Sunday, May 17, 2015

Shrimad BhAgavata in Kannada -Skandha-02-Ch-07(09)


ಪೃಥುವಿನಲ್ಲಿ ಪೃಥುವಾದ ಭಗವಂತ
                                                                                                                                                                                  
ಯದ್ ವೇನಮುತ್ಪಥಗತಂ ದ್ವಿಜವಾಕ್ಯವಜ್ರ ನಿಷ್ಪಿಷ್ಟಪೌರುಷಭಗಂ ನಿರಯೇ ಪತಂತಮ್
ಜ್ಞಾತ್ವಾSರ್ಥಿತೋ ಜಗತಿ ಪುತ್ರಪದಂ ಚ ಲೇಭೇ ದುಗ್ಧಾ ವಸೂನಿ ವಸುಧಾ ಸಕಲಾನಿ ಯೇನ ೦೯

ಧ್ರುವನ ವಂಶದಲ್ಲೇ ಸುಮಾರು ೮-೧೦ ತಲೆಮಾರಿನ ನಂತರ ಭಗವಂತ ಆವೇಶಾವತಾರ ರೂಪಿಯಾಗಿ ಬಂದಿರುವುದನ್ನು ನಾವು ಕಾಣುತ್ತೇವೆ. ಧ್ರುವನ ವಂಶಸ್ಥನಾದ ಅಂಗರಾಜ ಒಬ್ಬ ಒಳ್ಳೆಯ ಅರಸನಾಗಿದ್ದ. ಆದರೆ ಆತನಿಗೆ ‘ವೇನ’ ಎನ್ನುವ ಅತ್ಯಂತ ಕೆಟ್ಟ ಸ್ವಭಾವದ ಮಗ ಹುಟ್ಟಿದ. ವೇನ ಅದೆಷ್ಟು ಕ್ರೂರಿಯಾಗಿದ್ದ ಎಂದರೆ, ಆಟವಾಡುವಾಗ ಚಿಕ್ಕ-ಚಿಕ್ಕ ಮಕ್ಕಳನ್ನು ಬಾವಿಗೆ ತಳ್ಳಿ ಅಲ್ಲಿ ಅವರು ಒದ್ದಾಡಿ ಸಾಯುವುದನ್ನು ಕಂಡು ಆತ ಕುಶಿ ಪಡುತ್ತಿದ್ದ. ಇಂಥಹ ಮಗನನ್ನು ಸರಿಪಡಿಸಲು ಅಂಗರಾಜನಿಂದ ಸಾಧ್ಯವಾಗಲಿಲ್ಲ. ಮಕ್ಕಳಾಗಲಿಲ್ಲ ಎಂದು ಕೊರಗುವವರಿದ್ದಾರೆ, ಆದರೆ ಅಂಗರಾಜ ಮಕ್ಕಳಾಯಿತಲ್ಲಾ ಎಂದು ಕೊರಗಿದೆ! “ಇಂಥಹ ನೀಚ ಮಗ ಹುಟ್ಟುವುದಕ್ಕಿಂತ ನಾನು ಅಪ್ಪನಾಗದೇ ಇದ್ದಿದ್ದರೆ ಚನ್ನಾಗಿರುತ್ತಿತ್ತು” ಎಂದು ಆತ ಮರುಗಿದ.

ಮಗನ ದೂರ್ತತನವನ್ನು ನೋಡಲಾಗದೇ ಒಂದು ದಿನ ಅಂಗರಾಜ ಯಾರಿಗೂ ಹೇಳದೇ ಅರಮನೆ ಬಿಟ್ಟು ಹೊರಟು ಹೋದ. ಆತ ಎಲ್ಲಿಗೆ ಹೋದ ಮತ್ತು ಎನಾದ ಎನ್ನುವುದನ್ನು ಪುರಾಣ ದಾಖಲಿಸುವುದಿಲ್ಲ. ಅಂಗರಾಜ ಹೊರಟು ಹೋದಮೇಲೆ ವೇನ ತಾನೇ ರಾಜ್ಯಭಾರವನ್ನು ಕೈಗೆತ್ತಿಕೊಂಡ. ಸಿಂಹಾಸನವೇರಿದ ಆತ ಮೊದಲು ಮಾಡಿದ ಆಜ್ಞೆ ಏನೆಂದರೆ: “ಯಾರೂ ದೇವರನ್ನು ಪೂಜಿಸಕೂಡದು. ಎಲ್ಲರಿಗೂ ದೇವರು ನಾನೇ” ಎಂದು. ದೇಶದಲ್ಲಿ ಬರಗಾಲ ಬಂದು ಹಸಿವಿಂದ ಜನ ಸಾಯುವ ಪರಿಸ್ಥಿತಿ ಬಂದು ಜನ ತತ್ತರಿಸಿದರು. ಆದರೆ ಕ್ರೂರಿಯಾಗಿದ್ದ ವೇನ ಮಾತ್ರ ಬದಲಾಗಲಿಲ್ಲ.  ಈ ಸಂದರ್ಭದಲ್ಲಿ ಋಷಿಗಳು ವೇನನಿಗೆ ಬುದ್ಧಿ ಕಲಿಸುವ ಸಂಕಲ್ಪ ಮಾಡಿದರು. ಹಿಂದೆ ರಾಜಸತ್ತೆ ಇದ್ದರೂ ಅದಕ್ಕೊಂದು ಗಣತಂತ್ರದ ಮುಖವಿತ್ತು. ರಾಜ ದಾರಿತಪ್ಪಿದಾಗ ಆತನನ್ನು ಅಧಿಕಾರದಿಂದ ಇಳಿಸುವ ಹಕ್ಕು ಪ್ರಜೆಗಳಿಗಿತ್ತು. ಹೀಗೆ ಋಷಿಗಳೆಲ್ಲರೂ ಸೇರಿ, ಭಗವಂತನನ್ನು ಪ್ರಾರ್ಥಿಸಿಕೊಂಡರು. ಅವರು ತಮ್ಮ ತಪಃಶಕ್ತಿಯನ್ನು ಬಳಸಿ, ಹೂಂಕಾರದಿಂದ ವೇನನನ್ನು ನಿಗ್ರಹಿಸಿ, ಅವನ ತೊಡೆಯ ಮಥನ ಮಾಡಿ, ಅಲ್ಲಿಂದ ಒಂದು ತೇಜಸ್ಸನ್ನು ತೆಗದು ಆತನನ್ನು ತಮ್ಮ ರಾಜನನ್ನಾಗಿ ಮಾಡಿದರು. ಆತನೇ ಪೃಥು.  ಇದು ಭಗವಂತನ ಆವೇಶಾವತಾರ.  ಋಷಿಗಳ ಪ್ರಾರ್ಥನೆಯನ್ನು ಮನ್ನಿಸಿ, ಪೃಥು ಚಕ್ರವರ್ತಿಯೊಳಗೆ ಪೃಥುವಾಗಿ ನಿಂತು, ನಾಗರಿಕತೆಯನ್ನು ಬೆಳೆಸಿ, ದೇಶವನ್ನು ಸಮೃದ್ಧ ಮಾಡಿದ ಭಗವಂತ. ಈ ಕಾರಣದಿಂದಾಗಿಯೇ ಭೂಮಿಗೆ ಪೃಥ್ವಿ (ಪೃಥು ರಾಜನ ಮಗಳು) ಎನ್ನುವ ಹೆಸರು ಬಂತು. 

No comments:

Post a Comment