Monday, January 27, 2025

Shrimad BhAgavata in Kannada -Skandha-03-Ch-07_02

 ನಿರ್ಭಿಣ್ಣಾನ್ಯಸ್ಯ  ಚರ್ಮಾಣಿ ಲೋಕಪಾಲೋಽನಿಲೋಽವಿಶತ್ ।

 ಪ್ರಾಣೇನಾಂಶೇನ ಸಂಸ್ಪರ್ಶಂ ಯೇನಾಸೌ ಪ್ರತಿಪದ್ಯತೇ ॥೧೬॥ 


ಬ್ರಹ್ಮನ ವಿರಾಟ್ ಶರೀರದಲ್ಲಿ ಚರ್ಮ ಆವರಿಸಿತು ಮತ್ತು ಅದರಲ್ಲಿ ಲೋಕಪಾಲಕ ಎನಿಸಿರುವ ಮರೀಚಿ ಎನ್ನುವ ವಾಯು ಬಂದು ಕುಳಿತ. ಅವನು ಚರ್ಮಕ್ಕೆ ಚೈತನ್ಯವನ್ನು ಕೊಟ್ಟು, ಸ್ಪರ್ಶಾನುಭಾವವನ್ನು ನೀಡಿದ. (ಇಲ್ಲಿ ಮರೀಚಿ ಎಂದಾಗ ಅವನೊಳಗೆ ಚತುರ್ಮುಖ ಮತ್ತು ಚತುರ್ಮುಖನೊಳಗೆ ಭಗವಂತ ಇದ್ದಾನೆ ಎನ್ನುವುದನ್ನು ನಾವು ತಿಳಿದಿರಬೇಕು.)

[ಈ ಹಿಂದೆ ಹತ್ತು ರೂಪದಲ್ಲಿ ಚತುರ್ಮುಖನ ದೇಹ ಪ್ರವೇಶಿಸಿದವನು ಪ್ರಧಾನ ವಾಯುವಾದರೆ. ಇಲ್ಲಿ ಹೇಳಿರುವ  ಸ್ಪರ್ಶೇನ್ದ್ರಿಯ ಅಭಿಮಾನಿ ಪ್ರಧಾನ ವಾಯುವಿನ ಪುತ್ರ.  ಈ ವಿಷಯವನ್ನು ಆಚಾರ್ಯರು ಭಾಗವತ ತಾತ್ಪರ್ಯದಲ್ಲಿ ತತ್ತ್ವನಿರ್ಣಯದ ಪ್ರಮಾಣ ಸಹಿತ ವಿವರಿಸಿದ್ದಾರೆ. “ಪ್ರಾಣಃ ಪ್ರಥಮಜೋ ಯಸ್ತು ಪ್ರಧಾನೋ ವಾಯುರೀರಿತಃ  | ತ್ವಗಾತ್ಮಾದ್ಯಾಸ್ತು ತತ್ಪುತ್ರಾ ದ್ವಿಧಾ ಭೂತಮುದಾಹೃತಮ್”.  

ಇಲ್ಲಿ ನಾವು ಇನ್ನೊಮ್ಮೆ ನೆನಪಿಸಿಕೊಳ್ಳಬೇಕಾದ ಮುಖ್ಯವಾದ ವಿಷಯವೇನೆಂದರೆ, ದೇವತೆಗಳಿಗೆ ಅನೇಕ ಹುಟ್ಟು. ಅವರು ಮೊದಲು ಭಗವಂತನಿಂದ ಹುಟ್ಟಿದರೆ, ನಂತರ ಚತುರ್ಮುಖನಿಂದ ಹುಟ್ಟುತ್ತಾರೆ. ಮತ್ತೆ ಮುಖ್ಯಪ್ರಾಣನಿಂದ, ಆನಂತರ ಶಿವನಿಂದ, ಈ ರೀತಿ ಅನೇಕ ಸ್ತರದಲ್ಲಿ ದೇವತೆಗಳು ಸೃಷ್ಟಿಯಾಗುತ್ತಾರೆ ]

ಹೀಗೆ ಮೂಗು, ನಾಲಿಗೆ, ಕಣ್ಣು, ತೊಗಲು, ಕಿವಿ, ವಾಕ್, ಪಾಣಿ, ಪಾದ, ಪಾಯು, ಉಪಸ್ಥಗಳ ಸೃಷ್ಟಿಯಾಯಿತು. ಜೊತೆಗೆ ಪಂಚಭೂತಗಳ ಮತ್ತು ಪಂಚತನ್ಮಾತ್ರೆಗಳ ಸೃಷ್ಟಿಯೂ ಆಯಿತು. ಇಂದ್ರಿಯಗಳ ವಿಷಯ ಗ್ರಹಣಮಾಡಲು ಒಳಗೆ ಮನಸ್ಸಿನ ಸೃಷ್ಟಿಯೂ ಆಯಿತು.  ಮನಸ್ಸು ಗ್ರಹಣ ಮಾಡಿದ ವಿಷಯವನ್ನು ತೀರ್ಮಾನಮಾಡುವ ಬುದ್ಧಿ,  ನೆನಪಿನಲ್ಲಿಟ್ಟುಕೊಳ್ಳುವ ಚಿತ್ತ ಮತ್ತು ಕರ್ತೃತ್ವದ ಅಭಿಮಾನವಾದ ಅಹಂಕಾರ. ಈ ಮೂರರ ಅಭಿವ್ಯಕ್ತಿ ಆಗಬೇಕಿದೆ. ಇವೆಲ್ಲವೂ ಆದ ಬಳಿಕವೇ ಶರೀರಕ್ಕೆ ಪೂರ್ಣತೆ ಬರುತ್ತದೆ. ಆಗ ಅದನ್ನು ಪುರುಷ ಶರೀರ ಎಂದು ಹೇಳುತ್ತಾರೆ. (ಮರ, ಪ್ರಾಣಿ-ಪಕ್ಷಿ ಇತ್ಯಾದಿಗಳಲ್ಲಿ ಈ ಎಲ್ಲಾ ಅಂಗಗಳು ಪೂರ್ಣಪ್ರಮಾಣದಲ್ಲಿ ವಿಕಾಸನ ಹೊಂದಿರುವುದಿಲ್ಲ. ಹಾಗಾಗಿ ಅವುಗಳ ಶರೀರವನ್ನು ಪುರುಷಶರೀರ ಎಂದು ಹೇಳುವುದಿಲ್ಲ. ಕೇವಲ ಮನುಷ್ಯಶರೀರವನ್ನು ಮಾತ್ರ ಪುರುಷಶರೀರ ಎನ್ನುತ್ತಾರೆ. ಅದಕ್ಕಾಗಿ ಭಗವಂತ ಪುರುಷರೂಪನಾಗಿಯೇ ಅದನ್ನು ಸೃಷ್ಟಿಮಾಡಿದ). 


ಆತ್ಮಾನಂ ಚಾಸ್ಯ ನಿರ್ಭಿಣ್ಣಂ ವಾಚಸ್ಪತಿರಥಾsವಿಶತ್ ।  

ಬುದ್ದ್ಯಾ ಸ್ವಾಂಶೇನ ಯೇನಾಸೌ ನಿಶ್ಚಯಂ ಪ್ರತಿಪದ್ಯತೇ ॥೨೪॥


ಅಹಮಸ್ಯ ವಿನಿರ್ಭಿಣ್ಣಮಭಿಮಾನೋSವಿಶತ್ ಪದಮ್  । 

ಕರ್ತ್ರಾಂsಶೇನ ಚ  ಯೇನಾಸೌ ಕರ್ತವ್ಯಂ ಪ್ರತಿಪದ್ಯತೇ ॥೨೫॥


ಸತ್ತ್ವಂ ಚಾಸ್ಯ ವಿನಿರ್ಭಿಣ್ಣಂ  ಮಹಾನ್ ಧಿಷ್ಣ್ಯಮುಪಾವಿಶತ್ । 

ಚಿತ್ತೇನಾಂಶೇನ ಯೇನಾಸೌ ವಿಜ್ಞಾನಂ ಪ್ರತಿಪದ್ಯತೇ ॥೨೬॥


“ಅಹಂ ಸತ್ತ್ವಮಿತಿ ದ್ವೇಧಾ ಬ್ರಹ್ಮನಾಡ್ಯಾ ಅವಾನ್ತರಮ್ । ಕರ್ತೃನಾಮಾ  ತ್ವಹಙ್ಕಾರಸ್ತ್ವಹನ್ನಾಡ್ಯಾಂ ವ್ಯವಸ್ಥಿತಃ । ಸತ್ತ್ವನಾಡ್ಯಾಂ ತಥಾ  ಚಿತ್ತಮಭಿಮಾನೋ ಹರಸ್ತಥಾ । ಅಹನ್ನಾಡ್ಯಾಂ ಸತ್ತ್ವನಾಡ್ಯಾಂ ಬ್ರಹ್ಮಾ ಚೈವ ವ್ಯವಸ್ಥಿತಃ । ಆತ್ಮನಾಡ್ಯಾಂ ತಥಾ ಬುದ್ದಿಸ್ತತ್ರಸ್ಥಶ್ಚ ಬೃಹಸ್ಪತಿಃ” ಇತಿ ಚ  ॥*॥ 


ನಮ್ಮ ದೇಹದ ಒಳಗೆ ಒಂದು ಬ್ರಹ್ಮನಾಡಿ ಇದೆ. ನಾಭೀಮೂಲದಿಂದ ಶಿರೋಮಧ್ಯದ ತನಕ ಹರಿಯುವ ಇದನ್ನು ಆತ್ಮನಾಡಿ ಅಥವಾ ಸುಷುಮ್ನನಾಡಿ ಎಂದೂ ಕರೆಯುತ್ತಾರೆ. ಅದರ ಮಧ್ಯದಲ್ಲಿರುವ ಹೃದಯದಲ್ಲಿ ಹೃತ್ಕಮಲವಿದೆ(thymus gland). ಅಲ್ಲೇ  ಭಗವಂತ, ಜೀವ, ಪ್ರಾಣ, ಮನೋಭಿಮಾನಿಗಳಾದ ಗರುಡ-ಶೇಷ-ರುದ್ರ ಇರುವುದು. ಎಲ್ಲಾ ಇಂದ್ರಿಯಗಳ ಮೂಲ ಇರುವುದೂ ಅಲ್ಲಿಯೇ. ಸಂಸ್ಕೃತದಲ್ಲಿ ಹೃದಯಕ್ಕೆ ‘ಸಂದೇಹ’ ಎನ್ನುತ್ತಾರೆ. ಸಂದೇಹ ಎಂದರೆ ಸಮೀಚೀನವಾದ ದೇಹದ ಪ್ರಮುಖ ಭಾಗ.

ಚತುರ್ಮುಖನ ದೇಹದಲ್ಲಿನ ಆತ್ಮನಾಡಿ ತೆರೆದುಕೊಂಡಿತು ಮತ್ತು ಅಲ್ಲಿ ವಾಚಸ್ಪತಿ(ಬೃಹಸ್ಪತಿ) ಪ್ರವೇಶಿಸಿ ನೆಲೆ ನಿಂತ. ಇದರಿಂದ ಬುದ್ದಿ ಕೆಲಸಮಾಡಲು ಪ್ರಾರಂಭಿಸಿತು. ಇದರಿಂದ ಸರಿ-ತಪ್ಪುಗಳ ನಿರ್ಣಯ ಬಂತು.

ನಂತರ ಬ್ರಹ್ಮನಾಡಿಯಲ್ಲಿ ಇನ್ನೊಂದು ಕವಲು ‘ಅಹಂನಾಡಿ’ ತೆರೆದುಕೊಂಡಿತು.  ಅಲ್ಲಿ ಶಿವ ನೆಲೆನಿಂತು ಪ್ರೇರಣೆ ಮಾಡಿದ. ಇದರಿಂದ ಅಭಿಮಾನ (awareness of self) ಜಾಗೃತವಾಯಿತು. 

ಬ್ರಹ್ಮನಾಡಿಯ ಇನ್ನೊಂದು ಕವಲು ಸತ್ವನಾಡಿ. ಅಲ್ಲಿ ಸ್ವಯಂ ಚತುರ್ಮುಖ ಪ್ರವೇಶಿಸಿದ. ಅದು ನಮ್ಮ ನೆನಪಿನ ಬಂಡಾರ. ಬ್ರಹ್ಮಾಂಡದಲ್ಲಿ ಯಾವುದು ಮಹತತ್ತ್ವವೋ ಅದೇ ಪಿಂಡಾಡದಲ್ಲಿ ಚಿತ್ತ. 

[ಸತ್ವನಾಡಿಯ ಇನ್ನೊಂದು ಹೆಸರು ವಿಜ್ಞಾನನಾಡಿ.  ಚತುರ್ಮುಖನ ಇನ್ನೊಂದು ಹೆಸರೂ ವಿಜ್ಞಾನಶಕ್ತಿ.  ವಿಜ್ಞಾನ ಎಂದರೆ ನಮ್ಮ ಚಿತ್ತದಲ್ಲಿ ತಿಳಿದಿರುವ ವಿಷಯಗಳಿಂದ, ತಿಳಿಯದ ವಿಷಯಗಳನ್ನು ಊಹಿಸಿ ತೀರ್ಮಾನಕ್ಕೆ ಬರುವುದು. ಅದು ತಾರ್ಕಿಕ. ಚಿತ್ತದ ವಿಸ್ತಾರವೇ ಚೇತನ ಮತ್ತು ಅದರ ಅಭಿಮಾನಿ ಶ್ರೀಲಕ್ಷ್ಮಿ. ಅದು ಜನ್ಮ-ಜನ್ಮಾಂತರದ ಸಮಸ್ತ ನೆನಪೂ ಇರುವ ಅದ್ಭುತ ಅಂತರಂಗ ಪ್ರಪಂಚ.  ಚೇತನದ ಕುರಿತು ಇಲ್ಲಿ ವಿಶೇಷವಾಗಿ ಹೇಳಿಲ್ಲ. ಕನಸಿನ ಪ್ರಪಂಚವೂ ಚಿತ್ತದ ಚಮತ್ಕಾರ. ಷಟ್-ಪ್ರಶ್ನ ಉಪನಿಷತ್ ಈ ಕುರಿತು ವಿವರಿಸುತ್ತದೆ].

ಹೀಗೆ ಪಂಚಜ್ಞಾನೇಂದ್ರಿಯ, ಪಂಚಕರ್ಮೇಂದ್ರಿಯ, ಮನಸ್ಸು, ಬುದ್ಧಿ, ಅಹಂಕಾರ, ಚಿತ್ತ ಎಲ್ಲವೂ ಕೆಲಸಮಾಡತೊಡಗಿತು. ಎಲ್ಲಾ ಅವಸ್ಥೆಗಳಲ್ಲಿ(ಎಚ್ಚರ-ಕನಸು-ನಿದ್ದೆ) ಒಂದು ಪೂರ್ಣಾಂಗನಾದ, ಮನುಷ್ಯನಿಗೆ ಬೇಕಾದ  ವ್ಯವಸ್ಥೆ ಮೊದಲು ಚತುರ್ಮುಖನ ಶರೀರದಲ್ಲಿ ಆಯಿತು. ಮುಂದೆ ಭಗವಂತ, ಚತುರ್ಮುಖ, ಮುಖ್ಯಪ್ರಾಣ, ಶಿವನಿಂದ ಮತ್ತು  ಸಮಸ್ತ ದೇವತೆಗಳಿಂದ  ಲೋಕದಲ್ಲಿ ಸೃಷ್ಟಿಯ ಪುನರಾವರ್ತಿಯಾಗುತ್ತದೆ. ಹೀಗೆ ಪ್ರಪಂಚ ನಿರ್ಮಾಣವಾಗುತ್ತದೆ.


ಹೀಗೆ ನಿರ್ಮಾಣವಾದ ಮನುಷ್ಯರು ಎಲ್ಲರೂ ಒಂದೇ ರೀತಿ ಇರಲಿಲ್ಲ. ಮನುಷ್ಯರಲ್ಲಿ ಕೆಲವರು ಬ್ರಾಹ್ಮಣರಾದರು, ಕೆಲವರು ಕ್ಷತ್ರಿಯರಾದರು, ಕೆಲವರು ವೈಶ್ಯರಾದರು ಮತ್ತೆ ಕೆಲವರು ಶೂದ್ರರಾದರು. 

ಮುಂದಿನ ಶ್ಲೋಕಕ್ಕೆ ಹೋಗುವ ಮುನ್ನ ನಾವಿಲ್ಲಿ ವರ್ಣ ಪದ್ದತಿಯ ಬಗ್ಗೆ ಸ್ವಲ್ಪ ತಿಳಿದುಕೊಳ್ಳಬೇಕು.  ಶ್ರೀಕೃಷ್ಣ ಗೀತೆಯಲ್ಲಿ ಹೇಳುವಂತೆ- “ಚಾತುರ್ವರ್ಣ್ಯಮ್  ಮಯಾ ಸೃಷ್ಟಂ ಗುಣಕರ್ಮ ವಿಭಾಗಶಃ”  - ತ್ರಿಗುಣಗಳು ಮತ್ತು ಕರ್ಮಗಳ ವಿಂಗಡಣೆಯಿಂದ ನಾಲ್ಕು ವರ್ಣಗಳ ಗುಂಪನ್ನು ನಾನು ನಿರ್ಮಿಸಿದೆ.  ಇಲ್ಲಿ  ಕೃಷ್ಣ ಹೇಳುತ್ತಾನೆ: "ನಾನು ಗುಣಕರ್ಮವಿಭಾಗಶಃ ನಾಲ್ಕು ವರ್ಣಗಳನ್ನು ಸೃಷ್ಟಿ ಮಾಡಿದೆ ಎಂದು". ನಮಗೆ ತಿಳಿದಂತೆ ನಾಲ್ಕು ವರ್ಣಗಳು ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಮತ್ತು  ಶೂದ್ರ. ಭಗವಂತನ ಈ ನುಡಿಯನ್ನು ತಪ್ಪಾಗಿ ಅರ್ಥೈಸುವವರೇ ಹೆಚ್ಚು. ಭಗವಂತನೇ ನಾಲ್ಕು ವರ್ಣಗಳನ್ನು ಸೃಷ್ಟಿಸಿದರೆ ಈ ವರ್ಣಭೇದ ಭಾರತವನ್ನು ಬಿಟ್ಟು ಬೇರೆ ದೇಶದಲ್ಲಿ ಏಕಿಲ್ಲ ಎಂದು ಪ್ರಶ್ನಿಸುವವರೂ ಇದ್ದಾರೆ. ಮೂಲಭೂತವಾಗಿ ನೋಡಿದರೆ ಕೃಷ್ಣ ಇಲ್ಲಿ ಹೇಳಿರುವುದು ಜಾತಿಯ ಬಗ್ಗೆ ಅಲ್ಲ, ಬದಲಿಗೆ ನಾಲ್ಕು ವರ್ಣಗಳ ಬಗ್ಗೆ. 

ವರ್ಣ ಮತ್ತು ಜಾತಿಯನ್ನು ಸಂಕೀರ್ಣವಾಗಿ ಕೂಡಾ ಬಳಸುತ್ತಾರೆ. ಸಂಸ್ಕೃತದಲ್ಲಿ ಒಂದು ಪದಕ್ಕೆ ಅನೇಕ ಅರ್ಥಗಳಿರುತ್ತವೆ. ಒಂದು ಪದಕ್ಕೆ ಅನೇಕ ಆಯಾಮವಿರುವುದರಿಂದ ನಮಗೆ ಕೆಲವೊಮ್ಮೆ ಗೊಂದಲವಾಗುತ್ತದೆ. ಜಾತಿ ಎನ್ನುವುದಕ್ಕೆ ಎರಡು ಅರ್ಥಗಳಿವೆ. ಒಂದು ಹುಟ್ಟುಗುಣ ಅಥವಾ ಸ್ವಭಾವ(ಹುಟ್ಟುವಾಗಲೇ ಪಡೆದುಕೊಂಡು ಬಂದಿದ್ದು, ಮೂಲ ತ್ರೈಗುಣ್ಯಕ್ಕೆ ಸಂಬಂಧಪಟ್ಟಿದ್ದು) ಅದು ವರ್ಣ; ಇನ್ನೊಂದು ಯಾವ ಮನೆಯಲ್ಲಿ ಹುಟ್ಟಿದನೋ ಆ ಜಾತಿ (ಬ್ರಾಹ್ಮಣರ ಮನೆಯಲ್ಲಿ ಹುಟ್ಟಿದವ ಬ್ರಾಹ್ಮಣ, ಕ್ಷತ್ರಿಯನ ಮನೆಯಲ್ಲಿ ಹುಟ್ಟಿದವ ಕ್ಷತ್ರಿಯ). ಈ ಸೂಕ್ಷ್ಮ ಅರಿಯದಿದ್ದರೆ ಇಲ್ಲಿ ನಮಗೆ ಗೊಂದಲವಾಗುತ್ತದೆ. ಆದ್ದರಿಂದ ವರ್ಣ ಎಂದರೆ ಮೂಲ ಹುಟ್ಟು ಸ್ವಭಾವ.

ವರ್ಣ ಅಂದರೆ ಬಣ್ಣ. ಒಬ್ಬ ಮನುಷ್ಯನ ಬಣ್ಣ ಅಂದರೆ ಏನು ? "ಆತನ ಬಣ್ಣ ಬಯಲಾಯಿತು" ಎಂದು ಸಾಮಾನ್ಯವಾಗಿ ನಾವು ಹೇಳುವುದಿದೆ. ಒಬ್ಬನ ಬಣ್ಣ ಬಯಲಾಗುವುದು ಎಂದರೆ ಆತನ ನಿಜ ವ್ಯಕ್ತಿತ್ವ ಬಯಲಾಗುವುದು. ಇಲ್ಲಿ ಬಣ್ಣ ಎಂದು ಹೇಳಲು ಇನ್ನೊಂದು ಕಾರಣವಿದೆ. ನಮ್ಮ ಸ್ವಭಾವಕ್ಕೆ ಬಣ್ಣವಿದೆ [ಇದು ನಮ್ಮ ಕಣ್ಣಿಗೆ ಕಾಣದ ಬಣ್ಣ]. ಸಾತ್ವಿಕ-ಬಿಳಿ; ರಾಜಸ-ಕೆಂಪು; ತಾಮಸ-ಕಪ್ಪು. ಹೀಗೆ ಬಣ್ಣ ಸ್ವಭಾವವನ್ನು ಪ್ರತಿನಿಧಿಸುತ್ತದೆ. ಅಷ್ಟೇ ಅಲ್ಲದೆ ನಮ್ಮ ಸ್ವಭಾವ ನಮ್ಮೊಳಗಿನ ಒಂದು ಶಕ್ತಿ. ನಮ್ಮ ಭಾವನೆಗನುಗುಣವಾಗಿ ನಮ್ಮ ದೇಹ ಬಣ್ಣದ ಕಿರಣಗಳನ್ನು ಹೊರಹೊಮ್ಮುತ್ತದೆ[ಇದು ಸಾಮಾನ್ಯ ಮನುಷ್ಯನ ಕಣ್ಣಿಗೆ ಕಾಣದು]. ತುಂಬಾ ಕೋಪ ಬಂದಾಗ ಮೈಯಿಂದ ಕೆಂಪು ಕಿರಣ; ಮನಸ್ಸು ಪ್ರಸನ್ನವಾಗಿದ್ದಾಗ ಹಸಿರು ಕಿರಣ;  ಜ್ಞಾನದ ಆಳ ತಿಳಿದ ಜ್ಞಾನಿಯ ಮೈಯಿಂದ ನೀಲ ಕಿರಣ. ಹೀಗೆ ಬಣ್ಣ ನಮ್ಮ ಒಳಗಿನ ಸ್ವಭಾವವನ್ನು ಪ್ರತಿನಿಧಿಸುತ್ತದೆ.  ಈ ಕಾರಣಕ್ಕಾಗಿ ಜ್ಞಾನಾನಂದಮಯನಾದ ಭಗವಂತ ನೀಲಮೇಘಶ್ಯಾಮ.

ಮೇಲಿನ ವಿವರವನ್ನು ತಿಳಿದಾಗ ಸ್ಪಷ್ಟವಾಗಿ ನಮಗೆ ಅರ್ಥವಾಗುವುದು ಒಂದು ವಿಚಾರ.  ಜಾತಿ- ಹುಟ್ಟಿದ ಮನೆಗೆ ಮತ್ತು ತಂದೆ-ತಾಯಿಯನ್ನು ಅವಲಂಬಿಸಿ ಬರುವುದು.   ವರ್ಣ ಎನ್ನುವುದು ನಮ್ಮ ಅಂತರಂಗ ಪ್ರಪಂಚ-ನಮ್ಮ ಮೂಲ ಸ್ವಭಾವ. ಈ ವರ್ಣವನ್ನು ಪ್ರಪಂಚದ ಮೂಲೆ ಮೂಲೆಯಲ್ಲೂ ಕಾಣಬಹುದು. ಭಾರತದಲ್ಲಿ ಶಾಸ್ತ್ರಕಾರರು ಇದನ್ನು ಗುರುತಿಸಿ ಅದಕ್ಕೆ  ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಮತ್ತು  ಶೂದ್ರ ಎನ್ನುವ ಹೆಸರು ಕೊಟ್ಟರು ಅಷ್ಟೇ.  ಜಾತಿ ಜನ್ಮತಃ ಆದರೆ ವರ್ಣಗಳನ್ನು ಗುಣಕರ್ಮದಿಂದ ವಿಭಾಗಿಸಿರುವುದು.  ಬ್ರಾಹ್ಮಣರ ಮನೆಯಲ್ಲಿ ಹುಟ್ಟುವ ಹುಡುಗ ಬ್ರಾಹ್ಮಣ ಜಾತಿಯ ಹುಡುಗ. ಆದರೆ ಆತ ಸ್ವಭಾವತಃ  ಕ್ಷತ್ರಿಯನಾಗಿರಲೂಬಹುದು; ಒಂದೇ ಮನೆಯಲ್ಲಿ ನಾಲ್ಕು ವರ್ಣದ ಮಕ್ಕಳೂ ಹುಟ್ಟಬಹುದು. ಬೆಸ್ತರ ಹುಡುಗಿಯಲ್ಲಿ ಹುಟ್ಟಿದ ವೇದವ್ಯಾಸರು ಮಹಾಬ್ರಾಹ್ಮಣ. ಇದು ವರ್ಣವನ್ನು ಅವಲಂಬಿಸಿ  ಬಂದದ್ದು. ಅದೇ ವೇದವ್ಯಾಸರ ಮಗ, ಶ್ರೇಷ್ಠ ಜ್ಞಾನಿ-ವಿದುರ 'ಕ್ಷತ್ತಾ'(ಕೆಲಸದವಳ ಮಗ). ಇದು ಸಾಮಾಜಿಕ ರಾಜಕೀಯದಿಂದ ಬಂದಿದ್ದು! (ಮಹಾಭಾರತ ಕಾಲದಲ್ಲೇ ಜಾತಿ ರಾಜಕೀಯ ದುರ್ಯೋಧನನಿಂದ ಪ್ರಾರಂಭವಾಗಿರುವುದನ್ನು ನಾವು ಕಾಣಬಹುದು).

ಜೀವಸ್ವಭಾವ ಮತ್ತು ಕರ್ಮಕ್ಕನುಗುಣವಾಗಿ ಭಗವಂತ ಒಂದು ವರ್ಣವನ್ನು ಜೀವಕ್ಕೆ ಹುಟ್ಟುವಾಗಲೇ ಕೊಟ್ಟಿರುತ್ತಾನೆ. ವರ್ಣ ಇಲ್ಲದೆ ಸಮಾಜ ಸುಗಮವಾಗಿ ನಡೆಯದು. ಪುರುಷಸೂಕ್ತದಲ್ಲಿ  ಈ ನಾಲ್ಕು ವರ್ಣಗಳನ್ನು ಆಯಾ ವರ್ಣದ ಕರ್ಮಕ್ಕನುಗುಣವಾಗಿ  ದೇಹದ ನಾಲ್ಕು ಭಾಗವಾಗಿ ಈ ರೀತಿ ವಿವರಿಸಿದ್ದಾರೆ: “ಬ್ರಾಹ್ಮಣೋsಸ್ಯ ಮುಖಮಾಸೀದ್ಬಾಹೂ ರಾಜನ್ಯಃ ಕೃತಃ | ಊರೂ ತದಸ್ಯ  ಯದ್ವೈಶ್ಯಃ  ಪದ್ಭ್ಯಾಂಮ್ ಶೂದ್ರೋ ಅಜಾಯತ”. ದೇಹಕ್ಕೆ ಪಂಚಾಗವಾಗಿರುವ ಹಾಗು ಪೂಜೆಯಲ್ಲಿ ಶ್ರೇಷ್ಠ ಎನಿಸಿದ ಪಾದವನ್ನು ಶೂದ್ರನಿಗೆ ಹೋಲಿಸಿದರು. ಇದು ದೇಹದ ಅಡಿಪಾಯ. ಶೂದ್ರ ಎಂದರೆ ದುಃಖದಲ್ಲಿ ಕರಗಿದವ ಎಂದರ್ಥ. ಈತನಲ್ಲಿ ಅರೆಸೊತ್ತಿಗೆ ಇರುವುದಿಲ್ಲ. ಆದರೆ ಇನ್ನೊಬ್ಬರ ಸೇವೆ ಮಾಡುವ ಸೇವಾ ಗುಣ ಮಹತ್ವವಾಗಿರುತ್ತದೆ (Service Quality). ಈ  ಗುಣ  ಇಲ್ಲದವ  ಮನುಷ್ಯನೇ  ಅಲ್ಲ. ಯಾರೂ ಏಕವರ್ಣದವನಲ್ಲ. ಎಲ್ಲರಲ್ಲೂ ಎಲ್ಲಾ ಸ್ವಭಾವವಿರುತ್ತದೆ. ಯಾವ ಸ್ವಭಾವ ನಮ್ಮಲ್ಲಿ ಹೆಚ್ಚಾಗಿದೆಯೋ(majority), ನಾವು ಆ ವರ್ಣಕ್ಕೆ ಸೇರುತ್ತೇವೆ. ಶೂದ್ರ ಸ್ವಭಾವ ಎಷ್ಟು ಮುಖ್ಯ ಎಂದರೆ ಈ ಸ್ವಭಾವ ಇಲ್ಲದೆ ಬೇರೆ ಸ್ವಭಾವಕ್ಕೆ ಬೆಲೆ ಇಲ್ಲ. ಯಾವಾಗಲೂ ನಾವು  ಮಾಡುವ ಕರ್ಮವನ್ನು ಸೇವಾ ಮನೋವೃತ್ತಿಯಿಂದ ಮಾಡಬೇಕು. ಬ್ರಾಹ್ಮಣನಾದವನು ಸಮಾಜ ಸೇವೆಯ ಭಾವನೆಯಿಂದ ಜ್ಞಾನದಾನ ಮಾಡಬೇಕು. ಇಲ್ಲದಿದ್ದರೆ ಅದು ಜ್ಞಾನದಾನವೆನಿಸುವುದಿಲ್ಲ.

ವೈಶ್ಯನನ್ನು  ದೇಹದ ಸೊಂಟದ ಭಾಗಕ್ಕೆ ಹೋಲಿಸಿದರು. ಕಾರಣ ಈತನ ಸ್ವಭಾವ ವ್ಯಾಪಾರ ಮತ್ತು ವಾಣಿಜ್ಯ(Production).  ಸಾಮಾನ್ಯವಾಗಿ ಹಿಂದಿನ ಕಾಲದ ಜೀವನ ಪದ್ದತಿಯಂತೆ ವೈಶ್ಯರು ಒಂದು ಊರಿನಿಂದ ಇನ್ನೊಂದು ಊರಿಗೆ ಸಂಚರಿಸುತ್ತಾ ತಮ್ಮ ವ್ಯಾಪಾರವನ್ನು ಮಾಡುತ್ತಿದ್ದರು. ಆದ್ದರಿಂದ  ಅವರನ್ನು ಸೊಂಟಕ್ಕೆ ಹೋಲಿಸಿದ್ದಾರೆ.

 ಕ್ಷತ್ರಿಯರ ಸ್ವಭಾವ ತಮ್ಮ ತೋಳ್ಬಲದಿಂದ ಸಮಾಜದ ರಕ್ಷಣೆ ಮಾಡುವುದು ಮತ್ತು ಆಡಳಿತ (Protection and Administration). ಹಾಗಾಗಿ ಅವರನ್ನು ತೋಳಿಗೆ ಹೋಲಿಸಿದ್ದಾರೆ.

ಇನ್ನು ಬ್ರಾಹ್ಮಣ ಸ್ವಭಾವ; ಇವರ ಮೂಲಕರ್ಮ  ಜ್ಞಾನದ ಮಾರ್ಗದರ್ಶನ(Wisdom). ಅದಕ್ಕಾಗಿ  ಇವರನ್ನು  ತಲೆಗೆ ಹೋಲಿಸಿದರು. ಸ್ವಭಾವತಃ ಬ್ರಾಹ್ಮಣ ಎನಿಸಿದವನು ಸದಾ ಭಗವಂತನ ಚಿಂತನೆ, ಇಂದ್ರಿಯ ನಿಗ್ರಹ, ಸುಳ್ಳು ಹೇಳದ, ಮುಖವಾಡ ಇಲ್ಲದ ಬದುಕು, ಸದಾ ಅಂತರಂಗ ಬಹಿರಂಗ ಶುದ್ಧಿ- ಈ ಮೂಲ ಗುಣಗಳನ್ನು ಹೊಂದಿರುತ್ತಾನೆ.

ಹೀಗೆ ಈ ನಾಲ್ಕು ವರ್ಣಗಳು  ಸೇರಿದರೆ ಮಾತ್ರ ಒಂದು ಪರಿಪೂರ್ಣ ಸಮಾಜ ನಿರ್ಮಾಣವಾಗಲು ಸಾಧ್ಯ. ಇಲ್ಲಿ ಮೇಲು-ಕೀಳು ಎನ್ನುವ ಭಾವನೆ ಸಲ್ಲ. ಎಲ್ಲರೂ ಮೋಕ್ಷ ಯೋಗ್ಯ ಜೀವರೇ. ಇದು ಆಧ್ಯಾತ್ಮಿಕ  ವರ್ಗೀಕರಣ ಮತ್ತು ವ್ಯವಸ್ಥೆ. 'ಇದನ್ನು ಅನಾದಿನಿತ್ಯವಾದ ಜೀವದ ಮೂಲ ಸ್ವಭಾವಕ್ಕನುಗುಣವಾಗಿ ಮತ್ತು ಕರ್ಮಕ್ಕನುಗುಣವಾಗಿ ನಾನು ಈ ಭೂಮಿ ಮೇಲೆ ಸೃಷ್ಟಿಸಿದೆ' ಎಂದು ಗೀತೆಯಲ್ಲಿ ಶ್ರೀಕೃಷ್ಣ ಸ್ಪಷ್ಟವಾಗಿ ಹೇಳಿರುವುದುಂನು ಕಾಣುತ್ತೇವೆ. 

ಸಾತ್ವಿಕರಾದ ದೇವತೆಗಳಲ್ಲಿ ವರ್ಣವಿಭಾಗ ಇಲ್ಲ; ತಾಮಸರಾದ ಅಸುರರಲ್ಲಿ ವರ್ಣವಿಭಾಗ ಇಲ್ಲ; ರಾಜಸರಾದ ಮನುಷ್ಯರಲ್ಲಿ ಮಾತ್ರವೇ ಈ ವ್ಯವಸ್ಥೆ. ರಾಜಸರಾದ ಮನುಷ್ಯರಲ್ಲಿಯೂ ಮತ್ತೆ ಮೂರು ವಿಧ: ಸಾತ್ವಿಕ-ರಾಜಸರು, ರಾಜಸ-ರಾಜಸರು, ಮತ್ತು ತಾಮಸ-ರಾಜಸರು. ತಮೋಯೋಗ್ಯರಾದ ತಾಮಸ-ರಾಜಸರಲ್ಲಿ ವರ್ಣವ್ಯವಸ್ಥೆ ಇಲ್ಲ. ನಿತ್ಯ ಸಂಸಾರಿಗಳಾದ ರಾಜಸ-ರಾಜಸರಲ್ಲೂ ವರ್ಣವ್ಯವಸ್ಥೆ ಇಲ್ಲ, ಮುಕ್ತಿ ಯೋಗ್ಯರಾದ ಸಾತ್ವಿಕ-ರಾಜಸರಲ್ಲಿ ಮಾತ್ರವೇ ಈ ವಿಭಾಗ.

 

ಬನ್ನಿ, ಈ ಎಲ್ಲಾ ಹಿನ್ನೆಲೆಯೊಂದಿಗೆ ಮುಂದಿನ ಶ್ಲೋಕವನ್ನು ನೋಡೋಣ-


No comments:

Post a Comment