ಅಷ್ಟಮೋSಧ್ಯಾಯಃ
ವಿದುರ-ಮೈತ್ರೇಯ ಸಂವಾದ: ವಿದುರನ ಪ್ರಶ್ನೆ
ಭಗವಂತ ಜ್ಞಾನಾನಂದಸ್ವರೂಪ ಅವನಿಗೆ ಆಕಾರವಾಗಲೀ, ವಿಕಾರವಾಗಲೀ ಇಲ್ಲ. ಹೀಗಿರುವಾಗ ಅವನು ಈ ಪ್ರಪಂಚದ ಸೃಷ್ಟಿಯನ್ನು ಹೇಗೆ ಮತ್ತು ಏಕೆ ಮಾಡುತ್ತಾನೆ ಎನ್ನುವ ವಿದುರನ ಪ್ರಶ್ನೆಯೊಂದಿಗೆ ಈ ಅಧ್ಯಾಯ ಆರಂಭವಾಗುತ್ತದೆ.
ಕ್ರೀಡಾಯಾ ಮುದ್ಯತೋSರ್ಹಸ್ಯ ಕಾಮಂ ಚಿಕ್ರೀಡಿಷಾSನ್ಯತಃ ।
ಸ್ವತಸ್ತೃಪ್ತಸ್ಯ ತು ಕಥಂ ನಿರ್ವೃತಸ್ಯ ಸದಾSSತ್ಮನಃ ॥೩॥
ಕ್ರೀಡಾಯಾಃ ಮುತ್ । ಅರ್ಹಸ್ಯ ಅಪೂರ್ಣಸುಖಸ್ಯ । ಅನ್ಯತಃ ಅರತಿತಃ ॥*॥
ಭಗವಂತ ಜ್ಞಾನಾನಂದಸ್ವರೂಪ. ಅವನಿಗೆ ಆಕಾರವಾಗಲೀ ವಿಕಾರವಾಗಲೀ ಇಲ್ಲ. ಹೀಗಿರುವಾಗ ಭಗವಂತ ಅಜ್ಞಾನದಿಂದ ಕೂಡಿದ ಈ ಜಡಪ್ರಪಂಚವನ್ನು ಸೃಷ್ಟಿಮಾಡುವುದು ಹೇಗೆ ಸಾಧ್ಯ? ಎಲ್ಲವೂ ಭಗವಂತನ ಲೀಲೆ ಎಂದರೆ ನಿರ್ಗುಣ-ನಿರಾಕಾರನಾದ ಭಗವಂತ ತ್ರೈಗುಣ್ಯವರ್ಜಿತ. ಅವನಿಗೆ ಗುಣಗಳ ಸ್ಪರ್ಶವಿಲ್ಲ. ಹೀಗಿರುವಾಗ ಅವನು ತನ್ನನ್ನು ವಿಕಾರಗಳಿಗೆ ಒಡ್ಡಿಕೊಳ್ಳುವುದು ಹೇಗೆ? ಎಲ್ಲವೂ ಭಗವಂತನ ಕ್ರೀಡೆ ಎಂದರೆ ಕ್ರೀಡೆಯ ಬಯಕೆ ಹುಟ್ಟುವುದು ಕೇವಲ ಅಲ್ಪ ಸುಖ ಉಳ್ಳವನಿಗೆ ಮಾತ್ರ. ನಿತ್ಯತೃಪ್ತನಾದ ಭಗವಂತ ಸದಾ ಆನಂದಮಯ. ಹೀಗಾಗಿ ಅವನಿಗೆ ಸುಖ ಪ್ರಾಪ್ತಿಯಾಗಲೀ, ದುಃಖ ನಿವೃತ್ತಿಯಾಗಲೀ ಇಲ್ಲ.
ದೇಶತಃ ಕಾಲತೋ ಯೋSಸಾವವಸ್ಥಾತಃ ಸ್ವತೋSನ್ಯತಃ ।
ಅವಿಲುಪ್ತಾವಬೋಧಾತ್ಮಾ ಸ ಯುಜ್ಯೇತಾಜಯಾ ಕಥಮ್ ॥೫॥
ಸ್ವತಃ ನಿರ್ಗುಣನಾದ ಭಗವಂತನ ಜೊತೆಗೆ ಪ್ರಕೃತಿ ಇದ್ದಾಳೆ. ಅವಳಿಗೆ ಸತ್ವ-ರಜಸ್ಸು-ತಮಸ್ಸಿನೊಂದಿಗೆ ಸಂಬಂಧವಿದೆ. [ಅಜಾಮೇಕಾಂ ಲೋಹಿತಶುಕ್ಲಕೃಷ್ಣಾಂ ...... (ಶ್ವೇತಾಶ್ವತರ ಉಪನಿಷತ್ತು ೦೪.೦೫)] ಎಂದೂ ಹುಟ್ಟದ ಅವಳು ಅನಾದಿನಿತ್ಯಳಾಗಿ ಭಗವಂತನ ಜೊತೆಗೆ ನಿಂತಿದ್ದಾಳೆ. ಅವಳು ತ್ರಿಗುಣಮಾನಿನಿ]. ಹೀಗಾಗಿ ಭಗವಂತ ಪ್ರಕೃತಿಯ(ಪತ್ನಿಯ) ಮುಖೇನ ಸೃಷ್ಟಿ ಮಾಡಿದ ಎನ್ನಬಹುದೇ ಎಂದರೆ ಅದೂ ಕೂಡುವುದಿಲ್ಲ. ಏಕೆಂದರೆ ಅಲ್ಲಿ ಭಗವಂತನಿಗೆ ಪ್ರಕೃತಿಯ ಸಂಬಂಧ ಹೇಗಾಯಿತು ಎನ್ನುವ ಪ್ರಶ್ನೆ ಬರುತ್ತದೆ. ಭಗವಂತನಿಗೆ ದೇಶತಃ, ಕಾಲತಃ ಅಜ್ಞಾನವಿಲ್ಲ. ಯಾವ ಅವಸ್ಥೆಯಲ್ಲೂ ಅಜ್ಞಾನವಿಲ್ಲ. ಹೀಗೆ ಯಾವ ಕಾರಣಕ್ಕೂ ಅರಿವಿನ ಲೋಪವಿಲ್ಲದ ಭಗವಂತನಿಗೆ ಪ್ರಕೃತಿ ನಿಮಿತ್ತವಾದ ಅಜ್ಞಾನ ಹೇಗೆ ಸಾಧ್ಯ?
ಮನುಷ್ಯನ ಬದುಕಿನ ಒಳಿತು ಕೆಡುಕಿಗೆ ಮೂಲಭೂತವಾದುದು ಅವಿದ್ಯೆ. ಅಜ್ಞಾನವೆನ್ನುವ ಆವರಣ ಮನುಷ್ಯನನ್ನು ಸದಾ ಕಾಡುತ್ತಿರುತ್ತದೆ. ಇದಕ್ಕೆ ಕಾರಣ, ಮನುಷ್ಯ ಪ್ರಕೃತಿನಿರ್ಮಿತ. ಪ್ರಕೃತಿಯಿಂದ ಅವಿದ್ಯೆ, ಕಾಮ, ಕರ್ಮ, ದುಃಖ, ಇತ್ಯಾದಿ ಎಲ್ಲವೂ ಬರಬಹುದು. ಹೀಗಾಗಿ ಇವುಗಳ ಸ್ಪರ್ಶವೇ ಇಲ್ಲದ ಭಗವಂತನಿಗೆ ಪ್ರಕೃತಿಯ ಮೂಲಕ ಸೃಷ್ಟಿ ಮಾಡುವುದು ಸಾಧ್ಯವಿಲ್ಲವಲ್ಲವೇ ಎನ್ನುವುದು ಪ್ರಶ್ನೆ.
ಭಗವಾನೇಕ ಏವೈಷ ಸರ್ವಕ್ಷೇತ್ರೇಷ್ವವಸ್ಥಿತಃ ।
ಅಮುಷ್ಯ ದುರ್ಭಗತ್ವಂ ವಾ ಕ್ಲೇಶೋ ವಾ ಕರ್ಮಭಿಃ ಕುತಃ ॥೬॥
ದುರ್ಭಗಕ್ಲೇಶಿಶರೀರ ಸ್ಥತ್ವಾತ್ ತಸ್ಯಾಪಿ ಭಾವ್ಯಮ್ । ನ ಚ ತದ್ ಯುಜ್ಯತೇ ।
ಈ ಸೃಷ್ಟಿಯಲ್ಲಿ ಎರಡು ಇಲ್ಲಾ, ಎಲ್ಲವೂ ಆ ಭಗವಂತ ಒಬ್ಬನೇ ಎಂದರೆ, ಅಲ್ಲಿ ಬರುವ ಪ್ರಶ್ನೆ- ಅಂತಹ ಭಗವಂತನಿಗೆ ಸಂಸಾರಕ್ಕೆ ಬಂದು ಒದ್ದಾಡುವ ದೌರ್ಭಾಗ್ಯ ಏಕೆ ಬಂತು ಎನ್ನುವುದು. ಜ್ಞಾನಾನಂದ ಸ್ವರೂಪನಾದ ಭಗವಂತನಿಗೆ ದುಃಖ ಹೇಗೆ ಬಂತು? ಕರ್ಮದಿಂದ ದುಃಖ ಎಂದರೆ, ಭಗವಂತನೇ ಅಜ್ಞಾನದಿಂದ ಕರ್ಮ ಮಾಡುವುದಾದರೆ ಅವನು ಭಗವಂತ ಆಗುವುದು ಹೇಗೆ? ಇನ್ನು ಭಗವಂತ ಜೀವಭಾವ ಹೊಂದಿದ ಎಂದರೆ, ಜ್ಞಾನಿಯಾದ ಭಗವಂತನಿಗೆ ಅಜ್ಞಾನಿಯಾದ ಜೀವಭಾವವನ್ನು ಹೊಂದುವ ದೌರ್ಭಾಗ್ಯ ಏಕೆ ಬಂತು?
ಭಗವಂತ ಜೀವರಿಂದ ಬೇರೆ ಎಂದರೂ ಕೂಡಾ ಅಲ್ಲಿಯೂ ನಮಗೆ ಪ್ರಶ್ನೆ ಬರುತ್ತದೆ. ಸರ್ವಾಂತರ್ಯಾಮಿಯಾದ ಅವನಿಗೆ ಜೀವಕ್ಕೆ ಆಗುವ ಪ್ರತಿಯೊಂದು ಅನುಭವ ಆಗಬೇಕಲ್ಲವೇ? ಭಗವಂತನೇ ಎಲ್ಲವನ್ನೂ ಮಾಡಿಸುವುದಾದರೆ ಕರ್ಮದ ಫಲ ಅವನೇ ಅನುಭವಿಸಬೇಕಲ್ಲವೇ? ಕರ್ಮ ಮಾಡುವುದು ಭಗವಂತ ಆದರೆ ನರಕ ಜೀವನಿಗೆ?
ಈರೀತಿಯಾಗಿ ಇಲ್ಲಿ ನಮ್ಮ-ನಿಮ್ಮೆಲ್ಲರ ಪ್ರತಿನಿಧಿಯಾಗಿ ವಿದುರ ಮೈತ್ರೇಯರನ್ನು ಪ್ರಶ್ನೆ ಮಾಡಿದ್ದಾನೆ.
ಸೇಯಂ ಭಗವತೋ ಮಾಯಾ ನ್ಯಾಯ್ಯಂ ಯೇನ ವಿರುದ್ಧ್ಯತೇ ।
ಈಶ್ವರಸ್ಯ ವಿಮುಕ್ತಸ್ಯ ಕಾರ್ಪಣ್ಯಮುತ ಬನ್ಧನಂ ॥೯॥
ಸೇಯಂ ಭಗವತೋ ಮಾಯಾ । ಅಯಂ ಹಿ ಭಗವನ್ಮಹಿಮಾ । ತಸ್ಯ ಕಾರ್ಪಣ್ಯಬನ್ಧನಾದಿ ನ ಯುಜ್ಯತ ಇತಿ ಯದುಕ್ತಂ ತನ್ನ್ಯಾಯ್ಯಮೇವ ದುರ್ಭಗಾದಿಶರೀರಸ್ಥಸ್ಯಾಪಿ ತದ್ದೋಷಾಸ್ಪರ್ಶ ಏವ ತನ್ಮಹಿಮೇತ್ಯರ್ಥಃ ।
ಭಗವಂತನ ವಿಷಯದಲ್ಲಿ ಕಾರ್ಪಣ್ಯ, ದಯನೀಯಸ್ಥಿತಿ, ದುಃಖ, ಬಂಧನ, ಇವುಗಳ್ಯಾವುದೂ ಕೂಡುವುದಿಲ್ಲ. ಯಾವುದು ತರ್ಕಕ್ಕೆ ವಿರುದ್ಧವೋ ಅದನ್ನು ಒಪ್ಪಲಾಗದು. ಹಾಗಿದ್ದರೆ ನ್ಯಾಯ ಯಾವುದು? ಯಾರು ಸರ್ವಸಮರ್ಥನೋ ಅವನೆಂದೂ ದೈನ್ಯನಲ್ಲ. ಯಾರು ನಿತ್ಯಮುಕ್ತನೋ ಅವನಿಗೆಲ್ಲಿಯ ಬಂಧನ? ಯಾರು ಈಶ್ವರನೋ ಅವನಿಗೆಲ್ಲಿಯ ದುಃಖ? ಹೀಗಾಗಿ ಭಗವಂತನ ಮಹಿಮೆ ನಮ್ಮ ತರ್ಕಕ್ಕೆ ಮೀರಿದ ವಿಷಯ.
ಕರ್ಮಮಾಡಿದವನಿಗೆ ಫಲವಲ್ಲ, ಯಾರಿಗೋಸ್ಕರ ಕರ್ಮ ನಡೆಯಿತೋ ಅವನಿಗೆ ಫಲ. ಉದಾಹರಣೆಗೆ ಪುರೋಹಿತರು ಮಾಡಿಸುವ ಪೂಜೆಯ ಫಲ ಅವರು ಯಾರಿಗೋಸ್ಕರ ಆ ಪೂಜೆಯನ್ನು ಮಾಡಿದರೋ ಅವರಿಗೆ. ಭಗವಂತ ಮಾಡುವುದು ನಮಗೋಸ್ಕರ. ಸರ್ವಸಮರ್ಥನಾದ ಭಗವಂತ ‘ಜೀವನ’ ಜೊತೆಗಿದ್ದಾನೆ ನಿಜ, ಆದರೆ ಅವನು ನಮ್ಮಂತೆ ಅಸ್ವತಂತ್ರನಲ್ಲ.
ಭಗವಂತ ಜೀವನ ಜೊತೆಗಿದ್ದಾನೆ ಆದರೆ ಅಲ್ಲಿ ಯಾವ ಲೇಪವೂ ಅವನಿಗಿಲ್ಲ. ಅವನು ಎಲ್ಲವನ್ನೂ ಮಾಡುತ್ತಾನೆ, ಆದರೆ ಏನನ್ನೂ ಮಾಡುವುದಿಲ್ಲ! (ಈ ರೀತಿಯ ವಿರೋಧಾಭಾಸ ಕೇವಲ ಭಗವಂತನಲ್ಲಿ ಮಾತ್ರ ಕೂಡುತ್ತದೆ). ನಾವಿಲ್ಲಿ ತಿಲಿಯಬೇಕಾಗಿರುವುದು ಏನೆಂದರೆ ಅಂಟಿಕೊಂಡು ಮಾಡುವ ಕರ್ಮ ನಮಗೆ ಫಲ ಕೊಡುತ್ತದೆ. ಭಗವಂತನಿಗೆ ಯಾವ ಕರ್ಮದ ಅಂಟೂ ಇಲ್ಲ. ಹೀಗಾಗಿ ಅವನಿಗೆ ಕರ್ಮಫಲದ ಲೇಪವಿಲ್ಲ. ಭಗವಂತನಿಗೆ ‘ನಾನು ಮಾಡಿದೆ, ನನ್ನಿನ್ದಾಯಿತು’ ಎನ್ನುವ ಅಭಿಮಾನ (ego/attachment) ಇಲ್ಲವೇ ಇಲ್ಲ. ದೇವತೆಗಳಿಗಾದರೂ ಅಭಿಮಾನವಿದೆ ಆದರೆ ಭಗವಂತನಲ್ಲಿಲ್ಲ.
ನಾವು ನೋಡಿದ ಯಾವ ವಸ್ತುವೂ ಅವನಲ್ಲ. ಏಕೆಂದರೆ ನಮಗೆ ತಿಳಿದಿರುವ ಎಲ್ಲಾ ವಸ್ತುಗಳೂ ಕೂಡಾ ತ್ರಿಗುಣದ ಸಂಪರ್ಕ ಇರುವಂತಹದ್ದೇ. ಆದರೆ ಭಗವಂತ ತ್ರಿಗುಣಾತೀತನಾಗಿ ಪ್ರಕೃತಿಯಿಂದ ಸೃಷ್ಟಿಯನ್ನು ಮಾಡುತ್ತಾನೆ. ತ್ರಿಗುಣಗಳಿಂದ ಪ್ರಭಾವಿತವಾಗುವುದು ಪ್ರಪಂಚವೇ ಹೊರತು ಭಗವಂತನಲ್ಲ. ಗುಣಗಳ ಪ್ರಭಾವ ಇದ್ದಾಗ ಅಲ್ಲಿ ಗುಣಬಂಧನ. ಯಾವುದರಿಂದಲೂ ಪ್ರಭಾವಿತನಾಗದ ಭಗವಂತ ನಮ್ಮ ಮನಸ್ಸಿನ ಮೇಲೆ ಪ್ರಭಾವ ಮಾಡಿ ‘ಅಭಿಮಾನ ‘ ಕೊಟ್ಟರೆ ಅದರ ಪರಿಣಾಮ ನಮ್ಮ ಮೇಲಾಗುತ್ತದೆ. ಇದೆಲ್ಲವೂ ಭಗವಂತನ ಮಹಿಮೆ. ಅವನು ಸರ್ವಕರ್ತ, ಸರ್ವಸಮರ್ಥ, ಸರ್ವಜ್ಞ . (ಇಲ್ಲಿ ಸರ್ವ ಎನ್ನುವ ಪದ ಸಮಸ್ತ ಜೀವರನ್ನು ಹೇಳುವ ಪದ. ಜೀವರೇ ಇಲ್ಲದಿದ್ದರೆ ಸರ್ವ ಪದ ಭಗವಂತನಲ್ಲಿ ಕೂಡುವುದಿಲ್ಲ). ಹೀಗಾಗಿ ಸದಾ ಜೀವನೊಂದಿಗೆ ಭಗವಂತ ಇದ್ದರೂ ಕೂಡಾ ಅದರ ಪರಿಣಾಮ ಅವನ ಮೇಲಾಗುವುದಿಲ್ಲ.
ತನಗೆ ಏನೂ ಉಪಯೋಗವಿಲ್ಲದಿದ್ದರೂ ಕೂಡಾ ಭಗವಂತ ಎಲ್ಲವನ್ನೂ ಏಕಾಗಿ ನಿಷ್ಫಲವಾದುದ್ದನ್ನು ಮಾಡುತ್ತಾನೆ ಎನ್ನುವುದು ತಿಳಿಯಬೇಕಾದರೆ ನಾವು ಫಲದ ಎರಡು ವಿಧವನ್ನು ತಿಳಿಯಬೇಕಾಗುತ್ತದೆ. ೧. ಸ್ವಪ್ರಯೋಜಕ ೨. ಪರಪ್ರಯೋಜಕ. ಸ್ವಪ್ರಯೋಜಕ ಅಥವಾ ಸ್ವಾರ್ಥಕ್ಕಾಗಿ ಮಾಡುವುದನ್ನು ಯಾರೂ ಗೌರವಿಸುವುದಿಲ್ಲ. ಆದರೆ ಭಗವಂತ ಮಾಡುವುದು ತನಗೊಸ್ಕರವಲ್ಲ ಆದರೆ ನಮಗೋಸ್ಕರ. ಇನ್ನು ಸಂಸಾರವನ್ನು ಬೇಡದೇ ಇರುವ ನಮಗೆ ಭಗವಂತ ಸಂಸಾರವನ್ನು ಏಕೆ ಕೊಟ್ಟ ಎನ್ನುವ ಪ್ರಶ್ನೆ. ಹೌದು, ಯಾವುದೇ ಎಚ್ಚರವಿಲ್ಲದೇ ನಿದ್ರೆಯಲ್ಲಿದ್ದ ನಮಗೆ ಎಚ್ಚರ ಕೊಟ್ಟು, ಅರಿವನ್ನು ಕೊಟ್ಟು, ಬೆಳೆಯಲು ಅವಕಾಶ ಮಾಡಿ ಕೊಟ್ಟವ ಆ ಭಗವಂತ. ನಮಗಾಗಿ, ನಮ್ಮ ಬೆಳವಣಿಗೆಗಾಗಿ ಕಾರುಣ್ಯದಿಂದ ಇದೆಲ್ಲವನ್ನೂ ಅವನು ಮಾಡುತ್ತಾನೆ. ಇದೇ ಅವನ ಮಹಿಮೆ. ಈ ಎಲ್ಲಾ ಹಿನ್ನೆಲೆಯಲ್ಲಿ ನೋಡಿದಾಗ ನಮ್ಮ ಅನೇಕ ಯುಕ್ತಿಗಳು(logics) ಬಾಲಿಶ ಎನ್ನುವುದು ನಮಗೆ ತಿಳಿಯುತ್ತದೆ. ನಾವು ಎತ್ತರಕ್ಕೆರಿದಂತೆ ನಮ್ಮ ಯುಕ್ತಿ ಬದಲಾಗುತ್ತದೆ. ನಮ್ಮ ಅನುಭವ ಬೆಳೆದಂತೆ ನಮ್ಮ ಯುಕ್ತಿ ಬೆಳೆಯುತ್ತದೆ ಮತ್ತು ಹಿಂದಿನ ಬಾಲಿಷ ಯುಕ್ತಿ ಬಿದ್ದುಹೋಗುತ್ತದೆ.
ಈ ಅಧ್ಯಾಯದಲ್ಲಿ ಹೇಳಿದ ಮಾತುಗಳಿಗೆ ಆಚಾರ್ಯರು ಭಾಲ್ಲವೇಯಶ್ರುತಿ ಮತ್ತು ಬ್ರಹ್ಮಾಂಡಪುರಾಣದ ವಚನದ ಪ್ರಮಾಣ ನೀಡಿ ವಿವರಿಸಿರುವುದನ್ನು ನಾವಿಲ್ಲಿ ಕಾಣಬಹುದು.
“ಕಥಂ ದೇಹೇ ಪರೋ ದೇವೋ ನ ಲಿಪ್ಯೇತೇಹ ಬಂಧನೈಃ । ಕಥಂ ನ ದುಃಖೀ ಸ ಭವೇದ್ ದುಃಖೀ ಚೇದೀಶ್ವರಃ ಕುತ । ಮಹಿಮಾ ಪರಮಸ್ಯೆಷ ಯದ್ ದೇಹಸ್ಥೋ ನ ಬದ್ಧ್ಯತೇ । ಯದದುಃಖೀ ಸ ಈಶಾನೋ ಮಾಯೇತಿ ಮಹಿಮೋಚ್ಯತೇ । ಪ್ರಧಾನಂ ಮಯ ಇತ್ಯಾಹುಃ ಪ್ರಾಧಾನ್ಯಾನ್ಮಾಯತಾ ಭವೇತ್ । ಅತೋ ಮಾಯಾಮಯಂ ಪ್ರಾಹುರ್ಮಹಾಮಾಯಮನಾಮಯಮ್” ಇತಿ ಭಾಲ್ಲವೇಯಶ್ರುತಿಃ ॥* ॥
ಅಲುಪ್ತಬೋಧರೂಪತ್ವಾನ್ನಾಸೌ ಪ್ರಾಕೃತದೇಹವಾನ್ । ನ ಚ ಸೃಷ್ಟಾದಿಕಂ ಭ್ರಾನ್ತಿರ್ಬ್ರಾನ್ತಿವಾದಾ ಹಿ ದಾನವಾಃ ।
ಅತೋ ಭ್ರಾನ್ತ್ಯಾ ಹಿ ಸಮ್ಬನ್ಧೋ ನಾಸ್ಯ ಕ್ವಚನ ಯುಜ್ಯತೇ । ಭ್ರಾನ್ತ್ಯಾ ಜೀವಸ್ಯ ಸಂಸಾರ ಈಶಜ್ಞಾನಾದ್ ವಿಲೀಯತೇ । ಭ್ರಾನ್ತಿರ್ಹಿ ದೇಹಾಭಿಮತಿರತೋ ಜ್ಞಾನಾದ್ ವಿನಶ್ಯತಿ ॥ ಇತಿ ಬ್ರಹ್ಮಾಂಡೇ ॥
ಯದೇನ್ದ್ರಿಯೋಪರಾಮೋSರ್ಥಾ ದೃಷ್ಟಾತ್ಮನಿ ಪರೇ ಹರೌ ।
ವಿಲೀಯನ್ತೇ ತದಾ ಕ್ಲೇಶಾಃ ಸಂಸುಪ್ತಸ್ಯೇವ ಕೃತ್ಸ್ನಶಃ ॥೧೩॥
ಇಂದ್ರಿಯೋಪರಾಮಾಖ್ಯಃ ಪುರುಷಾರ್ಥೋ ಮುಕ್ತಿಃ ॥*॥
ನಾವು ದುಃಖದಿಂದ ಪಾರಾಗುವ ಏಕಮಾತ್ರ ಮಾರ್ಗವೆಂದರೆ-ನಮ್ಮ ಇಂದ್ರಿಯಗಳನ್ನು ಭಗವಂತನಲ್ಲಿ ನೆಲೆಸಿಬಿಡುವುದು. ಎಲ್ಲವೂ ಭಗವಂತನ ಸೃಷ್ಟಿ, ಎಲ್ಲವೂ ಭಗವಂತನ ಪ್ರತಿಬಿಂಬ, ಎಲ್ಲರೂ ಭಗವಂತನ ಪ್ರತಿಮೆಗಳು, ಅವರೊಳಗೆ ಭಗವಂತನಿದ್ದಾನೆ, ಹೀಗೆ ಯೋಚಿಸಿದಾಗ ಅಲ್ಲಿ ‘ನನ್ನ’ ಎನ್ನುವ ಅಭಿಮಾನ ಹೊರಟುಹೋಗಿ ಮನಸ್ಸು ಭಗವಂತನಲ್ಲೇ ನೆಲೆ ನಿಲ್ಲುತ್ತದೆ. ಇಂದ್ರಿಯಗಳನ್ನು ಮೇಲ್ಮುಖಮಾಡಿ, ಎತ್ತರದ ಸತ್ಯವನ್ನು ಕಾಣುವುದೇ ಪುರುಷಾರ್ಥ, ಅದೇ ಮೋಕ್ಷ. ಸರ್ವೋತ್ತಮನಾದ ಭಗವಂತನ ಸ್ವರೂಪ ನಮ್ಮ ಅನುಭವಕ್ಕೆ ಬಂದಾಗ ದುಃಖ ನಾಶವಾಗುತ್ತದೆ. ಇದು ಹೇಗೆ ಎನ್ನುವುದಕ್ಕೆ ಒಂದು ದೃಷ್ಟಾಂತ ಗಾಢನಿದ್ದೆ. ಅಲ್ಲಿ ಜೀವ ದುಃಖದ ಲವಲೇಶವೂ ಇಲ್ಲದೇ ಭಗವಂತನ ಜೊತೆಗಿರುತ್ತದೆ. ಇದೇ ಸ್ಥಿತಿಯನ್ನು ಎಚ್ಚರದಲ್ಲಿ ಸ್ಥಾಪಿಸುವುದೇ ಅಧ್ಯಾತ್ಮ.
ಸಞ್ಛಿನ್ನಃ ಸಂಶಯೋ ಮಹ್ಯಂ ತವ ಸೂಕ್ತಾಸಿನಾ ವಿಭೋ ।
ಉಭಯತ್ರಾಪಿ ಭಗವನ್ ಮನೋ ಮೇ ಸಮ್ಪ್ರಧಾವತಿ ॥೧೫॥
ಸಾಧು ತದ್ ವ್ಯಾಹೃತಂ ವಿದ್ವನ್ನಾತ್ಮಮಾಯಾಯನಂ ಹರೇಃ ।
ಆಭಾತ್ಯಪಾರ್ಥಂ ನಿರ್ಮೂಲಂ ವಿಶ್ವಮೂಲಂ ನ ಯದ್ ಬಹಿಃ ॥೧೬॥
ಸ್ವರೂಪಸಾಮರ್ಥ್ಯಾಶ್ರಯಂ ಯದ್ ವ್ಯಾಹೃತಮ್ । ಅಪಾರ್ಥಂ ನಿರ್ಮೂಲಂ ಚ ದೇಹಸಮ್ಬನ್ಧಿತ್ವಾದ್ಯಾಭಾತಿ । ವಿಶ್ವಮೂಲಂ ಬ್ರಹ್ಮ ಚ ಯನ್ಮಮ ಜ್ಞಾನಾದ್ ಬಹಿರ್ನ ಭವತಿ । ತಸ್ಮಾದುಭಯತ್ರ ಧಾವತಿ ॥*॥
“ನನಗೋಸ್ಕರ ಸಂಶಯ ಪರಿಹರಿಸಿದಿರಿ” ಎನ್ನುತ್ತಾನೆ ವಿದುರ. ಇಲ್ಲಿ “ ಮಹ್ಯಂ” ಎನ್ನುವುದು ವಿಶೇಷ ಪ್ರಯೋಗ. ವಿದುರ ತನಗಾಗಿ ಪ್ರಶ್ನೆ ಮಾಡಿರುವುದಲ್ಲ. ಮುಂದಿನ ಜನಾಂಗಕ್ಕೆ ಜ್ಞಾನವನ್ನು ತಲುಪಿಸುವ ಸಲುವಾಗಿ ಈ ಪ್ರಶ್ನೆ ಮಾಡಿರುವುದು. ಈ ಹಿಂದೆ ವಿಶ್ಲೇಷಿಸಿದಂತೆ ವಿದುರ ಮೂಲರೂಪದಲ್ಲಿ ಭಗವಂತನ ಕುರಿತು ನಚಿಕೇತನಿಗೆ ಉಪದೇಶ ಮಾಡಿರುವ ಅಪರೋಕ್ಷ ಜ್ಞಾನಿಯಾದ ಯಮಧರ್ಮ. ಇಲ್ಲಿ ವಿದುರನಾಗಿ ಅವತರಿಸಿರುವುದು ವೇದವ್ಯಾಸರ ಮಗನಾಗಿ. ವೇದವ್ಯಾಸರಿಂದ ಅಧ್ಯಯನವನ್ನೂ ಮಾಡಿರುವ ಅವನಿಗೆ ಈ ಎಲ್ಲಾ ಜ್ಞಾನ ಇದ್ದೇ ಇದೆ. ಆದರೂ ಕೂಡಾ ನಮಗಾಗಿ, ಮುಂದಿನ ಜನಾಂಗಕ್ಕಾಗಿ ಆತ ಇಲ್ಲಿ ಪ್ರಶ್ನೆ ಮಾಡಿದ್ದಾನೆ. “ಇಡೀ ಮನುಕುಲಕ್ಕೆ ಬರಬಹುದಾದ ಸಂಶಯವನ್ನು ನೀವು ನಿಮ್ಮ ಅನುಭವ ಮತ್ತು ತರ್ಕದಿಂದ ಕೂಡಿರುವ ಮಾತು ಎನ್ನುವ ಖಡ್ಗದಿಂದ ಕತ್ತರಿಸಿದಿರಿ” ಎಂದಿದ್ದಾನೆ ವಿದುರ.
ಯಾವುದೇ ಸಂಗತಿ ಶಾಸ್ತ್ರೀಯವಾಗಿದ್ದರೂ ಕೂಡಾ, ಅದರ ಅನುಭವ ಇಲ್ಲದೇ ಹೇಳಿದರೆ ಅದು ಕೇಳುಗನ ಮೇಲೆ ಪರಿಣಾಮ ಬೀರುವುದಿಲ್ಲ. ಅನುಭವದಿಂದ ಸತ್ಯವನ್ನು ಕಂಡು ಹೇಳಿದಾಗ ಅದು ಜ್ಞಾನವನ್ನು ನೀಡುತ್ತದೆ. ಅನುಭವಸಿದ್ಧವಾದ , ಶ್ರುತಿ ಸಿದ್ಧವಾದ ಮಾತು ತರ್ಕಬದ್ದವಾಗಿ ಇದ್ದೇ ಇರುತ್ತದೆ. ಹೀಗೆ “ಸಮಸ್ತವಿಷಯವನ್ನು ಗ್ರಹಿಸುವ ಬುದ್ಧಿಯುಳ್ಳ , ಸಾಧನೆಯಿಂದ ಸತ್ಯವನ್ನು ಅನುಭವಿಸಿರುವ ನಿಮ್ಮ ಮಾತು ಸತ್ಯ “ ಎನ್ನುತ್ತಾನೆ ವಿದುರ.
ಮುಂದುವರಿದು ವಿದುರ ಮನುಕುಲದ ಸರ್ವೇಸಾಮಾನ್ಯವಾದ ಗೊಂದಲದ ಕುರಿತು ಮಾತನಾಡುತ್ತಾ ಹೇಳುತ್ತಾನೆ: “ನೀವು ಹೇಳಿದ ವಿಷಯ ಸಂಪೂರ್ಣ ಮನವರಿಕೆಯಾಯಿತು. ಸರ್ವೋತ್ಕೃಷ್ಟನಾದ ಭಗವಂತ ನಮ್ಮನ್ನು ಎಂದೂ ಬಿಟ್ಟುಹಾಕುವುದಿಲ್ಲ, ರಕ್ಷಿಸಿಯೇ ರಕ್ಷಿಸುತ್ತಾನೆ. ಆದರೆ ಈ ವಿಷಯದ ಜ್ಞಾನವಿದ್ದೂ ಕೂಡಾ, ತಕ್ಷಣ ಮನಸ್ಸು ಪ್ರಾಪಂಚಿಕ ವಿಷಯದತ್ತ ಹರಿದುಬಿಡುತ್ತದೆ. ಈ ದ್ವಂದ್ವದಿಂದ ಈಚೆ ಬರಲಾಗುತ್ತಿಲ್ಲ.” ಎಂದು.
ಇನ್ನೊಂದು ರೀತಿಯಲ್ಲಿ ವಿದುರ ಹೇಳುತ್ತಾನೆ: “ನೀವು ಎಲ್ಲವನ್ನೂ ಸಮರ್ಪಕವಾಗಿ ವಿವರಿಸಿದಿರಿ.ಎಲ್ಲವೂ ಭಗವಂತನ ಸ್ವರೂಪಭೂತ ಮಹಿಮೆ. ಅದು ತಾರ್ಕಿಕ ಪರಿಕಲ್ಪನೆಗೆ ಮೀರಿರುವ ವಿಷಯ. ಇಲ್ಲಿ ‘ನಾನು, ನನ್ನದು’, ಇತ್ಯಾದಿ ಕೇವಲ ಅಪಾರ್ಥ ಎನ್ನುವುದೂ ನನಗೆ ತಿಳಿದಿದೆ. ಆದರೂ ಕೂಡಾ ಇದನ್ನು ವಿಶ್ವಕ್ಕ ಕಾರಣನಾಗಿರುವ ಭಗವಂತನ ಅನುಸಂಧಾನದ ಒಳಗೇ ಇದ್ದು ನಾವು ವ್ಯವಹಾರದಲ್ಲಿ ಮತ್ತೆ ‘ನಾನು-ನನ್ನದು-ನನ್ನಿಂದ’, ಇತ್ಯಾದಿಯನ್ನು ಬಳಸುತ್ತೇವೆ. ಈ ದ್ವಂದ್ವ ಬದುಕಿನುದ್ದಕ್ಕೂ ಇದ್ದು ಅದರಿಂದ ಹೊರ ಬರಲು ಸಾಧ್ಯವಾಗುವುದಿಲ್ಲ”.
[ವಿದುರ ಹೇಳುತ್ತಿರುವ ದ್ವಂದ್ವ ಅಪರೋಕ್ಷಜ್ಞಾನಿಗಳನ್ನೂ ಬಿಡುವುದಿಲ್ಲ. ಇದಕ್ಕೆ ಉತ್ತಮ ಉದಾಹರಣೆ ಗರ್ಗಾಚಾರ್ಯರು. ಶ್ರೀಕೃಷ್ಣನಿಗೆ ನಾಮಕರಣ ಮಾಡಿ ಭಗವಂತನ ಮಹಿಮೆಯನ್ನು ಇತರರಿಗೆ ವಿವರಿಸಿದ ಅವರು ಮುಂದೆ ಯಾವುದೋ ಒಂದು ಅವಮಾನ ನಿಮಿತ್ತ ಶ್ರೀಕೃಷ್ಣನನ್ನು ಕೊಲ್ಲುವ ಮಗ ಹುಟ್ಟಬೇಕು ಎಂದು ತಪಸ್ಸು ಮಾಡುತ್ತಾರೆ. ಅದೇ ರೀತಿ ಇಂದ್ರ. ಭಗವಂತ ಭೂಮಿಯಲ್ಲಿ ಅವತರಿಸಬೇಕು ಎಂದು ಪ್ರಾರ್ಥನೆ ಮಾಡಿದ್ದ ಇಂದ್ರ, ಗೋವರ್ಧನಗಿರಿ ಪ್ರಕರಣದಲ್ಲಿ ಮಳೆ ಸುರಿಸಿ ಕೃಷ್ಣನ ವಿರುದ್ಧ ನಿಲ್ಲುತ್ತಾನೆ].
ಯಶ್ಚ ಮೂಢತಮೋ ಲೋಕೇ ಯಶ್ಚ ಬುದ್ಧೇಃ ಪರಂ ಗತಃ ।
ತಾವುಭೌ ಸುಖಮೇಧೇತೇ ಕ್ಲಿಶ್ಯತ್ಯನ್ತರಿತೋ ಜನಃ ॥೧೭॥
“ಏನೂ ಗೊತ್ತಿಲ್ಲದವನೂ ಆನಂದವಾಗಿರುತ್ತಾನೆ, ಅರಿವಿನ ತುತ್ತತುದಿಯಲ್ಲಿರುವವನೂ ತನ್ನ ಸಮಸ್ಯೆಗಳಿಗೆ ತಾನೇ ಉತ್ತರ ಕಂಡುಕೊಂಡು ಅದರಿಂದ ಆನಂದವಾಗಿರುತ್ತಾನೆ. ಇವರಿಬ್ಬರ ಮಧ್ಯದಲ್ಲಿರುವ ನಮಗೇ ಗೊಂದಲ. ಇದು ನಮ್ಮ ಪಾಡು” ಎನ್ನುತ್ತಾನೆ ವಿದುರ. (ಭರ್ತೃಹರಿ ಇದೇ ಮಾತನ್ನು ಹೀಗೆ ಹೇಳಿದ್ದಾನೆ- ‘ಅಜ್ಞಃ ಸುಖಮಾರಾಧ್ಯಃ ಸುಖತರಮಾರಧ್ಯತೇ ವಿಶೇಷಜ್ಞಃ । ಜ್ಞಾನಲವದುರ್ವಿದಗ್ಧಂ ಬ್ರಹ್ಮಾSಪಿ ನರಂ ನ ರಂಜಯತಿ’).
ಅರ್ಥಾಭಾವಂ ವಿನಿಶ್ಚಿತ್ಯ ಪ್ರತೀತಸ್ಯಾಪ್ಯನಾತ್ಮನಃ ।
ತಾಂ ಚಾಪಿ ಯುಷ್ಮಚ್ಚರಣಸೇವಯಾSಹಂ ಪರಾಣುದೇ ॥೧೮॥
ತಸ್ಮಾದನ್ತರಿತೋSಸ್ಮಿ | ತಥಾSಪಿ ತಾಂ ಪ್ರತೀತಿಂ ಪರಾಣುದೇ |
ದುರಾಪಾ ಹ್ಯಲ್ಪತಪಸಾಂ ಸೇವಾ ವೈಕುಣ್ಠವರ್ತ್ಮಸು ।
ಯತ್ರೋಪಗೀಯತೇ ನಿತ್ಯಂ ದೇವದೇವೋ ಜನಾರ್ದನಃ ॥೨೦ ॥
ನಮ್ಮ ಬುದ್ಧಿ ಒಂದು ತರ ಕೆಲಸ ಮಾಡಿದರೆ ನಮ್ಮ ಪ್ರವೃತ್ತಿ ಇನ್ನೊಂದು ತೆರನಾಗಿರುತ್ತದೆ. ಅನಾತ್ಮ ಎಂದು ತಿಳಿದಿದ್ದರೂ ಕೂಡಾ ಅದನ್ನೇ ಆತ್ಮ ಎಂದು ನಾವು ಭ್ರಮಿಸುತ್ತೇವೆ. ಅರ್ಥಶೂನ್ಯ ಎಂದು ತಿಳಿದಿದ್ದರೂ ಕೂಡಾ ‘ನಾನು-ನನ್ನದು-ನನ್ನಿಂದ’ ಇತ್ಯಾದಿ ‘ಪ್ರತೀತಿ’ ಸದಾ ನಡೆಯುತ್ತಿರುತ್ತದೆ. ಈ ಅನಾತ್ಮದ ಪ್ರತೀತಿಯಿಂದ ಹೊರಬರಲು ಇರುವ ಮಾರ್ಗ ಜ್ಞಾನಿಗಳ ಪಾದಸೇವೆ. ನಿಮ್ಮ ಅನುಗ್ರಹದಿಂದ ನನ್ನ ಸಂಶಯ ಪರಿಹಾರವಾಗುತ್ತದೆ ಎನ್ನುವ ಧೈರ್ಯ ನನಗಿದೆ. ಸದಾ ದೇವದೇವನಾದ ಭಗವಂತನ ಗುಣಗಾನ ಮಾಡುವ, ಪರಮಾತ್ಮನನ್ನು ಸೇರುವ ದಾರಿಯನ್ನು ತೋರುವ ನಿಮ್ಮ ಸೇವೆ ಅಲ್ಪಪುಣ್ಯವಂತರಿಗೆ ದುರ್ಲಭ.
“ಆತ್ಮನಸ್ತು ಗುಣಾಭಾವಂ ವದತೋ ನ ತ್ವಸತ್ಯತಾ । ಅಪೃಷ್ಟಸ್ಯ ದಮಾರ್ಥ ಚ ಗುಣಾಯೈವ ಭವಿಷ್ಯತಿ” ಇತಿ ವ್ಯಾಸಸ್ಮೃತೇರ್ವಿದ್ಯಮಾನಮಪ್ಯನುಭವಮನ್ಯಥಾ ವದತಿ ವಿದುರಃ । “ದ್ರೋಣದೌಣಿಕೃಪಾಃ ಪಾರ್ಥಾ ಭೀಷ್ಮೋ ವಿದುರಸಞ್ಜಯೌ । ಯೇ ಚಾನ್ಯೇ ತತ್ರ ದೇವಾಂಶಾಃ ಸಮ್ಯಕ್ ತತ್ವಾಪರೋಕ್ಷಿಣಃ” ಇತಿ ಸ್ಕಾಂದೇ ॥*॥
ಈ ಹಿಂದೆ ವಿವರಿಸಿದಂತೆ ವಿದುರ ಮೂಲರೂಪದಲ್ಲಿ ಅಪರೋಕ್ಷ ಜ್ನಾನಿಯಾಗಿರುವ ಯಮಧರ್ಮ. ಹಾಗಾಗಿ ತಾರತಮ್ಯದಲ್ಲಿ ಮೈತ್ರೇಯರಿಗಿಂತ ಬಹಳ ಮೇಲಿರುವವನು. ಇಂತಹ ವಿದುರ ತನ್ನಲ್ಲಿ ಜ್ಞಾನಾದಿ ಗುಣಗಳಿಲ್ಲ ಎಂದು ಹೇಳಿದಾಗ ಅದು ದೋಷವಾಗುವುದಿಲ್ಲವೇ ಎನ್ನುವ ಪ್ರಶ್ನೆಗೆ ಆಚಾರ್ಯರು ಸ್ಕಂಧಪುರಾಣದ ಪ್ರಮಾಣದೊಂದಿಗೆ ಉತ್ತರಿಸಿರುವುದನ್ನು ನಾವಿಲ್ಲಿ ಕಾಣುತ್ತೇವೆ. ಜಿಜ್ಞಾಸೆಯಿಂದ ಕೇಳುವವರಿಗೆ ತತ್ತ್ವೋಪದೇಶ ಮಾಡಬೇಕು ಎನ್ನುವುದು ವಿಧಿ. ವಿದುರ ಇಲ್ಲಿ ಪ್ರಶ್ನೆ ಕೇಳುತ್ತಿರುವುದು ಲೋಕಕ್ಕೆ ಉಪಕಾರವಾಗಲೀ ಎಂದೇ ಹೊರತು ಅಜ್ಞಾನದಿಂದಲ್ಲ. ಹೀಗಾಗಿ ಅವನಿಗೆ ಯಾವ ದೋಷವೂ ಇಲ್ಲ. ದ್ರೋಣ, ಅಶ್ವತ್ಥಾಮ, ಕೃಪ, ಪಾಂಡವರು, ಭೀಷ್ಮ, ವಿದುರ, ಸಂಜಯ, ಇವರೆಲ್ಲರೂ ಕೂಡಾ ಪರಮಾತ್ಮನನ್ನು ಅಪರೋಕ್ಷದಲ್ಲಿ ಕಂಡ ದೇವಾಂಶಸಂಭೂತರೇ ಆಗಿದ್ದಾರೆ.
ಸೃಷ್ಟ್ವಾSಗ್ರೇ ಮಹದಾದೀನಿ ಸವಿಕಾರಾಣ್ಯನುಕ್ರಮಾತ್ ।
ತೇಭ್ಯೋ ವಿರಾಜಮುದ್ಧೃತ್ಯ ತಮನು ಪ್ರಾವಿಶದ್ ವಿಭುಃ ॥೨೧॥
ಯಮಾಹುರಾದ್ಯಂ ಪುರುಷಂ ಸಹಸ್ರಾಙ್ಘ್ರ್ಯೂರುಬಾಹುಕಮ್ ।
ಯತ್ರ ವಿಶ್ವ ಇಮೇ ಲೋಕಾಃ ಸವಿಕಾಸಂ ಸಮಾಸತೇ ।
ಯಸ್ಮಿನ್ ದಶವಿಧಃ ಪ್ರಾಣಃ ಸೇಂದ್ರಿಯಾರ್ಥೇನ್ದ್ರಿಯಸ್ತ್ರಿವೃತ್ ॥ ೨೨ ॥
ಇಲ್ಲಿ ವಿದುರ ಸೃಷ್ಟಿಯ ಕುರಿತು ಮೈತ್ರೇಯರು ಈ ಹಿಂದೆ ಹೇಳಿದ ವಿವರಣೆಯ ಸಾರಾಂಶವನ್ನು ಹೇಳುತ್ತಿರುವುದನ್ನು ಕಾಣುತ್ತೇವೆ. ಮೊತ್ತ ಮೊದಲು ಬ್ರಹ್ಮಾಂಡದಲ್ಲಿ ಮಹತತ್ತ್ವದ(ಪಿಂಡಾಂಡದಲ್ಲಿ ಚಿತ್ತದ) ಸೃಷ್ಟಿಯಾಯಿತು. ಇದರಿಂದ ಮಹಾಪ್ರಳಯದಲ್ಲಿ ಎಚ್ಚರತಪ್ಪಿ ಮಲಗಿದ್ದ ಜೀವಕ್ಕೆ ಎಚ್ಚರವಾಯಿತು. ನಂತರ ಅಹಂಕಾರತತ್ತ್ವದ ಸೃಷ್ಟಿಯಾಯಿತು. ನಂತರ ಪಂಚಭೂತಗಳು, ಪಂಚೇಂದ್ರಿಯಗಳು, ಇಂದ್ರಿಯಾಭಿಮಾನಿ ದೇವತೆಗಳು, ಹೀಗೆ ಒಂದರ ನಂತರ ಒಂದು ಕ್ರಮಬದ್ಧವಾಗಿ ಸೃಷ್ಟಿಯಾಯಿತು. ನಂತರ ಭಗವಂತ ಬಿಡಿಬಿಡಿಯಾಗಿದ್ದ ಈ ಎಲ್ಲವನ್ನೂ ಒಟ್ಟುಗೂಡಿಸಿ ಪಂಚಭೂತಗಳ ಸಮಷ್ಟಿಯಿಂದ ಇಡೀ ಬ್ರಹ್ಮಾಂಡದ ಸೃಷ್ಟಿ ಮಾಡಿ, ‘ಪುರುಷ’ ರೂಪದಲ್ಲಿ ಬ್ರಹ್ಮಾಂಡವನ್ನು ಪ್ರವೇಶಿಸಿದ. ಬ್ರಹ್ಮಾಂಡದ ಸೃಷ್ಟಿಗೆ ಮೊದಲು ಅನಂತ ಆಕಾಶದಲ್ಲಿ ವ್ಯಾಪಿಸಿರುವ, ಬ್ರಹ್ಮಾಂಡ ಸೃಷ್ಟಿಯ ನಂತರ ಬ್ರಹ್ಮಾಂಡದೊಳಗೆ ವ್ಯಾಪಿಸಿರುವ, ಪ್ರತಿಯೊಂದು ಪಿಂಡಾಂಡದೊಳಗೆ ತುಂಬಿರುವ, ಹೀಗೆ ಸೃಷ್ಟಿಗೋಸ್ಕರ ಚತುರ್ಮುಖನ ಒಳಗೆ ಪ್ರವೇಶಿಸಿರುವ ರೂಪವೇ ಭಗವಂತನ ಪುರುಷರೂಪ. ಇದು ಸಹಸ್ರಾರು ಕಾಲು, ಕೈ, ತೊಡೆ, ಸಹಸ್ರಾರು ತಲೆಗಳಿರುವ ಭಗವಂತನ ವಿಶೇಷರೂಪ.
ವಿರಾಜಂ ಬ್ರಹ್ಮಾಣಮ್-
“ಬ್ರಹ್ಮಾಣಂ ಪ್ರಾವಿಶದ್ ವಿಷ್ಣುಃ ಸಹಸ್ರಾಕ್ಷಃ ಸಹಸ್ರಪಾತ್ “ ಇತಿ ಬ್ರಾಹ್ಮೇ ।
“ಅನುಪ್ರವಿಶ್ಯ ಬ್ರಹ್ಮಾಣಂ ಪ್ರಾಣಂ ದಶವಿಧಂ ತಥಾ ।
ಇಂದ್ರಿಯಾಣೀಂದ್ರಿಯಾರ್ಥಾಂಶ್ಚ ವರ್ಣಾಂವಾಸೃಜದ್ಧರಿಃ” ಇತಿ ಗಾರುಡೇ ॥*॥
ಇಲ್ಲಿ ‘ವಿರಾಜಂ’ ಎಂದರೆ ವಿರಾಡ್ ಎನ್ನುವ ಹೆಸರಿನ ಬ್ರಹ್ಮಶರೀರವನ್ನು ಭಗವಂತ ಪ್ರವೇಶಿಸಿದ ಎಂದರ್ಥ. ಇದನ್ನು ಬ್ರಹ್ಮಾಂಡ ಪುರಾಣದಲ್ಲಿ ಸ್ಪಷ್ಟವಾಗಿ ಹೇಳಿರುವುದನ್ನು ಕಾಣುತ್ತೇವೆ. ಗರುಡ ಪುರಾಣದಲ್ಲಿಯೂ ಈ ಮಾತು ಬರುತ್ತದೆ- ‘ವಿರಾಡ್ ಬ್ರಹ್ಮಶರೀರದಲ್ಲಿ ಪ್ರವೇಶಿಸಿದ ಶ್ರೀಹರಿಯು, ಅದರಲ್ಲಿ ದಶವಿಧ ಪ್ರಾಣರನ್ನೂ, ಇಂದ್ರಿಯಗಳನ್ನೂ, ಇಂದ್ರಿಯ ವಿಷಯಗಳನ್ನೂ, ಬ್ರಾಹ್ಮಣಾದಿ ನಾಲ್ಕು ವರ್ಣಗಳನ್ನೂ ಸೃಷ್ಟಿಸಿದನು’.
ವರ್ಣಾಶ್ರಮವಿಭಾಗಾಂಶ್ಚ ರೂಪಶೀಲಸ್ವಭಾವತಃ ।
ಋಷೀಣಾಂ ಜನ್ಮ ಕರ್ಮಾಣಿ ವೇದಸ್ಯ ಚ ವಿಕರ್ಷಣಮ್ ॥೨೯॥
ಇಲ್ಲಿ ವಿದುರ ‘ನನಗೆ ಇನ್ನೂ ಕೇಳಬೇಕು’ ಎಂದು ಹೇಳುತ್ತಾ - ವರ್ಣಾಶ್ರಮ ವಿಭಾಗಗಳನ್ನು, ಜ್ಞಾನ ಪರಂಪರೆಯನ್ನು ಉಳಿಸಿ ನಮಗೆ ಕೊಟ್ಟ ಋಷಿಗಳ ಜನ್ಮಕರ್ಮದ ಮತ್ತು ವೇದ-ವಿಭಾಗದ [ವಿಕರ್ಷಣಂ ವಿಭಾಗಃ ॥*॥ ] ವಿವರಗಳನ್ನೂ ಹೇಳಿರೆಂದು ಮೈತ್ರೇಯರನ್ನು ಕೇಳಿಕೊಳ್ಳುತ್ತಾನೆ.
ಜಡಪ್ರಕೃತಿಯಿಂದ ಅಜ್ಞಾನದ ಪರದೆ ಕವಿದಿದೆ. ಅದರಿಂದಾಗಿ ಕಣ್ಣಿದ್ದೂ ನಾವು ಕುರುಡರಾಗಿದ್ದೇವೆ. ಹೀಗಾಗಿ ತಮ್ಮ ಸ್ನೇಹವನ್ನು ನೆನಪಿಟ್ಟು, ಸತ್ಯದ ಬಿತ್ತರವನ್ನು ಮಾಡಬೇಕೆಂದು ವಿದುರ ಪ್ರಾರ್ಥಿಸುತ್ತಾನೆ.
॥ ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ತೃತೀಯಸ್ಕಂಧೇ ಅಷ್ಟಮೋSಧ್ಯಾಯಃ ॥
ಭಾಗವತ ಮಹಾಪುರಾಣದ ಮೂರನೇ ಸ್ಕಂಧದ ಎಂಟನೇ ಅಧ್ಯಾಯ ಮುಗಿಯಿತು
*********