Saturday, May 16, 2015

Shrimad BhAgavata in Kannada -Skandha-02-Ch-07(08)

ಬಾಲಕನಿಗೊಲಿದ ಧ್ರುವ ವರದ ವಾಸುದೇವ ರೂಪ

     ವಿದ್ಧಃ ಸಪತ್ನ್ಯುದಿತಪತ್ರಿಭಿರಂತಿ ರಾಜ್ಞೋ ಬಾಲೋSಪಿ ಸನ್ನಪಗತಸ್ತಪಸೇ ವನಾಯ
     ತಸ್ಮಾ ಅದಾದ್ ಧ್ರುವಗತಿಂ ಗೃಣತೇ ಪ್ರಸನ್ನೋ ದಿವ್ಯಾಃ ಸ್ತುವಂತಿ ಮುನಯೋ ಯದುಪರ್ಯಧಸ್ತಾತ್

ಸ್ವಾಯಂಭುವ ಮನುವಿನ ಮಗನಾದ ಉತ್ತಾನಪಾದನಿಗೆ ಇಬ್ಬರು ಹೆಂಡದಿರು. ಹಿರಿಯ ರಾಣಿ ಸುನೀತಿ ಹಾಗೂ ಕಿರಿಯವಳು ಸುರುಚಿ. ಸುನೀತಿಯ ಮಗ ಧ್ರುವ. ಈ ಧ್ರುವನ ತಪಸ್ಸಿಗೆ ಮೆಚ್ಚಿ ಒಲಿದು ಬಂದ ಭಗವಂತನ ರೂಪವೇ ಧ್ರುವವರದ ವಾಸುದೇವ ರೂಪ.  ಸಾಮಾನ್ಯವಾಗಿ ತಪಸ್ಸು ಮಾಡಿದವರಿಗೆ ಭಗವಂತ ಕೊಡುವ ದರ್ಶನರೂಪವನ್ನು ಒಂದು ಅವತಾರ ರೂಪ ಎಂದು ಪರಿಗಣಿಸುವುದಿಲ್ಲ. ಆದರೆ ಧ್ರುವನಿಗೊಲಿದ ವಾಸುದೇವ ರೂಪವನ್ನು ಒಂದು ಅವತಾರ ರೂಪವಾಗಿ ಪರಿಗಣಿಸುತ್ತಾರೆ. ಈ ವಾಸುದೇವ ರೂಪ ಭಗವಂತನ ಮೂಲ ವಾಸುದೇವ ರೂಪವಲ್ಲ. ಕೇಶವಾದಿ ಚತುರ್ವಿಂಶತಿ ರೂಪದಲ್ಲಿ ಸೇರಿದ ವಾಸುದೇವ ರೂಪ ಇದಲ್ಲ. ವಿಷ್ಣು ಸಹಸ್ರನಾಮದಲ್ಲಿ ಬರುವ ವಾಸುದೇವ ರೂಪವೂ ಇದಲ್ಲ. ಇದು ಧ್ರುವನಿಗಾಗಿ ಭಗವಂತ  ತಳೆದ ಅವತಾರ ರೂಪ. ಇದು ಧ್ರುವನ ಮೇಲೆ ಭಗವಂತ ತೋರಿದ ವಿಶಿಷ್ಠ ಕರುಣೆಯನ್ನು ತೋರುತ್ತದೆ. ಪ್ರಕಾಶಸಂಹಿತದಲ್ಲಿ ಹೇಳುವಂತೆ:  ಅವತಾರೋ ಮಹಾವಿಷ್ಣೋರ್ವಾಸುದೇವ ಇತೀರಿತಃ, ಯೋ  ಧ್ರುವಾಯ  ನಿಜಂ ಪ್ರಾದಾತ್ ಸ್ಥಾನಮನ್ಯಾನಧಿಷ್ಠಿತಮ್. ತನ್ನ ಒಂದು ಲೋಕವನ್ನು ಧ್ರುವನಿಗೆ ಕೊಟ್ಟ ವಿಷ್ಣುವಿನ ಅವತಾರ ಈ ವಾಸುದೇವ ಅವತಾರ.
ಧ್ರುವನ ಕುರಿತಾದ ಕಥೆ ಮುಂದೆ ವಿಸ್ತಾರವಾಗಿ ಬರುತ್ತದೆ. ಸಂಕ್ಷಿಪ್ತವಾಗಿ ಧ್ರುವನ ಕಥೆಯನ್ನು  ಹೇಳಬೇಕೆಂದರೆ: ಧ್ರುವ ಉತ್ತಾನಪಾದನ ಹಿರಿಯ ಹೆಂಡತಿ ಸುನೀತಿಯ ಮಗ.  ಉತ್ತಾನಪಾದನಿಗೆ ಇಬ್ಬರು ಹೆಂಡತಿಯರು. ಹಿರಿಯವಳು ಸುನೀತಿ ಹಾಗೂ ಕಿರಿಯವಳು ಸುರುಚಿ. ಈ ಹೆಸರುಗಳೇ ಸೂಚಿಸುವಂತೆ ಇವರು ಈ ಕಥೆಯಲ್ಲಿ  ಹೆಣ್ಣಿನ ಗುಣದ ಎರಡು ಮುಖಗಳನ್ನು ಪ್ರತಿನಿಧಿಸುತ್ತಾರೆ. ಸುನೀತಿ ತುಂಬಾ ನೀತಿವಂತೆ.  ಇದು ಹೆಣ್ಣಿನಲ್ಲಿರಬಹುದಾದ ವಿಶೇಷ ಗುಣ. ಗಂಡು ನೀತಿ ತಪ್ಪಬಹುದು ಆದರೆ ನೀತಿವಂತ ಹೆಣ್ಣು ಎಂದೂ, ಯಾವ ಸಂದರ್ಭದಲ್ಲೂ ನೀತಿ ತಪ್ಪಲಾರಳು. ಇನ್ನು ಸುರುಚಿ ಹೆಣ್ಣಿನ ವೇಷಭೂಷಣ, ಅಭಿರುಚಿ, ಆಸೆ-ಆಕಾಕ್ಷೆ, ಸ್ವಾಮ್ಯತೆ(Possessiveness), ಇತ್ಯಾದಿ ಗುಣಗಳನ್ನು  ಪ್ರತಿನಿಧಿಸುವ ಗುಣದಾಕೆ. ಎಲ್ಲವೂ ತಾನು ಅಂದುಕೊಂಡಂತೆ ಆಗಬೇಕು ಎನ್ನುವ ಮನೋಭಾವ ಸುರುಚಿಯದು. ಹಾಗೆ ಆಗದಿದ್ದಾಗ ಆಕೆ ಚಂಡಿಯಾಗುತ್ತಿದ್ದಳು!  ಇಲ್ಲಿ ಗಂಡಿನ ದೌರ್ಬಲ್ಯವನ್ನು ಪ್ರತಿನಿಧಿಸುವ ಪಾತ್ರ ಉತ್ತಾನಪಾದನದು. ಆತ ತಲೆ ಕೆಳಗೆ ಕಾಲು ಮೇಲೆ ಎಂಬಂತೆ ರೂಪಕ್ಕೆ ಮರುಳಾಗಿ ಸುನೀತಿಗಿಂತ ಹೆಚ್ಚಾಗಿ ಸುರುಚಿಯನ್ನು ಬಯಸಿದ. ಇದರ ಪರಿಣಾಮ ಸುರುಚಿಗೆ ಅಹಂಕಾರ ಬೆಳೆಯಿತು.  

  ಒಮ್ಮೆ ಧ್ರುವ ತನ್ನ ತಂದೆಯ ತೊಡೆಯಮೇಲೆ ಕುಳಿತುಕೊಳ್ಳಬೇಕು ಎಂದು ಆಸೆಪಟ್ಟ . ಇದನ್ನು ಕಂಡ ಸುರುಚಿ ಆತನಿಗೆ ಗದರಿ, ಆತನನ್ನು ಉತ್ತಾನಪಾದನ ತೊಡೆಯಿಂದ ಕೆಳಗಿಳಿಸಿ, “ನೀನು ಆ ತೊಡೆಯೇರಬೇಕಾದರೆ ನನ್ನ ಹೊಟ್ಟೆಯಲ್ಲಿ ಹುಟ್ಟಬೇಕಿತ್ತು” ಎಂದು ತೀಕ್ಷ್ಣವಾಗಿ ಹೇಳಿ, “ಹೋಗು ದೇವರಲ್ಲಿ  ಆ ರೀತಿ  ಪ್ರಾರ್ಥಿಸು” ಎಂದು ಕಳುಹಿಸಿಬಿಟ್ಟಳು. ಈ ಸಂದರ್ಭದಲ್ಲಿ ಹೆಂಡತಿಯ ದಾಸನಾಗಿದ್ದ ಉತ್ತಾನಪಾದ ಏನನ್ನೂ ಹೇಳಲಿಲ್ಲ!  ಇದರಿಂದ ದುಃಖಿತಾನಾದ ಧ್ರುವ ತಾಯಿ ಸುನೀತಿಯ ಬಳಿ ಬಂದು ನಡೆದ ಘಟನೆಯನ್ನು ವಿವರಿಸಿದ. ಆತನನ್ನು ಸಾಂತ್ವಾನಗೊಳಿಸಿದ ಸುನೀತಿ “ದೇವರನ್ನು ಅನನ್ಯವಾಗಿ ಪ್ರಾರ್ಥಿಸಿದರೆ ಆತ ನಮ್ಮ ಕಷ್ಟವನ್ನು ಪರಿಹರಿಸಿ ಇಷ್ಟಾರ್ಥವನ್ನು ಪೂರೈಸುತ್ತಾನೆ” ಎಂದು ಸಹಜವಾಗಿ ಹೇಳಿದಳು. ಇದನ್ನು ಗಾಢವಾಗಿ ಮನಸ್ಸಿನಲ್ಲಿಟ್ಟುಕೊಂಡ ಐದು ವರ್ಷದ ಬಾಲಕ ಧ್ರುವ, ಭಗವಂತನನ್ನು ಕಾಣಬೇಕು ಎಂದು ಮನೆ ಬಿಟ್ಟು ಕಾಡಿಗೆ ನಡೆದೇಬಿಟ್ಟ. ಈ ರೀತಿ ದೇವರನ್ನು ಸಾಕ್ಷಾತ್ಕರಿಸಿಕೊಳ್ಳಬೇಕು ಎನ್ನುವ ಧೃಡಮನಸ್ಸಿನಿಂದ ಕಾಡಿನಲ್ಲಿ ನಡೆಯುತ್ತಿದ್ದ ಧ್ರುವನನ್ನು ಋಷಿಗಳು ಹರಸಿದರು. ನಾರದರು ಬಂದು ಆತನಿಗೆ “ಓಂ ನಮೋ ಭಗವತೇ ವಾಸುದೇವಾಯ” ಎನ್ನುವ ವಾಸುದೇವ ದ್ವಾದಶಾಕ್ಷರ ಮಂತ್ರ ಉಪದೇಶ ಮಾಡಿ ಹರಸಿದರು. ಹೀಗೆ ಮುನ್ನೆಡೆದ ಧ್ರುವ ಅನ್ನ-ನೀರನ್ನು ತೊರೆದು, ಭಗವಂತನ ಕುರಿತು ಐದು ತಿಂಗಳು ತಪಸ್ಸು ಮಾಡಿ, ಆತನನ್ನು ಒಲಿಸಿಕೊಂಡ. ಧ್ರುವನ ಭಕ್ತಿಗೆ ಮೆಚ್ಚಿದ ಭಗವಂತ ಪ್ರತ್ಯಕ್ಷನಾಗಿ ಮಗುವನ್ನು ಸಂತೈಸುತ್ತಾ ಹೇಳುತ್ತಾನೆ:  ನೀನು ತಂದೆಯ ತೊಡೆಯಲ್ಲಿ ಮಾತ್ರವಲ್ಲ, ಸಿಂಹಾಸನದಲ್ಲೇ ಕೂಡುತ್ತಿ; ಮುಂದೆ ಇಡಿಯ ಜ್ಯೋತಿಶ್ಚಕ್ರದ ಒಡೆತನ ನಿನ್ನದಾಗುತ್ತದೆ. ಎಲ್ಲಕ್ಕಿಂತ ಎತ್ತರದಲ್ಲಿ ನೀನಿರುವೆ” ಎಂದು.  ಹೀಗೆ ಕೇವಲ ತಂದೆಯ ತೊಡೆ, ಸಿಂಹಾಸನವನ್ನಷ್ಟೇ ಅಲ್ಲದೇ, ಮೇಲೆ ಮತ್ತು ಕೆಳಗೆ ದೇವತೆಗಳು, ಮುನಿಗಳು ಸ್ತುತಿಸುವ ಶಿಂಶುಮಾರರೂಪಿಯಾದ ಭಗವಂತನ ಸ್ಥಾನವಾದ ಧ್ರುವಲೋಕವನ್ನು ಆತ ಪಡೆಯುತ್ತಾನೆ.

No comments:

Post a Comment