Thursday, June 4, 2015

Shrimad BhAgavata in Kannada -Skandha-02-Ch-07(13)

ಮತ್ಸ್ಯಾವತಾರ

ಮತ್ಸ್ಯೋ ಯುಗಾಂತಸಮಯೇ ಮನುನೋಪಲಬ್ಧಃ ಕ್ಷೋಣೀಮಯೋ ನಿಖಿಲಜೀವನಿಕಾಯಕೇತಃ
ವಿಸ್ರಂಸಿತಾನುರುಭಯೇ ಸಲಿಲೇ ಮುಖಾನ್ಮ ಆದಾಯ ತತ್ರ ವಿಜಹಾರ ಹ ವೇದಮಾರ್ಗಾನ್ ೧೨

ಈಗ ನಡೆಯುತ್ತಿರುವುದು  ಏಳನೇ ವೈವಸ್ವತ ಮನ್ವಂತರ. ಈ ಮನ್ವಂತರದ ಆದಿಯಲ್ಲಿ ನಡೆದ ಭಗವಂತನ ಅವತಾರವೇ ಮತ್ಸ್ಯಾವತಾರ.  ಸೂರ್ಯಪುತ್ರನಾದ ವೈವಸ್ವತ ಮನು ಪೂರ್ವ ಜನ್ಮದಲ್ಲಿ ಸತ್ಯವ್ರತನೆಂಬ ಹೆಸರಿನ ರಾಜರ್ಷಿಯಾಗಿದ್ದ. ಒಮ್ಮೆ ಆತ ಅರ್ಘ್ಯ ನೀಡುತ್ತಿದ್ದಾಗ ಬೊಗಸೆಯಲ್ಲಿನ ಅರ್ಘ್ಯಜಲದಲ್ಲಿ ಒಂದು ಪುಟ್ಟ ಮೀನು ಕಾಣಿಸಿತು. ಆ ಮೀನನ್ನು ಆತ ಒಂದು ಪಾತ್ರೆಯಲ್ಲಿಟ್ಟ. ಮೀನು ಪಾತ್ರೆಯ ಗಾತ್ರಕ್ಕೆ ಬೆಳೆಯಿತು. ಕೊಳಕ್ಕೆ ಬಿಟ್ಟ. ಅದು ಕೊಳದ ಆಕಾರದಷ್ಟು ಬೆಳೆದು ನಿಂತಿತು. ನಂತರ ಕಡಲಿಗೆ ಬಿಟ್ಟ. ಅಲ್ಲಿ ಮಹಾ ಮತ್ಸ್ಯವಾಗಿ ಭಗವಂತ ಮನುವಿಗೆ ವಿಶ್ವರೂಪದರ್ಶನ ನೀಡಿದ. ಈ ರೀತಿ ಕಾಣಿಸಿಕೊಂಡ ಭಗವಂತ ಮನುವಿಗೆ ಹೇಳುತ್ತಾನೆ: “ಇನ್ನು ಪ್ರಳಯವಾಗಿ ಎಲ್ಲವೂ ಮುಳುಗಿ ಹೋಗುತ್ತದೆ. ಆದರೆ ನೀನು ಆ ಪ್ರಳಯಕ್ಕೆ ಸಿಕ್ಕಿ ಸಾಯುವ ಅಗತ್ಯವಿಲ್ಲ. ನಿನ್ನನ್ನು ನಾನು ರಕ್ಷಣೆ ಮಾಡುತ್ತೇನೆ. ನೀನು ಮುಂದಿನ ಮನ್ವಂತರದ ಪ್ರವೃತ್ತಿಗೆ ಬೇಕಾದ ಎಲ್ಲಾ ಸಾರ ಸಂಗ್ರಹವನ್ನು ಹಿಡಿದುಕೊಂಡು, ಮುಂದಿನ ಮನ್ವಂತರದಲ್ಲಿ  ಜ್ಞಾನ ದಾನ ಮಾಡಬೇಕಾದ ಋಷಿಗಳ ಜೊತೆಗೆ ಸಮುದ್ರ ತೀರದಲ್ಲಿ ನಿಂತು ಕಾಯುತ್ತಿರು. ಪ್ರಳಯ ಕಾಲದಲ್ಲಿ ಸಮುದ್ರ ಉಕ್ಕೇರಿ ಊರೂರು ಮುಳುಗುತ್ತದೆ. ಆಗ ನೀನು ನಿಂತಲ್ಲಿಗೆ ಒಂದು ದೋಣಿ ಬರುತ್ತದೆ. ಆ ಭೂ ರೂಪದ ದೋಣಿಯನ್ನು ನನ್ನ ಮೂಗಿನ ಮೇಲಿನ   ಕೊಂಬಿಗೆ ಕಟ್ಟಿಬಿಡು. ನಾನು ನಿನ್ನನ್ನು ರಕ್ಷಿಸುತ್ತೇನೆ” ಎಂದು. ಹೀಗೆ ಪ್ರಳಯಕಾಲದಲ್ಲಿ ಮತ್ಸ್ಯ ರೂಪದಲ್ಲಿ ಕಾಣಿಸಿಕೊಂಡ ಭಗವಂತ ಮನುವನ್ನು ರಕ್ಷಿಸಿದ್ದಷ್ಟೇ ಅಲ್ಲ, ಮನುವಿಗೆ ಮತ್ತು ಋಷಿಗಳಿಗೆ  ಜ್ಞಾನೋಪದೇಶವನ್ನೂ ಮಾಡಿದ. ಹೀಗೆ ಭಗವಂತ ಮನುವಿಗೆ ಮಾಡಿದ ಉಪದೇಶವೇ ಮತ್ಸ್ಯಪುರಾಣ. ಪ್ರಳಯಕಾಲದಲ್ಲಿ ಮನುವನ್ನು ರಕ್ಷಣೆ ಮಾಡಿ,  ಪ್ರಳಯದಿಂದ ಪಾರು ಮಾಡಿಸಿ, ಮುಂದಿನ ಮನ್ವಂತರಕ್ಕೆ ಅನುವು ಮಾಡಿಕೊಟ್ಟು ಅದೃಶ್ಯನಾದ ಭಗವಂತ. ಹೀಗೆ ಸಮಸ್ತ ಜೀವ ನಿಕಾಯಗಳಿಗಾಗಿ ಪ್ರಳಯಕಾಲದಲ್ಲೂ  ಜ್ಞಾನೋಪದೇಶ ಮಾಡಿದ ಅವತಾರ ಈ ಮತ್ಸ್ಯಾವತಾರ.
ಇದಲ್ಲದೆ ಕಲ್ಪ ಪ್ರಳಯ ಕಾಲದಲ್ಲಿ ಚತುರ್ಮುಖನ ಬಾಯಿಯಿಂದ ಕೆಳಕ್ಕೆ ಜಾರಿದ ವೇದಗಳನ್ನು ಹಯಗ್ರೀವ ಎನ್ನುವ ಅಸುರ ಅಪಹಾರ ಮಾಡುತ್ತಾನೆ.  ಇದರಿಂದಾಗಿ ಮುಂದಿನ ಕಲ್ಪದಲ್ಲಿ ವೇದ ಪರಂಪರೆಯೇ ನಾಶವಾಗುವ ಪರಿಸ್ಥಿತಿ ಎದುರಾಗುತ್ತದೆ. ಆಗ ಭಗವಂತ ಮತ್ಸ್ಯರೂಪನಾಗಿ ಬಂದು ಹಯಗ್ರೀವಾಸುರನನ್ನು ಕೊಂದು, ವೇದಾಭಿಮಾನಿ ದೇವತೆಗಳನ್ನು ರಕ್ಷಿಸಿದ ಮತ್ತು ಸೃಷ್ಟಿಯ ಆದಿಯಲ್ಲಿ ವೇದವನ್ನು ಚತುರ್ಮುಖನಿಗೆ ನೀಡಿದ. ಈ ಕುರಿತಾದ ಹೆಚ್ಚಿನ ವಿವರಣೆಯನ್ನು ಎಂಟನೇ ಸ್ಕಂಧದಲ್ಲಿ  ಕಾಣಬಹುದು.

ಇಲ್ಲಿ “ಚತುರ್ಮುಖನ ಬಾಯಿಯಿಂದ ವೇದ ಕೆಳಕ್ಕೆ ಜಾರಿತು ಮತ್ತು ಅದನ್ನು ಅಸುರ ಅಪಹರಿಸಿದ” ಎನ್ನುವ ಮಾತನ್ನು ಕೆಲವರು ಗೊಂದಲ ಮಾಡಿಕೊಳ್ಳುತ್ತಾರೆ. ವೇದ ಈ ರೀತಿ ಜಾರಿ ಬೀಳುವ ವಸ್ತು ಅಥವಾ ಪುಸ್ತಕವೇ ?  ಇತ್ಯಾದಿ ಪ್ರಶ್ನೆ ಕೆಲವರದ್ದು.   ಈ ಮಾತು  ಅರ್ಥವಾಗಬೇಕಾದರೆ ಈ ಹಿಂದೆ ಒಂದನೇ ಸ್ಕಂಧದಲ್ಲಿ ವಿವರಿಸಿದ ಪುರಾಣದ ಮೂರು ಭಾಷೆ ಮತ್ತು ನಿರೂಪಣೆಯ ಏಳು ವಿಧ ನಮಗೆ ತಿಳಿದಿರಬೇಕಾಗುತ್ತದೆ. ಸಂಕ್ಷಿಪ್ತವಾಗಿ ಹೇಳಬೇಕೆಂದರೆ: ಇಲ್ಲಿ ವೇದಗಳ ಅಪಹಾರ ಎಂದರೆ ವೇದಾಭಿಮಾನಿ ದೇವತೆಗಳ ಅಪಹಾರ.    

No comments:

Post a Comment