Saturday, June 20, 2015

Shrimad BhAgavata in Kannada -Skandha-02-Ch-07(14)

ಕೂರ್ಮಾವತಾರ 

ಕ್ಷೀರೋದಧಾವಮರದಾನವಯೂಥಪಾನಾ ಮನ್ಮಥ್ನತಾಮಮೃತಲಬ್ಧಯ ಆದಿದೇವಃ
ಪೃಷ್ಠೇನ ಕಚ್ಛಪವಪುರ್ವಿದಧಾರ ಗೋತ್ರಂ ನಿದ್ರೇಕ್ಷಣೋSದ್ರಿಪರಿವರ್ತಕಷಾಣಕಂಡೂಃ ೧೩

ಇಲ್ಲಿ  ಚತುರ್ಮುಖ  ನಾರದರಿಗೆ ಭಗವಂತನ ಕೂರ್ಮಾವತಾರವನ್ನು ವಿವರಿಸುವುದನ್ನು ಕಾಣುತ್ತೇವೆ. ಇದು ಸಮುದ್ರಮಥನದ ಕಥೆ. ಕಡೆಯಲು ಮಂದರವೇ ಕಡೆಗೋಲು. ಮಂದರ ಪರ್ವತ  ಕಡಲಲ್ಲಿ ಮುಳುಗಿಹೋಗದಂತೆ ಎತ್ತಿ ಹಿಡಿದವ ಕೂರ್ಮರೂಪಿ ಭಗವಂತ. ಈ ಮಥನ ನಡೆದಿರುವುದು ಭೂಮಿಯಲ್ಲಿ ಅಲ್ಲ. ಇಲ್ಲಿ ಸಮುದ್ರ ಎಂದರೆ ಅದು ಕ್ಷೀರ ಸಮುದ್ರ.  ಸೂಕ್ಷ್ಮಪ್ರಪಂಚದಲ್ಲಿ ಸೂಕ್ಷ್ಮಜೀವಿಗಳಿಂದ ನಡೆದ ಮಥನವಿದು.  ಈ ರೀತಿ ಮಂದರ ಪರ್ವತವನ್ನು ಬೆನ್ನಮೇಲೆ ಹೊತ್ತ ಭಗವಂತ  ತುರಿಕೆಯ ಬೆನ್ನನ್ನು ತುರಿಸಿದಾಗ ಸಿಗುವ ಆನಂದವನ್ನು, ನಿದ್ದೆಯ ಕ್ಷಣದ ಆನಂದವನ್ನು ಅನುಭವಿಸಿದ ಎಂದು ಆಲಂಕಾರಿಕವಾಗಿ ಇಲ್ಲಿ ಹೇಳಿದ್ದಾರೆ.
ಈ ಸಮುದ್ರ ಮಥನವನ್ನು  ನಮ್ಮ  ಪಿಂಡಾಂಡದಲ್ಲಿ ಅನ್ವಯ ಮಾಡಿ ನೋಡಿದರೆ: ಇದು ನಮ್ಮ ಹೃದಯ ಸಮುದ್ರದಲ್ಲಿ  ನಡೆಯಬೇಕಾದ ಶಾಸ್ತ್ರಗಳ ಮಥನ.  ನಾವು ನಮ್ಮ ಕುಂಡಲಿಯಲ್ಲಿನ ವಾಸುಕಿಯನ್ನು ಮನಸ್ಸೆಂಬ ಮಂದರ ಪರ್ವತಕ್ಕೆ ಸುತ್ತಿ ಮಥನ ಮಾಡಬೇಕು. ಹೀಗೆ ಮಥನ ಮಾಡುವಾಗ ಮನಸ್ಸು ಕುಸಿಯದಂತೆ ಭಗವಂತನ ಆಶ್ರಯ ಪಡೆಯಬೇಕು. ಈ ರೀತಿ ಶಾಸ್ತ್ರಗಳ ಮಥನ ಮಾಡಿದಾಗ ಮೊದಲು ಬರುವುದು ಸಂಶಯ/ಅಪನಂಬಿಕೆ ಎನ್ನುವ ವಿಷ.     ಹೃದಯದಲ್ಲಿನ ಈ ವಿಷವನ್ನು ಮೊದಲು ಹೊರಕ್ಕೆ ತೆಗೆಯಬೇಕು. ಆನಂತರ ಅಧ್ಯಾತ್ಮದ ಅಮೃತಕ್ಕಾಗಿ ಮಥನ ನಮ್ಮೊಳಗಿರುವ ದೇವಾಸುರರಿಂದ  ನಿರಂತರ ನಡೆಯಬೇಕು.

ಮೇಲೆ ಹೇಳಿದಂತೆ ಇದು ಎಂದೋ ನಡೆದು ಹೋದ ಸಮುದ್ರ ಮಥನವಷ್ಟೇ ಅಲ್ಲ. ಅನುದಿನ ನಮ್ಮೊಳಗೆ ನಡೆಯಬೇಕಾದ ಮಥನ. ಇದನ್ನೇ ಪುರಂದರದಾಸರು “ ಶೇಷ ಶಯನನೆ, ಏಳು ಸಮುದ್ರ ಮಥನವ ಮಾಡು” ಎಂದಿದ್ದಾರೆ. ನಮ್ಮ ದೇಹದೊಳಗೆ ಏಳು ಸಮುದ್ರಗಳಿವೆ. ಇವೇ ಏಳು ಶಕ್ತಿಚಕ್ರಗಳು(spiritual centers, ನಿರ್ನಾಳ ಗ್ರಂಥಿಗಳು). ಇದರಲ್ಲಿ ಮೊದಲನೆಯದ್ದು ನಮ್ಮ ಮಲ-ಮೂತ್ರದ್ವಾರದ ಮಧ್ಯದಲ್ಲಿರುವ 'ಮೂಲಾಧಾರ ಚಕ್ರ', ಇದೇ 'ಉಪ್ಪಿನ ಸಮುದ್ರ'. ಎರಡನೆಯದ್ದು ಹೊಕ್ಕುಳಿನಿಂದ ಸ್ವಲ್ಪ ಕೆಳಗಿರುವ 'ಸ್ವಾಧಿಷ್ಠಾನಚಕ್ರ'; ಇದು 'ಕಬ್ಬಿನಹಾಲಿನ ಸಮುದ್ರ'. ಇದು ಬದುಕಿನಲ್ಲಿ ಐಹಿಕ ಸುಖದ ಖುಷಿ ಕೊಡುವ ಚಕ್ರ. ಇದಕ್ಕೂ ಮೇಲೆ ಹೊಕ್ಕುಳಿನ ಭಾಗದಲ್ಲಿ 'ಮಣಿಪೂರ ಚಕ್ರವಿದೆ. ಇದು ಕಾಮದ ಅಮಲಿನ ಸುಖ ಕೊಡುವ 'ಸುರ ಸಮುದ್ರ'. ಇದಕ್ಕೂ ಮೇಲೆ 'ಅನಾಹತ ಚಕ್ರ'. ಇದನ್ನೇ ತುಪ್ಪ/ಬೆಣ್ಣೆಯ ಸಮುದ್ರ ಅಥವಾ ಹೃದಯ ಸಮುದ್ರ ಎನ್ನುತ್ತಾರೆ. ಇಲ್ಲಿಂದ ಮೇಲೆ ಅಧ್ಯಾತ್ಮದ ವಿಶ್ವ (Spiritual world) ತೆರೆದುಕೊಳ್ಳುತ್ತದೆ. ಮೊತ್ತ ಮೊದಲು ಭಕ್ತಿಯ ನವನೀತವನ್ನು ಹೃದಯದಲ್ಲಿ ತುಂಬಿ ಭಗವಂತನಿಗೋಸ್ಕರ ಕಾಯುವ ಸಾಧನೆ ಪ್ರಾರಂಭವಾಗುವುದೇ ಇಲ್ಲಿಂದ. ಇನ್ನೂ ಮೇಲಕ್ಕೆ ಹೋದರೆ 'ವಿಶುದ್ಧಿಚಕ್ರ'. ಅಥವಾ ಮೊಸರಿನ ಸಮುದ್ರ. ಇಲ್ಲಿ ಜ್ಞಾನಿಯು ತ್ರಿಕಾಲದರ್ಶಿಯಾಗುತ್ತಾನೆ. ಅದರಿಂದಾಚೆಗೆ ಕ್ಷೀರಸಾಗರ ಅಥವಾ ಆಜ್ಞಾಚಕ್ರ. ಇದು ಭ್ರೂ- ಮಧ್ಯದಲ್ಲಿ ಭಗವಂತನನ್ನು ಕಾಣುವಂತಹದ್ದು. ಇದೇ ಕ್ಷೀರ ಶಾಯಿಯಾದ ಭಗವಂತನ ದರ್ಶನ. ಇದರಿಂದಾಚೆಗೆ ಸಹಸ್ರಾರ ಅಥವಾ ಅಮೃತಸಾಗರ. ಇವು ಮನುಷ್ಯನ ಬದುಕನ್ನು ನಿರ್ಧರಿಸುವ ಏಳು ಮಹಾಸಮುದ್ರಗಳು. ಇಂತಹ ಅಂತರಂಗದ ಸಮುದ್ರದಲ್ಲಿ ನೆಲೆಸಿ ನಮ್ಮನ್ನು ಎತ್ತರಕ್ಕೇರಿಸುವ ಭಗವಂತ ಮಹೋದಧಿಶಯಃ. ನಮ್ಮೊಳಗಿನ ದೇವಾಸುರರಿಂದ ಮಥನ ನಡೆದು, ವಿಷ ಕಳೆದು  ಅಮೃತ ಬರಲು  ನಮಗೆ ಈ ಭಗವಂತನ ನೆರವು ಬೇಕು. ಕೂರ್ಮನಾಗಿ, ಮೂಲಾಧಾರನಾಗಿ ನಿಂತು ಆತ ನಡೆಸಬೇಕು. ಸಪ್ತಸಾಗರಗಳ ಮಥನ ನಡೆದಾಗ ಅಲ್ಲಿ ಅಮೃತಕಲಶ ಹಿಡಿದು ಧನ್ವಂತರಿ ಮೇಲೆದ್ದು ಬರುತ್ತಾನೆ.  [ಕೂರ್ಮಾವತಾರ ಕುರಿತಾದ ಸಂಕ್ಷಿಪ್ತ ವಿವರಣೆಯನ್ನು ಇಲ್ಲಿ ನೀಡಲಾಗಿದ್ದು, ಇದರ ಪೂರ್ಣ ವಿವರಣೆಯನ್ನು ಮುಂದೆ ಎಂಟನೇ ಸ್ಕಂಧದಲ್ಲಿ ಕಾಣಬಹುದು. ಕೂರ್ಮಾವತಾರದ ಜೊತೆಗೆ ನಡೆದ ಮೋಹಿನಿ ಅವತಾರವನ್ನು ಇಲ್ಲಿ ವಿವರಿಸಿಲ್ಲ.  ಧನ್ವಂತರಿ ಅವತಾರ ಎರಡು ಬಾರಿ ನಡೆದಿದ್ದು ಅದನ್ನು ಸಮೀಕರಿಸಿ ಮುಂದೆ ಹೇಳುತ್ತಾರೆ. ಎರಡು ಧನ್ವಂತರಿಯಲ್ಲಿ ಮೊದಲನೆಯದು ಸಮುದ್ರಮಥನದಲ್ಲಿ  ಬಂದ ಸಾಕ್ಷಾತ್ ಭಗವಂತನ ಅವತಾರ ಹಾಗೂ ಎರಡನೆಯದು ವೈದ್ಯಶಾಸ್ತ್ರವನ್ನು ಪರಿಚಯಿಸಿದ, ಆಯುರ್ವೇದ ಪ್ರವರ್ತಕನಾದ ಕಾಶೀರಾಜನಲ್ಲಿ ಧನ್ವಂತರಿಯಾಗಿ ನಡೆದ ಭಗವಂತನ ಆವೇಶಾವತಾರ].

No comments:

Post a Comment