Saturday, May 2, 2015

Shrimad BhAgavata in Kannada -Skandha-02-Ch-07(03)

ಯಜ್ಞಾವತಾರದಲ್ಲಿ ದೇವೇಂದ್ರನಾಗಿ ಲೋಕ ರಕ್ಷಣೆ ಮಾಡಿದ ಭಗವಂತ

ಜಾತೋ ರುಚೇರಜನಯತ್ ಸುಯಶಾಃಸುಯಜ್ಞ ಆಕೂತಿಸೂನುರಮರಾನಥ ದಕ್ಷಿಣಾಯಾಮ್
ಲೋಕತ್ರಯಸ್ಯ ಮಹತೀಮಹರದ್ ಯ ಆರ್ತಿಂ ಸ್ವಾಯಂಭುವೇನ ಮನುನಾ ಹರಿರಿತ್ಯನೂಕ್ತಃ ೦೨

ಸ್ವಾಯಂಭುವ ಮನ್ವಂತರದಲ್ಲೇ ನಡೆದ ಭಗವಂತನ ಇನ್ನೊಂದು ಅವತಾರ ಯಜ್ಞಾವತಾರ. ಸ್ವಾಯಂಭುವ ಮನುವಿಗೆ ಮೂರು ಮಂದಿ ಹೆಣ್ಣು ಮಕ್ಕಳು(ಆಕೂತಿ, ದೇವಹೂತಿ ಮತ್ತು ಪ್ರಸೂತಿ) ಮತ್ತು ಇಬ್ಬರು ಗಂಡು ಮಕ್ಕಳು (ಉತ್ತಾನಪಾದ ಮತ್ತು ಪ್ರಿಯವ್ರತ). ಸ್ವಾಯಂಭುವ ಮನುವಿನ ಮಗಳು ಆಕೂತಿಯನ್ನು ರುಚಿಪ್ರಜಾಪತಿ ವಿವಾಹವಾಗುತ್ತಾನೆ ಮತ್ತು ಅವರ ದಾಂಪತ್ಯ ಫಲವಾಗಿ ಅವರಿಗೆ ಯಜ್ಞ ನಾಮಕ ಗಂಡು ಮಗುವಾಗುತ್ತದೆ.  ಆತನೇ ಯಜ್ಞ ನಾರಾಯಣ. ಈ ಯಜ್ಞ ನಾಮಕ ಮಗುವನ್ನು ಸ್ವಾಯಂಭುವ ಮನು ದತ್ತಕ್ಕೆ ಪಡೆಯುತ್ತಾನೆ. ಇದೇ ಸಮಯದಲ್ಲಿ ಶ್ರೀಲಕ್ಷ್ಮಿ ಸಹ   ದಕ್ಷಿಣಾ ಎನ್ನುವ ಹೆಸರಿನಲ್ಲಿ ಲೋಕದಲ್ಲಿ ಅವತರಿಸಿ ಬರುತ್ತಾಳೆ. ಮುಂದೆ  ಯಜ್ಞ ಮತ್ತು ದಕ್ಷಿಣೆಯ ಮದುವೆಯಾಗುತ್ತದೆ ಹಾಗೂ ಅವರಲ್ಲಿ ಆ ಮನ್ವಂತರದ ದೇವತಾಗಣವಾದ ತುಷಿತರ ಸೃಷ್ಟಿಯಾಗುತ್ತದೆ. ಯಜ್ಞ ಆ ಮನ್ವಂತರದ ದೇವೇಂದ್ರನಾಗಿ ದುಷ್ಟ ರಾಕ್ಷಸರನ್ನು ನಿಗ್ರಹಮಾಡಿ  ಲೋಕಕಲ್ಯಾಣ ಮಾಡುತ್ತಾನೆ.
ಇಲ್ಲಿ “ಶ್ರೀಲಕ್ಷ್ಮಿ ದಕ್ಷಿಣಾ ಎನ್ನುವ ಹೆಸರಿನಲ್ಲಿ ಅವತರಿಸಿದಳು” ಎನ್ನುವ ಮಾತನ್ನು ನೋಡಿದೆವು. ಶ್ರೀಲಕ್ಷ್ಮಿಯ ದಕ್ಷಿಣಾ ಎನ್ನುವ ನಾಮಕ್ಕೆ ವಿಶೇಷವಾದ ಅರ್ಥವಿದೆ. ದಕ್ಷ-ಇನಾ=ದಕ್ಷಿಣಾ; ‘ದಕ್ಷ ಭಾಗ ಸ್ಥಿತೇನತ್ವಾತ್ ದಕ್ಷಿಣಾ’. ಅಂದರೆ  ಬಲಬದಿ(ದಕ್ಷ)ಯಲ್ಲಿ ಗಂಡ(ಇನಾ) ಇರುವವಳು ಎಂದರ್ಥ. ವಾ ಭಾರ್ಯಾ ಭಾಗೋ ವಾ ಮೇತಿ ಪ್ರಸಿದ್ಧಃ. ಗಂಡಿನ ಎಡಬದಿಯಲ್ಲಿ ಕುಳಿತವಳನ್ನು ಹೆಂಡತಿ ಎಂದು ಗುರುತಿಸುವುದು ಈ ದೇಶದ  ಸಾಂಸ್ಕೃತಿಕ ಪರಂಪರೆ. ಹೀಗಾಗಿ ನಾರಾಯಣನ ಅರ್ಧಾಂಗಿಯಾಗಿ ಆತನ ಎಡತೊಡೆಯ ಮೇಲೆ ಕುಳಿತಿರುವ  ಶ್ರೀಲಕ್ಷ್ಮಿ ಗೆ ದಕ್ಷಿಣಾ ಎಂದು ಹೆಸರು.
ಸ್ವಾಯಂಭುವ ಮನ್ವಂತರದಲ್ಲಿ  ಒಂದು ವ್ಯವಸ್ಥಿತವಾಗಿರುವಂತಹ ಸಾತ್ವಿಕರ ಜೀವನದ ನಡೆ ರೂಪುಗೊಳ್ಳುವ ಮೊದಲೇ ಆಸುರೀ ಶಕ್ತಿಗಳು ಲೋಕನಾಶ ಮಾಡಬೇಕೆಂದು ಸಂಕಲ್ಪ ಮಾಡಿ, ಅದಕ್ಕೆ ಮುನ್ನುಡಿಯಾಗಿ ಆ ಸಂವತ್ಸರದ ಅಧಿಪತಿಯಾದ ಸ್ವಾಯಂಭುವ ಮನುವನ್ನೇ ಮುಗಿಸಿಬಿಡಬೇಕು ಎನ್ನುವ ಹುನ್ನಾರ ನಡೆಸುತ್ತಿರುತ್ತವೆ. ಆಗ  ಅಸಹಾಯಕನಾದ ಮನು ಲೋಕ ರಕ್ಷಣೆಗಾಗಿ ತಪಸ್ಸನ್ನು ಮಾಡುತ್ತಾನೆ. ತನ್ನ ಮೊಮ್ಮಗನಾಗಿ, ಯಜ್ಞ ನಾಮಕನಾಗಿ  ಅವತರಿಸಿದ ಹರಿಯನ್ನು ಧ್ಯಾನಿಸುತ್ತಾ  ಸ್ವಾಯಂಭುವ ಮನು ಧ್ಯಾನದಲ್ಲಿ ಕಂಡ ಹದಿನೆಂಟು ಮಂತ್ರಗಳೇ ಇಂದು ಈಶಾವಾಸ್ಯೋಪನಿಷತ್ತು ಎಂದು ಕರೆಯಲ್ಪಟ್ಟಿದೆ.  “ಈಶಾವಾಸ್ಯಂ ಇದಂ ಸರ್ವಂ ಯತ್ ಕಿಞ್ಚ ಜಗತ್ಯಾಂ ಜಗತ್,  ತೇನ ತ್ಯಕ್ತೇನ ಭುಞ್ಜಿಥಾಃ ಮಾ ಗೃಧಃ ಕಸ್ಯ ಸ್ವಿತ್ ಧನಮ್ .....” ಎಂದು ಪ್ರಾರಂಭವಾಗುವ ಈ ಉಪನಿಷತ್ತಿನ ನಿಜವಾದ ಹೆಸರು ಯಾಜ್ಞಿಕಮಂತ್ರೋಪನಿಷತ್ತು. “ನೀನು ಏನು ಕರ್ಮವನ್ನು ಮಾಡಿದರೂ ಅದನ್ನೆಲ್ಲವನ್ನೂ ಭಗವಂತನಲ್ಲಿ ಅರ್ಪಿಸಿ ಮಾಡು, ಭಗವದರ್ಪಣ ಬುದ್ಧಿಯಿಂದ ಮಾಡು” ಎನ್ನುವ ಸಂದೇಶದೊಂದಿಗೆ ಯಾಜ್ಞಿಕಮಂತ್ರೋಪನಿಷತ್ತು ಆರಂಭವಾಗುತ್ತದೆ. ಸ್ವಾಯಂಭುವ ಮನು ಏಕೆ ಈ ರೀತಿ ಧ್ಯಾನಿಸಿದ್ದಾನೆ ಎಂದರೆ: ಆತನಿಗೆ ಅಸುರರು ಎಲ್ಲವನ್ನು ನಾಶ ಮಾಡಬೇಕು ಎನ್ನುವ ಸಂಕಲ್ಪ ತೊಟ್ಟ ವಿಷಯ ತಿಳಿದಿತ್ತು. ಆ ಮನ್ವಂತರದ ಅಧಿಪತಿಯಾಗಿ ಭಗವಂತನಿಂದ ನಿಯಮಿಸಲ್ಪಟ್ಟಿದ್ದ ಆತ ಎಲ್ಲವನ್ನೂ ಆ ಭಗವಂತನಿಗೆ ಅರ್ಪಿಸಿ,  “ಎಲ್ಲವೂ ನಿನ್ನಿಚ್ಛೆಯಂತೆಯೇ ಆಗಲಿ” ಎಂದು  ಪ್ರಾರ್ಥಿಸಿದ್ದಾನೆ. ಮುಂದೆ ಭಾಗವತದಲ್ಲೇ ಹೇಳುವಂತೆ: ಅಸುರರು ಮೊತ್ತಮೊದಲು ಸ್ವಾಯಂಭುವ ಮನುವನ್ನೇ  ಕೊಲ್ಲಬೇಕೆಂದು ಹೊಂಚು ಹಾಕಿ ಬಂದರೆ ಆತ “ಪೂಷನ್ನೇಕಋಷೇ ಯಮ ಸೂರ್ಯ ಪ್ರಾಜಾಪತ್ಯ ವ್ಯೂಹ ರಶ್ಮೀನ್ ಸಮೂಹ, ತೇಜೋ ಯತ್ ತೇ ರೂಪಂ ಕಲ್ಯಾಣತಮಂ ತತ್ ತೇ ಪಶ್ಯಾಮಿ, ಯೋsಸಾವಸೌ ಪುರುಷಃ ಸೋsಹಮಸ್ಮಿ ......” ಎಂದು ತನ್ನೊಳಗಿನ ಬಿಂಬರೂಪಿ ಭಗವಂತನನ್ನು ಕಾಣುತ್ತಾ ಆನಂದದಿಂದಿದ್ದಾನೆ! ಈ ರೀತಿ ಬಾಹ್ಯ ಪ್ರಪಂಚದ ಎಚ್ಚರ ಮರೆತು ಕುಳಿತಿರುವ ಮನುವನ್ನು ಯಾರು ಬೇಕಾದರೂ ಸುಲಭವಾಗಿ ಕೊಲ್ಲಬಹುದಿತ್ತು. ಆದರೆ ಹಾಗಾಗುವುದಿಲ್ಲ.  ಅಲ್ಲಿ ಯಜ್ಞನಾಮಕ ಭಗವಂತ ಪ್ರತ್ಯಕ್ಷನಾಗಿ, ಅಸುರರನ್ನು ನಿಗ್ರಹಿಸಿ, ಮೂರು ಲೋಕಗಳನ್ನು ಉದ್ಧರಿಸುತ್ತಾನೆ.
ಇಲ್ಲಿ ಸ್ವಾಯಂಭುವ ಮನು ವೇದ ಮಂತ್ರಗಳಿಂದ ಭಗವಂತನ ಧ್ಯಾನ ಮಾಡುವಾಗ “ಯಜ್ಞ ಕೇವಲ ತನ್ನ ಮೊಮ್ಮಗನಲ್ಲ, ಅವನು ಹರಿ” ಎನ್ನುವ ಅರಿವಿನಿಂದ ಧ್ಯಾನ ಮಾಡಿದ್ದಾನೆ. ಭಾಗವತದ ಈ ಮೇಲಿನ ಶ್ಲೋಕದ ಹಿನ್ನೆಲೆಯೊಂದಿಗೆ ನಾವು ಈಶಾವಾಸ್ಯ ಉಪನಿಷತ್ತಿನ ಮಂತ್ರಗಳನ್ನು ಅರ್ಥ ಮಾಡಿಕೊಂಡರೆ ಈ ವಿಷಯ ಸ್ಪಷ್ಟವಾಗಿ ತಿಳಿಯುತ್ತದೆ. ಈ ವಿಷಯವನ್ನು ಸ್ಪಷ್ಟಪಡಿಸುವುದಕ್ಕೊಸ್ಕರ ಆಚಾರ್ಯ ಮಧ್ವರು ತಮ್ಮ ಉಪನಿಷತ್ ಭಾಷ್ಯದ ಮಂಗಲಾಚರಣೆಯಲ್ಲಿ “ಹರಯೇ ಸರ್ವಯಜ್ಞ ಭುಜೇ ನಮಃ” ಎನ್ನುತ್ತಾರೆ. ಅಲ್ಲಿ ವಿಶೇಷವಾಗಿ ಹರಿ ಎನ್ನುವ ಶಬ್ದದ ಬಳಕೆ  ಏಕೆಂದರೆ: ‘ಸ್ವಾಯಂಭುವೇನ ಮನುನಾ ಹರಿರಿತ್ಯನೂಕ್ತಃ’ “ಸ್ವಾಯಂಭುವ ಮನು ಯಾರನ್ನು ಹರಿ ಎಂದು ಸಾಕ್ಷಾತ್ಕರಿಸಿದನೋ ಅಂತಹ ಹರಿಗೆ ನಮಸ್ಕಾರ” ಎಂದು ಹೇಳುವುದಕ್ಕಾಗಿ. ಹಾಗೆ  ಹೇಳಿ ಆನಂತರ    ಯಸ್ಮಾದ್ಬ್ರಹ್ಮೇನ್ದ್ರರುದ್ರಾದಿದೇವತಾನಾಂ ಶ್ರೀಯೋSಪಿ ಚ, ಜ್ಞಾನಃಸ್ಪೂರ್ತಿಃ ಸದಾ ತಸ್ಮೈಹರಯೇ ಗುರುವೇ ನಮಃ. ಎಂದು “ನನಗೆ ಗುರುವಾದ ಆ ಹರಿಗೆ ನಮಸ್ಕಾರ” ಎಂದಿದ್ದಾರೆ ಆಚಾರ್ಯರು. ಭಾಗವತವನ್ನು ಓದಿ, ಉಪನಿಷತ್ತನ್ನು ನೋಡಿ ಸಮನ್ವಯ ಮಾಡಿದವರಿಗೆ ಈ ವಿಷಯ ಸ್ಪಷ್ಟವಾಗಿ ತಿಳಿಯುತ್ತದೆ.
ಯಜ್ಞ ನಾಮಕ ಭಗವಂತನನ್ನು ಸ್ತೋತ್ರ ಮಾಡುವುದಕ್ಕೋಸ್ಕರ ಸ್ವಾಯಂಭುವ ಮನು ಕಂಡ ಉಪನಿಷತ್ತೇ ಯಾಜ್ಞೇಯಮಂತ್ರೋಪನಿಷತ್ತು ಎನ್ನುವ ವಿಷಯವನ್ನು ನೋಡಿದೆವು. ಇಲ್ಲಿ ನಿಮೊಗೊಂದು ಪ್ರಶ್ನೆ ಬರಬಹುದು. ಅದೇನೆಂದರೆ: ಇತರ  ಉಪನಿಷತ್ತುಗಳೂ ಕೂಡಾ ಮಂತ್ರರೂಪದಲ್ಲಿದ್ದರೂ, ವಿಶೇಷವಾಗಿ ಈ ಉಪನಿಷತ್ತನ್ನು ಮಾತ್ರ ಏಕೆ ಮಂತ್ರೋಪನಿಷತ್ತು ಎಂದು ಕರೆದಿದ್ದಾರೆ ಎಂದು. ಇದಕ್ಕೆ ಒಂದು ವಿಶೇಷ ಕಾರಣವಿದೆ. ವೇದದಲ್ಲಿ ಸಂಹಿತ, ಬ್ರಾಹ್ಮಣ ಮತ್ತು ಆರಣ್ಯಕ ಎನ್ನುವ ಮೂರು ವಿಭಾಗಗಳಿವೆ. ವೇದದ  ಸಂಹಿತಾ ಭಾಗವನ್ನು ಮಂತ್ರ ಭಾಗವಾದರೆ,  ಬ್ರಾಹ್ಮಣ, ಆರಣ್ಯಕ ಪರಿಶಿಷ್ಠ.  ಈಗ ಲಭ್ಯವಿರುವ ಪ್ರಮುಖವಾದ ಒಂಬತ್ತು ಉಪನಿಷತ್ತುಗಳೂ ವೇದದ ಪರಿಶಿಷ್ಠ ಭಾಗದಲ್ಲಿದ್ದರೆ, ಸ್ವಾಯಂಭುವ ಮನು ಕಂಡ, ಯಜ್ಞನಾಮಕ ಭಗವಂತನನ್ನು ಸ್ತುತಿಸುವ ಈ ಉಪನಿಷತ್ತು ಮಾತ್ರ ಕಣ್ವಶಾಖೆಗೆ ಸೇರಿದ ಶುಕ್ಲ ಯಜುರ್ವೇದದ ಸಂಹಿತಾ ಭಾಗದಲ್ಲಿದೆ. ಹೀಗಾಗಿ ವಿಶೇಷವಾಗಿ ಈ ಉಪನಿಷತ್ತಿಗೆ ಮಂತ್ರೋಪನಿಷತ್ತು ಎನ್ನುವ ಹೆಸರು ಬಂದಿದೆ.   ಹೀಗೆ ಸ್ವಾಯಂಭುವ ಮನುವಿನ ಮಗಳ ಮಗನಾಗಿ, ಲೋಕದ ವ್ಯವಸ್ಥೆಯನ್ನು ರಕ್ಷಿಸಲು ಬಂದ ರೂಪ ಭಗವಂತನ ಯಜ್ಞ ನಾಮಕ ರೂಪ. ಇದು ಸ್ವಾಯಂಭುವ ಮನ್ವಂತರದಲ್ಲಿ ನಡೆದ ಭಗವಂತನ  ಎರಡನೇ ಅವತಾರ.  
ಯಜ್ಞ ಎನ್ನುವುದು ಭಗವಂತನ ಎಲ್ಲಾ ರೂಪಗಳಿಗೂ ಅನ್ವಯವಾದ ನಾಮ.  “ಅಹಂ ಹಿ ಸರ್ವಯಜ್ಞಾನಾಂ ಭೋಕ್ತಾ ಚ ಪ್ರಭುರೇವ ಚ” ಎಂದು ಶ್ರೀಕೃಷ್ಣ ಹೇಳಿದಂತೆ,  ಯಜ್ಞ ಶಬ್ದ ವಾಚ್ಯತ್ವ ಭಗವಂತನ ಎಲ್ಲಾ ರೂಪಗಳಿಗೂ ಇದೆ. ಇದನ್ನು ಸರಳೀಕರಿಸಿ ವೇದಗಳು ಹೇಳುತ್ತವೆ: “ಯಜ್ಞೋ ವೈ ವಿಷ್ಣುಃ” ಎಂದು. [ಈ ಶ್ರುತಿಯನ್ನು ನೆನಪಿಸುವುದಕ್ಕೋಸ್ಕರ ಆಚಾರ್ಯ ಮಧ್ವರು ತಮ್ಮ ಈಶಾವಾಸ್ಯ ಉಪನಿಷತ್ ಭಾಷ್ಯದಲ್ಲಿ ಆಕೂತಿಸೂನುಂ ಯಜ್ಞನಾಮಾನಂ ವಿಷ್ಣುಂ ತುಷ್ಟವ ಎಂದಿರುವುದನ್ನು ನಾವಿಲ್ಲಿ ನೆನಪಿಸಿಕೊಳ್ಳಬಹುದು] .ಯಜ್ಞ ಶಬ್ದ ವಾಚ್ಯನಾದವನು ವಿಷ್ಣು. ಏಕೆಂದರೆ ವಿಷ್ಣುವಿನ ಎಲ್ಲಾ ರೂಪಗಳೂ ಯಜ್ಞ ಭೋಕ್ತಾರಗಳೇ. ಆದರೆ ವಿಶೇಷವಾಗಿ ಯಜ್ಞವನ್ನು ಸ್ವೀಕಾರ ಮಾಡುವುದಕ್ಕೋಸ್ಕರವೇ ಆದ ಭಗವಂತನ ಅವತಾರ ಸ್ವಾಯಂಭುವ ಮನ್ವಂತರದಲ್ಲಿ ನಡೆದ ಯಜ್ಞ ನಾಮಕ ಅವತಾರ. 

No comments:

Post a Comment