Sunday, May 3, 2015

Shrimad BhAgavata in Kannada -Skandha-02-Ch-07(05)

ಕಪಿಲ ವಾಸುದೇವನಾಗಿ ಸಾಂಖ್ಯವನ್ನು ಜಗತ್ತಿಗೆ ನೀಡಿದ ಭಗವಂತ

ಜಜ್ಞೇ ಚ ಕರ್ದಮಗೃಹೇ ದ್ವಿಜ ದೇವಹೂತ್ಯಾಂ ಸ್ತ್ರೀಭಿಃ ಸಮಂ ನವಭಿರಾತ್ಮಗತಿಂ ಸ್ವಮಾತ್ರೇ
ಊಚೇ ಯ ಆತ್ಮಶಮಲಂ ಗುಣಸಂಗಪಂಕಮಸ್ಮಿನ್ ವಿಧೂಯ ಕಪಿಲಃ ಸ್ವಗತಿಂ ಪ್ರಪೇದೇ ೦೩

ಸ್ವಾಯಂಭುವ ಮನುವಿನ ಮಗಳಾದ ದೇವಹೂತಿಯ ಮದುವೆ ಕರ್ದಮ ಪ್ರಜಾಪತಿಯೊಂದಿಗೆ ನಡೆಯುತ್ತದೆ. ಈ ದಂಪತಿಗಳ ದಾಂಪತ್ಯ ಫಲವಾಗಿ, ಒಂಬತ್ತು ಮಂದಿ ಹೆಣ್ಣು ಮಕ್ಕಳ ನಂತರ ಹುಟ್ಟಿದ ಗಂಡು ಮಗುವೇ ಭಗವಂತನ ಕಪಿಲ ಅವತಾರ.  ಈತನೇ ‘ಸೇಶ್ವರ ಸಾಂಖ್ಯ’ ವನ್ನು ತನ್ನ ತಾಯಿಗೆ ಉಪದೇಶಿಸಿ ಲೋಕಕ್ಕೆ ಸಾಂಖ್ಯವನ್ನು ಕೊಟ್ಟ  ಕಪಿಲವಾಸುದೇವ.
ಕರ್ದಮರ ಮನೆಯಲ್ಲಿ ಕಪಿಲ ಅವತರಿಸಿ ಬಂದ ಎನ್ನುವ ಮಾತನ್ನು ನೋಡಿದೆವು. ಇಲ್ಲಿ ಕರ್ದಮ ಎನ್ನುವ ಹೆಸರಿನ ಅರ್ಥ ನಮಗೆ ಪರಿಚಿತವಾದುದಲ್ಲ. ಈ ಪದದ ಅರ್ಥವನ್ನು ಕೋಶದಲ್ಲಿ ಹುಡುಕಿದರೆ ಅಲ್ಲಿ  ‘ಕೆಸರು’ ಎನ್ನುವ ಅರ್ಥವನ್ನು ಕಾಣುತ್ತೇವೆ. ಆದರೆ ಈ ನಾಮಕ್ಕೆ ವಿಶೇಷವಾದ ನಿರ್ವಚನವಿದೆ. ಕರ್+ದಮ=ಕರ್ದಮ. ಅಂದರೆ ಇಂದ್ರಿಯ ನಿಗ್ರಹದ ಜೊತೆಗೆ(ದಮ) ಕರ್ತವ್ಯ ಕರ್ಮದಲ್ಲಿ(ಕರ್, ಕರೋತಿ) ನಿರತನಾದವನು ಕರ್ದಮ.  ಈ ನಾಮವನ್ನು ಭಗವಂತನಿಗೆ ಅನ್ವಹಿಸಿ ನೋಡಿದರೆ: ದುಷ್ಟಶಕ್ತಿಯನ್ನು ದಮನ ಮಾಡಿ ವಿಶ್ವವನ್ನು ರಕ್ಷಣೆ ಮಾಡುವ ಭಗವಂತ ಕರ್ದಮ.
ಈ ಹಿಂದೆ ಹೇಳಿದಂತೆ ಕರ್ದಮ-ದೇವಹೂತಿಯರಿಗೆ ಮೊದಲು ಹುಟ್ಟಿದ್ದು ಒಂಬತ್ತು ಮಂದಿ ಹೆಣ್ಣು ಮಕ್ಕಳು.  ಹೀಗೆ ಒಂಬತ್ತು ಮಂದಿ ಹೆಣ್ಣು ಮಕ್ಕಳೇ ಹುಟ್ಟಿದಾಗ ದೇವಹೂತಿಗೆ ಪಶ್ಚಾತ್ತಾಪವಾಯಿತಂತೆ. ತಪಸ್ವಿಯಾದ ತನ್ನ ಗಂಡನಿಗೆ ಜ್ಞಾನಿಯಾದ ಒಬ್ಬ ಮಗ ಹುಟ್ಟಲಿಲ್ಲವಲ್ಲಾ ಎಂದು ಆಕೆ ಚಿಂತಿಸಿದಾಗ, ಕರ್ದಮರು ಹೇಳುತ್ತಾರೆ: “ನೀನು ಪಶ್ಚಾತ್ತಾಪ ಪಡುವ ಅಗತ್ಯವಿಲ್ಲ. ಸೃಷ್ಟಿಯಲ್ಲಿ ಯಾವುದೂ ಆಗಬಾರದ್ದು ಆಗುವುದಿಲ್ಲ. ಹೆಣ್ಣು ಹುಟ್ಟುವುದು ಕೀಳಲ್ಲ, ಗಂಡು ಹುಟ್ಟುವುದೇ ಮೇಲಲ್ಲ. ಪ್ರತಿಯೊಂದಕ್ಕೂ ಒಂದು ಉದ್ದೇಶ ಇರುತ್ತದೆ. ಈ ಒಂಬತ್ತು ಮಂದಿ ಹೆಣ್ಣು ಮಕ್ಕಳು ಭಗವಂತನ ಸೃಷ್ಟಿ ವಿಸ್ತಾರದಲ್ಲಿ ಮಹತ್ವದ ಪಾತ್ರ ವಹಿಸುತ್ತಾರೆ. ಇದಲ್ಲದೆ ನೀನು ಜಗತ್ತಿಗೆ ಕೊಡಬೇಕಾದ ಗಂಡು ಮಗುವೊಂದನ್ನು  ಕೂಡಾ ಕೊಡಲಿದ್ದೀಯ” ಎಂದು.  ಕರ್ದಮರ ಮಾತು ಸುಳ್ಳಾಗಲಿಲ್ಲ. ಒಂಬತ್ತು ಮಂದಿ ಹೆಣ್ಣು ಮಕ್ಕಳ ನಂತರ ಸ್ವಯಂ ಭಗವಂತನೇ ದೇವಹೂತಿಯಲ್ಲಿ ಕಪಿಲ ನಾಮಕನಾಗಿ ಅವತರಿಸಿ ಬಂದ.
ಕರ್ದಮ ತನ್ನ ಒಂಬತ್ತು ಮಂದಿ ಹೆಣ್ಣು ಮಕ್ಕಳನ್ನು ಒಂಬತ್ತು ಮಂದಿ ಪ್ರಜಾಪತಿಗಳಿಗೆ ಮದುವೆ ಮಾಡಿ ಕೊಟ್ಟ. ಅವರೆಂದರೆ: ಸಪ್ತರ್ಷಿಗಳು(ಮರೀಚಿ, ಅತ್ರಿ, ಆಂಗೀರಸ, ಪುಲಸ್ತ್ಯ, ಪುಲಹ, ಕ್ರತು, ವಸಿಷ್ಠ), ಭೃಗು ಮತ್ತು ಅಥರ್ವ. ಈ  ನವಪ್ರಜಾಪತಿಗಳಿಂದ ಪ್ರಜಾ ವಿಸ್ತಾರವಾಯಿತು. ಈ ಘಟನೆಯಿಂದ ನಮಗೆ ತಿಳಿಯುವುದೇನೆಂದರೆ: ಸೃಷ್ಟಿಯ ವಿಸ್ತಾರಕ್ಕೆ ಗಂಡು ಮಾತ್ರ ಸಾಲದು. ಎಂದೂ ಯಾವುದೂ ಅನುಪಯುಕ್ತವಲ್ಲ. ಯಾವಾಗ ಎಲ್ಲಿ ಏನು ಬೇಕೋ ಅದಕ್ಕನುಗುಣವಾಗಿ ಭಗವಂತ ಸೃಷ್ಟಿ ಮಾಡುತ್ತಾನೆ. ಹೀಗಾಗಿ ಎಂದೂ ಹೆಣ್ಣು ಮಗು ಎಂದು ಯಾರೂ ಪಶ್ಚಾತ್ತಾಪ ಪಡುವ ಅಗತ್ಯವಿಲ್ಲ.
ಕಪಿಲ ಎನ್ನುವುದು ಭಗವಂತನ ವಿಶೇಷ ನಾಮ.  ಕಪಿ+ಲ=ಕಪಿಲ. ಬಾಹ್ಯಾನಂದದ ಸ್ಪರ್ಶವೇ ಇಲ್ಲದೆ, ಅಂತರಂಗದ ಆನಂದವನ್ನು ಸದಾ ಪಾನ ಮಾಡುತ್ತಿರುವವನು ‘ಕಪಿ’ (ಕಂ-ಪಿಬತಿ=>ಕಪಿ).  ಈ ರೀತಿ ಅಂತರಂಗದ ಆನಂದವನ್ನು ಹಂಬಲಿಸುವವರಿಗೆ ಅದನ್ನು ನೀಡಿ, ಅವರನ್ನು ಸ್ವೀಕಾರ(ಲಾತಿ) ಮಾಡುವ, ಸ್ವರೂಪಾನಂದದಲ್ಲೇ ಮುಳುಗಿರುವ ಮೋಕ್ಷಪ್ರದ ಭಗವಂತ ಕಪಿಲ. ಇಂಥಹ ಕಪಿಲ  ಶುದ್ಧ ಆತ್ಮತತ್ತ್ವ ವಿಜ್ಞಾನ(ಸಾಂಖ್ಯ)ವನ್ನು ಮೊಟ್ಟಮೊದಲು ತನ್ನ ತಾಯಿ ದೇವಹೂತಿಗೆ ಉಪದೇಶಿಸಿದ. ಇದೇ ಮುಂದೆ ‘ಸಾಂಖ್ಯ’ ಎಂದು ಹೆಸರಾಯಿತು.
ಇಲ್ಲಿ ನಾವು ಇನ್ನೊಂದು ವಿಷಯವನ್ನು ಸ್ಪಷ್ಟವಾಗಿ ತಿಳಿದುಕೊಳ್ಳಬೇಕು. ಭಗವಂತ ಕಪಿಲನಾಗಿ ಬಂದು ಸಾಂಖ್ಯವನ್ನು ಪ್ರಪಂಚಕ್ಕೆ ನೀಡಿರುವುದು ಸ್ವಾಯಂಭುವ ಮನ್ವಂತರದಲ್ಲಿ. ಆದರೆ ವೈವಸ್ವತ ಮನ್ವಂತರದಲ್ಲಿ ಕಪಿಲ ಎನ್ನುವ ಹೆಸರಿನ ಒಬ್ಬ ಋಷಿ ಕೂಡಾ ಒಂದು ಸಾಂಖ್ಯವನ್ನು ನೀಡಿದ್ದಾನೆ. ಆದರೆ ಆ ಸಾಂಖ್ಯ ನಿರೀಶ್ವರ ಸಾಂಖ್ಯ. ಅಲ್ಲಿ ಆತ ಭಗವಂತನನ್ನೇ ನಂಬುವುದಿಲ್ಲ! ಭಾಗವತ ಹೇಳುವುದು ಆ ಕಪಿಲನನ್ನಲ್ಲ, ಬದಲಿಗೆ ಸ್ವಾಯಂಭುವ ಮನ್ವಂತರದಲ್ಲಿ ಅವತರಿಸಿ ಸೇಶ್ವರ ಸಾಂಖ್ಯವನ್ನು ನೀಡಿದ ಕಪಿಲ ವಾಸುದೇವನನ್ನು.   
ಕಪಿಲ  ಮೊತ್ತಮೊದಲು ಸಾಂಖ್ಯವನ್ನು ಉಪದೇಶ ಮಾಡಿದ್ದು ತನ್ನ ತಾಯಿಗೆ. ಇದಕ್ಕೆ ಕಾರಣ ತಾಯಿ ದೇವಹೂತಿಯ ಕೋರಿಕೆ. “ನನಗೆ ಮತ್ತೆ ಈ ಸಂಸಾರ ಬೇಡ,  ಇದರಿಂದ ಪಾರಾಗುವ ದಾರಿ ತೋರಿಸು” ಎಂದು ಕಪಿಲನನ್ನು ಕೇಳಿದ ತಾಯಿಗೆ ಕಪಿಲ ಅಧ್ಯಾತ್ಮ ತತ್ತ್ವವನ್ನು ಉಪದೇಶಿಸಿದ.  ಮೇಲಿನ ಶ್ಲೋಕದಲ್ಲಿ ‘ಸ್ವಮಾತ್ರೇ’ ಎನ್ನುವ ಪದ ಬಳಕೆಯಾಗಿದೆ. ಸಂಸ್ಕೃತದಲ್ಲಿ ‘ಮಾತೃ’ ಶಬ್ದ ಸ್ತ್ರೀಲಿಂಗವಾದಾಗ ‘ತಾಯಿ’ ಎನ್ನುವ ಅರ್ಥವನ್ನು ಕೊಡುತ್ತದೆ. ಅದನ್ನೇ ಪುಲ್ಲಿಂಗದಲ್ಲಿ ನೋಡಿದರೆ ‘ಭಗವಂತನನ್ನು ತಿಳಿದವನು ಅಥವಾ ಜ್ಞಾನದ ಮಾರ್ಗದಲ್ಲಿ ಸಾಗುವವನು’ ಎನ್ನುವ ಅರ್ಥವನ್ನು ಮಾತೃ ಪದ ಕೊಡುತ್ತದೆ. ಇದು ಸಂಸ್ಕೃತ ಭಾಷೆಯ ಸೊಬಗು. ಒಟ್ಟಿನಲ್ಲಿ ಹೇಳಬೇಕೆಂದರೆ: ಅತ್ಯದ್ಭುತವಾದ ಅಧ್ಯಾತ್ಮ ತತ್ತ್ವವನ್ನು ತನ್ನ ತಾಯಿಯ ಮುಖೇನ ಜ್ಞಾನವನ್ನು ಬಯಸುವ ಪ್ರತಿಯೊಬ್ಬರಿಗೂ ಭಗವಂತ ಕಪಿಲ ರೂಪದಿಂದ ಅವತರಿಸಿ ನೀಡಿದ. .

‘ಸಾಂಖ್ಯ’ ಎಂದರೆ ಸರಿಯಾದ ತಿಳುವಳಿಕೆ. ಪ್ರಾಚೀನರು ಸಂಖ್ಯಾಶಾಸ್ತ್ರ(Numerology) ಮತ್ತು ಅಧ್ಯಾತ್ಮ ವಿದ್ಯೆ(Spiritual wisdom) ಎರಡನ್ನೂ ಜೊತೆಯಾಗಿ ಬಳಸುತ್ತಿದ್ದರು. ಹೀಗಾಗಿ ಎರಡಕ್ಕೂ ಸಾಂಖ್ಯಾ ಎನ್ನುವ  ಹೆಸರು ಬಂತು. ಭಾಷೆ ಸ್ಪಷ್ಟತೆಯನ್ನು ಕೊಡುತ್ತದಾದರೂ ಸಹ ಅಲ್ಲಿ ಖಚಿತತೆ ಇರುವುದಿಲ್ಲ. ಒಬ್ಬ ವ್ಯಕ್ತಿ ಯಾವ ಅರ್ಥವನ್ನು ಅನುಸಂಧಾನ ಮಾಡಿ ಯಾವ ಶಾಸ್ತ್ರದ ಹಿನ್ನೆಲೆಯಲ್ಲಿ ಮಾತನಾಡಿದ ಎನ್ನುವುದು ತಕ್ಷಣ ಇನ್ನೊಬ್ಬರಿಗೆ ತಿಳಿಯದೇ ಹೋಗಬಹುದು. ಇದರಿಂದ ಒಬ್ಬ ವ್ಯಕ್ತಿ ಆಡಿದ ಮಾತನ್ನು ಒಬ್ಬೊಬ್ಬರು ಅವರವರ ಅನುಭವದ ಹಿನ್ನೆಲೆಯಲ್ಲಿ ಒಂದೊಂದು ರೀತಿ ಅರ್ಥಮಾಡಿಕೊಳ್ಳಬಹುದು. ಹೀಗಾಗಿ ಭಾಷೆಗೆ ಒಂದು ಖಚಿತತೆಯನ್ನು ಕೊಡಬೇಕಾದರೆ ಅಲ್ಲಿ ಸಂಖ್ಯೆಯನ್ನು ಬಳಸಬೇಕಾಗುತ್ತದೆ. ಇಂಥಹ ಒಂದು ಹೊಸ ವಿಧಾನವನ್ನು ಪ್ರಾಚೀನರು ಆರಂಭಿಸಿ ಬೆಳೆಸಿದರು. ಇಂಥಹ ವಿಧಾನವನ್ನು ಲೋಕಕ್ಕೆ ಕೊಟ್ಟವನು ಕಪಿಲವಾಸುದೇವ. ಆತ ತನ್ನ ತಾಯಿಗೆ ವಿವರಿಸಿದ ಸಾಂಖ್ಯದ ಒಂದು ಉದಾಹರಣೆ ಹೀಗಿದೆ: ಪಂಚಭಿಃ ಪಂಚಭಿರ್ಬ್ರಹ್ಮ ಚತುರ್ಭಿರ್ದಶಭಿಸ್ತಥಾ ಏತಚ್ಚತುರ್ವಿಂಶತಿಕಂ ಗಣಂ ಪ್ರಾಧಾನಿಕಂ ವಿದುಃ (ಭಾಗವತ: ೩-೨೭-೧೨). ಇದರ ಸಂಕ್ಷಿಪ್ತ ಅರ್ಥ ಹೀಗಿದೆ: ಮೊದಲು ಐದು ತತ್ವಗಳಿದ್ದವು(ಪಂಚಭೂತಗಳು), ಆ ಐದರಲ್ಲಿ ಐದು ಗುಣಗಳಿವೆ(ಪಂಚತನ್ಮಾತ್ರೆಗಳು). ಈ ಐದು ಗುಣಗಳನ್ನು ಗ್ರಹಣ ಮಾಡಿ ಕಾರ್ಯಗತಗೊಳಿಸಲು ಹತ್ತು ಇಂದ್ರಿಯಗಳಿವೆ(ಪಂಚಜ್ಞಾನೇಂದ್ರಿಯಗಳು ಮತ್ತು ಪಂಚಕರ್ಮೇಂದ್ರಿಯಗಳು). ಈ ಇಂದ್ರಿಯಗಳ  ನಿರ್ವಹಣೆಯಾಗುವುದು  ನಾಲ್ಕು ಅಂತಃಕರಣದಿಂದ(ಮನಸ್ಸು, ಬುದ್ಧಿ, ಅಹಂಕಾರ ಮತ್ತು ಚಿತ್ತ). ಪ್ರಪಂಚ ಎಂದರೆ ಈ ಇಪ್ಪತ್ತನಾಲ್ಕು. ಈ ೨೪ ಜಡಗಳನ್ನು ಅನುಭವಿಸುವ ಚೇತನ ಇಪ್ಪತೈದು ಮತ್ತು ಚೇತನಾಚೇತನ ಪ್ರಪಂಚವನ್ನು ನಿಯಂತ್ರಿಸುವವನು ಇಪ್ಪತ್ತಾರನೇ ಭಗವಂತ. ಇದು ಸಂಖ್ಯಯ ಮುಖೇನ ಭಗವಂತ ನೀಡಿದ ಬ್ರಹ್ಮಾಂಡದ ವಿವರಣೆ. (ಈ ಕುರಿತು ಹೆಚ್ಚಿನ ವಿವರಣೆ ಮುಂದಿನ ಸ್ಕಂಧದಲ್ಲಿ ಬರುತ್ತದೆ).  ತ್ರಿಗುಣಗಳಿಂದ ಕೊಳೆಯಾಗಿರುವ ನಮ್ಮ ಆತ್ಮತತ್ತ್ವವನ್ನು ತೊಳೆದು ಸ್ವಚ್ಛಗೊಳಿಸುವುದಕ್ಕಾಗಿ ಭಗವಂತ ಕಪಿಲ ರೂಪದಲ್ಲಿ  ಬಂದು ಸಾಂಖ್ಯವನ್ನು ಜಗತ್ತಿಗೆ ನೀಡಿದ. 

No comments:

Post a Comment