ಸ ಏಷ ಆದ್ಯಃ
ಪುರುಷಃ ಕಲ್ಪೇಕಲ್ಪೇ ಸೃಜತ್ಯಜಃ ।
ಆತ್ಮಾSSತ್ಮನ್ಯಾತ್ಮನಾSSತ್ಮಾನಂ
ಸ ಸಂಯಚ್ಛತಿ ಪಾತಿ ಚ ॥೩೮॥
ಚತುರ್ಮುಖ ಹೇಳುತ್ತಾನೆ: “ಭಗವಂತನ ಬಗೆಗೆ ಸಂಪೂರ್ಣ ತಿಳಿದಿಲ್ಲ, ಆದರೆ ಇಷ್ಟು ಮಾತ್ರ ತಿಳಿದಿದೆ: ಭಗವಂತ ಪ್ರತಿಕಲ್ಪದಲ್ಲೂ
ಒಬ್ಬ ಚತುರ್ಮುಖನನ್ನು ಸೃಷ್ಟಿ ಮಾಡುತ್ತಾನೆ. ಆತ ದೇವತೆಗಳನ್ನು ಸೃಷ್ಟಿ ಮಾಡುತ್ತಾನೆ, ಮನುಷ್ಯ-ಪ್ರಾಣಿ-ಪಕ್ಷಿ-ಜಂತುಗಳನ್ನು-ಲೋಕಗಳನ್ನು
ಸೃಷ್ಟಿ ಮಾಡುತ್ತಾನೆ. ಹೀಗೆ ಪ್ರತಿ ಕಲ್ಪದಲ್ಲೂ ಒಬ್ಬ ಚತುರ್ಮುಖ ಪದವಿಗೆ ಬರುತ್ತಾನೆ” ಎಂದು. ಚತುರ್ಮುಖನ ಈ ಮಾತಿನಲ್ಲಿ ನಮಗೆ ಸ್ಪಷ್ಟವಾಗಿ ತಿಳಿಯುವುದೇನೆಂದರೆ
“ತನ್ನ ಪದವಿ ಶಾಶ್ವತವಲ್ಲ, ಇದು ಕೇವಲ ಒಂದು ಬ್ರಹ್ಮಕಲ್ಪಕ್ಕೆ ಸೀಮಿತ” ಎನ್ನುವ ಸಂಪೂರ್ಣ ಅರಿವು
ಚತುರ್ಮುಖನಿಗಿದೆ. ಆದರೆ ಮಾನವರಾದ ನಾವು ಯಾವುದೋ
ಒಂದು ಪದವಿ ಸಿಕ್ಕಾಗ ಆ ಪದವಿಗೆ ಅಂಟಿಕೊಂಡು ಅಹಂಕಾರಿಗಳಾಗಿ
ಕಾರ್ಯ ನಿರ್ವಹಿಸುತ್ತೇವೆ. ಅಲ್ಲಿ ನಮಗೆ ನಿವೃತ್ತಿ
ಭಯಂಕರವಾಗಿ ಕಾಣಲಾರಂಭಿಸುತ್ತದೆ. ಆದರೆ ನಿಜವಾದ ಪ್ರವೃತ್ತಿ ಪ್ರಾರಂಭವಾಗುವುದು ನಿವೃತ್ತಿಯ ನಂತರ.
ವೃತ್ತಿ ಕಾಲದಲ್ಲಿ ನಮ್ಮ ಪಾಲಿಗೆ ಬಂದ ಕರ್ತವ್ಯ ಕರ್ಮವನ್ನು ಪ್ರಾಮಾಣಿಕವಾಗಿ ಮಾಡಿ, ನಿವೃತ್ತಿಯ
ನಂತರ ಭಗವದ್ ಚಿಂತನೆಯಲ್ಲಿ ನಾವು ಪ್ರವೃತ್ತಿ ಬೆಳೆಸಿಕೊಳ್ಳಬೇಕು. “ನಿವೃತ್ತಿಯಲ್ಲಾದರೂ ನಿನ್ನತ್ತ
ಹೊರಳುವ ಅವಕಾಶ ಕೊಟ್ಟೆಯಲ್ಲಾ ಭಗವಂತಾ” ಎಂದು ಯೋಚಿಸಿದರೆ ನಿವೃತ್ತಿ ಎನ್ನುವುದು ಒಂದು ಆನಂದದ ಅನುಭವವಾಗುತ್ತದೆ.
ಜೀವನದಲ್ಲಿ ಯಾವುದು ಅನಿವಾರ್ಯವೋ ಅದರ ಒಳ್ಳೆಯತನವನ್ನು ಗ್ರಹಿಸಿ ಆನಂದ ಪಡಬೇಕೇ ವಿನಃ ದುಃಖಪಡುವುದಲ್ಲ.
ಎಲ್ಲರನ್ನೂ ಸೃಷ್ಟಿಸುವ ಭಗವಂತ ‘ಅಜಃ’. ಅಂದರೆ ಹುಟ್ಟಿಲ್ಲದವನು. ಆತ ಜಗತ್ತಿನ ಮೊಟ್ಟಮೊದಲ ‘ಪುರುಷ’.
ಆತ ಯಾರೂ ಇಲ್ಲದೇ ಇರುವಾಗ ಇದ್ದ ಪುರುಷ. ಎಲ್ಲರಿಗೂ ಆದಿಮೂಲನಾಗಿರುವ ಪುರುಷ. ಬ್ರಹ್ಮಾಂಡ-ಪಿಂಡಾಂಡದಲ್ಲಿ
ತುಂಬಿ, ಈ ಪುರವನ್ನು(ಬ್ರಹ್ಮಾಂಡ- ಪಿಂಡಾಂಡವನ್ನು) ಸಂಪೂರ್ಣ ತಿಳಿದ ಪುರುಷ.
ಪ್ರತೀ ಕಲ್ಪದಲ್ಲಿ ಭಗವಂತ ತನ್ನನ್ನು ತಾನು ಸೃಷ್ಟಿ ಮಾಡಿಕೊಂಡು ಅನೇಕ ಅವತಾರಗಳಿಂದ, ಅನೇಕ ವಿಭೂತಿರೂಪಗಳಿಂದ
ಕಾಣಿಸಿಕೊಳ್ಳುತ್ತಾನೆ. ಭಗವಂತ ತಾನೇ, ತನ್ನ ಅಧಿಷ್ಠಾನದಲ್ಲೇ, ತನ್ನಿಂದಲೇ(ಸ್ವಂತ ಇಚ್ಛೆಯಿಂದ),
ತನ್ನನ್ನೇ ಸೃಷ್ಟಿ ಮಾಡಿಕೊಳ್ಳುತ್ತಾನೆ. ಏನೂ ಇಲ್ಲದೇ ಇದ್ದಾಗ ನಾರಾಯಣನಿದ್ದ. ಆತ ಸಮಸ್ತ ಜೀವಾಣುಗಳನ್ನು
ತನ್ನ ಉದರದಲ್ಲಿ ಧರಿಸಿ, ಪ್ರಕೃತಿಯ ಸೂಕ್ಷ್ಮಾಣು
ಸಮುದ್ರ (ಪ್ರಳಯ-ಸಮುದ್ರ)ದಲ್ಲಿ ಪವಡಿಸಿದ್ದ. ಭಗವಂತನ ದಾಂಪತ್ಯ ಪ್ರಕೃತಿಮಾತೆ ಶ್ರೀಲಕ್ಷ್ಮಿಯೊಂದಿಗೆ.
ಇಂಥಹ ಪುರುಷ=ಪ್ರಕೃತಿ ದಾಂಪತ್ಯದಲ್ಲಿ ಹುಟ್ಟಿದವ ಚತುರ್ಮುಖ. ಹೀಗೆ ಪ್ರತೀ ಕಲ್ಪದಲ್ಲಿ, ಪ್ರತೀ ಮನ್ವಂತರದಲ್ಲಿ,
ಪ್ರತೀ ಯುಗದಲ್ಲಿ ಭಗವಂತ ಅವತರಿಸಿ ಬರುತ್ತಾನೆ. ಅಥವಾ ತನ್ನ ಅಸ್ತಿತ್ವವನ್ನು ಜನರಿಗೆ ತಿಳಿಸುವ ಜ್ಞಾನದ
ಸೃಷ್ಟಿ ಮಾಡುತ್ತಾನೆ. ಆಚಾರ್ಯ-ಮಹಾಪುರುಷರನ್ನು ಕಳುಹಿಸಿ ಸತ್ಯದ ಆವಿಷ್ಕಾರ ಮಾಡುತ್ತಾನೆ ಭಗವಂತ.
No comments:
Post a Comment