ಜ್ಞಾನಕ್ಕಾಗಿ ಕರ್ಮ. ಶ್ರದ್ಧೆ-ಜ್ಞಾನವಿಲ್ಲದ ಕರ್ಮ ಕೇವಲ ಪ್ರಾರಬ್ಧಕರ್ಮ
ವರಾಹ ರೂಪಿಯಾಗಿ ಬಂದು ಕರ್ಮಕ್ಕೆ ಬೇಕಾದ ಸಮಗ್ರ ಸಾಮಗ್ರಿಯನ್ನು ಸೃಷ್ಟಿ ಮಾಡಿದ ಭಗವಂತ, ಯಜ್ಞ ರೂಪಿಯಾಗಿ ಬಂದು ಕರ್ಮಾಚರಣೆ ಸ್ವೀಕಾರ ಮಾಡಿದ.
ಇದರಿಂದ ಕರ್ಮ ಸಾಂಗವಾಗಿ ನಡೆಯಿತು. ಆದರೆ ಕೇವಲ ಕರ್ಮವಾದರೆ ಅದರಿಂದ ಉಪಯೋಗ ಬಹಳ ಕಡಿಮೆ. ಕರ್ಮ ಶಕ್ತಿಶಾಲಿಯಾಗಬೇಕಾದರೆ
ಅದು ಜ್ಞಾನಪೂರ್ವಕವಾಗಿರಬೇಕು. ನಮ್ಮಲ್ಲಿ ಎಷ್ಟೋ ಜನ ವ್ರತ, ನಿಯಮ, ಪೂಜೆ, ಪುನಸ್ಕಾರ, ಇತ್ಯಾದಿ
ಕರ್ಮ ಮಾಡುತ್ತಾರೆ. ಆದರೆ ಅವರು ಅದನ್ನು ಏಕೆ ಮಾಡುತ್ತಿದ್ದಾರೆ
ಎನ್ನುವುದು ಅವರಿಗೇ ತಿಳಿದಿರುವುದಿಲ್ಲ. ಛಾ೦ಧೋಕ್ಯ
ಉಪನಿಷತ್ತಿನಲ್ಲಿ ಹೇಳುವಂತೆ: "ಯದೇವ ವಿದ್ಯಯಾ
ಕರೋತಿ ಶ್ರದ್ಧೆಯ ಉಪನಿಷದಾ, ತದೇವ
ವೀರ್ಯವತ್ತರ೦ ಭವತಿ , ವಿಜ್ಞಾನ೦ ಯಜ್ಞಾ೦ ತನುತೇ". ಅಂದರೆ: “ನೀನು ಏನನ್ನು
ಮಾಡಿದರೂ ತಿಳಿದು ಮಾಡು. ಜ್ಞಾನ ಪೂರ್ವಕವಾಗಿ ಮಾಡಿದ ಕರ್ಮ ಸಫಲ. ಇಲ್ಲದಿದ್ದರೆ ಅದು ವ್ಯರ್ಥ”. ಮಾಡುವ ಕರ್ಮವನ್ನು ಏತಕ್ಕಾಗಿ ಮಾಡುತ್ತಿದ್ದೇವೆ, ಮಾಡುವುದರ ಫಲವೇನು, ಮಾಡುವುದು ಹೇಗೆ ಎನ್ನುವುದು
ನಮಗೆ ಗೊತ್ತಿರಬೇಕು. ಅಜ್ಞಾನದಿಂದ ಮಾಡುವ ಕರ್ಮ ವ್ಯರ್ಥ. ಹಾಗಾಗಿ ಏನೇ ಮಾಡುವುದಿದ್ದರೂ ತಿಳಿದು-ನಂಬಿ ಮಾಡಬೇಕು. ತಿಳಿಯದೇ ಮಾಡಿದರೆ ಅದು ಮೂಢನಂಬಿಕೆಯಾಗುತ್ತದೆ,
ನಂಬದೇ ಮಾಡಿದರೆ ಡಂಭಾಚಾರವಾಗುತ್ತದೆ. ಕ್ರಿಯೆಯ ಹಿಂದೆ ತಿಳುವಳಿಕೆ ಮತ್ತು ನಂಬಿಕೆ ಅತ್ಯಗತ್ಯ.
ಇಂದು ನಮ್ಮೆಲ್ಲಾ ಸಮಸ್ಯೆಗಳಿಗೂ ಕಾರಣ ತಿಳುವಳಿಕೆ
ಇಲ್ಲದಿರುವುದು. ಕೆಲವರಿಗೆ ತುಂಬಾ ಶ್ರದ್ಧೆ ಇರುತ್ತದೆ. ಆದರೆ ತಿಳುವಳಿಕೆ ಇರುವುದಿಲ್ಲ.
ಇದರಿಂದ ಆಗುವ ಅನಾಹುತ ಏನೆಂದರೆ: ನಾವು ನಂಬಿರುವ ಸತ್ಯವನ್ನು ನಮ್ಮ ಮಕ್ಕಳಿಗೆ ನಂಬಿಸಲು ನಮಗೆ ಸಾಧ್ಯವಾಗುವುದಿಲ್ಲ.
ಮಕ್ಕಳು “ಏಕೆ ಹೀಗೆ ಮಾಡಬೇಕು” ಎಂದು ಕೇಳಿದರೆ ನಮ್ಮಲ್ಲಿ ಉತ್ತರ ಇರುವುದಿಲ್ಲ. ಇನ್ನು ಕೆಲವರಿಗೆ ಶ್ರದ್ಧೆಯೇ ಇರುವುದಿಲ್ಲ. ಕೇವಲ ಡಂಭಾಚಾರಕ್ಕಾಗಿ
ಎಲ್ಲವನ್ನೂ ಮಾಡುತ್ತಾರೆ. ಈ ಎಲ್ಲಾ ಕಾರಣದಿಂದ ನಮ್ಮ ದೇಶದ ಅಪೂರ್ವ ವೀರ್ಯವತ್ತರವಾದ ಪರಂಪರೆ ಮಲಿನವಾಗಿ
ನಾಶವಾಗುತ್ತಿದೆ. ಇದಕ್ಕೆ ಬೇರೆ ಯಾರೂ ಕಾರಣರಲ್ಲ. ನಾವು ನಮ್ಮ ಪರಂಪರೆಯನ್ನು ಅರ್ಥ ಮಾಡಿಕೊಂಡು ನಮ್ಮ ಮುಂದಿನ ಜನಾಂಗಕ್ಕೆ ಹೇಳಿಕೊಡದೇ ಇದ್ದುದರಿಂದ ಅದು
ಶಿಥಿಲಗೊಳ್ಳುತ್ತಿದೆ. ಯಜುರ್ವೇದದ ಶಾಂತಿ ಮಂತ್ರ
ಹೀಗೆ ಹೇಳಿದೆ: ಓಂ ಸಹ ನಾವವತು । ಸಹ ನೌ ಭುನಕ್ತು । ಸಹವೀರ್ಯಂ ಕರವಾವಹೈ । ತೇಜಸ್ವಿ
ನಾವಧೀತಮಸ್ತು । ಮಾ ವಿಧ್ವಿಷಾವಹೈ । ನಾವು ಮಾಡುವ ಕರ್ಮ ಶಕ್ತಿಶಾಲಿಯಾಗಲು ನಾವದನ್ನು ತಿಳಿದು
ಮಾಡೋಣ. ಮೊದಲು ತಿಳಿಯೋಣ, ತಿಳಿದು ಮಾಡೋಣ, ಮಾಡಿ ಇನ್ನೊಬ್ಬರಿಗೆ ತಿಳಿಸೋಣ.
ಜ್ಞಾನವಿಲ್ಲದೇ ಮಾಡುವ ಕರ್ಮ ನಿಷ್ಫಲವೆಂದೇನೂ
ಅಲ್ಲ. ಆದರೆ ಅದರಿಂದ ಫಲ ಬಹಳ ಕಡಿಮೆ. ಲಕ್ಷ ಸಿಗುವಲ್ಲಿ ಹತ್ತು ಸಿಕ್ಕಂತೆ. ಗೀತೆಯಲ್ಲಿ ಶ್ರೀಕೃಷ್ಣ
ಹೇಳುವಂತೆ: ಜ್ಞಾನಾಗ್ನಿಃ ಸರ್ವಕರ್ಮಾಣಿ ಭಸ್ಮಸಾತ್ ಕುರುತೇ ತಥಾ. ಜ್ಞಾನ ಎನ್ನುವುದು ಸದಾ ಪ್ರಜ್ವಲಿಸುವ ಬೆಂಕಿ. ಅದಕ್ಕಿಂತ
ಹೆಚ್ಚು ಶಕ್ತಿ ಶಾಲಿಯಾದ ಬೆಂಕಿ ಇನ್ನೊಂದಿಲ್ಲ.
ಹೇಗೆ ಉರಿಯುವ ಬೆಂಕಿ ಕಟ್ಟಿಗೆಯನ್ನು ಸುಟ್ಟುಬಿಡುತ್ತದೋ, ಹಾಗೆ ಜ್ಞಾನದ ಬೆಂಕಿ ಎಲ್ಲಾ ಪಾಪ ಕರ್ಮಗಳನ್ನೂ ಸುಟ್ಟುಬಿಡುತ್ತದೆ. ಕರ್ಮಣಾ ಜ್ಞಾನ ಮಾತನೋತಿ, ಜ್ಞಾನೇನಾಮೃತಿ ಭವತಿ. ಕರ್ಮ ಕೇವಲ ಕರ್ಮಕ್ಕೋಸ್ಕರ ಅಲ್ಲ. ಅದು ಜ್ಞಾನಕ್ಕೋಸ್ಕರ. ಯಾವ ಕರ್ಮದಿಂದ ನಮ್ಮ ಜ್ಞಾನ ಬೆಳೆಯುವುದಿಲ್ಲವೋ,
ಅದು ನಮ್ಮ ಪ್ರರಾಬ್ಧಕರ್ಮ ಎನಿಸುತ್ತದೆ. ಹೀಗಾಗಿ ಯಜ್ಞಮೂರ್ತಿಯಾಗಿ ಭಗವಂತನ ಯಜ್ಞಾವತಾರವಾದ ಮೇಲೆ,
ಜ್ಞಾನವನ್ನು ಕೊಡುವುದಕ್ಕಾಗಿ ಭಗವಂತ ಜ್ಞಾನಮೂರ್ತಿ ಕಪಿಲವಾಸುದೇವನಾಗಿ ಅವತರಿಸಿ ಬರುತ್ತಾನೆ. ಬನ್ನಿ, ಭಗವಂತನ ಕಪಿಲಾವತಾರದ ವಿಶ್ಲೇಷಣೆಯನ್ನು
ಚತುರ್ಮುಖನಿಂದ ಕೇಳಿ ತಿಳಿಯೋಣ
No comments:
Post a Comment