Wednesday, April 22, 2015

Shrimad BhAgavata in Kannada -Skandha-02-Ch-07(01)

ಸಪ್ತಮೋSಧ್ಯಾಯಃ

ಜಗತ್ತನ್ನು  ಸೃಷ್ಟಿಸಿದ  ಭಗವಂತ ಈ ಪ್ರಪಂಚದಲ್ಲಿ ತನ್ನನ್ನೇ ತಾನು ಸೃಷ್ಟಿಸಿಕೊಂಡು ನಾನಾ ರೂಪಗಳಿಂದ ಅವತರಿಸಿ ಬಂದಿದ್ದಾನೆ.  ಅಂಥಹ ಭಗವಂತನ ವಿವಿದ ಅವತಾರ ವಿಶೇಷಗಳ ಸಮೀಕ್ಷೆ  ಚತುರ್ಮುಖ-ನಾರದ ಸಂವಾದ ರೂಪದಲ್ಲಿ ಈ ಅಧ್ಯಾಯದಲ್ಲಿ ಸಂಕ್ಷಿಪ್ತವಾಗಿ ಕಾಣಬಹುದು.

ಎರಡು ಬಾರಿ ವರಾಹನಾದ ವಿಷ್ಣು

ಅಧ್ಯಾಯ ಪ್ರವೇಶಿಸುವ ಮುನ್ನ ಇಲ್ಲಿ ನಾವು ವರಾಹ ಅವತಾರದ ಬಗ್ಗೆ ಸ್ವಲ್ಪ ವಿಶ್ಲೇಷಣೆ ಮಾಡೋಣ.  ಈ ಅಧ್ಯಾಯದ ಮೊದಲ ಶ್ಲೋಕದಲ್ಲಿ ವರಾಹ ಅವತಾರದ ಕುರಿತಾದ ವಿವರಣೆಯನ್ನು ನಾವು ಮುಂದೆ ಕಾಣಲಿದ್ದೇವೆ. ಆದರೆ ಆ ವಿವರಣೆ ನಾವು ದಶಾವತಾರದಲ್ಲಿ ಕಾಣುವ ವೈವಸ್ವತ ಮನ್ವಂತರದ ವರಾಹ ಅವತಾರದ ವಿವರಣೆ ಅಲ್ಲ. ಭಗವಂತ ಎರಡು ಬಾರಿ ವರಾಹ ಅವತಾರದಲ್ಲಿ ಕಾಣಿಸಿದ್ದು, ಇಲ್ಲಿ ಹೇಳಲಿರುವ ವರಾಹ  ಅವತಾರ ಸ್ವಾಯಂಭುವ ಮನ್ವಂತರದಲ್ಲಿ  ನಡೆದ ಮೊತ್ತ ಮೊದಲ ಭಗವಂತನ  ಅವತಾರ. ಆನಂತರ ವೈವಸ್ವತ ಮನ್ವಂತರದಲ್ಲಿ ಮತ್ತೆ ಎರಡನೇ ಬಾರಿ   ವರಾಹನಾಗಿ ಭಗವಂತ ಕಾಣಿಸಿಕೊಂಡಿರುವ ಕಥೆಯನ್ನು ಭಾಗವತದಲ್ಲೇ ಮುಂದೆ ಕಾಣಬಹುದು.  ಸ್ವಾಯಂಭುವ ಮನ್ವಂತರದಲ್ಲಿ ಚತುರ್ಮುಖಬ್ರಹ್ಮನಿಂದ  ಸೃಷ್ಟಿಯಾದ ಹಿರಣ್ಯಾಕ್ಷ-ಹಿರಣ್ಯಕಶಿಪು ಎನ್ನುವ ಆದಿದೈತ್ಯರೇ ಮರಳಿ ವೈವಸ್ವತ ಮನ್ವಂತರದಲ್ಲಿ ಅದೇ ಹೆಸರಿನಿಂದ ದಿತಿ-ಕಾಶ್ಯಪರಲ್ಲಿ ಹುಟ್ಟಿ ಬರುತ್ತಾರೆ.[ಕೆಲವರು ‘ಕಾಶ್ಯಪ’ ಎನ್ನುವ ನಾಮವನ್ನು ‘ಕಶ್ಯಪ’ ಎಂದು ತಪ್ಪಾಗಿ ಉಚ್ಛರಿಸುತ್ತಾರೆ. ಆದರೆ ಹಾಗೆ ಉಚ್ಛರಿಸಬಾರದು. ಏಕೆಂದರೆ ಕಶ್ಯಪ ಎನ್ನುವ ಪದಕ್ಕೆ ಕೆಟ್ಟ ಅರ್ಥವಿದೆ. ಸಂಸ್ಕೃತದಲ್ಲಿ ‘ಕಶ್ಯ’ ಎಂದರೆ ಮದ್ಯ(liquor). ಆದ್ದರಿಂದ ಕಶ್ಯಪ ಎಂದರೆ ‘ಮದ್ಯಸೇವಕ’ ಎಂದಾಗುತ್ತದೆ! ಆದರೆ ಕಾಶ್ಯಪ ಎನ್ನುವುದಕ್ಕೆ ಸಂಸ್ಕೃತದಲ್ಲಿ ಅಪೂರ್ವ ಅರ್ಥವಿದೆ. ಕಾಶ್ಯಮ್ ಪಿಬತೀತಿ ಕಾಶ್ಯಪಃ. ಸಮಸ್ತ ವೇದೊಪನಿಷತ್ತುಗಳಿಂದ ಪ್ರಕಾಶ್ಯಮಾನವಾದ ಭಗವದ್ ತತ್ತ್ವದ ಗುಣಗಾನ ಮಾಡಿದವನು ಕಾಶ್ಯಪ]. ಭಗವಂತ ಆದಿದೈತ್ಯ ಹಿರಣ್ಯಾಕ್ಷನನ್ನು ಕೊಲ್ಲುವುದಕ್ಕಾಗಿ  ವರಾಹ ಅವತಾರ ತಾಳಿದರೆ, ದಿತಿ-ಕಾಶ್ಯಪರ ಪುತ್ರ ಹಿರಣ್ಯಾಕ್ಷನ ವದೆಗಾಗಿ  ವೈವಸ್ವತ ಮನ್ವಂತರದಲ್ಲಿ ಮರಳಿ ಅದೇ ರೂಪದಿಂದ ಕಾಣಿಸಿಕೊಂಡ.  ಮೊದಲ ವರಾಹ ಅವತಾರದಲ್ಲಿ ಭಗವಂತ ಹಿರಣ್ಯಾಕ್ಷನನ್ನು ತನ್ನ ಕೋರೆ ದಾಡೆಗಳಿಂದ ಸೀಳಿ ಕೊಂದರೆ, ಎರಡನೇ ಬಾರಿ ಆತನ ಕಿವಿಯ ಮರ್ಮಸ್ಥಾನಕ್ಕೆ ಮುಷ್ಟಿಯಿಂದ ಗುದ್ದಿ  ಕೊಂದ ಎನ್ನುವ ವಿವರವನ್ನು ನಾವು ಭಾಗವತದಲ್ಲೇ ಕಾಣುತ್ತೇವೆ.  ಈ ಎರಡು ವರಾಹ ಅವತಾರದ ವಿವರ ತಿಳಿಯದೇ ಇದ್ದಾಗ ವರಾಹ ಅವತಾರ ಗೊಂದಲವಾಗುತ್ತದೆ. ಇದನ್ನು ಸ್ಪಷ್ಟಪಡಿಸುತ್ತಾ ಆಚಾರ್ಯ ಮಧ್ವರು ಹೇಳುತ್ತಾರೆ: “ಪ್ರಥಮಂ ದಂಷ್ಟ್ರೀಯ ಹತಃ, ದ್ವಿತಿಯಾತ್ ಕರ್ಣ ತಾಡನಾತ್” ಎಂದು.  ಇನ್ನೊಂದು ಮುಖ್ಯ ವಿಷಯ ಏನೆಂದರೆ: ಸ್ವಾಯಂಭುವ ಮನ್ವಂತರದಲ್ಲಿ ತಳೆದ ವರಾಹವೇ ವೈವಸ್ವತ ಮನ್ವಂತರದಲ್ಲಿ ಬಂದಿದ್ದೇ ಹೊರತು, ಮೊದಲ ಅವತಾರ ಸಮಾಪ್ತಿಮಾಡಿ ಭಗವಂತ ಇನ್ನೊಮ್ಮೆ ವರಾಹನಾಗಿ ಅವತರಿಸಿ ಬಂದಿರುವುದಲ್ಲ. ಹೀಗಾಗಿ ವರಾಹ ಅವತಾರವನ್ನು ಎರಡು ಬಾರಿ ಲೆಕ್ಕಕ್ಕೆ ತೆಗೆದುಕೊಳ್ಳುವುದಿಲ್ಲ.
‘ದೈತ್ಯ’ ಎನ್ನುವ ಪದವನ್ನು ನಾವು ಕೇವಲ ದಿತಿಯ ಮಕ್ಕಳು ಎಂದಷ್ಟೇ ತಿಳಿದಾಗ ನಮಗೆ ಮತ್ತೆ ಗೊಂದಲವಾಗುತ್ತದೆ. ದೈತ್ಯ ಎನ್ನುವುದಕ್ಕೆ ದಿತಿಯ ಮಕ್ಕಳು ಎನ್ನುವುದು ಒಂದು ಅರ್ಥ. ಆದರೆ ಅದೇ ಅರ್ಥದಲ್ಲಿ ಅದನ್ನು ಶಾಸ್ತ್ರಕಾರರು ಬಳಸುವುದಿಲ್ಲ. ಆ ಶಬ್ದಕ್ಕೆ ಬೇರೊಂದು ವ್ಯುತ್ಪತ್ತಿ ಕೂಡಾ ಇದೆ.  ಉದಾಹರಣೆಗೆ: ಶ್ರೀಕೃಷ್ಣನನ್ನು ವಾಸುದೇವ ಎಂದು ಕರೆಯುತ್ತಾರೆ. ಇಲ್ಲಿ ವಾಸುದೇವ ಎಂದರೆ ವಸುದೇವನ ಮಗ ಎನ್ನುವುದು ಒಂದು ಅರ್ಥ. ಆದರೆ ವಸುದೇವನ ಮಗನಾಗಿ ಹುಟ್ಟುವ ಮೊದಲು, ಸೃಷ್ಟಿಯ ಆದಿಯಲ್ಲೇ ಭಗವಂತ ವಾಸುದೇವ ರೂಪ ಧರಿಸಿರುವುದು ನಮಗೆಲ್ಲಾ ತಿಳಿದೇ ಇದೆ. ಹೀಗೆ ಒಂದು ಶಬ್ದ ಒಂದು ವಿಶಿಷ್ಠ ಅರ್ಥದಲ್ಲಿ ಈಗ ಬಳಕೆಯಲ್ಲಿದ್ದರೂ ಸಹ, ಅದನ್ನು ಪ್ರಾಚೀನ ಕಾಲದಲ್ಲಿ ಬೇರೊಂದು ಅರ್ಥದಲ್ಲಿ ಬಳಸಿರುವ ಸಾಧ್ಯತೆಯನ್ನೂ ನಾವು ಸಂದರ್ಭಕ್ಕನುಗುಣವಾಗಿ ತಿಳಿದುಕೊಳ್ಳಬೇಕು. ದಿತಿ, ಅದಿತಿ ಎನ್ನುವ ಪದಗಳಿಗೆ ಅನೇಕ ಅರ್ಥಗಳಿವೆ. ಬೃಹದಾರಣ್ಯಕ ಉಪನಿಷತ್ತಿನಲ್ಲಿ ಹೇಳುವಂತೆ: “ಸರ್ವಂ ವಾ ಅತ್ತೀತಿ ತದದಿತೇರದಿತಿತ್ವಮ್”.  ಇಲ್ಲಿ ‘ದಿತಿ’ ಅಂದರೆ ತುಂಡರಿಸುವ ಅಥವಾ ನಾಶಮಾಡುವ  ಸ್ವಭಾವ.  ಅಂಥಹ ಸ್ವಭಾವ  ಉಳ್ಳವರು ದೈತ್ಯರು. ಅಂದರೆ ಲೋಕಕಂಟಕರು ಎಂದರ್ಥ.  ಸೃಷ್ಟಿಯ ಆದಿಯಲ್ಲೇ  ಇಂಥಹ ಲೋಕಕಂಟಕರ ಸೃಷ್ಟಿಯಾಗಿತ್ತು . ಸ್ವಾಯಂಭುವ ಮನ್ವಂತರದ ಆದಿದೈತ್ಯರಿಗೂ ಮತ್ತು ವೈವಸ್ವತ ಮನ್ವಂತರದ ದಿತಿಯ ಮಕ್ಕಳಿಗೂ ಇದ್ದ ಇನ್ನೊಂದು ವ್ಯತ್ಯಾಸ ಏನೆಂದರೆ: ವೈವಸ್ವತ ಮನ್ವಂತರದಲ್ಲಿನ  ಹಿರಣ್ಯಕಶಿಪು ಮತ್ತು ಹಿರಣ್ಯಾಕ್ಷರಲ್ಲಿ ಪುಣ್ಯಜೀವಿಗಳಾದ ಜಯ-ವಿಜಯರಿದ್ದಂತೆ(ನಾಲ್ಕು ಜೀವಗಳು ಎರಡು ಶರೀರದಲ್ಲಿ) ಆದಿ ದೈತ್ಯರಲ್ಲಿ ಜಯ-ವಿಜಯರಿರಲಿಲ್ಲ.
ಎರಡು ಬಾರಿ ಭಗವಂತ ವರಾಹ ಅವತಾರ ತಾಳಲು ಕಾರಣ ಮಾತ್ರ ಒಂದೇ ಆಗಿರುವುದು ಈ ಅವತಾರದ ವಿಶೇಷ.  ಭೂಮಿ ತನ್ನ ಕಕ್ಷೆಯಿಂದ ಜಾರಿದಾಗ ಅದನ್ನು ರಕ್ಷಿಸಿ, ಮರಳಿ ಕಕ್ಷೆಯಲ್ಲಿಡಲು ಭಗವಂತ ವರಾಹ ಅವತಾರವಾಗಿದೆ. ಸ್ವಾಯಂಭುವ ಮನ್ವಂತರದಲ್ಲಿ ಯಾರೂ ಭೂಮಿಯನ್ನು ಕಕ್ಷೆಯಿಂದ ಜಾರಿಸಿರಲಿಲ್ಲ. ಅದು ತನ್ನಷ್ಟಕ್ಕೇ ತಾನು ಜಾರಿದಾಗ ಭಗವಂತ  ಅದನ್ನು ರಕ್ಷಿಸಿದ. ಹೀಗೆ ರಕ್ಷಿಸುವಾಗ ತಡೆದ ಆದಿದೈತ್ಯ ಹಿರಣ್ಯಾಕ್ಷನನ್ನು ಭಗವಂತ ವರಾಹ ರೂಪದಲ್ಲಿ, ಕೊರೆದಾಡೆಗಳಿಂದ ತಿವಿದು ಸಂಹಾರ ಮಾಡಿದ. ಎರಡನೇ ಬಾರಿ ವೈವಸ್ವತ ಮನ್ವಂತರದಲ್ಲಿ ಹಿರಣ್ಯಾಕ್ಷನೇ  ಭೂಮಿಯನ್ನು ಕಕ್ಷೆಯಿಂದ ಜಾರಿಸಿ ನಾಶ ಮಾಡಲು ಪ್ರಯತ್ನಿಸಿದಾಗ, ಭಗವಂತ ಮರಳಿ ವರಾಹ ಅವತಾರಿಯಾಗಿ ಬಂದು ಹಿರಣ್ಯಾಕ್ಷನ ಕಿವಿಯ ಮೂಲಕ್ಕೆ ಗುದ್ದಿ ಆತನನ್ನು ಕೊಂದು  ಭೂಮಿಯನ್ನು ರಕ್ಷಿಸಿ ಮರಳಿ ಕಕ್ಷೆಯಲ್ಲಿಟ್ಟ. ವಿಶೇಷ ಏನೆಂದರೆ ಈ ರೀತಿ ಎರಡು ಬಾರಿ ಭೂಮಿ ಕಕ್ಷೆಯಿಂದ ಜಾರಿದ ವಿಷಯವನ್ನು ಇಂದು ವಿಜ್ಞಾನ ಕೂಡಾ ಒಪ್ಪುತ್ತದೆ. ರಷ್ಯನ್ ವಿಜ್ಞಾನಿ ವಿಲಿಕೋವಸ್ಕಿ(Velikovsky) ತನ್ನ “Worlds in collision”  ಎನ್ನುವ ಪುಸ್ತಕದಲ್ಲಿ ಹೇಳುತ್ತಾನೆ : ವೈಜ್ಞಾನಿಕವಾಗಿ ಎರಡು ಬಾರಿ ಭೂಮಿ ತನ್ನ ಕಕ್ಷೆಯಿಂದ ಜಾರಿದ್ದು ನಿಜ, ಆದರೆ ನಮಗೆ ಇದು ಏಕೆ ಎನ್ನುವುದು ತಿಳಿದಿಲ್ಲಎಂದು. ಆತ ಅಲ್ಲಿ ಭಾಗವತವನ್ನು ಉಲ್ಲೇಖಿಸಿ ಹೇಳುತ್ತಾನೆ: ಭಾರತದ ಋಷಿಗಳು ಈ ವಿಚಾರವನ್ನು ತಿಳಿದಿದ್ದರು” ಎಂದು.   [ಇಂದು ನಾವು ಇಂಥಹ ಅಪೂರ್ವ ಅಧ್ಯಾತ್ಮ ವಿಜ್ಞಾನವನ್ನು ಬಿಟ್ಟು ಪಾಶ್ಚ್ಯಾತ್ಯ ವಿಜ್ಞಾನಕ್ಕೆ ಮರುಳಾಗಿ ಬದುಕುತ್ತಿರುವುದು ದುರಾದೃಷ್ಟಕರ].
ಇಲ್ಲಿ ಭಗವಂತ ಏಕೆ ವರಾಹರೂಪವನ್ನೇ ತೊಟ್ಟ ? ಬೇರೆ ರೂಪ ಏಕೆ ತೊಡಲಿಲ್ಲ ಎನ್ನುವುದು ಕೆಲವರ ಪ್ರಶ್ನೆ. ಈ ರೀತಿ ಪ್ರಶ್ನಿಸುವ ಮೊದಲು ನಾವು ತಿಳಿಯಬೇಕಾದ ವಿಷಯ ಏನೆಂದರೆ:  ಭಗವಂತ ತಾನು ಯಾವ ರೂಪದಲ್ಲಿ ಬರಬೇಕು ಎನ್ನುವುದನ್ನು ಆತನೇ ನಿರ್ಧರಿಸುತ್ತಾನೆ. ಅದು ಅವನ ಇಚ್ಛೆ. ಭಗವಂತನ ವರಾಹ ರೂಪ ಎಲ್ಲರಿಗೂ ಹೊರಗಣ್ಣಿಗೆ ಕಾಣಿಸಿಕೊಂಡ ರೂಪವಲ್ಲ. ಈ ರೂಪವನ್ನು ಚತುರ್ಮುಖ, ಸ್ವಾಯಂಭುವ ಮನು, ಹಿರಣ್ಯಾಕ್ಷ ಕಂಡಿದ್ದಾರೆ. ಅದೇ ರೂಪವನ್ನು ಜ್ಞಾನಿಗಳು ಧ್ಯಾನದಲ್ಲಿ ಕಂಡು ನಮಗೆ ‘ವರಾಹ’ ಎಂದು ವಿವರಿಸಿದ್ದಾರೆ.
ವರಾಹ ಅವತಾರಕ್ಕೆ ಸಂಬಂಧಿಸಿ ಒಂದು ತಪ್ಪು ಕಲ್ಪನೆ  ಸಾಮಾನ್ಯ ಜನರಲ್ಲಿದೆ. ಅದೇನೆಂದರೆ: ಭಾರತೀಯರು ಭೂಮಿ ಚಪ್ಪಟೆಯಾಗಿದೆ ಎಂದು ತಿಳಿದಿದ್ದರು ಮತ್ತು ವರಾಹ ಅವತಾರಕ್ಕೆ ಯಾವುದೇ ವೈಜ್ಞಾನಿಕ ಪುಷ್ಟೀಕರಣ ಇಲ್ಲ ಎಂದು. ಇದಕ್ಕೆ ಒಂದು ಕಾರಣವೂ ಇದೆ.  ಅದೇನೆಂದರೆ: ಭಗವಂತನ ಈ ಅವತಾರವನ್ನು ಕಕ್ಷೆ, ಗುರುತ್ವಾಕರ್ಷಣ ಶಕ್ತಿ, ಇತ್ಯಾದಿ ವಿಷಯದ ಅರಿವಿಲ್ಲದ ಚಿಕ್ಕ ಮಕ್ಕಳಿಗೆ ವಿವರಿಸುವಾಗ, ಅವರಿಗೆ ಗ್ರಹಣವಾಗುವಂತೆ ಸರಳೀಕರಣ ಮಾಡಿ  “ಹಿರಣ್ಯಾಕ್ಷ ಭೂಮಿಯನ್ನು  ಚಾಪೆಯಂತೆ ಮಡಚಿ ಬಗಲಿನಲ್ಲಿಟ್ಟುಕೊಂಡು ಹೋದ” ಎಂದು ವಿವರಿಸಿದ್ದಾರೆ. ಆದರೆ ಇದೇ ನಿಜವಲ್ಲ. ನಮ್ಮ ಪ್ರಾಚೀನ ಋಷಿಗಳಿಗೆ ಭೂಮಿಯ ಆಕಾರದ ಬಗ್ಗೆ, ಭೂಮಿಯ ಗುರುತ್ವಾಕರ್ಷಣ ಶಕ್ತಿಯ ಬಗ್ಗೆ ಪೂರ್ಣ ತಿಳುವಳಿಕೆ ಇತ್ತು. ಅದು ಇಂದಿನ ಪಾಶ್ಚ್ಯಾತ್ಯರು ಕಂಡುಕೊಂಡ ಹೊಸ ವಿಚಾರವೇನೂ ಅಲ್ಲ. ಸುಮಾರು ಎರಡು ಸಾವಿರ ವರ್ಷಗಳ ಹಿಂದೆ ಆರ್ಯಭಟ ಆಕೃಷ್ಟಿ ಶಕ್ತಿಶ್ಚ ಮಹೀಎಂದು ಭೂಮಿಯ ಗುರುತ್ವಾಕರ್ಷಣ ಶಕ್ತಿಯ ಬಗ್ಗೆ ಹೇಳಿರುವುದನ್ನು ಇಲ್ಲಿ ನಾವು ನೆನಪಿಸಿಕೊಳ್ಳಬೇಕು. ಭೂಮಿಯನ್ನು ಭೂಗೋಲಎಂದು ಕರೆದಿದ್ದ ನಮ್ಮ ಪ್ರಾಚೀನ ಋಷಿಗಳು, ಭೂಮಿ ದುಂಡಗಿದೆ ಎಂದು ತಿಳಿದಿದ್ದರು ಎನ್ನುವುದು ಅವರು ಬಳಸಿರುವ ಗೋಲಎನ್ನುವ ಪದದಿಂದಲೇ ತಿಳಿಯುತ್ತದೆ. ದುರಾದೃಷ್ಟವಶಾತ್ ಇಂದು ನಮಗೆ ನಮ್ಮ ಪೂರ್ವಿಕರು ಕೊಟ್ಟ ಅಪೂರ್ವ ವಿಜ್ಞಾನದ ಬಗ್ಗೆ ಯಾವುದೇ ತಿಳುವಳಿಕೆ/ಗೌರವ ಇಲ್ಲಾ. ಭೂಮಿಯಲ್ಲಿ ಅಪಾನಶಕ್ತಿ(ಗುರುತ್ವಾಕರ್ಷಣ ಶಕ್ತಿ) ಇರುವುದರಿಂದ ಅದು ತನ್ನ ಕಕ್ಷೆಯಲ್ಲಿ, ಭೌತಿಕವಾಗಿ ನಿರಾಲಂಬವಾಗಿ ನಿಂತಿದೆ. ಇಂತಹ ಪ್ರಕೃತಿಸತ್ಯ ಹಿಂದೆ ಋಷಿಗಳಿಗೆ ಸ್ಫುರಣವಾಗುತ್ತಿತ್ತು. ಭಾರತದ ಗಣಿತಪದ್ಧತಿ (ಜ್ಯೋತಿಷ್ಯ ಶಾಸ್ತ್ರ) ಸಂಪೂರ್ಣ ಭೂಮಿಯ ಹಾಗೂ ಗ್ರಹಗೋಲಗಳ ಚಲನೆಗೆ ಅನುಗುಣವಾಗಿದೆ. ಇದು ಇಂದಿನ ಪಾಶ್ಚ್ಯಾತ್ಯ ಗಣಿತದಿಂದ ಬಂದಿದ್ದಲ್ಲ. ಸುಮಾರು ೫೦೦೦ ವರ್ಷಗಳ ಹಿಂದೆ ಮಹಾಭಾರತ ಯುದ್ಧದ ಸಮಯದಲ್ಲಿ ಹದಿಮೂರು ದಿನಗಳ ಅಂತರದಲ್ಲಿ ಎರಡು ಗ್ರಹಣ ಸಂಭವಿಸುತ್ತದೆ ಹಾಗೂ ಅದು ಯುದ್ಧ ಮತ್ತು ಯುದ್ಧದ ಪರಿಣಾಮ(ಸರ್ವನಾಶ)ವನ್ನು ಸೂಚಿಸುತ್ತದೆ ಎಂದು ವೇದವ್ಯಾಸರು ಯುದ್ಧಕ್ಕೂ ಮೊದಲೇ ಧೃತರಾಷ್ಟ್ರನಿಗೆ ಹೇಳಿರುವುದನ್ನು ನಾವಿಲ್ಲಿ ನೆನಪಿಸಿಕೊಳ್ಳಬೇಕು. ಪ್ರಾಚೀನ ಕಾಲದಿಂದಲೂ ಭಾರತದ ಜ್ಯೋತಿಷ್ಯಶಾಸ್ತ್ರ ಕರಾರುವಕ್ಕಾಗಿ ಗ್ರಹಣ ಸಂಭವಿಸುವ ಕಾಲವನ್ನು ಗುರುತಿಸುವ ಗಣಿತವಾಗಿತ್ತು. ಹೀಗಾಗಿ ಭಾರತೀಯರು ಎಂದೂ ಭೂಮಿ ಚಪ್ಪಟೆಯಾಗಿದೆ ಎಂದು ತಿಳಿದಿರಲಿಲ್ಲ ಎನ್ನುವುದು ಸ್ಪಷ್ಟವಾಗುತ್ತದೆ.
ವರಾಹ ಅವತಾರದಲ್ಲಿ ಬರುವ ಇನ್ನೊಂದು ಸಂಶಯ ಎಂದರೆ:  ಅಲ್ಲಿ ಭೂಮಿ ಕಕ್ಷೆಯಿಂದ ಕಳಚಿಕೊಂಡು  ನೀರಿನಲ್ಲಿ ಮುಳುಗುವ ಪ್ರಸಂಗ ಬಂದಾಗ ವರಾಹ ಅವತಾರವಾಯಿತು ಎನ್ನುತ್ತಾರೆ. ಇಲ್ಲಿ ಎಲ್ಲರಿಗೂ ಬರುವ ಸರ್ವೇ ಸಾಮಾನ್ಯ ಪ್ರಶ್ನೆ ಎಂದರೆ: “ಸಮುದ್ರಗಳಿರುವುದು ಭೂಮಿಯ ಮೇಲೆ. ಹೀಗಿರುವಾಗ ಅನೇಕ ಸಮುದ್ರಗಳಿರುವ ಇಂಥಹ  ಭೂಮಿ ಮುಳುಗುವ ಇನ್ನೊಂದು ಸಮುದ್ರ ಎಲ್ಲಿದೆ” ಎನ್ನುವುದು. ಈ ರೀತಿ ಪ್ರಶ್ನೆ ಮಾಡುವವರಿಗೆ ಪ್ರಳಯ ಸಮುದ್ರದ ಕಲ್ಪನೆ ಇರುವುದಿಲ್ಲ. ಶಾಸ್ತ್ರಕಾರರು ಎಂದೂ ಭೂಮಿ ನೀರಿನ ಸಮುದ್ರದಲ್ಲಿ ಮುಳುಗುವ ಪರಿಸ್ಥಿತಿ ಬಂತು ಎಂದು ಹೇಳಲಿಲ್ಲ. ಬದಲಾಗಿ ಅವರು “ಕಾರಣೋದಕ” ಎಂದಿದ್ದಾರೆ. ಅಂದರೆ ನೀರು ಯಾವುದರಿಂದ ಮುಂದೆ ನಿಷ್ಪನ್ನವಾಗುತ್ತದೋ ಅದಕ್ಕೆ ಕಾರಣೀಭೂತವಾದ ಮೂಲದ್ರವ್ಯ ವಾತಾವರಣದಲ್ಲಿ ತುಂಬಿರುವ ಸ್ಥಿತಿ. ಸೃಷ್ಟಿ ಪೂರ್ವದಲ್ಲಿ ಸೃಷ್ಟಿಗೆ ಬೇಕಾದ ಸಮಸ್ತ ಮೂಲದ್ರವ್ಯಗಳೂ ಪರಮಾಣು ಸಮುದ್ರ ರೂಪದಲ್ಲಿದ್ದು, ಸೃಷ್ಟಿಕರ್ತ ನಾರಾಯಣ ಆ ಪ್ರಳಯಸಮುದ್ರದಲ್ಲಿ ಪವಡಿಸಿದ್ದ ಎನ್ನುವ ಮಾತನ್ನು ನಾವಿಲ್ಲಿ ನೆನಪಿಸಿಕೊಳ್ಳಬೇಕು. ವರಾಹ ಅವತಾರ ಆಗುವಾಗ ಪೂರ್ಣಪ್ರಮಾಣದ ಸ್ಥೂಲ ಪ್ರಪಂಚ ನಿರ್ಮಾಣ ಆಗಿರಲಿಲ್ಲ. ಅಂತಹ ಸಂದರ್ಭದಲ್ಲಿ ಈ ಘಟನೆ ನಡೆದಿರುವುದು.  ನಮಗೆ ತಿಳಿದಂತೆ ಭೂಮಿ ಕಕ್ಷೆಯಿಂದ ಸ್ವಲ್ಪ ಜಾರಿದರೂ ಸಾಕು. ಅದು ಇತರ ಗ್ರಹ-ಗೋಲಗಳಿಗೆ ಡಿಕ್ಕಿ ಹೊಡೆದು ನಾಶವಾಗಿ ಹೋಗುತ್ತದೆ.  ವಿಶ್ವದ ರಚನೆ ಯಶಸ್ವಿಯಾಗಬಾರದು ಎಂದು ಬಯಸಿದವನು ಹಿರಣ್ಯಾಕ್ಷ. ಆದರೆ ಭೂಮಿಯನ್ನು ಮರಳಿ ಕಕ್ಷೆಯಲ್ಲಿಟ್ಟು ವಿಶ್ವ ರಚನೆ ಮಾಡಿದ ವಿಶ್ವಕರ್ಮ ಆ ಭಗವಂತ.
ಹಂದಿಗೆ ‘ಭೂದಾರ’ ಎನ್ನುವ ಹೆಸರಿದೆ. ಭೂದಾರ ಎಂದರೆ ನೆಲದ ಒಳಗಿರುವ ಗಡ್ಡೆಗಳನ್ನು ತನ್ನ ಮುಖದ ತುದಿಯಲ್ಲಿನ ಚಿಕ್ಕ ದಾಡೆಯಿಂದ ಅಗೆದು ತಿಂದು ಬದುಕುವ ಪ್ರಾಣಿ. ಇದೇ ಶಬ್ದವನ್ನು ಶಾಸ್ತ್ರಕಾರರು ಭಗವಂತನ ವರಾಹ ಅವತಾರದ ವಿಶೇಷ ನಾಮವಾಗಿ ಬಳಸುತ್ತಾರೆ. ಆದರೆ ಅಲ್ಲಿ ಈ ಪದದ ಅರ್ಥ ಮಾತ್ರ ವಿಶಿಷ್ಠವಾಗಿದೆ. ಸಂಸ್ಕೃತದಲ್ಲಿ ‘ದಾರ’ ಎಂದರೆ ಹೆಂಡತಿ ಎಂದರ್ಥ.  ಭೂದಾರ ಎಂದರೆ ತನ್ನ ಹೆಂಡತಿಯಾದ ಭೂದೇವಿಯನ್ನು ರಕ್ಷಿಸಿ ಉದ್ದರಿಸಲು ಭಗವಂತ ತಾಳಿದ ಅವತಾರ.
ಗಾಯತ್ತ್ರಿ ಮಂತ್ರದಲ್ಲಿ ‘ತತ್ಸವಿತುರ್ವರೇಣ್ಯಮ್’ ಎನ್ನುವಲ್ಲಿನ ‘ವರೇಣ್ಯಮ್’ ಎನ್ನುವ ಪದದ ಅರ್ಥ ಹಾಗೂ ವರಾಹ ಎನ್ನುವ ಪದದ ಅರ್ಥ ಒಂದೇ ಆಗಿದೆ.  ವರೇಣ್ಯಂ/ವರಾಹ ಎಂದರೆ ಎಲ್ಲರೂ ಆಶ್ರಯಿಸಬೇಕಾದ, ಎಲ್ಲಕ್ಕಿಂತ ಹಿರಿದಾದ ಶಕ್ತಿ ಎಂದರ್ಥ. ವೈದಿಕ ಸಂಸ್ಕೃತದಲ್ಲಿ ಮೋಡವನ್ನೂ ಕೂಡಾ ವರಾಹ ಎಂದು ಕರೆಯುತ್ತಾರೆ.  ಮೋಡವೂ ಕೂಡಾ ಎತ್ತರದಲ್ಲಿರುತ್ತದೆ ಮತ್ತು ನಾವೆಲ್ಲರೂ ಅದನ್ನು ಆಶ್ರಯಿಸಿಕೊಂಡೇ ಬದುಕುತಿದ್ದೇವೆ. ಹಾಗಾಗಿ ಮೋಡಕ್ಕೆ ಆ ಹೆಸರು. ಭೂಮಿಯನ್ನು ಮರಳಿ ಕಕ್ಷೆಯಲ್ಲಿಟ್ಟು ನಮಗೆಲ್ಲರಿಗೂ ರಕ್ಷಣೆ ನೀಡಿರುವ ಭಗವಂತ ಜ್ಞಾನಿಗಳಿಗೆ  ಕಾಣಿಸಿಕೊಂಡ ರೂಪದಲ್ಲೇ  ಹಂದಿ ಇರುವುದರಿಂದ ಅದಕ್ಕೂ ವರಾಹ ಎನ್ನುವ ಹೆಸರು ಬಂತೇ ವಿನಃ ಈ ಪದದ ವ್ಯತ್ಪತ್ತಿಗೂ ಮತ್ತು ಆ ಪ್ರಾಣಿಗೂ ಯಾವುದೇ ಸಂಬಂಧವಿಲ್ಲ. ಕೇವಲ ರೂಪ ಸಾಮ್ಯದಿಂದ ಆ ಪ್ರಾಣಿಗೂ ಆ ಹೆಸರು ಬಂತು ಅಷ್ಟೇ.  ಬನ್ನಿ, ಈ ಹಿನ್ನೆಲೆಯೊಂದಿಗೆ ಚತುರ್ಮುಖ-ನಾರದ ಸಂವಾದವನ್ನಾಲಿಸೋಣ.

No comments:

Post a Comment