Saturday, May 9, 2015

Shrimad BhAgavata in Kannada -Skandha-02-Ch-07(06)

 ಅತ್ರೇರಪತ್ಯಮಭಿಕಾಂಕ್ಷತ ಆಹ ತುಷ್ಟೋ ದತ್ತೋ ಮಯಾSಹಮಿತಿ ಯದ್ ಭಗವಾನ್ ಸ ದತ್ತಃ
ಯತ್ಪಾದಪಂಕಜಪರಾಗಪವಿತ್ರದೇಹಾ ಯೋಗರ್ದ್ಧಿಮಾಪುರಮಯೀಂ ಯದುಹೈಹಯಾದ್ಯಾಃ ೦೪

ಸ್ವಾಯಂಭುವ ಮನುವಿನ  ಮಗಳಾದ ದೇವಹೂತಿಯ ಒಂಬತ್ತು ಮಂದಿ ಹೆಣ್ಣುಮಕ್ಕಳಲ್ಲಿ ಒಬ್ಬಳಾದ ಅನುಸೂಯೆಯ ಮದುವೆ ಅತ್ತ್ರಿಯೊಂದಿಗೆ ನಡೆಯುತ್ತದೆ. ಅತ್ತ್ರಿ-ಅನುಸೂಯೆಯರು ಸೃಷ್ಟಿ-ಸ್ಥಿತಿ-ಸಂಹಾರ ಮಾಡಿ ಜಗತ್ತನ್ನು ನಿಯಂತ್ರಣ ಮಾಡುವ ಭಗವದ್ ಶಕ್ತಿಯೇ ತಮ್ಮಲ್ಲಿ ಮಗುವಾಗಿ ಹುಟ್ಟಿ ಬರಬೇಕೆಂದು ಬಯಸಿ ತಪಸ್ಸು ಮಾಡಿದಾಗ, ಅದಕ್ಕೆ ಮೆಚ್ಚಿದ ಭಗವಂತ ಪ್ರಸನ್ನನಾಗಿ ಹೇಳುತ್ತಾನೆ: “ನಿಮ್ಮ ತಪಸ್ಸಿಗೆ ನಾನು ಮೆಚ್ಚಿಕೊಂಡಿದ್ದೇನೆ ಮತ್ತು ನಾನು ನಿಮಗೆ ನನ್ನನ್ನು ಕೊಟ್ಟುಕೊಂಡಿದ್ದೇನೆ(ದತ್ತನಾಗಿದ್ದೇನೆ)” ಎಂದು.  ಇದರಿಂದಾಗಿ ಅತ್ತ್ರಿ-ಅನುಸೂಯೆಯರ ದಾಂಪತ್ಯದ ಫಲದಲ್ಲಿ ಹುಟ್ಟಿದ ಶಿಶುವಿಗೆ ದತ್ತ ಎನ್ನುವ ಹೆಸರು ಬರುತ್ತದೆ. ದತ್ತ ಅತ್ತ್ರಿಯ ಮಗನಾಗಿ ಹುಟ್ಟಿ ಬಂದುದರಿಂದ ಆತ ದತ್ತಾತ್ತ್ರೇಯನೆಂದು ಹೆಸರಾಗುತ್ತಾನೆ.
ಅತ್ತ್ರಿ-ಅನುಸೂಯೆಯರು ಸೃಷ್ಟಿ-ಸ್ಥಿತಿ-ಸಂಹಾರ ಮಾಡುವ ಸಮಸ್ತ ಶಕ್ತಿಗಳೂ ಮೈದಾಳಿ ತಮ್ಮ ಸಂತಾನವಾಗಿ ಬರಬೇಕೆಂದು ಕೇಳಿಕೊಂಡಿರುವುದರಿಂದ, ಭಗವಂತ ಚತುರ್ಮುಖ ಬ್ರಹ್ಮ ಮತ್ತು ಶಿವನನ್ನೂ ಕೂಡಾ ಅವರ ಮಕ್ಕಳಾಗಿ ಹುಟ್ಟಿ ಬರುವಂತೆ ತಿಳಿಸುತ್ತಾನೆ[ಭಗವಂತ ಬ್ರಹ್ಮನೊಳಗೆ ನಿಂತು ಸೃಷ್ಟಿಯನ್ನೂ ಹಾಗೂ  ಶಿವನೊಳಗೆ ನಿಂತು ಸಂಹಾರವನ್ನೂ ಮಾಡುವ ವಿಷಯವನ್ನು ನಾವು ಈ ಹಿಂದೆ ನೋಡಿದ್ದೇವೆ]. ಇಲ್ಲಿ ಚತುರ್ಮುಖ ಬ್ರಹ್ಮ ಅವತಾರ ರೂಪಿಯಾಗಿ ಹುಟ್ಟಿ ಬರುವಂತಿಲ್ಲವಾದ್ದರಿಂದ,  ಜಗತ್ತಿನ ಸೃಷ್ಟಿ ವಿಸ್ತಾರಕ್ಕೆ ಮೂಲ ಕಾರಣಶಕ್ತಿಯಾದ  ಚಂದ್ರ ಅತ್ತ್ರಿಯ ಮಗನಾಗಿ ಹುಟ್ಟುತ್ತಾನೆ ಮತ್ತು ಚತುರ್ಮುಖ ಆತನಲ್ಲಿ ಆವಿಷ್ಟನಾಗಿರುತ್ತಾನೆ. ಶಿವ ದುರ್ವಾಸನಾಗಿ ಅವತರಿಸಿ ಬರುತ್ತಾನೆ.  
ಇಲ್ಲಿ ಚಂದ್ರನೊಂದಿಗೆ ಚತುರ್ಮುಖ ಆವಿಷ್ಟನಾಗಿ ಅವತರಿಸಿದ ವಿಷಯವನ್ನು ನೋಡಿದೆವು. ಸೋಮಶಕ್ತಿ ಸೃಷ್ಟಿವಿಸ್ತಾರದಲ್ಲಿನ ಒಂದು ಮಹತ್ತಾದ ಕಾರಣಶಕ್ತಿ. ಅಗ್ನಿ-ಸೋಮಾತ್ಮಕಂ ಜಗತ್. ಈ ಜಗತ್ತಿನಲ್ಲಿರುವ ಸಮಸ್ತ ವನಸ್ಪತಿಗಳು, ಸಮಸ್ತ ಆಹಾರಗಳು ಸೋಮನಿಗೆ ಸಂಬಂಧಿಸಿರುವಂತಹದ್ದು. ಅದನ್ನು ಬೇಯಿಸಿ ತಿನ್ನುವುದಕ್ಕೆ ಬೇಕಾದ ಶಕ್ತಿ  ಅಗ್ನಿಶಕ್ತಿ. [ಹೀಗಾಗಿ ಹೋಮಮಾಡುವಾಗ ಮೊದಲು ಚಕ್ಷುರ್ ಹೋಮ  ಮಾಡುತ್ತಾರೆ. ಅಲ್ಲಿ ಪುರೋಹಿತರು ಅಗ್ನಿ-ಸೋಮಾಭ್ಯಂ ಸ್ವಾಹಾ ಎಂದು ಹೇಳಿ ಅಗ್ನಿಯ ಕಣ್ಣಿಗೆ ಆಹುತಿ ಕೊಡುತ್ತಾರೆ. ಹೋಮ ಕುಂಡದಲ್ಲಿ ಅಗ್ನಿಯ ಮುಖವನ್ನು ಮನಸ್ಸಿನಲ್ಲಿ ರೂಪಿಸಿಕೊಂಡು ಕಣ್ಣಿನ ಭಾಗಕ್ಕೆ ತುಪ್ಪವನ್ನು ಹಾಕುತ್ತಾರೆ. ಇದಾದ ನಂತರವೇ ವ್ಯಾಹೃತಿ ಮಂತ್ರಗಳಿಂದ ಅಗ್ನಿಯ ಬಾಯಿಗೆ ಆಹುತಿ ಕೊಡುತ್ತಾರೆ. ಇದು ಯಜ್ಞದಲ್ಲಿ ಆಹುತಿ ಕೊಡುವ ಕ್ರಮ.  ಊಟ ಮಾಡುವುದೂ ಕೂಡಾ ಒಂದು ಬಗೆಯ ಹೋಮ. ಇದು ನಮ್ಮೊಳಗಿರುವ ಪ್ರಾಣನಲ್ಲಿ ಸನ್ನಿಹಿತನಾಗಿರುವ, ಪಂಚರೂಪಿಯಾದ ನಾರಾಯಣನಿಗೆ ಮಾಡುವ ಹೋಮ. ಇಲ್ಲಿಯೂ ಕೂಡಾ ಆಹುತಿ ಕೊಡುವ ಮೊದಲು ಚಕ್ಷುರ್ ಹೋಮ ನಡೆಯಬೇಕಲ್ಲವೇ ? ಇದಕ್ಕಾಗಿಯೇ ತುಪ್ಪ ಬಡಿಸುವುದು. ಹೀಗೆ ಬಡಿಸುವಾಗ ಒಂದು ಬಾರಿ ಬಡಿಸದೇ ಅಗ್ನಿ-ಸೋಮರ ಪ್ರೀತಿಗಾಗಿ ಎರಡು ಬಾರಿ ಬಡಿಸಬೇಕು. ಇದನ್ನು ‘ಅಭಿಘಾರ’ ಎನ್ನುತ್ತಾರೆ].
ಅತ್ತ್ರಿ-ಅನುಸೂಯೆಯಾರ ತಪಸ್ಸಿನ ಫಲವಾಗಿ ವಿಷ್ಣು-ದತ್ತನಾಗಿ, ಬ್ರಹ್ಮ-ಸೋಮನಾಗಿ ಮತ್ತು  ಶಿವ-ದುರ್ವಾಸನಾಗಿ ಭೂಮಿಯಲ್ಲಿ ಅವತರಿಸಿ ಬರುತ್ತಾರೆ [ಈ ಹಿಂದೆ, ಮೊದಲ ಸ್ಕಂಧದಲ್ಲಿ ಹೇಳಿರುವಂತೆ: ಸಾಮಾನ್ಯವಾಗಿ ದತ್ತಾತ್ರೇಯ ಎಂದಾಗ ಮೂರು ತಲೆ ಏಕ ಶರೀರ ಮತ್ತು ತಲೆಯಲ್ಲಿ ಚಂದ್ರನಿರುವ ಚಿತ್ರವನ್ನು ಚಿತ್ರಕಾರರು ಚಿತ್ರಿಸುತ್ತಾರೆ. ಆದರೆ ಶಾಸ್ತ್ರದಲ್ಲಿ ಎಲ್ಲೂ ಈ ರೀತಿ ರೂಪದ ವಿವರಣೆ ಇಲ್ಲ. ದತ್ತ, ದುರ್ವಾಸ ಮತ್ತು ಚಂದ್ರ ಈ ಮೂವರು ಮೂರು ಶರೀರದಲ್ಲಿ ಅವತರಿಸಿ ಬಂದ ರೂಪಗಳು. ಇಲ್ಲಿ ಚಂದ್ರ ಎಂದರೆ ಚಂದ್ರ ಗ್ರಹವಲ್ಲ, ದೇವತೆ] .
‘ದತ್ತ’ ಯೋಗ ಮಾರ್ಗದ ಮಹಾ ಪ್ರವರ್ತಕ. ಆತ ಕರ್ಮವನ್ನು ಕರ್ಮಯೋಗವನ್ನಾಗಿಯೂ, ಜ್ಞಾನವನ್ನು ಜ್ಞಾನಯೋಗವಾಗಿಯೂ ಮಾಡಿದ. ಬದುಕಿನಲ್ಲಿ ಯೋಗ ಸಾಧನೆಯಿಂದ ಎತ್ತರಕ್ಕೇರುವ ವಿಧಾನವನ್ನು ಉಪದೇಶ ಮಾಡಿದ ಭಗವಂತನ ರೂಪ ಈ ದತ್ತರೂಪ. ಯೋಗ ಸಾಧನೆಯ ಅತ್ತ್ಯುನ್ನತ ಸ್ಥಿತಿಯನ್ನು ತಾನು ಮಾಡಿ ತೋರಿ, ಪ್ರಪಂಚಕ್ಕೆ ಉಪದೇಶಿಸಿದ ದತ್ತಾತ್ರೇಯ. ದತ್ತಾತ್ರೇಯ ನಡೆದಾಡಿದ ಸ್ಥಳದಲ್ಲಿ ಹೊರಳಾಡಿದರೂ ಸಾಕು, ಯೋಗ ಸಿದ್ಧಿಯಾಗುತ್ತದೆ ಎನ್ನುವ ಮಾತಿದೆ. ಅಂಥಹ ಮಹಾ ಯೋಗಪ್ರವರ್ತಕ ದತ್ತಾತ್ರೇಯ.

ಇಲ್ಲಿ ನಾರದರಿಗೆ ಭಗವಂತನ ಅವತಾರದ ಕಥೆಯನ್ನು ವಿವರಿಸುತ್ತಿರುವ ಚತುರ್ಮುಖ ಹೇಳುತ್ತಾನೆ: “ಅಮಯೀ ಯೋಗರ್ದ್ಧಿ” ಎಂದು. ದತ್ತಾತ್ರೇಯ ಅ-ಕಾರ ವಾಚ್ಯನಾದ ನಾರಾಯಣನನ್ನು ಪ್ರತಿಪಾದಿಸುವ ಯೋಗವನ್ನು ಲೋಕಕ್ಕೆ ಬಿತ್ತರಿಸಿದ. ಇದು ಸ್ವಾಯಂಭುವ ಮನ್ವಂತರದಲ್ಲಿ ಆದ ಅವತಾರ, ಆದರೆ ವೈವಸ್ವತ ಮನ್ವಂತರಲ್ಲೂ ಕೂಡಾ ದತ್ತಾತ್ರೇಯನ ಶಿಷ್ಯರನ್ನು ನಾವು ಕಾಣುತ್ತೇವೆ. ಯಾದವ ಕುಲದ ಮೂಲ ಪುರುಷನಾದ ಯದು, ಕಾರ್ತವೀರ್ಯಾರ್ಜುನ, ಹೀಗೆ ಅನೇಕ ಮಂದಿಗೆ ಜ್ಞಾನಮಾರ್ಗವನ್ನು ಉಪದೇಶ ಮಾಡುವ ಯೋಗಮೂರ್ತಿಯಾಗಿ ದತ್ತಾತ್ರೇಯ ನಿಲ್ಲುತ್ತಾನೆ.

No comments:

Post a Comment