ವಿಶುದ್ಧಂ ಕೇವಲಂ ಜ್ಞಾನಂ ಪ್ರತ್ಯಕ್ ಸಮ್ಯಗವಸ್ಥಿತಮ್ ।
ಸತ್ಯಂ ಪೂರ್ಣಮನಾದ್ಯಂತಂ ನಿರ್ಗುಣಂ ನಿತ್ಯಮದ್ವಯಮ್ ॥೩೯॥
ಋತಂ ವಿಂದಂತಿ ಮುನಯಃ ಪ್ರಶಾಂತಾತ್ಮೇಂದ್ರಿಯಾಶಯಾಃ ।
ಯದಾ ತದೈವಾಸತ್ತರ್ಕೈಸ್ತಿರೋಧೀಯೇತ ವಿಪ್ಲುತಮ್ ॥೪೦॥
ಇಲ್ಲಿ ಚತುರ್ಮುಖ ತಾನು ನಿರಂತರ ಹೃದಯದಲ್ಲಿ
ಕಾಣುವ ಭಗವಂತನ ವರ್ಣನೆ ಮಾಡುವುದನ್ನು ಕಾಣುತ್ತೇವೆ. ಭಗವಂತ ‘ವಿಶುದ್ಧಃ’ ಅಂದರೆ ಅವನಿಗೆ ದೋಷದ ಸ್ಪರ್ಶವಿಲ್ಲ. ಆತ ಅತ್ಯಂತ ಪವಿತ್ರ. “ಸಾಕ್ಷೀ
ಚೇತಾ ಕೇವಲೋ ನಿರ್ಗುಣಶ್ಚ” ಭಗವಂತನೊಬ್ಬನೇ ಪೂರ್ಣ ಶುದ್ಧ, ಪವಿತ್ರ. ಆತನನ್ನು ಬಿಟ್ಟು
ಅಂತಹದ್ದೇ ಇನ್ನೊಂದಿಲ್ಲ. ಏಕೆಂದರೆ: ಆತ ಜ್ಞಾನಸ್ವರೂಪ.
ಎಲ್ಲಾ ಅಶುದ್ಧತೆಯನ್ನೂ ಸುಡುವ ಜ್ಞಾನಶಕ್ತಿ ಆ ಭಗವಂತ.
ಅಂತಹ ಭಗವಂತನನ್ನು ನಾವು ಎಲ್ಲೋ ಹುಡುಕುವ ಅಗತ್ಯವಿಲ್ಲ. ಏಕೆಂದರೆ ಆತ ನಮ್ಮ ಅಂತರ್ಯಾಮಿಯಾಗಿ ನಮ್ಮೊಳಗೇ ತುಂಬಿದ್ದಾನೆ.
ಭಗವಂತ ಎಲ್ಲೇ ಇದ್ದರೂ ಕೂಡಾ ದೋಷದ ಸ್ಪರ್ಶ ಅವನಿಗಿಲ್ಲ. ಎಲ್ಲಾ ಮಂಗಲದ ನೆಲೆ, ಜ್ಞಾನಾನಂದ ಸ್ವರೂಪ
ಆ ಭಗವಂತ. ಮುಕ್ತರು-ಅಮುಕ್ತರು, ಆನಂದದಲ್ಲಿರುವವರು, ದುಃಖಿಗಳು, ಹೀಗೆ ಎಲ್ಲರಿಗೂ ನೆಲೆ ಆ ಭಗವಂತ.
ಜಗತ್ತಿನ ಸೃಷ್ಟಿ-ಸ್ಥಿತಿ-ಸಂಹಾರಕ್ಕೆ ಕಾರಣ ಆ ಭಗವಂತ. ಆತನೊಬ್ಬನೇ ಈ ಪ್ರಪಂಚದಲ್ಲಿ ಪೂರ್ಣ,
ಉಳಿದಿದೆಲ್ಲವೂ ಅಪೂರ್ಣ.
ಭಗವಂತನಿಗೆ ಆದಿ-ಅಂತ್ಯ ಎನ್ನುವುದಿಲ್ಲ. ಆದಿ-ತುದಿ ಎನ್ನುವುದು, ಹುಟ್ಟು-ಸಾವು ಎನ್ನುವುದು
ಗುಣತ್ರಯಗಳ ಸ್ಪರ್ಶದಿಂದ ಬರುವಂತಹದ್ದು. ಜೀವ ಅನಾದ್ಯಂತವಾದರೂ ಕೂಡಾ, ಆತನಿಗೆ ತ್ರೈಗುಣ್ಯದ ಸ್ಪರ್ಶವಿರುವ
ದೇಹ ಬಂದು ಹೋಗುತ್ತಿರುತ್ತದೆ. ಆದರೆ ಭಗವಂತನಿಗೆ ಎಂದೂ ತ್ರೈಗುಣ್ಯಗಳ ಸ್ಪರ್ಶವಿಲ್ಲ. ಇಂಥಹ ಭಗವಂತನಿಗೆ
ಸಾಟಿಯಾದ ಇನ್ನೊಂದು ಶಕ್ತಿ ಇಂದೂ ಇಲ್ಲಾ, ಇನ್ನೆಂದಿಗೂ ಇಲ್ಲಾ. ಭಗವಂತ ತನಗೆ ಮಾತ್ರ ತಾನು ಪೂರ್ಣ ತಿಳಿದವನು. ಆತನನ್ನು ಇತರರು
ಎಂದೆಂದಿಗೂ ಪೂರ್ಣವಾಗಿ ತಿಳಿಯಲು ಸಾಧ್ಯವಿಲ್ಲಾ. ಭಗವಂತನ ಕುರಿತು ಈ ಎಲ್ಲಾ ವಿಷಯವನ್ನು ಅರಿತವನು
ಆತನನ್ನು ಸಾಕ್ಷಾತ್ಕರಿಸಿಕೊಳ್ಳಬಲ್ಲ.
ನಮ್ಮ ದೇಹ-ಮಾತು-ಮನಸ್ಸು ಎಲ್ಲವೂ ಪ್ರಶಾಂತವಾಗಿ ಭಗವಂತನಲ್ಲಿ ನೆಲೆಗೊಳ್ಳಬೇಕು. ದೇಹ ಭಗವಂತನ
ಆರಾಧನೆಗೊಸ್ಕರ, ಇಂದ್ರಿಯಗಳು ಭಗವಂತನ ಅರಿವಿಗೋಸ್ಕರ, ಮನಸ್ಸು ಭಗವಂತನ ಚಿಂತನೆಗೋಸ್ಕರ, ಹೀಗೆ ಸರ್ವಸ್ವವೂ
ಭಗವನ್ಮಯವಾದಾಗ ಸತ್ಯದ ಸಾಕ್ಷಾತ್ಕಾರವಾಗುತ್ತದೆ. ಆಗ ಮನಸ್ಸಿನಲ್ಲಿನ ಗೊಂದಲ ಪರಿಹಾರವಾಗುತ್ತದೆ.
ಅರ್ಥಶೂನ್ಯವಾದ ಪ್ರಾಪಂಚಿಕ ತರ್ಕಗಳಿಂದ ಗೊಂದಲಕ್ಕೊಳಗಾದ ಮನಸ್ಸು ಸ್ವಚ್ಛವಾಗುತ್ತದೆ. ಭಗವಂತನ ಅರಿವು
ಬರಲು, ಎಲ್ಲಾ ಗೊಂದಲಗಳಿಂದ ಪಾರಾಗಲು, ನಾವು ಭಗವಂತನಲ್ಲಿ ಶರಣಾಗಬೇಕು. ಸತ್ಯದ ಅರಿವು ಕೊಡು ಎಂದು
ಆತನನ್ನು ಪ್ರಾರ್ಥಿಸಬೇಕು. ಸತ್ಯವನ್ನು ನಾವೇ ಆವಿಷ್ಕಾರ
ಮಾಡುತ್ತೇವೆ ಎಂದರೆ ಅದು ಸಾಧ್ಯವಿಲ್ಲ. ಅದನ್ನು ಭಗವಂತ ನಮ್ಮ ತಲೆಯಲ್ಲಿ ಹೊಳೆಸಬೇಕು(Intuitive flash, ನ್ಯೂಟನ್ ನಿಗೆ ಸೇಬುಹಣ್ಣು ಬಿದ್ದಾಗ ವಿಷಯ ಹೊಳೆದಂತೆ,
ಆರ್ಕೀಮೆಡಿಸ್ ನಿಗೆ ನೀರಿನತೊಟ್ಟಿಯಲ್ಲಿ ವಿಷಯ ಹೊಳೆದಂತೆ). ಹೀಗೆ ಭಗವಂತನಿಂದ ಬರುವ ಅರಿವು ನಮ್ಮನ್ನು
ಎಲ್ಲಾ ಗೊಂದಲಗಳಿಂದ ಪಾರು ಮಾಡಬಲ್ಲದು.
No comments:
Post a Comment