ಬ್ರಹ್ಮೋವಾಚ--
ಯತ್ರೋದ್ಯತಃ
ಕ್ಷಿತಿತಲೋದ್ಧರಣಾಯ ಬಿಭ್ರತ್ ಕ್ರೌಡೀಂ ತನುಂ ಸಕಲಯಜ್ಞಮಯೀಮನಂತಃ ।
ಅಂತರ್ಮಹಾರ್ಣವ
ಉಪಾಗತಮಾದಿದೈತ್ಯಂತಂ ದಂಷ್ಟ್ರಯಾSದ್ರಿಮಿವ ವಜ್ರಧರೋ ದದಾರ ॥೦೧॥
ಸ್ವಾಯಭುವ ಮನ್ವಂತರದ ವರಾಹ ಅವತಾರವನ್ನು ವಿವರಿಸುತ್ತಾ ಚತುರ್ಮುಖ ಹೇಳುತ್ತಾನೆ: “ಭೂಮಿ ಕಕ್ಷೆಯಿಂದ
ಕಳಚಿ ನಾಶವಾಗುವ ಸಂದರ್ಭದಲ್ಲಿ ಭಗವಂತ ವರಾಹ ಅವತಾರಿಯಾಗಿ ಬಂದು ಭೂಮಿಯನ್ನು ರಕ್ಷಿಸಿದ ಮತ್ತು
ತಡೆಯಲು ಬಂದ ಆದಿದೈತ್ಯ ಹಿರಣ್ಯಾಕ್ಷನನ್ನು ಇಂದ್ರ ವಜ್ರಾಯುಧದಿಂದ ಪರ್ವತವನ್ನು
ಭೇದಿಸಿದಂತೆ ವರಾಹ ತನ್ನ ಕೋರೆದಾಡೆಯಿಂದ ಸೀಳಿ ಕೊಂದ” ಎಂದು.
ಭಗವಂತನ ಈ ಅವತಾರದಲ್ಲಿ ಇನ್ನೊಂದು ವಿಶೇಷವಿರುವುದನ್ನು ಈ ಶ್ಲೋಕ ವಿವರಿಸುತ್ತದೆ. ಈ
ವರಾಹನನ್ನು ಯಜ್ಞವರಾಹ ಎಂದೂ ಕರೆಯುತ್ತಾರೆ. ಭಗವಂತ ಕೇವಲ ಭೂಮಿಯನ್ನು ಮರಳಿ ಕಕ್ಷೆಯಲ್ಲಿಟ್ಟು
ರಕ್ಷಿಸಿದ್ದಷ್ಟೇ ಅಲ್ಲ, ಆತ ಈ ಅವತಾರದಲ್ಲಿ ತನ್ನ ರೋಮಕೂಪಗಳನ್ನು ಜಾಡಿಸಿ ಯಜ್ಞಕ್ಕೆ ಬೇಕಾದ
ಸಕಲ ಸಲಕರಣೆಗಳನ್ನು ಸೃಷ್ಟಿಮಾಡಿದ. ಹೀಗಾಗಿ ಈತ ಯಜ್ಞ ವರಾಹ ಎಂದು ಹೆಸರಾದ.
ಮೇಲಿನ ಶ್ಲೋಕದಲ್ಲಿ ಚತುರ್ಮುಖ ವರಾಹನನ್ನು ಅನಂತಃ ಎಂದು ಸಂಬೋಧಿಸಿದ್ದಾನೆ. ಏಕೆಂದರೆ: ಈ
ಅವತಾರ ರಾಮ-ಕೃಷ್ಣಾವತಾರಗಳಿಗಿಂತ ಭಿನ್ನ. ಈ
ಹಿಂದೆ ಹೇಳಿದಂತೆ ಸ್ವಾಯಂಭುವ ಮನ್ವಂತರದಲ್ಲಿ ಆದ ವರಾಹ ಅವತಾರವನ್ನು ಭಗವಂತ ಇನ್ನೂ
ಸಮಾಪ್ತಿಗೊಳಿಸಿಲ್ಲ. ಪರಶುರಾಮ, ವೇದವ್ಯಾಸ
ಅವತಾರಗಳಂತೆ ವರಾಹ ಅವತಾರ ಕೂಡಾ ಕಣ್ಮರೆಯಾಗಿ
ಇಂದಿಗೂ ಬ್ರಹ್ಮಾಂಡದಲ್ಲಿದೆ.
No comments:
Post a Comment