Tuesday, June 2, 2015

Shrimad BhAgavata in Kannada -Skandha-02-Ch-07(12)

ಈವರೆಗೆ ಸ್ವಾಯಂಭುವ ಮನ್ವಂತರದಲ್ಲಿ ನಡೆದ ಹಲವು ಅವತಾರಗಳ ವಿವರಣೆಯನ್ನು ನೋಡಿದೆವು. ಇದರಲ್ಲಿ ಕೆಲವು ಅವತಾರಗಳನ್ನು ಪುನಃ ವಿಸ್ತಾರವಾಗಿ ಭಾಗವತ ಮುಂದೆ ವಿವರಿಸುತ್ತದೆ. ಆದರೆ ಇನ್ನು ಕೆಲವು ಅವತಾರಗಳ ವಿವರಣೆ/ಉಲ್ಲೇಖ ಮುಂದೆ ಬರುವುದಿಲ್ಲ. ವಿಶೇಷವಾಗಿ ಭಾಗವತ ಈ ಮನ್ವಂತರದ ದಶಾವತಾರದ ವಿವರಣೆಯನ್ನು ವಿಸ್ತಾರವಾಗಿ ನೀಡುತ್ತದೆ. ದಶಾವತಾರಕ್ಕೆ ಸೇರದ ಮೂರು ಅವತಾರಗಳಿವೆ. ಅವುಗಳೆಂದರೆ: ಸಮುದ್ರ ಮಥನ ಕಾಲದಲ್ಲಿ ನಡೆದ ಧನ್ವಂತರಿ ಮತ್ತು ಮೋಹಿನಿ ಅವತಾರ ಹಾಗೂ ಈ ಮನ್ವಂತರದ ಬಹಳ ಮುಖ್ಯವಾದ ಅವತಾರವಾದ ವ್ಯಾಸಾವತಾರ. ಮೋಹಿನಿ ಭಗವಂತನ ಮೋಹಕ ರೂಪಗಳಲ್ಲಿ ಒಂದಾಗಿರುವುದರಿಂದ ಆ ಕುರಿತ ವಿವರಣೆ ಈ ಅಧ್ಯಾಯದಲ್ಲಿ ಬರುವುದಿಲ್ಲ. ಉಳಿದಂತೆ ಧನ್ವಂತರಿ ಮತ್ತು ವ್ಯಾಸಾವತಾರ ಕುರಿತಾದ ವಿವರಣೆಯೊಂದಿಗೆ ದಶಾವತಾರದ ಸಂಕ್ಷಿಪ್ತ ವಿವರಣೆಯನ್ನು ಈ ಅಧ್ಯಾಯದಲ್ಲಿ ಇನ್ನು ಮುಂದೆ ಕಾಣಬಹುದು.

ಸ್ವಾಯಂಭುವ ಮನ್ವಂತರದಲ್ಲಿ ನಡೆದ ವರಾಹ ಅವತಾರವನ್ನು ಭಗವಂತ ಸಮಾಪ್ತಿಗೊಳಿಸದೇ ಇರುವುದರಿಂದ ಇದು ದಶಾವತಾರಗಳಲ್ಲಿ ಮೊದಲನೇ ಅವತಾರವೆಂದು ಪರಿಗಣಿಸಿದ್ದಾರೆ ಎನ್ನುವುದನ್ನು ಈ ಹಿಂದೆ ನೋಡಿದ್ದೆವು. ಆದರೆ ಈ ರೀತಿ ನೋಡಿದರೆ ಅನುಕ್ರಮವಾಗಿ ಮತ್ಸ್ಯಾವತಾರಕ್ಕೂ ಮೊದಲು ಕೂರ್ಮಾವತಾರವನ್ನು ಹೇಳಬೇಕಾಗುತ್ತದೆ. ಏಕೆಂದರೆ ಕೂರ್ಮಾವತಾರ ಮೊದಲು ರೈವತ ಮನ್ವಂತರದಲ್ಲಾಗಿದ್ದು, ವೈವಸ್ವತ ಮನ್ವಂತರದಲ್ಲಿ ಎರಡನೇ ಬಾರಿ ಭಗವಂತ ಕೂರ್ಮರೂಪಿಯಾಗಿ ಬಂದಿರುವುದನ್ನು ನಾವು ಕಾಣುತ್ತೇವೆ. ಹೀಗೆ ನೋಡಿದಾಗ ಇನ್ನೊಂದು ಸಮಸ್ಯೆ ಬರುತ್ತದೆ. ಅದೇನೆಂದರೆ ಭಾಗವತದ ಎಂಟನೇ ಸ್ಕಂಧದಲ್ಲಿ ಹೇಳುವಂತೆ: ಮತ್ಸ್ಯಾವತಾರ ಕೂರ್ಮಾವತಾರಕ್ಕಿಂತ ಮೊದಲು ಕಲ್ಪಾದಿಯಲ್ಲೇ ಒಮ್ಮೆ ನಡೆದಿದೆ. ಹೀಗಾಗಿ ನಾವು ಅನುಕ್ರಮದಲ್ಲಿ ನೋಡುವಾಗ ಹಿಂದೆ ನಡೆದ ಅವತಾರವನ್ನು ತೆಗೆದುಕೊಂಡು ಹೇಳಿದರೆ ಸರಿ ಹೊಂದುವುದಿಲ್ಲ. ಈ ಮಾತಿಗೆ ವರಾಹ ಅವತಾರ ಮಾತ್ರ ಅಪವಾದ ಏಕೆಂದರೆ: ಕೆಲವೊಮ್ಮೆ ಭಗವಂತ ತನ್ನ ಅವತಾರ ರೂಪವನ್ನು ಮೂಲ ರೂಪದಲ್ಲಿ ಅಂತರ್ಭಾವಗೊಳಿಸಿಬಿಡುತ್ತಾನೆ. ಆಗ ನಾವು ಅವತಾರ ಸಮಾಪ್ತಿಯಾಯಿತು ಎನ್ನುತ್ತೇವೆ. ಆದರೆ ಈ ಹಿಂದೆ ಹೇಳಿದಂತೆ: ಸ್ವಾಯಂಭುವ ಮನ್ವಂತರದಲ್ಲಿ ನಡೆದ ವರಾಹ ಅವತಾರವನ್ನು ಭಗವಂತ ಸಮಾಪ್ತಿಗೊಳಿಸಿಲ್ಲ. ಆದರೆ ಕಲ್ಪಾದಿಯಲ್ಲಿ ನಡೆದ ಮತ್ಸ್ಯಾವತಾರ, ರೈವತ ಮನ್ವಂತರದಲ್ಲಿ ನಡೆದ ಕೂರ್ಮಾವತಾರವನ್ನು ಭಗವಂತ ಸಮಾಪ್ತಿಗೊಳಿಸಿ, ಮರಳಿ ವೈವಸ್ವತ ಮನ್ವಂತರದಲ್ಲಿ ಅದೇ ರೂಪದಿಂದ ಅವತರಿಸಿದ್ದಾನೆ. ಈ ಹಿನ್ನೆಲೆಯಲ್ಲಿ ನೋಡಿದಾಗ: ಚಾಕ್ಷುಷ ಮನ್ವಂತರ ಮತ್ತು ವೈವಸ್ವತ  ಮನ್ವಂತರದ ಸಂಧಿಕಾಲದಲ್ಲಿ ನಡೆದ ಮತ್ಸ್ಯಾವತಾರದ ನಂತರ  ವೈವಸ್ವತ ಮನ್ವಂತರದಲ್ಲಿ ಕೂರ್ಮಾವತಾರವಾಗಿದೆ. ಈ ಅನುಕ್ರಮಣಿಕೆಯಲ್ಲಿ ನೋಡಿದಾಗ, ಈ ಮನ್ವಂತರದಲ್ಲಿ  ಮೊದಲು  ಮತ್ಸ್ಯಾವತಾರವಾಗಿದ್ದು, ಆನಂತರ ಕೂರ್ಮಾವತಾರವಾಗಿರುವುದನ್ನು ನಾವು ಕಾಣಬಹುದು. ಬನ್ನಿ, ಈ ಹಿನ್ನೆಲೆಯೊಂದಿಗೆ ನಾವು ಚತುರ್ಮುಖ-ನಾರದ ಸಂವಾದವನ್ನಾಲಿಸೋಣ.  

No comments:

Post a Comment