ಸಪ್ತಮೋSಧ್ಯಾಯಃ
ಭಗವಂತನ ಸೃಷ್ಟಿಲೀಲೆಯ ವಿವರಣೆ-ವಿರಾಟ್ ಶರೀರ
ತನ್ನ ಸೃಷ್ಟಿ ನಿರ್ಮಾಣಕ್ಕಾಗಿ ಸೃಷ್ಟಿಸಲ್ಪಟ್ಟ ದೇವತೆಗಳು ತಮ್ಮ ಅಸಹಾಯಕತೆಯನ್ನು ಭಗವಂತನ ಮುಂದೆ ತೋಡಿಕೊಂಡಾಗ, ಅವರ ಪ್ರಾರ್ಥನೆಯನ್ನು ಕೇಳಿದ ಭಗವಂತ ಏನು ಮಾಡಿದ ಎನ್ನುವುದನ್ನು ಇಲ್ಲಿ ವಿವರಿಸುತ್ತಾರೆ:
ಋಷಿರುವಾಚ
ಇತಿ ತಾಸಾಂ ಸ್ವಶಕ್ತೀನಾಮಸತೀನಾಂ ಸಮೇತ್ಯ ಸಃ ।
ಪ್ರಸುಪ್ತಲೋಕತನ್ತ್ರಾಣಾಂ ನಿಶಾಮ್ಯ ಗತಿಮೀಶ್ವರಃ ॥೦೧॥
ಯಾವ ನೆರವೂ ಇಲ್ಲದೇ ಎಲ್ಲವನ್ನೂ ಮಾಡಬಲ್ಲ ಸ್ವರೂಪ ಸಾಮರ್ಥ್ಯವುಳ್ಳ(ಈಶ್ವರಃ) ಭಗವಂತ, ತನ್ನ ಅಧೀನವಾಗಿರುವ, ಬೇರೆಬೇರೆ ಯೋಚನೆ ಮಾಡುತ್ತಿರುವ ದೇವತೆಗಳನ್ನು ಕಂಡು, ತನ್ನೊಳಗೇ ತಾನು ನಕ್ಕ.
ಕಾಲಸಞ್ಜ್ಞಾಂ ತತೋ ಮಾಯಾಂ ಬಿಭ್ರಚ್ಛಕ್ತಿಮುರುಕ್ರಮಃ ।
ತ್ರಯೋವಿಂಶತಿತತ್ತ್ವಾನಾಂ ಗಣಂ ಯುಗಪದಾವಿಶತ್ ॥೦೨॥
ಎಲ್ಲವನ್ನೂ ಮಾಡುವ ಶಕ್ತಿ ಹೊಂದಿದ್ದರೂ, ಎಲ್ಲವನ್ನೂ ಗಣಿತಬದ್ಧವಾಗಿ, ಒಂದು ನಿರ್ದಿಷ್ಟ ಕ್ರಮದಲ್ಲೇ ಮಾಡುವ(ಉರುಕ್ರಮಃ) ಭಗವಂತ, ತನ್ನ ಪತ್ನಿಯಾದ, ಕಾಲಕಾಲಕ್ಕೆ ಏನನ್ನು ಸೃಷ್ಟಿಮಾಡಬೇಕೋ ಅದನ್ನು ಭಗವಂತನ ನಿಯತಿಯಂತೆ ಅವನ ಜೊತೆಯಲ್ಲಿದ್ದು ಮಾಡುವ ಶ್ರೀಲಕ್ಷ್ಮೀದೇವಿಯೊಂದಿಗೆ, ಇಪ್ಪತ್ಮೂರು ತತ್ತ್ವಾಭಿಮಾನಿ ದೇವತೆಗಳ ಒಳಗೆ ಪ್ರವೇಶಿಸಿದ. ಪಂಚಭೂತಗಳು, ಪಂಚತನ್ಮಾತ್ರೆಗಳು, ಪಂಚ ಜ್ಞಾನೇಂದ್ರಿಯಗಳು, ಪಂಚ ಕರ್ಮೇಂದ್ರಿಯಗಳು, ಮನಸ್ಸು, ಅಹಂಕಾರ, ಮಹತತ್ತ್ವ, ಇವೇ ಆ ಇಪ್ಪತ್ಮೂರು ತತ್ತ್ವಗಳು.
ಸೋSನುಪ್ರವಿಷ್ಟೋ ಭಗವಾಂಶ್ಚೇಷ್ಟಾರೂಪೇಣ ತಂ ಗಣಮ್ ।
ಭಿನ್ನಂ ಸಂಯೋಜಯಾಮಾಸ ಸುಪ್ತಂ ಕರ್ಮ ಪ್ರಬೋಧಯನ್ ॥೦೩॥
ಮೇಲಿನ ಎರಡು ಶ್ಲೋಕಗಳಲ್ಲಿ ದೇವರನ್ನು ಈಶ್ವರಃ, ಉರುಕ್ರಮಃ ಎನ್ನುವ ವಿಶೇಷಣದಿಂದ ಸಂಬೋಧಿಸಿದ್ದು, ಇಲ್ಲಿ ಭಗವಾನ್ ಎಂದು ಸಂಬೋದಿಸುವುದನ್ನು ಕಾಣುತ್ತೇವೆ. ‘ಐಶ್ವರ್ಯಸ್ಯ ಸಮಗ್ರಸ್ಯ ವೀರ್ಯಸ್ಯ ಯಶಸಃ ಶ್ರಿಯಃ । ಜ್ಞಾನ ವೈರಾಗ್ಯಯೋಶ್ಚೈವ ಷಣ್ಣಾಮ್ ಭಗ ಇತೀರ್ಣಾ’ (ವಿಷ್ಣುಪುರಾಣ) ಜ್ಞಾನ, ಶಕ್ತಿ, ಬಲ, ಐಶ್ವರ್ಯ, ವೀರ್ಯ ಮತ್ತು ತೇಜಸ್ಸು ಈ ಆರು ಗುಣಗಳಿಂದ ಪೂರ್ಣನಾಗಿರುವವನು ದೇವೋತ್ತಮ ಪರಮಪುರುಷನಾದ, ಜಗತ್ತಿನ ಸರ್ವ ಚಲನೆಗೂ ಕಾರಣನಾದ ಭಗವಂತ, ಶಕ್ತಿ ಸ್ವರೂಪವಾಗಿರುವ ತಾಯಿ ಶ್ರೀಲಕ್ಷ್ಮಿಯೊಂದಿಗೆ, ಆ ಇಪ್ಪತ್ಮೂರು ದೇವತೆಗಳನ್ನು ಒಗ್ಗೂಡಿಸಿ, ಅವರೊಳಗೆ ಪ್ರವೇಶಿಸಿ, ಅವರಲ್ಲಿ ಸುಪ್ತವಾದ ಶಕ್ತಿಯನ್ನು ಎಚ್ಚರಿಸಿದ.
ಪ್ರಬುದ್ಧಕರ್ಮ ದೈವೇನ ತ್ರಯೋವಿಂಶತಿಕೋ ಗಣಃ ।
ಪ್ರೇರಿತೋSಜನಯತ್ ಸ್ವಾಭಿರ್ಮಾತ್ರಾಭಿರಧಿಪೂರುಷಮ್ ॥೦೪॥
ಎಲ್ಲಾ ದೇವತೆಗಳಿಗೂ ಪ್ರಭು(ದೈವ*)ವಾದ ಭಗವಂತನ ಪ್ರವೇಶವಾದಾಗ ಎಲ್ಲಾ ಇಪ್ಪತ್ಮೂರು ತತ್ತ್ವಗಳ ಜೊತೆಗೆ ಇಪ್ಪತ್ತಮೂರು ತತ್ತ್ವಾಭಿಮಾನಿ ದೇವತೆಗಳು ಒಂದಾಗಿ ಒಂದು ತಾತ್ತ್ವಿಕ ಆಕಾರವನ್ನು ಹೊಂದಿದರು. ಹೀಗೆ ಚತುರ್ಮುಖನ^ ನೆಲೆಯಾದ ಬ್ರಹ್ಮಾಂಡ ರೂಪುಗೊಂಡಿತು. ಭಗವಂತನ ಪ್ರವೇಶದಿಂದ ಆ ದೇವತೆಗಳಿಗೆ ತಾವು ಏನು ಮಾಡಬೇಕು ಎನ್ನುವುದು ಹೊಳೆಯಿತು. ಮತ್ತು ಅವರೆಲ್ಲರೂ ತಮ್ಮ ಶಕ್ತಿಯಿಂದ, ತಮ್ಮಿಂದ ಅಭಿಮನ್ಯಮಾನವಾದ ವಸ್ತುವನ್ನು ಜೋಡಿಸಿದರು.
[* “ಈಶ್ವರೋ ದೈವಮುದ್ದಿಷ್ಟಂ ಸರ್ವಸ್ಯಾಪಿ ಪ್ರಭುತ್ವತಃ” ಯಾರು ಎಲ್ಲಾ ದೇವತೆಗಳಿಗೂ ಸ್ವಾಮಿಯೋ ಅವನು ದೈವ. “ಪವಿತ್ರಾಣಾಂ ಪವಿತ್ರಂ ಯೋ ಮಙ್ಗಲಾನಾಂ ಚ ಮಙ್ಗಲಮ್ | ದೈವತಂ ದೇವತಾನಾಂ ಚ ಭೂತಾನಾಂ ಯೋsವ್ಯಯಃ ಪಿತಾ” (ವಿಷ್ಣುಸಹಸ್ರನಾಮ) ಹೀಗಾಗಿ ಸಂಸ್ಕೃತದಲ್ಲಿ ದೈವ ಎಂದರೆ ನಾರಾಯಣ ಎಂದರ್ಥ. “ಆತ್ಮಶಕ್ತಿಃ ಪ್ರಕೃತಿಃ” ಆತ್ಮಶಕ್ತಿ ಎಂದರೆ ಪ್ರಕೃತಿ(ಶ್ರೀಲಕ್ಷ್ಮಿ). ^ಮೂಲಭೂತವಾಗಿ ಪುರುಷ ಎಂದರೆ ಭಗವಂತ. ಎರಡನೇ ಅರ್ಥದಲ್ಲಿ ಬ್ರಹ್ಮಾಂಡದ ಅಭಿಮಾನಿಯಾದ ಚತ್ರುರ್ಮುಖ]
ಸ ವೈ ವಿಶ್ವಸೃಜಾಂ ಗರ್ಭೋ ದೈವಕರ್ಮಾತ್ಮಶಕ್ತಿಮಾನ್ ।
ವಿಬಭಾಜಾsತ್ಮನಾSSತ್ಮಾನಮೇಕಧಾ ದಶಧಾ ತ್ರಿಧಾ ॥೦೭॥
ಈ ಶ್ಲೋಕ ಚತುರ್ಮುಖನನ್ನು ಕುರಿತು ಹೇಳುವ ಶ್ಲೋಕವಾಗಿದೆ(ಅನೇಕರು ಇದನ್ನು ತಪ್ಪಾಗಿ ಭಗವಂತನ ಪರ ವ್ಯಾಖ್ಯಾನ ಮಾಡುವುದಿದೆ). ಇಪ್ಪತ್ಮೂರು ದೇವತೆಗಳ ಗರ್ಭ (ಬೀಜಸ್ಥಾನ), ಪ್ರಥಮಶಕ್ತಿ, ಬ್ರಹ್ಮಾಂಡದ ಅಭಿಮಾನಿಯಾಗಿ ಚತುರ್ಮುಖ ಬಂದ. ಆ ಚತುರ್ಮುಖನ ಮುಖೇನ ಈ ಜಗತ್ತನ್ನು ಸೃಷ್ಟಿಮಾಡುವುದಕ್ಕಾಗಿ ಭಗವಂತ(ದೈವ) ಚತುರ್ಮುಖನಲ್ಲಿ ತುಂಬಿದ. ಭಗವಂತನ ಜೊತೆಗೆ ಜಡಪ್ರಕೃತಿಮಾನಿನಿಯರಾದ ಲಕ್ಷ್ಮೀ-ಸರಸ್ವತಿಯರು ಚತುರ್ಮುಖನಲ್ಲಿ ತಮ್ಮ ಶಕ್ತಿ ಆದಾನಮಾಡಿ, (ಭಗವಂತನ ಜೊತೆಗೆ ಲಕ್ಷ್ಮೀದೇವಿಯ ಅನುಗ್ರಹ ಹಾಗೂ ಸರಸ್ವತೀ ದೇವಿಯ ನೆರವು) ಅವನಿಗೆ ಕರ್ತೃತ್ವಶಕ್ತಿಯನ್ನು ಕೊಟ್ಟು, ಪ್ರಪಂಚ ಸೃಷ್ಟಿಯಾಗುವಂತೆ ಮಾಡಿದರು.
ಭಗವಂತನ ಶಕ್ತಿ ತನ್ನೊಳಗೆ ಪ್ರವೇಶಿಸುತ್ತಿದ್ದಂತೆ, ಭಗವಂತನ ಇಚ್ಛೆಯಂತೆ ಚತುರ್ಮುಖ ತನ್ನನ್ನು ತಾನು ವಿಭಾಗ ಮಾಡಿಕೊಂಡ. ಹೃದಯದಲ್ಲಿ ಏಕರೂಪನಾಗಿ, ದಶಪ್ರಾಣರೊಂದಿಗೆ* ದಶರೂಪನಾಗಿ, ಆ ದಶರೂಪದಲ್ಲಿ ಪ್ರತಿಯೊಂದರಲ್ಲೂ ಮತ್ತೆ ಮೂರು ರೂಪದಲ್ಲಿ(ಅಧ್ಯಾತ್ಮ, ಅಧಿಭೂತ ಮತ್ತು ಅಧಿದೈವ ರೂಪದಲ್ಲಿ ) ಚತುರ್ಮುಖ ವಿಭಾಗ ಹೊಂದಿದ.
[*ಪ್ರಾಣ, ಅಪಾನ, ವ್ಯಾನ, ಉದಾನ, ಸಮಾನ, ನಾಗ, ಕೂರ್ಮ, ಕೈಕಾಲ, ದೇವದತ್ತ ಮತ್ತು ಧನಂಜಯ ಎನ್ನುವ ಮುಖ್ಯಪ್ರಾಣನ ದಶರೂಪಗಳು. ಇವು ಚತುರ್ಮುಖನ ದಶರೂಪವನ್ನು ಪ್ರವೇಶಿಸಿದವು. ಇವು ಇಂದ್ರಿಯಗಳಲ್ಲ. ವ್ಯೋಮಸಂಹಿತೆಯಲ್ಲಿ ಮುಖ್ಯಪ್ರಾಣನ ದಶರೂಪದ ಕುರಿತು ಹೇಳಿದ್ದಾರೆ- “ಪ್ರಾಣಾದಿಪಞ್ಚಕಂ ಚೈವ ತಥಾ ನಾಗಾದಿಪಞ್ಚಕಮ್ । ಏವಂ ತು ದಶಧಾ ಪ್ರಾಣ ಅಧ್ಯಾತ್ಮಾದಿ ತ್ರಿರ್ಧsಖಿಲಾಃ” ಇತಿ ವ್ಯೋಮಸಂಹಿತಾಯಾಮ್ ]
ಏಷ ಹ್ಯಶೇಷಸತ್ತ್ವಾನಾಮಾತ್ಮಾಂsಶಃ ಪರಮಾತ್ಮನಃ ।
ಆದ್ಯೋSವತಾರೋ ಯತ್ರಾಸೌ ಭೂತಗ್ರಾಮೋ ವಿಭಾವ್ಯತೇ ॥೦೮॥
ಸಾಧ್ಯಾತ್ಮಂ ಸಾಧಿಭೂತಂ ಚ ಸಾಧಿದೈವಮಿತಿ ತ್ರಿಧಾ ।
ವಿರಾಟ್-ಪ್ರಾಣೋ ದಶವಿಧ ಏಕಧಾ ಹೃದಯೇನ ಚ ॥೦೯॥
ಸಮಸ್ತಜೀವರಿಗೆ ಸ್ವಾಮಿಯಾದ, ಸಮಸ್ತ ತತ್ತ್ವನಿಯಾಮಕನಾಗಿರುವ ಪರಮಾತ್ಮ, ತನ್ನ ಸ್ವರೂಪಾಂಶದಲ್ಲಿ ಸೃಷ್ಟಿ ನಿರ್ಮಾಣಕ್ಕಾಗಿ ಪುರುಷನಾಮಕ ರೂಪವನ್ನು ಆವಿರ್ಭಾವ ಮಾಡಿಕೊಂಡು, ಅದನ್ನು ಚತುರ್ಮುಖನಲ್ಲಿ ಪ್ರವೇಶಮಾಡಿದ. (ಸಮಸ್ತ ಚರಾಚರ ಪ್ರಪಂಚ ಭಗವಂತನಲ್ಲೇ ಇದ್ದು, ಮುಂದೆ ಅದು ತನ್ನ ಆಕಾರವನ್ನು ಪಡೆದು, ನಾನಾ ವಸ್ತುವಿನ ರೂಪದಲ್ಲಿ ಪ್ರಪಂಚವಾಯಿತು). ಹೀಗೆ ಪ್ರವೇಶಿಸಿದ ಪರಮಾತ್ಮ ಮೂರು ವಿಧದಲ್ಲಿ (ಚತುರ್ಮುಖ ಅಧಿಷ್ಠಾನ ಮಾಡಿರುವ ಅಧ್ಯಾತ್ಮ, ಅಧಿಭೂತ ಮತ್ತು ಅಧಿದೈವದಲ್ಲಿ) ತುಂಬಿದ. ಚತುರ್ಮುಖನಲ್ಲಿ ಹತ್ತು ಬಗೆಯಿಂದ ಪ್ರಾಣಶಕ್ತಿ ತುಂಬಿತು. ಆಗ ಚತುರ್ಮುಖನ ಇಂದ್ರಿಯಗಳು ಕೆಲಸ ಮಾಡಲಾರಂಭಿಸಿದವು. ಅವನು ದಶಮುಖನಾದ ಅವನಲ್ಲಿ ಭಗವಂತ ದಶಮುಖನಾಗಿ ನಿಂತ. ಹೃದಯದಲ್ಲಿ ಚತುರ್ಮುಖ ಏಕರೂಪದಲ್ಲಿ ನಿಂತ. ಅಲ್ಲಿ ಭಗವಂತ ‘ಹೃದಯ’ ರೂಪನಾಗಿ ನೆಲಿಸಿದ. ಹೀಗೆ ಪ್ರಾರಂಭದಲ್ಲೇ ಹತ್ತು, ಮೂರು ಹಾಗು ಏಕ ರೂಪಗಳಿಂದ ಸೃಷ್ಟಿಕಾರ್ಯ ಪ್ರಾರಂಭವಾಯಿತು. ತದನಂತರ ಬ್ರಹ್ಮನ ವಿರಾಟ್ ಶರೀರದಲ್ಲಿ ಒಂದೊಂದೇ ಇಂದ್ರಿಯಗಳ ಅಭಿವ್ಯಕ್ತಿ ಪ್ರಾರಂಭವಾಯಿತು. ಇಂದ್ರಿಯ ದೇವತೆಗಳು ಇಂದ್ರಿಯಗಳೊಂದಿಗೆ ಅಲ್ಲಿ ಆಶ್ರಯಪಡೆದರು.
No comments:
Post a Comment