Tuesday, April 16, 2024

Shrimad BhAgavata in Kannada -Skandha-03-Ch-04_02

 

ನೋದ್ಧವೋSಣ್ವಪಿ ಮನ್ನ್ಯೂನೋ ಯದ್ಗುಣೈರ್ನಿರ್ಜಿತಃ[1] ಪ್ರಭುಃ ।

 ಅತೋ ಮದ್ವತ್ ಪುನರ್ಲೋಕಂ ಗ್ರಾಹಯನ್ನಿಹ ತಿಷ್ಠತು ॥೩೨॥

 

ಶ್ರೀಕೃಷ್ಣ ಉದ್ಧವನ ಬಗ್ಗೆ  ಯಾವ ನಿಲುವು ಹೊಂದಿದ್ದ ಎನ್ನುವುದನ್ನು ಈ ಶ್ಲೋಕ ವಿವರಿಸುತ್ತದೆ. ಈ ಶ್ಲೋಕ ಮೇಲ್ನೋಟದಲ್ಲಿ ಒಂದು ಅರ್ಥವನ್ನು ನೀಡಿದರೆ ಇದರ ಅಂತರಂಗದ ಅರ್ಥ ಭಿನ್ನವಾಗಿದೆ. ಮೇಲ್ನೋಟದಲ್ಲಿ ನೋಡಿದರೆ: “ಉದ್ಧವ ಜ್ಞಾನದಲ್ಲಿ ನನಗಿಂತ ಯಾವ ನಿಟ್ಟಿನಲ್ಲೂ ಕಡಿಮೆ ಇಲ್ಲ; ಆತ ತನ್ನ ಗುಣಗಳಿಂದ ನನ್ನನ್ನು ಸೋಲಿಸಿದವನು.  ಹೀಗಾಗಿ ಆತ ನಾನು ಅವತಾರ ಸಮಾಪ್ತಿ ಮಾಡಿದ ಮೇಲೆ ಲೋಕದ ಜನರಿಗೆ ಜ್ಞಾನೋಪದೇಶ ಮಾಡುತ್ತಾ ಇಲ್ಲೇ ಇರಲಿ” ಎಂದು ಶ್ರೀಕೃಷ್ಣ ಸಂಕಲ್ಪ ಮಾಡಿದ. ಆದ್ದರಿಂದ ಪ್ರಭಾಸ ಕ್ಷೇತ್ರದಲ್ಲಿ ಉಳಿದವರಂತೆ ಉದ್ಧವ ಹೊಡೆದಾಡಿಕೊಂಡು ಸಾಯಲಿಲ್ಲ ಎಂದು ಹೇಳಿದಂತಿದೆ. ಆದರೆ ನಮಗೆ ತಿಳಿದಂತೆ: ಉದ್ಧವ ಶ್ರೀಕೃಷ್ಣನ ಪರಮ ಭಕ್ತ. ಹೀಗಾಗಿ ಶ್ರೀಕೃಷ್ಣ ಆತನಿಗೆ ಎರಡು ಬಾರಿ ಉಪದೇಶ ಮಾಡಿ, ಆ ಜ್ಞಾನ ಸಂದೇಶವನ್ನು ಲೋಕಕ್ಕೆ ನೀಡುವಂತೆ ಹೇಳಿದ್ದ. ಹೀಗಿರುವಾಗ ಜ್ಞಾನದಲ್ಲಿ ಸಮಾನ ಮತ್ತು  ನನ್ನನ್ನು ಗೆದ್ದವನು ಇತ್ಯಾದಿಯಾಗಿ ಇಲ್ಲಿ ಹೇಳಿರುವ ಮಾತಿನ ಅರ್ಥವೇನು ಎನ್ನುವುದನ್ನು ನಾವು ನೋಡಬೇಕು.

 

ಆಚಾರ್ಯ ಮಧ್ವರು ‘ಈ ಶ್ಲೋಕವನ್ನು ನಾವು ಬೇರೆಬೇರೆ ನಿಟ್ಟಿನಲ್ಲಿ ನೋಡಿ ಅರ್ಥ ಮಾಡಿಕೊಳ್ಳಬೇಕು’ ಎನ್ನುವುದನ್ನು ತಮ್ಮ ತಾತ್ಪರ್ಯ ನಿರ್ಣಯದಲ್ಲಿ ವಿವರಿಸಿ ಹೇಳಿದ್ದಾರೆ. ಬ್ರಹ್ಮತರ್ಕದಲ್ಲಿ ಹೇಳುವಂತೆ: ಉತ್ತಮೈರಧಿಕತ್ವಂ ವಾ ಸಾಮ್ಯಂ ವಾ ವಿಜಯೋSಪಿ ವಾ ಉಚ್ಯತೇSಪಿತು ನೀಚಾನಾಂ ಮೋಹನಾರ್ಥೇ ವ್ಯಪೇಕ್ಷಯಾ[2]   ಮೂಢದೃಷ್ಟ್ಯನುಸಾರಾದ್ ವಾ ಕಿಞ್ಚಿತ್ಸಾಮ್ಯೇನ ವಾ ಕ್ವಚಿತ್  ಅಂದರೆ: ಒಂದು ಗ್ರಂಥದಲ್ಲಿ  ಒಬ್ಬ ವ್ಯಕ್ತಿಗಿಂತ ಕೆಳಗಿರುವವನನ್ನು ಆ ವ್ಯಕ್ತಿಗಿಂತ ಎತ್ತರದವನು ಎಂದು ಬಿಂಬಿಸಲು ನಾಲ್ಕು ಕಾರಣಗಳಿರುತ್ತವೆ. (೧). ತಾಮಸರನ್ನು ಮೋಹಗೊಳಿಸುವುದಕ್ಕಾಗಿ ಹೇಳುವುದು, (೨). ಒಬ್ಬ ವ್ಯಕ್ತಿಯಲ್ಲಿರುವ ಒಳ್ಳೆಯ ಗುಣವನ್ನು ಅತಿಶಯೋಕ್ತಿಯಿಂದ ಪ್ರಶಂಸಿಸುವುದಕ್ಕಾಗಿ ಹೇಳುವುದು, (೩). ದರ್ಶನ ಭಾಷೆಯಲ್ಲಿ ಹೇಳುವುದು. ಅಂದರೆ: ಒಬ್ಬ ಸಾಮಾನ್ಯ ವ್ಯಕ್ತಿಗೆ ಹೇಗೆ ಕಂಡಿತೋ ಹಾಗೆ ಹೇಳುವುದು (ಒಬ್ಬ ಅಜ್ಞಾನಿಗೆ ಉದ್ಧವ ಶ್ರೀಕೃಷ್ಣನಿಗಿಂತ ದೊಡ್ಡ ಜ್ಞಾನಿ ಎಂದು ಕಾಣಿಸಿರಬಹುದು) ಮತ್ತು (೪) ಸ್ವಲ್ಪ ಮಟ್ಟಿನ ಸಾಮ್ಯವಿರುವಲ್ಲಿ  ಸಾಮ್ಯವಿವಕ್ಷೆಯಿಂದ ಹೇಳುವುದು[ಉದ್ಧವ ಜ್ಞಾನಿಗಳ ಸಾಲಿನಲ್ಲಿ ಅತ್ಯಂತ ಶ್ರೇಷ್ಠ ಸ್ಥಾನದಲ್ಲಿ ನಿಂತಿರುವುದರಿಂದ).

 

ಒಟ್ಟಿನಲ್ಲಿ ಹೇಳಬೇಕೆಂದರೆ: ಒಬ್ಬ ವ್ಯಕ್ತಿ ನಾಶವಾಗುವಾಗ ಆತನ ಜೊತೆಗೆ ಅವನಲ್ಲಿರುವ ಜ್ಞಾನ ನಾಶವಾಗಬಾರದು ಎನ್ನುವುದು ಶ್ರೀಕೃಷ್ಣನ ಸಂಕಲ್ಪ. ಈ ತತ್ತ್ವವನ್ನು ಶ್ರೀಕೃಷ್ಣ ತನ್ನ ಅವತಾರ ಸಮಾಪ್ತಿಯಲ್ಲೂ  ಜಗತ್ತಿಗೆ ತೋರಿಸಿಕೊಟ್ಟ. ತಾನು ಅವತಾರ ಸಮಾಪ್ತಿ ಮಾಡುವ ಮುನ್ನ ಜ್ಞಾನಿಯಾದ ಉದ್ಧವನಿಗೆ ಅಪೂರ್ವವಾದ ತತ್ತ್ವಜ್ಞಾನವನ್ನು ಶ್ರೀಕೃಷ್ಣ ಭೋದಿಸಿದ. ಅದನ್ನು ಬದರಿ ಕ್ಷೇತ್ರದಲ್ಲಿರುವ  ಸಮಸ್ತ ಋಷಿಗಳಿಗೆ ಉದ್ಧವನ ಮುಖೇನ ತಲುಪುವಂತೆ ಮಾಡಿದ. ಇದರಿಂದಾಗಿ ಆ ಜ್ಞಾನ ಪರಂಪರೆ  ಅಲ್ಲಿನ ಎಲ್ಲಾ ಋಷಿಗಳ ಮುಖೇನ ಗಂಗಾ ನದಿಯಂತೆ ಈ ದೇಶದಲ್ಲಿ ಹರಿದು ಬಂತು.

 

॥ ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ತೃತೀಯಸ್ಕಂಧೇ ಚತುರ್ಥೋSಧ್ಯಾಯಃ ॥

ಭಾಗವತ ಮಹಾಪುರಾಣದ ಮೂರನೇ  ಸ್ಕಂಧದ ನಾಲ್ಕನೇ ಅಧ್ಯಾಯ ಮುಗಿಯಿತು

*********



[1] “ಗುಣೈರ್ನಿರ್ದಿತಃ” – ಪ್ರಚಲಿತ ಪಾಠ

[2] “ಮೋಹಾರ್ಥಂ ವಾSಪ್ಯುಪೇಕ್ಷಯಾ” – ಪ್ರಚಲಿತ ಪಾಠ

Thursday, April 4, 2024

Shrimad BhAgavata in Kannada -Skandha-03-Ch-04_01

 

ಚತುರ್ಥೋSಧ್ಯಾಯಃ

 

ಉದ್ಧವ ವಿದುರ ಸಂವಾದ- ಭಗವಂತನ ಅವತಾರ ಸಮಾಪ್ತಿ ಸಂಕಲ್ಪ

 

ಉದ್ಧವ ಉವಾಚ

ಭಗವಾನಾತ್ಮಮಾಯಾಯಾ[1] ಗತಿಂ ತಾಮವಲೋಕ್ಯ ಸಃ ।

 ಸರಸ್ವತೀಮುಪಸ್ಪೃಶ್ಯ ವೃಕ್ಷಮೂಲ ಉಪಾವಿಶತ್[2] ॥೦೩॥

 

 ಅಹಂ ಚೋಕ್ತೋ ಭಗವತಾ ಪ್ರಪನ್ನಾರ್ತಿಹರೇಣ ಹ ।

 ಬದರೀಂ ತ್ವಂ ಪ್ರಯಾಹೀತಿ ಸ್ವಕುಲಂ ಸಞ್ಜಿಹೀರ್ಷುಣಾ ॥೦೪॥

 

ವಿದುರನಿಗೆ ಕೃಷ್ಣಕಥೆಯನ್ನು ವಿವರಿಸುತ್ತಿರುವ ಉದ್ಧವ, ಮುಂದೆ ಇಪ್ಪತ್ತಾರು ವರ್ಷಗಳ ನಂತರ ನಡೆಯುವ ಕಥೆಯನ್ನು ಇಲ್ಲಿ ವಿವರಿಸಿದ್ದಾನೆ. ಮುಂದೆ ಯಾದವರೆಲ್ಲರೂ ಹೊಡೆದಾಡಿಕೊಂಡು ಸಾಯಬೇಕು ಎನ್ನುವುದು ಭಗವಂತನ ಇಚ್ಛೆಯಾಗಿತ್ತು.  ಇದರ ಹಿಂದೆ ಋಷಿ ಶಾಪ ಮತ್ತು ಗಾಂಧಾರಿಯ ಶಾಪವಿರುವ ವಿಷಯ ನಮಗೆ ತಿಳಿದಿದೆ. ಗಾಂಧಾರಿ ತನ್ನ ಜೀವಮಾನದಲ್ಲಿ ಸಂಯಮ ಕಳೆದುಕೊಂಡು ಮಾತನಾಡಿದ ಏಕಮಾತ್ರ ಘಟನೆ ಅದಾಗಿದೆ. ಎಂದೂ ತನ್ನ ಮಕ್ಕಳ ಮೇಲೆ ಮೋಹಪಟ್ಟು ಮಾತನಾಡದ ಆಕೆ,  ಯುದ್ಧದ ನಂತರ, ತನಗೆ ನಮಸ್ಕರಿಸಲು ಬಂದ ಶ್ರೀಕೃಷ್ಣನಿಗೆ ಸಂಯಮ ಕಳೆದುಕೊಂಡು: “ಹೇಗೆ ನನ್ನ ವಂಶ ನಿರ್ವಂಶವಾಯಿತೋ ಹಾಗೇ  ನಿನ್ನ ವಂಶವೂ ನಿರ್ವಂಶವಾಗಲಿ” ಎಂದು ಶಾಪ ನೀಡುತ್ತಾಳೆ.  ಈ ಶಾಪವನ್ನು ಸಂತೋಷವಾಗಿ ಸ್ವೀಕರಿಸಿದ ಶ್ರೀಕೃಷ್ಣ : “ಪತಿವೃತೆಯ ಆಶೀರ್ವಾದ” ಎಂದು ನಗುತ್ತಾ ಹೇಳಿ ಹೊರಟು ಹೋಗುತ್ತಾನೆ. “ಅಂತಹ ಪತಿವೃತೆ ಗಾಂಧಾರಿಯ ಮಾತನ್ನು ಉಳಿಸುವುದಕ್ಕಾಗಿ: ‘ಯಾದವರೆಲ್ಲರೂ ಹೊಡೆದಾಡಿಕೊಂಡು ಸಾಯಬೇಕು’ ಎಂದು  ಶ್ರೀಕೃಷ್ಣ ಸಂಕಲ್ಪಿಸಿದ” ಎನ್ನುತ್ತಾನೆ ಉದ್ಧವ.

ಹೇಗೆ ಮಹಾಭಾರತ ಯುದ್ಧದಲ್ಲಿ ಭಗವಂತ ಯಾವುದೇ ಆಯುಧ ಹಿಡಿಯದೆ ಇಡೀ ಹದಿನೆಂಟು ಅಕ್ಷೋಹಿಣಿ ಸೇನೆಯ ಆಯಸ್ಸನ್ನು ತನ್ನ ಕಣ್ಣಿನಿಂದ ಹೀರಿದನೋ, ಅದೇ ರೀತಿ, ತನ್ನ ಸಾಮರ್ಥ್ಯದಿಂದ, ತಾನು ಯಾರನ್ನೂ ಕೊಲ್ಲದೆ, ಸಮಸ್ತ ಯಾದವ ಕುಲವನ್ನು ಸಂಹಾರ ಮಾಡುವ ಸಂಕಲ್ಪವನ್ನು ಭಗವಂತ ಮಾಡುತ್ತಾನೆ.

ಪ್ರಭಾಸ ಕ್ಷೇತ್ರಕ್ಕೆ ಬಂದ ಯಾದವರು ದಾನ ಧರ್ಮಾದಿ ಪುಣ್ಯಕರ್ಮಗಳನ್ನು ಮಾಡಿ ಮುಗಿಸಿದ ಮೇಲೆ,  ಶ್ರೀಕೃಷ್ಣನ ಅನುಮತಿಯಂತೆ ಎಲ್ಲರೂ ಮಧ್ಯಪಾನ ಮಾಡುತ್ತಾರೆ. [ಕ್ಷತ್ರಿಯರಿಗೆ ಮಧ್ಯಪಾನ, ಮಾಂಸ ಭಕ್ಷಣೆ ನಿಷಿದ್ಧವಲ್ಲ].  ಮಧ್ಯಪಾನ ಮಾಡಿ ಮೈಮರೆತ ಎಲ್ಲರೂ ಒಬ್ಬರಿಗೊಬ್ಬರು ಹೊಡೆದಾಡಿಕೊಳ್ಳಲು ಪ್ರಾರಂಭಿಸುತ್ತಾರೆ. ಆದರೆ ಶ್ರೀಕೃಷ್ಣ ಸರಸ್ವತೀ ನದಿ ನೀರನ್ನು ಆಚಮನ ಮಾಡಿ, ದೂರದಲ್ಲಿನ ಒಂದು ವೃಕ್ಷದ ಕೆಳಗೆ ನಗುತ್ತಾ ಕುಳಿತಿದ್ದ. ತನಗೆ ಶರಣಾದವರ ಸಮಸ್ತ ದುಃಖವನ್ನು ಪರಿಹರಿಸುವ, ಯಾವ ದೋಷದ ಸ್ಪರ್ಶವೂ ಇಲ್ಲದ ನಿರ್ದುಷ್ಟ ಸ್ವರೂಪಿ ಭಗವಂತ, ಯಾದವರ ಸಂಸಾರ ದುಃಖವನ್ನು ಈ ರೀತಿ ಪರಿಹರಿಸಿದ.   ಯಾದವರೆಲ್ಲರೂ ಹೊಡೆದಾಡಿಕೊಂಡು ಸಾಯುತ್ತಿದ್ದಂತೆ ಶ್ರೀಕೃಷ್ಣ ತನ್ನ ಅವತಾರ ಸಮಾಪ್ತಿ ಮಾಡುತ್ತಾನೆ.

ಮುಂದೆ ನಡೆಯಲಿರುವ ಈ ಎಲ್ಲಾ ಘಟನೆಗಳನ್ನು ಶ್ರೀಕೃಷ್ಣ ಇಪ್ಪತ್ತಾರು ವರ್ಷಗಳ ಹಿಂದೆ ಸಂಕಲ್ಪ ಮಾಡಿ ಉದ್ಧವನಿಗೆ ವಿವರಿಸಿ, ಆತನಿಗೆ ಸಮಸ್ತ ಧರ್ಮೋಪದೇಶ ಮಾಡಿ ಹೇಳುತ್ತಾನೆ: “ಇದು ನನ್ನ ಸಂದೇಶ. ಇದನ್ನು ನೀನು ಬದರಿಗೆ ಹೋಗಿ ಅಲ್ಲಿರುವ ಋಷಿಗಳಿಗೆ ನೀಡು” ಎಂದು. ಶ್ರೀಕೃಷ್ಣನಿಂದ ಉಪದೇಶ ಪಡೆದು ಬದರಿಗೆ ಹೋಗತ್ತಿರುವ ಉದ್ಧವನಿಗೆ  ದಾರಿ ಮಧ್ಯೆ ವಿದುರ ಸಿಕ್ಕಿದ್ದಾನೆ. ಅಲ್ಲಿ ಉದ್ಧವ ಈ ಎಲ್ಲಾ ವಿವರಗಳನ್ನು ವಿದುರನಿಗೆ ವಿವರಿಸಿದ್ದಾನೆ.

ಈ ಮೇಲಿನ ಶ್ಲೋಕದಲ್ಲಿ ‘ಸ್ವಕುಲಂ ಸಂಜಿಹೀರ್ಷುಣಾ’ ಎನ್ನುವಲ್ಲಿ ‘ಮುಂದೆ(ಇಪ್ಪತ್ತಾರು ವರ್ಷಗಳ ನಂತರ) ಯದುಕುಲ ನಾಶ ಮಾಡುವ ಸಂಕಲ್ಪವನ್ನು ಶ್ರೀಕೃಷ್ಣ ಮಾಡಿದ’ ಎಂದು ಹೇಳಲಾಗಿದೆ. ಆದರೆ ‘ಯದುಕುಲ ನಾಶವಾಗುವ ಕಾಲದಲ್ಲಿ ಶ್ರೀಕೃಷ್ಣ ಉದ್ಧವನಿಗೆ ಉಪದೇಶ ಮಾಡಿದ’ ಎನ್ನುವ ವಿಷಯವೂ ಈ ಅಧ್ಯಾಯದಲ್ಲಿ ಬರುತ್ತದೆ. ಇದು ನಮಗೆ ಸ್ವಲ್ಪ ಗೊಂದಲವನ್ನುಂಟು ಮಾಡುತ್ತದೆ. ಈ ಗೊಂದಲವನ್ನು ಆಚಾರ್ಯ ಮಧ್ವರು ತಮ್ಮ ತಾತ್ಪರ್ಯ ನಿರ್ಣಯದಲ್ಲಿ ಪ್ರಮಾಣ ಸಹಿತ ಪರಿಹರಿಸಿದ್ದಾರೆ. ‘ಆತ್ಮಮಾಯಾಯಾಃ ಆತ್ಮಸಾಮರ್ಥ್ಯಸ್ಯ ಗತಿಂ ಪೂರ್ವಮೇವಾವಲೋಕ್ಯ[3] ಅಂದರೆ: ಯದುಕುಲ ನಾಶದ ತನ್ನ ಸಾಮರ್ಥ್ಯದ ಮುಂದಿನ ಕಾರ್ಯತಂತ್ರವನ್ನು ಭಗವಂತ ಮೊದಲೇ ನಿರ್ಧರಿಸಿದ್ದ.

ಗರುಡ ಪುರಾಣದಲ್ಲಿ ಹೇಳುವಂತೆ: ಜ್ಞಾತ್ವಾ ಕತಿಪಯೈರ್ವಷ್ಯೈಃ ಪೂರ್ವಮೇವ ಜನಾರ್ದನಃ ಮೌಸಲಂ ಜ್ಞಾನಸನ್ತತ್ಯಾ[4] ಉದ್ಧವಂ ಬದರೀಂ ನಯತ್[5] ಸ ಜ್ಞಾನಂ[6] ತತ್ರ ವಿಸ್ತೀರ್ಯ ಪುನರ್ದ್ವಾರವತೀಂ ಯಯೌ  ಪೂರ್ವಮೇವೋಪದಿಷ್ಟೋSಪಿ ಹರಿಣಾ ಜ್ಞಾನಮುದ್ಧವಃ | ಸ್ವರ್ಗಾರೋಹಣಕಾಲೇ ತು ಪುನಃ ಪಪ್ರಚ್ಛ ಕೇಶವಮ್ ಪುನಃ ಶ್ರುತ್ವಾ ಬದರ್ಯೇ ತು[7] ವಷತ್ರಯಮುವಾಸ ಹ ಜ್ಞಾನಂ ಸಂಸ್ಥಾಪ್ಯ ಪಶ್ಚಾಚ್ಚ ಸ್ವೇಚ್ಛಯಾ ಸ್ವರ್ಗತಃ ಪ್ರಭುಃ” ಇತಿ ಗಾರುಡೇ[8] ಮುಂದೆ ಇಪ್ಪತ್ತಾರು ವರ್ಷಗಳ ನಂತರ ನಡೆಯಲಿರುವ ಯದುಕುಲ ನಾಶದ ವಿಷಯವನ್ನು ಉದ್ಧವನಿಗೆ ಹೇಳಿ ಆಗಲೇ ಆತನಿಗೆ ತತ್ವೋಪದೇಶ ನೀಡಿದ ಶ್ರೀಕೃಷ್ಣ,  ಆತನಲ್ಲಿ ಆ ಜ್ಞಾನವನ್ನು ಬದರಿಗೆ ತೆರಳಿ ಅಲ್ಲಿನ ಋಷಿಗಳಿಗೆ ನೀಡುವಂತೆ ಹೇಳಿದ್ದ.  ಬದರಿಗೆ ತೆರಳಿದ ಉದ್ಧವ ಶ್ರೀಕೃಷ್ಣನಿಂದ ಪಡೆದ ಜ್ಞಾನವನ್ನು ಅಲ್ಲಿನ ಋಷಿಗಳಿಗೆ ನೀಡಿ ಮತ್ತೆ ಮರಳಿ ದ್ವಾರಕೆಗೆ ಬಂದಿದ್ದ.  ಮುಂದೆ ಯಾದವ ಸಂಹಾರ ಕಾಲದಲ್ಲಿ ಮರಳಿ ಶ್ರೀಕೃಷ್ಣ ಉದ್ಧವನಿಗೆ ಉಪದೇಶ ನೀಡಿ ಮತ್ತೆ ಬದರಿಗೆ ಕಳುಹಿಸಿಕೊಡುತ್ತಾನೆ. ಈ ರೀತಿ ಮತ್ತೆ ಬದರಿಗೆ ಬಂದ ಉದ್ಧವ ಅಲ್ಲಿ ಮೂರುವರ್ಷಗಳ ಕಾಲ ವಾಸವಿದ್ದು, ತಾನು ಶ್ರೀಕೃಷ್ಣನಿಂದ ಪಡೆದ ಜ್ಞಾನವನ್ನು ಅಲ್ಲಿನ ಋಷಿಗಳಿಗೆ ನೀಡಿ, ಆನಂತರ ಸ್ವಇಚ್ಛೆಯಿಂದ ದೇಹತ್ಯಾಗ ಮಾಡುತ್ತಾನೆ.  ಈ ಹಿನ್ನೆಲೆ ತಿಳಿದಾಗ ಮೇಲಿನ ಮಾತಿನಲ್ಲಿನ ಗೊಂದಲ ಪರಿಹಾರವಾಗುತ್ತದೆ.

ಹೀಗೆ ಉದ್ಧವ ಶ್ರೀಕೃಷ್ಣನ ಅವತಾರ ಸಮಾಪ್ತಿಯ ಸಂಕಲ್ಪದ ವಿವರಣೆಯನ್ನು ವಿದುರನಿಗೆ ನೀಡಿ, “ಗಂಗಾನದಿ ತೀರದಲ್ಲಿರುವ ಮೈತ್ರೇಯರು ನಿನಗೆ ಶ್ರೀಕೃಷ್ಣ ನೀಡಿರುವ ಜ್ಞಾನೋಪದೇಶವನ್ನು ನೀಡಲಿದ್ದಾರೆ” ಎಂದು ಹೇಳಿ ಬದರಿಗೆ ಹೊರಟು ಹೋಗುತ್ತಾನೆ.

 

 ರಾಜೋವಾಚ

 ನಿಧನಮುಪಗತೇಷು ವೃಷ್ಣಿಭೋಜೇಷ್ವಧಿರಥಯೂಥಪಯೂಥಪೇಷು ಮುಖ್ಯಃ ।

 ಸ ತು ಕಥಮವಶಿಷ್ಟ ಉದ್ಧವೋ ಯತ್[9] ಪ್ರಭುರಪಿ ತತ್ಯಜ ಆಕೃತಿಂ ತ್ರ್ಯಧೀಶಃ ॥೨೮॥

 

ಈ ಹಂತದಲ್ಲಿ  ಶುಕಾಚಾರ್ಯರಿಂದ ಭಾಗವತ ಶ್ರವಣ ಮಾಡುತ್ತಿರುವ ಪರೀಕ್ಷಿತನಿಗೊಂದು ಪ್ರಶ್ನೆ ಬರುತ್ತದೆ.  ಋಷಿ ಶಾಪ ಮತ್ತು ಗಾಂಧಾರಿಯ ಶಾಪದಿಂದಾಗಿ ಇಡೀ ಯಾದವ ಕುಲ ನಾಶವಾಯಿತು. ಮಹಾರಥಿಗಳ ಸಮುದಾಯ ಮತ್ತು ಅಂತಹ ಮಹಾರಥಿಗಳ ಮುಖಂಡರೆಲ್ಲರೂ ಹೊಡೆದಾಡಿಕೊಂಡು ಸತ್ತರು. ಮೂರು ಲೋಕದ ಒಡೆಯನಾದ(ತ್ರ್ಯಧೀಶಃ) ಸ್ವಯಂ ಶ್ರೀಕೃಷ್ಣನೇ ಆಕೃತಿಯನ್ನು ತೊರೆದ (ಅವತಾರ ಸಮಾಪ್ತಿ ಮಾಡಿದ). ಹೀಗಿರುವಾಗ ಯಾದವರಲ್ಲಿ ಮುಖ್ಯನಾದ, ಮಹಾಜ್ಞಾನಿ ಉದ್ಧವ ಹೇಗೆ ಬದುಕುಳಿದ? ಇದು ಪರೀಕ್ಷಿತನ ಪ್ರಶ್ನೆ.

ಈ ಮೇಲಿನ ಶ್ಲೋಕದಲ್ಲಿ  ಆಕೃತಿಂ ತತ್ಯಜೇ’ ಎನ್ನುವ ಮಾತು ಬಳಕೆಯಾಗಿದೆ. ಈ ಮಾತನ್ನು ಮೇಲ್ನೋಟದಲ್ಲಿ ನೋಡಿದರೆ ‘ಶ್ರೀಕೃಷ್ಣ ಶರೀರ ತ್ಯಾಗ  ಮಾಡಿದ’ ಎಂದು ಹೇಳಿದಂತೆ ಕಾಣುತ್ತದೆ.  ಜ್ಞಾನಾನಂದಸ್ವರೂಪನಾದ ಭಗವಂತನಿಗೆ ಅದೆಲ್ಲಿಯ ದೇಹ? ಅಂತಹ ಭಗವಂತ ದೇಹ ತೊರೆಯುವುದು ಎಂದರೇನು? ಈ ಎಲ್ಲಾ ಗೊಂದಲಗಳನ್ನು ಆಚಾರ್ಯ ಮಧ್ವರು ತಮ್ಮ ತಾತ್ಪರ್ಯ ನಿರ್ಣಯದಲ್ಲಿ ಬಗೆಹರಿಸಿದ್ದಾರೆ: ಆಕೃತಿಂ  ಪೃಥಿವೀಮ್ -  ಶರೀರಮಾಕೃತಿರ್ದೇಹಃ ಕುಃ ಪೃಥ್ವೀ ಚ ಮಹೀ ತಥಾ”  ಹ್ಯಭಿಧಾನೇ[10] ಇಲ್ಲಿ ಹೇಳುವಂತೆ:  ‘ಆಕೃತಿ, ದೇಹ, ಕಂ, ಪೃಥ್ವಿ ಮತ್ತು  ಮಹೀ’  ಈ ಎಲ್ಲಾ ಶಬ್ದಗಳು ಸಮನಾರ್ಥಕ ಪದಗಳು.  ಈ ಅರ್ಥದಂತೆ ನೋಡಿದಾಗ: ಮೇಲಿನ ಮಾತು “ಭಗವಂತ ಭೂಮಿಯನ್ನು ತ್ಯೆಜಿಸಿದ” ಎಂದು ಹೇಳಿದಂತಾಗುತ್ತದೆ. ಆದರೆ ಸರ್ವಾಂತರ್ಯಾಮಿ, ಸರ್ವವ್ಯಾಪ್ತ ಭಗವಂತ ಭೂಮಿಯನ್ನು ತ್ಯಜಿಸಿದ ಎನ್ನುವುದು ಇಲ್ಲಿ  ಕೂಡುವುದಿಲ್ಲ. ಈ ಸಮಸ್ಯೆಗೆ  ಸ್ಕಾಂಧ ಪುರಾಣದಲ್ಲಿ ಉತ್ತರವಿದೆ. ಅಲ್ಲಿ ಹೇಳುವಂತೆ: ಪೃಥಿವೀಲೋಕಸನ್ತ್ಯಾಗೋ ದೇಹತ್ಯಾಗೋ ಹರೇಃ ಸ್ಮೃತಃ ನಿತ್ಯಾನನ್ದಸ್ವರೂಪತ್ವಾದನ್ಯನ್ನೈವೋಣ್ಪದ್ಯತೇ[11] ದರ್ಶಯೇಜ್ಜನಮೋಹಾಯ ಸದೃಶೀಂ ಮೃತಕಾಕೃತಿಮ್ ನಟವದ್ ಭಗವಾನ್ ವಿಷ್ಣುಃ ಪರಜ್ಞಾನಾತ್ಮಕೋ ವಿಭುಃ[12]ಇತಿ ಸ್ಕಾನ್ದೇ  ಮಾನವ ರೂಪಿಯಾಗಿ ನಮ್ಮ ಕಣ್ಣಿಗೆ ಕಂಡ ಭಗವಂತ,  ಅವತಾರ ಸಮಾಪ್ತಿ ಮಾಡಿದಾಗ, ನಮ್ಮ ಕಣ್ಣಿಗೆ ಕಾಣುತ್ತಿದ್ದ ಆತನ ಶರೀರ ಅದೃಶ್ಯವಾಗುತ್ತದೆ. ಉಳಿದಂತೆ ಅಲ್ಲಿ  ಮೃತ ದೇಹ ಕಾಣುವಂತೆ ಮಾಡಿ ಜನರಿಗೆ ಭ್ರಮೆ ಬರಿಸಿರುವುದು ಭಗವಂತನ ಲೀಲಾ ನಾಟಕದ ಒಂದು ಭಾಗವಷ್ಟೇ. ಮುಂದೆ ಭಾಗವತದಲ್ಲೇ ಹೇಳುವಂತೆ(೧೧.೩೧): ರಾಜನ್ ಪರಸ್ಯ ತನುಭೃಜ್ಜನನಾಪ್ಯಯೇಹಾ[13] ಮಾಯಾವಿಡಮ್ಬನಮವೈಹಿ ಯಥಾ ನಟಸ್ಯ’ ಇತಿ ಚ  : ನಮಗೆ ಕಾಣುವ ಭಗವಂತನ ಜನನ-ಮರಣ  ಇತ್ಯಾದಿ ವ್ಯಾಪಾರಗಳು ಕೇವಲ ಆತನ ಲೀಲಾ ನಾಟಕವಷ್ಟೇ. ಹೀಗಾಗಿ ಶ್ರೀಕೃಷ್ಣ ಶರೀರ ತ್ಯಾಗ  ಮಾಡಿದ ಎಂದರೆ : ನಮ್ಮ ಪಾಲಿಗೆ ಅದೃಶ್ಯನಾದ ಎಂದರ್ಥ.

 

[ಯದುಕುಲ ನಾಶಕ್ಕೆ ಕೇವಲ ಗಾಂಧಾರಿಯ ಶಾಪವೊಂದೇ ಕಾರಣವಲ್ಲ. ಜೊತೆಗೆ ಋಷಿ ಶಾಪವೂ ಕಾರಣವಾಗಿದೆ. ಶ್ರೀಕೃಷ್ಣನ ಮಗ ಸಾಂಬ ಯದುಕುಲದಲ್ಲಿ ಅತ್ಯಂತ ಸುಂದರ ವ್ಯಕ್ತಿಯಾಗಿದ್ದ. ಒಮ್ಮೆ ಯಾದವರು ಸಾಂಬನಿಗೆ ಗರ್ಭಿಣಿ ವೇಷ ತೊಡಿಸಿ, ಆತನನ್ನು ದೂರ್ವಾಸ ಮುನಿ ತಪಸ್ಸಿಗೆ ಕುಳಿತಿದ್ದ ಸ್ಥಳಕ್ಕೆ ಕರೆತಂದು, ಅವರಲ್ಲಿ: “ಈಕೆಗೆ ಗಂಡು ಮಗುವಾಗುತ್ತದೋ ಅಥವಾ ಹೆಣ್ಣು ಮಗುವಾಗುತ್ತದೋ” ಎಂದು ಕೇಳುತ್ತಾರೆ. ಜ್ಞಾನ ದೃಷ್ಟಿಯಲ್ಲಿ ಎಲ್ಲವನ್ನೂ ಕಂಡ ದುರ್ವಾಸರು: “ಈತನ ಹೊಟ್ಟೆಯಲ್ಲಿ ಕಬ್ಬಿಣದ ಸಲಾಖೆ ಹುಟ್ಟುತ್ತದೆ ಮತ್ತು ಅದರಿಂದ ನಿಮ್ಮ ವಂಶ ನಾಶವಾಗುತ್ತದೆ” ಎಂದು ಶಾಪ ನೀಡುತ್ತಾರೆ. ಇದರಿಂದಾಗಿ ಸಾಂಬ ಕಬ್ಬಿಣದ ಸಲಾಖೆಗೆ ಜನ್ಮ ನೀಡುತ್ತಾನೆ. ಈ ಘಟನೆಯಿಂದ ಬೆದರಿದ ಯಾದವರು  ಆ ಸಲಾಖೆಯನ್ನು ಗಂಧದಂತೆ ತೇಯ್ದು ಸಮುದ್ರಕ್ಕೆ ಎಸೆಯುತ್ತಾರೆ. ಈ ಗಂಧ ಸಮುದ್ರದ ತಡಿಯಲ್ಲಿ ಬೆಳೆಯುವ ಮುಳ್ಳಿನ ಗಿಡಕ್ಕೆ ಗೊಬ್ಬರವಾಗುತ್ತದೆ. ಮುಂದೆ ಇದೇ ಮುಳ್ಳಿನ ಗಿಡಗಳಿಂದ ಯಾದವರು ಒಬ್ಬರಿಗೊಬ್ಬರು ಹೊಡೆದಾಡಿಕೊಂಡು  ಸಾಯುವಂತಾಗುತ್ತದೆ. ಭಗವಂತ ಎಂದೂ ಜ್ಞಾನಿಗಳ ಮಾತನ್ನು ಸುಳ್ಳಾಗಿಸುವುದಿಲ್ಲ. ಸಮುದ್ರದ ತಡಿಯಲ್ಲಿ ಸಿಕ್ಕ ಆ ಕಬ್ಬಿಣದ ಸಲಾಖೆಯ ಒಂದು ಚಿಕ್ಕ ಭಾಗವನ್ನು ಬೇಡನೊಬ್ಬ ತನ್ನ ಬಾಣದ ತುದಿಯಲ್ಲಿ ಬಳಸುತ್ತಾನೆ. ಈ ಬಾಣವೇ ಶ್ರೀಕೃಷ್ಣನ ಅವತಾರ ಸಮಾಪ್ತಿಗೆ ಕಾರಣವಾಗುತ್ತದೆ.  ಈ ಎಲ್ಲಾ ಘಟನೆಗಳ ಹಿನ್ನೆಲೆಯಲ್ಲಿ ಪರೀಕ್ಷತ ಮೇಲಿನ ಪ್ರಶ್ನೆ ಹಾಕಿದ್ದಾನೆ. ಪತಿವೃತೆ ಮತ್ತು ಋಷಿ ಶಾಪವನ್ನು ನಿಜವಾಗಿಸುವುದಕ್ಕೆ ಸ್ವಯಂ ಭಗವಂತನೇ ಸಾಕ್ಷಿಯಾಗಿ ನಿಂತು ತನ್ನ ಅವತಾರ ಸಮಾಪ್ತಿ ಮಾಡಿದ. ಆದರೆ ಯಾದವರಲ್ಲೇ ಒಬ್ಬನಾದ ಉದ್ಧವ ಹೇಗೆ  ಈ ಘಟನೆಯಿಂದ ಪಾರಾದ ಎನ್ನುವುದು ಆತನ ಪ್ರಶ್ನೆ].



[1] “ಭಗವಾನ್ ಸ್ವಾತ್ಮಮಾಯಾಯಾಃ” -ಪ್ರಚಲಿತ ಪಾಠ, “ಭಗವಾಂಸ್ತ್ವಾತ್ಮಮಾಯಾಯಾ” – ಎಂದು ಕೆಲವರು.

[2] “ವೃಕ್ಷಮೂಲಮುಪಾವಿಶತ್” – ಪ್ರಚಲಿತ ಪಾಠ

[3]“ಪೂರ್ವಮೇವಾsಲೋಚ್ಯ”-ಪಾಠಾನ್ತರ

[4] “ಜ್ಞಾನಸಮ್ಪತ್ತ್ಯೈ” – ಎಂದು ಕೆಲವರು

[5] “ನಯನ್” – ಪಾಠಾನ್ತರ

[6] “ತಜ್ಞಾನಂ” – ಎಂದು ಕೆಲವರು

[7] “ಬದರ್ಯಾಂ ಚ” – ಎಂದು ಕೆಲವರು

[8] “ಇತಿ ಚ ಗಾರುಡೇ” – ಎಂದು ಕೆಲವರು

[9] ಉದ್ಧವೋsಯಮ್ - ಪಾಠಾನ್ತರ

[10] “ಇತ್ಯಾಭಿಧಾನಮ್”- ಪ್ರಚಲಿತ ಪಾಠ

[11] “ನೈವೋಪಲಭ್ಯತೇ” – ಪ್ರಚಲಿತ ಪಾಠ, “ಅನ್ಯೋ ನೈವೋಪಲಭ್ಯತೇ” – ಎಂದು ಕೆಲವರು.

[12] “ಪರಜ್ಞಾನಾಕೃತಿಃ ಸ್ವಯಮ್” – ಪ್ರಚಲಿತ ಪಾಠ, ““ಪರಜ್ಞಾನಾಕೃತಿಃ ಸದಾ”, “ಪರಂ ಪರಜ್ಞಾನಾಕೃತಿಃ ಸದಾ” ಎಂದೂ ಹೇಳುತ್ತಾರೆ.

[13] “-ಪ್ಯಯೇಹಾಂ ಮಾಯಾವಿಡಮ್ಬನ-“ , [13] “-ಪ್ಯಯೇಹಾಂ ಮಾಯಾಂ ವಿಡಮ್ಬನ-“ ಎಂದು ಕೆಲವರು.

Sunday, March 3, 2024

Shrimad BhAgavata in Kannada -Skandha-03-Ch-03_02

ಉದ್ಧವ ವಿದುರ ಸಂವಾದ-ಜ್ಞಾನೋಪದೇಶ ಮತ್ತು ವಿರಕ್ತಿ

 

ಭಗವಾನಪಿ ವಿಶ್ವಾತ್ಮಾ ಲೋಕವೇದಪಥಾನುಗಃ ।

ಕಾಮಂ[1] ಸಿಷೇವೇ ದ್ವಾರ್ವತ್ಯಾಮಸಕ್ತಃ ಸಾಙ್ಖ್ಯಮಾಸ್ಥಿತಃ ॥೧೯॥

 

ಇಲ್ಲಿಯ ತನಕ ಸಂಸಾರ, ಮಕ್ಕಳು, ಈ ರೀತಿ ಒಂದು ರೀತಿ ಕೃಷ್ಣಕಥೆಯ ಲೌಕಿಕ ಮುಖವನ್ನು ಹೇಳಿದ್ದ ಉದ್ಧವ, ಭಗವಂತನ ಈ ಎಲ್ಲಾ ಲೀಲೆಗಳ ಹಿಂದಿನ ಸತ್ಯವೇನು ಎನ್ನುವುದನ್ನು ಇಲ್ಲಿ ವಿವರಿಸಿದ್ದಾನೆ. [ಈ ಶ್ಲೋಕದಲ್ಲಿ ‘ಅಪಿ’ ಎನ್ನುವ ಪದ ‘ಭಗವಾನ್’ ಮತ್ತು ‘ವಿಶ್ವಾತ್ಮಾ’ ಎನ್ನುವ ಎರಡು ಶಬ್ದಗಳ ನಡುವೆ ಬಂದಿದ್ದು, ಸಂಸ್ಕೃತ ಭಾಷೆಯ  ‘ದೇಹಲಿ ದೀಪ ನ್ಯಾಯ’  ಎನ್ನುವ ನಿಯಮದಂತೆ : ಅಪಿ ಶಬ್ದ ಈ ಎರಡೂ ಶಬ್ದಗಳಿಗೂ ಅನ್ವಯವಾಗುತ್ತದೆ. ಅಂದರೆ  ಭಗವಾನಪಿ, ವಿಶ್ವಾತ್ಮಾಪಿ ಎಂದು ನಾವು ಅನ್ವಯ ಮಾಡಿಕೊಳ್ಳಬೇಕು]. ಜಗತ್ತಿನ ಎಲ್ಲಾ ಭಾಗ್ಯಗಳಿಗೂ ಒಡೆಯ[ಭಗವಾನ್]; ಸಮಸ್ತಜೀವಜಾತದ ಅಂತರ್ಯಾಮಿಯಾಗಿರುವ[ವಿಶ್ವಾತ್ಮಾ] ಶ್ರೀಕೃಷ್ಣನಿಗೆ, ಈ ಲೌಕಿಕ ಭೋಗದ ಅವಶ್ಯಕತೆ ಏನಿದೆ? ಎಲ್ಲವನ್ನೂ ಸೃಷ್ಟಿಮಾಡಿ, ಎಲ್ಲವುದರ ಒಳಗೂ ಹೊರಗೂ ತುಂಬಿ, ಕೊನೆಗೊಂದು ದಿನ ಎಲ್ಲವನ್ನೂ ಸಂಹಾರ ಮಾಡುವ ಶಕ್ತಿಯಾದ(ಆತ್ಮಾ) ಶ್ರೀಕೃಷ್ಣನಿಗೆ ಮದುವೆಯಾಗಿ, ಮಕ್ಕಳನ್ನು ಪಡೆದು ಏನೂ ಆಗಬೇಕಿಲ್ಲ. ಆದರೂ ಕೂಡಾ ಭಗವಂತ ಈ ಎಲ್ಲಾ ಲೀಲೆಗಳನ್ನಾಡಿದ. ಶಾಸ್ತ್ರದಲ್ಲಿ ಹೇಳುವಂತೆ: ಪ್ರಾಪ್ತೇ ನರೇಷು ಜನನೇ ನರವತ್ ಪ್ರವೃತ್ತಿಃ. ಮಹಾಪುರುಷರು  ಭೂಮಿಯಲ್ಲಿ ಅವತರಿಸಿದಾಗ, ಅತಿಮಾನುಷ ಲೀಲೆಗಳನ್ನು ಹೊರತುಪಡಿಸಿದರೆ,  ಅವರು ಮನುಷ್ಯರಂತೆಯೇ ವರ್ತಿಸಿ ಮನುಷ್ಯರು ಏನು ಮಾಡಬೇಕು ಎನ್ನುವುದನ್ನು ತೋರಿಸಿ ಕೊಡುತ್ತಾರೆ. ಇದೇ ರೀತಿ ಶ್ರೀಕೃಷ್ಣ ಲೌಕಿಕವಾದ ಮತ್ತು ವೈದಿಕವಾದ ನಿಯಮಗಳಿಗೆ ಬದ್ದನಾಗಿದ್ದು ತನ್ನ ಲೀಲೆಗಳನ್ನು ತೋರಿದ.

ಯುದ್ಧದಲ್ಲಿ ತನ್ನ ಪ್ರಜೆಗಳಿಗೆ ತೊಂದರೆ ಆಗಬಾರದು ಎಂದು ಶ್ರೀಕೃಷ್ಣ ಸಮುದ್ರದ ನಡುವಿನಲ್ಲಿ ದ್ವಾರಾವತಿ ನಗರವನ್ನು ನಿರ್ಮಿಸಿದ.[ಕೃಷ್ಣಾವತಾರ ಸಮಾಪ್ತಿಯಾದ ಏಳನೇ ದಿನ ಈ ನಗರ ನೀರಿನಲ್ಲಿ ಮುಳುಗಿತು]. ಅಲ್ಲಿ ಶ್ರೀಕೃಷ್ಣ ಯಾವ ಲೇಪವೂ ಇಲ್ಲದೇ, ತಾನು ನಿರ್ಲಿಪ್ತನಾಗಿದ್ದು[ಸ್ವರೂಪಾನಂದದಲ್ಲಿದ್ದು], ತನ್ನನ್ನು ವರಿಸಿದ ರಾಜಕುಮಾರಿಯರಿಗೆ ದಾಂಪತ್ಯ ಸುಖವನ್ನು ಕರುಣಿಸಿದ. 

ಈ ಶ್ಲೋಕದಲ್ಲಿ ಬಳಕೆಯಾಗಿರುವ ‘ಸಾಂಖ್ಯ’ ಎನ್ನುವ ಪದ ಭಗವಂತನ ಸ್ವರೂಪಾನಂದವನ್ನು ಸೂಚಿಸುತ್ತದೆ. ಆಚಾರ್ಯ ಮಧ್ವರು ತಮ್ಮ ತಾತ್ಪರ್ಯನಿರ್ಣಯದಲ್ಲಿ ಹೇಳಿರುವಂತೆ:  ಕೇವಲಂ ಭಗವಜ್ಜ್ಞಾನಂ ಸಾಙ್ಖ್ಯಮಿತ್ಯಭಿಧೀಯತೇಇತ್ಯಧ್ಯಾತ್ಮೇ. ಸ್ವರೂಪಾನಂದವೆನ್ನುವ ಅಪರಿಮಿತವಾದ ಆನಂದದ ಕಡಲಾದ ಭಗವಂತನಿಗೆ ವಿಷಯ ಭೋಗದಲ್ಲಿ  ಎಲ್ಲಿಯ ಆಸಕ್ತಿ?  ಆತ ಸದಾ ವಿಷಯವಿರಕ್ತ.

ಶ್ರೀಕೃಷ್ಣ ದ್ವಾರಕೆಯಿಂದ ಆಗಾಗ ಹಸ್ತಿನಪುರಕ್ಕೆ ಬಂದು ಹೋಗುತ್ತಿದ್ದ. ಹೀಗೆ ಬಂದವನು ಸುಮಾರು ಐದು ಆರು ತಿಂಗಳು ಹಸ್ತಿನಪುರದಲ್ಲೇ ನಿಲ್ಲುತ್ತಿದ್ದ. ಆ ಸಮಯದಲ್ಲಿ ದ್ವಾರಕೆಯ ಸಮಸ್ತ ಜನರೂ ಶ್ರೀಕೃಷ್ಣ ಹಿಂತಿರುಗಿ ಬರುವ ದಿನಕ್ಕಾಗಿ ಕಾಯುತ್ತಿದ್ದರು. ಶ್ರೀಕೃಷ್ಣ ಹಸ್ತಿನಪುರದಿಂದ ಹಿಂತಿರುಗಿ ಬರುವಾಗ ದ್ವಾರಕೆಯ ಸಮೀಪ ಬಂದು ತನ್ನ ಶಂಖನಾದ ಮಾಡುತ್ತಿದ್ದ. ಈ ಶಂಖನಾದ ಕೇಳಿದ ತಕ್ಷಣ ಇಡೀ ದ್ವಾರಕೆಯ ಜನ  ಶ್ರೀಕೃಷ್ಣನನ್ನು ಸ್ವಾಗತ ಮಾಡಲು ಓಡಿ ಬರುತ್ತಿದ್ದರು. ಈ ರೀತಿ ವಿಹಾರ ಮಾಡಿಕೊಂಡು ಶ್ರೀಕೃಷ್ಣ ದ್ವಾರಕೆಯಲ್ಲಿದ್ದ.

ಈ ಹಿಂದೆ ವಿವರಿಸಿದಂತೆ ಮಹಾಭಾರತ ಯುದ್ಧ ನಡೆದಾಗ ಶ್ರೀಕೃಷ್ಣನಿಗೆ ಸುಮಾರು ೭೦ ವರ್ಷ ವಯಸ್ಸು. ಯುದ್ಧ ನಡೆದು ಸುಮಾರು ಹತ್ತುವರ್ಷಗಳ ನಂತರ ಯಾದವರು ಋಷಿಶಾಪಕ್ಕೊಳಗಾಗುತ್ತಾರೆ. ಆದರೆ ಈ ಘಟನೆಗೂ ಮೊದಲೇ ಶ್ರೀಕೃಷ್ಣ ಮುಂದೆ ನಡೆಯಲಿರುವ ಘಟನೆಗಳ ಜೊತೆಗೆ ತನ್ನ ಅವತಾರ ಸಮಾಪ್ತಿ ವಿಷಯವನ್ನು ಉದ್ಧವನಿಗೆ ತಿಳಿಸಿದ್ದ. ಶ್ರೀಕೃಷ್ಣ ಉದ್ಧವನಿಗೆ ಅಧ್ಯಾತ್ಮದ ಉಪದೇಶ ನೀಡಿ, “ನೀನು ಬದರಿಗೆ ಹೋಗಿ ಈ ಜ್ಞಾನವನ್ನು ಅಲ್ಲಿರುವ ಋಷಿಗಳಿಗೆ ಬಿತ್ತರಿಸು” ಎಂದು ಹೇಳಿದ್ದ. ಶ್ರೀಕೃಷ್ಣನ ಸೂಚನೆಯಂತೆ ಉದ್ಧವ ಬದರಿಗೆ ಹೋಗಿದ್ದರೂ ಅಲ್ಲೇ ನಿಲ್ಲದೆ, ಆಗಾಗ  ಹಸ್ತಿನಪುರಕ್ಕೆ ಬಂದು ಹೋಗುತ್ತಿದ್ದ. ಹೀಗೆ ಶ್ರೀಕೃಷ್ಣ ಅವತಾರ ಸಮಾಪ್ತಿ ಮಾಡಲಿರುವ ಸಮಯ ಸಮೀಪಿಸುತ್ತಿರುವ ಕಾಲದಲ್ಲಿ ಉದ್ಧವ ಶ್ರೀಕೃಷ್ಣನ ಜೊತೆಗಿದ್ದ. ಹೀಗಾಗಿ ಅವತಾರ ಸಮಾಪ್ತಿಗೂ ಮೊದಲು ಶ್ರೀಕೃಷ್ಣ ಉದ್ಧವನಿಗೆ ಮತ್ತೆ ಉಪದೇಶ ನೀಡಿದ. ಇದೇ ಸಮಯದಲ್ಲಿ ಶ್ರೀಕೃಷ್ಣನನ್ನು ಕಾಣಲು ಅಲ್ಲಿಗೆ  ಮೈತ್ರೇಯ ಬರುತ್ತಾನೆ. ಶ್ರೀಕೃಷ್ಣ ಉದ್ಧವನ ಜೊತೆಗೆ ಮೈತ್ರೇಯನಿಗೂ ಕೂಡಾ ಮುಂದೆ ನಡೆಯಲಿರುವ ತನ್ನ ಅವತಾರ ಸಮಾಪ್ತಿ ವಿಷಯವನ್ನು ಹೇಳಿ,  ಸೃಷ್ಟಿಯ ಆದಿಯಲ್ಲಿ ತಾನು ಚತುರ್ಮುಖನಿಗೆ ನೀಡಿದ ಜ್ಞಾನವನ್ನು ಅವರಿಗೆ ಉಪದೇಶಿಸುತ್ತಾನೆ.  ಹೀಗೆ ಅವರಿಬ್ಬರಿಗೂ  ಅದ್ಭುತವಾದ ಆದಿವಿಜ್ಞಾನವನ್ನು ಉಪದೇಶ ಮಾಡಿದ ಶ್ರೀಕೃಷ್ಣ, ತನ್ನ ಅವತಾರ ಸಮಾಪ್ತಿ ವಿಷಯವನ್ನು ವಿದುರನಿಗೆ ತಿಳಿಸುವ ಜವಾಬ್ದಾರಿಯನ್ನು ಉದ್ಧವನಿಗೆ ನೀಡಿದರೆ,   ತಾನು ನೀಡಿದ ಅಧ್ಯಾತ್ಮ ವಿದ್ಯೆಯನ್ನು ವಿದುರನಿಗೆ ಉಪದೇಶಿಸುವಂತೆ ಮೈತ್ರೇಯನಿಗೆ ತಿಳಿಸುತ್ತಾನೆ.

 

ತಸ್ಯೇತ್ಥಂ[2] ರಮಮಾಣಸ್ಯ ಸಂವತ್ಸರಗಣಾನ್ ಬಹೂನ್ ।

ಗೃಹಮೇಧೇಷು ಯೋಗೇಷು ವಿರಾಗಃ ಸಮಜಾಯತ ॥೨೨॥

 

ತನ್ನ ಅವತಾರ ಸಮಾಪ್ತಿಯ ವಿಷಯವನ್ನು ವಿದುರನಿಗಲ್ಲದೆ ಇನ್ನಾರಿಗೂ ತಿಳಿಸಕೂಡದು ಎಂದು ಹೇಳಿದ ಶ್ರೀಕೃಷ್ಣ , ಉದ್ಧವ-ಮೈತ್ರೇಯರಿಗೆ ಆದಿವಿಜ್ಞಾನದ ಉಪದೇಶ ನೀಡಿ, ತಾನು ವಿರಕ್ತಿಯನ್ನು ತೋರಿದ. ಈ ಶ್ಲೋಕದಲ್ಲಿ “ಗೃಹಮೇಧೇಷು ಯೋಗಃ” ಎನ್ನುವ ಪದ ಬಳಕೆಯಾಗಿದೆ. ಶ್ರೀಕೃಷ್ಣ ದಾಂಪತ್ಯದ ಯೋಗದಲ್ಲಿದ್ದನೇ ಹೊರತು ಭೋಗದಲ್ಲಲ್ಲ.  ಭೋಗದಲ್ಲಿರುವ ಬಿಡಲಾರದ ಮಮತೆ ಯೋಗದಲ್ಲಿಲ್ಲ. ಹೀಗಾಗಿ ಅಂಟಿಸಿಕೊಳ್ಳದೇ ಮಾಡುವ ಗಾರ್ಹಪತ್ಯ(ದಾಂಪತ್ಯ ಜೀವನ) ಬ್ರಹ್ಮಚರ್ಯದಂತೆ  ಯೋಗವಾಗುತ್ತದೆ ಎನ್ನುವ ಸತ್ಯವನ್ನು ಈ ಶ್ಲೋಕ ನಮಗೆ ನೀಡುತ್ತದೆ.

“ಇಲ್ಲಿಯ ತನಕ ಬಾಹ್ಯವಾಗಿ ಸಂಸಾರ ರಸ ಭೋಗದಲ್ಲಿದ್ದವನಂತೆ ತೋರಿದ ಶ್ರೀಕೃಷ್ಣ,  ಬಳಿಕ ಎಲ್ಲದರಲ್ಲೂ ವಿರಕ್ತಿ ಹೊಂದಿದವನಂತೆ ತೋರಿಸಿಕೊಂಡ” ಎಂದಿದ್ದಾನೆ ಉದ್ಧವ.  ಈ ಶ್ಲೋಕದಲ್ಲಿ “ವಿರಾಗಃ ಸಮಜಾಯಾತ” ಎಂದು ಹೇಳಲಾಗಿದೆ. ಇದರ ಅರ್ಥ ವೈರಾಗ್ಯ ಉಂಟಾಯಿತು ಎಂದರ್ಥವಲ್ಲ. ಪಾದ್ಮಪುರಾಣದಲ್ಲಿ ಹೇಳುವಂತೆ: ಸರ್ವದಾSಪಿ ವಿರಕ್ತಃ ಸನ್ ಭಾಸಯೀತ ವಿರಾಗವತ್[3] | ಕಾದಾಚಿತ್ಕಃ ಕುತಸ್ತಸ್ಯ ಲೋಕಶಿಕ್ಷಾರ್ಥಮಿಷ್ಯತೇ. ಭಗವಂತ ಸದಾ ವಿಷಯ ವಿರಕ್ತ. ಆದರೆ ಲೋಕಕಲ್ಯಾಣಕ್ಕಾಗಿ ಈ ತನಕ ಆಸಕ್ತಿ ಉಳ್ಳವನಂತೆ ತೋರಿಸಿಕೊಂಡಿದ್ದ ಆತ ಬಳಿಕ ವಿರಕ್ತನಾಗಿ ತೋರಿಸಿಕೊಂಡ.

 

 ದೈವಾಧೀನೇಷು ಕಾಮೇಷು ದೈವಾಧೀನಃ ಸ್ವಯಂ ಪುಮಾನ್ ।

ಕೋ ವಿಸ್ರಮ್ಭೇತ ಯೋಗೇನ ಯೋಗೇಶ್ವರಮನುವ್ರತಃ ॥೨೩॥

 

ಭಗವಂತನ ವಿರಕ್ತಿಯ ಕುರಿತು ಹೇಳುತ್ತಾ ಇಲ್ಲಿ ಒಂದು ಸುಂದರವಾದ ವ್ಯಾಖ್ಯಾನವನ್ನು ಉದ್ಧವನ ಮುಖೇನ ವ್ಯಾಸರು ನೀಡಿದ್ದಾರೆ. ಮನುಷ್ಯನಿಗೆ ಬಯಕೆ/ಕಾಮ ಸರ್ವೇ ಸಾಮಾನ್ಯ. ಆದರೆ ಆಸೆಪಟ್ಟಿದ್ದೆಲ್ಲಾ ಆತನಿಗೆ ಸಿಗುವುದಿಲ್ಲ. ಮನುಷ್ಯ ಬಯಸಬಹುದು, ಆದರೆ ಸಿಗುವುದು-ಬಿಡುವುದು ದೈವಾದೀನ. ನಮ್ಮ ಹಣೆಬರಹ ಏನಿದೆಯೋ ಅದಕ್ಕನುಗುಣವಾಗಿ, ಭಗವಂತನ ಸಂಕಲ್ಪದಂತೆ, ನಮಗೆ ಎಷ್ಟು ದಕ್ಕಬೇಕೋ ಅಷ್ಟೇ ದಕ್ಕುತ್ತದೆ. ಹೀಗೆ ಎಷ್ಟು ಸುಖ-ದುಃಖದ ಯೋಗ ನಮ್ಮ ಪಾಲಿಗೆ ಬರೆದಿದೆಯೋ, ಅಷ್ಟೇ ನಮಗೆ ಸಿಗುತ್ತದೆ. ಹೀಗಿರುವಾಗ ‘ಕಾಮವೊಂದೇ ಪುರುಷಾರ್ಥಾ, ಉಳಿದುದನ್ನು ನಾನು ನಂಬುವುದಿಲ್ಲ’ ಎಂದು ಹೇಳುವುದು ಕೇವಲ  ಹುಚ್ಚುತನ.

ಮನಸ್ಸಿನ ಮೇಲೆ ನಿಯಂತ್ರಣ ಇಲ್ಲದಿರುವುದೇ ಮನುಷ್ಯ ಕಾಮದ ಬಗ್ಗೆ ಹುಚ್ಚುಕಟ್ಟಲು ಮುಖ್ಯ ಕಾರಣ. ಯಾರು ಯೋಗ ಬಲದಿಂದ(ಚಿತ್ತವೃತ್ತಿ ನಿರೋಧದಿಂದ) ಎಲ್ಲಾ ಯೋಗಗಳ ಒಡೆಯನಾದ ಭಗವಂತನನ್ನು ನಂಬಿ ಬದುಕುತ್ತಾನೋ, ಆತನಿಗೆ ‘ಕಾಮ’ ಕ್ಷುಲ್ಲಕ ಎನಿಸುತ್ತದೆ. ಆದ್ದರಿಂದ ಅಂತಹ ಕಾಮದ ಬೆನ್ನು ಹತ್ತುವುದು ಎಷ್ಟು ವ್ಯರ್ಥ ಎನ್ನುವ ವಿಷಯವನ್ನು ಆತ ತಿಳಿದಿರುತ್ತಾನೆ.

ಜೀವನದಲ್ಲಿ ‘ಕಾಮ’ ಬೇಕು. ಆದರೆ ಮನುಷ್ಯ ಕಾಮದ ದಾಸನಾಗಬಾರದು. ಒಂದು ಕ್ಷಣದ ಆನಂದ ಪಡೆಯಲು ಹಾತೊರೆದು ಇಡೀ ಜೀವನವನ್ನೇ ಹಾಳು ಮಾಡಿಕೊಳ್ಳುವವರಿದ್ದಾರೆ. ಇಷ್ಟೇ ಅಲ್ಲ, ದುಃಖ ಪಡುವುದೇ ಆನಂದ ಎನ್ನುವ ಭ್ರಮೆಯಲ್ಲಿ ಬದುಕುವ ಜನರೂ ಇದ್ದಾರೆ. ಈ ಎಲ್ಲಾ ಹಿನ್ನೆಲೆಯಲ್ಲಿ ನಾವು ಬದುಕನ್ನು ನೋಡಿದರೆ: ಯಾವುದನ್ನು ನಾವು ಸುಖ ಎಂದುಕೊಂಡಿದ್ದೆವೋ ಅದು ಬಹಳ ದುರ್ಬಲವಾದ ವಿಷಯ ಎನ್ನುವುದು ತಿಳಿಯುತ್ತದೆ. ಈ ಎಚ್ಚರದಿಂದ ಬದುಕನ್ನು ನೋಡಿದಾಗ  ಎಲ್ಲಕ್ಕಿಂತ ಆಚೆಗಿನ ಸತ್ಯದ ಅರಿವಾಗುತ್ತದೆ. ಆಗ ಸಿಗುವ ಆನಂದ/ಸುಖ ಅಪರಂಪಾರವಾದುದು.

 

 ತತಃ ಕತಿಪಯೈರ್ಮಾಸೈ ರ್ವೃಷ್ಣಿಭೋಜಾನ್ಧಕಾದಯಃ ।

 ಯಯುಃ ಪ್ರಭಾಸಂ ಸಂಹೃಷ್ಟಾ ರಥೈರ್ದೇವವಿಮೋಹಿತಾಃ ॥೨೫॥

 

 ತತ್ರ ಸ್ನಾತ್ವಾ ಪಿತೄನ್ ದೇವಾನ್ ಋಷೀಂಶ್ಚೈವ ತದಮ್ಭಸಾ ।

 ತರ್ಪಯಿತ್ವಾSಥ  ವಿಪ್ರೇಭ್ಯೋ ಗಾವೋ ಬಹುಗುಣಾ ದದುಃ ॥೨೬॥

 

 ಹಿರಣ್ಯಂ ರಜತಂ ಶಯ್ಯಾಂ ವಾಸಾಂಸ್ಯಜಿನಕಮ್ಬಳಾನ್ ।

 ಹಯಾನ್ ರಥಾನಿಭಾನ್ ಕನ್ಯಾಂ ಧರಾಂ ವೃತ್ತಿಕರೀಮಪಿ ॥೨೭॥

 

 ಅನ್ನಂ ಚೋರುರಸಂ ತೇಭ್ಯೋ ದತ್ತ್ವಾ ಭಗವದರ್ಪಣಮ್ ।

 ಗೋವಿಪ್ರಾರ್ಥಾಸವಃ ಶೂರಾಃ ಪ್ರಣೇಮುರ್ಭುವಿ ಮೂರ್ಧಭಿಃ ॥೨೮॥

 

ಮುಂದುವರಿದು ಉದ್ಧವ ಹೇಳುತ್ತಾನೆ: “ಕೆಲವು ತಿಂಗಳುಗಳ ಬಳಿಕ ಶ್ರೀಕೃಷ್ಣ ಯಾದವರೆಲ್ಲರಲ್ಲಿ  ‘ನಾವು ಪ್ರಭಾಸಕ್ಕೆ ಹೋಗಿ, ಅಲ್ಲಿ ಸಮುದ್ರ ಸ್ನಾನ ಮಾಡಿ ದಾನ-ಧರ್ಮ ಮಾಡೋಣ’ ಎಂದು ಹೇಳುತ್ತಾನೆ. ಆಗ ಎಲ್ಲಾ ಯಾದವರು ಕೃಷ್ಣನ ಮಾತನ್ನು ಒಪ್ಪಿ ಸಂತೋಷವಾಗಿ ಪ್ರಭಾಸಕ್ಕೆ ಹೋಗುತ್ತಾರೆ. ಪ್ರಭಾಸ ಕ್ಷೇತ್ರದಲ್ಲಿ ಸ್ನಾನ ಮುಗಿಸಿದ ಆ ಎಲ್ಲಾ ಶೂರರು ಪಿತೃಗಳಿಗೂ, ದೇವತೆಗಳಿಗೂ, ಋಷಿಗಳಿಗೂ ತರ್ಪಣಕೊಟ್ಟು, ಅನೇಕ ವಿಧದ ದಾನ-ಧರ್ಮಾದಿಗಳನ್ನು ಮಾಡುತ್ತಾರೆ”.

ಉದ್ಧವ ಇಪ್ಪತ್ತಾರು ವರ್ಷಗಳ ನಂತರ ನಡೆಯಲಿರುವ ಯಾದವರ ಪ್ರಭಾಸ ಯಾತ್ರೆಯ ವಿವರವನ್ನು ಭೂತಕಾಲದಲ್ಲಿ, ಈಗಾಗಲೇ ಘಟನೆ ನೆಡೆದು ಹೋದಂತೆ ವಿವರಿಸಿರುವುದನ್ನು ನಾವಿಲ್ಲಿ ಕಾಣುತ್ತೇವೆ. ಇದು ಈಗಾಗಲೇ ನಾವು ಮೊದಲ ಸ್ಕಂಧದಲ್ಲಿ(೧-೧-೬) ವಿವರಿಸಿದ ಪುರಾಣ ನಿರೂಪಣೆಯ ಏಳು ವಿಧದಲ್ಲಿ  ಒಂದಾದ ‘ವ್ಯತ್ಯಾಸ’ ಶೈಲಿಯ ನಿರೂಪಣೆ.  ಏಕೆ ಈ ರೀತಿ ವಿವರಿಸಿದ್ದಾರೆ ಎನ್ನುವುದನ್ನು ಆಚಾರ್ಯ ಮಧ್ವರು ತಮ್ಮ ತಾತ್ಪರ್ಯ ನಿರ್ಣಯದಲ್ಲಿ ಪ್ರಮಾಣ ಸಹಿತ ಸುಂದರವಾಗಿ ವಿವರಿಸಿದ್ದಾರೆ. ಏಷ್ಯಚ್ಚ[4] ನಿಶ್ಚಿತಂ ಯತ್ ತದತೀತತ್ವೇನ ಭಣ್ಯತೇ ಚಕ್ರವತ್ ಪರಿವೃತ್ತೇರ್ವಾ ದುಷ್ಟಾನಾಂ ಮೋಹನಾಯ ಚ[5] ಇತಿ ನಾರದೀಯೇ[6] ನಾರದೀಯ ಸಮ್ಮಿತದಲ್ಲಿ ಹೇಳಿರುವಂತೆ: ಈ ರೀತಿಯ ಪುರಾಣ ಪ್ರಸ್ತುತಿಗೆ ಮುಖ್ಯವಾಗಿ ಮೂರು ಕಾರಣಗಳಿವೆ. (೧). ಮುಂದೆ ಯಾವುದು ಖಚಿತವಾಗಿ ನಡೆಯುತ್ತದೆಯೋ ಅದನ್ನು ನಡೆದು ಹೋದ ಘಟನೆಯಂತೆ ಹೇಳುತ್ತಾರೆ  (೨). ಈ ಎಲ್ಲಾ ವಿದ್ಯಮಾನಗಳೂ ಪ್ರತಿಕಲ್ಪದಲ್ಲಿ  ನಡೆಯುವುದರಿಂದ ಹಿಂದಿನ ಕಲ್ಪದ ಘಟನೆಯ ದೃಷ್ಟಾಂತವಾಗಿ ಹೇಳುತ್ತಾರೆ ಹಾಗು (೩). ದುರ್ಜನರಿಗೆ ಪುರಾಣವನ್ನು ಅರ್ಥ ಮಾಡಿಕೊಳ್ಳುವುದರಲ್ಲಿ ಗೊಂದಲ ಉಂಟಾಗಲಿ ಎಂದು ಈ ರೀತಿ  ಪ್ರಸ್ತುತಿ ಮಾಡಲಾಗುತ್ತದೆ.   

 

॥ ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ತೃತೀಯಸ್ಕಂಧೇ ತೃತೀಯೋSಧ್ಯಾಯಃ ॥

ಭಾಗವತ ಮಹಾಪುರಾಣದ ಮೂರನೇ  ಸ್ಕಂಧದ ಮೂರನೇ ಅಧ್ಯಾಯ ಮುಗಿಯಿತು

 

*********

 




[1] “ಕಾಮಾನ್ “ ಎಂದು ಪ್ರಚಲಿತ ಪಾಠ

[2] “ತಸ್ಯೈವಮ್” – ಪಾಠಾನ್ತರ

[3] “ವಿರಾಗಿವತ್” – ಪ್ರಚಲಿತ ಪಾಠ

[4] “ಏಷ್ಯಂ” – ಎಂದು ಕೆಲವರು

[5]ಮೋಹನಾಯ ವಾ” ಎಂದು ಕೆಲವರು

[6] “ಇತಿ ಸ್ಕಾನ್ದೇ” – ಪ್ರಚಲಿತ ಪಾಠ 

Wednesday, February 28, 2024

Shrimad BhAgavata in Kannada -Skandha-03-Ch-03_01

ತೃತೀಯೋSಧ್ಯಾಯಃ

 

ಉದ್ಧವ ವಿದುರ ಸಂವಾದ-ಶ್ರೀಕೃಷ್ಣನ ಅವತಾರ ಲೀಲೆಗಳು

ಉದ್ಧವ ಉವಾಚ

ಸಮಾಹುತಾ[1] ಭೀಷ್ಮಕಕನ್ಯಯಾ ಯೇ ಶ್ರಿಯಃ ಸವರ್ಣೇನ ಜಿಹೀರ್ಷಯೈಷಾಮ್[2]

ಗಾನ್ಧರ್ವವೃತ್ತ್ಯಾ ಮಿಷತಾಂ ಸ್ವಭಾಗಂ ಜಹ್ರೇ ಪದಂ ಮೂರ್ಧ್ನಿ ದಧತ್ ಸುಪರ್ಣಃ ॥೦೩॥

 

ವಿದುರನಿಗೆ ಶ್ರೀಕೃಷ್ಣನ ಅವತಾರದ ಲೀಲೆಗಳನ್ನು ವಿವರಿಸುತ್ತಿರುವ ಉದ್ಧವ ಇಲ್ಲಿ ರುಗ್ಮಿಣಿ ಸ್ವಯಂವರದ ಕುರಿತು ಹೇಳುತ್ತಾನೆ. ಭೀಷ್ಮಕ ರಾಜನ ಮಗಳು ರುಗ್ಮಿಣಿ [ರುಕ್ಮಿಣಿ ಎನ್ನುವುದು ಅಪಶಬ್ದ. ಸರಿಯಾದ ಶಬ್ದ ರುಗ್ಮಿಣಿ*]. ರುಗ್ಮಿಣಿಯನ್ನು ‘ಭ್ಯಷ್ಮೀ’ ಎಂದೂ ಕರೆಯುತ್ತಾರೆ. ಭೀಷ್ಮಕರಾಜ ತನ್ನ ಮಗಳ ಸ್ವಯಂವರ ಏರ್ಪಡಿಸಿ, ಅದರ ನಿಮಿತ್ತ ಎಲ್ಲಾ ಕ್ಷತ್ರಿಯರಿಗೂ ಆಹ್ವಾನವನ್ನು ಕಳುಹಿಸಿದ್ದ. ಈ ಸಂದರ್ಭದಲ್ಲಿ ರುಗ್ಮಿಣಿಯ ಅಣ್ಣ ರುಗ್ಮ  ಜರಾಸಂಧನ ನೇತ್ರತ್ವದಲ್ಲಿ  ರುಗ್ಮಿಣಿಯನ್ನು ಅವಳ ಇಚ್ಛೆಗೆ ವಿರುದ್ಧವಾಗಿ ಶಿಶುಪಾಲನಿಗೆ ಮದುವೆ ಮಾಡಿಸುವ ಪಿತೂರಿ ಮಾಡಿದ್ದ. ಈ ಕಾರಣದಿಂದ ರುಗ್ಮಿಣಿ ಪ್ರೀತಿಸುತ್ತಿದ್ದ ಶ್ರೀಕೃಷ್ಣನನ್ನು ಅವರು ಸ್ವಯಂವರಕ್ಕೆ ಆಹ್ವಾನ ಮಾಡಿರಲಿಲ್ಲ. ಅಷ್ಟೇ ಅಲ್ಲ, ಒಂದು ವೇಳೆ ಆಹ್ವಾನವಿಲ್ಲದೇ ಶ್ರೀಕೃಷ್ಣ ಬಂದರೂ ಕೂಡಾ, ಆತನಿಗೆ ಅಲ್ಲಿ ಯಾವುದೇ ಆಸನವಿರದಂತೆ ವ್ಯವಸ್ಥೆ ಮಾಡಲಾಗಿತ್ತು. ಆಚಾರ್ಯ ಮಧ್ವರು ತಮ್ಮ ತಾತ್ಪರ್ಯ ನಿರ್ಣಯದಲ್ಲಿ ಹೇಳಿದಂತೆ: ಭೀಷ್ಮಕಕನ್ಯಾಯಾ ಅರ್ಥೇ[3] ಸವರ್ಣಮಾತ್ರಯೋಗ್ಯತಯಾ[4] ಆಹೂತಾಃ | ಏಷಾಂ ಶ್ರಿಯೋ ಜಿಹೀರ್ಷಯಾSSಹ್ವಾನಬುದ್ಧಿರ್ಭಗವತಾ ಕೃತಾ |  ಅಲ್ಲಿ ಸೇರಲಿದ್ದವರು ಕೇವಲ  ಕ್ಷತ್ರಿಯರಾಗಿದ್ದುದರಿಂದ  ಆಹ್ವಾನಿತರಾಗಿದ್ದರೇ ಹೊರತು, ರುಗ್ಮಿಣಿಯನ್ನು ವರಿಸಲು ಯೋಗ್ಯರು ಎಂದಲ್ಲ. ಅಂತಹ ಕ್ಷತ್ರಿಯರ ಅಹಂಕಾರವನ್ನು ಮುರಿಯುವ ಇಚ್ಛೆಯಿಂದ ಅವರನ್ನು ಆಹ್ವಾನಿಸಲು ಭೀಷ್ಮಕನಿಗೆ ಭಗವಂತನೇ ಪ್ರೇರಣೆ ನೀಡಿದ್ದ.

ತನ್ನ ಇಚ್ಛೆಗೆ ವಿರುದ್ಧವಾಗಿ ತನ್ನ ಮದುವೆಯ ತಯಾರಿ ನಡೆದಿರುವುದು ರುಗ್ಮಿಣಿಗೆ ಗೊತ್ತಿತ್ತು. ಆಕೆ ತಾನು ಪ್ರೀತಿಸಿದ ಶ್ರೀಕೃಷ್ಣನಿಗೆ ಪತ್ರ ಬರೆದು:  “ನಾನು ನಿನ್ನನ್ನು ಬಯಸಿದವಳು. ಆದರೆ ನನ್ನನ್ನು ಶಿಶುಪಾಲನಿಗೆ ಕೊಟ್ಟು ಮದುವೆ ಮಾಡಿಸುವ ತಯಾರಿ ನಡೆಸಲಾಗಿದೆ. ನೀನು ಬಂದು ನನ್ನನ್ನು ಇಲ್ಲಿಂದ ಕರೆದುಕೊಂಡು ಹೋಗಬೇಕು. ನೀನು ಬರಲಿಲ್ಲ ಎಂದರೆ ನಾನು ದೇಹತ್ಯಾಗ ಮಾಡುತ್ತೇನೆ ಹೊರತು,  ಆ ನರಿಯನ್ನು(ಶಿಶುಪಾಲನನ್ನು) ಮದುವೆಯಾಗಲಾರೆ” ಎಂದು ತಿಳಿಸಿದ್ದಳು.  

ಸ್ವಯಂವರದ ವ್ಯವಸ್ಥೆ, ಅದರ ಹಿಂದಿನ ಪಿತೂರಿಯನ್ನು ತಿಳಿದಿದ್ದ ಶ್ರೀಕೃಷ್ಣ, ಸ್ವಯಂವರ ಮಂಟಪಕ್ಕೆ ಬರಲಿಲ್ಲ. ಮದುವೆಗೆ ಮೊದಲು ಕನ್ಯೆ ದೇವಸ್ಥಾನಕ್ಕೆ ಬರುವ ಕಾರ್ಯಕ್ರಮವಿದ್ದು, ಆ ಸಮಯದಲ್ಲಿ ಶ್ರೀಕೃಷ್ಣ ಉದ್ಯಾನವನದಲ್ಲಿ ರುಗ್ಮಿಣಿಯನ್ನು ಗಾಂಧರ್ವ ರೀತಿಯಲ್ಲಿ ಮದುವೆಯಾಗಿ, ಆಕೆಯನ್ನು  ತನ್ನ ರಥದಲ್ಲಿ ಕುಳ್ಳಿರಿಸಿಕೊಂಡು ಕರೆದುಕೊಂಡು ಹೋಗುತ್ತಾನೆ. ಈ ವಿಷಯ ತಡವಾಗಿ ಸ್ವಯಂವರ ಮಂಟಪದಲ್ಲಿ ಸೇರಿದ್ದ ಕ್ಷತ್ರಿಯರಿಗೆ ತಿಳಿಯುತ್ತದೆ. ಅವರು ಶ್ರೀಕೃಷ್ಣನ ಬೆನ್ನು ಹತ್ತುತ್ತಾರೆ. ಕೃಷ್ಣ ಎಲ್ಲರನ್ನೂ ನಿರ್ದಾಕ್ಷಿಣ್ಯವಾಗಿ ಸೋಲಿಸಿ, ಅವರ ತಲೆಯ ಮೇಲೆ ಕಾಲಿಟ್ಟು ತನ್ನ ಪತ್ನಿಯಾದ ರುಗ್ಮಿಣಿಯನ್ನು ಕರೆದುಕೊಂಡು ಹೋಗುತ್ತಾನೆ.

ಈ ಶ್ಲೋಕದಲ್ಲಿ  ಶ್ರೀಕೃಷ್ಣನನ್ನು ಸುಪರ್ಣಃ ಎಂದು ಸಂಬೋಧಿಸಿದ್ದಾರೆ. ಪದ್ಮಪುರಾಣದಲ್ಲಿ ಹೇಳುವಂತೆ: ಸುಪರ್ಣಃ ಸುಪರಾನನ್ದಾತ್ ಕಾಕುತ್ಸ್ಥೋ ವಾಚಿ ಸಂಸ್ಥಿತೇ[5]. ಸದಾ ಆನಂದಸ್ವರೂಪನಾದ ಶ್ರೀಕೃಷ್ಣ ‘ಸುಪರ್ಣಃ’. ಯಾರು ಸುಪರ್ಣನೋ ಆತನೇ ‘ಕಾಕುತ್ಸ್ಥ’. ಶ್ರೀರಾಮಚಂದ್ರನನ್ನು  ಕಾಕುತ್ಸ್ಥ ಎಂದು ಕರೆಯುತ್ತಾರೆ.  ಸರ್ವಶಬ್ದವಾಚ್ಯನಾದ ಭಗವಂತ ಕಾಕುತ್ಸ್ಥ.

[*ಮೇಲೆ ಹೇಳಿದಂತೆ ರುಕ್ಮಿಣಿ ಎನ್ನುವುದು ಅಪಶಬ್ದ. ಸರಿಯಾದ ಶಬ್ದ ರುಗ್ಮಿಣಿ. ಚಿನ್ನ ಎನ್ನುವ ಅರ್ಥದಲ್ಲಿ ‘ರುಕ್ಮ’ ಎನ್ನುವ ಪದ ಈಗ ಬಳಕೆಯಲ್ಲಿದೆ. ಇದರಿಂದ ರುಕ್ಮಿ, ರುಕ್ಮಿಣಿ, ರುಕ್ಮವತಿ, ರುಕ್ಮಾಂಗದ, ಇಂತಹ ಅನೇಕ ಹೆಸರುಗಳು ಪ್ರಸಿದ್ಧವಾಗಿವೆ. ಆದರೆ ಪ್ರಾಚೀನರು ರುಕ್ಮದ ಬದಲು ‘ರುಗ್ಮ‘ ಎನ್ನುತ್ತಿದ್ದರು ಎನ್ನುವುದಕ್ಕೆ ಅನೇಕ ಪುರಾವೆಗಳಿವೆ. ಪ್ರಾಚೀನ ಪುರಾಣಗಳ ಪಾಠದಂತೆ ಭೀಷ್ಮಕನ ಮಗ  ‘ರುಕ್ಮಿ’ ಅಲ್ಲ, ರುಗ್ಮಿ. ಮಗಳು ರುಕ್ಮಿಣಿ ಅಲ್ಲ, ರುಗ್ಮಿಣಿ.  ಇದು ‘ರುಜ’ಧಾತುವಿನಿಂದ ಬಂದ ಪದ. ರುಜಧಾತು ದೈಹಿಕವಾಗಿ ಮಾನಸಿಕವಾಗಿ ನೆಮ್ಮದಿ ಕೆಡಿಸುವುದು ಎನ್ನುವ ಅರ್ಥವನ್ನು ಕೊಡುತ್ತದೆ. ಬಂಗಾರ ಎಂದರೆ ಹಾಗೆಯೇ. ನೆಮ್ಮದಿ ಕೆಡಿಸುವ ಸಂಗತಿಗಳಲ್ಲಿ ಅದಕ್ಕೆ ಮೊದಲ ಮಣೆ. ಇದ್ದರೂ ಚಿಂತೆ, ಇರದಿದ್ದರೂ ಚಿಂತೆ! ಅಣ್ಣ-ತಮ್ಮಂದಿರರಲ್ಲಿ, ಬಂಧು-ಬಳಗದಲ್ಲಿ ಮನಸ್ತಾಪ; ಮನೆ ಒಡೆದು ಪಾಲುಪಟ್ಟಿ; ಇದಕ್ಕೆಲ್ಲವೂ ಬಂಗಾರ ಕಾರಣವಾಗುತ್ತದೆ. ರುಜೋ ಭಂಗೇ ! ರುಜತೀತಿ ರುಗ್ಮಮ್.

ರುಗ್ಮಿಣಿ ಎಂದರೆ ಬಂಗಾರ ಉಳ್ಳವಳು ಎಂದರ್ಥ. ಆದರೆ ಈಕೆಯ ಬಂಗಾರ ಲೋಹವಲ್ಲ, ಭಗವಂತ. ಜ್ಞಾನಾನಂದಮಯನಾದ ಭಗವಂತನನ್ನೇ ಬಂಗಾರವಾಗಿ ಕಂಡ ಭೀಷ್ಮಕನ ಮಗಳು ‘ರುಗ್ಮಿಣಿ’]  

ರುಗ್ಮಿಣಿ ವಿವಾಹದ ನಂತರ ಶ್ರೀಕೃಷ್ಣ ಷಣ್ಮಹಿಷಿಯರನ್ನು ವರಿಸುತ್ತಾನೆ. (ನೀಳಾ, ಭದ್ರಾ, ಮಿತ್ರವಿಂದಾ, ಕಾಳಿಂದೀಲಕ್ಷಣಾ ಮತ್ತು ಜಾಂಬವತೀ ಇವರು ಷಣ್ಮಹಿಷಿಯರು). ಈ ಹಿಂದೆ ಎರಡನೇ ಸ್ಕಂಧದಲ್ಲಿ ಹೇಳಿರುವಂತೆ: ನಗ್ನಜಿತ್ ರಾಜನ ಮಗಳು ನೀಳಾ ಷಣ್ಮಹಿಷಿಯರಲ್ಲಿ ಒಬ್ಬಳು.  ಬಾಲ್ಯದಲ್ಲಿ ಕೃಷ್ಣನ ಸ್ನೇಹಿತೆಯಾಗಿರುವ  ಇನ್ನೊಬ್ಬಳು ನೀಳಾಳನ್ನೂ ನಾವು ಕಾಣುತ್ತೇವೆ. ಅವಳು ಯಶೋದೆಯ ಅಣ್ಣನ ಮಗಳು. ಈ ಇಬ್ಬರೂ ಮೂಲತಃ ಒಂದೇ ಸ್ವರೂಪ. ಬಾಲ್ಯದಲ್ಲಿ ಕೃಷ್ಣನನ್ನು ಪ್ರೀತಿಸುವುದಕ್ಕಾಗಿ ಆಕೆ ಇಲ್ಲಿ ನೀಳಾಳಾಗಿ ಹುಟ್ಟಿದರೆಅಲ್ಲಿ ಸ್ವಯಂವರದ ವಧುವಾಗುವ ಭಾಗ್ಯಕ್ಕಾಗಿ ಇನ್ನೊಂದು ರೂಪದಲ್ಲಿ ಹುಟ್ಟಿದ್ದಳು. ಕೊನೆಗೆ ಬಾಲ್ಯದ ನೀಳಾ ಸ್ವಯಂವರದ ವಧು ನೀಳಾಳಲ್ಲಿ ಐಕ್ಯಹೊಂದಿದಳು ಎನ್ನುತ್ತಾರೆ ಶಾಸ್ತ್ರಕಾರರು. ಸಾಮಾನ್ಯವಾಗಿ ಉತ್ತರಭಾರತದವರು ‘ರಾಧೆ’ ಎನ್ನುವ ಹೆಸರನ್ನು ನೀಳಾಳಿಗೆ ಬಳಸುತ್ತಾರೆ. ಆದರೆ ಆಚಾರ್ಯತ್ರಯರು ‘ರಾಧಾ’ ಶಬ್ದವನ್ನು ಎಲ್ಲಿಯೂ ಬಳಸಿಲ್ಲ. ಭಾಗವತದಲ್ಲೂ ಈ ಹೆಸರು ಬಂದಿಲ್ಲ.

ರುಗ್ಮಿಣಿ-ಸತ್ಯಭಾಮೆಯರು ಶ್ರೀಕೃಷ್ಣನ ಮಹಾಮಹಿಷಿಯರಾದರೆ, ಮೇಲೆ ಹೇಳಿದ ಆರುಮಂದಿ ಆತನ ಮಹಿಷಿಯರಾಗಿದ್ದರು. ಶ್ರೀಕೃಷ್ಣ ಸತ್ಯಭಾಮೆಯನ್ನು ಮದುವೆಯಾದ ಮೇಲೆ ಆಕೆಯನ್ನು ದೇವಲೋಕಕ್ಕೆ ಕರೆದುಕೊಂಡು ಹೋಗಿ, ಅಲ್ಲಿನ ಪಾರಿಜಾತ ವೃಕ್ಷವನ್ನು ದ್ವಾರಕೆಗೆ ತರುತ್ತಾನೆ. ನಂತರ ನರಕಾಸುರನನ್ನು ಕೊಂದು ಆತನ ಸೆರೆಮನೆಯಲ್ಲಿದ್ದ ಹದಿನಾರು ಸಾವಿರದ ನೂರು ಮಂದಿ ರಾಜಕುಮಾರಿಯರನ್ನು ಬಿಡುಗಡೆಗೊಳಿಸುತ್ತಾನೆ ಶ್ರೀಕೃಷ್ಣ. ಆದರೆ ಆ ರಾಜಕುಮಾರಿಯರು ಸಮಾಜದಲ್ಲಿ ತಮಗೆ ಯಾವ ಸ್ಥಾನಮಾನವೂ ಸಿಗಲಾರದು ಮತ್ತು ನರಕಾಸುರನ ಸೆರೆಮನೆಯಲ್ಲಿದ್ದ ತಮ್ಮನ್ನು ಯಾರೂ ಮದುವೆಯಾಗಲಾರರು ಎನ್ನುವ ಆತಂಕ ವ್ಯಕ್ತಪಡಿಸಿ ತಮ್ಮ ದೇಶಕ್ಕೆ ಹಿಂದಿರುಗಲು ಒಪ್ಪದೇ ಇದ್ದಾಗ, ಶ್ರೀಕೃಷ್ಣ  ಅವರಿಗೆ ತನ್ನ ಪಟ್ಟದರಸಿಯರ ಸ್ಥಾನ ಕಲ್ಪಿಸಿ ಕಾಪಾಡುತ್ತಾನೆ. [ಹಿಂದೆ ರಾಜನಾದವನು ಅನೇಕ ಮದುವೆಯಾಗುವುದು ಸಾಮಾಜಿಕವಾಗಿ ಪ್ರಚಲಿತದಲ್ಲಿದ್ದು, ಶ್ರೀಕೃಷ್ಣ  ರಾಜಕುಮಾರಿಯರ ಉದ್ಧಾರಕ್ಕಾಗಿ ೧೬,೧೦೮ ಮಂದಿಯನ್ನು ಮದುವೆಯಾಗಿರುವುದು ಅಂದಿನ ಕಾಲದ  ಸಾಮಾಜಿಕ ಪದ್ದತಿಗೆ  ಪೂರಕವಾದ ವಿಷಯವೇ ಆಗಿದೆ]

 

ತಾಸ್ವಪತ್ಯಾನ್ಯಜನಯದಾತ್ಮತುಲ್ಯಾನಿ ಸರ್ವತಃ[6]

ಏಕೈಕಸ್ಯಾಂ ದಶದಶ ಪ್ರಕೃತೇರ್ವಿಬುಭೂಷಯಾ ॥೦೯॥

 

ಶ್ರೀಕೃಷ್ಣ ೧೬,೧೦೮ ಮಂದಿ ರಾಜಕುಮಾರಿಯರನ್ನು ಮದುವೆಯಾಗಿದ್ದಷ್ಟೇ ಅಲ್ಲ, ಅವರೆಲ್ಲರಿಗೂ ವಾಸಮಾಡಲು ಪ್ರತ್ಯೇಕ ಮನೆಯನ್ನು ಮಾಡಿಸಿ ಕೊಟ್ಟಿದ್ದ. ದಶಮ ಸ್ಕಂಧದಲ್ಲಿ ಹೇಳುವಂತೆ: ಶ್ರೀಕೃಷ್ಣ ಇಷ್ಟೊಂದು ಮಂದಿ ಪತ್ನಿಯರ ಜೊತೆ ಹೇಗೆ ಸಂಸಾರ ಮಾಡುತ್ತಾನೆ ಎನ್ನುವ ಕುತೂಹಲದಿಂದ ನಾರದರು ಪ್ರತಿಯೊಂದು ಮನೆಗೂ ಭೇಟಿ ಕೊಟ್ಟು ನೋಡಿದರೆ, ಅವರಿಗೆ ಅಲ್ಲಿ ಎಲ್ಲಾ  ಮನೆಗಳಲ್ಲೂ ಶ್ರೀಕೃಷ್ಣನಿರುವುದು ಕಂಡು ಆಶ್ಚರ್ಯವಾಗುತ್ತದೆ. ಈ ರೀತಿ ಶ್ರೀಕೃಷ್ಣ ತಾನೂ ಕೂಡಾ ೧೬,೧೦೮ ರೂಪದಿಂದ ಇದ್ದು, ಎಲ್ಲರನ್ನು ಸಂತೋಷವಾಗಿರಿಸಿ, ಪ್ರತಿಯೊಬ್ಬರಿಗೂ ತನ್ನಂತೆ ಇರುವ ಹತ್ತು-ಹತ್ತು ಮಂದಿ ಮಕ್ಕಳನ್ನು ಕರುಣಿಸುತ್ತಾನೆ.

ಈ ಮೇಲಿನ ಶ್ಲೋಕದಲ್ಲಿ “ತನಗೆ ಸದೃಶರಾದ ಮಕ್ಕಳನ್ನು ಶ್ರೀಕೃಷ್ಣ ನೀಡಿದ” ಎಂದು ಹೇಳಲಾಗಿದೆ. ಮೇಲ್ನೋಟಕ್ಕೆ “ಶ್ರೀಕೃಷ್ಣನಿಗೆ ಸಮನಾದ ಮಕ್ಕಳನ್ನು ಅವರೆಲ್ಲರೂ ಪಡೆದರು” ಎಂದು ಹೇಳಿದಂತೆ ಕಾಣುತ್ತದೆ. ಆದರೆ ಭಗವಂತನಿಗೆ ಸಮನಾದ ಇನ್ನೊಂದು ಜೀವವಿಲ್ಲ. ಈ ಮಾತಿನ ಒಳಾರ್ಥವನ್ನು ಆಚಾರ್ಯ ಮಧ್ವರು ಅಗ್ನಿಪುರಾಣದ ಪ್ರಮಾಣ ಸಹಿತ ವಿವರಿಸಿ ಹೇಳಿದ್ದಾರೆ. ಅಗ್ನಿಪುರಾಣದಲ್ಲಿ  ಹೇಳುವಂತೆ:  ಉತ್ತಮೈಃ ಸರ್ವತಃ ಸಾಮ್ಯಂ ಕಿಞ್ಚಿತ್ ಸಾಮ್ಯಮುದೀರಿತಮ್[7] | ಆ ಮಕ್ಕಳೆಲ್ಲರೂ ಶ್ರೀಕೃಷ್ಣನ ಮಕ್ಕಳಾಗಲು ಯೋಗ್ಯರಾದ ದೈವಾಂಶ ಸಂಭೂತರಾಗಿದ್ದರು. ಪ್ರಕೃತಿಯ ವೈಭವಕ್ಕಾಗಿ, ದೇವಲೋಕದ  ವೈಭವವನ್ನು ಶ್ರೀಕೃಷ್ಣ ಭೂಮಿಯ ಮೇಲೆ ತೋರಿಸಿದ.  ಶ್ರೀಲಕ್ಷ್ಮಿ ಕೂಡಾ ಶ್ರೀ-ಭೂ-ದುರ್ಗಾ ರೂಪದಲ್ಲಿ ಭೂಮಿಯಲ್ಲಿ ಅವತರಿಸಿದಳು. ಈ ರೀತಿ ಭೂಮಿ ದೇವತೆಗಳ ನಾಡಾಗಿ ಕಂಗೊಳಿಸಿತು. [ದೇವತೆಗಳ ವೈಭವವನ್ನು ಭೂಮಿಯಲ್ಲಿ ತೋರಿಸಲು ಶ್ರೀಕೃಷ್ಣ ಅಷ್ಟು ಮಕ್ಕಳನ್ನು ಕರುಣಿಸಿದ. ಆದರೆ “ಆ ಹಿನ್ನೆಲೆಯನ್ನು ಅರ್ಥ ಮಾಡಿಕೊಳ್ಳದ ಮೂಢರು ಕೃಷ್ಣನನ್ನು ಹೆಣ್ಣು ಮರುಳ ಎಂದು ತಿಳಿದರು” ಎನ್ನುವ ನೋವಿನ ಧ್ವನಿ ಉದ್ಧವನ ಮಾತಿನಲ್ಲಿದೆ].

ಶ್ರೀಕೃಷ್ಣನ ಮಹಿಮೆಯನ್ನು ಹೇಳುತ್ತಾ ಉದ್ಧವ: ಶಿಶುಪಾಲ, ದಂತವಕ್ರ ಮತ್ತು ಜರಾಸಂಧನಂತಹ ದೈತ್ಯರ ಸಂಹಾರವನ್ನು, ಭೀಮ-ಅರ್ಜುನರನ್ನು ಮಾಧ್ಯಮವಾಗಿ ಬಳಸಿ ಹದಿನೆಂಟು ಅಕ್ಷೋಹಿಣಿ ಸೇನೆಯ ಆಯಸ್ಸನ್ನು ಶ್ರೀಕೃಷ್ಣ ತನ್ನ ಕಣ್ಣಿನಿಂದ ಹೀರಿ ಸಂಹಾರ ಮಾಡಿದ ಘಟನೆಗಳನ್ನು, ಪಾಂಡವರ ಸಂತತಿಯಾದ ಪರೀಕ್ಷಿತನನ್ನು  ಗರ್ಭದಲ್ಲಿ ನಿಂತು ರಕ್ಷಿಸಿದ ಆತನ ಮಹಿಮೆಯನ್ನು ಜ್ಞಾಪಿಸಿಕೊಳ್ಳುತ್ತಾನೆ.

 



[1] “ಸಮಾಹೃುತಾಃ” ಎಂದೂ ಕೆಲವರು ಕರೆಯುತ್ತಾರೆ.

[2] “ಬುಭೂಷಯೈಷಾಮ್” - ಪ್ರಚಲಿತ ಪಾಠ

[3] “ಭೀಷ್ಮಕಕನ್ಯಾಕಾಯಾ ಅರ್ಥೇ”  ಎಂದು ಕೆಲವು ಪ್ರಾಚೀನ ಪಾಠ

[4] “ಸವರ್ಣಮಾತ್ರತಯಾ” – ಪಾಠಾನ್ತರ

[5] “ಸಂಸ್ಥಿತಃ” ಎಂದು ಕೆಲವರು.

[6] “ಸರ್ವಶ” ಪಾಠಾನ್ತರ

[7] “ಸಾಮ್ಯಮುದೀರ್ಯತೇ” – ಪ್ರಚಲಿತ ಪಾಠ