ಸ ಏಷ
ಭಗವಾಂಲ್ಲಿಂಗೈಃ ತ್ರಿಭಿರೇತೈರಧೋಕ್ಷಜಃ ।
ಸ್ವಲಕ್ಷಿತಗತಿರ್ಬ್ರಹ್ಮನ್
ಸರ್ವೇಷಾಂ ಮಮ ಚೇಶ್ವರಃ ॥೨೦॥
ಹಿಂದೆ ದೇಹ, ಕರ್ಮೇಂದ್ರಿಯ ಮತ್ತು ಜ್ಞಾನೇಂದ್ರಿಯಗಳು ನಮಗೆ ಅಹಂಕಾರ-ಮಮಕಾರವನ್ನು ಕೊಟ್ಟು
ಬಂಧಿಯಾಗಿಸುತ್ತವೆ ಎಂದು ಹೇಳಿದ ಚತುರ್ಮುಖ
ಇಲ್ಲಿ ಭಗವಂತನನ್ನು ತಿಳಿಯಲೂ ಕೂಡಾ ಇವೇ ಮೂರು
ಸಾಧಕ ಎನ್ನುತ್ತಾನೆ. ಈ ದೃಷ್ಟಿಯಲ್ಲಿ ನೋಡಿದಾಗ ದೇಹ, ಕರ್ಮೇಂದ್ರಿಯ ಮತ್ತು ಜ್ಞಾನೇಂದ್ರಿಯಗಳು
ನಮ್ಮನ್ನು ಭಗವಂತನೆಡೆಗೆ ಕೊಂಡೊಯ್ಯುವ, ನಾವು ತಿಳಿಯದ, ನಾವು ಕಾಣದ ಭಗವಂತನನ್ನು ನಮಗೆ ತಿಳಿಸುವ
ಅಪೂರ್ವ ಸಾಧನಗಳಾಗಿಯೂ ಕೆಲಸ ಮಾಡುತ್ತವೆ ಎನ್ನುವುದು
ತಿಳಿಯುತ್ತದೆ. ಅಹಂಕಾರ-ಮಮಕಾರದ ಅಂಟನ್ನು ತೆಗೆದಾಗ, ಈ ದೇಹ ಭಗವಂತನ
ಸಾಧನೆಗಾಗಿ ಇರುವ ಒಂದು ಅಪೂರ್ವ ಸ್ವತ್ತು ಎನ್ನುವ ಭಾವ ಬಂದಾಗ, ಈ ಜನ್ಮದಲ್ಲೇ ಭಗವಂತನನ್ನು
ಕಾಣಬೇಕು ಎನ್ನುವ ತುಡಿತ ಬಂದಾಗ, ಅದು ಉದ್ಧಾರದ ಮಾರ್ಗವಾಗುತ್ತದೆ. ಇಂದ್ರಿಯಗಳ ಎಲ್ಲಾ ಕೆಲಸವೂ
ಭಗವಂತನ ಪೂಜಾರೂಪ ಎನ್ನುವ ಅನುಸಂಧಾನ ಬಂದಾಗ, ಈ ಮೂರರ ನೆರವಿನಿಂದಲೇ ಅಧೋಕ್ಷಜನಾದ ಭಗವಂತನನ್ನು
ಕಾಣಲು ಸಾಧ್ಯವಾಗುತ್ತದೆ. [ಅಧೋಕ್ಷಜಃ ಎಂದರೆ ಅಕ್ಷಗಳಿಗೆ(ಇಂದ್ರಿಯಗಳಿಗೆ) ನಿಲುಕದವ ಆದರೆ
ಅಕ್ಷಗಳನ್ನು ತಿರಸ್ಕರಿಸಿದಾಗ ಕಾಣಸಿಗುವ ಭಗವಂತ ಎಂದರ್ಥ].
ನಮ್ಮ ದೇಹ, ನಮ್ಮ ಅಂಗಾಂಗದಲ್ಲಿ ಕುಳಿತು ನಮ್ಮಿಂದ ಆ ಭಗವಂತ ಕೆಲಸವನ್ನು ಮಾಡಿಸುತ್ತಿದ್ದಾನೆ
ಎನ್ನುವ ಅರಿವು ಮೂಡಿದಾಗ ಈ ದೇಹ, ಸರ್ವೇನ್ದ್ರಿಯಗಳು ಭಗವಂತನ ಪೂಜೆಯ ಉಪಕರಣವಾಗುತ್ತವೆ. ಆಗ
ಅಹಂಕಾರ-ಮಮಕಾರ ಹತ್ತಿರ ಸುಳಿವುದಿಲ್ಲ. ಈ ರೀತಿ ಭಕ್ತಿಯಿಂದ ಭಜಿಸುವ ಭಕ್ತರಿಗೆ ಆ ಭಗವಂತ
ಸ್ವಇಚ್ಛೆಯಿಂದ ತನ್ನನ್ನು ತಾನು ತೋರಿಸಿಕೊಳ್ಳುತ್ತಾನೆ. ನಮ್ಮ ಇಂದ್ರಿಯ, ಮನಸ್ಸು, ದೇಹದ ಅಣು-ಕಣವೂ
ಭಗವಂತನೊಂದಿಗೆ ಶ್ರುತಿಗೂಡಬೇಕು. ಆಗ ಭಗವಂತನ
ದರ್ಶನ ಸಾಧ್ಯವಾಗುತ್ತದೆ. ಗೀತೆಯಲ್ಲಿ ಹೇಳುವಂತೆ: ಅನನ್ಯಾಶ್ಚಿಂತಯಂತೋ
ಮಾಂ ಯೇ ಜನಾಃ ಪರ್ಯುಪಾಸತೇ । ತೇಷಾಂ
ನಿತ್ಯಾಭಿಯುಕ್ತಾನಾಂ ಯೋಗಕ್ಷೇಮಂ ವಹಾಮ್ಯಹಮ್ ॥೯-೨೨॥ ಇಲ್ಲಿ “ನನ್ನ ಸೇವೆಗೆ ಮುಡಿಪಾದವರ ಯೋಗ-ಕ್ಷೇಮದ ಹೊಣೆ
ನನ್ನದು” ಎಂದಿದ್ದಾನೆ ಶ್ರೀಕೃಷ್ಣ. “ಯಾವುದು
ನಮ್ಮನ್ನು ಅಹಂಕಾರ-ಮಮಕಾರಗಳಿಂದ ಅಧೋಗತಿಗೆ ತಳ್ಳಬಲ್ಲದೋ, ಅದನ್ನೇ ನಾವು ನಮ್ಮನ್ನು ಭಗವಂತನ ಬಳಿ
ಕೊಂಡೊಯ್ಯುವ ಸಾಧನವಾಗಿ ಬಳಸಬಹುದು. ಓ
ಬ್ರಹ್ಮನ್, ಈ ಸಾಧನಗಳನ್ನು ಅಧಿಷ್ಠಾನವಾಗಿ
ಬಳಸಿಕೊಂಡು, ಎಲ್ಲರ ಅಧಿಪತಿಯಾಗಿರುವ, ಆ ನನ್ನ ಅಧಿಪತಿ ಭಗವಂತನನ್ನು ಕಾಣಬಹುದು” ಎನ್ನುತ್ತಾನೆ ನಾರದನನ್ನು ಕುರಿತು ಚತುರ್ಮುಖ.
ಕಾಲಂ ಕರ್ಮ
ಸ್ವಭಾವಂ ಚ ಮಾಯೇಶೋ ಮಾಯಯಾ ಸ್ವಯಾ ।
ಆತ್ಮನ್
ಯದೃಚ್ಛಯಾ ಪ್ರಾಪ್ತಂ ವಿಬುಭೂಷುರುಪಾದದೇ ॥೨೧॥
ಕಾಲಾದ್
ಗುಣವ್ಯತಿಕರಾತ್ ಪರಿಣಾಮಸ್ವಭಾವತಃ ।
ಕರ್ಮಣೋ ಜನ್ಮ
ಮಹತಃ ಪುರುಷಾಧಿಷ್ಠಿತಾದಭೂತ್ ॥೨೨॥
ಭಗವಂತ ಅನಾದಿ ಅನಂತವಾಗಿರುವ ‘ಜೀವದ’ ದೇಹರಚನೆಯನ್ನು ಅದರ ಸ್ವಭಾವಕ್ಕನುಗುಣವಾಗಿ ಆಯಾ
ಕಾಲದಲ್ಲಿ ಮಾಡುತ್ತಾನೆ. ಇದಕ್ಕಾಗಿ ಆತ ಸೃಷ್ಟಿಯ
ಮೂಲದ್ರವ್ಯವಾದ, ಸೂಕ್ಷ್ಮರೂಪದಲ್ಲಿರುವ ಜಡಪ್ರಕೃತಿಯನ್ನು ಬಳಸಿಕೊಳ್ಳುತ್ತಾನೆ. ಸುಖ-ದುಃಖದ ಭೋಗದಿಂದ ಪುಣ್ಯಪಾಪಗಳ ಸಂಚಯನಕ್ಕಾಗಿ ಭಗವಂತ
ಜೀವನಿಗೆ ದೇಹವನ್ನು ನೀಡುತ್ತಾನೆ. ಜೀವದ ಸ್ವಭಾವದಂತೆ ಆಯಾ ಕಾಲದಲ್ಲಿ ಆಯಾ ಕರ್ಮಗಳು
ನಡೆಯುತ್ತವೆ. ಯಾವ ಜೀವ ಯಾವ ಜಡದೊಂದಿಗೆ ಎಂದು ಬೆರೆಯಬೇಕು
ಎನ್ನುವುದೇ ‘ಕಾಲ’. ಸ್ವಭಾವಕ್ಕನುಗುಣವಾಗಿ
ನಡೆಯುವ ಕ್ರಿಯೆಯೇ ‘ಕರ್ಮ’. ಭಗವಂತ ಜೀವದ ಸ್ವಭಾವಕ್ಕನುಗುಣವಾಗಿ ಅದು ವಿಕಸನ ಹೊಂದುವುದಕ್ಕೆ ಮಾಡುವ ವ್ಯವಸ್ಥೆಯೇ ‘ಸೃಷ್ಟಿ’.
ಜೀವ ವಿಕಸನ ಹೊಂದುತ್ತಾ ತನ್ನ ಸ್ವಭಾವದಂತೆ ಕರ್ಮ
ಮಾಡಿ, ಕರ್ಮಕ್ಕೆ ತಕ್ಕಂತೆ ಆಯಾ ಕಾಲದಲ್ಲಿ ಫಲವನ್ನು ಪಡೆಯುತ್ತಾನೆ. ಎಲ್ಲವನ್ನೂ
ಭಗವಂತ ಸ್ವ-ಸಾಮರ್ಥ್ಯದಿಂದ, ತನ್ನ ಇಚ್ಛೆಯಂತೆ ಮಾಡುತ್ತಾನೆ. [ಇಲ್ಲಿ ಬಳಕೆಯಾದ ‘ಯದೃಚ್ಛಯಾ’ ಎನ್ನುವ ಪದದ ಮೇಲ್ನೋಟದ ಅರ್ಥ ‘ಆಕಸ್ಮಿಕ’. ಆದರೆ ಇಲ್ಲಿ ನಾವು ಈ ಪದದ ಅಂತರಂಗದ ಅರ್ಥವನ್ನು
ತೆಗೆದುಕೊಳ್ಳಬೇಕು. ಯತ್+ಋ+ಇಚ್ಛಾ . ಎಲ್ಲೆಡೆ
ವ್ಯಾಪ್ತನಾದ ಭಗವಂತ(ಯತ್) ತನ್ನ ಜ್ಞಾನಸ್ವರೂಪದಿಂದ(ಋ) ಸಮಗ್ರವನ್ನೂ ತಿಳಿದು ಇಚ್ಛಿಸುತ್ತಾನೆ. ಆತನ ಇಚ್ಛೆಯಂತೆ ಎಲ್ಲವೂ
ನಡೆಯುತ್ತದೆ].
“ಮೊಟ್ಟಮೊದಲು
ಭಗವಂತ ಮಹತತ್ತ್ವವನ್ನು ಸೃಷ್ಟಿ ಮಾಡಿದ” ಎನ್ನುತ್ತಾನೆ ಚತುರ್ಮುಖ. ಇದು ತ್ರಿಗುಣಗಳ ವೈಷಮ್ಯದ ಕಂಪನದಿಂದ
ಉಂಟಾದ ಪ್ರಪಂಚ ಸೃಷ್ಟಿಯ ಮೊಟ್ಟ ಮೊದಲ ವಿಕಾರ. ಮಹತತ್ತ್ವವನ್ನು ನಿಯಂತ್ರಿಸುವ ಜೀವ ಚತುರ್ಮುಖ. ಪಿಂಡಾಂಡದಲ್ಲಿ ಮಹತತ್ತ್ವ ಎಂದರೆ ‘ಚಿತ್ತ’ ಅಥವಾ ‘ವಿಜ್ಞಾನಮಯಕೋಶ’. ಹೀಗಾಗಿ ಇಲ್ಲಿ ಮಹಾತತ್ತ್ವದ
ಸೃಷ್ಟಿಯಾಯಿತು ಎಂದರೆ ವಿಶ್ವದ ಸುಪ್ತಪ್ರಜ್ಞೆ ಜಾಗೃತವಾಯಿತು ಎಂದರ್ಥ. ಪ್ರಳಯಕಾಲದಲ್ಲಿ ಇಡೀ ವಿಶ್ವದಲ್ಲಿ
ತಮ್ಮ ಇರವಿನ ಅರಿವೂ ಇಲ್ಲದೇ ಇದ್ದ ಜೀವದಲ್ಲಿ
ಸುಪ್ತಪ್ರಜ್ಞೆಯ ವಿಕಾಸದ ಬೀಜಕ್ಷೇಪವೇ ಈ ಮಹತತ್ತ್ವ ಅಥವಾ ಚತುರ್ಮುಖನ ಸೃಷ್ಟಿ. ಸೃಷ್ಟಿಯ
ಪ್ರಾರಂಭದಲ್ಲಿ ಮೊಟ್ಟಮೊದಲು ಸರ್ವವ್ಯಾಪ್ತ ಭಗವಂತ ತನ್ನ ಪುರುಷ ನಾಮಕ ರೂಪದಿಂದ ಚತುರ್ಮುಖನನ್ನು
ಸೃಷ್ಟಿ ಮಾಡಿ ಆತನೊಳಗೆ ಬ್ರಹ್ಮನಾಮಕನಾಗಿ ಕುಳಿತು ವಿಶ್ವದ ಸುಪ್ತಪ್ರಜ್ಞೆಯನ್ನು ಜಾಗೃತಗೊಳಿಸಿದ.
[ಮಹಾತತ್ತ್ವವನ್ನು ಸೃಷ್ಟಿ ಮಾಡಿದ ಭಗವಂತನ ರೂಪ ಮೊದಲನೆಯ ಪುರುಷ ನಾಮಕ ರೂಪ. ನಂತರ ಅಹಂಕಾರ ತತ್ತ್ವ,
ಪಂಚಭೂತಗಳನ್ನು ಸೃಷ್ಟಿಮಾಡಿ ಬ್ರಹ್ಮಾಂಡದೊಳಗೆ ಸೇರಿದ ಭಗವಂತನ ರೂಪ ಎರಡನೇ ಪುರುಷ ನಾಮಕ ರೂಪ.
ಆನಂತರ ಬ್ರಹ್ಮಾಂಡದಲ್ಲಿ ಪಿಂಡಾಂಡವನ್ನು ಸೃಷ್ಟಿಸಿ ಪ್ರತಿಯೊಂದು ಪಿಂಡಾಂಡದೊಳಗೆ ಸೇರಿದ ಭಗವಂತನ
ರೂಪ ಮೂರನೇ ಪುರುಷ ನಾಮಕ ರೂಪ].