ಷಷ್ಠೋSಧ್ಯಾಯಃ
ವಿದುರ-ಮೈತ್ರೇಯ ಸಂವಾದ: ಭಗವಂತನ ಸೃಷ್ಟಿಲೀಲೆಯ ವಿವರಣೆ
ವೇದವ್ಯಾಸರ ಸಹಪಾಠಿ ಮತ್ತು ಗೆಳೆಯನಾದ ಮೈತ್ರೇಯ, ಮಹರ್ಷಿ ವೇದವ್ಯಾಸರ ಪುತ್ರನಾದ ವಿದುರನಿಗೆ ತಾನು ಶ್ರೀಕೃಷ್ಣನಿಂದ ಪಡೆದ ಅಧ್ಯಾತ್ಮದ ಸಾರವನ್ನು ವಿವರಿಸಲು ಆರಂಭಿಸುತ್ತಾರೆ. ಪ್ರತಿಯೊಬ್ಬ ಶಾಸ್ತ್ರಕಾರನೂ ಕೂಡಾ ಮೊತ್ತಮೊದಲಿಗೆ ವಿಶ್ಲೇಷಿಸುವುದು ‘ಈ ಪ್ರಪಂಚ ಸೃಷ್ಟಿಯಾದ ಬಗೆ ಹೇಗೆ’ ಎನ್ನುವ ವಿಷಯವನ್ನು. ಕೆಲವರು ಈ ಪ್ರಪಂಚ ತನ್ನಿಂದ ತಾನೇ ಸೃಷ್ಟಿಯಾಯಿತು ಎನ್ನುತ್ತಾರೆ. ಇನ್ನು ಕೆಲವರು ಎಲ್ಲವೂ ಆಕಸ್ಮಿಕ ಎನ್ನುತ್ತಾರೆ. ಆದರೆ ನಾವು ನಮ್ಮ ಜೀವನದುದ್ದಕ್ಕೂ ಪ್ರತಿಯೊಂದು ಸಂದರ್ಭದಲ್ಲೂ ನೋಡುವಂತೆ ಯಾವುದೂ ಕೂಡಾ ತನ್ನಿಂದ ತಾನೇ ಅಥವಾ ಆಕಸ್ಮಿಕವಾಗಿ ಸೃಷ್ಟಿಯಾಗುವುದಿಲ್ಲ. ಕಾರಣವಿಲ್ಲದೇ ಕಾರ್ಯವಾಗುವುದಿಲ್ಲ.
ಪ್ರಾಚೀನ ಸಂಪ್ರದಾಯದ ಸೃಷ್ಟಿಕ್ರಮವನ್ನು ನಂಬಿದವರಿಗೂ ಕೂಡಾ ಪ್ರಪಂಚ ಸೃಷ್ಟಿಯ ಕುರಿತು ಅನೇಕ ಗೊಂದಲಗಳಿವೆ. ಕೆಲವರು ಜಗತ್ತನ್ನು ನಾರಾಯಣ ಸೃಷ್ಟಿಸಿದ ಎಂದರೆ, ಇನ್ನು ಕೆಲವರು ಚತುರ್ಮುಖನಿಂದ ಈ ಜಗತ್ತು ನಿರ್ಮಾಣವಾಯಿತು ಎನ್ನುತ್ತಾರೆ. ಇಲ್ಲಿ ಮೈತ್ರೆಯರು ಮೊತ್ತಮೊದಲಿಗೆ ಈ ವಿಷಯವನ್ನೇ ವಿವರಿಸುವುದನ್ನು ನಾವು ಕಾಣಬಹುದು.
ನಮ್ಮ ಕಣ್ಣಿಗೆ ಕಾಣುವ ಈ ಪ್ರಪಂಚ ಸೃಷ್ಟಿಯಾದುದು ಯಾವುದರಿಂದ? ಪ್ರಪಂಚ ಸೃಷ್ಟಿಗೂ ಮುನ್ನ ಏನಿತ್ತು? ಯಾವುದೋ ಮೂಲವಸ್ತುವಿನಿಂದ ಈ ಪ್ರಪಂಚ ಸೃಷ್ಟಿಯಾಯಿತೋ ಅಥವಾ ಏನೂ ಇಲ್ಲದೇ ಎಲ್ಲವೂ ಸೃಷ್ಟಿಯಾಯಿತೋ? ಐತರೇಯ ಉಪನಿಷತ್ತಿನಲ್ಲಿ ಹೇಳುವಂತೆ: ಆತ್ಮಾ ವಾ ಇದಮೇಕ ಏವಾಗ್ರ ಆಸೀತ್ | ನಾನ್ಯತ್ ಕಿಂಚನ ಮಿಷತ್ | [೧.೧.೧]. ಉಪನಿಷತ್ತಿನ ಈ ಮಾತಿನ ಅರ್ಥವೇನು? ಈ ಎಲ್ಲಾ ವಿಷಯವನ್ನು ಇಲ್ಲಿನ ಮೊದಲ ಎರಡು ಶ್ಲೋಕಗಳ ಮುಖೇನ ಮೈತ್ರೇಯ ಮಹರ್ಷಿಗಳು ವಿದುರನಿಗೆ ವಿವರಿಸಿರುವುದನ್ನು ನಾವು ಕಾಣುತ್ತೇವೆ.
ಭಗವಾನೇಕ ಆಸೇದಮಗ್ರ ಆತ್ಮಾSSತ್ಮನಾಂ ವಿಭುಃ ।
ಆತ್ಮೇಚ್ಛಾನುಗತೋ ಹ್ಯಾತ್ಮಾ ನಾನಾಶಕ್ತ್ಯುಪಲಕ್ಷಿತಃ ॥೦೧॥
‘ಭಗವಾನ್ ಏಕಃ ಆಸೇದ ಇದಮ್ ಅಗ್ರೇ’. “ಮೊದಲು ಆ ಭಗವಂತನೊಬ್ಬನೇ ಇದ್ದ” ಎನ್ನುತ್ತಾರೆ ಮೈತ್ರೆಯರು. ಆ ಭಗವಂತ ಯಾರು ಎನ್ನುವುದನ್ನು ನಾವು ಈಗಾಗಲೇ ಭಾಗವತದಲ್ಲಿ ನೋಡಿದ್ದೇವೆ. [ಬ್ರಹ್ಮೇತಿ ಪರಮಾತ್ಮೇತಿ ಭಗವಾನಿತಿ ಶಬ್ದ್ಯತೇ ೧.೨.೧೧] ಯಾರನ್ನು ವೇದದಲ್ಲಿ ಬ್ರಹ್ಮಾ, ಪರಮಾತ್ಮಾ ಎಂದು ಕರೆಯುತ್ತಾರೋ, ಅಂತಹ, ಅನೇಕ ಜೀವರುಗಳ ಸ್ವಾಮಿಯಾದ ಭಗವಂತ ಒಬ್ಬನೇ ಈ ಪ್ರಪಂಚ ಸೃಷ್ಟಿಯಾಗುವ ಮುಂಚೆ ಇದ್ದ.
ಇಲ್ಲಿ ಆತ್ಮಾ ಎನ್ನುವ ಪದ ಬಳಕೆಯಾಗಿದೆ. ಜೀವನನ್ನೂ ಆತ್ಮಾ ಎಂದು ಕರೆದರೂ ಕೂಡಾ, ಆತ್ಮಾ ಪದದ ಮುಖ್ಯ ಅರ್ಥ ಭಗವಂತ. ಯಾರು ಇಚ್ಛಿಸಿದ್ದೆಲ್ಲವನ್ನೂ ಪಡೆಯಬಲ್ಲನೋ, ಯಾರು ಸಮಸ್ತ ಶಕ್ತಿ-ಸಾಮರ್ಥ್ಯವನ್ನು ಹೊಂದಿದ್ದಾನೋ, ಅಂತಹ ಸರ್ವಸಮರ್ಥನಾದ ಭಗವಂತನೇ ಆತ್ಮಾ. “ಇಂತಹ ಎಲ್ಲಾ ಜೀವರುಗಳ ಸ್ವಾಮಿಯಾದ [ಆತ್ಮನಾಂ ವಿಭುರ್ಜೀವಾಧಿಪಃ] ಭಗವಂತ ಪ್ರಳಯಕಾಲದಲ್ಲಿ ಒಬ್ಬನೇ ಇದ್ದ”.
ಈ ಮೇಲಿನ ಮಾತು ನಮಗೆ ಗೊಂದಲವನ್ನುಂಟುಮಾಡುತ್ತದೆ. “ಎಲ್ಲ ಜೀವರುಗಳ ಸ್ವಾಮಿಯಾದ ಭಗವಂತ ಒಬ್ಬನೇ ಇದ್ದ” ಎನ್ನುವ ಮಾತಿನ ಅರ್ಥವೇನು? ಜೀವರುಗಳ ಸ್ವಾಮಿಯಾಗಬೇಕಾದರೆ ಅಲ್ಲಿ ಜೀವರುಗಳೂ ಇರಬೇಕಲ್ಲವೇ? ಈ ಗೊಂದಲವನ್ನು ಮೈತ್ರೇಯ ಮಹರ್ಷಿಗಳು ಮುಂದಿನ ಶ್ಲೋಕದಲ್ಲಿ ಬಗೆಹರಿಸಿದ್ದಾರೆ:
ಸ ವಾ ಏಷ ತದಾ ದ್ರಷ್ಟಾ ನಾಪಶ್ಯದ ವಿಶ್ವಮೇಕರಾಟ್ ।
ಮೇನೇSಸನ್ತಮಿವಾSತ್ಮಾನಂ ಸುಪ್ತಶಕ್ತಿರಸುಪ್ತದೃಕ್ ॥೦೨॥
“ಎಲ್ಲಾ ಕಾಲದಲ್ಲೂ ಎಲ್ಲವನ್ನೂ ಕಾಣಬಲ್ಲ ಭಗವಂತ, ಪ್ರಳಯಕಾಲದಲ್ಲಿದ್ದ ಜೀವಾತ್ಮರನ್ನು ‘ಇದ್ದಾರೆ’ ಎಂದು ಕಾಣಲಿಲ್ಲ” ಎಂದಿದ್ದಾರೆ ಮೈತ್ರೆಯರು. ಇದ್ದದ್ದನ್ನು ಇಲ್ಲಾ ಎಂದು ಕಂಡರೆ ಅದು ಭ್ರಮೆಯಾಗುತ್ತದಲ್ಲವೇ? ಹಾಗಿದ್ದರೆ ಈ ಮಾತಿನ ಅರ್ಥವೇನು?
ಈ ಮಾತಿನ ಒಳಾರ್ಥವನ್ನು ಪ್ರಮಾಣ ಸಹಿತ ಆಚಾರ್ಯ ಮಧ್ವರು ತಮ್ಮ ತಾತ್ಪರ್ಯ ನಿರ್ಣಯದಲ್ಲಿ ಸುಂದರವಾಗಿ ವಿವರಿಸಿರುವುದನ್ನು ನಾವು ಕಾಣುತ್ತೇವೆ. ಅಗ್ನಿ ಪುರಾಣದಲ್ಲಿ ಹೇಳಿರುವಂತೆ: ಪರಮಾತ್ಮಾ ಯತೋ ಜೀವಂ ಮೇನೇSಸನ್ತಮಶಕ್ತತಃ । ಅಸನ್ನಸೌ ತತೋ ನಿತ್ಯಂ ಸತ್ಯಜ್ಞಾನೋ ಯತೋ ಹರಿಃ’ ಪ್ರಳಯಕಾಲದಲ್ಲಿ ಸಮಸ್ತ ಜೀವಾತ್ಮರು ಯಾವ ಶಕ್ತಿಯೂ ಇಲ್ಲದೇ ನಿದ್ರಾವಸ್ಥೆಯಲ್ಲಿದ್ದರು. ಅವರಿಗೆ ಯಾವ ಪ್ರಜ್ಞೆಯೂ ಇರಲಿಲ್ಲ. ಈ ರೀತಿ ಎಚ್ಚರತಪ್ಪಿ ಮೂರ್ಛಾವಸ್ಥೆಯಲ್ಲಿದ್ದುದರಿಂದ ಅಂತಹ ಜೀವಾತ್ಮರನ್ನು ಭಗವಂತ ಇಲ್ಲವೆಂಬಂತೆ ಕಂಡ.
ನಮಗೆ ತಿಳಿದಂತೆ ಪ್ರಳಯಕಾಲದಲ್ಲಿ ಚತುರ್ಮುಖ-ಪ್ರಾಣದೇವರು ಎಚ್ಚರ ತಪ್ಪುವುದಿಲ್ಲ. [ಪ್ರಳಯೇಪಿ ಪ್ರತಿಭಾತ ಪರಾ-ವರಾಹ]. ಆದರೆ ಅವರೂ ಕೂಡಾ ನಿಷ್ಕ್ರೀಯರಾಗಿರುವುದರಿಂದ ಇದ್ದೂ ಇಲ್ಲದಂತಾಗುತ್ತಾರೆ.
ಜೀವಾತ್ಮರೇನೋ ಎಚ್ಚರದಲ್ಲಿರಲಿಲ್ಲ ಅಥವಾ ನಿಷ್ಕ್ರೀಯರಾಗಿದ್ದರು ಸರಿ, ಆದರೆ ಶ್ರೀಲಕ್ಷ್ಮಿ? ಎಂದರೆ ಮೈತ್ರೆಯರು ಹೇಳುತ್ತಾರೆ: “ಆಕೆ ಸುಪ್ತಳಾಗಿದ್ದಳು” ಎಂದು. ಶ್ರೀಲಕ್ಷ್ಮಿಯ ಸುಪ್ತಾವಸ್ಥೆ ಎಂದರೆ ಅದು ಜೀವಾತ್ಮರಂತೆ ಸಂಪೂರ್ಣ ಎಚ್ಚರ ತಪ್ಪಿರುವುದಲ್ಲ. ಬ್ರಹ್ಮತರ್ಕದಲ್ಲಿ ಹೇಳುವಂತೆ: ‘ಶಕ್ಯತ್ವಾಚ್ಛಕ್ತಯೋ ಭಾರ್ಯಾಃ ಶಕ್ತಿಃ ಸಾಮರ್ಥ್ಯಮುಚ್ಯತೇ’ ॥ ಸುಪ್ತಾವಸ್ಥೆಯಲ್ಲಿ ಆಕೆ ಕೇವಲ ಭಗವಂತನಲ್ಲಿ ಮಾತ್ರ ಆಸ್ಥೆ ಹೊಂದಿದ್ದು, ಇನ್ನ್ಯಾವುದರ ಬಗೆಗೂ ಎಚ್ಚರ/ಆಸಕ್ತಿ ಹೊಂದಿರುವುದಿಲ್ಲ. [ಆಚಾರ್ಯ ಮಧ್ವರು ತಮ್ಮ ಭಾಷ್ಯದಲ್ಲಿ ಭಾರ್ಯಾಃ(ಪತ್ನಿಯರು) ಎಂದು ಬಹುವಚನ ಪ್ರಯೋಗ ಮಾಡಿರುವುದನ್ನು ನಾವು ಕಾಣುತ್ತೇವೆ. ಇಲ್ಲಿ ಶ್ರೀಲಕ್ಷ್ಮಿ ಒಬ್ಬಳೇ ಇರುವಾಗ ಬಹುವಚನ ಪ್ರಯೋಗವೇಕೆ ಎನ್ನುವ ಪ್ರಶ್ನೆ ನಿಮ್ಮಲ್ಲಿ ಬರಬಹುದು. ಇದಕ್ಕೆ ಕಾರಣವೆಂದರೆ: ಪ್ರಳಯ ಕಾಲದಲ್ಲಿ ಶ್ರಿಲಕ್ಷ್ಮಿಯು ತನ್ನ ಶ್ರೀ-ಭೂ-ದುರ್ಗಾ ರೂಪದಲ್ಲಿ ಭಗವಂತನ ಜೊತೆಗೆ ಯೋಗ ನಿದ್ರೆಯಲ್ಲಿರುತ್ತಾಳೆ. ಇಷ್ಟೇ ಅಲ್ಲ, ವೇದದ ಒಂದೊಂದು ಮಂತ್ರಕ್ಕೂ ಅಭಿಮಾನಿಯಾಗಿರುವ ಶ್ರೀಲಕ್ಷ್ಮಿಯ ಅನಂತ ರೂಪಗಳಿವೆ. ಆ ಅನಂತ ರೂಪಗಳೊಂದಿಗೆ ಆಕೆ ಭಗವಂತನನ್ನು ನಿರಂತರ ಸ್ತೋತ್ರಮಾಡುತ್ತಿರುತ್ತಾಳೆ].
ಈ ರೀತಿ ಒಂದಕ್ಕೊಂದನ್ನು ತಳಕುಹಾಕಿ ನೋಡುತ್ತಾ ಹೋದಾಗ ಒಂದು ಅದ್ಭುತವಾದ ಸೃಷ್ಟಿಪೂರ್ವದ, ಪ್ರಳಯಕಾಲದ ಪ್ರಪಂಚ ನಮ್ಮ ಕಣ್ಣಮುಂದೆ ನಿಲ್ಲುತ್ತದೆ. ಯಾವುದೂ ಇಲ್ಲ, ಆದರೆ ಎಲ್ಲವೂ ಇದೆ. ಎಚ್ಚರವಾಗಿದ್ದಾರೆ ಆದರೂ ನಿಷ್ಕ್ರೀಯರಾಗಿದ್ದಾರೆ. ವ್ಯೋಮಸಂಹಿತದಲ್ಲಿ ಹೇಳುವಂತೆ: ‘ಸುಪ್ತಿಸ್ತು ಪ್ರಕೃತೇಃ ಪ್ರೋಕ್ತಾ ಅತೀವ ಭಗವದ್ರತಿಃ| ಅನಾಸ್ಥಾSನ್ಯತ್ರ ಚ ಪ್ರೋಕ್ತಾ ವಿಷ್ಣೋಶ್ಚಕ್ಷುರ್ನಿಮೀಲನಮ್ ॥ ಜಡ ಪ್ರಕೃತಿಯೂ ಕೂಡಾ ಪರಿಣಾಮವಿಲ್ಲದೇ ಸುಪ್ತವಾಗಿದೆ. ಕೇವಲ ಭಗವಂತ ಮಾತ್ರ ತನ್ನ ಶಕ್ತಿ ಸಾಮರ್ಥ್ಯದೊಂದಿಗೆ ಯೋಗನಿದ್ರೆಯಲ್ಲಿದ್ದಾನೆ. ಭಗವಂತನ ನಿದ್ರೆ ಎಂದರೆ ಅದು ‘ಚಿಂತಿಸುವ ಅಥವಾ ಯೋಚಿಸುತ್ತಿರುವ ಎಚ್ಚರದ ಸ್ಥಿತಿ. ಆತನಲ್ಲಿ ಮಾತ್ರ ಸಮಸ್ತ ಕಾಲದಲ್ಲಿ ಎಲ್ಲವೂ ಜಾಗೃತವಾಗಿರುತ್ತದೆ. ಇದು ಸೃಷ್ಟಿಪೂರ್ವದ ಒಂದು ಅತ್ಯದ್ಭುತ ಚಿತ್ರಣ.
ಸೃಷ್ಟಿಪೂರ್ವದ ಸ್ಥಿತಿಯನ್ನು ಒಟ್ಟಿನಲ್ಲಿ ಹೇಳಬೇಕೆಂದರೆ: ಭಗವಂತ ಕಣ್ಮುಚ್ಚಿ ತನ್ನ ಆನಂದವನ್ನು ತಾನೇ ಅನುಭವಿಸುತ್ತಿದ್ದಾನೆ. ಅಷ್ಟೇ ಅಲ್ಲ, ತನ್ನನ್ನು ಸ್ತೋತ್ರಮಾಡುತ್ತಿರುವ ಪತ್ನಿ ಲಕ್ಷ್ಮೀದೇವಿಯ ಶ್ರುತಿಗೀತೆಯನ್ನು ಕೇಳುತ್ತಾ ಅದನ್ನು ಆಸ್ವಾದಿಸುತ್ತಿದ್ದಾನೆ. ಶ್ರೀಲಕ್ಷ್ಮಿ ಪ್ರಳಯಕಾಲದ ಪ್ರಾರಂಭದಿಂದ ಕೊನೆಯತನಕ ಇತರ ಯಾವುದೇ ವಿಷಯದಲ್ಲಿ ಆಸಕ್ತಿ ತೋರದೇ, ಅಖಂಡ ವೇದಮಂತ್ರಗಳಿಂದ ಭಗವಂತನನ್ನು ಸ್ತೋತ್ರ ಮಾಡುತ್ತಿದ್ದಾಳೆ. ಬ್ರಹ್ಮ-ವಾಯುವಿಗೆ ಎಚ್ಚರವಿದೆ(ಇರವಿನ ಅರಿವಿದೆ) ಆದರೆ ಕ್ರಿಯಾತ್ಮಕವಾದ ಶರೀರವಿಲ್ಲದೆ, ಲಿಂಗಶರೀರದಲ್ಲಿ ಅವರು ನಿಷ್ಕ್ರೀಯರಾಗಿದ್ದಾರೆ. ಉಳಿದ ಸಮಸ್ತ ಜೀವಾತ್ಮರುಗಳಿಗೆ ಎಚ್ಚರವೇ ಇಲ್ಲ. ಈ ರೀತಿ ಭಗವಂತನೊಬ್ಬನೆ ಯಾವುದೇ ಜ್ಞಾನ ಲೋಪವಿಲ್ಲದೆ ಎಚ್ಚರದ ಯೋಗನಿದ್ರೆಯಲ್ಲಿದ್ದುದರಿಂದ, ಇತರ ಯಾವುದೇ ಜೀವಜಾತ ಸಕ್ರೀಯವಾಗಿಲ್ಲವಾದ್ದರಿಂದ, ಶ್ರಿಲಕ್ಷ್ಮಿಯೂ ಕೂಡಾ ಭಗವಂತನಲ್ಲಿ ಮಾತ್ರ ಆಸ್ಥೆ ಹೊಂದಿದ್ದು, ಇನ್ನ್ಯಾವುದರ ಬಗೆಗೂ ಆಸಕ್ತಿ ಹೊಂದಿಲ್ಲವಾದ್ದರಿಂದ, ಸರ್ವಸಮರ್ಥನಾದ, ಎಲ್ಲಾ ಕಾಲದಲ್ಲೂ ಎಲ್ಲವನ್ನೂ ಕಾಣಬಲ್ಲ ಭಗವಂತ, ತನ್ನನ್ನು ಬಿಟ್ಟು ಇನ್ನೇನೂ ಇಲ್ಲವೆಂಬಂತೆ ಪ್ರಪಂಚವನ್ನು ಕಂಡ ಸ್ಥಿತಿಯೇ ಸೃಷ್ಟಿಪೂರ್ವ ಸ್ಥಿತಿ.
ತತೋSಭವನ್ಮಹತ್ತತ್ತ್ವಮವ್ಯಕ್ತಾತ್ ಕಾಲಚೋದಿತಾತ್ ।
ವಿಜ್ಞಾನಾತ್ಮಾSSತ್ಮದೇಹಸ್ಥಂ ವಿಶ್ವಂ ವ್ಯಞ್ಜಂಸ್ತಮೋ ನುದನ್ ॥೦೫॥
ಪ್ರಳಯಕಾಲ ಉರುಳಿ ಸೃಷ್ಟಿ ಕಾಲ ಬರುತ್ತಿದ್ದಂತೆಯೇ ಪ್ರಪಂಚದ ಯೋಚನೆಯೇ ಇಲ್ಲದೆ ನಿರಂತರ ಭಗವಂತನನ್ನು ಸ್ತೋತ್ರಮಾಡುತ್ತಿದ್ದ ಶ್ರೀಲಕ್ಷ್ಮಿಗೆ ‘ಕಣ್ಣಿಗೆ ಕಾಣುವ ಪ್ರಪಂಚವೊಂದನ್ನು ಸೃಷ್ಟಿಮಾಡಬೇಕು’ ಎನ್ನುವ ಚಿಂತನೆ ಮೂಡಿತು. ಇದೇ ಪ್ರಪಂಚ ಸೃಷ್ಟಿಗೆ ನಾಂದಿಯಾಯಿತು. ಶ್ರೀಲಕ್ಷ್ಮಿ ಚಿಂತನೆ ಮಾಡುತ್ತಿದ್ದಂತೆಯೇ ಸರ್ವಗತನಾದ ಭಗವಂತ ಪುರುಷರೂಪಿಯಾಗಿ ನಿಂತ. ಶ್ರೀಲಕ್ಷ್ಮಿ ಸ್ತ್ರೀರೂಪ ತೊಟ್ಟು ನಿಂತಳು. ಹೀಗೆ ಸಹಜವಾದ ದಾಂಪತ್ಯಕ್ಕೆ ಬೇಕಾದ ಸ್ತ್ರೀ-ಪುರುಷ ರೂಪದಲ್ಲಿ ಲಕ್ಷ್ಮೀ-ನಾರಾಯಣರ ಸಮಾಗಮವಾಯಿತು. ಪುರುಷರೂಪಿ ಭಗವಂತ ತನ್ನ ರೇತಸ್ಸನ್ನು ಲಕ್ಷ್ಮಿಯ ಗರ್ಭದಲ್ಲಿ ಇರಿಸಿದ.
ಭಗವಂತ ಸೃಷ್ಟಿಪೂರ್ವದಲ್ಲಿ ಅನುಸರಿಸಿದ ವಿಧಾನವೇ ಇಂದು ಪ್ರಪಂಚದಲ್ಲಿರುವ ವಿಧಾನ. ಆದರೆ ಮುಂದೆ ಜನನದ ವಿಧಾನ ಮಾತ್ರ ಸೃಷ್ಟಿಯ ಆದಿಯಲ್ಲಿ ಭಿನ್ನವಾಗಿರುವುದನ್ನು ನಾವಿಲ್ಲಿ ಕಾಣುತ್ತೇವೆ. ಭಗವಂತ ಲಕ್ಷ್ಮಿಯಿಂದ ಮಹತತ್ತ್ವದ ಅಭಿಮಾನಿಯಾದ ಚತುರ್ಮುಖನನ್ನು ಸೃಷ್ಟಿ ಮಾಡಿದ. ಈ ಹಿಂದೆ ಭಾಗವತದ ಮೊದಲ ಸ್ಕಂಧದಲ್ಲಿ ವಿಶ್ಲೇಶಿಸಿದಂತೆ: ಲಕ್ಷ್ಮಿ ಚತುರ್ಮುಖನನ್ನು ತನ್ನ ಶಿರಸ್ಸಿನಿಂದ ಸೃಷ್ಟಿಸಿದಳು. [ಅಹಂ ಸುವೇ ಪಿತರಮಸ್ಯ ಮೂರ್ಧನ್ಮಮ ಯೋನಿರಪ್ಸ್ವಂತಃ ಸಮುದ್ರೇ । ತತೋ ವಿ ತಿಷ್ಠೇ ಭುವನಾನು ವಿಶ್ವೋತಾಮೂಂ ದ್ಯಾಂ ವರ್ಷ್ಮಣೋಪ ಸ್ಪೃಶಾಮಿ ॥ಋಗ್ವೇದ ೧೦-೧೨೫-೦೭ ॥]. ಈ ಸೃಷ್ಟಿಗೆ ಕಾರಣ ಎರಡು: ಅವ್ಯಕ್ತ ಮತ್ತು ಕಾಲ. ಇಲ್ಲಿ ಅವ್ಯಕ್ತ(ಶ್ರಿತತ್ತ್ವ) ಎಂದರೆ ಚಿತ್ಪ್ರಕೃತಿ ಮತ್ತು ಜಡಪ್ರಕೃತಿ. ತ್ರಿಗುಣಾತ್ಮಕವಾದ ಜಡಪ್ರಕೃತಿಯ ಸತ್ವಾಂಶದಿಂದ, ಉತ್ಪತ್ತಿಕಾಲದಲ್ಲಿ ಚತುರ್ಮುಖನ ಸೃಷ್ಟಿಯಾಯಿತು. ಉತ್ಪತ್ತಿಕಾಲ ಜಡವಾದುದರಿಂದ ಕಾಲನಾಮಕ ಭಗವಂತ ಯಾವ ಕಾಲದಲ್ಲಿ ಸೃಷ್ಟಿಯ ಮೊಟ್ಟಮೊದಲ ಜೀವ ಸೃಷ್ಟಿಯಾಗಬೇಕೋ ಆ ಕಾಲದಲ್ಲಿ, ಲಕ್ಷ್ಮಿಯ ಮೂಲಕ, ಸತ್ವಗುಣದಿಂದ ಚತುರ್ಮುಖನನ್ನು ಸೃಷ್ಟಿಸಿದ. ಲಕ್ಷ್ಮಿ ಚತುರ್ಮುಖನನ್ನು ತನ್ನ ಬೈತಲೆಯಲ್ಲಿ(ಶಿರಸ್ಸಿನಲ್ಲಿ) ಹಡೆದಳು. ಈ ರೀತಿ ಮಹತತ್ತ್ವದ ಅಭಿಮಾನಿ ದೇವತೆಯಾದ ಚತುರ್ಮುಖನ ಮತ್ತು ಮಹತತ್ತ್ವದ ಸೃಷ್ಟಿಯಾಯಿತು.
ಇಲ್ಲಿ ಮೊದಲು ನಾವು ಮಹತತ್ತ್ವ ಅಂದರೆ ಏನು ಎನ್ನುವುದನ್ನು ಸ್ಪಷ್ಟವಾಗಿ ತಿಳಿಯಬೇಕಾಗುತ್ತದೆ. “ಅಸ್ಥಿತಾ ಸ್ಥಿತಿಃ ಮಹತತ್ತ್ವಮ್” ಅಂದರೆ ಇರವಿನ ಅರಿವು ಅಥವಾ ‘ಇದೆ’ ಎನ್ನುವ ಎಚ್ಚರವೇ ಮಹತತ್ತ್ವ. ಮಹತತ್ತ್ವದ ಸೃಷ್ಟಿಯಾಯಿತು ಎಂದರೆ: ದೀರ್ಘ ನಿದ್ರೆಯಲ್ಲಿದ್ದ ಜೀವರುಗಳಿಗೆ ಇರವಿನ ಅರಿವು(ಅಸ್ಮಿ) ಬಂತು ಅಥವಾ ಜೀವಾತ್ಮರಿಗೆ ಎಚ್ಚರವಾಯಿತು ಎಂದರ್ಥ. [ನಮ್ಮ ದೇಹದಲ್ಲಿ ಮಹತತ್ತ್ವವನ್ನು ನಾವು ಚಿತ್ತ ಎಂದು ಕರೆಯುತ್ತೇವೆ]. ಭಗವಂತನ ಸೃಷ್ಟಿ ಕ್ರಿಯೆಯಲ್ಲಿ ಇನ್ನೂ ಸ್ಥೂಲವಾಗಿ ಯಾವುದೂ ಸೃಷ್ಟಿಯಾಗಿಲ್ಲ. ಚತುರ್ಮುಖನ ಸೃಷ್ಟಿ ಎನ್ನುವುದು ಸೃಷ್ಟಿ ಪ್ರಕ್ರಿಯೆಯ ಅತ್ಯಂತ ಸೂಕ್ಷ್ಮಾತಿ ಸೂಕ್ಷ್ಮ ಸ್ಥಿತಿ. [ಚತುರ್ಮುಖನಿಗೆ ಅನೇಕ ಹುಟ್ಟಿದೆ. ಮೊದಲು ಶ್ರೀಲಕ್ಷ್ಮಿಯ ಶಿರಸ್ಸಿನಲ್ಲಿ ಸೂಕ್ಷ್ಮರೂಪದಲ್ಲಿ ಹುಟ್ಟುದ ಆತ ನಂತರ ಭಗವಂತನ ನಾಭಿಯಲ್ಲಿ. ಸ್ಥೂಲರೂಪದಲ್ಲಿ ಹುಟ್ಟಲಿಕ್ಕಿದ್ದಾನೆ. ಹೀಗೆ ಯಾವ ರೀತಿ ಸೃಷ್ಟಿ ಬೆಳೆಯುತ್ತದೆ ಎನ್ನುವುದನ್ನು ಮುಂದೆ ನೋಡೋಣ].
No comments:
Post a Comment