Thursday, January 23, 2025

Shrimad BhAgavata in Kannada -Skandha-03-Ch-06_03

 ಏತೇ ದೇವಾಃ ಕಲಾ ವಿಷ್ಣೋಃ ಕಾಲಮಾಯಾಂಶಲಿಙ್ಗಿನಃ ।

ನಾನಾತ್ವಾತ್ ಸ್ವಕ್ರಿಯಾನೀಶಾಃ ಪ್ರೋಚುಃ ಪ್ರಾಞ್ಜಲಯೋ ವಿಭುಮ್ ॥೧೫॥


ಈ ಅಧ್ಯಾಯದಲ್ಲಿ ಇಲ್ಲಿಯ ತನಕ ಅನೇಕ ತತ್ತ್ವಗಳ ಸೃಷ್ಟಿಯ ಕುರಿತಾದ ವಿವರಣೆಯನ್ನು ನೋಡಿದೆವು. ಆದರೆ ಈ ಮೇಲಿನ ಶ್ಲೋಕದಲ್ಲಿ ಬಹಳ ಸ್ಪಷ್ಟವಾಗಿ ಹೇಳುತ್ತಾರೆ: “ಯಾವುದೇ ತತ್ತ್ವದ ಸೃಷ್ಟಿ ಬರೀ ತತ್ತ್ವದ ಸೃಷ್ಟಿಯಲ್ಲ, ಅದು ಅದರ ಅಭಿಮಾನಿ ದೇವತೆಗಳ ಸೃಷ್ಟಿ” ಎಂದು. ಈ ಹಿಂದೆ ಹೇಳಿದಂತೆ: ಮಹತತ್ತ್ವದ ದೇವತೆ ಚತುರ್ಮುಖ, ಅಹಂಕಾರ ತತ್ತ್ವದ ದೇವತೆ ಶಿವ. ಆನಂತರ ಹತ್ತು ಇಂದ್ರಿಯಾಭಿಮಾನಿ ದೇವತೆಗಳು, ಪಂಚಭೂತಗಳ ದೇವತೆಗಳು, ಪಂಚ ತನ್ಮಾತ್ರೆಗಳ ದೇವತೆಗಳು. ಹೀಗೆ ಇದು ಮುಂದುವರಿಯುತ್ತದೆ.

ನಮಗೆ ತಿಳಿದಂತೆ ಪಂಚಭೂತಗಳು ಅಭಿಮಾನಿ ದೇವತೆಗಳ ಹಾಗು ಅವರಿಂದ ಅಭಿಮನ್ಯಮಾನವಾದ ಪಂಚಭೂತಗಳ ಸೃಷ್ಟಿ ಈಗಾಗಲೇ ಆಗಿದೆ. ಆದರೆ ಈ ಪಂಚಭೂತಗಳು ಇಂದು ನಾವು ಕಾಣುವ ಪಂಚಭೂತದಂತೆ ಸೃಷ್ಟಿಯಾಗಿಲ್ಲ. ಏಕೆಂದರೆ ಇಂದು ನಾವು ಕಾಣುವ ಮಣ್ಣು, ನೀರು, ಬೆಂಕಿ ಶುದ್ಧವಾದುದಲ್ಲ. ಅದು  ಮಣ್ಣು-ನೀರು-ಬೆಂಕಿಯ ಮಿಶ್ರಣ. ಆದರೆ ಸೃಷ್ಟಿಯ ಈ ಘಟ್ಟದಲ್ಲಿ ಪರಿಶುದ್ಧ ಪಂಚಭೂತಗಳು ಮಾತ್ರ ಸೃಷ್ಟಿಯಾಗಿವೆ. ಅವು ಇನ್ನೂ ಮಿಶ್ರವಾಗಿಲ್ಲ. 

ಈವರೆಗೆ ಸೃಷ್ಟಿಯಾಗಿರುವ ಎಲ್ಲಾ ತತ್ತ್ವಗಳ ಅಭಿಮಾನಿ ದೇವತೆಗಳನ್ನು ಇಲ್ಲಿ ‘ಭಗವಂತನ ಕಲೆಗಳು’ ಎಂದು ಕರೆದಿದ್ದಾರೆ. ಭಗವಂತನ ಕಲೆಗಳು ಎಂದರೆ ಏನು ಎನ್ನುವ ವಿವರಣೆಯನ್ನು ನಾವು ಪ್ರಶ್ನೋಪನಿಷತ್ತಿನಲ್ಲಿ ಕಾಣುತ್ತೇವೆ. “ಪ್ರಾಣಾಚ್ಛ್ರದ್ಧಾಂ ಖಂ ವಾಯುರ್ಜ್ಯೋತಿರಾಪಃ ಪೃಥಿವೀಂದ್ರಿಯಂ ಮನೋSನ್ನಮನ್ನಾದ್ ವೀರ್ಯಂ ತಪೋ ಮಂತ್ರಾಃ ಕರ್ಮ ಲೋಕಾ ಲೋಕೇಷು ನಾಮ ಚ ॥೬-೪॥  ಭಗವಂತನ ಅಧೀನವಾಗಿರುವ ಹದಿನಾರು ದೇವತೆಗಳೇ ಆ ಹದಿನಾರು  ಕಲೆಗಳು. “ಈ ಎಲ್ಲಾ ದೇವತೆಗಳು ಕಾಲಾಧೀನವಾಗಿ ದೇಹವನ್ನು ಪಡೆದರು” ಎಂದಿದ್ದಾರೆ ಮೈತ್ರೇಯರು. ಇಲ್ಲಿ ‘ಕಾಲ’ ಎಂದರೆ ಸಹಜವಾಗಿ ಸರ್ವಸಂಹಾರಕನಾದ ಭಗವಂತ ಎಂದರ್ಥ. ಇದಲ್ಲದೆ ಕಾಲಾಭಿಮಾನಿಯಾದ ಚತುರ್ಮುಖನೂ ಕಾಲ ಶಬ್ದವಾಚ್ಯ. ಏಕೆಂದರೆ ಯಾರು ಎಂದು ಹುಟ್ಟಬೇಕು ಎನ್ನುವ ವ್ಯವಸ್ಥೆಯ ಜವಾಬ್ದಾರಿಯನ್ನು ಭಗವಂತ ಚತುರ್ಮುಖನಿಗೆ ನೀಡಿದ್ದಾನೆ. ಹಾಗಾಗಿ ಚತುರ್ಮುಖ ಒಂದು ರೂಪದಲ್ಲಿ ಕಾಲ ನಿಯಾಮಕ. ಇನ್ನು ಕಾಲ ಶಬ್ದದ ಪ್ರಸಿದ್ಧವಾದ ಅರ್ಥ ಲಕ್ಷ್ಮೀದೇವಿ. ಭಗವಂತನ ಕೈಯಲ್ಲಿರುವ ಲಕ್ಷ್ಮೀಸ್ವರೂಪವಾಗಿರುವ ಸುದರ್ಶನ ಚಕ್ರವನ್ನು ಶ್ರೀಚಕ್ರ ಅಥವಾ ಕಾಲ ಎಂದು ಕರೆಯುತ್ತಾರೆ. ಹೀಗಾಗಿ ಕಾಲ ಎಂದರೆ ಚಿತ್ಪ್ರಕೃತಿ. ಒಟ್ಟಿನಲ್ಲಿ ಹೇಳಬೇಕೆಂದರೆ ಚತುರ್ಮುಖನ ಎರಡು ರೂಪಗಳು(ಕಾಲಾಭಿಮಾನಿ ಹಾಗು ಜೀವಾಭಿಮಾನಿ) ಮತ್ತು ಪ್ರಕೃತಿ ಅಭಿಮಾನಿನಿಯಾದ ಶ್ರೀಲಕ್ಷ್ಮಿ (ಚಿತ್ಪ್ರಕೃತಿ) ಈ ಮೂವರಿಂದ ಭಗವತನ ಕೃಪಾದೃಷ್ಟಿ ಬಿದ್ದ ಸಮಯದಲ್ಲಿ  ದೇವತೆಗಳ ಶರೀರ ಸೃಷ್ಟಿಯಾಯಿತು. ಈ ಮೇಲಿನ ವಿವರಣೆಯನ್ನು ಆಚಾರ್ಯ ಮಧ್ವರು ತಮ್ಮ ತಾತ್ಪರ್ಯ ನಿರ್ಣಯದಲ್ಲಿ, ಪಾದ್ಮಪುರಾಣದ ಪ್ರಮಾಣಶ್ಲೋಕವನ್ನು ನೀಡಿ ಸುಂದರವಾಗಿ ವಿವರಿಸಿರುವುದನ್ನು ನಾವು ಕಾಣುತ್ತೇವೆ.  ಕಾಲಮಾಯಾಂಶಲಿಙ್ಗಿನಃ । ತನ್ನಿಮಿತ್ತಶರೀರಾಃ । ಹಿರಣ್ಯಗರ್ಭಸ್ಯೈವ ಕಾಲಾಭಿಮಾನಿ ಜೀವಾಭಿಮಾನಿ ಚ  ದ್ವಿವಿಧಂ ರೂಪಮ್ ।  ‘ಕಾಲಜೀವಾಭಿಮಾನೇನ ರೂಪದ್ವನ್ದ್ವೀ ಚತುರ್ಮುಖಃ’ ಇತಿ ಪಾದ್ಮೇ ॥

ಮೇಲಿನ ಶ್ಲೋಕದಲ್ಲಿ ಲಿಂಗ ಎನ್ನುವ ಪದ ಬಳಕೆಯಾಗಿದೆ. ಸಾಮಾನ್ಯವಾಗಿ ಲಿಂಗ ಎಂದು ಹೇಳಿದಾಗ ನಮಗೆ ನೆನಪಿಗೆ ಬರುವುದು ಶಿವಲಿಂಗ. ಆದರೆ ಇತರ ದೇವತೆಗಳನ್ನೂ  ಲಿಂಗ ರೂಪದಲ್ಲಿ ಪೂಜಿಸುತ್ತಾರೆ.  ವಿಷ್ಣುಲಿಂಗವುಳ್ಳ ಅನೇಕ ದೇವಾಲಯಗಳೂ ನಮ್ಮಲ್ಲಿವೆ. ಮೇಲಿನ ಶ್ಲೋಕದಲ್ಲಿ ಲಿಂಗ ಎನ್ನುವ ಪದವನ್ನು ‘ಕಾಣದ ವಸ್ತುವನ್ನು ಕಾಣುವಂತೆ ಮಾಡುವ ಸಾಧನ’ ಅಥವಾ ‘ಶರೀರ’ ಎನ್ನುವ ಅರ್ಥದಲ್ಲಿ ಬಳಸಲಾಗಿದೆ. ಒಟ್ಟಿನಲ್ಲಿ ಹೇಳಬೇಕೆಂದರೆ: ಚತುರ್ಮುಖನ ಎರಡು ರೂಪಗಳು ಮತ್ತು ಚಿತ್ಪ್ರಕೃತಿಯಿಂದ ದೇವತೆಗಳಿಗೆ ಪರಸ್ಪರ ಕಾಣುವಂತಹ ಶರೀರ ಬಂದಿತು.

ಎಲ್ಲಾ ದೇವತೆಗಳಿಗೂ ಶರೀರ, ಶಕ್ತಿ ಎಲ್ಲವೂ ಬಂದಿದೆ, ಆದರೆ ಅವರಲ್ಲಿ ಸಮಷ್ಟಿಪ್ರಜ್ಞೆ ಇರಲಿಲ್ಲ. ಹೀಗಾಗಿ ಒಬ್ಬೊಬ್ಬರು ಪ್ರತ್ಯೇಕವಾಗಿ ಸೃಷ್ಟಿ ಕಾರ್ಯ ಮುಂದುವರಿಸಲಾಗದೇ ಕಂಗಾಲಾಗುತ್ತಾರೆ. ಭಗವಂತ ಸೃಷ್ಟಿ ಮುಂದುವರಿಸುವ ಜವಾಬ್ದಾರಿ ನೀಡಿದ್ದಾನೆ, ಆದರೆ ಹೇಗೆ ಎನ್ನುವ ಯುಕ್ತಿ  ತಿಳಿಯದ ದೇವತೆಗಳು ಭಗವಂತನ ಮುಂದೆ ಕೈಜೋಡಿಸಿ ಪ್ರಾರ್ಥಿಸಿಕೊಳ್ಳುತ್ತಾರೆ. ಮುಂದೆ ಬರುವ ಶ್ಲೋಕಗಳು ದೇವತೆಗಳ ಪ್ರಾರ್ಥನಾ ಮಂತ್ರಗಳಾಗಿವೆ. ಇದು ಬಹಳ ರೋಚಕವಾದ ಭಗವದ್ ಸ್ತುತಿ.  


ನತಾಃ ಸ್ಮ ತೇ  ದೇವ ಪದಾರವಿನ್ದಂ ಪ್ರಪನ್ನತಾಪೋಪಶಮಾತಪತ್ರಮ್ ।

ಯನ್ಮೂಲಕೇತಾ ಯತಯೋSಞ್ಜಸೋರು ಸಂಸಾರದುಃಖಂ ಬಹಿರುತ್ಕ್ಷಿಪನ್ತಿ ॥೧೬॥


 “ಭಗವಂತ, ನೀನು ನಮ್ಮನ್ನು ಸೃಷ್ಟಿ ಮಾಡಿ ನಮಗೆ ಶಕ್ತಿ ನೀಡಿದೆ. ಆದರೆ ಆ ಶಕ್ತಿಯನ್ನು ಬಳಸಿ, ನಾವೆಲ್ಲರೂ ಒಟ್ಟು ಸೇರಿ ಹೇಗೆ ಪ್ರಪಂಚ ಸೃಷ್ಟಿಮಾಡಬಹುದು ಎನ್ನುವುದು ನಮಗೆ ಹೊಳೆಯುತ್ತಿಲ್ಲ. ಶರಣು ಬಂದವರ ‘ಸಮಸ್ಯೆ’ ಎನ್ನುವ ಬಿಸಿಲಿಗೆ ನಿನ್ನ ಪಾದ ಕೊಡೆಯಂತೆ. ಆದ್ದರಿಂದ ನಾವು ನಿನ್ನ ಪಾದ ಕಮಲಗಳಿಗೆ ಮಣಿದಿದ್ದೇವೆ.” ಎಂದು ದೇವತೆಗಳು ಭಗವಂತನ ಮುಂದೆ ಕೈಮಗಿದು ಪ್ರಾರ್ಥಿಸುತ್ತಾರೆ.  ಸಂಸಾರವೆಂದರೆ ಅದು ದುಃಖದ  ಸಾಗರ. ಈ ದುಃಖದಿಂದ ಪಾರಾಗುವ ಒಂದೇ ಒಂದು ಸಾಧನ ಎಂದರೆ ಅದು ಭಗವಂತನ ಪಾದದಲ್ಲಿ ಶರಣಾಗುವುದು. ಭಗವಂತನನ್ನು ನಿರಂತರ ಆರಾಧಿಸುವ ಪ್ರಯತ್ನಶೀಲರು ‘ಯತಿ’ಗಳೆನಿಸುತ್ತಾರೆ. ದುಃಖ ನಿವಾರಣೆಗಿರುವ ಒಂದೇ ಒಂದು ಮಾರ್ಗ ಎಂದರೆ ಅದು ನಿರ್ಲಿಪ್ತತೆ. ಅಂತಹ ನಿರ್ಲಿಪ್ತತೆಯನ್ನು   ಭಗವಂತನ ಪಾದದಲ್ಲಿ ಶರಣಾಗಿ ನಾವು ಪಡೆಯಬಹುದು. ಇಲ್ಲಿ ದೇವತೆಗಳಿಗೆ ಇನ್ನೂ ಸಂಸಾರ ದುಃಖ ಪ್ರಾರಂಭವಾಗಿಲ್ಲ. ಆದರೆ ಅವರು ಮುಂದೆ ಸೃಷ್ಟಿ ಮಾಡುಲು ಹೊರಟಿರುವುದು ಸಂಸಾರವನ್ನು. ಅಂತಹ ಸಂಸಾರವನ್ನು ಸೃಷ್ಟಿ ಮಾಡಲು ಶಕ್ತಿಕೊಡು ಎಂದು ಅವರು ಇಲ್ಲಿ ಭಗವಂತನನ್ನು ಪ್ರಾರ್ಥಿಸಿದ್ದಾರೆ. 


ಋತೇ ಯದಸ್ಮಿನ್  ಭವ ಈಶ ಜೀವಾಸ್ತಾಪತ್ರಯೇಣಾಭಿಹತಾ ನ ಶರ್ಮ ।

ಆತ್ಮನ್ ಲಭಂತೇ ಭಗವಂಸ್ತವಾಙ್ಘ್ರೇ  ಶ್ಛಾಯಾಂಶವಿದ್ಯಾಮತ ಆಶ್ರಯೇಮ ॥೧೭॥


“ಈ ಸಾಂಸಾರಿಕ ಬದುಕಿನಲ್ಲಿ ನೀನು ಈಶ(ಸರ್ವಸಮರ್ಥ). ನಿನ್ನ ಪಾದಮೂಲದ ಸೇವೆ ಇಲ್ಲದಿದ್ದರೆ ಜೀವರು ಎಲ್ಲಾ ಕಡೆಯಿಂದಲೂ ತಾಪತ್ರಯದ ದುಃಖಕ್ಕೆ ಒಳಗಾಗಿ ಮಾನಸಿಕ ನೆಮ್ಮದಿಯನ್ನು ಕಳೆದುಕೊಳ್ಳುತ್ತಾರೆ. ಇಂತಹ ಸ್ಥಿತಿಯಿಂದ ಪಾರಾಗಲು ಇರುವ ಏಕಮಾತ್ರ ಮಾರ್ಗವೆಂದರೆ ಅದು  ನಿನ್ನ ಪಾದದ ನೆರಳಿನ ಒಂದು ಕ್ಲೇಶ ವಿದ್ಯೆಯ ಸೇವನೆ” ಎನ್ನುತ್ತಾರೆ ದೇವತೆಗಳು.

 ಇಲ್ಲಿ  “ಅಙ್ಘ್ರೇ ಶ್ಛಾಯಾಂಶವಿದ್ಯಾ” ಎನ್ನುವ ಪದ ಬಳಕೆಯಾಗಿದೆ. ಇದರ ಸ್ಥೂಲ ಅರ್ಥ: ಯೋಗ್ಯತಾನುಸಾರವಾದ ಭಗವಂತನ ಪ್ರಜ್ಞೆ. ಇದನ್ನು ಬ್ರಹ್ಮಪುರಾಣದ ಪ್ರಮಾಣ ಶ್ಲೋಕದೊಂದಿಗೆ ಆಚಾರ್ಯ ಮಧ್ವರು ತಮ್ಮ ತಾತ್ಪರ್ಯ ನಿರ್ಣಯದಲ್ಲಿ ವಿವರಿಸಿರುವುದನ್ನು ನಾವು ಕಾಣಬಹುದು.  [ಕೆಲವೆಡೆ ಅಂಘ್ರಿ ಚ್ಛಾಯಾಂಶ ಸವಿದ್ಯಾ ಎನ್ನುವ ಪಾಠ ಬಳಸುತ್ತಾರೆ. ಆದರೆ ಸರಿಯಾದ ಪಾಠ  ಅಙ್ಘ್ರೇ ಶ್ಛಾಯಾಂಶವಿದ್ಯಾ ಎನ್ನುವುದಾಗಿದೆ].  ಬ್ರಹ್ಮಪುರಾಣದಲ್ಲಿ ಹೇಳುವಂತೆ:  ‘ಬ್ರಹ್ಮವಿದ್ಯಾ ಹರೇಶ್ಛಾಯಾ ತದಂಶಾ ಹಿ  ಸುರೇಷ್ವಪಿ ।  ಸರ್ವವಿದ್ಯಾಃ ಶ್ರಿಯಃ ಪ್ರೋಕ್ತಾಃ  ಪ್ರಧಾನಾಂಶಶ್ಚತುರ್ಮುಖೇ” ಇತಿ ಬ್ರಾಹ್ಮೇ ॥   ಹರಿಯಲ್ಲಿರುವ ಸ್ವರೂಪಭೂತವಾದ ತನ್ನ ಬಗೆಗಿನ ಜ್ಞಾನಕ್ಕೆ ಛಾಯೆಯಂತೆ ಸಾಕ್ಷಾತ್ ಪ್ರತಿಬಿಂಬಭೂತವಾದ ಬ್ರಹ್ಮವಿದ್ಯೆಯಲ್ಲಿ ಕೆಲವೇ ಅಂಶಗಳು ಮಾತ್ರ ದೇವತೆಗಳಲ್ಲಿ, ಋಷಿಗಳಲ್ಲಿ ಮತ್ತು ಸಾತ್ತ್ವಿಕ ಜೀವರುಗಳಲ್ಲಿ ಅವರವರ ಯೋಗ್ಯತಾನುಸಾರವಾಗಿರುತ್ತದೆ. ಈ ದೇವಾದಿಗಳ ಎಲ್ಲಾ ಬ್ರಹ್ಮವಿದ್ಯೆಗೂ ಬಿಂಬರೂಪವಾದ ವಿದ್ಯೆ ಇರುವುದು ಶ್ರಿಲಕ್ಷ್ಮಿಯಲ್ಲಾದರೆ,  ಪ್ರತಿಬಿಂಬರೂಪವಾದ ವಿದ್ಯೆ  ಇತರ ಎಲ್ಲಾ ದೇವತೆಗಳಿಗಿಂತ ಅಧಿಕವಾಗಿ ಚತುರ್ಮುಖನಲ್ಲಿರುತ್ತದೆ.

ಮೇಲಿನ ಶ್ಲೋಕದಲ್ಲಿ ‘ತಾಪತ್ರಯ’ ಎನ್ನುವ ಪದ ಬಳಕೆಯಾಗಿದೆ. ಈ ಪದವನ್ನು ಸಾಮಾನ್ಯವಾಗಿ ಎಲ್ಲರೂ  ಬಳಸುತ್ತಾರೆ. ಆದರೆ ಹೆಚ್ಚಿನವರು ಇದರ ಹಿಂದಿರುವ ಅರ್ಥವನ್ನು ತಿಳಿದಿರುವುದಿಲ್ಲ. ಕೆಲವರು ತಾಪತ್ರಯ ಎಂದರೆ ‘ಸಮಸ್ಯೆ’ ಎಂದಷ್ಟೇ ತಿಳಿದಿರುತ್ತಾರೆ. ಆದರೆ ತಾಪತ್ರಯ ಎಂದರೆ ಮೂರು ಬಗೆಯ ತಾಪಗಳು:   ೧. ಆಧ್ಯಾತ್ಮಿಕ ತಾಪ: ಅಂದರೆ ಮಾನಸಿಕವಾದ ದುಃಖ, ವ್ಯಥೆ, ರೋಗ, ವೇದನೆ ಇತ್ಯಾದಿ. ೨. ಆದಿದೈವಿಕ ತಾಪ: ಪ್ರಕೃತಿಯಿಂದ ಬರುವ ತಾಪಗಳು. ಉದಾಹರಣೆಗೆ: ಅತಿವೃಷ್ಟಿ,  ಅನಾವೃಷ್ಟಿ, ಸಿಡಿಲು ಇತ್ಯಾದಿ ಪ್ರಾಕೃತಿಕ ತಾಪ. ೩. ಆದಿಭೌತಿಕ ತಾಪ: ಅಪಘಾತ, ದರೋಡೆ, ಇತ್ಯಾದಿ ಭೌತಿಕ ತಾಪ. ಇದಲ್ಲದೆ ಸಂಚಿತ, ಪ್ರಾರಾಬ್ಧ ಮತ್ತು ಆಗಾಮಿ ಪಾಪಗಳೂ ಕೂಡಾ ತಾಪತ್ರಯಗಳು.  ಅದೇ ರೀತಿ ಸ್ವಕೃತ, ಮಿತ್ರಕೃತ ಮತ್ತು ಶತ್ರುಕೃತ ತಾಪಗಳೂ ತಾಪತ್ರಯಗಳು. ಈ ತಾಪತ್ರಯಗಳನ್ನು ಮೀರಿನಿಲ್ಲುವ ಏಕೈಕ ಸ್ಥಿತಿ ‘ಭಗವದ್ ಪ್ರಜ್ಞೆಯಿಂದ ಪಡೆಯುವ ಮೋಕ್ಷಸ್ಥಿತಿ’. 


ಮಾರ್ಗಂತಿ ಯತ್ ತೇ ಮುಖಪದ್ಮನೀಡೈ ಶ್ಛಂದಃಸುಪರ್ಣೈರ್ ಋಷಯೋ ವಿವಿಕ್ತೇ ।

 ಯಚ್ಚಾಘಮರ್ಷೋ ದ್ಯುಸರಿದ್ದರಾಯಾಃ ಪರಂ ಪದಂ ತೀರ್ಥಪದಃ ಪ್ರಪನ್ನಾಃ ॥೧೮॥

ವೇದಾಧ್ಯಯನದಿಂದ ಜ್ಞಾನ ಪಡೆದ ಋಷಿಗಳು ಏಕಾಂತದಲ್ಲಿ  ಭಗವಂತನ ಮುಖಕಮಲವೆನ್ನುವ ಗೂಡಿನಿಂದ ಹೊರಬಂದ ವೇದಮಂತ್ರವೆನ್ನುವ ಹಕ್ಕಿಯ ಮುಖೇನ ಭಗವಂತನ ಪಾದವನ್ನು ಹುಡುಕುತ್ತಾರೆ.

ಭಗವಂತನ ಪಾದ ಭಕ್ತರ ಪಾಪವನ್ನು ಕಳೆಯುತ್ತದೆ. ಪವಿತ್ರಳಾದ ಗಂಗೆ ಮತ್ತು ತಾಯಿ ಸ್ಥಾನದಲ್ಲಿರುವ ಈ ಭೂಮಿ ಭಗವಂತನ ಪಾದದಿಂದಲೇ ಹುಟ್ಟಿರುವುದು. 'ದ್ಯುಸರಿತೋ ಧರಾಯಾಶ್ಚ' ಗಂಗೆಗೂ ಧರೆಗೂ ಆಶ್ರಯ  ಆ ಭಗವಂತನ ಪವಿತ್ರವಾದ ಪಾದ. ಹೀಗೆ ದೇವತೆಗಳು ಭಗವಂತನನ್ನು ಧ್ಯಾನಿಸುತ್ತಾರೆ.


   ತಥಾ ಪರೇ  ತ್ವಾತ್ಮಸಮಾಧಿಯೋಗಬಲೇನ ಜಿತ್ವಾ ಪ್ರಕೃತಿಂ ಬಲಿಷ್ಠಾಮ್ ।

   ತ್ವಾಮೇವ ಧೀರಾಃ ಪುರುಷಂ ವಿಶನ್ತೇ  ತೇಷಾಂ ಶ್ರಮಃ ಸ್ಯಾನ್ನತು ಸೇವಯಾ ತೇ ॥೨೪॥


ತಾವು ಯಾವ ಕಾರ್ಯವನ್ನು ಮಾಡಲು ಸೃಷ್ಟಿಯಾಗಿದ್ದೇವೋ, ಆ ಕಾರ್ಯ ಮಾಡಲು ಬೇಕಾದ ಶಕ್ತಿ ಮತ್ತು ಮಾರ್ಗದರ್ಶನವನ್ನು ಬೇಡಿ ಭಗವಂತನನ್ನು ಸ್ತೋತ್ರ ಮಾಡುತ್ತಿರುವ ದೇವತೆಗಳು ಮುಂದುವರಿದು ಹೇಳುತ್ತಾರೆ: “ಇನ್ನು ಕೆಲವರು ಆತ್ಮಸಮಾಧಿಯೋಗದಿಂದ ಬಲಿಷ್ಠವಾದ ಪ್ರಕೃತಿಯನ್ನು ಗೆದ್ದು ನಿನ್ನನ್ನು ಹೋಗಿ ಸೇರುತ್ತಾರೆ. ಧೀರರಾದ ಇಂಥವರಿಗೆ ಇದು ಶ್ರಮ ಎನಿಸುವುದಿಲ್ಲ”  ಎಂದು.

ಇಲ್ಲಿ ಪ್ರಕೃತಿಯನ್ನು ಗೆಲ್ಲುವುದು  ಎಂದರೆ ಸಂಸಾರ ಬಂಧನದಿಂದ ಕಳಚಿಕೊಳ್ಳುವುದು ಎಂದರ್ಥ. ನಾವು ಬಲಿಷ್ಟವಾದ ಪ್ರಕೃತಿ ಬಂಧನದಿಂದ ಕಳಚಿಕೊಳ್ಳಬೇಕೆಂದರೆ ನಮ್ಮನ್ನು ಈ ಸಂಸಾರದಲ್ಲಿರಿಸಿರುವ ಚಿತ್ಪ್ರಕೃತಿಯಾದ ತಾಯಿ  ಶ್ರೀಲಕ್ಷ್ಮಿಯನ್ನು ಗೆಲ್ಲಬೇಕು. ದತ್ತಾತ್ರೇಯನು ತನ್ನ ಯೋಗಶಾಸ್ತ್ರದಲ್ಲಿ ಹೇಳುವಂತೆ: ‘ವಾಯೋಶ್ಚ ಪ್ರಕೃತೇರ್ವಿಷ್ಣೋರ್ಜಯೋ ಭಕ್ತ್ಯೈವ ನಾನ್ಯಥಾ’. ಅಂದರೆ: ವಾಯುದೇವನನ್ನು ಜಯಿಸುವುದಾಗಲಿ, ಚಿತ್ಪ್ರಕೃತಿಯನ್ನು ಜಯಿಸುವುದಾಗಲಿ ಕೇವಲ ಭಕ್ತಿಯಿಂದ ಮಾತ್ರ ಸಾಧ್ಯ ಹೊರತು ಇನ್ಯಾವ ಉಪಾಯದಿಂದಲೂ ಸಾಧ್ಯವಿಲ್ಲ ಎಂದರ್ಥ. ಹೀಗಾಗಿ ಪ್ರಕೃತಿಮಾತೆ ಶ್ರಿಲಕ್ಷ್ಮಿಯನ್ನು ಭಕ್ತಿಯಿಂದ ಒಲಿಸಿಕೊಳ್ಳುವುದೇ ಸಂಸಾರ ಬಂಧನವನ್ನು ದಾಟುವ ಉಪಾಯ. ಆದ್ದರಿಂದ ಅವಿನಾಭಾವಿಯರಾದ ಲಕ್ಷ್ಮೀನಾರಾಯಣರಲ್ಲಿ ಮನಸ್ಸನ್ನು ಏಕಾಗ್ರಗೊಳಿಸುವುದೇ(ಆತ್ಮ ಸಮಾಧಿಯೋಗ) ಪ್ರಕೃತಿಬಂಧದಿಂದ ಕಳಚಿಕೊಳ್ಳುವ ಏಕೈಕ ಮಾರ್ಗ. ಈ ರೀತಿ  ಸಾಧನೆಯ ಮಾರ್ಗದಲ್ಲಿ ಭಗವಂತನ ಅನುಗ್ರಹವಾಗುವ ತನಕ ಬಿಡದೆ ಸಾಧನೆ ಮಾಡುವ ಗಟ್ಟಿಗರು ಮೋಕ್ಷವನ್ನು ಪಡೆಯುತ್ತಾರೆ.

ಯಾರು ಭಗವಂತನ ಅರಿವಿನ ರುಚಿಯನ್ನು ಅನುಭವಿಸುತ್ತಾರೋ ಅವರಿಗೆ ಸಾಧನೆ  ಶ್ರಮ ಎನಿಸುವುದಿಲ್ಲ. ಏಕೆಂದರೆ ಜ್ಞಾನ ಮಾರ್ಗದ ಸಮಸ್ತ ಪ್ರಯತ್ನವೂ ಕೇವಲ ಆನಂದದ ಅನುಭವವೇ ಹೊರತು ಶ್ರಮವಲ್ಲ. 


ತತ್ ತೇ ವಯಂ ಲೋಕಸಿಸೃಕ್ಷಯಾSದ್ಯ  ತ್ವಯಾ ವಿಸೃಷ್ಟಾಸ್ತ್ರಿಭಿರಾತ್ಮಭಿಃ ಸ್ಮ  । 

ಸರ್ವೇ ವಿಯುಕ್ತಾಃ ಸ್ವವಿಹಾರತನ್ತ್ರಂ ನ ಶಕ್ನುಮಸ್ತತ್ ಪ್ರತಿಕರ್ತವೇ  ತೇ ॥೨೫॥


ಯಾವದ್ ಬಲಿಂ ತೇSಜ ಹರಾಮ ಕಾಲೇ ಯಥಾ ವಯಂ ಚಾನ್ನಮದಾಮ ಯತ್ರ ।

ತಥೋಭಯೇಷಾಂ ತ ಇಮೇ ಹಿ ಲೋಕಾ ಬಲಿಂ ಹರನ್ತೋSನ್ನಮದನ್ತ್ಯನೀಶಾಃ ॥೨೭॥


ತ್ವಂ ನಃ ಸುರಾಣಾಮಸಿ ಸಾನ್ವಯಾನಾಂ ಕೂಟಸ್ಥ ಆದ್ಯಃ ಪುರುಷಃ ಪುರಾಣಃ ।

ತ್ವಂ ದೇವ ಶಕ್ತ್ಯಾಂ ಗುಣಕರ್ಮಯೋನೌ ರೇತಸ್ತ್ವಜಾಯಾಂ ಕವಿರಾದಧೇSಜಃ ॥೨೭॥


ತತೋ ವಯಂ ಸತ್ಪ್ರಮುಖಾ  ಯದರ್ಥೇ ಬಭೂವಿಮಾsತ್ಮನ್ ಕರವಾಮ ಕಿಂ ತೇ ।  

ತ್ವಂ ನಃ ಸ ಚಕ್ಷುಃ  ಪರಿದೇಹಿ ಶಕ್ತಾ   ದೇವ ಕ್ರಿಯಾರ್ಥೇ ಯದನುಗ್ರಹೇಣ  ॥೨೯॥


“ಕಾಲನಿಯಾಮಕ ಚತುರ್ಮುಖ, ಚಿತ್ಪ್ರಕೃತಿ ಮತ್ತು ಜೀವ ನಿಯಾಮಕ ಚತುರ್ಮುಖ  ಈ ಮೂವರೊಂದಿಗಿರುವ ನಮಗೆ ನಿನ್ನ ಆಡುಂಬೊಲವಾದ (ವಿಹಾರ ಸಾಧನ/ ಆಡುವ ಹೊಲವಾದ) ಸೃಷ್ಟಿಯನ್ನು ಯಾವ ರೀತಿ ನಿರ್ಮಾಣ ಮಾಡಬೇಕೆಂದು ತಿಳಿಯುತ್ತಿಲ್ಲ” ಎನ್ನುತ್ತಾರೆ ದೇವತೆಗಳು. ಇಲ್ಲಿ ‘ಸತ್’ ಎಂದರೆ ಬ್ರಹ್ಮಾಂಡದಲ್ಲಿ ಚತುರ್ಮುಖ, ಪಿಂಡಾಂಡದಲ್ಲಿ ಮುಖ್ಯಪ್ರಾಣ. ಚತುರ್ಮುಖನ ಮುಂದಾಳತ್ವದಲ್ಲಿರುವ ದೇವತೆಗಳು ‘ಯಾವ ಕಾರಣಕ್ಕೆ ತಾವು ಸೃಷ್ಟಿಯಾಗಿರುವೆವೋ, ಅದನ್ನು ಎಲ್ಲರೂ ಸೇರಿ ಹೇಗೆ ಮಾಡಬೇಕು ಎನ್ನುವುದು ತಿಳಿಯುತ್ತಿಲ್ಲ’ ಎನ್ನುತ್ತಿದ್ದಾರೆ. 

 “ಸ್ವಾಮೀ,  ಯಾವ ರೀತಿ ನಾವು ಬ್ರಹ್ಮಾಂಡವನ್ನು ರಚಿಸಿ ಅದನ್ನು ನಿನ್ನ ಪೂಜಾರೂಪವಾಗಿ ಸಮರ್ಪಿಸಲು ಸಮರ್ಥರಾಗುವೆವು? ನೀನು ನಮ್ಮೆಲ್ಲರ ತಂದೆ, ಎಲ್ಲರ ಅಂತರ್ಯಾಮಿ. ನೀನು ಪುರಾತನ. ನಿನಗೆ ಸ್ವಯಂ ಎಲ್ಲವನ್ನೂ ಮಾಡುವ ಶಕ್ತಿ ಇದ್ದರೂ ಕೂಡಾ, ಲಕ್ಷ್ಮೀದೇವಿಯ ಮುಖೇನ ನಮ್ಮನ್ನು ಸೃಷ್ಟಿ ಮಾಡಿದೆ. ಅಂತಹ ನೀನು ನಮಗೆಲ್ಲರಿಗೂ ಬ್ರಹ್ಮಾಂಡ ರಚನೆಯ ಶಕ್ತಿಯನ್ನೂ, ಮುಖ್ಯವಾಗಿ  ದೂರದೃಷ್ಟಿಯನ್ನೂ ಕರುಣಿಸು”  


॥ ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ತೃತೀಯಸ್ಕಂಧೇ ಷಷ್ಠೋSಧ್ಯಾಯಃ ॥

ಭಾಗವತ ಮಹಾಪುರಾಣದ ಮೂರನೇ  ಸ್ಕಂಧದ ಆರನೇ ಅಧ್ಯಾಯ ಮುಗಿಯಿತು


*******

No comments:

Post a Comment