ನ ಭಾರತೀ
ಮೇSಙ್ಗ ಮೃಷೋಪಲಕ್ಷ್ಯತೇ ನ ಕರ್ಹಿಚಿನ್ಮೇ ಮನಸೋ ಮೃಷಾ ಗತಿಃ ।
ನ ಮೇ
ಹೃಷೀಕಾಣಿ ಪತಂತ್ಯಸತ್ಪಥೇ ಯನ್ಮೇ ಹೃದೌತ್ಕಂಠ್ಯವತಾ ಧೃತೋ ಹರಿಃ ॥೩೩॥
ನಾರದರಿಗೆ ಸೃಷ್ಟಿ ರಹಸ್ಯವನ್ನು ವಿವರಿಸುತ್ತಿರುವ ಚತುರ್ಮುಖ ಇಲ್ಲಿ ಒಂದು ರೋಚಕವಾದ
ಮಾತನ್ನಾಡುತ್ತಾನೆ: “ನಾನೆಂದೂ ಹುಸಿ ನುಡಿಯುವುದಿಲ್ಲ ಮತ್ತು ನನ್ನ ನುಡಿ ಎಂದೂ ಹುಸಿ
ಆಗುವುದಿಲ್ಲ” ಎನ್ನುತ್ತಾನೆ ಚತುರ್ಮುಖ.
ಸಾಮಾನ್ಯವಾಗಿ ನಾವು ಹಿಂದೆ ನಡೆದಿದ್ದನ್ನು ಕಷ್ಟಪಟ್ಟು ನಮ್ಮ ತಿಳುವಳಿಕೆಯ ಮಟ್ಟದಲ್ಲಿ ಸತ್ಯ
ನುಡಿಯಬಹುದು. ಆದರೆ ಮುಂದಿನದನ್ನು ಸತ್ಯವಾಗಿಸುವುದು ನಮ್ಮ ಕೈಯಲ್ಲಿರುವುದಿಲ್ಲ. ಉದಾಹರಣೆಗೆ
ನಾವು ಒಬ್ಬರಿಗೆ “ಮುಂದೆ ಎಲ್ಲವೂ
ಒಳ್ಳೆಯದಾಗುತ್ತದೆ” ಎನ್ನುತ್ತೇವೆ. ಆದರೆ ಅಲ್ಲಿ ಒಳ್ಳೆಯದಾಗದೇ ಕೆಟ್ಟದ್ದೂ ಆಗುವ
ಸಾಧ್ಯತೆಗಳಿವೆ. ಆದರೆ ಚತುರ್ಮುಖನ ಮಾತು ಹಾಗಲ್ಲ.
ಹಿಂದೆ ನಡೆದಿದ್ದರಲಿ ಅಥವಾ ಮುಂದಿನ ಭವಿಷ್ಯವಿರಲಿ. ಆತನ ಮಾತೆಂದೂ ಹುಸಿಯಾಗದು.
ಸಾಮಾನ್ಯ ಮನುಷ್ಯರು ವಿಷಯಗಳಿಗೆ ಬೇಕಾದ ಶಬ್ದಗಳನ್ನೂ ಹುಡುಕಿ ಮಾತನಾಡುತ್ತಾರೆ. ಆದರೆ
ಜ್ಞಾನಿಗಳು ಮಾತನಾಡಿದ್ದಕ್ಕೆ ಸರಿಯಾಗಿ ಅರ್ಥ ಬಂದು ಕೂಡುತ್ತದೆ. ಅವರು ಏನು ನುಡಿಯುತ್ತಾರೋ ಅದೇ
ನಡೆಯುತ್ತದೆ. ಉತ್ತರ ರಾಮಚರಿತದಲ್ಲಿ ಭವಭೂತಿ ಇದೇ ಮಾತನ್ನು ಹೇಳುವುದನ್ನು ನಾವು ಕಾಣುತ್ತೇವೆ: ಲೌಕಿಕಾನಾಂ ಹಿ
ಸಾಧೂನಾಂ ಅರ್ಥಂ ವಾಕ್ ಅನುವರ್ತತೇ । ಋಷೀನಾಂ
ಪುನರಾದ್ಯಾನಾಂ ವಾಚಂ ಅರ್ಥೋನುಧಾವತಿ ॥
“ಕೇವಲ ಮಾತಷ್ಟೇ ಅಲ್ಲ, ನನ್ನ ಮನಸ್ಸೂ ಕೂಡಾ ಎಂದೂ ಅಲ್ಲದ್ದನ್ನು, ಇಲ್ಲದ್ದನ್ನು ಮತ್ತು
ಸಲ್ಲದ್ದನ್ನು ಯೋಚಿಸುವುದಿಲ್ಲ; ಇಂದ್ರಿಯಗಳು ಎಂದೆಂದಿಗೂ ತಪ್ಪುದಾರಿಯಲ್ಲಿ ಸಾಗುವುದಿಲ್ಲ”
ಎನ್ನುತ್ತಾನೆ ಚತುರ್ಮುಖ. ಎಲ್ಲಕ್ಕೂ
ಮುಖ್ಯವಾದುದು ಮನಸ್ಸಿನ ನಿಯಂತ್ರಣ ಮತ್ತು ಶುದ್ಧತೆ. ನಮ್ಮ ಇಂದ್ರಿಯಗಳು ಕುದುರೆಗಳಿದ್ದಂತೆ
ಹಾಗೂ ನಮ್ಮ ಮನಸ್ಸು ಅದರ ಕಡಿವಾಣವಿದ್ದಂತೆ. ಮನಸ್ಸು ನಮ್ಮ ನಿಯಂತ್ರಣದಲ್ಲಿದ್ದಾಗ ಇಂದ್ರಿಯಗಳು ದಾರಿತಪ್ಪುವ
ಪ್ರಶ್ನೆಯೇ ಇಲ್ಲ. ಒಟ್ಟಿನಲ್ಲಿ “ನನ್ನ ಮನಸ್ಸು
ಮತ್ತು ಇಂದ್ರಿಯಗಳು ತಪ್ಪು ದಾರಿಯಲ್ಲಿ ಸಾಗುವುದಿಲ್ಲ, ಬಾಯಿ ತಪ್ಪನ್ನು ನುಡಿಯುವುದಿಲ್ಲ, ನಾನು
ನುಡಿದದ್ದು ಸುಳ್ಳಾಗುವುದಿಲ್ಲಾ. ನಾನು ಕಾಯೇನ-ವಾಚಾ-ಮನಸಾ ಶುದ್ಧ ಮತ್ತು ಸತ್ಯ” ಎಂದಿದ್ದಾನೆ
ಚತುರ್ಮುಖ.
ಚತುರ್ಮುಖನ ಈ ಮೇಲಿನ ಮಾತುಗಳು ಆತ ಹೆಗ್ಗಳಿಕೆಯಿಂದ ಆಡಿದ ಮಾತುಗಳಲ್ಲ. ತಾನು ಏಕೆ
ಹೀಗಿದ್ದೇನೆ ಎನ್ನುವುದನ್ನೂ ಆತ ಇಲ್ಲಿ ವಿವರಿಸಿದ್ದಾನೆ. ಚತುರ್ಮುಖ ಹೇಳುತ್ತಾನೆ: “ಇವೆಲ್ಲವೂದಕ್ಕೂ
ಕಾರಣ ನನ್ನೊಳಗೆ ತುಂಬಿರುವ ಭಗವಂತ. ನಾನು ನನ್ನ ಹೃದಯದಲ್ಲಿ ತುಂಬಿರುವ ಹರಿಯನ್ನು ಸದಾ ಉತ್ಕಂಠ್ಯದಿಂದ
ಚಿಂತನೆ ಮಾಡುತ್ತಿರುತ್ತೇನೆ” ಎಂದು. ಸದಾ ಭಕ್ತಿಯಿಂದ ಭಗವದ್ ಚಿಂತನೆ ಮಾಡುವವನಿಗೆ ಕೆಟ್ಟದ್ದನ್ನು
ಯೋಚಿಸಲು ಸಾಧ್ಯವಿಲ್ಲಾ, ಕೆಟ್ಟದ್ದನ್ನು ಆಡಲು ಸಾಧ್ಯವಿಲ್ಲಾ. ಭಗವಂತನನ್ನೇ ಸರ್ವಸ್ವವಾಗಿರಿಸಿಕೊಂಡಿರುವ
ವ್ಯಕ್ತಿ ಆಡುವ ಮಾತು ಸುಳ್ಳಾಗದು. “ನಾನು ನಿರಂತರ ಭಗವಂತನನ್ನು ನೋಡುತ್ತಾ
ಆರಾಧಿಸುತ್ತಿರುತ್ತೇನೆ. ಆತ ನನ್ನಲ್ಲೂ ತುಂಬಿದ್ದಾನೆ, ಸರ್ವಸಾಕ್ಷಿಯಾಗಿ ಎಲ್ಲೆಡೆ ತುಂಬಿ
ಎಲ್ಲವನ್ನೂ ನೋಡುತ್ತಿದ್ದಾನೆ ಎನ್ನುವ ಅರಿವು ನನ್ನಲ್ಲಿದೆ” ಎಂದಿದ್ದಾನೆ ಚತುರ್ಮುಖ. ಇದು ಬಹಳ
ಮುಖ್ಯವಾದ ಮಾತು ಅನನ್ಯಯೋಗೇನ ಭಕ್ತಿಃ ಅವ್ಯಭಿಚಾರಿಣೀ ಎಂದು ಶ್ರೀಕೃಷ್ಣ ಗೀತೆಯಲ್ಲಿ ಹೇಳುವಂತೆ, ಅನನ್ಯವಾದ ಭಗವದ್ಭಕ್ತಿ ಇಲ್ಲದೆ ಪೂರ್ಣ ಪ್ರಾಮಾಣಿಕತೆ
ಸಾಧ್ಯವಿಲ್ಲಾ. ಭಗವಂತ ನನ್ನಲ್ಲೂ ತುಂಬಿದ್ದಾನೆ ಮತ್ತು ಎಲ್ಲೆಲ್ಲೂ ತುಂಬಿದ್ದಾನೆ ಎನ್ನುವ ಅರಿವು
ಗಟ್ಟಿಗೊಂಡಾಗ ನಿಜವಾದ ಪ್ರಾಮಾಣಿಕತೆಯ ಅರ್ಥ ನಮಗಾಗುತ್ತದೆ. ಭಗವದ್ ಪ್ರಜ್ಞೆಯಿಂದ ಬರುವ ನೈತಿಕತೆ
ಮಾತ್ರ ಸಹಜವಾದುದು.
No comments:
Post a Comment