Sunday, May 10, 2015

Shrimad BhAgavata in Kannada -Skandha-02-Ch-07(07)

ಪಾಲನೆ ಹಾಗೂ ಜ್ಞಾನ ಪ್ರವರ್ತಕ ರೂಪ-ಭಗವಂತನ ವಿಷ್ಣು ನಾಮಕ ರೂಪ

ತಪ್ತಂ ತಪೋ ವಿವಿಧಲೋಕಸಿಸೃಕ್ಷಯಾ ಮ ಆದೌ ಸನಾತ್ ಸುತಪಸಸ್ತಪತಃ ಸ ನೋSಭೂತ್
ಪ್ರಾಕ್ಕಲ್ಪಸಂಪ್ಲವವಿನಷ್ಟಮಿಹಾತ್ಮತತ್ತ್ವಂ ಸಮ್ಯಗ್ ಜಗಾದ ಮುನಯೋ ಯದಚಕ್ಷತಾತ್ಮನ್ ೦೫

ಚತುರ್ಮುಖ ಬ್ರಹ್ಮ ಸೃಷ್ಟಿ ವಿಸ್ತಾರಕ್ಕೆ ಬೇಕಾದ ಶಕ್ತಿಯನ್ನು ಪಡೆಯುವುದಕ್ಕೋಸ್ಕರ ಭಗವಂತನನ್ನು ಕುರಿತು ತಪಸ್ಸು ಮಾಡಿದಾಗ, ಭಗವಂತ ವಿಷ್ಣು ನಾಮಕನಾಗಿ ಚತುರ್ಮುಖನಿಂದ ಆವಿರ್ಭಾವನಾಗಿ ಬಂದ. ಈ ಅವತಾರ ಸನಕಾದಿಗಳು ಸೃಷ್ಟಿಯಾಗುವ ಮೊದಲೇ ನಡೆದ ಅವತಾರ. “ಇದು ಕೇವಲ ಪಾಲನೆ ಮಾಡುವ ಅವತಾರವಷ್ಟೇ ಅಲ್ಲ, ಈ ಅವತಾರದಲ್ಲಿ ಭಗವಂತ ನಷ್ಟವಾಗಿದ್ದ ಹಿಂದಿನ ಕಲ್ಪದಲ್ಲಿದ್ದ ಜ್ಞಾನ ಪರಂಪರೆಯನ್ನು ನನಗೆ ಉಪದೇಶ ಮಾಡಿದ. ಇದನ್ನು ಎಲ್ಲಾ ಋಷಿಗಳು ತಮ್ಮ ಅಂತರಾತ್ಮದಲ್ಲಿ ಕಂಡು ಉಪಾಸನೆ ಮಾಡಿದರು” ಎಂದಿದ್ದಾನೆ ಚತುರ್ಮುಖ.

ತಪಸ್ಸು ಅಂದರೇನು ಎಂದು ತೋರಿದ ಭಗವಂತನ ನರ-ನಾರಾಯಣ ರೂಪ

ಧರ್ಮಸ್ಯ ದಕ್ಷದುಹಿತರ್ಯಜನಿ ಸ್ವಮೂರ್ತ್ಯಾ ನಾರಾಯಣೋ ನರ ಇತಿ ಸ್ವತಪಃಪ್ರಭಾವಃ
ದೃಷ್ಟಾತ್ಮನೋ ಭಗವತೋ ನಿಯಮಾವಲೋಪಂ ದೇವ್ಯಸ್ತ್ವನಂಗಪೃತನಾ ಘಟಿತುಂ ನ ಶೇಕುಃ ೦೬

ಕಾಮಂ ದಹಂತಿ ಕೃತಿನೋ ನನು ರೋಷದೃಷ್ಟ್ಯಾ ರೋಷಂ ದಹಂತಮುತ ತೇ ನ ದಹಂತ್ಯಸಹ್ಯಮ್
ಸೋSಯಂ ಯದಂತರಮಲಂ ನಿವಿಶನ್ ಬಿಭೇತಿ ಕಾಮಃ ಕಥಂ ನು ಪುನರಸ್ಯ ಮನಃ ಶ್ರಯೇತ ೦೭


ಸ್ವಾಯಂಭುವ ಮನುವಿನ ಕೊನೇ ಮಗಳು ‘ಪ್ರಸೂತಿ’ ದಕ್ಷಪ್ರಜಾಪತಿಯ ಹೆಂಡತಿ. ಇವರ ದಾಂಪತ್ಯದಲ್ಲಿ ಹುಟ್ಟಿದ ಹದಿಮೂರು ಮಂದಿ ಹೆಣ್ಣು ಮಕ್ಕಳನ್ನು ‘ಧರ್ಮ’ ಮದುವೆಯಾದ.  ಈ ಹದಿಮೂರು ಮಂದಿಯಲ್ಲಿ ಕೊನೆಯವಳಾದ ‘ಮೂರ್ತಿ’ ಎನ್ನುವವಳಲ್ಲಿ ಭಗವಂತ ನರ-ನಾರಾಯಣನಾಗಿ  ಅವತರಿಸಿದ. ಒಂದು ಆವೇಶ ರೂಪ(ನರ) ಹಾಗೂ ಇನ್ನೊಂದು ಸ್ವರೂಪರೂಪ(ನಾರಾಯಣ). ನರ ಶೇಷನ ಸ್ವರೂಪ ರೂಪ.  ಆತನಲ್ಲಿ ಭಗವಂತನ ಆವೇಶವಿತ್ತು. ನಾರಾಯಣ ಎನ್ನುವುದು ಭಗವಂತನ ಸ್ವರೂಪರೂಪ. [ಇದೇ ದಂಪತಿಗಳಲ್ಲಿ ಹರಿ ಮತ್ತು ಕೃಷ್ಣ ಎನ್ನುವ ಎರಡು ಭಗವಂತನ ಅವತಾರವಾಗಿದ್ದು, ಅದನ್ನು ಇಲ್ಲಿ ವಿವರಿಸಿಲ್ಲ]. ನರ-ನಾರಾಯಣ ರೂಪ ತಪಸ್ಸು ಅಂದರೆ ಏನು ಎಂದು ಜಗತ್ತಿಗೆ ತೋರಿದ ಲೋಕೋದ್ಧಾರಕ ರೂಪ. ಲೋಕ ಸಂಗ್ರಹಃ ಮೇವಾಪಿ ಸಂಪಷ್ಯನ್ ಕರ್ತು ಮರ್ಹಸಿ. ಲೋಕಶಿಕ್ಷಣಕ್ಕಾಗಿ ತಪಸ್ಸು ಮಾಡಿ ಆತ್ಮಸಾಕ್ಷಾತ್ಕಾರ ಪಡೆಯುವುದು ಹೇಗೆ ಎಂದು  ತೋರಿದ ಭಗವಂತನ ರೂಪವಿದು. ಆತ ತಪಸ್ಸು ಮಾಡಿ ಆತ್ಮಸಾಕ್ಷಾತ್ಕಾರ ಪಡೆದವನಂತೆ ಕುಳಿತಿರುವಾಗ ಆತನ ತಪಸ್ಸನ್ನು ಭಂಗಗೊಳಿಸಲು ಕಾಮದೇವನ ಸೈನ್ಯ ಆತನ ಮೇಲೆ ಲಗ್ಗೆ ಇಟ್ಟಿತಂತೆ. ಆದರೆ ನರ-ನಾರಾಯಣರ ನಿಯಮ ಲೋಪ ಮಾಡಲು ಯಾರಿಂದಲೂ ಸಾಧ್ಯವಾಗಲಿಲ್ಲ. ಅವರು ಕಾಮಕ್ಕೂ ಬಲಿಯಾಗಲಿಲ್ಲ, ಕೋಪಕ್ಕೂ ಬಲಿಯಾಗಲಿಲ್ಲ. ಹೀಗೆ ನಿಜವಾದ ತಪಸ್ಸು ಎಂದರೆ ಏನು ಎನ್ನುವುದನ್ನು ಭಗವಂತ ತನ್ನ ನರ-ನಾರಾಯಣ ರೂಪದಲ್ಲಿ ಜಗತ್ತಿಗೆ ತೋರಿಸಿಕೊಟ್ಟ. 

No comments:

Post a Comment