ಪುರುಷಸೂಕ್ತದಲ್ಲಿ ಮುಂದೆ ಯಜ್ಞದ ಬಗ್ಗೆ ವಿವರಣೆ ಬರುತ್ತದೆ: ಯತ್ಪುರುಷೇಣ ಹವಿಷಾ
ದೇವಾ ಯಜ್ಞಮತನ್ವತ । ವಸಂತೋ ಅಸ್ಯಾಸೀದಾಜ್ಯಂ
ಗ್ರೀಷ್ಮ ಇಧ್ಮಃ ಶರದ್ಧವಿ: ।।೬।। ತಂ ಯಜ್ಞ೦ ಬರ್ಹಿಷಿ ಪ್ರೌಕ್ಷನ್ ಪುರುಷಂ ಜಾತಮಗ್ರತಃ । ತೇನ ದೇವಾ ಆಯಜಂತ
ಸಾಧ್ಯಾ ಋಷಯಶ್ಚ ಯೇ ।।೭।। ಇಲ್ಲಿ ವಸಂತವೇ
ತುಪ್ಪ, ಗ್ರೀಷ್ಮವೇ ಕಟ್ಟಿಗೆ, ಶರತ್ತೇ ಹವಿಸ್ಸು ಇತ್ಯಾದಿಯಾಗಿ ವಿವರಿಸಲಾಗಿದೆ.
ಇಲ್ಲಿ ಬರುವ ಪ್ರತಿ ಶಬ್ದದ ಅರ್ಥವನ್ನು ಕೊಡತಕ್ಕ ವಿವರಣೆಯನ್ನು ಭಾಗವತ ನೀಡಿಲ್ಲವಾದರೂ
ಕೂಡಾ ಯಜ್ಞದ ಪರಿಕಲ್ಪನೆಯನ್ನು ಮುಂದೆ ವಿವರಿಸುವುದನ್ನು ನಾವು ಕಾಣಬಹುದು.
ಯದಾSಸ್ಯ ನಾಭ್ಯಾನ್ನಳಿನಾದಹಮಾಸಂ ಮಹಾತ್ಮನಃ ।
ನಾವಿಂದಂ
ಯಜ್ಞಸಂಭಾರಾನ್ ಪುರುಷಾವಯವಾನೃತೇ ॥೨೨॥
ತೇಷು
ಯಜ್ಞಾಶ್ಚ ಪಶವಃ ಸವನಸ್ಪತಯಃ ಕುಶಾಃ ।
ಇದಂ ಚ
ದೇವಯಜನಂ ಕಾಲಶ್ಚೋರುಗುಣಾನ್ವಿತಃ ॥೨೩॥
ವಸೂನ್ಯೋಷಧಯಃ
ಸ್ನೇಹಾ ರಸಲೋಹಮೃದೋ ಜಲಮ್ ।
ಋಚೋ ಯಜೂಂಷಿ
ಸಾಮಾನಿ ಚಾತುರ್ಹೋತ್ರಂ ಚ ಸತ್ತಮ ॥೨೪॥
ಚತುರ್ಮುಖ ಹುಟ್ಟಿದ ತಕ್ಷಣ, ಏನೂ ಇಲ್ಲದ ಆ ಸಮಯದಲ್ಲಿ ಆತನಿಗೆ ತನ್ನನ್ನು ಹುಟ್ಟಿಸಿದ ತಂದೆಯನ್ನು ಯಾಜ್ಞಿಕವಾಗಿ
ಪೂಜಿಸಬೇಕು ಎನ್ನುವ ಅನುಸಂಧಾನವಾಯಿತು. ಇಂಥಹ ಸಮಯದಲ್ಲಿ ಸೃಷ್ಟಿ ಪ್ರಕ್ರಿಯೆಯನ್ನೇ ಯಾಜ್ಞಿಕ ಪ್ರಕ್ರಿಯೆಯಾಗಿ ಚತುರ್ಮುಖ ನೋಡಿರುವುದನ್ನು
ಇಲ್ಲಿ ಕಾಣುತ್ತೇವೆ.
ಮೊದಲು ಚತುರ್ಮುಖ ಮೊಟ್ಟೆಯೊಳಗಿನಿಂದ ಹುಟ್ಟಿದ ಎನ್ನುವುದನ್ನು ಈ ಹಿಂದೆ ನೋಡಿದ್ದೇವೆ. ಹೀಗೆ
ಮೊಟ್ಟೆಯೊಳಗಿದ್ದ ಚತುರ್ಮುಖ ಮೊಟ್ಟೆಯೊಡೆದು ಮತ್ತೊಮ್ಮೆ
ಹುಟ್ಟಿದ. ಮೊಟ್ಟೆ ಒಡೆಯುವುದು ಅಂದರೆ ಕಮಲ ಅರಳುವುದು. “ಅರಳಿದ ಕಮಲದಲ್ಲಿ ನಾನು ಮತ್ತೆ
ಹುಟ್ಟಿದೆ” ಎಂದಿದ್ದಾನೆ ಚತುರ್ಮುಖ.
ಮೊಟ್ಟೆಯೊಡೆದು ಬಂದ ಚತುರ್ಮುಖನಿಗೆ ಸೃಷ್ಟಿಯ ಆದಿಯಲ್ಲಿ ಭಗವಂತನ ಪಾದಪೂಜೆಗೆ ಬೇಕಾದ ಸಾಮಗ್ರಿಗಳಿರಲಿಲ್ಲ.
ಹೀಗಿರುವಾಗ ಆತನಿಗೆ ತನ್ನೆದುರು ಸಹಸ್ರಾರು ಕರಚರಣಗಳಿಂದ
ತುಂಬಿ ನಿಂತಿರುವ ಭಗವಂತನ ಅವಯವಗಳಲ್ಲಿ ಪ್ರಪಂಚದ ಅನಂತ ವಸ್ತುಗಳೂ ಮೂಲರೂಪದಲ್ಲಿ ಸೃಷ್ಟಿಯಾಗುತ್ತಿರುವುದು
ಕಾಣುತ್ತದೆ. ಇಂಥಹ ಭಗವಂತನಿಗೆ ಹೊರಗಿನಿಂದ
ಕೊಡುವುದಕ್ಕೇನಿದೆ? ಮುಂದೆ ಹುಟ್ಟಿ ಬರುವ ಸಮಸ್ತ ವಸ್ತುವೂ ಕೂಡಾ ಸೂಕ್ಷ್ಮರೂಪದಲ್ಲಿ ಆತನಲ್ಲೇ
ತುಂಬಿರುವುದನ್ನು ಚತುರ್ಮುಖ ಕಂಡ.
ಯಜ್ಞ ಅಂದ ಮೇಲೆ ಅಲ್ಲಿ ಬಲಿ ಎನ್ನುವುದೊಂದಿದೆ. ನಮ್ಮಲ್ಲಿರುವ ಪಶುತ್ವವನ್ನು ಬಲಿಕೊಡುವುದು
ಈ ಬಲಿಯ ಹಿಂದಿನ ತಾತ್ಪರ್ಯ. ಇಲ್ಲಿ ಅದನ್ನೇ ಪುರುಷಮೇಧ ಎಂದಿದ್ದಾರೆ. ಪುರುಷಮೇಧ ಎಂದರೆ ನರಮೇಧ
ಅಥವಾ ನರಬಲಿಯಲ್ಲ. ನಮ್ಮಲ್ಲಿರುವ ದೋಷವನ್ನು ಪರಿಹಾರ ಮಾಡು ಎಂದು ನಮ್ಮನ್ನು ನಾವು ಸಂಪೂರ್ಣವಾಗಿ
ಭಗವಂತನಿಗೆ ಅರ್ಪಿಸಿಕೊಳ್ಳುವುದೇ ಪುರುಷಮೇಧ.
ನಾಮಧೇಯಾನಿ
ಮಂತ್ರಾಶ್ಚ ದಕ್ಷಿಣಾಶ್ಚ ವ್ರತಾನಿ ಚ ।
ದೇವತಾನುಕ್ರಮಃ
ಕಲ್ಪಃ ಸಂಕಲ್ಪ ಸೂತ್ರಮೇವ ಚ ॥೨೫॥
ಯಜ್ಞ ಮಾಡಲು ಅಲ್ಲಿ ನಾಮಧೇಯಗಳು ಬೇಕು, ದಕ್ಷಿಣೆ ಬೇಕು, ಮಂತ್ರಗಳು ಬೇಕು. ಸೃಷ್ಟಿಯ
ಆದಿಯಲ್ಲಿ ನಡೆದ ಈ ಯಜ್ಞದಲ್ಲಿ ಭಗವಂತನ ಮುಖದಿಂದ
ಹೊಮ್ಮಿದ ವೇದವಾಣಿಯೇ ನಾಮಧೇಯವಾಯಿತು. ಆ
ಒಂದೊಂದು ಸೂಕ್ತವೇ ಮಂತ್ರವಾಯಿತು. ಪ್ರಪಂಚದಲ್ಲಿ ಭಗವಂತ ಸೃಷ್ಟಿಮಾಡಿದ ಅನಂತ ಸಂಪತ್ತೇ ಆ ಯಜ್ಞದ
ದಕ್ಷಿಣೆಯಾಯಿತು. ಈ ರೀತಿ “ನೀನು ಕೊಟ್ಟ ಸಂಪತ್ತು ನಿನಗೆ ಅರ್ಪಿತ; ನಿನ್ನ ಬಾಯಿಯಿಂದ ಬಂದ ನಾಮಧೇಯಗಳೇ ನಿನ್ನ ನಾಮಧೇಯಗಳು;
ಆ ಮಂತ್ರಗಳೇ ನಿನ್ನ ಸ್ತೋತ್ರಗಳು ಎನ್ನುವ ಅನುಸಂಧಾನದೊಂದಿಗೆ ಭಗವಂತನ ಅವಯವಗಳಿಂದ ಬಂದದ್ದನ್ನೇ
ಅವನಿಗೆ ಅರ್ಪಿಸಿ ನಾನು ಯಜ್ಞಮಾಡಿದೆ” ಎನ್ನುತ್ತಾನೆ ಚತುರ್ಮುಖ.
ವ್ರತಗಳು ಸೃಷ್ಟಿಯಾದವು, ಯಜ್ಞದ ಹೆಸರುಗಳು ಸೃಷ್ಟಿಯಾದವು, ಯಜ್ಞದಿಂದ ಆರಾಧಿಸಲ್ಪಡುವ
ದೇವ-ದೇವತೆಯರ ಹೆಸರು ಎಲ್ಲವೂ ಭಗವಂತನಿಂದ ಆವಿಷ್ಕಾರವಾದ ವೇದವಾಣಿಯಲ್ಲಿ ಸಿಕ್ಕಿತು. ಯಾರನ್ನು
ಕುರಿತು ಯಜ್ಞಮಾಡಬೇಕೋ ಆತನೇ ಸಹಸ್ರಶೀರ್ಷಾ ಪುರುಷನಾಗಿ ಎದುರಿಗೇ ನಿಂತಿದ್ದಾನೆ. ಇನ್ನು ಪರಿವಾರ
ದೇವತೆಗಳು, ಆವಾಂತರ ದೇವತೆಗಳು ಎಲ್ಲರೂ ಭಗವಂತನ ಅವಯವಗಳಿಂದ ದೇವತಾ ತಾರತಮ್ಯಕ್ಕನುಗುಣವಾಗಿ ಸೃಷ್ಟಿಯಾಗುತ್ತಿದ್ದಾರೆ.
ದೇವ-ದೇವತೆಯರನ್ನು ಹೇಗೆ ಉಪಾಸನೆ ಮಾಡಬೇಕು, ಹೇಗೆ ಆಹುತಿಕೊಡಬೇಕು ಎನ್ನುವುದನ್ನು ಭಗವಂತ
ಸೃಷ್ಟಿಯ ಆದಿಯಲ್ಲೇ ಒಂದು ಕ್ರಮದಲ್ಲಿ ಸೃಷ್ಟಿಸಿದ. [ಇದನ್ನೇ ಮುಂದೆ ದೇವಮೀಮಾಂಸೆ ಎನ್ನುವ
ಗ್ರಂಥರೂಪದಲ್ಲಿ ಋಷಿಗಳು ನಮಗೆ ನೀಡಿದರು]. ಯಾವ ಕ್ರಮದಲ್ಲಿ ಹೋಮ ಮಾಡಬೇಕು, ಯಾವ ಮಂತ್ರವನ್ನು
ಎಲ್ಲಿ ಬಳಸಬೇಕು, ಇತ್ಯಾದಿ ಭಗವದ್ ಸಂಕಲ್ಪದಿಂದ ವೇದೋಚ್ಛಾರ ಕಾಲದಲ್ಲೇ ವ್ಯವಸ್ಥೆಯಾಗಿ
ಬಿಟ್ಟಿತು. ಯಾವುದನ್ನೂ ಹೊರಗಿನಿಂದ ತರಬೇಕಾಗಿರಲಿಲ್ಲ- ಎಲ್ಲವೂ ಭಗವಂತನಲ್ಲೇ ತುಂಬಿತ್ತು.
ಕಲ್ಪ ಸೂತ್ರಗಳ ಸಂಕಲ್ಪ ಭಗವಂತನಿಂದಾಯಿತು [ಇದನ್ನೇ ಮುಂದೆ ಗ್ರಹ್ಯಸೂತ್ರ, ಶ್ರುತಸೂತ್ರ ಇತ್ಯಾದಿ ಸೂತ್ರ(Rituals) ರೂಪದಲ್ಲಿ ರಚಿಸಿ
ಋಷಿಗಳು ನಮ್ಮ ಮುಂದಿಟ್ಟರು]. ಹೀಗೆ ಮುಂದೆ ರಚನೆಯಾಗುವ ಗ್ರಂಥಗಳ, ವ್ಯಾಖ್ಯಾನಗಳ, ಭಾಷ್ಯಗಳ
ಸಂಕಲ್ಪ ಭಗವಂತನಿಂದಾಯಿತು. ಬ್ರಹ್ಮಸೂತ್ರ ಕೂಡಾ ಇದೇ ಕಾಲದಲ್ಲಿ ನಿರ್ಮಾಣವಾಯಿತು.[ಇದನ್ನೇ
ವೇದವ್ಯಾಸರು ದ್ವಾಪರದ ಅಂತ್ಯದಲ್ಲಿ ಮತ್ತೆ ರಚಿಸಿ ನಮಗೆ ಕೊಟ್ಟಿರುವುದು]. ಇವೆಲ್ಲವನ್ನೂ ಬಳಸಿ
ಚತುರ್ಮುಖ ಆದಿ ಯಜ್ಞ ನೆರವೇರಿಸಿದ.
ನಮಗೆ ತಿಳಿದಂತೆ ಯಜ್ಞ ಎಂದ ಮೇಲೆ ಅಲ್ಲಿ
‘ಸಂಕಲ್ಪ’ ಮಾಡಬೇಕು. “ಸಂಕಲ್ಪಃ ಕರ್ಮ ಮಾನಸಂ” ಎನ್ನುವ ಮಾತಿದೆ. ‘ಮಾಡಬೇಕು’ ಎಂದು ಮನಸ್ಸಿನಲ್ಲಿ ನಿರ್ಧರಿಸುವುದೇ ಸಂಕಲ್ಪ. ಮೊದಲು
ಮಾನಸಿಕವಾಗಿ ನಿರ್ಧರಿಸುವುದು, ಆಮೇಲೆ ದೈಹಿಕವಾಗಿ ಮಂತ್ರರೂಪದಲ್ಲಿ ಧೀಕ್ಷಾಬದ್ಧನಾಗುವುದೇ
ನಿಜವಾದ ಸಂಕಲ್ಪ. ಇಲ್ಲಿ ಯಜ್ಞಕ್ಕೆ ಬೇಕಾದ ಸಂಕಲ್ಪ ಚತುರ್ಮುಖನಿಗೆ ಭಗವಂತನಿಂದ ದೊರೆಯಿತು.
ಹೀಗೆ ಏನೂ ಇಲ್ಲದೇ ಇರುವಲ್ಲಿ ಎಲ್ಲವೂ ಇದ್ದು
ಆದಿ ಯಜ್ಞ ನೆರವೇರಿತು. ಚತುರ್ಮುಖ ತನ್ನನ್ನೇ ತಾನು ಪಶುವಾಗಿ ಭಗವಂತನಿಗೆ ಅರ್ಪಿಸಿ
ಯಜ್ಞ ನೆರವೇರಿಸಿದ.
ಈ ರೀತಿಯ ವ್ಯವಸ್ಥೆ ಕೇವಲ ಆದಿ
ಯಜ್ಞಕ್ಕೆ ಮಾತ್ರ ಮೀಸಲಲ್ಲ. ಇಂದೂ ಕೂಡಾ ಇದು ಸಾಧ್ಯ.
ಒಂದು ಒಳ್ಳೆಯ ಕಾರ್ಯ ಮಾಡಬೇಕು ಎನ್ನುವ ಅಚಲ ಸಂಕಲ್ಪ ಜೀವಕ್ಕೆ ಬಂದರೆ ಆ ಕಾರ್ಯಕ್ಕೆ
ಬೇಕಾದ ಎಲ್ಲವನ್ನೂ ಭಗವಂತ ಒದಗಿಸಿ
ಕೊಡುತ್ತಾನೆ. ಇದೇ ಈ ಆದಿ ಯಜ್ಞ ನಮಗೆ ಕೊಡುವ ಸಂದೇಶ.
No comments:
Post a Comment