ್ದ. ಈರೀತಿ ತನ್ನ ಅರೆ ತೆರೆದ ತಾವರೆಯ ಮೊಗ್ಗಿನಂತಹ ಕಣ್ಣುಗಳಲ್ಲಿ ಭಗವಂತನ ಧ್ಯಾನಮಾಡುತ್ತಿರುವ ಸಂಕರ್ಷಣನಲ್ಲಿ ಸನಕಾದಿಗಳು ತತ್ವೋಪದೇಶ ಮಾಡಬೇಕು ಎಂದು ಬೇಡಿಕೊಂಡರು.

ಇಲ್ಲಿ ‘ಧಿಷ್ಣ್ಯಮ್’ ಎನ್ನುವ ಪದಕ್ಕೆ ‘ಆಶ್ರಯ’ ಎಂಬ ಅರ್ಥವನ್ನು  ಆಚಾರ್ಯರು ಅಭಿಧಾನ ಎನ್ನುವ ಕೋಶದ ಆಧಾರದೊಂದಿಗೆ ವಿವರಿಸಿರುವುದನ್ನು ಕಾಣಬಹುದು.  “ಆಧಾರ ಆಶ್ರಯೋ ಧಿಷ್ಣ್ಯಂ ನಿಧಾನಂ ಚಾಭಿಧೀಯತೇ”  ಇತ್ಯಭಿಧಾನೇ  ॥*॥

ಹೀಗೆ ಜ್ಞಾನದ ವಿಕಾಸಕ್ಕಾಗಿ ಶೇಷನಿಂದ ಉಪದೇಶಪಡೆದ ಸನತ್ಕುಮಾರರು ಅದನ್ನು ಸನ್ಯಾಸಿಗಳಲ್ಲೇ ಅಗ್ರಗಣ್ಯರಾದ  ಸಾಂಖ್ಯಾಯನರಿಗೆ ಕೊಟ್ಟರು. ಸಾಂಖ್ಯಾಯನರು ಅದನ್ನು ವೇದವ್ಯಾಸರ ತಂದೆಯಾದ ಪರಾಶರರಿಗೆ ಮತ್ತು ಬೃಹಸ್ಪತಿಗೆ  ಉಪದೇಶಿಸಿದರು. ಆ ಪರಾಶರರಿಂದ ಮೈತ್ರೇಯರಿಗೆ ಈ ಜ್ಞಾನ ಹರಿದುಬಂತು. (ಮೈತ್ರೇಯರು ಮತ್ತು ವೇದವ್ಯಾಸರು ಪರಾಶರರ ಶಿಷ್ಯರು ಮತ್ತು ಸಹಪಾಠಿಗಳು). ಈರೀತಿ ಹರಿದುಬಂದ ಜ್ಞಾನವನ್ನು ಇಲ್ಲಿ ಮೈತ್ರೇಯರು ವಿದುರನ ಮುಖೇನ ನಮಗೆ ವಿವರಿಸಿದ್ದಾರೆ. 


 ತಸ್ಯಾSತ್ಮಸೂಕ್ಷ್ಮಾಭಿನಿವಿಷ್ಟದೃಷ್ಟೇರನ್ತರ್ಗತೋSರ್ಥೋ ರಜಸಾ ತನೀಯಾನ್ ।

ಗುಣೇನ ಕಾಲಾನುಗತೇನ ವಿದ್ಧಃ  ಶೂಷ್ಯಂಸ್ತದಾSಭಿದ್ಯತ ನಾಭಿದೇಶಾತ್ ॥೧೩॥


ಸ ಪದ್ಮಕೋಶಃ ಸಹಸೋದತಿಷ್ಠತ್ ಕಾಲೇನ ಕರ್ಮಪ್ರತಿಬೋಧೀನೇನ  । 

ಸ್ವರೋಚಿಷಾ ತತ್ ಸಲಿಲಂ ವಿಶಾಲಂ ವಿದ್ಯೋತಯನ್ನರ್ಕ ಇವಾSತ್ಮಯೋನಿಃ ॥೧೪॥ 


ತಲ್ಲೋಕಪದ್ಮಂ ಸ ಉ ಏವ ವಿಷ್ಣುಃ  ಪ್ರಾವೀವಿಶತ್ ಸರ್ವಗುಣಾವಭಾಸಮ್ ।

ತಸ್ಮಿನ್ ಸ್ವಯಂ ವೇದಮಯೋ ವಿಧಾತಾ ಸ್ವಯಮ್ಭುವಂ ಯಂ  ಪ್ರವವದನ್ತಿ  ಸೋSಭೂತ್ ॥೧೫॥ 

 

ಈ ಹಿಂದೆ ಹೇಳಿದಂತೆ ಮಹಾಪ್ರಳಯದಲ್ಲಿ ಎಲ್ಲವೂ ನಾಶವಾಗುತ್ತದೆ. ಇದಕ್ಕೆ ಚತುರ್ಮುಖನೂ ಕೂಡಾ ಹೊರತಲ್ಲ. “ವಾಯುರನಿಲಮಮೃತಮಥೇದಂ ಭಸ್ಮಾಂತಂ ಶರೀರಮ್”(ಈಶಾವಾಸ್ಯ ಉಪನಿಷತ್ತು).  ಬ್ರಹ್ಮದೇವರ ಶರೀರವೂ ಕೂಡಾ ಮಹಾಪ್ರಳಯದಲ್ಲಿ ನಾಶವಾಗಲೇಬೇಕು. ಪ್ರಳಯಕಾಲದಲ್ಲಿ ಭಗವಂತನ ಉದರದಲ್ಲಿ ಸಮಸ್ತ ವಿಶ್ವ ಸೂಕ್ಷ್ಮರೂಪದಲ್ಲಿತ್ತು. ಎಲ್ಲವೂ ನಿಷ್ಕ್ರೀಯವಾಗಿತ್ತು. 

ಈ ಕಾಲದಲ್ಲಿ ಯೋಗನಿದ್ರೆಯಲ್ಲಿ ಒಬ್ಬನಿದ್ದ. ಕಾಲ ಬರಲೀ ಎಂದು ಅವನು ಕಾದಿದ್ದ. ಅಘಾದವಾದ ಆಕಾಶದಲ್ಲಿ ಕಟ್ಟಿಗೆಯಲ್ಲಿ ಅಡಗಿರುವ ಬೆಂಕಿಯಂತೆ ಅವನಿದ್ದ. ಕಾಲ ಬಂದಾಗ ಅವನು ಈ ಭೂತಸೂಕ್ಷ್ಮಗಳಿಗಾಗಿ ಸೃಷ್ಟಿ ಮಾಡಬೇಕೆಂದುಕೊಂಡ. ಸೂಕ್ಷ್ಮರೂಪದಲ್ಲಿದ್ದ ಎಲ್ಲವುಕ್ಕೂ ಒಂದು ರೂಪ ಕೊಡಬೇಕೆಂದು ರಜೋಗುಣವನ್ನು ಪ್ರಯೋಗಮಾಡಿದ. ಆಗ ರಜೋಗುಣದಿಂದ ಕೂಡಿಕೊಂಡು ಕಂಪಿಸಿ ಗಾಳಿ ಬೀಸಿತು. ಆಗ ಅವನ ಹೊಕ್ಕುಳಿನಿಂದ ತಾವರೆ ಅರಳಿತು. 

ಹೀಗೆ ತನ್ನದೇ ನಿಯಮಕ್ಕೆ ಬದ್ಧನಾಗಿರುವ ಭಗವಂತನಿಗೆ ಪ್ರಳಯಕಾಲ ಮುಗಿಯುತ್ತಿದ್ದಂತೆ ತನ್ನೊಳಗಿರುವ ಆತ್ಮಸೂಕ್ಷ್ಮಗಳಿಗಾಗಿ ಸೃಷ್ಟಿ ಮಾಡಬೇಕು ಎನ್ನುವ ಇಚ್ಛೆಯಾಗಿ ರಜೋಗುಣದಲ್ಲಿ ಕಂಪನ ಉಂಟುಮಾಡಿದ.  ಆಗಲೇ ಭಗವಂತನ ನಾಭಿಯಿಂದ ದ್ರವರೂಪವೊಂದು ಚಿಮ್ಮಿತು. ಅದು ರಜೋಗುಣದ ಕಂಪನದಿಂದ ಉಂಟಾದ ಗಾಳಿಗೆ ಒಣಗಿ ಘನಭಾವವನ್ನು ಹೊಂದಿ ಕಮಲದಮೊಗ್ಗಿನಂತೆ (ಬಂಗಾರದ ಮೊಟ್ಟೆಯಂತೆ) ಕಾಣಿಸಿಕೊಂಡಿತು. ಅದು ತಕ್ಷಣ ವಿಕಸಿತಗೊಂಡು ಇಡೀ ಬ್ರಹ್ಮಾಂಡವಾಗಿ ರೂಪುಗೊಂಡಿತು. “ಉದಕಂ ವಾಯುನಾ ಶುಷ್ಕಂ ಭಿನ್ನಂ ಪದ್ಮಮಭೂದ್ಧರೇಃ” ಇತಿ ಪಾದ್ಮೇ   ॥*॥ 

ಈ ಮೊದಲೇ ನೋಡಿದಂತೆ, ಸ್ವತಂತ್ರನಾದ ಭಗವಂತನು ಒಂದು ನಿರ್ದಿಷ್ಟ ಸಮಯವನ್ನು ನಿಗದಿಪಡಿಸಿದ್ದಾನೆ. ಈ  ಸಮಯರೇಖೆಯನುಸಾರ, ಪ್ರಳಯಕಾಲ ಮುಗಿಯುತ್ತಿದ್ದಂತೆ, ಬ್ರಹ್ಮಾಂಡವು ರೂಪುಗೊಳ್ಳಲು ಪ್ರಾರಂಭವಾಯಿತು. ಈ ಬ್ರಹ್ಮಾಂಡದ ಸೃಷ್ಟಿಯು ಸೂಚಿಸುವುದೇನೆಂದರೆ, ಈ ಸಮಯದಲ್ಲಿ ಪ್ರತಿಯೊಂದು ಜೀವಿಯೊಳಗಿರುವ ಕರ್ಮ ಜಾಗೃತವಾಗುತ್ತದೆ. ಈ ಕರ್ಮಕ್ಕನುಗುಣವಾಗಿ, ಭಗವಂತನು ಜೀವರ ಕರ್ಮಕ್ಷೇತ್ರವಾಗಿ  ಬ್ರಹ್ಮಾಂಡವನ್ನು ರಚಿಸಿದನು.

ಹೀಗೆ, ಸೂಕ್ಷ್ಮರೂಪದ ಪ್ರಕೃತಿಯ ವಿಶಾಲವಾದ ಸೂಕ್ಷ್ಮನೀರಿನ ವ್ಯಾಪ್ತಿಯಲ್ಲಿ, ಒಂದು ಕಮಲವು ಅಗಾಧವಾದ ಆ ನೀರಿನ ಮಧ್ಯೆ ತೇಲುತ್ತಿತ್ತು. ಸೂರ್ಯೋದಯದ ಬೆಳಕಿನಲ್ಲಿ ಹೇಗೆ ಬೆಳಕು ತುಂಬುತ್ತದೋ, ಹಾಗೆಯೇ ಭಗವಂತನ ಇಚ್ಛೆಯಿಂದ ಸಮಸ್ತ ಪ್ರಳಯಜಲವು ಪ್ರಕಾಶಿತವಾಯಿತು. ಕಣ್ಣಿಗೆ ಕಾಣದ ಅಖಂಡ ಮೂಲಪ್ರಕೃತಿಯ ಸಮುದ್ರದಲ್ಲಿ, ಸೂರ್ಯನಂತೆ ಪ್ರಕಾಶಮಾನವಾದ ಕಮಲವು ಅರಳಿತು. ಈ ಕಮಲದಲ್ಲಿ ಇನ್ನೂ ಚತುರ್ಮುಖ ಜನಿಸಬೇಕಿದೆ. ಈ ಕಮಲವೇ ಚತುರ್ದಶ ಭುವನಗಳಾಗಿ ರೂಪುಗೊಳ್ಳುವುದು. ಈ ಕಮಲದೊಳಗೆ, ಯಾವ ವಿಷ್ಣುವಿನ ನಾಭಿಯಿಂದ ಕಮಲವು ಚಿಮ್ಮಿತೋ, ಅದೇ ವಿಷ್ಣು ಪ್ರವೇಶಿಸಿ ಅದರಲ್ಲಿ ಸನ್ನಿಹಿತನಾದ.

“ವಿಷತೀತಿ ವಿಷ್ಣುಃ” ಎಂಬಂತೆ, ಯಾರು ಒಳಗೆ ಸನ್ನಿಹಿತನಾಗಿ ರಕ್ಷಣೆ ಮಾಡುತ್ತಾನೋ ಅವನೇ ‘ವಿಷ್ಣು’. ಇಂತಹ ವಿಷ್ಣು ಬ್ರಹ್ಮಾಂಡವೆಂಬ ಕಮಲದಲ್ಲಿ ಸನ್ನಿಹಿತನಾದಾಗ, ಆ ಕಮಲದಲ್ಲಿ ಒಂದು ಚೇತನ ಉದ್ಭವಿಸಿತು. (“ಆತ್ಮಾ ವಿಷ್ಣುರಸ್ಯ ಯೋನಿಃ” ॥*॥ ) ಅದೇ ಚತುರ್ಮುಖ. ಯಾರು ಜೀವರೆಲ್ಲರ ಪ್ರಧಾನ ಜೀವನೋ (ಸ್ವಯಂಭುಃ), ಅಂತಹ ಚತುರ್ಮುಖನ ಸೃಷ್ಟಿ ವಿಷ್ಣುವಿನಿಂದ ಈ ಬ್ರಹ್ಮಾಂಡವೆಂಬ ಕಮಲದಲ್ಲಿ ನಡೆಯಿತು. 

ಹೀಗೆ ಹುಟ್ಟದವನ(ಅಜಃ) ಹೊಕ್ಕುಳಲ್ಲಿ ಸಮಸ್ತ ಲೋಕಗಳೂ ಅಡಗಿರುವ ಕಮಲದ ಮೊಗ್ಗಿನಂತಿರುವ ಬ್ರಹ್ಮಾಂಡ ಹುಟ್ಟಿತು.  ಈ ವಿವರವನ್ನು ಋಗ್ವೇದದಲ್ಲಿ ಹೇಳಿರುವುದನ್ನು ಕಾಣಬಹುದು: “ಅಜಸ್ಯ ನಾಭಾವಧ್ಯೇಕಮರ್ಪಿತಂ ಯಸ್ಮಿನ್ವಿಶ್ವಾ ಭುವನಾನಿ ತಸ್ಥುಃ” ॥೧೦.೮೨.೦೬॥ . ಈ ವೇದಮಂತ್ರದ ವಿವರಣೆ ಸ್ಕಾಂದಪುರಾಣದಲ್ಲಿ ಬಂದಿದೆ – “ಅಜಸ್ಯ ನಾಭಾವಿತಿ ಯಸ್ಯ ನಾಭೇರಭೂಚ್ಛ್ರುತೇಃ ಪುಷ್ಕರಂ ಲೋಕಸಾರಮ್ । ತಸ್ಮೈ ನಮೋ ವ್ಯಸ್ತಸಮಸ್ತವಿಶ್ವವಿಭೂತಯೇ ವಿಷ್ಣವೇ ಲೋಕಕರ್ತ್ರೇ”.   ‘ಅಜಸ್ಯ ನಾಭೌ' ಎಂದು ಶ್ರುತಿಯಲ್ಲಿ ಹೇಳಿದಂತೆ, ಯಾರ ನಾಭಿಯಿಂದ ಹದಿನಾಲ್ಕು ಲೋಕಗಳಿಗೆ ಆಶ್ರಯವಾದ ಕಮಲವು ಹುಟ್ಟಿತೋ, ಅಂತಹ ಜೀವಜಡಗಳ ಸೃಷ್ಟಿಗೆ ಕಾರಣನಾದ, ಜಗತ್ತಿಗೆ ಸ್ವಾಮಿಯಾದ ವಿಷ್ಣುವಿಗೆ ನಮಸ್ಕಾರವು ಎಂದಿದೆ ಸ್ಕಾಂಧಪುರಾಣ. ಈ ಲೋಕಪದ್ಮವೇ ಮುಂದೆ ವಿಭಾಗಗೊಂಡು ಚತುರ್ದಶ ಭುವನ ಬ್ರಹ್ಮಾಂಡವಾಗುತ್ತದೆ.

ಹೀಗೆ, ಹೊಕ್ಕುಳಿನಿಂದ ಹೊರಬಂದ, ಶಬ್ದ, ಸ್ಪರ್ಶ, ರೂಪ, ರಸ ಮತ್ತು ಗಂಧ ಎಂಬ ಐದು (ಸರ್ವ)ಗುಣಗಳನ್ನು ಹೊಂದಿರುವ(ಪಂಚಭೂತಗಳ ಗುಣವನ್ನು ಹೊಂದಿರುವ) ಬ್ರಹ್ಮಾಂಡದ ಒಳಗೆ ಭಗವಂತನು ಅಂತರ್ಯಾಮಿಯಾಗಿ ಪ್ರವೇಶಿಸಿದನು. ಆಗ, ಆ ನಾಭೀಕಮಲದಲ್ಲಿ ಮುಂದೆ ಸೃಷ್ಟಿಕಾರ್ಯವನ್ನು ನಿರ್ವಹಿಸುವ (ವಿಧಾತ) ಒಂದು ಚೇತನ ಹುಟ್ಟಿಕೊಂಡಿತು. ಅವನೇ ವೇದಗಳನ್ನು ಚೆನ್ನಾಗಿ ತಿಳಿದಿರುವ(ವೇದಗರ್ಭ), ಹಿತವೂ ರಮಣೀಯವೂ ಆದ ಭಗವಂತನನ್ನು ಸದಾ ತನ್ನೊಳಗೆ ತುಂಬಿಕೊಂಡಿರುವ (ಹಿರಣ್ಯಗರ್ಭ) ಬ್ರಹ್ಮ. 

ಇಲ್ಲಿ ಹೇಳಿರುವ ಸ್ವಯಮ್ಭುಃ ಎಂದರೆ ಚತುರ್ಮುಖ ಬ್ರಹ್ಮ ಎನ್ನುವುದಕ್ಕೆ ಪ್ರಮಾಣವನ್ನು ಆಚಾರ್ಯರು ನೀಡಿದ್ದಾರೆ.

“ಪದ್ಮಸಂಸ್ಥಾದ್ದರೇಸ್ತತ್ರ ಬ್ರಹ್ಮಾSಜನಿ ಚತುರ್ಮುಖಃ”   ಇತಿ ಚ । 

ಸರ್ವಗುಣಾವಭಾಸಂ ಪೃಥಿವ್ಯಾತ್ಮಕಮ್ ।  ಪೃಥಿವ್ಯಾಂ ಹಿ ಶಬ್ದಾದಯಃ ಸರ್ವೇSವಭಾಸ್ಯನ್ತೇ  ।

“ತಸ್ಯಾSಸನವಿಧಾನಾರ್ಥ ಪೃಥಿವೀ ಪದ್ಮಮುಚ್ಯತೇ”  ಇತಿ ಚ ಮೋಕ್ಷಧರ್ಮಷು  ।

ಪದ್ಮ ಎಂದರೆ ಎಲ್ಲಾ ಲೋಕಗಳು. ವಿಶೇಷವಾಗಿ ಪೃಥಿವಿ. ‘ಪೃಥಿವಿ’ ಎಂದರೆ ಎಲ್ಲಾ ಗುಣಗಳ ನೆಲೆ ಎಂದರ್ಥ. ‘ಕಮಲಾಸನ ‘ಎಂದರೆ ಎಲ್ಲಾ ಗುಣಗಳ ಮೇಲೆ ಕುಳಿತವ ಎಂದರ್ಥ.  ಇದನ್ನು ಮಹಾಭಾರತದ ಮೋಕ್ಷಧರ್ಮಪರ್ವದ ವಿವರಣೆಯಿಂದ ನಾವು ತಿಳಿದುಕೊಳ್ಳಬಹುದು. “ಪ್ರಧಾನ ವಾಚಕಾಸ್ತ್ವೇಕಶ್ಚಾನನ್ಯಃ ಕೇವಲಃ ಸ್ವಯಮ್” ಇತಿ ಬ್ರಾಹ್ಮೇ ।  ‘ಸ್ವಯಮ್’ ಎಂದರೆ ಪ್ರಧಾನ ಎನ್ನುವ ಅರ್ಥವನ್ನು ಕೊಡುತ್ತದೆ ಎನ್ನುವುದನ್ನು ಬ್ರಹ್ಮಪುರಾಣ ಹೇಳುತ್ತದೆ. ಈ ಎಲ್ಲಾ ಹಿನ್ನೆಲೆಯಲ್ಲಿ ಇಲ್ಲಿ ಹೇಳಿರುವುದು ಜೀವೋತ್ತಮ, ಸೃಷ್ಟಿಯ ಹಿರಿಯ ಹಾಗೂ ಮೊದಲ ಜೀವ ಚತುರ್ಮುಖನನ್ನು ಎನ್ನುವುದು ತಿಳಿಯುತ್ತದೆ.