ಸೋSಪ್ಯಂಶಗುಣಕಾಲಾತ್ಮಾ ಭಗವದ್-ದೃಷ್ಟಿಗೋಚರಃ ।
ಆತ್ಮಾನಂ ವ್ಯಕರೋದಾತ್ಮಾ ವಿಶ್ವಸ್ಯಾಸ್ಯ ಸಿಸೃಕ್ಷಯಾ ॥೦೬॥
ಚತುರ್ಮುಖ ಹುಟ್ಟುವುದರೊಂದಿಗೆ ಎಲ್ಲಾ ಜೀವರಿಗೂ ಎಚ್ಚರವಾಯಿತು. ಚತುರ್ಮುಖ ಹುಟ್ಟುವುದಕ್ಕೂ ಮೊದಲು ಕಾಲ ಮತ್ತು ಜೀವಜಾತದ ಅಭಿಮಾನಿನಿಯಾಗಿದ್ದ ಲಕ್ಷ್ಮಿ, ಚತುರ್ಮುಖ ಜನಿಸಿದಾಕ್ಷಣ ಆ ಸ್ಥಾನವನ್ನು ಆತನಿಗೆ ನೀಡುತ್ತಾಳೆ. ಈ ರೀತಿ ಭಗವಂತನ ಪ್ರತಿಬಿಂಬರಾದ(ಅಂಶ ಸ್ಥಾನೀಯರಾದ) ಜೀವರುಗಳಿಗೆ ಚತುರ್ಮುಖ ಅಭಿಮಾನಿ ದೇವತೆಯಾದ. ಒಟ್ಟಿನಲ್ಲಿ ಹೇಳಬೇಕೆಂದರೆ: ಚತುರ್ಮುಖನ ಸೂಕ್ಷ್ಮರೂಪದ ಸೃಷ್ಟಿಯಾಗುತ್ತಿದ್ದಂತೆಯೇ ಆತನಿಗೆ ಜೀವರ ಅಭಿಮಾನ, ತ್ರಿಗುಣಗಳ ಅಭಿಮಾನ ಮತ್ತು ಕಾಲದ ಅಭಿಮಾನವನ್ನು ನೀಡಿ ಅನುಗ್ರಹಿಸುತ್ತಾರೆ ಲಕ್ಷ್ಮೀ ನಾರಾಯಣರು. ಇದರಿಂದಾಗಿ ಚತುರ್ಮುಖನಿಗೆ ಎರಡು ರೂಪಗಳು. ಒಂದು ರೂಪದಲ್ಲಿ ಆತ ಜೀವರನ್ನು ಮತ್ತು ತ್ರಿಗುಣಗಳನ್ನೂ ನಿಯಂತ್ರಿಸಿದರೆ, ಮತ್ತೊಂದು ರೂಪದಲ್ಲಿ ಆತ ಕಾಲವನ್ನು ನಿಯಂತ್ರಿಸುತ್ತಾನೆ. [ಇಲ್ಲಿ ಪ್ರಯೋಗಿಸಿರುವ ‘ಅಂಶ’ ಎನ್ನುವ ಪದದ ಅರ್ಥ ‘ಪ್ರತಿಬಿಂಬ’ ಎಂಬುದಾಗಿದೆ. ಇದನ್ನು ಗೀತೆಯಲ್ಲಿ ವಿವರಿಸಿರುವುದನ್ನು ನಾವು ಕಾಣಬಹುದು. ಮಮೈವಾಂಶೋ ಜೀವಲೋಕೇ ಜೀವಭೂತಃ ಸನಾತನಃ । (೧೫-೦೭)]. ಹೀಗೆ ಚತುರ್ಮುಖ ‘ಆತ್ಮ’ ನೆನಿಸಿ ಸೃಷ್ಟಿ ಕ್ರಿಯೆಯನ್ನು ಮುಂದುವರಿಸಿದ. [ಮುಖ್ಯ ಅರ್ಥದಲ್ಲಿ ಆತ್ಮಾ ಎಂದರೆ ಭಗವಂತ. ಎರಡನೇ ಅರ್ಥದಲ್ಲಿ ಚತುರ್ಮುಖ]
“ಚತುರ್ಮುಖ ಸೃಷ್ಟಿ ಕಾರ್ಯವನ್ನು ಮುಂದುವರಿಸಿರುವುದು ಸ್ವತಂತ್ರನಾಗಿ ಅಲ್ಲ” ಎನ್ನುವುದನ್ನು ಮೈತ್ರೇಯ ಮಹರ್ಷಿಗಳು ಇಲ್ಲಿ ಸ್ಪಷ್ಟವಾಗಿ ಹೇಳಿರುವುದನ್ನು ನಾವು ಕಾಣುತ್ತೇವೆ. ಭಗವಂತ ಚತುರ್ಮುಖನ ಮೇಲೆ ಕಣ್ಣು ಹಾಯಿಸಿದನಂತೆ. ಅಂದರೆ ಸೃಷ್ಟಿ ಮಾಡುವ ಶಕ್ತಿಯನ್ನು ಆಧಾನ ಮಾಡಿ, ಆತನೊಳಗೆ ಕುಳಿತ. ಈ ರೀತಿ ಭಗವಂತನ ಅನುಗ್ರಹದೊಂದಿಗೆ ಚತುರ್ಮುಖ ಸೃಷ್ಟಿ ಕಾರ್ಯವನ್ನು ವಿಸ್ತರಿಸಿದ.
ಮಹತ್ತತ್ತ್ವಾದ್ ವಿಕುರ್ವಾಣಾದಹಂತತ್ತ್ವಮಜಾಯತ ।
ಕಾರ್ಯಕಾರಣಕರ್ತ್ರಾತ್ಮಾ ಭೂತೇಂದ್ರಿಯಮನೋಭವಃ ॥೦೭॥
ಮೊಟ್ಟಮೊದಲು ಚತುರ್ಮುಖ ತನ್ನಿಂದ ಅಭಿಮನ್ಯಮಾನವಾಗಿರುವ ಮಹತತ್ತ್ವವನ್ನು ವಿಕಾರ/ವಿಸ್ತಾರಗೊಳಿಸಿದ. ಇದರಿಂದ ಅಹಂಕಾರ ತತ್ತ್ವದ ಉದಯವಾಯಿತು. ಅಂದರೆ ಅಹಂಕಾರ ತತ್ತ್ವದ ಅಭಿಮಾನಿ ಶಿವನ ಜನನವಾಯಿತು. ಅಹಂಕಾರತತ್ತ್ವದ ಜನನದಿಂದ ಜೀವರಾಶಿಗೆ ‘ತನ್ನತನದ ಅರಿವು’ (Awareness of Self) ಮೂಡಿತು. ಇದು ಜೀವರಾಶಿಗೆ ಶಿವನ ಕೊಡುಗೆಯಾಯಿತು.
ವೈಕಾರಿಕಸ್ತೈಜಸಶ್ಚ ತಾಮಸಶ್ಚೇತ್ಯಹಂ ತ್ರಿಧಾ ।
ಅಹಂತತ್ತ್ವಾದ್ ವಿಕುರ್ವಾಣಾನ್ಮನೋ ವೈಕಾರಿಕಾದಭೂತ್ ॥೦೮॥
ವೈಕಾರಿಕಾಶ್ಚ ಯೇ ದೇವಾ ಅರ್ಥಾಭಿವ್ಯಞ್ಜನಂ ಯತಃ ।
ತೈಜಸಾನೀಂದ್ರಿಯಾಣ್ಯೇವ ಜ್ಞಾನಕರ್ಮಮಯಾನಿ ಚ ॥೦೯॥
ಕಾಲಮಾಯಾಂಶಯೋಗೇನ ಭಗವದ್ವೀಕ್ಷಿತಂ ನಭಃ ।
ತಾಮಸಾನುಸೃತಂ ಸ್ಪರ್ಶಂ ವಿಕುರ್ವನ್ನಿರ್ಮಮೇSನಿಲಮ್ ॥೧೦॥
ಅನಿಲೇನಾನ್ವಿತಂ ಜ್ಯೋತಿರ್ವಿಕುರ್ವತ್ ಪರವೀಕ್ಷಿತಮ್ ।
ಆಧತ್ತಾಮ್ಭೋ ರಸಮಯಂ ಕಾಲಮಾಯಾಂಶಯೋಗತಃ ॥೧೨॥
ಜ್ಯೋತಿಷಾsಮ್ಭೋSನುಸಂಸೃಷ್ಟಂ ವಿಕುರ್ವದ್ ಬ್ರಹ್ಮವೀಕ್ಷಿತಮ್ ।
ಮಹೀಂ ಗಂಧಗುಣಾಮಾಧಾತ್ ಕಾಲಮಾಯಾಂಶಯೋಗತಃ ॥೧೩॥
ಯಾವಾಗ ಅಹಂಕಾರ ತತ್ತ್ವ ಸೃಷ್ಟಿಯಾಯಿತೋ, ಅದು ಮೂರು ಮುಖದಲ್ಲಿ ವಿಸ್ತಾರ ಹೊಂದಿತು. ಅಹಂಕಾರ ತತ್ತ್ವದ ದೇವತೆಯಾದ ಶಿವ ಆ ತತ್ತ್ವವನ್ನು ಮೂರು ವಿಧವಾಗಿ ವಿಂಗಡಿಸಿದ. (೧) ವೈಕಾರಿಕ ಅಹಂಕಾರ/ಸಾತ್ವಿಕ ಅಹಂಕಾರ (೨) ತೈಜಸ ಅಹಂಕಾರ/ರಾಜಸ ಅಹಂಕಾರ (೩)ತಾಮಸ ಅಹಂಕಾರ. ವೈಕಾರಿಕ ಅಹಂಕಾರದಿಂದ ವಿಷಯಗಳ ಅರಿವು ಬರುವ ‘ಮನಸ್ಸು’ ಮತ್ತು ಹತ್ತು ಇಂದ್ರಿಯಾಭಿಮಾನಿ ದೇವತೆಗಳ (ವೈಕಾರಿಕರ)ಸೃಷ್ಟಿಯಾಯಿತು. ಇಲ್ಲಿ ವೈಕಾರಿಕಾ ಸೃಷ್ಟಿ ಎಂದರೆ: ಯಾವುದರಿಂದ ವಿಷಯಗಳ ಗ್ರಹಣವಾಗಿ ಅರಿವು ಬರುತ್ತದೋ ಅಂತಹ ಮನಸ್ಸು ಮತ್ತು ದೇವತೆಗಳ ಸೃಷ್ಟಿ [ವಿಷಯಗಳ ಅನುಭವವಾಗುವುದು ದೇವತೆಗಳ ಮೂಲಕ. ಉದಾಹರಣೆಗೆ ಕಣ್ಣಿನಲ್ಲಿರುವ ಸೂರ್ಯನಿಂದ ನಮಗೆ ಅರಿವು ಬರುತ್ತದೆ ಮತ್ತು ಅಲ್ಲಿ ಕಣ್ಣು ಕೇವಲ ಉಪಕರಣ ಅಷ್ಟೇ. ಸೂರ್ಯನಿಂದ ಬಂದ ಅರಿವನ್ನು ಗ್ರಹಣ ಮಾಡಲು ಮನಸ್ಸು ಬೇಕು. ಸ್ವಯಂ ಶಿವನೇ ಮನಸ್ಸಿನ ಅಭಿಮಾನಿ ದೇವತೆ]. ಈ ಹಿಂದೆ ಎರಡನೇ ಸ್ಕಂಧದಲ್ಲಿ ಈಗಾಗಲೇ ನೋಡಿದಂತೆ: ದಿಗ್ವಾತಾರ್ಕಪ್ರಚೇತೋಶ್ವಿವಹ್ನೀಂದ್ರೋಪೇನ್ದ್ರಮಿತ್ರಕಾಃ ॥ಭಾಗವತ ೨-೫-೩೦॥ ಸಾತ್ತ್ವಿಕ ಅಹಂಕಾರ ನಿಯಾಮಕನಾದ ಶಿವನಿಂದ ಮನಸ್ಸು ಮತ್ತು ಈ ಕೆಳಗೆ ಹೇಳಿರುವ ಹತ್ತು ಇಂದ್ರಿಯಾಭಿಮಾನಿ ದೇವತೆಗಳ ಸೃಷ್ಟಿಯಾಯಿತು.
(೧) ಕಿವಿಯ ಅಭಿಮಾನಿ ದಿಗ್ಧೇವತೆಗಳು. [ಪೂರ್ವದಿಕ್ಕಿಗೆ ಮಿತ್ರ, ಪಶ್ಚಿಮದಿಕ್ಕಿಗೆ ವರುಣ, ಉತ್ತರ ದಿಕ್ಕಿಗೆ ಕುಬೇರ ಮತ್ತು ದಕ್ಷಿಣ ದಿಕ್ಕಿಗೆ ಯಮ ಅಭಿಮಾನಿ ದೇವತೆಗಳು. ಇವರೆಲ್ಲರ ಮುಖಂಡ ಹಾಗೂ ಶ್ರೋತ್ರಾಭಿಮಾನಿ: ಸೋಮ(ಚಂದ್ರ)].
(೨) ಸ್ಪರ್ಶದ ದೇವತೆ ವಾಯು. ಇಲ್ಲಿ ವಾಯು ಎಂದರೆ ಪ್ರಧಾನ ವಾಯು(ಮುಖ್ಯಪ್ರಾಣ) ಅಲ್ಲ, ಸ್ಪರ್ಶ ಶಕ್ತಿಯನ್ನು ಕೊಡುವ ಅಹಂಪ್ರಾಣ.
(೩) ಕಣ್ಣಿನ ದೇವತೆ ಅರ್ಕ(ಸೂರ್ಯ).
(೪)ನಾಲಿಗೆ ಅಥವಾ ರಸದ ಅಭಿಮಾನಿ ದೇವತೆ ಪ್ರಚೇತ(ವರುಣ).
(೫) ಮೂಗಿನ ಅಥವಾ ಗಂಧದ ಅಭಿಮಾನಿ ದೇವತೆ ಆಶ್ವೀದೇವತೆಗಳು.
(೬) ಬಾಯಿ ಅಥವಾ ವಾಗೀನ್ದ್ರಿಯದ ದೇವತೆ ವಹ್ನಿ(ಅಗ್ನಿ).
(೭) ಕೈಯ ಅಭಿಮಾನಿ ದೇವತೆ ಇಂದ್ರ.
(೮) ಕಾಲಿನ ಅಭಿಮಾನಿ ದೇವತೆಯಾಗಿ ಸ್ವಯಂ ಭಗವಂತನೇ ಉಪೇಂದ್ರನಾಗಿ ಶಿವನಿಂದ ಹುಟ್ಟಿದ. ಇಂದ್ರಪುತ್ರ ಜಯಂತ ಕೂಡಾ ಕಾಲಿನ ಅಭಿಮಾನಿ ದೇವತೆ.
(೯) ದೇಹಕ್ಕೆ ಬೇಡವಾದುದನ್ನು ಹೊರ ಹಾಕುವ ಪಾಯುವಿನ ಅಭಿಮಾನಿ ಮಿತ್ರ ಹಾಗೂ
(೧೦) ಮೂತ್ರ ಮತ್ತು ರೇತಸ್ಸಿನ ವಿಸರ್ಜನೆ ಹಾಗೂ ರೇತಸ್ಸಿನ ಸ್ವೀಕಾರದ ಜನನೇಂದ್ರಿಯದ ಅಭಿಮಾನಿ, ಸಂತಾನ ದೇವತೆಯಾದ ದಕ್ಷಪ್ರಜಾಪತಿ.
ಹೀಗೆ ವೈಕಾರಿಕ ಅಹಂಕಾರದಿಂದ ಹತ್ತು ಇಂದ್ರಿಯಾಭಿಮಾನಿ ದೇವತೆಗಳ ಹಾಗು ಮನಸ್ಸಿನ ಸೃಷ್ಟಿಯಾಯಿತು. ಅಭಿಮಾನಿ ದೇವತೆಗಳ ಸೃಷ್ಟಿಯಾದ ನಂತರ ಅವರಿಂದ ಅಭಿಮನ್ಯಮಾನವಾದ ದಶ ಇಂದ್ರಿಯಗಳ ಸೃಷ್ಟಿ ತೈಜಸ ಅಹಂಕಾರದಿಂದಾದರೆ, ತಾಮಸ ಅಹಂಕಾರದಿಂದ ಪಂಚಭೂತಗಳ ಸೃಷ್ಟಿಯಾಯಿತು. ತೈತ್ತಿರೀಯ ಉಪನಿಷತ್ತಿನಲ್ಲಿ ಹೇಳುವಂತೆ: ಆತ್ಮನಃ ಆಕಾಶ ಸಂಭೂತಃ । ಆಕಾಶಾದ್ವಾಯುಃ । ವಾಯೋರಗ್ನಿಃ । ಅಗ್ನೇರಾಪಃ । ಆಪ್ಯಃ ಪೃಥಿವೀ । ಹೀಗೆ ಪಂಚಭೂತಗಳ ಸೃಷ್ಟಿ ಶಿವನಿಂದಾಯಿತು. ಶಿವನ ಮುಖೇನ ಪ್ರಪಂಚ ಪಂಚಮುಖವಾದುದರಿಂದ ಆತನನ್ನು “ಧ್ಯೇಯಂ ಪಂಚಮುಖೋ ರುದ್ರಃ” ಎಂದು ಸ್ತುತಿಸುತ್ತಾರೆ.
ಭಗವಂತ ಮೊದಲು ಸೃಷ್ಟಿ ಮಾಡಿರುವುದು ಭೂತಸೂಕ್ಷ್ಮವನ್ನು. ಆನಂತರ ಅದಕ್ಕೆ ಸ್ಥೂಲರೂಪ ಬಂದಿರುವುದು. ಇಲ್ಲಿ ಭೂತಸೂಕ್ಷ್ಮ ಎಂದರೆ ಅವ್ಯಕ್ತವಾದುದು(non vibratory sound). ಅದರಿಂದ ಆಕಾಶವಾಯಿತು. ಆಕಾಶದಲ್ಲಿ ಸ್ಪರ್ಶವಾಗುವಂತಹದ್ದು ಹುಟ್ಟಿತು. ಅದು ಗಾಳಿಯಾಯಿತು. ಸ್ಪರ್ಶದಿಂದ ರೂಪವೆನ್ನುವಂತಹದ್ದು ಹುಟ್ಟಿತು. ಅದು ಜ್ಯೋತಿ ಅಥವಾ ಬೆಂಕಿಯಾಯಿತು. ರೂಪದಿಂದ ರಸ ಹುಟ್ಟಿತು. ಅದೇ ನೀರಾಯಿತು. ರಸದಿಂದ ಗಂಧ ಹುಟ್ಟಿತು. ಅದೇ ಮಣ್ಣಾಯಿತು. ಹೀಗೆ ಭೂತಸೂಕ್ಷ್ಮ ಕಾರಣವಾಗಿ ಮುಂದೆ ಎಲ್ಲವೂ ಹೇಗೆ ಬೆಳೆದುಕೊಂಡು ಬಂತು ಎನ್ನುವುದನ್ನು ಮುಂದಿನ ಶ್ಲೋಕಗಳಲ್ಲಿ ಕಾಣುತ್ತೇವೆ. ಇಲ್ಲಿ “ಖಂ ಲಿಂಗಮಾತ್ಮನಃ” ಎಂದಿದ್ದಾರೆ. ಖಂ ಎಂದರೆ ಶಬ್ದ. ಆಕಾಶದ ಜೊತೆಗೆ ಭಗವಂತನನ್ನು ಪರಿಚಯಿಸುವಂತಹ ಶಬ್ದ ಹುಟ್ಟಿತು.
ಮೊದಲು ಆಕಾಶದ(ನಭಃ) ಸೃಷ್ಟಿಯಾಯಿತು. ಇಲ್ಲಿ ಆಕಾಶದ ಸೃಷ್ಟಿ ಎಂದರೆ ಅವಕಾಶದ(space) ಸೃಷ್ಟಿ ಅಲ್ಲ. ಅವಕಾಶ ಮೊದಲಿನಿಂದಲೂ ಇತ್ತು. ಅಂತಹ ಅವಕಾಶದಲ್ಲಿ ಸೃಷ್ಟಿ ಸಾಪೇಕ್ಷವಾದ ವಾತಾವರಣ ಸೃಷ್ಟಿಯಾಯಿತು. ಇದನ್ನು ಇಂದು ನಾವು ಕಣ್ಣಿಗೆ ಕಾಣದ ನೀಲವರ್ಣ (ultraviolet rays) ಎಂದು ಕರೆಯುತ್ತೇವೆ. ಇದನ್ನೇ ಆಚಾರ್ಯ ಮಧ್ವರು “ಆಕಾಶೋ ನೀಲಿಮೋ ದೇಹಿಃ” ಎಂದು ವರ್ಣಿಸಿದ್ದಾರೆ. [ಇಂದು ವೈಜ್ಞಾನಿಕವಾಗಿ ಏನನ್ನು ಹೇಳುತ್ತಿದ್ದಾರೋ, ಅದನ್ನು ಅತ್ಯಂತ ನಿಖರವಾಗಿ ವೇದದಲ್ಲಿ ಮೊದಲೇ ಹೇಳಿರುವುದನ್ನು ನಾವು ಕಾಣುತ್ತೇವೆ]. ಹೀಗೆ ಅಹಂಕಾರತತ್ತ್ವಮಾನಿನಿ ಶಿವನಿಂದ ಆಕಾಶತತ್ತ್ವದ ದೇವತೆಯಾದ ಗಣಪತಿಯ ಸೃಷ್ಟಿಯಾಯಿತು.
ಯಾವ ಕಾಲದಲ್ಲಿ ಏನು ಸೃಷ್ಟಿಯಾಗಬೇಕು ಎನ್ನುವುದು ತಿಳಿದಿರುವುದು ಕೇವಲ ಭಗವಂತನಿಗೆ ಮಾತ್ರ. ಹಾಗಾಗಿ ಆತನನ್ನು ಕಾಲಪುರುಷ ಎಂದು ಕರೆಯುತ್ತಾರೆ. ಚತುರ್ಮುಖ, ಪ್ರಕೃತಿ ಮತ್ತು ಕಾಲದ ಸಮಾವೇಶದಿಂದ ಸೃಷ್ಟಿ ಬೆಳೆದುಕೊಂಡು ಬರುತ್ತದೆ. ಅಂದರೆ ಮುಂದಿನ ಸೃಷ್ಟಿಗೆ ನಿಯತಕಾಲ ಕೂಡಿಬರಬೇಕು, ಶ್ರೀಲಕ್ಷ್ಮಿ ಅನುಗ್ರಹವಾಗಬೇಕು, ಚತುರ್ಮುಖನ ಸಹಕಾರ ಬೇಕು. ಇಷ್ಟೇ ಅಲ್ಲ, ಜೊತೆಗೆ ಭಗವಂತನ ಕೃಪಾದೃಷ್ಟಿ ಬೀಳಬೇಕು.
ಆಕಾಶದ ಸೃಷ್ಟಿಯ ನಂತರ ಮುಂದಿನ ಸೃಷ್ಟಿ ಆಗಬೇಕು ಎಂದು ಭಗವಂತ ದೃಷ್ಟಿಹಾಯಿಸಿದ. ಅವನ ಕೃಪಾದೃಷ್ಟಿ ಬೀಳುತ್ತಲೇ ಮುಂದಿನ ಸೃಷ್ಟಿಗೆ ಶ್ರೀಲಕ್ಷ್ಮಿ ಮತ್ತು ಚತುರ್ಮುಖ ಸಿದ್ಧರಾದರು.
ತಾಮಸ ಅಹಂಕಾರದಿಂದ ಅನುಗತವಾಗಿ, ಚತುರ್ಮುಖ ಮತ್ತು ಪ್ರಕೃತಿಯಿಂದ ಕಾಲಬದ್ಧವಾದ ಸಮಯದಲ್ಲಿ ಭಗವಂತನ ಅನುಗ್ರಹದಿಂದ ತಮೋಮಾನಿನಿಯಾದ ಶಿವನ ಪ್ರೇರಣೆಯಿಂದ ನಿಷ್ಪಂಧವಾದ ಆಕಾಶದಲ್ಲಿ ಕಂಪನ ಹುಟ್ಟಿ ಅದು ಸ್ಪರ್ಶ ತನ್ಮಾತ್ರಾರೂಪವಾಗಿ ಪರಿಣಮಿಸಿ ಆಮೂಲಕ ಗಾಳಿಯನ್ನು ನಿರ್ಮಿಸಿತು. ಗಾಳಿ ಬೀಸತೊಡಗಿತು. ಗಾಳಿಯಿಂದ ಜಗತ್ತಿಗೆಲ್ಲಾ ಕಣ್ಣಾದ ಬೆಳಕಿನ(ಬೆಂಕಿಯ) ಸೃಷ್ಟಿಯಾಯಿತು. ಅಂದರೆ ರೂಪ ತನ್ಮಾತ್ರೆ ಸೃಷ್ಟಿಯಾಯಿತು. ಇದರಿಂದ ಕಣ್ಣಿಂದ ಕಾಣಬಹುದಾದ ಪ್ರಪಂಚ ಸೃಷ್ಟಿಯಾಯಿತು.
ನೀರು ಸೃಷ್ಟಿಯಾಗುವ ಕಾಲ ಕೂಡಿ ಬರುತ್ತಿದ್ದಂತೆ ಭಗವಂತನ ಕೃಪಾದೃಷ್ಟಿಯಲ್ಲಿ, ಬೆಳಕಿನಿಂದ ಅನುಶಕ್ತವಾಗಿ, ಹಿಂದೆ ಸೃಷ್ಟಿಯಾಗಿರುವ ಗುಣಗಳನ್ನು ಹೊತ್ತುಕೊಂಡು ರಸ ತನ್ಮಾತ್ರೆ ಸೃಷ್ಟಿಯಾಯಿತು. ಇದರಿಂದ ಜಲ ನಿರ್ಮಾಣವಾಯಿತು. ಪ್ರಪಂಚದಲ್ಲಿ ನಾನಾ ಬಗೆಯ ‘ರುಚಿ’ ಹುಟ್ಟಿಕೊಂಡಿತು.
ತೇಜಸ್ಸಿನ ಪರಿಣಾಮವಾದ ಜಲವು ಭಗವಂತನ ಕೃಪಾದೃಷ್ಟಿಗೆ ಗೋಚರವಾಗಿ, ಪರಿಣಾಮಕಾಲ, ಚಿತ್ಪ್ರಕೃತಿ ಮತ್ತು ಚತುರ್ಮುಖರ ಪರಸ್ಪರ ಮೇಲನದಿಂದ ಗಂಧ ತನ್ಮಾತ್ರಾ ಪರಿಣಾಮವಾದ ಮಣ್ಣಿನ ಸೃಷ್ಟಿಯಾಯಿತು. ನೀರು ಹಿಮಗಲ್ಲಿನ ಬಂಡೆಯಾಗಿ, ಮಣ್ಣಾಗಿ, ಭೂಮಿಯಾಯಿತು. ಹೀಗೆ ಪಂಚಜ್ಞಾನೇಂದ್ರಿಯಗಳು, ಪಂಚಭೂತಗಳು, ಪಂಚತನ್ಮಾತ್ರೆಗಳು ಸೃಷ್ಟಿಯಾದವು.
ಇಲ್ಲಿ ಪ್ರತಿಯೊಂದು ಹಂತದಲ್ಲೂ ಒಂದನ್ನು ಹಿಂದಿನುದರ ಅನುಗತ ಎಂದು ಹೇಳಿರುವುದನ್ನು ಕಾಣುತ್ತೇವೆ. ಅಂದರೆ: ಮೊದಲು ಕೇವಲ ಶಬ್ದವಿತ್ತು. ನಂತರ ವಾಯುವಿನ ಸೃಷ್ಟಿಯಾಯಿತು. ವಾಯುವಿನಲ್ಲಿ ಶಬ್ದವೂ ಇದೆ, ಸ್ಪರ್ಶವೂ ಇದೆ. ನಂತರ ಅಗ್ನಿ. ಅಲ್ಲಿ ಶಬ್ದ-ಸ್ಪರ್ಶದ ಜೊತೆಗೆ ರೂಪವಿದ್ದರೆ, ನಂತರ ಸೃಷ್ಟಿಯಾದ ನೀರಿನಲ್ಲಿ ಶಬ್ದ-ಸ್ಪರ್ಶ-ರೂಪದ ಜೊತೆಗೆ ರಸ ಹುಟ್ಟಿಕೊಂಡಿತು. ಕೊನೆಯಲ್ಲಿ ಹುಟ್ಟಿದ ಮಣ್ಣಿನಲ್ಲಿ ಮೇಲಿನ ನಾಲ್ಕು ಗುಣಗಳ ಜೊತೆಗೆ ಗಂಧ ಸೇರಿತು. ಹೀಗೆ ಪಂಚಗುಣಗಳು ಉಪೇತವಾದ ಪ್ರಪಂಚ ಸೃಷ್ಟಿಯಾಯಿತು. [ಇನ್ನೂ ಬ್ರಹ್ಮಾಂಡ ಸೃಷ್ಟಿ ಆಗಿಲ್ಲ, ಇದು ಕೇವಲ ಮೂಲವಸ್ತುವಿನ(raw material) ಸೃಷ್ಟಿ ಎನ್ನುವುದನ್ನು ಓದುಗರು ಇಲ್ಲಿ ಗಮನದಲ್ಲಿಟ್ಟುಕೊಂಡು ಮುಂದುವರಿಯಬೇಕು].
No comments:
Post a Comment