Monday, January 27, 2025

Shrimad BhAgavata in Kannada -Skandha-03-Ch-07_03

 ಮುಖತೋsವರ್ತತ ಬ್ರಹ್ಮ ಪುರುಷಸ್ಯ ಕುರೂದ್ವಹ ।

ಯತ್ರೋನ್ಮುಖತ್ವಾದ್  ವರ್ಣಾನಾಂ ಮುಖ್ಯೋSಭೂದ್ ಬ್ರಾಹ್ಮಣೋ  ಗುರುಃ ॥೩೦॥ 


ಬಾಹುಭ್ಯೋSವರ್ತತ ಕ್ಷತ್ರಂ ಕ್ಷತ್ರಿಯಸ್ತಮನುವ್ರತಃ  ।

ಯೋ ಜಾತಸ್ತ್ರಾಯತೇ ವರ್ಣಾನ್ ಪುರುಷಾನ್ ಕಣ್ಠಕಕ್ಷತಾನ್    ॥೩೧॥ 


ವಿಶೋSವರ್ತನ್ತ  ತಸ್ಯೋರ್ವೋರ್ಲೋಕವೃತ್ತಿಕರೀರ್ವಿಭೋಃ ।

ವೈಶ್ಯಸ್ತದುದ್ಭವೋ ವಾರ್ತಾ೦ ನೃಣಾಂ ಯಃ ಸಮವರ್ತಯತ್  ॥೩೨॥


ಪದ್ಭಾಂ ಭಗವತೋ ಜಜ್ಞೇ ಶುಶ್ರೂಷಾ ಕರ್ಮಸಿದ್ಧಯೇ  । 

ತಸ್ಯಾಂ ಜಾತಃ ಪುರಾ ಶೂದ್ರೋ ಯದ್‌ವೃತ್ತ್ಯಾ ತುಷ್ಯತೇ ಹರಿಃ  ॥೩೩॥


ಯಾವರೀತಿ ಭಗವಂತ ನಾಲ್ಕು ವರ್ಣಗಳನ್ನು ಮುಖ, ಬಾಹು, ತೊಡೆ ಮತ್ತು ಪಾದದಿಂದ ಸೃಷ್ಟಿಸಿದ ಎನ್ನುವುದನ್ನು ಮೇಲಿನ ಶ್ಲೋಕದಲ್ಲಿ ವಿವರಿಸಲಾಗಿದೆ.  ಆಚಾರ್ಯರು ಷಾಡ್ಗುಣ್ಯವೆಂಬ ಗ್ರಂಥದ ಪ್ರಮಾಣದೊಂದಿಗೆ ಇದರ ತಾತ್ಪರ್ಯವನ್ನು ನೀಡಿದ್ದಾರೆ. 


“ ಬ್ರಹ್ಮಾಭಿಮಾನೀ ತು  ಭೃಗುರಜನಿ ಬ್ರಹ್ಮಣೋ ಮುಖಾತ್ । ಕ್ಷತ್ರಾಭಿಮಾನೀ ತು  ಮನುರ್ಬ್ರಹ್ಮಬಾಹ್ವೋರಜಾಯತ । ಊರ್ವೋರ್ವಿಡಭಿಮಾನೀ ಚ ವಾಸ್ತುಃ ಪಾದಾತ್ ಕೃತಿಸ್ತಥಾ  । ಏತೇ ಪೂರ್ವಂ  ಹರೇರ್ಜಾತಾ ಬ್ರಹ್ಮಣಸ್ತದನನ್ತರಮ್ । ಏವಂ ರುದ್ರಾಚ್ಚ ವಾಯೋಶ್ಚ ತದನ್ತಸ್ಥಹರೇರ್ಯತಃ ”  ಇತಿ  ಷಾಡ್ಗುಣ್ಯೇ ॥*॥


ಭಗವಂತನ ಮುಖದಿಂದ ಬ್ರಾಹ್ಮಣ ಸ್ವಭಾವವನ್ನು ಪ್ರತಿನಿಧಿಸುವ ಭೃಗು ಮಹರ್ಷಿಯ ಸೃಷ್ಟಿಯಾಯಿತು. (ಮುಂದೆ ಚತುರ್ಮುಖನ ಮುಖದಿಂದ, ರುದ್ರದೇವರ ಮುಖದಿಂದ, ಪುನಃ ಸೃಷ್ಟಿ ಇದೆ. ಇಲ್ಲಿ ನಾವು ನೋಡುತ್ತಿರುವುದು ಭಗವಂತನ ಸೃಷ್ಟಿಯ ಅನುಸಂಧಾನ). ಭೃಗು ಮಹರ್ಷಿಗಳಿಂದ ಬ್ರಾಹ್ಮಣ ವರ್ಣದ (ಬ್ರಾಹ್ಮಣ ಸ್ವಭಾವದ) ಜನಾಂಗ ಬೆಳೆದು ಬಂತು. (ಸಪ್ತರ್ಷಿಗಳ ಜೊತೆಗೆ  ಸೃಷ್ಟರಾದ ಭೃಗು ಮಹರ್ಷಿಗಳು ಮೂಲತಃ ಸೃಷ್ಟಿಯ ಆದಿ-ಬ್ರಾಹ್ಮಣ. ಹೀಗಾಗಿ ಎಲ್ಲಾ ಬ್ರಾಹ್ಮಣ ವರ್ಣದವರೂ ಒಂದು ರೀತಿಯಲ್ಲಿ ಭಾರ್ಗವ ಗೋತ್ರದವರು! ಇನ್ನೊಂದು ವಿಶೇಷವೆಂದರೆ ಭಾಗವತದಲ್ಲೇ ಮುಂದೆ ಹೇಳುವಂತೆ, ಭೃಗು ಮಹರ್ಷಿಗಳು ದೇವತೆಗಳಲ್ಲಿ ಯಾರು ಶ್ರೇಷ್ಠ ಎನ್ನುವ ಪರೀಕ್ಷೆಯನ್ನು ಮಾಡಿ, ಋಷಿಗಳಿಗೆ ‘ಸರ್ವಶ್ರೇಷ್ಠ ದೇವತೆ ನಾರಾಯಣ’  ಎನ್ನುವುದನ್ನು ತೋರಿಸುತ್ತಾರೆ. ಹೀಗಾಗಿ ನಾರಾಯಣ ಉಪಾಸನೆ ಭಾರ್ಗವ ಗೋತ್ರದವರ ಸ್ವಭಾವ ಕೂಡಾ ಹೌದು).

ಹೀಗೆ ಒಂದು ಸ್ವಭಾವದ ಜನರು ಭಗವಂತನ  ಮುಖದಿಂದ ಸೃಷ್ಟರಾದರು. ಆ ಬ್ರಹ್ಮ ಸ್ವಭಾವದ ಚಿಂತನೆಯೇ ಮುಖದ ಚಿಂತನೆ. ಜ್ಞಾನಕ್ಕೆ ಬೇಕಾಗಿರುವ ಐದು ಇಂದ್ರಿಯಗಳಿರುವುದು ಮುಖದಲ್ಲಿ. ಕಣ್ಣಿನಿಂದ ನೋಡಿ ತಿಳಿಯುತ್ತೇವೆ, ಕಣ್ಣು ನೋಡಲಾಗದ್ದನ್ನು ಕಿವಿಯಿಂದ ಕೇಳಿ ತಿಳಿಯುತ್ತೇವೆ, ಮಾತಿನಿಂದ ಜ್ಞಾನ ಹರಿಯುತ್ತದೆ, ಮೂಗು(ಉಸಿರಾಟ) ಸಮಸ್ತ ಇಂದ್ರಿಯಗಳನ್ನು ಚುರುಕುಗೊಳಿಸುವ ಪ್ರಾಣಶಕ್ತಿ. ಮನಸ್ಸು ಈ ಎಲ್ಲವನ್ನೂ ಗ್ರಹಿಸುವ ಇಂದ್ರಿಯ.

ಎರಡನೇ ಸ್ವಭಾವ ಕ್ಷತ್ತ್ರ-ಸ್ವಭಾವ. ಇನ್ನೊಬ್ಬರ ರಕ್ಷಣೆಗಾಗಿ ತಮ್ಮ ಬಲಿದಾನ ಕೊಡುವ ಸ್ವಭಾವ ಈ ವರ್ಣದವರದ್ದು. ಇಂತಹ ವರ್ಣವನ್ನು ಪ್ರತಿನಿಧಿಸತಕ್ಕ ಸ್ವಾಯಂಭುವ ಮನು ಭಗವಂತನ ತೋಳಿನಿಂದ ಸೃಷ್ಟನಾದ. ಎಲ್ಲಾ ವರ್ಣದವರ ರಕ್ಷಣೆ ಕ್ಷತ್ರಿಯರ ಕರ್ತವ್ಯ.

ಭಗವಂತನ ತೊಡೆಯಿಂದ ವೈಶ್ಯ-ವರ್ಣವನ್ನು ಪ್ರತಿನಿಧಿಸುವ ವಾಸ್ತುದೇವನ ಸೃಷ್ಟಿಯಾಯಿತು. ಊರಿಂದ ಊರಿಗೆ ಹೋಗಿ ಆಹಾರವನ್ನು ಬೆಳೆದು ಸರಬರಾಜು ಮಾಡುವುದು ಈ ವರ್ಣದವರ ವಿಶೇಷತೆ. ತೋಟಗಾರಿಕೆ, ಹೈನು, ವ್ಯಾಪಾರ, ಇತ್ಯಾದಿ ಇವರ ಮೂಲ ಕಸುಬು.

ಇಡೀ ದೇಹವನ್ನು ಹೇಗೆ ಕಾಲು ಧಾರಣೆ ಮಾಡುತ್ತದೋ ಹಾಗೇ, ಇಡೀ  ಸಮಾಜವನ್ನು ಧಾರಣೆ ಮಾಡುವ ವರ್ಣ ಶೂದ್ರವರ್ಣ. ಶುಶ್ರೂಷೆ ಇವರ ಸ್ವಭಾವ. ಇಂತಹ ವರ್ಣದ ಮೂಲಪುರುಷನಾದ ಕೃತಿದೇವ ಭಗವಂತನ ಪಾದದಿಂದ ಸೃಷ್ಟಿಯಾದನು. ಶೂದ್ರಧರ್ಮ ಭಗವಂತನಿಗೆ ಅತ್ಯಂತ ಪ್ರಿಯವಾದ ಧರ್ಮ. ಎಲ್ಲರಲ್ಲೂ ಎಲ್ಲಾ ವರ್ಣವಿರುತ್ತದೆ.  ಯಾರಲ್ಲಿ ಮೂಲವರ್ಣದ ಅಂಶ ಹೆಚ್ಚು ಇರುತ್ತದೋ ಅವನು ಆ ವರ್ಣಕ್ಕೆ ಸೇರುತ್ತಾನೆ ಅಷ್ಟೇ.

[ಸ್ವಭಾವಧರ್ಮವನ್ನೇ ನಾವು ನಮ್ಮ ಸ್ವಧರ್ಮವನ್ನಾಗಿ ಇಟ್ಟುಕೊಳ್ಳಬೇಕು. ಆದರೆ ಅದಕ್ಕಾಗಿ ನಾವು ನಮ್ಮ  ಜೀವಸ್ವಭಾವವನ್ನು ಗುರುತಿಸಿಕೊಳ್ಳಬೇಕು.  ಜೀವ ಮೊದಲು ತನ್ನ ತುಡಿತ ಯಾವುದು ಎನ್ನುವುದನ್ನು ಗುರುತಿಸಿಕೊಳ್ಳಬೇಕು. ಅದು ಸುಮಾರಾಗಿ ಸ್ವಧರ್ಮವನ್ನು ಗುರುತಿಸಲು ಸಹಾಯಮಾಡುತ್ತದೆ.  ಸ್ವಧರ್ಮಕ್ಕೆ ಎರಡು ಮುಚ್ಚಳಗಳು. ೧. ಸಮಾಜದ ಪ್ರಭಾವ(Environmental force) ಹಾಗೂ ೨. ಆನುವಂಶಿಕ ಪ್ರಭಾವ(Genetic force).  ಇವೆರಡರ ಮಧ್ಯೆ ನಿಜ ಸ್ವಭಾವ ಮುಚ್ಚಿಹೋಗಿರುತ್ತದೆ.  ಹಾಗಾಗಿ ನಾವು ಪ್ರಭಾವವನ್ನೇ ಸ್ವಭಾವವಾಗಿ ಕಾಣುವ ಅಪಾಯ ಹೆಚ್ಚು.  ಸ್ವಧರ್ಮ ಎಂದರೆ ಸ್ವತಂತ್ರವಾದ ಭಗವಂತನ ಅರಿವಿಗೆ ಪೂರಕವಾದ ಧರ್ಮ. ಹಾಗಾಗಿ ಭಗವಂತನ ನೆನಪು ತರುವ ಧರ್ಮ ಸ್ವಧರ್ಮ ಹಾಗೂ ಭಗವಂತನನ್ನು ಮರೆಸುವ ಧರ್ಮ ಪರಧರ್ಮ.  ಹೀಗಾಗಿ ನಮ್ಮ ಮೂಲ ಜೀವಸ್ವಭಾವವನ್ನು ತಿಳಿದುಕೊಳ್ಳಲು ನಾವು ಪದೇಪದೇ ನಮ್ಮನ್ನು ಪರೀಕ್ಷಿಸಿಕೊಳ್ಳಬೇಕು. ಆತ್ಮಸಾಕ್ಷಾತ್ಕಾರವಾದಾಗ ನಮಗೆ ನಮ್ಮ ಮೂಲಸ್ವಭಾವದ ಪೂರ್ಣ ಅರಿವು ಬರುತ್ತದೆ]


ಏತತ್ ಕ್ಷತ್ತರ್ಭರ್ಭಗವತೋ ದೈವಕರ್ಮಾತ್ಮರೂಪಿಣಃ

 ಕಃ ಶ್ರದ್ದಧ್ಯಾದುದಾಹರ್ತುಂ  ಯೋಗಮಾಯಾಬಲೋದಯಮ್  ॥೩೩॥


“ಅಧಿಕತ್ವಾದ್ ದೇವಶಬ್ದಾ ದೇವಾಸ್ತೇಷ್ವಧಿಕೋ ಯತಃ  । ದೈವಂ ಹರಿಃ ಕರ್ಮ ಮೂಲಂ ಕೃತಿರಿತ್ಯೇವ ಭಣ್ಯತೇ  । ವ್ಯಾಪ್ತತ್ವಾದಾತ್ಮಶಬ್ದಶ್ಚ  ಶ್ರೀಪತಿತ್ವಾಚ್ಚ ಮಾಧವಃ”  ಇತಿ ಚ  ॥ * ॥


ವೇದವ್ಯಾಸರ ಗೆಳೆಯರೂ, ಸಹಪಾಠಿಯೂ ಆಗಿರುವ ಮೈತ್ರೆಯರು ವಿದುರನನ್ನು ಇಲ್ಲಿ ಕ್ಷತ್ತಃ ಎಂದು ಸಂಬೋಧಿಸುವುದನ್ನು ಕಾಣುತ್ತೇವೆ. ಈ ಹಿಂದೆ ಹೇಳಿದಂತೆ ಕ್ಷತ್ತಃ ಎನ್ನುವ ಪದ ಸಾಮಾಜಿಕವಾಗಿ ‘ದಾಸಿಯ ಮಗ’ ಎನ್ನುವ ಅರ್ಥದಲ್ಲಿ ಬಳಕೆಯಲ್ಲಿದ್ದರೂ ಕೂಡಾ,  ಇಲ್ಲಿ ಅದನ್ನು ‘ಕ್ಷತ’ ಧಾತುವಿನ ಅರ್ಥದಲ್ಲಿ  ‘ಶಾಸ್ತ್ರದ ರಹಸ್ಯವನ್ನು ತಿಳಿಯಲು ಸಮರ್ಥ’ ಎನ್ನುವ ಧ್ವನಿಯಲ್ಲಿ  ಹೇಳಿರುವುದನ್ನು ಕಾಣುತ್ತೇವೆ.

ಈ ಹಿಂದೆ ಹೇಳಿದಂತೆ ‘ದೈವ’ ಎಂದರೆ ಸರ್ವೋತ್ತಮ ದೇವತೆಯಾದ ಭಗವಂತ.  ಅಂತಹ ಭಗವಂತನಿಂದಲೇ ಜಗತ್ತಿನ ಸಮಸ್ತ ಕರ್ಮ ನಡೆಯುತ್ತದೆ. ಅವನು ನಮ್ಮ ಒಳಗೂ-ಹೊರಗೂ ತುಂಬಿ ಎಲ್ಲವನ್ನೂ ಮಾಡಿಸುತ್ತಾನೆ. ಅವನಿಲ್ಲದೇ ಕರ್ಮವಿಲ್ಲ. ಅವನು ಸರ್ವೋತ್ತಮ, ಸರ್ವಕರ್ತ, ಸರ್ವತ್ರವ್ಯಾಪ್ತ.  

ಇಲ್ಲಿ ‘ಮಾಯಾ’ ಎನ್ನುವ ಪದ ಬಳಕೆಯಾಗಿದೆ.   ನಾವು ಸಾಮಾನ್ಯವಾಗಿ ಮಾಯಾ ಎಂದರೆ  ಮಯನಿಗೆ ಸಂಬಂಧಿಸಿದ  ಇಂದ್ರಜಾಲ  ಅಥವಾ ಕಣ್ಕಟ್ಟು ವಿದ್ಯೆ   ಎಂದುಕೊಳ್ಳುತ್ತೇವೆ. ಆದರೆ  ವೇದಕಾಲದಿಂದಲೂ ಬಳಕೆಯಲ್ಲಿರುವ  ಮಾಯಾ ಎನ್ನುವ ಪದಕ್ಕೆ  ಜ್ಞಾನ, ಇಚ್ಛೆ,  ಮಹಿಮೆ, ಪ್ರಧಾನ,  ಇತ್ಯಾದಿ  ಅರ್ಥಗಳಿವೆ.   ಭಗವಂತನಿಂದ  ವಿಯೋಗ ಇಲ್ಲದ್ದು ಯೋಗಮಾಯೆ. ಭಗವಂತನ ಸ್ವರೂಪಭೂತವಾದ ಮಹಿಮೆ ಯೋಗಮಾಯೆ. ‘ಇಂತಹ ಭಗವಂತನನ್ನು ಕುರಿತು ಹೇಳುವ ಧೈರ್ಯ ಯಾರಿಗಿದೆ’ ಎಂದು ಪ್ರಶ್ನಿಸುತ್ತಾರೆ ಮೈತ್ರೆಯರು. [ಭಗವಂತನ ಕುರಿತು ಪೂರ್ತಿಯಾಗಿ ಯಾರಿಂದಲೂ ಹೇಳಲು ಸಾಧ್ಯವಿಲ್ಲ, ನಾನು ಭಗವಂತನ ಕುರಿತಾದ ಕಿಂಚಿತ್ ವಿಷಯವನ್ನು ನಿನಗೆ ಹೇಳಲು ಪ್ರಯತ್ನಿಸುವೆ ಎನ್ನುವ ಧ್ವನಿ ಇದಾಗಿದೆ].


ಅಹೋ ಭಗವತೋ ಮಾಯಾ  ಮಾಯಿನಾಮಪಿ ಮೋಹಿನೀ

 ಯತ್ ಸ್ವಯಂ ಚಾssತ್ಮವರ್ತ್ಮಾssತ್ಮಾ ನ ವೇದ ಕಿಮುತಾಪರೇ ॥೩೯॥


 ಯತೋಽಪ್ರಾಪ್ಯ ನಿವರ್ತನ್ತೇ ವಾಚಶ್ಚ ಮನಸಾ ಸಹ

 ಅಹಂ ಚಾನ್ಯ ಇಮೇ ದೇವಾಸ್ತಸ್ಮೈ ಭಗವತೇ ನಮಃ ॥೪೦॥

 

‘ಆತ್ಮಾ ನ ವೇದ ಬ್ರಹ್ಮಾ  ।  ಅಹಂ ರುದ್ರಃ :-

“ಗುಣಪೂರ್ತೇರಾತ್ಮಶಬ್ದೋ  ಬ್ರಹ್ಮಾSಹೀನತ್ವತೋ ಹರಃ ।  ಅಹಂಶಬ್ದಸ್ತಥಾSಪ್ಯೇತೌ ನ ಜಾನೀತೋ  ಹರಿಂ ಪರಮ್” ಇತಿ ಬ್ರಾಹ್ಮೇ । 

ಭಗವತೋ ಮಾಯಾಂ ಮಹಿಮಾನಮ್  । 

“ಮಾಯಾ ತು ಮಹಿಮಾ ಪ್ರೋಕ್ತಾ ಪ್ರಾಚುರ್ಯೇ ತು ಮಯಡ್ ಯತಃ” ಇತಿ ಪಾದ್ಮೇ ।

ಆತ್ಮವರ್ತ್ಮಾ ಪರಮಾತ್ಮಗತಿಃ ॥*॥


ಭಗವಂತನ  ಮಹಿಮೆ ಎನ್ನುವುದು ಹೇಳಲಸಾಧ್ಯವಾದ ವಿಸ್ಮಯ.   ಜೀವೋತ್ತಮನಾದ, ಭಗವಂತನ ಮೊದಲ ಮಗ ಚತುರ್ಮುಖ  ಬ್ರಹ್ಮನಿಗೂ(ಮುಖ್ಯಪ್ರಾಣನಿಗೂ) ಕೂಡಾ ಭಗವಂತನ ಮಹಿಮೆ ದಿಗ್ಭ್ರಮೆಗೊಳಿಸುವಂತಹದ್ದು. ಭಗವಂತನ ಪೂರ್ಣ ಮಹಿಮೆ ಶ್ರೇಷ್ಠರಾದ ಆದಿಜೀವರಿಗೇ ಪೂರ್ಣವಾಗಿ ತಿಳಿದಿಲ್ಲ. ವೇದಗಳಿಂದ ಸದಾ ಭಗವಂತನನ್ನು ಸ್ತೋತ್ರಮಾಡುವ ವಾಗ್ದೇವತೆಗಳಾದ ಸರಸ್ವತಿ-ಭಾರತೀಯರೂ  ಭಗವಂತನನ್ನು ಅರಿಯಲಾಗದೇ ಮರಳಿ ಬಂದವರು.

ಸರಸ್ವತಿ -ಭಾರತೀಯರ ನಂತರ ಬರುವವರು ಗರುಡ-ಶೇಷ-ರುದ್ರರು. ವೇದದ ಮನನಕ್ಕೆ ದೇವತೆ ಗರುಡನಾದರೆ, ಪೌರುಷೇಯ ಗ್ರಂಥಗಳಿಗೆ ಶೇಷ ಅಭಿಮಾನಿ. ಗರುಡ ಭಗವಂತನ ವಾಹನನಾದರೆ ಶೇಷ ಭಗವಂತನ ಹಾಸಿಗೆ. ಜೊತೆಗೆ ಅಹಂ-ತತ್ತ್ವದ ದೇವತೆ ರುದ್ರ. ಇವರೆಲ್ಲರೂ ಕೂಡಾ ಭಗವಂತನ ಮಹಿಮೆಯನ್ನು ಪೂರ್ಣವಾಗಿ ತಿಳಿಯಲಾಗದೇ ಮರಳಿ ಬಂದವರು. ಹೀಗಿರುವಾಗ ಉಳಿದ ದೇವತೆಗಳ ಪಾಡೇನು? ಅದಕ್ಕಾಗಿ ‘ನಮಗೆ ಅರ್ಥವಾಗದ ಆ ಭಗವಂತನಿಗೆ ನಮಸ್ಕಾರ’ ಎಂದಷ್ಟೇ ನಾವು ಹೇಳಬಹುದು. ಯಾವುದೂ ನನ್ನದಲ್ಲ, ಎಲ್ಲವೂ ನಿನ್ನದೇ ಎನ್ನುವ ಸತ್ಯವನ್ನು ಅರಿತು, ಸದಾ ಭಗವಂತನಲ್ಲಿ ತನ್ನನ್ನು ಅರ್ಪಿಸಿಕೊಂಡು ಬದುಕುವುದಷ್ಟೇ ನಮಗಿರುವ ಮಾರ್ಗ. 


‘ಈರೀತಿ ಜಗತ್ತನ್ನು ಸೃಷ್ಟಿಮಾಡಿದ, ಅರಿಯಲಾಗದ ಮಹಿಮೆಯುಳ್ಳ ಭಗವಂತನಿಗೆ ನಮಸ್ಕಾರ’ ಎನ್ನುತ್ತಾರೆ ಮೈತ್ರೇಯರು.



॥ ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ತೃತೀಯಸ್ಕಂಧೇ ಷಷ್ಠೋSಧ್ಯಾಯಃ ॥

ಭಾಗವತ ಮಹಾಪುರಾಣದ ಮೂರನೇ  ಸ್ಕಂಧದ ಏಳನೇ ಅಧ್ಯಾಯ ಮುಗಿಯಿತು

*********


No comments:

Post a Comment