Saturday, May 23, 2015

Shrimad BhAgavata in Kannada -Skandha-02-Ch-07(10)

ವೈರಾಗ್ಯಮೂರ್ತಿ ವೃಷಭದೇವ  

ನಾಭೇರಸಾವೃಷಭ ಆಸ ಸುದೇವಿಸೂನುರ್ಯೋ ವೈ ಚಚಾರ ಸಮದೃಗ್ ಹೃದಿ ಯೋಗಚರ್ಯಾಮ್
ಯತ್ ಪಾರಮಹಂಸ್ಯಮೃಷಯಃ ಪದಮಾಮನಂತಿ ಸ್ವಸ್ಥಃ ಪ್ರಶಾಂತಕರಣಃ ಪರಿಮುಕ್ತಸಂಗಃ ೧೦

ಉತ್ತಾನಪಾದನ ಸಹೋದರ ಪ್ರಿಯವ್ರತ. ಈತ ಏನೂ ಬೇಡ ಎಂದು ವೈರಾಗ್ಯದಿಂದ ತಪಸ್ಸನ್ನಾಚರಿಸಿದ. ಆಗ ಬ್ರಹ್ಮದೇವರು ಬಂದು ಆತನ ತಪಸ್ಸಿನ ಉದ್ದೇಶ ಏನು ಎಂದು ಕೇಳುತ್ತಾರೆ. ಆಗ ಆತ “ಎಲ್ಲವನ್ನೂ ತೊರೆದು ನಿವೃತ್ತ ಜೀವನದಿಂದ ಭಗವಂತನ ಅನುಗ್ರಹ ಪಡೆಯಬೇಕು ಎನ್ನುವ ಉದ್ದೇಶದಿಂದ ತಾನು ತಪಸ್ಸನ್ನಾಚರಿಸುತ್ತಿದ್ದೇನೆ” ಎಂದನಂತೆ. ಆಗ ಬ್ರಹ್ಮದೇವರು ಹೇಳುತ್ತಾರೆ:  “ಕೇವಲ ಸಂನ್ಯಾಸ ಜೀವನದಿಂದ ಮಾತ್ರ ಭಗವಂತನ ಒಲುಮೆ  ಸಾಧ್ಯ ಎನ್ನುವ ನಿನ್ನ ಕಲ್ಪನೆ ತಪ್ಪು, ಕೆಲವರಿಗೆ ಸಂನ್ಯಾಸದಿಂದ ಭಗವಂತನ ಅನುಗ್ರಹ, ಇನ್ನು ಕೆಲವರಿಗೆ  ಗ್ರಹಸ್ತ ಜೀವನದಿಂದ ಅನುಗ್ರಹ.  ಯಾರು ಭಗವಂತನ ಉಪಾಸನೆ ಮಾಡುತ್ತಾರೋ ಅವರನ್ನು ಭಗವಂತ ಉದ್ಧಾರ ಮಾಡುತ್ತಾನೆ. ಜೀವಯೋಗ್ಯತೆಗೆ ಅನುಕೂಲವಾದಂತಹ ಸಾಧನೆ ಶ್ರೇಷ್ಠ. ನೀನು ಸಂನ್ಯಾಸಿಯಾಗಿ ಸಾಧನೆ ಮಾಡಲು ಹುಟ್ಟಿದವನಲ್ಲ.  ನೀನು ಗ್ರಹಸ್ಥನಾಗು, ರಾಜ್ಯಭಾರ ಮಾಡಿ ಅದರ ಮೂಲಕ ಭಗವಂತನ ಸೇವೆ ಮಾಡು” ಎಂದು. ಬ್ರಹ್ಮದೇವರ ಆದೇಶದಂತೆ ಪ್ರಿಯವ್ರತ ಗ್ರಹಸ್ತನಾದ. ಚಕ್ರವರ್ತಿಯಾಗಿ ಮೆರೆದ. ಪ್ರಿಯವ್ರತನ ಹೆಂಡದಿರರಲ್ಲಿ ಒಬ್ಬಳಾದ  ‘ಬರ್ಹಿಷ್ಮತಿ’  ಎನ್ನುವವಳಲ್ಲಿ ‘ಆಗ್ನೀಂಧ್ರ’ ಎನ್ನುವ ಮಗ ಹುಟ್ಟಿದ. ಈ ಆಗ್ನೀಂಧ್ರನ  ಮಗನ ಹೆಸರು ನಾಭಿ. ಈ ನಾಭಿ ರಾಜನ ಹೆಂಡತಿ ಸುದೇವಿ/ಸುಮೇರು. `ಈ ದಂಪತಿಗಳು ತಮಗೆ ಭಗವಂತನಂತಹ ಮಗ ಹುಟ್ಟಬೇಕು ಎಂದು ಅಪೇಕ್ಷೆಪಟ್ಟು ಯಜ್ಞ ಮಾಡುತ್ತಾರೆ. ಭಗವಂತನಂತಹ ಇನ್ನೊಬ್ಬ ಮಗ ಇರಲು ಸಾಧ್ಯವೇ? ಹೀಗಾಗಿ ದಂಪತಿಗಳ ಅಪೇಕ್ಷೆಯಂತೆ ಸ್ವಯಂ ಭಗವಂತನೇ ಅವರ ಮಗನಾಗಿ ಹುಟ್ಟಿದ.  ಅವನೇ ವೃಷಭದೇವ. ಈತ ಮುಂದೆ ಚಕ್ರವರ್ತಿಯಾಗಿ ಮೆರೆದ. ಈತನ ಮಗನ ಹೆಸರು ಭರತ. ಈ ಭರತ ಚಕ್ರವರ್ತಿಯಿಂದಾಗಿ ಈ ದೇಶಕ್ಕೆ ಭಾರತ ಎನ್ನುವ ಹೆಸರು ಬಂತು(ದುಷ್ಯಂತನ ಮಗ ಭರತ ಮತ್ತು ವೃಷಭದೇವನ ಮಗ ಭರತ ಬೇರೆಬೇರೆ. ದುಷ್ಯಂತನ ಮಗ ಭರತನಿಂದಾಗಿ ಈ ದೇಶವನ್ನಾಳಿದ ರಾಜವಂಶಕ್ಕೆ ಭಾರತವಂಶ ಎನ್ನುವ ಹೆಸರು ಬಂತು) ಈ ಹಿಂದೆ ಹೇಳಿದಂತೆ ಈ ದೇಶದ ಹೆಸರು ಅಂಜನಾಭ ಎಂದಿದ್ದು, ಭರತ ಚಕ್ರವರ್ತಿಯ ಆಡಳಿತ ಕಾಲದ ನಂತರ ಅದು ಭಾರತ ಎನ್ನುವ ಹೆಸರಿನಿಂದ ಕರೆಯಲ್ಪಟ್ಟಿತು.
ವೃಷಭದೇವನಾಗಿ ಭಗವಂತನ ಅವತಾರ ಸ್ವಾಯಂಭುವ ಮನ್ವಂತರದ  ಒಂದು ವಿಶೇಷ. ಜೈನಧರ್ಮದ ಇಪ್ಪತ್ತನಾಲ್ಕು ತೀರ್ಥಂಕರರಲ್ಲಿ  ವೃಷಭದೇವನೂ ಒಬ್ಬ ಮತ್ತು ಆತನನ್ನು  ಆದಿ ತೀರ್ಥಂಕರ ಎಂದು ಕರೆಯುತ್ತಾರೆ. ವೃಷಭದೇವನ ಕಾಲದ ನಂತರ ವೈದಿಕ ಮತಕ್ಕಿಂತ ಭಿನ್ನವಾದ ಒಂದು ಕವಲು ಪ್ರಾರಂಭವಾಯಿತು. ಕೆಲವರು ವೃಷಭನನ್ನು ನೋಡಿ ತಮ್ಮದೇ ಆದ ಒಂದು ಪಂಥ ಕಟ್ಟಿದರು. ಹೀಗೆ ಮಾಡಿದವರಲ್ಲಿ ಮೊದಲಿಗೆ ‘ಜಿನ’. ಹೀಗಾಗಿ ಆ ಪಂಥಕ್ಕೆ ‘ಜೈನ’ ಎನ್ನುವ ಹೆಸರು ಬಂತು.  ವೃಷಭದೇವನಿಂದಾಗಿ ಈ ದೇಶದ ಆಧ್ಯಾತ್ಮಿಕ ವಿಚಾರಧಾರೆ ಎರಡು ಕವಲಾಯಿತು. ಆತ ಚಕ್ರವರ್ತಿಯಾಗಿ ಮೆರೆದ, ಆದರೂ ಕೂಡಾ ಸಂನ್ಯಾಸಿಯಂತೆ ಬದುಕಿ ತೋರಿಸಿದ. ಜನರಿಗೆ ಸರಿಯಾದ ಆಡಳಿತ ಕೊಟ್ಟು ಅವರನ್ನು ಸರಿಯಾದ ರೀತಿಯಲ್ಲಿ ಇರಗೊಳಿಸಿದ ವೃಷಭದೇವ, ಅರಮನೆಯ ಭೋಗದಲ್ಲಿ ಆಸಕ್ತಿ ತೋರದೇ  ಸಂನ್ಯಾಸಿಯಂತೆ ಬದುಕಿ ತೋರಿದ. ವೃಷಭದೇವನ ಬದುಕು ಸಂನ್ಯಾಸಿಗಳಲ್ಲಿ ಅತ್ಯಂತ ಎತ್ತರದ ಸ್ಥಾನದಲ್ಲಿರುವ ಪರಮಹಂಸರಿಗೆ ಉದಾಸ್ಯವಾಯಿತು. [ಸಂನ್ಯಾಸದಲ್ಲಿ ನಾಲ್ಕು ಬಗೆ. ಕುಟೀಚಕ, ಬಹೂದಕ, ಹಂಸ, ಪರಮಹಂಸ. ಮನೆಯಲ್ಲಿ ಇದ್ದು ಸಂನ್ಯಾಸ ಮಾಡುವವ ಕುಟೀಚಕ. ಮನೆಯನ್ನು ತೊರೆಯದೆ ಹತ್ತೂರು ತಿರುಗುವವನು ಬಹೂದಕ. ಯಜ್ಞೋಪವೀತ ತೊರೆಯದ ದಂಡಿ ಹಂಸ. ಅಗ್ನಿಮುಖದಲ್ಲಿ ಕ್ರಿಯೆ ಇರದ, ಯಜ್ಞೋಪವೀತ ತೊರೆದ ಏಕದಂಡಿ ಪರಮಹಂಸ]
ಸಂನ್ಯಾಸ ಪದ್ಧತಿಗೆ ಮೂಲ ವೃಷಭದೇವ. ಸಂನ್ಯಾಸಿಯಾಗುವವನು ಎಲ್ಲಾ ಸಂಪರ್ಕಗಳನ್ನು ಕಳೆದುಕೊಂಡು, ಸರ್ವಭೂತೇಭ್ಯೋ ಭಯಂ ದತ್ತಂ ಮಯಾ, ಭೂಃ ಅನಿರುದ್ಧಾಯ ಸ್ವಾಹಾ-ಸಂನ್ಯಸ್ತಮ್ ಮಯಾ; ಭುವಃ ಪ್ರದ್ಯುಮ್ನಾಯ ಸ್ವಾಹಾ- ಸಂನ್ಯಸ್ತಮ್ ಮಯಾ; ಸುವಃ ಸಂಕರ್ಷಣಾಯ ಸ್ವಾಹಾ-ಸಂನ್ಯಸ್ತಮ್ ಮಯಾ; ಭೂರ್ಭುವಃ ಸುವಃ ವಾಸುದೇವಾಯ ಸಂನ್ಯಸ್ತಮ್ ಮಯಾ. ಈ ರೀತಿ ತೋಳೆತ್ತಿ ಘೋಷಣೆ ಮಾಡಬೇಕು. “ಅನಿರುದ್ಧ ನಾಮಕ ಭಗವಂತನನ್ನು ನೆನೆದು ಭೌತಿಕ ಪ್ರಪಂಚದ ಎಲ್ಲಾ ಸಂಪರ್ಕಗಳನ್ನು ತೊರೆವ ಪ್ರತಿಜ್ಞೆ; ಪ್ರದ್ಯುಮ್ನ ನಾಮಕ ಭಗವಂತನನ್ನು ನೆನೆದು ಅಂತರಿಕ್ಷದ ಸಂಪತ್ತನ್ನು ತೊರೆವ ಪ್ರತಿಜ್ಞೆ; ಸಂಕರ್ಷಣ ನಾಮಕ ಭಗವಂತನನ್ನು ನೆನೆದು ಮನಸ್ಸು-ಬುದ್ಧಿ-ಚಿತ್ತವನ್ನು ಭಗವಂತನಿಗೆ ಅರ್ಪಿಸಿ ; ಕೊನೆಗೆ ಎಲ್ಲವನ್ನೂ ನಾರಾಯಣನಿಗೆ ಅರ್ಪಿಸಿ “ಇನ್ನು ಮೇಲೆ ‘ನನಗೆ ಬೇಕು’ ಎಂದು ನಾನು ಬಯಸುವುದಿಲ್ಲ” ಎಂದು ಪ್ರತಿಜ್ಞೆ ಮಾಡಿ,  ಯಾವ ಪ್ರಾಣಿಗೂ ಭಯ ಬರುವಂತೆ ನಾನು ವರ್ತಿಸುವುದಿಲ್ಲ ಎಂದು ಎಲ್ಲರಿಗೂ ಅಭಯವನ್ನು ಕೊಟ್ಟು, ಕೇಶ ಮಂಡನ ಮಾಡಿ, ಉಟ್ಟ ಬಟ್ಟೆ, ಯಜ್ಞೋಪವೀತ, ಎಲ್ಲವನ್ನೂ ನೀರಿನಲ್ಲಿ ಬಿಟ್ಟು,  ಬತ್ತಲಾಗಿ ಬಂದು ಗುರುಗಳಿಗೆ ದಂಡ ಪ್ರಣಾಮ ಮಾಡಬೇಕು. ಗುರುಗಳು ಆತನಿಗೆ ಬಟ್ಟೆ ತೊಡಿಸಿ ಪ್ರಣವ ಧೀಕ್ಷೆ ಕೊಡಬೇಕು. ಇದು ಪ್ರಾಚೀನ ಸಂನ್ಯಾಸ ಪದ್ಧತಿ. ಇದಕ್ಕೆ ಮೂಲ ವೃಷಭದೇವ. ಎಲ್ಲವನ್ನೂ, ಉಟ್ಟ ಬಟ್ಟೆಯನ್ನೂ ತೊರೆದು ಸಾಗುವವ ಪರಮಹಂಸ. ಈ ರೀತಿ ಎಲ್ಲವನ್ನೂ ತೊರೆದು ಹೋಗುವ ಸಂಪ್ರದಾಯವನ್ನು ಪ್ರಾರಂಭ ಮಾಡಿದವ ವೃಷಭದೇವ. ಈ ಕಾರಣದಿಂದಲೇ ಭಗವಂತನ ಈ ರೂಪ ಪರಮಹಂಸರಿಗೆ ಉಪಾಸ್ಯವಾದ ಮತ್ತು ಗಮ್ಯವಾದ ರೂಪ.
ವೃಷಭದೇವ ಏಕೆ ಸಂನ್ಯಾಸಿಗಳಿಗೆ ಸ್ಫೂರ್ತಿ ಎನ್ನುವುದಕ್ಕೆ ಒಂದು ಕಥೆ ಇದೆ. ತನ್ನ ಮಗ ಭರತ ಪ್ರಾಯಕ್ಕೆ ಬಂದ ತಕ್ಷಣ ವೃಷಭದೇವ ಆತನನ್ನು ಸಿಂಹಾಸನದಲ್ಲಿ ಕುಳ್ಳಿರಿಸಿ, ಸಮಸ್ತವನ್ನೂ ತೊರೆದು, “ತನ್ನದು ಎನ್ನುವುದು ಯಾವುದೂ ಇಲ್ಲಾ” ಎಂದು ಹೇಳಿ, ಉಟ್ಟ ಬಟ್ಟೆಯನ್ನೂ ತೊರೆದು ಬತ್ತಲಾಗಿ ಕಾಡಿಗೆ ಹೊರಟುಹೋದ. ಇದೇ ಸಂನ್ಯಾಸ ವಿಧಿಯಾಗಿ ಆನಂತರ ಧರ್ಮಶಾಸ್ತ್ರದಲ್ಲಿ ದಾಖಲೆಯಾಯಿತು. ಸಂಪೂರ್ಣ ಬಟ್ಟೆ ತೊರೆದು ತಿರುಗುವ ಜೈನ ಧರ್ಮದ ದಿಗಂಬರ ಸಂನ್ಯಾಸಿಗಳಿಗೂ ಕೂಡಾ ಈ ವೃಷಭದೇವನೇ ಸ್ಫೂರ್ತಿ. ಇದು ನಿರ್ಲಿಪ್ತತೆಯ ಆಳವನ್ನು ಜಗತ್ತಿಗೆ ತೋರಿದ ಭಗವಂತನ ರೂಪ.  ಆದರೆ ಈ ಸತ್ಯವನ್ನು ಅರಿಯದ ಅಂದಿನ ಜನ “ಈತನಿಗೆ ಬುದ್ಧಿ ಕೆಟ್ಟಿದೆ” ಎಂದು ಮಾತನಾಡಿಕೊಂಡರು. ಆದರೆ ನಿರ್ಲಿಪ್ತತೆಯ ಪರಾಕಾಷ್ಠೆಯಾದ ವೃಷಭದೇವ ಅಂತರಂಗದ ಆನಂದದಲ್ಲಿ ಹೇಗೆ ನಿರ್ಲಿಪ್ತತೆ ಸಾಧ್ಯ ಎನ್ನುವುದನ್ನು ಲೋಕಕ್ಕೆ ತೋರಿದ. ಈ ರೀತಿ  ಎಲ್ಲವನ್ನೂ ತೊರೆದ ವೃಷಭದೇವ ಕುಟಕಾಚಲಕ್ಕೆ  (ಇಂದಿನ ಕೊಲ್ಲೂರಿನ ಕೊಡಚಾದ್ರಿ) ಬಂದು ಅಲ್ಲಿ ಅಜಗರ ವೃತ್ತಿಯಲ್ಲಿ ಬದುಕಿದ. ಜನ ಏನಾದರೂ ಕೊಟ್ಟರೆ ಅದನ್ನು ತಿನ್ನುವುದು, ಇಲ್ಲದಿದ್ದರೆ ಇಲ್ಲ. ತಿನ್ನುವಾಗ ಸದಾ ಕರಪಾತ್ರೆಯಲ್ಲೇ ತಿನ್ನುತ್ತಿದ್ದ. (ಹೀಗಾಗಿ ಸಂನ್ಯಾಸಿಗಳು ತಿನ್ನುವಾಗ ಯಾವುದೇ ಪಾತ್ರೆ ಉಪಯೋಗಿಸದೇ ಕರಪಾತ್ರೆಯಲ್ಲಿ ತಿನ್ನುತ್ತಾರೆ).   ಕೂದಲನ್ನು ಕೈಯಿಂದ ಕಿತ್ತುಕೊಂಡ(ಜೈನ ಸಂನ್ಯಾಸಿಗಳು ಇಂದಿಗೂ ತಮ್ಮ ಕೂದಲನ್ನು ಕೈಯಿಂದ ಕಿತ್ತುಕೊಳ್ಳುತ್ತಾರೆ).  

ಒಂದು ದಿನ ಕುಟಕಾಚಲದ ಕಾಡಿಗೆ ಭಯಂಕರವಾದ ಕಾಳ್ಗಿಚ್ಚು ಹರಡಿತು. ವೇದವ್ಯಾಸರು ಹೇಳುವಂತೆ: ಭಗವಂತ ಯೋಗಾಗ್ನಿಯನ್ನು ಸೃಷ್ಟಿಮಾಡಿ, ಅದರಲ್ಲಿ ಅದೃಷ್ಯನಾಗಿ, ವಿಚಿತ್ರವಾಗಿ ತನ್ನ ಅವತಾರ ಸಮಾಪ್ತಿ ಮಾಡಿದ. 

No comments:

Post a Comment