ನಭಸೋSಥ ವಿಕುರ್ವಾಣಾದಭೂತ್
ಸ್ಪರ್ಶಗುಣೋSನಿಲಃ ।
ಪರಾನ್ವಯಾಚ್ಛಬ್ದವಾಂಶ್ಚ
ಪ್ರಾಣ ಓಜಃ ಸಹೋ ಬಲಮ್ ॥೨೬॥
ಆಕಾಶದಲ್ಲಿ ಆರಂಭವಾದ ಸ್ಪಂದನದಿಂದ ಗಾಳಿಯ ಸೃಷ್ಟಿಯಾಯಿತು. ಸ್ಪರ್ಶ ಗಾಳಿಯ ಅಸಾಧಾರಣ
ಗುಣ. ಗಾಳಿ ಶಬ್ದ ವಾಹಕ ಕೂಡಾ ಹೌದು. ಪ್ರಾಣ, ಓಜಸ್ಸು, ಸಹಸ್ಸು ಮತ್ತು ಬಲ ಗಾಳಿಯ
ನಾಲ್ಕು ಪ್ರಮುಖ ಗುಣಗಳು. ಗಾಳಿಯಿಂದಾಗಿ ಜೀವಜಾತಗಳಲ್ಲಿ
ಪ್ರಾಣಶಕ್ತಿ ತುಂಬಿತು. ಪ್ರಾಣಶಕ್ತಿ ಎಂದರೆ ಎಲ್ಲವನ್ನೂ ಧಾರಣೆ ಮಾಡುವ ಶಕ್ತಿ. ಓಜಸ್ಸು ಎಂದರೆ
ಇನ್ನೊಬ್ಬರನ್ನು ಮಣಿಸುವ ಶಕ್ತಿ. ಬಿರುಗಾಳಿ ಬೀಸಿತೆಂದರೆ ಅದರ ಮುಂದೆ ಯಾವುದೂ ನಿಲ್ಲಲಾರದು.
ಅದೇ ರೀತಿ ಎಲ್ಲವನ್ನೂ ಮಣಿಸಬಲ್ಲ ಗಾಳಿಯನ್ನು ಮಣಿಸುವ ಶಕ್ತಿ ಇನ್ನೊಂದಿಲ್ಲ(ಸಹಸ್ಸು). ತನ್ನ
ಇಚ್ಛೆಯಂತೆ ತಾನು ನಿರ್ಧಾರ ಮಾಡುವ ಶಕ್ತಿ ಬಲ. ಇವೆಲ್ಲವೂ ಪ್ರಾಣದೇವರ ಅಸಾಧಾರಣ ಗುಣಗಳು.
ವಾಯೋರಪಿ
ವಿಕುರ್ವಾಣಾತ್ ಕಾಲಕರ್ಮಸ್ವಭಾವತಃ ।
ಉದಪದ್ಯತ ತೇಜೋ
ವೈ ರೂಪವತ್ ಸ್ಪರ್ಶಶಬ್ದವತ್ ॥೨೭॥
ತೇಜಸಸ್ತು
ವಿಕುರ್ವಾಣಾದಾಸೀದಂಭೋ ರಸಾತ್ಮಕಮ್ ।
ರೂಪವತ್
ಸ್ಪರ್ಶವಚ್ಚಾಂಭೋ ಘೋಷವಚ್ಚ ತದನ್ವಯಾತ್ ॥೨೮॥
ಗಾಳಿಯ ಒತ್ತಡದಲ್ಲಿ ಉಂಟಾದ ಸಂಘರ್ಷದಿಂದ
ಬೆಂಕಿ ಸೃಷ್ಟಿಯಾಯಿತು. ‘ರೂಪ’ ಬೆಂಕಿಯ ಅಸಾಧಾರಣ ಗುಣ. ಇದರಿಂದಾಗಿ ಆ ಕಲ್ಪದಲ್ಲಿ
ಸೃಷ್ಟಿಯಾಗಬೇಕಾಗಿರುವ ಜೀವಜಾತಗಳ ಕಣ್ಣಿಗೆ ಕಾಣುವ ರೂಪದ ಸೃಷ್ಟಿ ನಿರ್ಮಾಣವಾಯಿತು. ಬೆಂಕಿಯಲ್ಲಿ
ಶಬ್ದವಿದೆ ಮತ್ತು ಸ್ಪರ್ಶವಿದೆ. ಮೂಲಭೂತವಾಗಿ
ಏಳು ಬಣ್ಣಗಳಿರುವುದೂ ಬೆಂಕಿಯಲ್ಲೇ (ಸಪ್ತಜಿಹ್ವ). ಶಾಖ ಹೆಚ್ಚಾದಾಗ ಹೇಗೆ ಬೆವರು ಹುಟ್ಟುತ್ತದೋ
ಹಾಗೇ ಬೆಂಕಿಯಿಂದ ನೀರಿನ ಸೃಷ್ಟಿಯಾಯಿತು. ಶಬ್ದ,
ಸ್ಪರ್ಶ ಮತ್ತು ರೂಪದ ಜೊತೆಗೆ ವಿಶೇಷವಾಗಿ
‘ರಸ’ ನೀರಿನ ಅಸಾಧಾರಣ ಗುಣ.
ವಿಶೇಷಸ್ತು
ವಿಕುರ್ವಾಣಾದಂಭಸೋ ಗಂಧವಾನಭೂತ್ ।
ಪರಾನ್ವಯಾದ್
ರಸಸ್ಪರ್ಶರೂಪಶಬ್ದಗುಣಾನ್ವಿತಃ ॥೨೯॥
ಆಕಾಶ, ಗಾಳಿ, ಬೆಂಕಿ ಮತ್ತು ನೀರಿನ ಸೃಷ್ಟಿಯ ನಂತರ ಕೊನೆಯದಾಗಿ ಎಲ್ಲಾ ಗುಣವನ್ನು
ಹೊಂದಿರುವ ‘ವಿಶೇಷದ’ ಅಥವಾ ಮಣ್ಣಿನ ಸೃಷ್ಟಿಯಾಯಿತು. ನೀರೇ ಗಟ್ಟಿಯಾಗಿ ಮಣ್ಣಿನ ರೂಪ ಪಡೆಯಿತು.
ಹೀಗೆ ಏನೂ ಕಾಣದ ಆಕಾಶದಲ್ಲಿ ಕಣ್ಣಿಗೆ ಕಾಣುವ ಘನಪದಾರ್ಥ ವಿಕಸನವಾಯಿತು. ಕೇವಲ ಪಂಚಭೂತಗಳಷ್ಟೇ
ಅಲ್ಲ, ಅದರ ಅಭಿಮಾನಿ ದೇವತೆಗಳ ಸೃಷ್ಟಿಯೂ ಆಯಿತು. ಶಿವನಿಂದ ಮನಸ್ಸು ಹುಟ್ಟಿತು. ಶಿವನ ಮೊದಲ ಮಗ
ಸ್ಕಂಧ ಮನಸ್ಸಿನ ದೇವತೆ. ಶಿವನಿಂದ ಆಕಾಶದ ಸೃಷ್ಟಿಯಾಯಿತು. ಶಿವನ ಎರಡನೇ ಮಗ ಗಣಪತಿ ಆಕಾಶದ
ದೇವತೆ. ಅದೇ ರೀತಿ ಗಾಳಿಯ ಅಭಿಮಾನಿ ದೇವತೆ ಮರೀಚಿ, ಬೆಂಕಿಯ ಅಭಿಮಾನಿ ದೇವತೆ ಅಗ್ನಿಪುತ್ರ
ಪಾವಕ, ನೀರಿನ ವಿಶಿಷ್ಠ ಅಭಿಮಾನಿ ದೇವತೆ ಬುಧ ಮತ್ತು ಮಣ್ಣಿನ ವಿಶಿಷ್ಠ ಅಭಿಮಾನಿ ದೇವತೆ ಶನಿ. ಶನಿ
ಭೂಮಿಗೆ ಸಂಬಂಧಪಟ್ಟ ದೇವತೆಯಾಗಿರುವುದರಿಂದ ಶನಿಗೂ ಭೂಮಿಗೂ ಒಂದು ನಿಕಟವಾದ ಸಂಬಂಧವಿದೆ. ಹೀಗೆ
ದೇವತಾ ತಾರತಮ್ಯದ ಅನುಕ್ರಮದಲ್ಲೇ ಪಂಚಭೂತಗಳ ಅಭಿಮಾನಿ ದೇವತೆಗಳ ಸೃಷ್ಟಿಯಾಯಿತು.
ಸೃಷ್ಟಿ ಪ್ರಕ್ರಿಯೆಯ ಈ ಹಂತದಲ್ಲಿ ಇನ್ನೂ ಬ್ರಹ್ಮಾಂಡ ಮತ್ತು ಪಿಂಡಾಂಡ ರಚನೆ ಆಗಿಲ್ಲ. ಪಂಚಭೂತಗಳು,
ಪಂಚತನ್ಮಾತ್ರೆಗಳು, ಪಂಚ ಜ್ಞಾನೇಂದ್ರಿಯಗಳು, ಪಂಚ ವಿಧ ಅಂತಃಕರಣ, ಮನಸ್ಸು, ಬುದ್ಧಿ, ಅಹಂಕಾರ,
ಚಿತ್ತ, ಚೇತನ, ಎಲ್ಲವೂ ಸೃಷ್ಟಿಯಾಗಿದೆ. ಅನ್ನಮಯಕೋಶ, ಪ್ರಾಣಮಯಕೋಶ, ಮನೋಮಯಕೋಶ, ವಿಜ್ಞಾನಮಯಕೋಶ ಹೀಗೆ ಎಲ್ಲಾ ಕೊಶಗಳೂ
ಸಿದ್ಧವಾಗಿವೆ. ಜೀವಿಗಳ ಸೂಕ್ಷಶರೀರದಲ್ಲಿ ಇಂದ್ರಿಯ ಜಾಗೃತವಾಗಿದೆ. ಆದರೆ ದೇಹರಚನೆ ಇನ್ನೂ ಆಗಿಲ್ಲ.
ಇಲ್ಲಿ ಪಂಚಭೂತಗಳು ಎಂದರೆ ಶುದ್ಧ ಪಂಚಭೂತಗಳು. ಇಂದು ಪ್ರಪಂಚದಲ್ಲಿರುವ ಪಂಚಭೂತಗಳು ಶುದ್ಧ
ಪಂಚಭೂತಗಳಲ್ಲ. ಉದಾಹರಣೆಗೆ ಮಣ್ಣು ಅಥವಾ ನೀರು ಎಂದರೆ ಅದು ಮಣ್ಣು-ನೀರು-ಬೆಂಕಿಯ ಮಿಶ್ರಣ. ಶುದ್ಧ ಮಣ್ಣು ಅಥವಾ ಶುದ್ಧ ನೀರು ಬ್ರಹ್ಮಾಂಡ ಸೃಷ್ಟಿಯ
ಉತ್ತರದಲ್ಲಿ ಇಲ್ಲವೇ ಇಲ್ಲಾ. ಸೃಷ್ಟಿಯ ಈ ಹಂತದಲ್ಲಿ ಶುದ್ಧ ಪಂಚಭೂತಗಳು ಮತ್ತು ಐದು
ಶುದ್ಧಗುಣಗಳು ಸೃಷ್ಟಿಯಾಗಿವೆ. ಈ ಗುಣಗಳ (ಪಂಚತನ್ಮಾತ್ರೆಗಳು) ಅಭಿಮಾನಿ ದೇವತೆಗಳು ಕೂಡಾ
ಸೃಷ್ಟಿಯಾಗಿದ್ದಾರೆ. ಶಬ್ದ ಮತ್ತು ಸ್ಪರ್ಶದ ಅಭಿಮಾನಿ ದೇವತೆ ಗರುಡ ಪತ್ನಿ ಸುಪರ್ಣಿ, ರೂಪ
ಮತ್ತು ರಸದ ಅಭಿಮಾನಿ ದೇವತೆ ಶೇಷ ಪತ್ನಿ ವಾರುಣಿ,
ಗಂಧದ ಅಭಿಮಾನಿ ದೇವತೆ ರುದ್ರ ಪತ್ನಿ ಪಾರ್ವತಿ. ಇವರಲ್ಲದೆ ರುದ್ರ ಪುತ್ರರಾದ ಪ್ರಾಣ, ಅಪಾನ, ವ್ಯಾನ,
ಉದಾನ ಮತ್ತು ಸಮಾನ ಕೂಡಾ ಪಂಚತನ್ಮಾತೆಗಳ ಅಭಿಮಾನಿ
ದೇವತೆಗಳು. ಹೀಗೆ ಬ್ರಹ್ಮಾಂಡ ಸೃಷ್ಟಿಗೆ ಬೇಕಾದ ದ್ರವ್ಯ (raw material)
ಸಿದ್ಧವಾಯಿತು. ಮುಂದೆ ತತ್ತ್ವಾಭಿಮಾನಿ ದೇವತೆಗಳು ಈ ದ್ರವ್ಯವನ್ನು ಬಳಸಿ ಒಂದು ವ್ಯವಸ್ಥಿತವಾದ
ಬ್ರಹ್ಮಾಂಡ ಮತ್ತು ಪಿಂಡಾಂಡ ರಚನೆ ಮಾಡಬೇಕು. ಆದರೆ ಈ ಕಾರ್ಯ ದೇವತೆಗಳಿಗೆ ಅಷ್ಟು ಸುಲಭದ
ಕೆಲಸವಾಗಿರಲಿಲ್ಲಾ.
ತದಾ ಸಂಹತ್ಯ
ಚಾನ್ಯೋನ್ಯಂ ಭಗವಚ್ಛಕ್ತಿಚೋದಿತಾಃ ।
ಸದಸತ್ವಮುಪಾದಾಯ
ನೋ ಭಯಂ ಸಸೃಜುರ್ಹ್ಯದಃ ॥೩೩॥
“ದೇವತೆಗಳ ವ್ಯಯಕ್ತಿಕ ಅಥವಾ ಸಾಮೂಹಿಕ ಪ್ರಯತ್ನದಿಂದ ಅವರಿಗೆ ಬ್ರಹ್ಮಾಂಡ ಸೃಷ್ಟಿ
ಸಾಧ್ಯವಾಗದೇ ಇದ್ದಾಗ, ಶಕ್ತಿ ರೂಪನಾಗಿ ಭಗವಂತ ಅವರೊಳಗೆ ತುಂಬಿ, ಅವರಿಂದ ಬ್ರಹ್ಮಾಂಡ ಸೃಷ್ಟಿ
ಮಾಡಿಸಿದ” ಎನ್ನುತ್ತಾನೆ ಚತುರ್ಮುಖ. ಶಾಸ್ತ್ರಗಳು ಹೇಳುವಂತೆ: ಪರಾಸ್ಯ
ಶಕ್ತಿಹೀ ವಿವಿದೈವ್ಯ ಶ್ರೂಯತೇ, ಸ್ವಾಭಾವಿಕೈ ಜ್ಞಾನ ಬಲ ಕ್ರಿಯಾ ಚ . ಶಕ್ತಿಸ್ವರೂಪನಾದ ಭಗವಂತ ಶಕ್ತಿ ಕೊಟ್ಟಾಗ ಮಾತ್ರ ಕಾರ್ಯ ನಡೆಯುತ್ತದೆ. ಭಗವಂತನ ಇಚ್ಛೆ
ಇದ್ದಾಗ ಆತ ನಮಗೆ ಶಕ್ತಿ ಕೊಟ್ಟೇ ಕೊಡುತ್ತಾನೆ ಮತ್ತು ಆತನ ಇಚ್ಚೆಯಂತೆ ಕಾರ್ಯ ನೆರವೇರುತ್ತದೆ. ಭಗವಂತನ ಶಕ್ತಿ ಅಧಾನದಿಂದಾಗಿ ದೇವತೆಗಳಲ್ಲಿ ಹೊಸ
ಹುರುಪು ಮೂಡಿತು. ಅವ್ಯಕ್ತಸ್ಥಿತಿಯಲ್ಲಿದ್ದ ಮೂಲದ್ರವ್ಯದ ಮಿಶ್ರಣದಿಂದ ವ್ಯಕ್ತ ರೂಪದ
ಬ್ರಹ್ಮಾಂಡ ನಿರ್ಮಾಣ ಪ್ರಾರಂಭವಾಯಿತು. ಹೀಗೆ ಕಣ್ಣಿಗೆ ಕಾಣದ ಶಕ್ತಿಗಳು, ಕಣ್ಣಿಗೆ ಕಾಣುವ
ಶಕ್ತಿಗಳು ಸೇರಿ, ಕಾಣದ್ದು ಕಾಣುವ ಶಕ್ತಿಯಾಗಿ, ಇನ್ನು ಕೆಲವು ಕಾಣದ ಶಕ್ತಿಯಾಗೇ ಉಳಿದು, ಸತ್ತು-ಅಸತ್ತು
ಒಂದಕ್ಕೊಂದು ಉಪಾದಾನವಾಗಿ, ವ್ಯಕ್ತ ಅವ್ಯಕ್ತದೊಳಗೆ ಸೇರಿ, ಅವ್ಯಕ್ತವು ವ್ಯಕ್ತದೊಳಗೆ ಸೇರಿ
ಒಂದು ಭಯಂಕರವಾದ ಪ್ರಪಂಚ ನಿರ್ಮಾಣವಾಯಿತು! [ಈ ಮೇಲಿನ ಮಾತು ಪರಮಾಣು ರಚನೆಯನ್ನು ತಿಳಿದವರಿಗೆ
ಚನ್ನಾಗಿ ಅರ್ಥವಾಗುತ್ತದೆ. ಅಲ್ಲಿರುವ atom
ಮತ್ತು sub-atom, ಅದೊರೊಳಗಿನ space, ಅಲ್ಲಿರುವ ನಿರಂತರ ಚಲನೆ, ಇವೆಲ್ಲವೂ ಒಂದು
ವಿಸ್ಮಯ].
ಈ ಬ್ರಹ್ಮಾಂಡವೆಂದರೆ ಅದು ಭಯಂಕರ! ಏಕೆಂದರೆ ಅದು ಹುಟ್ಟು-ಸಾವುಗಳ ಚಕ್ರಭ್ರಮಣ. ಅದು
ನಮಗೆಲ್ಲರಿಗೂ ಸಾವಿನ, ಸಂಸಾರದ ಭಯವನ್ನು ಹುಟ್ಟಿಸುವಂತಹದ್ದು. ನಮಗೆ ಸಂಸಾರದ ಭಯವನ್ನು
ನೀಡುವವನೂ ಭಗವಂತ, ಮೋಕ್ಷದ ಅಭಯವನ್ನು ನೀಡುವವನೂ ಭಗವಂತ. ಹೀಗೆ ಯಾವ ಭಯವನ್ನು ಮೀರಿದರೂ
ಮೀರಲಾರದ ಸಾವಿನ ಭಯವನ್ನು ನೀಡುವ ಬ್ರಹ್ಮಾಂಡ
ರಚನೆಯನ್ನು ಭಗವಂತ ತನ್ನ ಪುರುಷನಾಮಕ ರೂಪದಿಂದ ಮಾಡಿದ. ಈ ಹಂತದಲ್ಲಿ ಇನ್ನೂ ಪಿಂಡಾಂಡ ಸೃಷ್ಟಿ ಆಗಿಲ್ಲ.
ಬ್ರಹ್ಮಾಂಡ ಸೃಷ್ಟಿಯಾಗಿ ಅಲ್ಲಿ ಜೀವಜಾತಗಳ
ಸೃಷ್ಟಿಯಾಗಲು ಸಾವಿರಾರು ವರ್ಷಗಳು ಹಿಡಿದಿವೆ. ಭಗವಂತ ತನ್ನ ನಿಯಮದಂತೆ ಹಂತಹಂತವಾಗಿ ಸೃಷ್ಟಿ
ಕಾರ್ಯವನ್ನು ದೇವತೆಗಳ ಒಳಗೆ ಕುಳಿತು ಮಾಡಿದ. ಹೀಗಾಗಿ ಸೃಷ್ಟಿ ಪ್ರಾರಂಭವಾಗಿ ಪೂರ್ಣ
ಸೃಷ್ಟಿಯಾಗಲು ಮೂರು ಸಾವಿರದ ಎಂಟುನೂರ ಎಂಬತ್ತೆಂಟು ಸಾವಿರ ಕೋಟಿ ವರ್ಷಗಳು ಹಿಡಿದಿವೆ. ಇದು ಈ ವಿಶ್ವದ ಆಯಸ್ಸಿನ ಎಂಟನೇ ಒಂದು ಭಾಗ (ಸೃಷ್ಟಿಯಾದ
ಪ್ರಪಂಚದ ಆಯಸ್ಸು ೩೧,೧೦೪ ಸಾವಿರ ಕೋಟಿ ವರ್ಷಗಳು).
No comments:
Post a Comment