Saturday, January 3, 2015

Shrimad BhAgavata in Kannada -Skandha-02-Ch-06(06)

ನಾರಾಯಣೇ ಭಗವತಿ ತದಿದಂ ವಿಶ್ವಮಾಹಿತಮ್
ಗೃಹೀತಮಾಯೋರುಗುಣೇ ಸರ್ಗಾದಾವಗುಣೇ ಸ್ವತಃ  ೩೦

ಸೃಷ್ಟಿಕರ್ತ ಯಾರು ಮತ್ತು ಈ ಸೃಷ್ಟಿ ಹೇಗೆ ನಿರ್ಮಾಣವಾಯಿತು ಎಂದು ನಾರದನಿಗೆ ವಿವರಿಸುತ್ತಿರುವ ಚತುರ್ಮುಖ ಮುಂದುವರಿದು ಹೇಳುತ್ತಾನೆ: “ಇಡೀ ವಿಶ್ವ, ಸಮಸ್ತ ಜೀವಜಾತ, ಜಡಪ್ರಪಂಚ ಎಲ್ಲವೂ ಭಗವಂತನಲ್ಲೇ ಇವೆ” ಎಂದು. ಚತುರ್ಮುಖ ಬ್ರಹ್ಮ, ಸಮಸ್ತ ದೇವತೆಗಳು ಋಷಿಗಳು ಎಲ್ಲರೂ ಭಗವಂತನಲ್ಲಿ ವಿಶ್ವವನ್ನು ಕಂಡು ಆರಾಧನೆ ಮಾಡಿದರು. ಈ ರೀತಿ ಭಗವಂತನಲ್ಲಿ ಎಲ್ಲವನ್ನೂ ಕಾಣುವುದು ಕೇವಲ ಸೃಷ್ಟಿಯ ಆದಿಗಷ್ಟೇ  ಮೀಸಲಲ್ಲಾ. ಇದು ಇಂದಿಗೂ ಎಂದೆಂದಿಗೂ ಸತ್ಯ.
ಭಗವಂತ ಸ್ವಂತ ಇಚ್ಛೆಯಿಂದ ಪ್ರಕೃತಿಯ ಸತ್ವ-ರಜಸ್ಸು-ತಮಸ್ಸನ್ನು ಬಳಸಿ ಮೂರು ವಿಧವಾದ ಕ್ರಿಯೆ ಮಾಡಿಸುತ್ತಿದ್ದಾನೆ. ಆದರೆ ಆತನಿಗೆ ಈ ತ್ರಿಗುಣದ ಸ್ಪರ್ಶವೇ ಇಲ್ಲ. “ಸೃಷ್ಟಿಯ ಆದಿಯಲ್ಲೇ ಭಗವಂತ ಇಂಥ ಲೀಲೆ ಮಾಡಿ ತೋರಿದ” ಎನ್ನುತ್ತಾನೆ ಚತುರ್ಮುಖ.

ಸೃಜಾಮಿ ತನ್ನಿಯುಕ್ತೋSಹಂ ಹರೋ ಹರತಿ ತದ್ವಶಃ
ವಿಶ್ವಂ ಪುರುಷರೂಪೇಣ ಪರಿಪಾತಿ ತ್ರಿಶಕ್ತಿಧೃಕ್  ೩೧

ಚತುರ್ಮುಖನಿಂದಲೇ ಸೃಷ್ಟಿ ನಡೆಯುತ್ತದೆ ಎನ್ನುವಂತೆ ಪ್ರಶ್ನಿಸಿದ್ದ ನಾರದರಿಗೆ ಚತುರ್ಮುಖ ಉತ್ತರಿಸುತ್ತಾ ಹೇಳುತ್ತಾನೆ:  “ನಾನು ಭಗವಂತನ ಕೈಯಲ್ಲಿನ ಒಂದು ಸಾಧನ(Instrument). ನನ್ನೊಳಗೆ ಕುಳಿತು ಭಗವಂತ ನನ್ನನ್ನು ಪ್ರೇರೇಪಿಸಿ ಸೃಷ್ಟಿ ಮಾಡುತ್ತಾನೆ. ಹೀಗಾಗಿ ನನ್ನ ಮುಖೇನ ಸೃಷ್ಟಿಯಾದಂತೆ ಕಾಣುತ್ತದೆ. ಇಲ್ಲಿ ನಾನು ಭಗವಂತನ ಆಜ್ಞಾಪಾಲಕ. ನಾನು ಸ್ವತಂತ್ರ ಸೃಷ್ಟಾರ ಅಲ್ಲ. ಇದೇ ರೀತಿ ಭಗವಂತ ಶಿವನೊಳಗೆ ಕುಳಿತು ಸಂಹಾರ ಮಾಡುತ್ತಾನೆ” ಎಂದು. ಸೃಷ್ಟಿ-ಸಂಹಾರವನ್ನು ಬ್ರಹ್ಮ-ಶಿವನೊಳಗೆ ನಿಂತು ಮಾಡಿಸುವ  ಭಗವಂತ ಹುಟ್ಟು-ಸಾವಿನ ನಡುವಿನ ಪಾಲನೆಯನ್ನು ಮಾತ್ರ ತಾನೇ ನೇರವಾಗಿ ಮಾಡುತ್ತಾನೆ. ರಜಸ್ಸನ್ನು ಚತುರ್ಮುಖನಲ್ಲಿ ತುಂಬಿ ಆತನಲ್ಲಿ ಸೃಷ್ಟಿ, ತಮಸ್ಸನ್ನು ಶಿವನಲ್ಲಿ ತುಂಬಿ ಆತನಿಂದ ಸಂಹಾರ ಕಾರ್ಯ ಮಾಡಿಸುವ ಭಗವಂತ ಸತ್ತ್ವವನ್ನು ಬಳಸಿ, ಅದರಿಂದ ಪ್ರಭಾವಿತನಾಗದೇ ಪಾಲನೆ ಮಾಡುತ್ತಾನೆ.     

ಇತಿ ತೇSಭಿಹಿತಂ ತಾತ ಯಥೇದಮನುಪೃಚ್ಛಸಿ
ನಾನ್ಯದ್ ಭಗವತಃ ಕಿಂಚಿದ್ ಭಾವ್ಯಂ ಸದಸದಾತ್ಮಕಮ್ ೩೨

“ನೀನು ಕೇಳಿದ್ದನ್ನೆಲ್ಲವನ್ನೂ ಹೇಳಿದೆ. ‘ಚತುರ್ಮುಖನೇ ಸೃಷ್ಟಿ ಮಾಡುತ್ತಾನೆ ಎಂದು ನಾನು ತಿಳಿದಿದ್ದೇನೆ’ ಎಂದು ನೀನು ಹೇಳಿದೆಯಲ್ಲಾ. ನಾನು ಏನನ್ನೂ ಸ್ವತಂತ್ರವಾಗಿ ಮಾಡುವುದಿಲ್ಲ. ಆ ಭಗವಂತ ನನ್ನನ್ನು ಸಾಧನವಾಗಿ ಬಳಸಿ ಏನನ್ನು ಮಾಡಿಸುತ್ತಾನೋ ಅದನ್ನಷ್ಟೇ ನಾನು ಮಾಡುತ್ತೇನೆ. ಅದೇ ರೀತಿ ಶಿವ ಕೂಡಾ. ಇದು ಸೃಷ್ಟಿ ರಹಸ್ಯ. ಹೀಗಾಗಿ ಸದಸದಾತ್ಮಕವಾದ ಈ ಪ್ರಪಂಚದಲ್ಲಿ ನಾವು ಚಿಂತಿಸಬೇಕಾದುದು ಎಲ್ಲವನ್ನೂ ನಿಯಂತ್ರಿಸುವ ಆ ಭಗವಂತನನ್ನೇ ಹೊರತು ಬೇರೇನನ್ನೂ ಅಲ್ಲ. ಭಗವಂತನನ್ನು ಬಿಟ್ಟು ಸ್ವತಂತ್ರವಾಗಿ ಯಾವ ದೇವತೆಗಳಾಗಲೀ, ಜೀವಜಾತಗಳಾಗಲೀ ಇಲ್ಲಾ.  ಈ ಪ್ರಪಂಚದಲ್ಲಿನ ಎಲ್ಲವೂ ಭಗವಂತನಿಂದಲೇ ಬಂದವುಗಳು. ಅದನ್ನು ಅವನಿಗೇ ಅರ್ಪಿಸಿ ಅವನನ್ನು ನಾವು ಪೂಜಿಸಬೇಕು” ಎಂದು ಚತುರ್ಮುಖ ನಾರದರಿಗೆ ವಿವರಿಸುತ್ತಾನೆ.

ಸೃಷ್ಟಿ-ಸ್ಥಿತಿ-ಸಂಹಾರಗಳಿಗೆ ಇನ್ನ್ಯಾರೋ ಹೊಣೆಗಾರರಲ್ಲ. ಎಲ್ಲವುದರ ಹಿಂದೆ ಆ ಭಗವಂತನಿದ್ದಾನೆ. ಪ್ರಪಂಚದಲ್ಲಿರುವ ಎಲ್ಲವೂ ಅವನಲ್ಲೇ ಇರುವಂತಹದ್ದು. ಆದ್ದರಿಂದ ನಾವು ಹೊರಗಿಂದ ಆತನಿಗೆ ಕೊಡುವಂತಹದ್ದು ಏನೂ ಇಲ್ಲಾ. “ನೀನು ನೀಡಿರುವುದನ್ನು ನಿನಗೆ ಅರ್ಪಿಸಿದ್ದೇನೆ. ನೀನು ನನ್ನನ್ನು ಉದ್ಧರಿಸು” ಎಂದು ಭಗವಂತನಿಗೆ ನಮ್ಮ ಇಡೀ ಬದುಕನ್ನು ಅರ್ಪಿಸಿಕೊಳ್ಳುವುದೇ ಒಂದು ಮಹಾಯಜ್ಞ. ಇದೇ ಸೃಷ್ಟಿಯ ಆದಿಯಿಂದ ಅಂತ್ಯದ ತನಕ ನಿರಂತರ ನಡೆಯಬೇಕಾದ ಮಹಾಪೂಜೆ. ಇದು ದ್ರವ್ಯಗಳಿಂದಲೇ ಮಾಡಬೇಕಾಗಿರುವ ಯಜ್ಞವಲ್ಲ. ಇದೊಂದು ಮಾನಸಪೂಜೆ. ಹಸುವಿಗೆ ತಿನ್ನಲು ಚಿಗುರನ್ನು ನೀಡುವ ವಸಂತಕಾಲವೇ ನಿನಗೆ ತುಪ್ಪ; ಬೇಸಿಗೆಯಲ್ಲಿ ಒಣಗುವ ಮರಗಳೇ  ನಿನ್ನ ಯಜ್ಞದ ಕಟ್ಟಿಗೆ; ಶರತ್ಕಾಲದಲ್ಲಿ ಸಂಗ್ರಹಿಸುವ ಹೊಸ ದಾನ್ಯಗಳೇ ನಿನಗೆ ಹವಿಸ್ಸು; ಎಲ್ಲಾ ಕಾಲದ ಸಂಪತ್ತೂ ನಿನ್ನದೇ ಮತ್ತು ಅದು ನಿನಗೆ ಅರ್ಪಿತ ಎಂದು ಸಮಸ್ತ ವೇದಸಾರವಾದ ಪುರುಷಸೂಕ್ತದ ಅನುಸಂಧಾನದೊಂದಿಗೆ ನಾವು ಅಂದಿಗೂ ಇಂದಿಗೂ ಎಂದೆಂದಿಗೂ ಮಾಡಬೇಕಾದ ನಿತ್ಯಯಜ್ಞವಿದು.

No comments:

Post a Comment