ಭಗವಂತನ ಅವತಾರಗಳನ್ನು ಕಾಲಾನುಕ್ರಮವಾಗಿ ನೋಡುವಾಗ ಕೂರ್ಮಾವತಾರ ಮತ್ತು ವಾಮನ ಅವತಾರಕ್ಕೆ
ಸಂಬಂಧಿಸಿದಂತೆ ಒಂದು ಸಮಸ್ಯೆ ಎದುರಾಗುತ್ತದೆ. ನಮಗೆ ತಿಳಿದಂತೆ ಕೂರ್ಮಾವತಾರದ ನಂತರ ನರಸಿಂಹ ಅವತಾರವಾಗಿದೆ. ಆ ನಂತರ
ವಾಮನ ಅವತಾರ. ಹೀಗಾಗಿ ಕಾಲಕ್ರಮಕ್ಕನುಗುಣವಾಗಿ ಇಲ್ಲಿ ಸಮುದ್ರಮಥನವನ್ನು ನರಸಿಂಹ ಮತ್ತು ವಾಮನ ಅವತಾರಕ್ಕೂ
ಮೊದಲು ಹೇಳಿದ್ದಾರೆ. ಆದರೆ ಒಂದು ಕಡೆ “ಬಲಿಚಕ್ರವರ್ತಿ ಸಮುದ್ರಮಥನ ಕಾಲದಲ್ಲಿ ದೇವತೆಗಳ
ವಿರುದ್ಧ ಹೋರಾಡಿದ್ದ” ಎನ್ನುವ ಕಥೆಯೊಂದಿದೆ. ಈ ಕಥೆ ನಮ್ಮನ್ನು ಗೊಂದಲಗೊಳಿಸುತ್ತದೆ. ವಾಮನಾವತಾರ
ಕಾಲದ ಬಲಿಚಕ್ರವರ್ತಿ ಕೂರ್ಮಾವತಾರ ಕಾಲದಲ್ಲಿ ಹೇಗೆ ಬಂದ ಎನ್ನುವುದು ನಮ್ಮ ಗೊಂದಲ. ಈ ವಿಷಯ
ಸ್ಪಷ್ಟವಾಗಬೇಕಾದರೆ ನಮಗೆ ಇತಿಹಾಸದಲ್ಲಿ ನಡೆದ ಎರಡು ಸಮುದ್ರಮಥನ ತಿಳಿದಿರಬೇಕು. ಎರಡು ಸಮುದ್ರ
ಮಥನಗಳಲ್ಲಿ ಒಂದು ರೈವತ ಮನ್ವಂತರದಲ್ಲಿ ಹಾಗೂ ಇನ್ನೊಂದು ವೈವಸ್ವತ ಮನ್ವಂತರದಲ್ಲಿ ನಡೆದಿದೆ.
ಬಲಿ ದೇವತೆಗಳೊಂದಿಗೆ ಹೋರಾಡಿದ ಕಥೆ ರೈವತ ಮನ್ವಂತರಕ್ಕೆ ಸಂಬಂಧಿಸಿದ್ದು. ಆದರೆ ಮೇಲೆ ಹೇಳಿರುವ ಭಗವಂತನ
ಕೂರ್ಮಾವತಾರ ಮತ್ತು ಸಮುದ್ರಮಥನ ವೈವಸ್ವತ
ಮನ್ವಂತರದಲ್ಲಿ ನಡೆದಿರುವುದು. ಆದ್ದರಿಂದ ವೈವಸ್ವತ ಮನ್ವಂತರದಲ್ಲಿ ನಡೆದ ಸಮುದ್ರಮಥನ
ಪ್ರಹ್ಲಾದನ ಜನನಕ್ಕಿಂತ ಮೊದಲು ಹಾಗೂ ವೈವಸ್ವತ ಮನ್ವಂತರದ ಮತ್ಯಾವತಾರದ ನಂತರ ನಡೆದ ಘಟನೆ. ಈ
ಕಾಲದಲ್ಲಿ ಬಲಿ ದೇವತೆಗಳ ವಿರುದ್ಧ ಹೊರಾಡಿರಲಿಲ್ಲ. ಏಕೆಂದರೆ ವೈವಸ್ವತ ಮನ್ವಂತರದ ಸಮುದ್ರ ಮಥನ
ಕಾಲದಲ್ಲಿ ಇನ್ನೂ ಬಲಿಯ ಜನನವೇ ಆಗಿರಲಿಲ್ಲ. ಇನ್ನು ರೈವತ ಮನ್ವಂತರದಲ್ಲಿ ಹೇಗೆ ಬಲಿಚಕ್ರವರ್ತಿ
ಸಮುದ್ರಮಥನದಲ್ಲಿ ಪಾಲ್ಗೊಂಡಿದ್ದ ಎನ್ನುವುದನ್ನು ವಿವರಿಸುತ್ತಾ ಆಚಾರ್ಯ ಮಧ್ವರು ಹೇಳುತ್ತಾರೆ: “ಪ್ರತಿ
ಮನ್ವಂತರಂ ಪ್ರಾಯಃ ಪ್ರಹ್ಲಾದಾದ್ಯಾಃ ಪ್ರಜಾತಿರೆ” ಎಂದು. ಅಂದರೆ ಪ್ರಹ್ಲಾದನ ಸಂತತಿ ಪ್ರತಿ ಮನ್ವಂತರದಲ್ಲಿ ಹುಟ್ಟುತ್ತಾರೆ ಎಂದು. ಪ್ರತಿ
ಮನ್ವಂತರದಲ್ಲಿ, ಪ್ರತಿ ಯುಗದಲ್ಲಿ, ಪ್ರತಿ ಕಲ್ಪದಲ್ಲಿ ಕೆಲವು ಘಟನೆಗಳು ಪುನರಾವರ್ತನೆಗೊಳ್ಳುತ್ತವೆ. ಒಟ್ಟಿನಲ್ಲಿ
ಹೇಳಬೇಕೆಂದರೆ ರೈವತ ಮನ್ವಂತರದಲ್ಲಿಯೂ ಕೂಡ ಒಬ್ಬ ಬಲಿಚಕ್ರವರ್ತಿ ಇದ್ದ ಹಾಗೂ ಆತ ಸಮುದ್ರ
ಮಥನದಲ್ಲಿ ಪಾಲ್ಗೊಂಡಿದ್ದ. ಈ ಎಲ್ಲಾ ವಿಷಯಗಳನ್ನು ಸಮಷ್ಟಿಯಾಗಿ ನೋಡಿದಾಗ ನಮ್ಮ ಗೊಂದಲ ಪರಿಹಾರವಾಗುತ್ತದೆ.
ಈ ಹಿಂದೆ ಹೇಳಿದಂತೆ ವರಾಹ ಅವತಾರ ಸ್ವಾಯಂಭುವ ಮನ್ವಂತರದಲ್ಲೇ ನಡೆದಿದ್ದು ಅದೇ ರೂಪ ಮರಳಿ
ವೈವಸ್ವತ ಮನ್ವಂತರದಲ್ಲಿ ಕಾಣಿಸಿಕೊಂಡಿರುವುದರಿಂದ, ಮತ್ಸ್ಯಾವತಾರ ಮತ್ತು ಕೂರ್ಮಾವತಾರದ ನಂತರ
ವೈವಸ್ವತ ಮನ್ವಂತರದಲ್ಲಿನ ವರಾಹನ ಕುರಿತು ಇಲ್ಲಿ ಮತ್ತೆ ವಿವರಿಸುವುದಿಲ್ಲ. ಇಲ್ಲಿ
ಕೂರ್ಮಾವತಾರದ ನಂತರ ನೇರವಾಗಿ ನರಸಿಂಹ ಅವತಾರವನ್ನು ಹೇಳುತ್ತಾರೆ. ಆದರೆ ನಮಗೆ ತಿಳಿದಂತೆ
ವರಾಹನನ್ನು ಬಿಟ್ಟು ನರಸಿಂಹನಿಲ್ಲ.
ಕೃಷ್ಣ-ರಾಮರು ಒಂದು ಜೋಡಿಯಾದರೆ ವರಾಹ-ನರಸಿಂಹ ಇನ್ನೊಂದು ಜೋಡಿ. ಓಂಕಾರದಲ್ಲಿ ಅ-ಕಾರ
ಮತ್ತು ಉ-ಕಾರ ವಾಚ್ಯರಾಗಿ ಕೃಷ್ಣ-ರಾಮರಿದ್ದರೆ, ಮ-ಕಾರ ಮತ್ತು ನಾದ-ವಾಚ್ಯರಾಗಿ
ನರಸಿಂಹ-ವರಾಹರಿದ್ದಾರೆ. ಭಗವಂತನ ಈ ನಾಲ್ಕು ರೂಪಗಳು ಪ್ರಣವ(ಓಂಕಾರ) ಪ್ರತಿಪಾದ್ಯ ರೂಪಗಳಾಗಿವೆ.
ಮುಖ್ಯವಾಗಿ ಹಿರಣ್ಯಕಶಿಪು ಮತ್ತು ಹಿರಣ್ಯಾಕ್ಷರ
ಸಂಹಾರಕ್ಕಾಗಿ ಹಾಗೂ ಜಯ-ವಿಜಯರ ಉದ್ದಾರಕ್ಕಾಗಿಯೇ
ಆದ ಭಗವಂತನ ರೂಪಗಳಿವು. ಭಗವಂತ ವರಾಹನಾಗಿ ಹಿರಣ್ಯಾಕ್ಷನನ್ನು ಕೊಂದ ಮತ್ತು ನರಸಿಂಹನಾಗಿ
ಹಿರಣ್ಯಕಷಿಪುವನ್ನು ಕೊಂದ. ಈ ದೈತ್ಯರೆ ಪುನಃ ರಾವಣ-ಕುಂಭಕರ್ಣರಾಗಿ ಬಂದಾಗ ಭಗವಂತ ರಾಮನಾಗಿ
ಬಂದು ಅವರನ್ನು ನಿಗ್ರಹಿಸಿದ. ನಂತರ ಅದೇ ದೈತ್ಯರು ಶಿಶುಪಾಲ-ದಂತವಕ್ರರಾಗಿ ಬಂದಾಗ ಭಗವಂತ
ಶ್ರೀಕೃಷ್ಣ ರೂಪದಲ್ಲಿ ಬಂದು ಅವರ ಹರಣ ಮಾಡಿದ.
ಹಿರಣ್ಯಾಕ್ಷ-ಹಿರಣ್ಯಕಶಿಪು, ಹೆಸರೇ ಸೂಚಿಸುವಂತೆ ಒಬ್ಬ ಚಿನ್ನದ ಮೇಲೆ ಕಣ್ಣಿಟ್ಟವನು ಹಾಗೂ
ಇನ್ನೊಬ್ಬ ಚಿನ್ನವನ್ನು ತನ್ನ ತಲೆದಿಂಬಾಗಿರಿಸಿಕೊಂಡವನು. ನಮ್ಮೊಳಗೂ ಈ ದೈತ್ಯರಿದ್ದಾರೆ. ಉಪನಿಷತ್ತಿನಲ್ಲಿ
ಹೇಳುವಂತೆ: ಹಿರಣ್ಮಯೇನ ಪಾತ್ರೇಣ ಸತ್ಯಸ್ಯಾಪಿಹಿತಂ ಮುಖಮ್, ತತ್ತ್ವಂ
ಪೂಷನ್ನಪಾವೃಣು ಸತ್ಯಧರ್ಮಾಯ ದ್ರೃಷ್ಟಯೇ. ಸತ್ಯದ ಮೋರೆಯನ್ನು ಚಿನ್ನದ ತಳಿಗೆಯಿಂದ ಮುಚ್ಚಿಕೊಂಡು ನಾವಿಂದು ಬದುಕುತ್ತಿದ್ದೇವೆ. ಆದ್ದರಿಂದ ಇಂದು ನಮಗೆ ಸತ್ಯ
ಬೇಡವಾಗಿದೆ. ಈ ರೀತಿ ಚಿನ್ನದ ಮೇಲೆ ಕಣ್ಣಿಡದೇ
ಚಿನ್ಮಯನ ಮೇಲೆ ಕಣ್ಣಿಡುವಂತಾಗಲು ನಾವು ವರಾಹ-ನರಸಿಂಹನನ್ನು ನಮ್ಮೊಳಗೆ ಆವಿರ್ಭಾವಗೊಳಿಸಿಕೊಳ್ಳಬೇಕು.
ಆದರೆ ನರಸಿಂಹ-ವರಾಹ ಉಪಾಸನೆ ಕೃಷ್ಣ-ರಾಮರ ಉಪಾಸನೆಗಿಂತ ಕ್ಲಿಷ್ಟವಾದುದು. ಈ ಉಪಾಸನೆ ಮಾಡುವಾಗ
ತುಂಬಾ ಎಚ್ಚರ ಅಗತ್ಯ. ನಮ್ಮಲ್ಲಿ ದೋಷವಿದ್ದಾಗ ಅದು ನಮ್ಮನ್ನೇ ಸುಟ್ಟುಬಿಡುವ ಸಾಧ್ಯತೆ ಇದೆ. ಆದರೂ ಕೂಡಾ ಪ್ರಹ್ಲಾದವರದ ನರಸಿಂಹ “ಅಭಕ್ತ-ಜನ-ಸಂಹಾರೀ
ಭಕ್ತಾನಾಮಭಯಪ್ರದಃ ” ಎನ್ನುವ ಮಾತನ್ನು
ನೆನೆದು ನಾವು ನಮ್ಮ ಪ್ರಯತ್ನವನ್ನು
ಮುಂದುವರಿಸಬೇಕು. ಬನ್ನಿ, ಈ
ಹಿನ್ನೆಲೆಯೊಂದಿಗೆ ಚತುರ್ಮುಖನ ಮುಂದಿನ ಮಾತನ್ನಾಲಿಸೋಣ.
No comments:
Post a Comment