Sunday, June 28, 2015

Shrimad BhAgavata in Kannada -Skandha-02-Ch-07(16)

ಪ್ರಹ್ಲಾದವರದ ನರಸಿಂಹ 

ತ್ರೈವಿಷ್ಟಪೋರುಭಯಹಾರಿ ನೃಸಿಂಹರೂಪಂ ಕೃತ್ವಾ ಭ್ರಮದ್ ಭ್ರುಕುಟಿದಂಷ್ಟ್ರಕರಾಳವಕ್ತ್ರಮ್
ದೈತ್ಯೇಂದ್ರಮಾಶು ಗದಯಾSಭಿಪತಂತಮಾರಾ ದೂರೌ ನಿಪಾತ್ಯ ವಿದದಾರ ನಖೈಃ ಸ್ಫುರಂತಮ್ ೧೪

ಇಲ್ಲಿ ಚತುರ್ಮುಖ ಭಗವಂತನ ನರಸಿಂಹ ಅವತಾರವನ್ನು ನಾರದರಿಗೆ ವಿವರಿಸುತ್ತಾ ಹೇಳುತ್ತಾನೆ:  “ ಇದು ಮೂರು ಲೋಕದ ಭಯವನ್ನು ಪರಿಹರಿಸಿದ ರೂಪ” ಎಂದು.  ಹಿರಣ್ಯಕಶಿಪು ಬ್ರಹ್ಮನಿಂದ ವರ ಪಡೆದು ಮೂರು ಲೋಕಗಳಿಗೂ ಕಂಟಕನಾಗಿ ಬೆಳೆದಾಗ  ಭಗವಂತ: ಕಿಡಿಕಾರುವ ಕಣ್ಣು, ಕೋರೆದಾಡೆಗಳು, ಗಂಟಿಕ್ಕಿದ ಹುಬ್ಬು, ಸಿಟ್ಟಿನಿಂದ ಬೆಂಕಿಯನ್ನುಗುಳುವ ಭಯಂಕರ ಮೋರೆಯ ನರಸಿಂಹ ರೂಪದಿಂದ ಕಾಣಿಸಿಕೊಂಡ.  “ಭಯಂಕರ ರೂಪಿ ಆದರೆ ಭಯಹಾರಿ” ಎನ್ನುತ್ತಾನೆ ಚತುರ್ಮುಖ. ಮೂರುಲೋಕದ ಭಯ ಪರಿಹಾರಕ್ಕಾಗಿಯೇ ಭಗವಂತ ತೊಟ್ಟ ಭಯಂಕರ ರೂಪ ಈ ನರಸಿಂಹ ರೂಪ.
ಭಗವಂತ ಏಕೆ ಈ ರೀತಿ ಭಯಂಕರ ರೂಪಿಯಾಗಿ ಬಂದ ಎಂದರೆ: ಅದು ಅವನಿಗೆ ಅನಿವಾರ್ಯವಾಗಿತ್ತು. ಇದು ಆತನ ಭಕ್ತರೇ ತಂದಿಟ್ಟ ಪರಿಸ್ಥಿತಿ. ಹಿರಣ್ಯಕಶಿಪು ಘೋರ ತಪಸ್ಸು ಮಾಡಿ ಚತುರ್ಮುಖನಲ್ಲಿ ವರವನ್ನು ಬೇಡಿದ: “ನನ್ನನ್ನು ಯಾರೂ ಯಾವ ಆಯುಧದಿಂದಲೂ ಕೊಲ್ಲಬಾರದು, ಹಗಲೂ ಕೊಲ್ಲಬಾರದು, ರಾತ್ರಿಯೂ ಕೊಲ್ಲಬಾರದು. ದೇವತೆಗಳು-ಮನುಷ್ಯರು ಅಥವಾ ಪ್ರಾಣಿಗಳಿಂದ ನನಗೆ ಸಾವು ಬರಬಾರದು. ಕೆಳಗೆ, ಒಳಗೆ, ಭೂಮಿಯ ಮೇಲೆ, ಆಕಾಶದಲ್ಲಿ ನಾನು ಸಾಯಬಾರದು” ಎನ್ನುವ ವರವನ್ನು ಬೇಡಿ ಪಡೆದ. ಈ ಕಾರಣಕ್ಕಾಗಿಯೇ ಭಗವಂತ ಪ್ರಾಣಿಯ ಮುಖವಿರುವ ಆದರೆ ಮನುಷ್ಯ ದೇಹವಿರುವ ನರಸಿಂಹನಾಗಿ ಬರಬೇಕಾಯಿತು. ಒಳಗೂ ಅಲ್ಲ, ಹೊರಗೂ ಅಲ್ಲ- ಹೊಸ್ತಿಲಲ್ಲಿ; ಹಗಲೂ ಅಲ್ಲ, ರಾತ್ರಿಯೂ ಅಲ್ಲ- ಮುಸ್ಸಂಜೆಯಲ್ಲಿ, ಭೂಮಿಯಮೇಲೂ ಅಲ್ಲ, ಆಕಾಶದಲ್ಲೂ ಅಲ್ಲ-ತೊಡೆಯಮೇಲೆ; ಯಾವುದೇ ಆಯುಧ ಬಳಸದೇ ತನ್ನ ಕೈ ಉಗುರಿನಿಂದ ಹಿರಣ್ಯಾಕ್ಷನ ಉದರವನ್ನು ಸೀಳಿ ಕೊಂದ ಭಗವಂತ.  ಚತುರ್ಮುಖ ಕೊಟ್ಟ ವರಕ್ಕೆ ಯಾವುದೇ ಭಂಗಬಾರದಂತೆ  ಅದನ್ನು  ಉಳಿಸಿ ದುಷ್ಟ ಸಂಹಾರ ಮಾಡಿದ ಭಗವಂತನ ವಿಶಿಷ್ಠ ರೂಪ ಈ ನರಸಿಂಹ ರೂಪ.
ಈ ಹಿಂದೆ ಹೇಳಿದಂತೆ ದೇವರು ಮತ್ತು ಧರ್ಮವನ್ನು ಅಧ್ಯಯನ ಮಾಡಬಾರದು ಎಂದು ನಿಷೇಧ ಹೇರಿದವರಲ್ಲಿ ಮೊದಲಿಗ ‘ವೇನ’. ಆತನ ನಂತರ ಈ ರೀತಿಯ ಕಾನೂನನ್ನು ತಂದವ ಹಿರಣ್ಯಕಶಿಪು. ಈತ ತನ್ನ ಮಗನಿಗೆ ಪಾಠ ಹೇಳುವ ಅಧ್ಯಾಪಕರಾದ ಶಂಡಾಮರ್ಕರಿಗೆ  ದೇವರು ಮತ್ತು ಧರ್ಮವನ್ನು ಮಕ್ಕಳ ತಲೆಗೆ ಹಾಕಕೂಡದು ಎಂದು ಕಟ್ಟಪ್ಪಣೆ ಮಾಡಿದ್ದ. ಈ ರೀತಿ ಪ್ರಹ್ಲಾದನ ವಿದ್ಯಾಭ್ಯಾಸ ಗುರುಕುಲದಲ್ಲಿ ನಡೆಯುತ್ತಿರುವಾಗ ಒಮ್ಮೆ ಹಿರಣ್ಯಕಶಿಪು  ತನ್ನ ಮಗ ಏನನ್ನು ಕಲಿತಿದ್ದಾನೆ ಎಂದು ತಿಳಿಯಲಿಕ್ಕೋಸ್ಕರ  ಆತನನ್ನು  ಕರೆದು ತನ್ನ ತೊಡೆಯಮೇಲೆ ಕುಳ್ಳಿರಿಸಿಕೊಂಡು "ಗುರುಕುಲದಲ್ಲಿ ಏನನ್ನು ಕಲಿತೆ" ಎಂದು ಕೇಳುತ್ತಾನೆ. ಆಗ ಪ್ರಹ್ಲಾದ ಹೇಳುತ್ತಾನೆ: “ಶ್ರವಣಂ ಕೀರ್ತನಂ ವಿಷ್ಣೋಃ ಸ್ಮರಣಂ ಪಾದಸೇವನಂ,  ಅರ್ಚನಂ ವಂದನಂ ದಾಸ್ಯಂ ಸಖ್ಯಮಾತ್ಮ ನಿವೇದನಂ”(ಭಾಗವತ: ೭-೫-೨೩). "ನಾನು ನವವಿಧ ಭಕ್ತಿಯನ್ನು ಕಲಿತೆ" ಎಂದು ಪ್ರಹ್ಲಾದ ಹೇಳಿದಾಗ ಹಿರಣ್ಯಕಶಿಪು ಕೊಪಗೊಂಡು ಆತನ ಗುರುಗಳಾದ ಶಂಡಾಮರ್ಕರನ್ನು ಗದರಿಸುತ್ತಾನೆ. ಅವರು ಹೇಳುತ್ತಾರೆ:  “ಇದ್ಯಾವುದನ್ನೂ ತಾವು ಹೇಳಿ ಕೊಟ್ಟಿಲ್ಲ, ಆದರೆ ಹೇಗೋ ಆತನೇ ಕಲಿತಿದ್ದಾನೆ” ಎಂದು. ಆಗ ತೊಡೆಯಲ್ಲಿ ಕುಳಿತಿದ್ದ ಪ್ರಹ್ಲಾದನನ್ನು ತಳ್ಳಿ, ಅಂಥಹ ವಿದ್ಯೆಯನ್ನು ಕಲಿಯಕೂಡದು ಎಂದು ಎಚ್ಚರಿಕೆಯನ್ನು ಕೊಟ್ಟು ಕಳಿಸುತ್ತಾನೆ ಹಿರಣ್ಯಕಶಿಪು. ನಂತರ ಮರಳಿ ಆರು ತಿಂಗಳ ನಂತರ ಪುನಃ ಮಗನ ವಿದ್ಯೆಯನ್ನು ಪರೀಕ್ಷಿಸಿದಾಗ ಪ್ರಹ್ಲಾದ ಮರಳಿ ಭಗವಂತನ ಕುರಿತು ಮಾತನಾಡುತ್ತಾನೆ. ಆಗ ಕೋಪಗೊಂಡ ಹಿರಣ್ಯಕಶಿಪು “ಯಾರು ನಿನಗೆ ನನ್ನ ಮುಂದೆ ಈ ಮಾತನ್ನಾಡುವ ಧೈರ್ಯ ಕೊಟ್ಟವನು” ಎಂದು ಕೇಳುತ್ತಾನೆ. ಇದಕ್ಕೆ ಉತ್ತರಿಸುತ್ತಾ ಪ್ರಹ್ಲಾದ ಹೇಳುತ್ತಾನೆ: “ನಿನ್ನೊಳಗಿದ್ದು ನಿನಗೆ ಯಾರು ಬಲ ಕೊಟ್ಟಿದ್ದಾನೋ ಅವನೇ ನನ್ನೊಳಗಿದ್ದು ನನಗೆ ಈ ಧೈರ್ಯವನ್ನು ಕೊಟ್ಟಿದ್ದಾನೆ” ಎಂದು. ನ ಕೇವಲಂ ಮೇ ಭವತಶ್ಚ ರಾಜನ್,  ಸ  ವೈ ಬಲಂ ಬಲಿನಾಂ ಚಾಪರೇಷಾಂ (ಭಾಗವತ: ೭-೮-೮).  ಈ ಮಾತನ್ನು ಕೇಳಿ ಕೋಪಗೊಂಡ ಹಿರಣ್ಯಾಕ್ಷ ಅನೇಕ ವಿಧದಲ್ಲಿ ಪ್ರಹ್ಲಾದನನ್ನು ಕೊಲ್ಲಿಸುವ ಪ್ರಯತ್ನ ಮಾಡುತ್ತಾನೆ. ಆದರೆ ಎಲ್ಲಾ ಪ್ರಯತ್ನದಲ್ಲೂ ಆತ ಸೋಲುತ್ತಾನೆ. ಕೊನೆಗೆ ಭಯಭೀತನಾಗಿದ್ದರೂ ಧೈರ್ಯದ ಅಭಿನಯ ಮಾಡುತ್ತಾ ಪ್ರಹ್ಲಾದನಲ್ಲಿ:  “ನಿನ್ನನ್ನು ಕಾಯುವ ಆ ನಿನ್ನ ಭಗವಂತ ಎಲ್ಲೆಡೆ ಇದ್ದಾನೆ ಎಂದಿಯಲ್ಲಾ,  ಆತ ಈ ಕಂಬದಲ್ಲಿಯೂ ಇದ್ದಾನೆಯೋ” ಎಂದು ಕೇಳುತ್ತಾನೆ.  ಆಗ ಪ್ರಹ್ಲಾದ: “ಭಗವಂತ ನನ್ನಲ್ಲಿ, ನಿನ್ನಲ್ಲಿ, ಎಲ್ಲಾಕಡೆ, ಈ ಕಂಬದಲ್ಲಿಯೂ ಕೂಡಾ ಇದ್ದಾನೆ” ಎಂದಾಗ, ಹಿರಣ್ಯಕಶಿಪು ಅಹಂಕಾರ ಮತ್ತು ಭಯದಿಂದ ಕಂಬವನ್ನು ತನ್ನ ಗದೆಯಿಂದ ಚಚ್ಚಲು,  ಕಂಬ ಒಡೆದು ನರಸಿಂಹ ಪ್ರತ್ಯಕ್ಷನಾಗುತ್ತಾನೆ. ಈ ರೀತಿ ಉಗ್ರರೂಪದಲ್ಲಿ ಬಂದು ಹಿರಣ್ಯಕಶಿಪುವನ್ನು  ಎತ್ತಿ ತನ್ನ ತೊಡೆಯಮೇಲಿಟ್ಟುಕೊಂಡು ಉಗುರಿನಿಂದ ಆತನ ದೇಹವನ್ನು  ಬಗೆದು, ಆತನ ಕರುಳನ್ನು ತನ್ನ ಕೊರಳಲ್ಲಿ ಧರಿಸುತ್ತಾನೆ ನರಸಿಂಹ.
ಆಚಾರ್ಯ ಮಧ್ವರು ಭಗವಂತನ ಈ ನರಸಿಂಹ  ಅವತಾರವನ್ನು ೧. ಶಾರ್ದೂಲ ವಿಕ್ರೀಡಿತ ಮತ್ತು   ೨. ಸ್ರಗ್ಧರಾ ಎನ್ನುವ ಎರಡು ಛಂದಸ್ಸಿನಲ್ಲಿ ಅದ್ಭುತವಾಗಿ ಸೆರೆ ಹಿಡಿದು ಈ ರೀತಿ ವರ್ಣಿಸಿದ್ದಾರೆ:   ೧. ಪಾಂತ್ವಸ್ಮಾನ್ ಪುರುಹೂತ ವೈರಿಬಲವನ್ ಮಾತಂಗಮಾದ್ಯದ್ಘಟಾ ಕುಂಭೋಚ್ಛಾದ್ರಿ ವಿಪಾಟನಾಧಿಕಪಟು ಪ್ರತ್ಯೇಕ ವಜ್ರಾಯಿತಾಃ.                ೨. ಶ್ರೀಮತ್ಕ್ಂಠೀರವಾಸ್ಯ ಪ್ರತತಸುನಖರಾ ದಾರಿತಾರಾತಿದೂರ ಪ್ರಧ್ವಸ್ತಧ್ವಾನ್ತಶಾಂತ ಪ್ರವಿತತಮನಸಾ ಭಾವಿತಾಭೂರಿಭಾಗೈಃ.  ಇದು ನರಸಿಂಹ ಅವತಾರವನ್ನು ಎರಡು ಛಂದಸ್ಸಿನಲ್ಲಿ ಸೆರೆ ಹಿಡಿದ ಅತ್ಯದ್ಭುತ ರಚನೆ.
ಹಿರಣ್ಯಕಶಿಪುವಿನ  ಅಂತ್ಯದಿಂದ ತಲೆದಿಂಬಿನ ಕೆಳಗಿನ ವಿತ್ತ ಮೋಹ ಕಳೆಯುವಂತಾಗುತ್ತದೆ. ಸಾಧಕರಿಗೆ ಮೋಹವನ್ನು ಮೀರುವ ಹಂತದಲ್ಲಿ  ಹಾಸಿಗೆಯ ಕೆಳಗೆ, ತಲೆದಿಂಬಿನ ಕೆಳಗೆ ಏನಾದರೂ ಧನವನ್ನು ಇಟ್ಟರೆ ನಿದ್ದೆ ಬರುವುದಿಲ್ಲವಂತೆ. ಹಿರಣ್ಯಕಶಿಪು ಹೊರ ಹೋಗುವಾಗ ಆತ ನಮ್ಮನ್ನು ನಡುಗಿಸಿ ಬಿಡುತ್ತಾನೆ. ಆದರೆ ನಾವು ವಿಚಲಿತರಾಗದೇ ಇದ್ದರೆ  ಆಗ ಹಿರಣ್ಯಕಶಿಪು ಹೊರಟುಹೋಗಿ ನಮ್ಮೊಳಗೆ ನರಸಿಂಹ ಬಂದು ಕೂರುತ್ತಾನೆ. ಮೊದಲು ಮತ್ಸ್ಯನಾಗಿ ಬಂದು ವೇದ ವಾಙ್ಮಯವನ್ನು ಕೊಟ್ಟ ಭಗವಂತ, ಕೂರ್ಮನಾಗಿ  ಸಮಸ್ತ ಶಾಸ್ತ್ರದ ಮಥನೆ ಮಾಡಲು ನಿಂತ. ಆದರೂ ವೇದಾರ್ಥಕ್ಕಿಂತ ದುಡ್ಡು ಮುಖ್ಯವಾದಾಗ ವರಾಹ-ನರಸಿಂಹನಾಗಿ ಬಂದು ವಿತ್ತ(ಹಿರಣ್ಯ) ಮೋಹದಿಂದ ಬಿಡುಗಡೆ ಮಾಡಿದ.  [ನರಸಿಂಹ ಅವತಾರದ  ಕುರಿತಾದ ಸಂಕ್ಷಿಪ್ತ ವಿವರಣೆಯನ್ನಷ್ಟೇ ಇಲ್ಲಿ ನೀಡಲಾಗಿದ್ದು, ಇದರ ಪೂರ್ಣ ವಿವರಣೆಯನ್ನು ಮುಂದೆ ಏಳನೇ ಸ್ಕಂಧದಲ್ಲಿ ಕಾಣಬಹುದು]   

No comments:

Post a Comment