Sunday, May 24, 2015

Shrimad BhAgavata in Kannada -Skandha-02-Ch-07(11)

ಹಯಗ್ರೀವರೂಪಿಯಾಗಿ ಚತುರ್ಮುಖನಿಗೆ ವೇದೋಪದೇಶ ಮಾಡಿದ ಭಗವಂತ

    ಸತ್ರೇ ಮಮಾಸ ಭಗವಾನ್ ಹಯಶೀರ್ಷ ಏಷಃ ಸಾಕ್ಷಾತ್  ಸ ಯಜ್ಞಪುರುಷಸ್ತಪನೀಯವರ್ಣಃ
    ಛಂದೋಮಯೋ ಮಖಮಯೋಖಿಲದೇವತಾತ್ಮಾ ವಾಚೋ ಬಭೂವುರುಶತೀಃ ಶ್ವಸತೋSಸ್ಯ ನಸ್ತಃ ೧೧

ಚತುರ್ಮುಖನಿಗೆವೇದೋಪದೇಶ ಮಾಡಿದ ಭಗವಂತನ ಅವತಾರ ಹಯಗ್ರೀವ ಅವತಾರ. ಇಲ್ಲಿ ಚತುರ್ಮುಖ ಹೇಳುತ್ತಾನೆ: “ ನಾನು ಭಗವಂತನನ್ನು ಯಜ್ಞದಲ್ಲಿ ಆರಾಧನೆ ಮಾಡಬೇಕು ಎಂದು ಸಂಕಲ್ಪ ಮಾಡಿದಾಗ, ನನ್ನ ಯಜ್ಞವನ್ನು ಸ್ವೀಕರಿಸಲು ಭಗವಂತ ಯಜ್ಞಪುರುಷ ಹಯಗ್ರೀವನಾಗಿ ಕಾಣಿಸಿಕೊಂಡ” ಎಂದು.  ಮುಂದುವರಿದು ಬ್ರಹ್ಮದೇವರು ಹೇಳುತ್ತಾರೆ: ಪುಟಕ್ಕಿಟ್ಟ ಚಿನ್ನದಂತೆ ಹೊಳೆಯುತ್ತಿದ್ದ ಆ ಹಯಗ್ರೀವ ಮೂರ್ತಿಗೆ ನಾನು ಯಜ್ಞದ ಹವಿಸ್ಸನ್ನು ತಿನ್ನಿಸಿದೆ” ಎಂದು.
ಎಲ್ಲಾ ವೇದೋಪದೇಶಗಳೂ ಭಗವಂತನ ಹಯಗ್ರೀವ ರೂಪದಿಂದಲೇ  ಆಗಿರುವುದನ್ನು ನಾವು ಕಾಣುತ್ತೇವೆ.  ಶುಕ್ಲ ಯಜುರ್ವೇದವನ್ನು ಸೂರ್ಯನ ಅಂತರ್ಯಾಮಿಯಾಗಿ ಯಾಜ್ಞವಲ್ಕ್ಯರಿಗೆ ಉಪದೇಶಿಸಿದಾಗಲೂ ಸಹ ಭಗವಂತ ಯಾಜ್ಞವಲ್ಕ್ಯರಿಗೆ ದರ್ಶನ ಕೊಟ್ಟಿದ್ದು ಹಯಗ್ರೀವ ರೂಪದಿಂದಲೇ. ಕುದುರೆ(ಹಯ) ವೇಗದ ಸಂಕೇತ. ಇದು ಮನುಷ್ಯರು ‘ಪ್ರಯಾಣಕ್ಕೆ ಬಳಸುವ ಪ್ರಾಣಿ’ ಗಳಲ್ಲೇ ವೇಗವಾಗಿ ಸಾಗಬಲ್ಲ ಪ್ರಾಣಿ.  ಆಧ್ಯಾತ್ಮಿಕವಾಗಿ ನೋಡಿದರೆ  ವೇದ ಅರ್ಥವಾಗಲು ಬೇಕಾಗಿರುವುದು ಬುದ್ಧಿಶಕ್ತಿಯ ವೇಗ.  ವೇದ ನಮಗೆ ಅರ್ಥವಾಗಬೇಕಾದರೆ ಹತ್ತಾರು ಜನ್ಮಗಳ ಸಾಧನೆ ಬೇಕು. ಭಗವಂತನ ಹಯಗ್ರೀವ ರೂಪ ಬುದ್ಧಿಶಕ್ತಿಯ ವೇಗವನ್ನು  ಪ್ರತಿನಿಧಿಸುವ ರೂಪ ಎನ್ನಬಹುದು.
ಹೊಂಬಣ್ಣದ ಪುತ್ತಳಿಯಂತೆ ಕಾಣಿಸಿಕೊಂಡ ಭಗವಂತ ಚತುರ್ಮುಖನಿಗೆ ಹಯಗ್ರೀವ ರೂಪದಿಂದ ದರ್ಶನ ಕೊಟ್ಟ.  “ಸಮಸ್ತ ವೇದಗಳಿಂದ ಪ್ರತಿಪಾಧ್ಯನಾದ, ಸಮಸ್ತ ಯಜ್ಞಗಳಿಂದ ಆರಾಧ್ಯನಾದ, ಸಮಸ್ತ ದೇವತೆಗಳ ಒಳಗೆ ಅಂತರ್ಯಾಮಿಯಾಗಿ ನೆಲೆಸಿರುವ, ಸರ್ವಶಬ್ದವಾಚ್ಯ ಭಗವಂತ ಹಯಗ್ರೀವ ರೂಪದಲ್ಲಿ ಕಾಣಿಸಿಕೊಂಡು  ನನಗೆ ವೇದೋಪದೇಶ ಮಾಡಿದ” ಎನ್ನುತ್ತಾನೆ ಚತುರ್ಮುಖ. ಯಾವ ರೀತಿ ಕುದುರೆ ವೇದವನ್ನು ಉಪದೇಶ ಮಾಡಬಲ್ಲದು ಎಂದು ನೀವಿಲ್ಲಿ ಪ್ರಶ್ನಿಸಬಹುದು.  ಇದಕ್ಕೆ ಚತುರ್ಮುಖ ಹೇಳುತ್ತಾನೆ: “ ಭಗವಂತನ ಉಸಿರಿನಿಂದ ವೇದ ನನ್ನ ಕಿವಿಗೆ ಹರಿದು ಬಂತು” ಎಂದು. ಹೀಗೆ ಸ್ವಾಯಮ್ಬುವ ಮನ್ವಂತರದಲ್ಲಿ ವಿಶೇಷವಾಗಿ ಚತುರ್ಮುಖನಿಗೆ ಅನುಗ್ರಹ ಮಾಡಿದ ಭಗವಂತನ ರೂಪ ಈ ಹಯಗ್ರೀವ ರೂಪ. ಇಲ್ಲಿಗೆ  ಸ್ವಾಯಂಭುವ ಮನ್ವಂತರದಲ್ಲಿನ ಭಗವಂತನ ಅವತಾರಗಳ ವಿವರಣೆ ಮುಗಿಯಿತು. ಸ್ವಾಯಂಭುವ ಮನ್ವಂತರದಲ್ಲಿನ ಐತರೇಯ ನಾಮಕ ಅವತಾರ ಮತ್ತು ತಾಪಸ ಮನ್ವಂತರದಲ್ಲಿ ಭಗವಂತ ತಾಪಸ ಮನುವಾಗಿ ಅವತರಿಸಿರುವ ವಿವರಣೆಯನ್ನು ಇಲ್ಲಿ ವಿವರಿಸಿಲ್ಲ. ಇದರ ವಿವರಣೆಯನ್ನು ಭಾಗವತದಲ್ಲಿ ಮುಂದಿನ ಸ್ಕಂಧಗಳಲ್ಲಿ ನಾವು ಕಾಣಬಹುದು. ಆದರೆ ಇಲ್ಲಿ  ಇನ್ನು ಮುಂದೆ ನಾವು ವೈವಸ್ವತ ಮನ್ವಂತರದಲ್ಲಿ ನಡೆದಿರುವ ಭಗವಂತನ ಅವತಾರಗಳ ವಿವರಣೆಯನ್ನು ಕಾಣುತ್ತೇವೆ.

No comments:

Post a Comment