Sunday, July 28, 2013

Shrimad BhAgavata in Kannada -Skandha-01-Ch-17(1)

ಸಪ್ತದಶೋSಧ್ಯಾಯಃ

ಸೂತ ಉವಾಚ--
ತತ್ರ ಗೋಮಿಥುನಂ ರಾಜಾ ಹನ್ಯಮಾನಮನಾಥವತ್
ದಂಡಹಸ್ತಂ ಚ ವೃಷಳಂ ದದೃಶೇ ನೃಪಲಾಂಛನಮ್

ವೃಷಂ ಮೃಣಾಲಧವಳಂ ಮೇಹಂತಮಿವ ಬಿಭ್ಯತಮ್
ವೇಪಮಾನಂ ಪದೈಕೇನ ಸೀದಂತಂ ಶೂದ್ರಪೀಡಿತಮ್

ರಾಜನ ವೇಷತೊಟ್ಟ ಕರಾಳ ವ್ಯಕ್ತಿ ಹಸು ಮತ್ತು ಎತ್ತನ್ನು ಹೊಡೆಯುತ್ತಿರುವಂತೆ; ಕಮಲದ ನಾಳದಂತೆ ಶುಭ್ರ ಬಿಳಿ ಬಣ್ಣದ, ಮೂರು ಕಾಲುಗಳನ್ನು ಕಳೆದುಕೊಂಡು ಒಂದೇ ಕಾಲಲ್ಲಿ ನಿಂತಿರುವ ಎತ್ತು ಆ ವ್ಯಕ್ತಿಯನ್ನು ಕಂಡು ಹೆದರಿ ಸೆಗಣಿ ಹಾಕುತ್ತಿರುವಂತೆ; ಹೊಡೆತಕ್ಕೆ ಹೆದರಿ ಹಸು ಕಣ್ಣೀರು ಸುರಿಸುತ್ತಿರುವಂತೆ ಪರೀಕ್ಷಿತನಿಗೆ ದರ್ಶನವಾಗುತ್ತದೆ(Vison).
ಪೌರಾಣಿಕ ಸಾಹಿತ್ಯದಲ್ಲಿ ಕೆಲವು ಸಂಕೇತಗಳಿರುತ್ತವೆ. ಉದಾಹರಣೆಗೆ ಅಧ್ಯಾತ್ಮದಲ್ಲಿ ‘ಹಾವು’ ಕುಂಡಲಿನಿ ಸಂಕೇತ. ಅದೇ ರೀತಿ ಇಲ್ಲಿ ಹಸು ಭೂದೇವಿ ಸಂಕೇತ; ಎತ್ತು ಧರ್ಮದ ಸಂಕೇತ ಮತ್ತು ಬಿಳಿ ಬಣ್ಣ ಸಾತ್ವಿಕತೆಯ ಸಂಕೇತ. ಇಲ್ಲಿ  ‘ಶೂದ್ರ’ ಎನ್ನುವ ಪದವನ್ನು ಕ್ರೌರ್ಯದ ಸಂಕೇತವಾಗಿ ಬಳಸಲಾಗಿದೆ. ಕ್ಷತ್ರಿಯ ವೇಷವಿದೆ ಆದರೆ ಪಾಲಕತ್ವವಿಲ್ಲ. ನಿರಂತರ ಪೀಡಿಸುತ್ತಿದ್ದಾನೆ ಆ ವ್ಯಕ್ತಿ.
ಇಂತಹ ವಿಚಿತ್ರ ದೃಶ್ಯವನ್ನು ಕಂಡ ಪರೀಕ್ಷಿತ ತಕ್ಷಣ ಕೇಳುತ್ತಾನೆ: “ಯಾರು ನೀವು? ನಿನ್ನ ಮೂರು ಕಾಲುಗಳಿಗೆ ಏನಾಗಿದೆ? ನೀನೇಕೆ ತತ್ತರಿಸುತ್ತಿರುವೆ? ನಿಮ್ಮನ್ನು ಹೊಡೆಯುತ್ತಿರುವ ಈ ವ್ಯಕ್ತಿ ಯಾರು? ನನ್ನ ಅಜ್ಜಂದಿರರಾದ ಪಾಂಡವರು ಮತ್ತು ಅವರಿಗೆ ರಕ್ಷಕನಾಗಿದ್ದ ಶ್ರೀಕೃಷ್ಣ ಭೂಮಿಯಿಂದ ಹೊರಟುಹೋದ ಮೇಲೆ, ದೂರ್ತರಿಗೆ ಇಷ್ಟೊಂದು ಸ್ವಾತಂತ್ರ್ಯ ಬಂದು ಹೋಯಿತೇ? ಪಾಂಡವರ ಮೊಮ್ಮಗನಾದ ನಾನು ಶ್ರೀಕೃಷ್ಣನ ಆಶ್ರಯದಿಂದ ನಿಂತವನು. ನಾನಿರುವಾಗ ಇಲ್ಲಿ ಇಂತಹ ಅನ್ಯಾಯಕ್ಕೆ ಅವಕಾಶವಿಲ್ಲ” ಎಂದು ಗರ್ಜಿಸುತ್ತಾನೆ ಪರೀಕ್ಷಿತ.

ಕೋSವೃಶ್ಚತ್ತವ ಪಾದಾಂಸ್ತ್ರೀನ್ ಸೌರಭೇಯ ಚತುಷ್ಪದಃ
ಮಾ ಭೂವಂಸ್ತ್ವಾದೃಶಾ ರಾಷ್ಟ್ರೇ ರಾಜ್ಞಾಂ ಕೃಷ್ಣಾನುವರ್ತಿನಾಮ್ ೧೨

ತಾನು ಕಾಣುತ್ತಿರುವುದು ಕೇವಲ ಹಸು-ಗೂಳಿಯನ್ನಲ್ಲ. ಯಾವುದೋ ದೇವತಾ ಶಕ್ತಿ ಇಂತಹ ದರ್ಶನ(Vision) ಕೊಡುತ್ತಿದೆ ಎನ್ನುವುದನ್ನು ಮನಗೊಂಡ ಪರೀಕ್ಷಿತ ಕೇಳುತ್ತಾನೆ : “ನಿನಗೆ ನಾಲ್ಕು ಕಾಲುಗಳಿರಬೇಕು. ನಿನ್ನ ಮೂರು ಕಾಲುಗಳನ್ನು ಕತ್ತರಿಸಿದವರು ಯಾರು? ಶ್ರೀಕೃಷ್ಣ ಮತ್ತು ಪಾಂಡವರ ಆಶೀರ್ವಾದ ಇರತಕ್ಕಂತಹ ನನ್ನ ಕರ್ಮಭೂಮಿಯಲ್ಲಿ ಇಂತಹ ಒಂದು ಘಟನೆ ನಡೆಯಿತು ಎಂದರೆ ಅದು ನಮ್ಮ ಹಿರಿಯರಿಗೆ ಅವಮಾನ” ಎಂದು.  


ಅನಾಗಃಸ್ವಿಹ ಭೂತೇಷು ಯ ಆಗಸ್ಕೃನ್ನಿರಂಕುಶಃ
ಆಹರ್ತಾಸ್ಮಿ ಭುಜಂ ಸಾಕ್ಷಾದಮರ್ತ್ಯಸ್ಯಾಪಿ ಸಾಂಗದಮ್ ೧೪

 “ಯಾರು ನಿನ್ನ ಕಾಲನ್ನು ಮುರಿದವರು ? ನಿನ್ನ ಕಾಲನ್ನು ಮುರಿದವರು ಯಾರೇ ಇರಲಿ, ಅವರು ನಿನಗೆ ಅನ್ಯಾಯ ಮಾಡಿದ್ದರೆ, ಅವರ ತೋಳನ್ನು ಕತ್ತರಿಸುತ್ತೇನೆ. ಅವರು ದೇವಲೋಕದಿಂದ ಬಂದವರೇ ಆಗಿರಲಿ, ನನ್ನ ರಾಜ್ಯದಲ್ಲಿ ಇಂತಹ ಅನ್ಯಾಯವನ್ನು ನಾನು ಸಹಿಸಲಾರೆ” ಎಂದು ಆವೇಶದಿಂದ ನುಡಿಯುತ್ತಾನೆ ಪರೀಕ್ಷಿತ.

ಧರ್ಮ ಉವಾಚ--
ಏತದ್ವಃ ಪಾಂಡವೇಯಾನಾಂ ಯುಕ್ತಮಾರ್ತಾಭಯಂ ವಚಃ
ಯೇಷಾಂ ಗುಣಗಣೈಃ ಕೃಷ್ಣೋ ದೌತ್ಯಾದೌ ಭಗವಾನ್ ವೃತಃ ೧೬

ಪರೀಕ್ಷಿತನ ಮಾತಿಗೆ ವೃಷಭ(ಧರ್ಮ) ಉತ್ತರಿಸುತ್ತಾನೆ. “ನೀನು ಆಡಬೇಕಾದ ಮಾತನ್ನೇ ಆಡಿದ್ದೀಯ. ಪಾಂಡವರ ವಂಶದಲ್ಲಿ ಹುಟ್ಟಿದವರ ಬಾಯಿಯಲ್ಲಿ ಬರಬೇಕಾದ ಮಾತಿದು. ಕಷ್ಟಕ್ಕೆ ಒಳಗಾದವರಿಗೆ ಅಭಯರಕ್ಷೆ ನೀಡುವುದನ್ನು ಪಾಂಡವರು ನಿರಂತರ ಮಾಡಿದರು. ಯಾರ ಗುಣಕ್ಕೆ ಮರುಳಾಗಿ ಭಗವಂತ ಅವರ ಧೂತನಾಗಿ ನಡೆದುಕೊಂಡನೋ, ಅಂತಹ ಪಾಂಡವರ ಮೊಮ್ಮಗನಾದ ನಿನ್ನ ಬಾಯಿಯಲ್ಲಿ ಬರಬೇಕಾದ ನ್ಯಾಯವಾದ ಮಾತಿದು. ಇಂತಹ ಮಾತನ್ನು ನಿನ್ನಿಂದ ಕೇಳಿ ಬಹಳ ಸಂತೋಷವಾಯಿತು” ಎನ್ನುತ್ತಾನೆ.

ನ ವಯಂ ಕ್ಲೇಶಬೀಜಾನಿ ಯತಃ ಸ್ಯುಃ ಪುರುಷರ್ಷಭ
ಪುರುಷಂ ತಂ ವಿಜಾನೀಮೋ ವಾಕ್ಯಭೇದವಿಮೋಹಿತಾಃ ೧೭

ಪರೀಕ್ಷಿತನ ಪ್ರಶ್ನೆಗೆ ಒಗಟಿನಂತೆ ಉತ್ತರಿಸುತ್ತಾ ವೃಷಭ ಹೇಳುತ್ತಾನೆ: ಯಾರು ನನ್ನ ಕಾಲನ್ನು ಮುರಿದರು ಎನ್ನುವುದು ನನಗೆ ತಿಳಿದಿಲ್ಲ. ಜೀವನದಲ್ಲಿ ಅನೇಕ ಆಪತ್ತುಗಳು ಬರುತ್ತವೆ. ಅದು ಯಾರಿಂದ ಯಾಕಾಗಿ ಬರುತ್ತವೆ ಯಾರಿಗೆ ಗೊತ್ತು? ಯಾರಿಂದಾಗಿ ಈ ರೀತಿಯ ದುರಂತಗಳು ಜೀವನದಲ್ಲಿ ನಡೆಯುತ್ತವೆ, ಆ ಪುರುಷ ಯಾರು ಎನ್ನುವುದೇ ನನಗೆ ತಿಳಿದಿಲ್ಲ. ಶಾಸ್ತ್ರಗಳಲ್ಲೂ ಕೂಡಾ ವಾಕ್ಯ ಭೇದವಿರುವುದರಿಂದ ಅದರ ಅರ್ಥ ತಿಳಿಯದಾಗಿದೆ.

ಕೇಚಿದ್ ವೈಕಲ್ಪವಚಸ ಆಹುರಾತ್ಮಾನಮಾತ್ಮನಃ
ದೈವಮನ್ಯೇ ಪರೇ ಕರ್ಮ ಸ್ವಭಾವಮಪರೇ ಪ್ರಭುಮ್ ೧೮

ಅಪ್ರತರ್ಕ್ಯಾದನಿರ್ವಾಚ್ಯಾದಿತಿ ಕೇಷ್ವಪಿ ನಿಶ್ಚಯಃ
ಅತ್ರಾನುರೂಪಂ ರಾಜರ್ಷೇ ವಿಮೃಶ ಸ್ವಮನೀಷಯಾ ೧೯

ಕೆಲವರು “ನಿನ್ನ ಸುಖ-ದುಃಖಗಳಿಗೆ ನೀನೇ ಕಾರಣ” ಎನ್ನುತ್ತಾರೆ; ಕೆಲವರು  ಅದೃಷ್ಟ ಕಾರಣ ಎನ್ನುತ್ತಾರೆ; ಕೆಲವರು ಜೀವನದಲ್ಲಿ ನಡೆಯುವ ದುರಂತಗಳಿಗೆ ನಮ್ಮ ಕರ್ಮ ಕಾರಣ ಎನ್ನುತ್ತಾರೆ; ಕೆಲವರು ಮನಸ್ಸು ಕಾರಣ ಎಂದರೆ, ಇನ್ನು ಕೆಲವರು ಎಲ್ಲವುದಕ್ಕೂ ಕೊನೆಯ ನಿರ್ಣಾಯಕ ನಮ್ಮ ಜೀವ ಸ್ವಭಾವ ಎನ್ನುತ್ತಾರೆ.
ನಮ್ಮ ಸ್ವಭಾವವನ್ನು ನಿಯಂತ್ರಿಸತಕ್ಕಂತಹ ಸ್ವತಂತ್ರವಾದ ಭಾವ ಭಗವಂತ. ಅವನು ನಮ್ಮ ಸ್ವಭಾವಕ್ಕನುಸಾರವಾಗಿ ಎಲ್ಲವನ್ನೂ ಮಾಡಿಸುತ್ತಾನೆ. ಭಗವಂತನ ನಿಯಂತ್ರಣ ತರ್ಕಕ್ಕೆ ಮೀರಿದ ವಿಚಾರ. ಅದನ್ನು ವಿವರಿಸಲು ಯಾರಿಂದಲೂ ಸಾಧ್ಯವಿಲ್ಲ. ಹೀಗೆ ನಮ್ಮ ಮಾತಿಗೆ, ಮನಸ್ಸಿಗೆ, ಚಿಂತನೆಗೆ ಮೀರಿದ ಭಗವಂತನೇ ಎಲ್ಲವನ್ನೂ ನಿಯಂತ್ರಿಸುತ್ತಾನೆ ಎನ್ನುತ್ತಾರೆ ಕೆಲವರು. “ಈ ಎಲ್ಲಾ ಕಾರಣದಿಂದ ನನ್ನ ಈ ಸ್ಥಿತಿಗೆ ಕಾರಣ ಏನೆಂಬುದು ನನಗೆ ತಿಳಿಯುತ್ತಿಲ್ಲ. ರಾಜರ್ಶಿಯಾದ ನಿನಗೆ ಭಗವಂತ ಚಿಂತನಾಶಕ್ತಿ ಕೊಟ್ಟಿದ್ದಾನೆ. ನೀನೇ ವಿಮರ್ಶೆಮಾಡಿ ನನ್ನ ಈ ಸ್ಥಿತಿಗೆ ಕಾರಣವನ್ನು ತಿಳಿದುಕೋ” ಎಂದು ರೋಚಕವಾದ ಉತ್ತರ ಕೊಡುತ್ತಾನೆ ಧರ್ಮ.

ಸೂತ ಉವಾಚ--
ಏವಂ ಧರ್ಮೇ ಪ್ರವದತಿ ಸ ಸಮ್ರಾಟ್ ದ್ವಿಜಸತ್ತಮಾಃ
ಸಮಾಹಿತೇನ ಮನಸಾ ವಿದಿತ್ವಾ ಪ್ರತ್ಯಚಷ್ಟ ತಮ್ ೨೦


ಶೌನಕಾದಿಗಳಿಗೆ ಭಾಗವತದ ಹಿನ್ನೆಲೆಯನ್ನು ವಿವರಿಸುತ್ತಿರುವ ಉಗ್ರಶ್ರವಸ್ಸರು ಹೇಳುತ್ತಾರೆ: “ವೃಷಭ ಇಷ್ಟೊಂದು ಆಳವಾಗಿ, ಆಧ್ಯಾತ್ಮಿಕವಾಗಿ ಮಾತನಾಡಿದ್ದನ್ನು ಕೇಳಿಸಿಕೊಂಡ ಪರೀಕ್ಷಿತ, ಅಲ್ಲೇ ಕಣ್ಮುಚ್ಚಿ ಕುಳಿತು(Meditation), ತನ್ನ ಮನಸ್ಸನ್ನು ವಿಷಯಕ್ಕೆ ಶ್ರುತಿಗೂಡಿಸಿ(Tuning)ವಿಷಯ ಗ್ರಹಣ ಮಾಡಿದ” ಎಂದು.

Saturday, July 27, 2013

Shrimad BhAgavata in Kannada -Skandha-01-Ch-16(8)

೧೭). ಐಶ್ವರ್ಯ: ಐಶ್ವರ್ಯ ಎಂದರೆ ಒಡೆತನ. ಧರ್ಮ-ಜ್ಞಾನ-ವೈರಾಗ್ಯ ಪೂರಕವಾದ ಐಶ್ವರ್ಯ ನಮ್ಮದಾಗಿರಬೇಕು. ಐಶ್ವರ್ಯ-ಗಳಿಸುವಂತಹದ್ದಲ್ಲ, ಅದು ನಮ್ಮ ಧರ್ಮ-ಜ್ಞಾನ-ವೈರಾಗ್ಯಕ್ಕನುಗುಣವಾಗಿ ಬರುವಂತಹದ್ದು. ಧನ ಸಂಪತ್ತು ಐಶ್ವರ್ಯವಲ್ಲ. ಜನ ಅಥವಾ ಶಿಷ್ಯ ಸಂಪತ್ತು ನಿಜವಾದ ಐಶ್ವರ್ಯ.  ಭಗವಂತ ಸರ್ವೇಶ್ವರ. ಆತನಲ್ಲಿ ಈ ಗುಣ ಪೂರ್ಣಪ್ರಮಾಣದಲ್ಲಿದೆ. ಸಾಧಕನಾದವನು ಇಂತಹ ಐಶ್ವರ್ಯವನ್ನು ಪಡೆಯಬೇಕು. ಇಲ್ಲಿ ನಮಗೆ ಒಂದು ಎಚ್ಚರ ಅತ್ಯಗತ್ಯ. ಧರ್ಮ-ಜ್ಞಾನ-ವೈರಾಗ್ಯ ಇಲ್ಲದ ಐಶ್ವರ್ಯ ಅಧಃಪಾತಕ್ಕೆ  ಕಾರಣವಾಗುತ್ತದೆ. ಅಂತಹ ಐಶ್ವರ್ಯವನ್ನು ಹೊಂದುವುದು ಅಸುರ ಲಕ್ಷಣ.
೧೮). ಶೌರ್ಯಂ: ಶೌರ್ಯ ಎಂದರೆ ಅನ್ಯಾಯವನ್ನು ದಮನಿಸುವ, ದುಷ್ಟರನ್ನು ನಿಗ್ರಹಿಸುವ  ಶಕ್ತಿ. ಇದು ಭಗವಂತನ ಅಸಾಧಾರಣ ಗುಣ. ಈ ಗುಣ ಎಲ್ಲರಲ್ಲಿಯೂ ಪೂರ್ಣಪ್ರಮಾಣದಲ್ಲಿರಬೇಕೆಂದೇನೂ ಇಲ್ಲ. ಆದರೆ ಇದು ಕ್ಷತ್ರಿಯರಲ್ಲಿ ಇರಲೇ ಬೇಕಾದ ಗುಣ. ಭಗವದ್ಭಕ್ತರ ರಕ್ಷಣೆಗಾಗಿ, ದುಷ್ಟರ ನಿಗ್ರಹಕ್ಕಾಗಿ ಶೌರ್ಯವನ್ನು ವಿನಿಯೋಗ ಮಾಡಬೇಕು. ಅದು ಒಂದು ಸಾಧನೆ.
೧೯). ತೇಜಃ: ತೇಜಸ್ಸು ಎನ್ನುವುದು ವ್ಯಕ್ತಿತ್ವ. ತೇಜಸ್ಸು ಉಳ್ಳವರ ಎದುರು ನಿಲ್ಲುವ ಧೈರ್ಯ ಒಬ್ಬ ಸಾಮಾನ್ಯನಿಗೆ ಬರುವುದೇ ಇಲ್ಲ. ಇದು ಅಂತರಂಗದ ಬಲ. ಭಗವಂತನದ್ದು ಪೂರ್ಣ ತೇಜಸ್ಸು. ಇದು ಆತನ ಅಸಾಧಾರಣ ಗುಣ. ಪ್ರಾಮಾಣಿಕವಾಗಿ ಸಾಧನೆ ಮಾಡುವ ಸಾಧಕನಲ್ಲಿ ಇಂತಹ ತೇಜಸ್ಸಿರುತ್ತದೆ.
೨೦). ದೃತಿಃ: ಎಂತಹ ಸಂದರ್ಭದಲ್ಲೂ ಎದೆಗೆಡದ ಆತ್ಮವಿಶ್ವಾಸ ದೃತಿ. ಭಗವಂತ ದೃತಿಸ್ವರೂಪ. ಆತ ಎದೆಗೆಡುವ ಪ್ರಸಂಗವೇ ಇಲ್ಲ. ಇಂತಹ ಭಗವಂತ ರಕ್ಷಕನಾಗಿ ನಮಗಿರುವಾಗ ನಾವು ಹೆದರುವ ಅಗತ್ಯವಿಲ್ಲ. “ರಕ್ಷತೀತ್ಯೇವ ವಿಶ್ವಾಸಃ” ಭಗವಂತ ರಕ್ಷಿಸಿಯೇ ರಕ್ಷಿಸುತ್ತಾನೆ ಎನ್ನುವ ಆತ್ಮವಿಶ್ವಾಸ ನಮ್ಮಲ್ಲಿರುವಾಗ ಯಾರೂ ನಮ್ಮನ್ನು ಏನೂ ಮಾಡಲು ಸಾಧ್ಯವಿಲ್ಲ.
೨೧). ಸ್ಮೃತಿಃ : ಯಾವುದನ್ನೂ ಮರೆಯದೇ ಇರುವುದು ಸ್ಮೃತಿ. ಇದು ಭಗವಂತನ ಸಹಜ ಗುಣ. ನಾವೂ ಕೂಡಾ ಈ ಗುಣವನ್ನು ನಮ್ಮದಾಗಿಸಿಕೊಳ್ಳಬೇಕು. ಮುಖ್ಯವಾಗಿ ಶಾಸ್ತ್ರಗಳು. ಶಾಸ್ತ್ರಗಳನ್ನು ನಾವು ಪುಸ್ತಕದಲ್ಲಿರಿಸದೇ, ನಮ್ಮ ಮಸ್ತಕದಲ್ಲಿರಿಸಿಕೊಳ್ಳಲು ಪ್ರಯತ್ನಿಸಬೇಕು. ಆ ರೀತಿ ನಮ್ಮ ಮನಸ್ಸನ್ನು ತರಬೇತಿಗೊಳಿಸಬೇಕು. ಸ್ಮರಣಶಕ್ತಿ ಎನ್ನುವುದು ಸಾಧನೆಯಲ್ಲಿ ಬಹಳ ಮುಖ್ಯ. ಆದರೆ ಇದು ಒಂದು ಜನ್ಮದ ಸಾಧನೆಯಿಂದ ಬರುವುದಿಲ್ಲ, ಅದಕ್ಕೆ  ಅನೇಕ ಜನ್ಮದ ಸಾಧನೆ ಅಗತ್ಯ. ಹಾಗಾಗಿ ಸ್ಮರಣ ಶಕ್ತಿ ಕಡಿಮೆ ಇದ್ದರೆ ಗಾಬರಿಯಾಗದೇ, ನಿರಂತರ ಪ್ರಯತ್ನವನ್ನು ನಾವು ಮುಂದುವರಿಸಬೇಕು.
೨೨). ಸ್ವಾತಂತ್ರ್ಯಂ: ಭಗವಂತ ಸರ್ವತಂತ್ರ ಸ್ವತಂತ್ರ. ಆತ ಯಾರ ನಿಯತಿಗೂ ಬದ್ಧನಲ್ಲ. ಜೀವನಿಗೂ ಸ್ವತಂತ್ರ್ಯದ ಬಯಕೆ ಇದ್ದೇ ಇರುತ್ತದೆ. ನಾವು ನಮ್ಮಿಂದ ಕನಿಷ್ಠರಿಂದ ಆಳಿಸಿಕೊಳ್ಳುವುದು ಪಾರತಂತ್ರ್ಯ. ನಮ್ಮಿಂದ ದೊಡ್ಡವರು ನಮ್ಮನ್ನು ಆಳಿದರೆ ಅದು ಪಾರತಂತ್ರ್ಯವಾಗುವುದಿಲ್ಲ.
೨೩). ಕೌಶಲಂ: ಯಾವ ಕೆಲಸವನ್ನೇ ಆಗಲಿ, ಅದನ್ನು ಚೊಕ್ಕವಾಗಿ ಮಾಡುವ ತಾಕತ್ತು ಕೌಶಲ. ಭಗವಂತ ಸರ್ವಕರ್ತ. ಅವನಲ್ಲಿ ಈ ಗುಣ ಪೂರ್ಣಪ್ರಮಾಣದಲ್ಲಿದೆ. ನಾವೂ ಕೂಡಾ ಯಾವುದೇ ಕೆಲಸವನ್ನು ಮಾಡಿದರೂ  ಚೊಕ್ಕವಾಗಿ ಮಾಡುವ ಕಲೆಗಾರಿಕೆಯನ್ನು ಬೆಳೆಸಿಕೊಳ್ಳಬೇಕು.
೨೪).ಕಾಂತಿಃ: ಕಾಂತಿ ಎಂದರೆ ‘ಕಮನೀಯತೆ’. ಇದು ವ್ಯಕ್ತಿತ್ವಕ್ಕೆ ಸಂಬಂಧಿಸಿದ ಗುಣ. ಇನ್ನೊಬ್ಬರಿಗೆ ನಾವು ನಮ್ಮನ್ನು ಶ್ರುತಿಗೂಡಿಸಿಕೊಳ್ಳುವುದು ಕಾಂತಿ. ಇದು ಅಂತರಂಗದಲ್ಲಿ ಅರಳುವ ಗುಣ. ವ್ಯಕ್ತಿಯ ಸಾಮೀಪ್ಯ ನಮಗೆ ಇಷ್ಟವಾಗಿ ಅವನು ಇನ್ನಷ್ಟು ಹೊತ್ತು ನಮ್ಮೊಂದಿಗಿರಲಿ ಎಂದು ನಮಗೆ ಅನಿಸುವುದು ಆ ವ್ಯಕ್ತಿಯ ಕಾಂತಿಯಿಂದ. ಸೂರ್ಯ ಉದಿಸಿದಾಗ ಹೇಗೆ ಕಮಲ ಅರಳುತ್ತದೋ, ಹಾಗೆ ವ್ಯಕ್ತಿಯ ಸಾಮಿಪ್ಯದಿಂದ ನಮ್ಮ ಹೃದಯ ಅರಳುವುದು ಕಾಂತಿಯಿಂದ. ಭಗವಂತ ತನ್ನ ಕೃಷ್ಣಾವತಾರದಲ್ಲಿ ಈ ವ್ಯಕ್ತಿತ್ವವನ್ನು ಪೂರ್ಣಪ್ರಮಾಣದಲ್ಲಿ ನಮಗೆ ತೋರಿಸಿ ಕೊಟ್ಟಿರುವುದನ್ನು ಕಾಣುತ್ತೇವೆ. ಪ್ರಾಣಿಗಳು, ಪಕ್ಷಿಗಳು, ಸ್ತ್ರೀಯರು, ಗಂಡಸರು, ಎಲ್ಲರೂ ಕೃಷ್ಣನ ಸಾಮಿಪ್ಯವನ್ನು ಬಯಸುತ್ತಿದ್ದರು ಎನ್ನುವುದನ್ನು ನಾವಿಲ್ಲಿ ನೆನಪಿಸಿಕೊಳ್ಳಬಹುದು.
೨೫). ಸೌಭಾಗ್ಯಂ: ಶುಭೈಕ ಭಾಗೀ ಸುಭಗಃ” ಬದುಕಿನಲ್ಲಿ ಎಂದೂ ಅಶುಭತನಕ್ಕೆ ಒಳಗಾಗದೆ, ಆನಂದಮಯವಾಗಿರುವುದು ಸುಭಗತನ. ಬದುಕಿನಲ್ಲಿ ಒಳ್ಳೆಯದನ್ನು ಮಾತ್ರ ಕಾಣುವುದು, ಕೆಟ್ಟದ್ದನ್ನು ಕಾಣದಿರುವುದು ಸೌಭಾಗ್ಯ. ಇದು ಕೇವಲ ಭಗವಂತನಿಗೆ ಮಾತ್ರ ಅನ್ವಯವಾಗುವ ಗುಣ. ಆದರೆ ಭಗವದ್ಭಾಕ್ತರೂ ಕೂಡಾ ಯಥಾಶಕ್ತಿ ಬೆಳೆಸಿಕೊಳ್ಳಬೇಕಾದ ಗುಣ.
೨೬). ಮಾರ್ದವಂ: ಯಾವುದೇ ಸಂದರ್ಭದಲ್ಲೂ ಕೂಡಾ ನಿಷ್ಠುರವಾಗಿ ಮಾತನಾಡದೇ, ಮೃದುವಾಗಿ, ಸಭ್ಯತನದಿಂದ ವರ್ತಿಸುವುದು ಮಾರ್ದವ. ಈ ಗುಣವನ್ನು ಭಗವಂತ ತನ್ನ ರಾಮಾವತಾರದಲ್ಲಿ ಪೂರ್ಣ ಪ್ರಮಾಣದಲ್ಲಿ ನಮಗೆ ತೋರಿಸಿಕೊಟ್ಟಿದ್ದಾನೆ. ತನ್ನನ್ನು ಕಾಡಿಗೆ ಕಳುಹಿಸಿದ ಕೈಕೇಯಿಯೊಂದಿಗೆ ಶ್ರೀರಾಮಚಂದ್ರ ನೆಡೆದುಕೊಂಡ ರೀತಿ ಇದಕ್ಕೊಂದು ಉತ್ತಮ ಉದಾಹರಣೆ. ತನ್ನನ್ನು ಕಾಡಿನಿಂದ ಹಿಂದೆ ಕರೆತರಬೇಕೆಂದು ಬಂದ ಭರತನಿಗೆ ಪಾದುಕೆಯನ್ನು ನೀಡಿ ಕಳುಹಿಸುವಾಗ ಶ್ರೀರಾಮ “ಎಂದೆಂದಿಗೂ ತಾಯಿಯನ್ನು ಹಂಗಿಸಿ ಮಾತನಾಡುವುದಿಲ್ಲ” ಎಂದು ಮಾತು ಕೊಡು ಎಂದು ಕೇಳುತ್ತಾನೆ. ಹೀಗೆ ಯಾವ ಸಂದರ್ಭದಲ್ಲೂ ಮನಸ್ಸಿನಲ್ಲಿ ಕ್ರೂರವಾದ ಭಾವನೆ ಬಾರದೇ ಇರುವುದು ಮಾರ್ದವ.
೨೭). ಕ್ಷಮಾ: ಯಾರ ಬಗ್ಗೆಯೂ ಕೊಪ ಇಲ್ಲದಿರುವುದು, ಯಾರ ಬಗ್ಗೆಯೂ ಕೆಟ್ಟ ಭಾವನೆಯನ್ನು ಮನಸ್ಸಿನಲ್ಲಿ ತಂದುಕೊಳ್ಳದೇ ಇರುವುದು ಕ್ಷಮಾ ಗುಣ. [ತಪ್ಪನ್ನು ತಿದ್ದಿಕೊಂಡು ಒಳ್ಳೆಯನಾಗಿ ಬಾಳಲಿ ಎನ್ನುವ ಕಾರುಣ್ಯದಿಂದ ತಪ್ಪಿತಸ್ಥರನ್ನು ಅಧಿಕಾರಿ ಶಿಕ್ಷಿಸುವುದು ಕ್ರೌರ್ಯವಲ್ಲ.]
೨೮). ಪ್ರಾಗಲ್ಭ್ಯಂ: ಯಾವುದೇ ಒಂದು ಕ್ರಿಯೆಯಲ್ಲಿ, ಜೀವನದ ಪ್ರತಿಯೊಂದು ವಿಷಯದಲ್ಲಿ ದಕ್ಷತೆ(Maturity/Perfection) ತೋರುವುದು ಪ್ರಾಗಲ್ಭ್ಯಂ. ಈ ಗುಣ ಭಗವಂತನಲ್ಲಿ ಪೂರ್ಣಪ್ರಮಾಣದಲ್ಲಿದೆ. ನಾವೂ ಕೂಡಾ ನಮ್ಮ ಜೀವನದಲ್ಲಿ ಪ್ರಾಗಲ್ಭ್ಯತೆಯನ್ನು ಬೆಳೆಸಿಕೊಳ್ಳಬೇಕು.
೨೯). ಪ್ರಶ್ರಯಃ: ನಮ್ಮಲ್ಲಿ ದಕ್ಷತೆ ಬೆಳೆದಾಗ ಅಹಂಕಾರ(Ego) ಬರುವ ಸಾಧ್ಯತೆ ಹೆಚ್ಚು. ಹಾಗಾಗದೇ ಇರಬೇಕಾದರೆ ನಮ್ಮಲ್ಲಿ ವಿನಯ, ಸೌಜನ್ಯ ಇರಬೇಕು. ಇದನ್ನು ಪ್ರಶ್ರಯ ಎನ್ನುತ್ತಾರೆ. ರಾಮ ಮತ್ತು ಕೃಷ್ಣಾವತಾರದಲ್ಲಿ ಭಗವಂತ ಈ ಗುಣವನ್ನು ಯಥೇಚ್ಛವಾಗಿ ನಮಗೆ ತೋರಿಸಿಕೊಟ್ಟಿದ್ದಾನೆ. ಕಾಡಿಗೆ ಹೊರಡುವ ಮುನ್ನ, ತಾನು ಕಾಡಿಗೆ ಹೋಗಲು ಕಾರಣೀಕರ್ತೆಯಾದ ಕೈಕೇಯಿಗೆ ನಮಸ್ಕರಿಸಿ ಆಶೀರ್ವಾದ ಬೇಡುತ್ತಾನೆ ಶ್ರೀರಾಮಚಂದ್ರ. ಇದು ಪ್ರಶ್ರಯ.
೩೦). ಶೀಲಂ: ಶೀಲ ಎಂದರೆ ನಡತೆ(Character). ನಾವು ನಮ್ಮ ಜೀವನದಲ್ಲಿ ಏನನ್ನು ಆಚರಿಸುತ್ತೇವೆ-ಅದು ಮುಖ್ಯ. ಇನ್ನೊಬ್ಬರಿಗೆ ಉಪದೇಶ ಕೊಟ್ಟು ಅದಕ್ಕೆ ವ್ಯತಿರಿಕ್ತ ನಾವು ನಡೆಯುವುದು ಸನ್ನಡತೆಯಲ್ಲ. ಶ್ರೀಕೃಷ್ಣ ಯುದ್ಧರಂಗದಲ್ಲಿ ಅರ್ಜುನನಿಗೆ ಏನನ್ನು ಉಪದೇಶಿದ್ದನೋ, ಅದನ್ನೇ ತನ್ನ ಅವತಾರದಲ್ಲಿ ನಡೆದು ತೋರಿದ.
೩೧-೩೨). ಸಹಃ-ಓಜಃ: “ಅನಭಿಬಾಭ್ಯತ್ವಂ ಸಹಃ”- ಇನ್ನೊಬ್ಬರಿಗೆ ಮಣಿಯದ ತಾಕತ್ತು ಸಹಃ. “ಅತಿಭವಶಕ್ತಿತಃ ಓಜಃ”-ಇನ್ನೊಬ್ಬರನ್ನು ಮಣಿಸುವ ತಾಕತ್ತು ಓಜಃ. ಇವು ಒಂದೇ ನಾಣ್ಯದ ಎರಡು ಮುಖಗಳು. ಶತ್ರುಗಳು ನಮ್ಮ ಮೇಲೆ ಎರಗಿದಾಗ ಅವರ ಬಲ ಪ್ರಯೋಗವನ್ನು ಸಹಿಸುವ ತಾಕತ್ತು ಸಹಃ. ಅವರನ್ನು ಮಣಿಸುವ ತಾಕತ್ತು ಓಜಃ.
೩೩). ಬಲಂ: ಮನೋಬಲ, ಆತ್ಮಬಲ ಮತ್ತು  ದೇಹಬಲ. ಇದು ಒಬ್ಬ ಸಾಧಕನಿಗೆ ಸಾಧನಾ ಮಾರ್ಗದಲ್ಲಿ ಅತ್ಯವಶ್ಯಕ.
೩೪). ಭಗಃ: ಸೌಭಾಗ್ಯದ ಇನ್ನೊಂದು ಮುಖ ಭಗಃ. ಷಡ್ಗುಣಗಳು ಪೂರ್ಣಪ್ರಮಾಣದಲ್ಲಿರುವ ಭಗವಂತ ಭಗಃ. ಸಾಧಕನಲ್ಲಿಯೂ ಯಥಾಶಕ್ತಿ  ಜ್ಞಾನ, ಶಕ್ತಿ, ಐಶ್ವರ್ಯ, ವೀರ್ಯ, ಬಲ, ತೇಜಸ್ಸು(ಷಡ್ಗುಣ) ಇರತಕ್ಕದ್ದು. ಇನ್ನು ಭಗಃ ಎಂದರೆ ಭಾಗ್ಯವಿಶೇಷ, ಎಲ್ಲಕ್ಕಿಂತ ಎತ್ತರಕ್ಕೇರುವ ಯೋಗ್ಯತೆ. ಭಗವಂತ ಎಲ್ಲಕ್ಕಿಂತ ಎತ್ತರದಲ್ಲಿರುವವನು. ನಾವೂ ಕೂಡಾ ಜ್ಞಾನ ಮಾರ್ಗದ ಮುಖೇನ ಎತ್ತರಕ್ಕೇರುವ ಪ್ರಯತ್ನ ಮಾಡಬೇಕು.
೩೫). ಗಾಂಭೀರ್ಯಂ: ಆಳವಾದ ವ್ಯಕ್ತಿತ್ವ ಗಾಂಭೀರ್ಯ. ಒಬ್ಬರ ವ್ಯಕ್ತಿತ್ವ ಇನ್ನೊಬ್ಬರಿಗೆ ಲಘುವಾಗಿ ಕಾಣುವಂತೆ ಇರಬಾರದು. ವ್ಯಕ್ತಿತ್ವದ ಆಳ ಇನ್ನೊಬ್ಬರಿಗೆ ಸಿಗದಷ್ಟು ಗಾಂಭೀರ್ಯವನ್ನು ಜ್ಞಾನದ ಮುಖೇನ ನಾವೂ ನಮ್ಮ ಜೀವನದಲ್ಲಿ ಬೆಳೆಸಿಕೊಳ್ಳಬೇಕು.
೩೬). ಸ್ಥೈರ್ಯಂ: ಯಾರು ಏನೇ ಹೇಳಿದರೂ, ನಮ್ಮದೇ ಆದ ಅಚಲ ಬುದ್ಧಿಯಿಂದ ಸತ್ಕಾರ್ಯ ನಿರ್ವಹಿಸುವುದು ಸ್ಥೈರ್ಯ(Conviction).
೩೭). ಆಸ್ತಿಕ್ಯಂ: ನಮ್ಮ ಅನುಭವಕ್ಕೆ ಈ ತನಕ ಬಾರದೇ ಇರುವುದೂ ಈ ಪ್ರಪಂಚದಲ್ಲಿ ಇರಲು ಸಾಧ್ಯ ಎನ್ನುವ ನಂಬಿಕೆ ಆಸ್ತಿಕ್ಯ. ಈ ಪ್ರಪಂಚದಲ್ಲಿ ನಮಗೆ ಗೊತ್ತಿರುವುದಕ್ಕಿಂತ ಗೊತ್ತಿಲ್ಲದೇ ಇರುವ ವಿಚಾರಗಳೇ ಅಧಿಕ. ಈ ಎಚ್ಚರ ನಮಗಿರಬೇಕು. ಭಗವಂತನಿಗೆ ಅಗೋಚರವಾದುದು ಯಾವುದೂ ಇಲ್ಲ. ಹೀಗಿರುವಾಗ ಅಲ್ಲಿ ನಾಸ್ತಿಕ್ಯದ ಪ್ರಶ್ನೆಯೇ ಇಲ್ಲ.  
೩೮). ಕೀರ್ತಿಃ: ಜಗತ್ತಿನ ಜನರು ನಮ್ಮ ಬಗ್ಗೆ ಒಳ್ಳೆಯ ಮಾತನಾಡುವಂತೆ, ನೂರಾರು ಕಾಲ ನಮ್ಮ ವ್ಯಕ್ತಿತ್ವವನ್ನು ನೆನಸಿಕೊಂಡು ಸ್ಪೂರ್ತಿಯಿಂದ ಬದುಕುವಂತೆ ನಾವು ಬದುಕುವುದು ಕೀರ್ತಿ. ಸರ್ವಶಬ್ದವಾಚ್ಯನಾದ ಭಗವಂತ ಸರ್ವಶಬ್ದದಿಂದಲೂ ಕೀರ್ತನೀಯ.
೩೯). ಮಾನಃ: “ಮಾನಃ ಪರೇಷಾಂ”- ಇನ್ನೊಬ್ಬರು ನಮಗೆ ಗೌರವ ಕೊಡುವಂತೆ ಬದುಕುವ ಗುಣ ಮಾನ. ನಾವು ಇನ್ನೊಬ್ಬರಲ್ಲಿ “ನಮಗೆ ಗೌರವ ಕೊಡಿ” ಎಂದು ಕೇಳುವುದನ್ನು ಬಿಟ್ಟು, ಇನ್ನೊಬ್ಬರಿಗೆ ಗೌರವ ಕೊಡುವುದನ್ನು ಕಲಿಯಬೇಕು. ಎಲ್ಲಿ ಗೌರವಾನ್ವಿತ ವ್ಯಕ್ತಿತ್ವವಿದೆ, ಅದನ್ನು ಗೌರವದಿಂದ ಕಾಣುವುದು ಬಹಳ ದೊಡ್ಡ ಗುಣ. ರಾಜಸೂಯ ಯಾಗದಲ್ಲಿ ಅಗ್ರಪೂಜೆ ಪಡೆದ ಶ್ರೀಕೃಷ್ಣ, ಪೂಜೆಗೆ ಮೊದಲು ಅಲ್ಲಿಗೆ ಆಗಮಿಸಿದ ಋಷಿ-ಮುನಿಗಳ ಚಾಕರಿ ಮಾಡುವುದರಲ್ಲಿ ನಿರತನಾಗಿದ್ದ. ಅದೇ ರೀತಿ- ‘ದ್ವಾರಕೆಯನ್ನೊಮ್ಮೆ ನೋಡಬೇಕು’ ಎಂದು ಬಯಸಿದ ದುರ್ವಾಸ ಮುನಿಗಳನ್ನು, ಸ್ವಯಂ ಶ್ರೀಕೃಷ್ಣ ಕೈಗಾಡಿಯಲ್ಲಿ ಕುಳ್ಳಿರಿಸಿಕೊಂಡು ರಾಜಧಾನಿಯನ್ನು ತೋರಿಸಿ ಗೌರವಿಸಿದ್ದ. ಇವೆಲ್ಲವೂ ಹಿರಿಯರನ್ನು, ಜ್ಞಾನಿಗಳನ್ನು ನಾವು ಹೇಗೆ ಗೌರವದಿಂದ ಕಾಣಬೇಕು ಎನ್ನುವುದನ್ನು ಭಗವಂತ ತೋರಿಸಿದ ರೀತಿ. ಕಂಸನನ್ನು ಕೊಂದು, ತಂದೆ-ತಾಯಿಯರನ್ನು ಕಾಣಲು ಬಂದ ಶ್ರೀಕೃಷ್ಣ, ತಾಯಿ ದೇವಕಿಯಲ್ಲಿ ನುಡಿದ ಮಾತು ಮನ ಮಿಡಿಯುವಂತಹದ್ದು. “ಹೆತ್ತ ತಾಯಿಯನ್ನು ಹತ್ತು ವರ್ಷ ಕಣ್ಣೀರು ಸುರಿಸುವಂತೆ ಮಾಡಿದ ಭಾಗ್ಯಹೀನ ಮಗ ನಾನು. ನನ್ನನ್ನು ಕ್ಷಮಿಸು ತಾಯಿ” ಎಂದು ನಮಸ್ಕರಿಸಿದ್ದ ಶ್ರೀಕೃಷ್ಣ. ಇವೆಲ್ಲವೂ ಇನ್ನೊಬ್ಬರನ್ನು ಗೌರವದಿಂದ ಕಾಣುವ ರೀತಿ.
೪೦). ಅನಹಂಕೃತಿಃ: ಎಷ್ಟೇ ಎತ್ತರಕ್ಕೇರಿದರೂ ಕೂಡಾ, ನಾವು ನಮ್ಮ  ಎತ್ತರದ ಬಗೆಗೆ ಅಹಂಕಾರ ಪಡಬಾರದು. ನಮ್ಮ ಬಗ್ಗೆ ನಮಗೆ ಗೊತ್ತಿಲ್ಲದೇ ಇರುವುದು ಅಹಂಕಾರಕ್ಕೆ ಕಾರಣ. ಸರ್ವಜ್ಞನಾದ ಭಗವಂತನಿಗೆಲ್ಲಿಯ ಅಹಂಕಾರ? ನಾವೂ ಕೂಡಾ ನಮ್ಮ ಜೀವನದಲ್ಲಿ ಅನಹಂಕಾರವನ್ನು ಬೆಳೆಸಿಕೊಳ್ಳಬೇಕು.

ಇಮೇ ಚಾನ್ಯೇ ಚ ಭಗವನ್ ನಿತ್ಯಾ ಯತ್ರ ಮಹಾಗುಣಾಃ
ಪ್ರಾರ್ಥ್ಯಾ ಮಹತ್ತ್ವಮಿಚ್ಛದ್ಭಿಃ ನ ಚ ಯಾಂತಿ ಸ್ಮ ಕರ್ಹಿಚಿತ್ ೩೦

ತೇನಾಹಂ ಗುಣಪಾತ್ರೇಣ ಶ್ರೀನಿವಾಸೇನ ಸಾಂಪ್ರತಮ್
ಶೋಚಾಮಿ ರಹಿತಂ ಲೋಕಂ ಪಾಪ್ಮನಾ ಕಲಿನೇಕ್ಷಿತಮ್ ೩೧

ಇಂತಹ ಅನಂತ ಗುಣಗಳು ಭಗವಂತನಲ್ಲಿ ನಿತ್ಯ. ಅವು ತಾತ್ಕಾಲಿಕವಲ್ಲ. ನಾವು ಎತ್ತರಕ್ಕೇರಿ ಮೋಕ್ಷವನ್ನು ಪಡೆಯಬೇಕಾದರೆ  ಜೀವನದಲ್ಲಿ ಬಯಸಬೇಕಾದ ಗುಣಗಳಿವು. ಇಂತಹ ಗುಣಗಳನ್ನು ಗಳಿಸಿ, ಅದನ್ನು ನಿತ್ಯವಾಗಿ ಉಳಿಸಿಕೊಳ್ಳಬೇಕು.
ಹೀಗೆ ಗೋ-ರೂಪದಲ್ಲಿರುವ ಭೂದೇವಿ, ವೃಷಭ ರೂಪದಲ್ಲಿರುವ ಧರ್ಮದ ಬಳಿ ಭಗವಂತನ ಗುಣಗಾನ ಮಾಡಿ ಹೇಳುತ್ತಾಳೆ: “ಇಂತಹ ಗುಣಪೂರ್ಣ ಶ್ರೀಕೃಷ್ಣ ತನ್ನ ಅವತಾರ ಸಮಾಪ್ತಿಗೊಳಿಸಿದ. ಆದ್ದರಿಂದ ಇಂದು ಈ ಯಾವ ಗುಣಗಳೂ ಭೂಮಿಯಲ್ಲಿ ಉಳಿದಿಲ್ಲ ಎನಿಸುತ್ತಿದೆ” ಎಂದು.  ಮುಂದುವರಿದು ಭೂದೇವಿ ಹೇಳುತ್ತಾಳೆ: “ಶ್ರೀನಿವಾಸ ಭೂಮಿಯನ್ನು ಬಿಟ್ಟು ಹೊರಟುಹೋದನೆಂದು ದುಃಖವಾಗುತ್ತಿದೆ. ಶ್ರೀಕೃಷ್ಣನಿಲ್ಲದೆ, ಪಾಪಿಯಾದ ಕಲಿಯ ದೃಷ್ಟಿಪಾತಕ್ಕೆ ಬಲಿಯಾಗುತ್ತಿರುವ ಈ ಜನರನ್ನು ಕಂಡಾಗ ‘ಅಯ್ಯೋ’ ಎನಿಸುತ್ತಿದೆ” ಎಂದು.
ಇಲ್ಲಿ  ಶ್ರೀಕೃಷ್ಣನನ್ನು ‘ಶ್ರೀನಿವಾಸ’ ಎಂದು ಸಂಬೋಧಿಸಿದ್ದಾರೆ. ಶ್ರೀನಿವಾಸ ಎನ್ನುವುದು ಕೃಷ್ಣನ ಒಂದು ರೂಪ. ಮದುವೆ ಆಗದ ಕೃಷ್ಣ ವಿಠಲನಾದರೆ, ಮದುವೆಯಾದ ಕೃಷ್ಣ ಶ್ರೀನಿವಾಸ. ಯಾರು ಭಗವಂತನ ತೊಡೆಯನ್ನು ಆಶ್ರಯಿಸಿಕೊಂಡಿದ್ದಾಳೋ-ಅವಳು ಶ್ರೀ. ಅಂತಹ ತೊಡೆಯಲ್ಲಿ ಶ್ರೀದೇವಿಯನ್ನು ಕೂರಿಸಿಕೊಂಡಿರುವ ನಾರಾಯಣನೇ ಶ್ರೀನಿವಾಸ. ಇದಲ್ಲದೆ ಶ್ರೀ ಎಂದರೆ ಸದ್ಗುಣಗಳು; ಶ್ರೀ ಎಂದರೆ ವೇದಗಳು. ಸದ್ಗುಣಗಳ ನಿವಾಸ ವೇದವೇದ್ಯ ಭಗವಂತ ಶ್ರೀನಿವಾಸ.  
ಹೀಗೆ ಧರ್ಮಭೂದೇವಿಯರ ಸಂವಾದ ನಡೆಯುತ್ತಿರುವುದನ್ನು ಅಚ್ಚರಿಯಿಂದ ನೋಡಿದ ಪರೀಕ್ಷಿತರಾಜ,  ಅವರಿದ್ದಲ್ಲಿಗೆ   ಹೋಗುತ್ತಾನೆ.

ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪ್ರಥಮಸ್ಕಂಧೇ ಷೋಡಶೋSಧ್ಯಾಯಃ
ಭಾಗವತ ಮಹಾಪುರಾಣದ ಮೊದಲ ಸ್ಕಂಧದ ಹದಿನಾರನೇ ಅಧ್ಯಾಯ ಮುಗಿಯಿತು.

*********

Saturday, July 20, 2013

Shrimad BhAgavata in Kannada -Skandha-01-Ch-16(7)

೧೧. ಸಾಮ್ಯಂ: ಎಲ್ಲಿಯೂ ಯಾವ ರೀತಿಯ ವೈಷಮ್ಯ ಮಾಡದಿರುವುದು ‘ಸಮತೆ’ ಅಥವಾ ಸಾಮ್ಯ. ಅವರವರ ಯೋಗ್ಯತೆಗೆ ತಕ್ಕಂತೆ  ಫಲ ಕೊಡುವ ಸ್ವಭಾವ ಭಗವಂತನದ್ದು. ಆತನ ರೂಪಗಳಲ್ಲಿ, ಗುಣ-ಕ್ರಿಯೆಗಳಲ್ಲಿ ಕೂಡಾ ತಾರತಮ್ಯ ಇಲ್ಲ. ಹಾಗಾಗಿ ಭಗವಂತನನ್ನು “ನಿರ್ದೋಷಂ ಹಿ ಸಮಂ ಬ್ರಹ್ಮ”- ಎನ್ನುತ್ತಾರೆ.
ಎಲ್ಲರನ್ನು ಸಮನಾಗಿ ನೋಡುವುದು ಎಂದರೆ ಅವರವರ ಯೋಗ್ಯತೆಗೆ ತಕ್ಕಂತೆ ನೋಡುವ ಸ್ವಭಾವ ಹೊರತು, ಎಲ್ಲಾ ಯೋಗ್ಯತೆಯನ್ನು ಒಂದೇ  ಸಮನಾಗಿ ನೋಡುವುದಲ್ಲ. ನಾವೂ ಕೂಡಾ ಈ ಗುಣವನ್ನು ಬೆಳೆಸಿಕೊಳ್ಳಬೇಕು.
೧೨. ತಿತಿಕ್ಷಾ : ಕೋಪಿಸಿಕೊಳ್ಳಲು ಕಾರಣ ಇದ್ದಾಗಿಯೂ ಕೋಪಿಸಿಕೊಳ್ಳದೇ ಇರುವ ಸಮಚಿತ್ತತೆ ತಿತಿಕ್ಷಾ. ಸಾಮಾನ್ಯವಾಗಿ ನಾವು ಬಯಸಿದಂತೆ ಆಗದೇ ಇದ್ದಾಗ ನಮಗೆ ಕೋಪ ಬರುತ್ತದೆ. ಕೋಪ ಬರುವುದು ಅಸಾಯಕತೆ ಅಥವಾ ದೌರ್ಬಲ್ಯದ ಲಕ್ಷಣವೂ ಹೌದು. ಭಗವಂತ ಸರ್ವಸಮರ್ಥ. ಆತ ಬಯಸಿದಂತೆಯೇ ಎಲ್ಲವೂ ನಡೆಯುತ್ತದೆ. ಹೀಗಾಗಿ ಆತ ಎಂದೂ ಕೋಪಿಸಿಕೊಳ್ಳುವುದಿಲ್ಲ. ತನ್ನ ಅವತಾರದಲ್ಲಿ ಕೆಲವೊಮ್ಮೆ ನಮ್ಮ ಉದ್ಧಾರಕ್ಕಾಗಿ ಭಗವಂತ ಕೋಪಿಸಿಕೊಂಡಂತೆ ಲೀಲೆ ತೋರಿದರೂ ಕೂಡಾ, ಆತ ನಿಜವಾಗಿ ಯಾರ ಮೇಲೂ ಕೋಪಿಸಿಕೊಳ್ಳುವುದಿಲ್ಲ. ಭಗವಂತನ ಸಮಚಿತ್ತತೆಗೆ ಒಂದು ಉತ್ತಮ ಉದಾಹರಣೆ ಗಾಂಧಾರಿ ಶ್ರೀಕೃಷ್ಣನಿಗೆ  “ನಿನ್ನ ವಂಶ ನಿರ್ವಂಶವಾಗಲಿ” ಎಂದು ಶಾಪ ಕೊಟ್ಟಾಗ ಆತ ನಡೆದುಕೊಂಡ ರೀತಿ. ಆ ಸಂದರ್ಭದಲ್ಲಿ ಶ್ರೀಕೃಷ್ಣ ಕೋಪಿಸಿಕೊಳ್ಳದೆ, “ಇದು ಪತಿವೃತೆಯ ಬಾಯಿಯಲ್ಲಿ ಬಂದ ವರ” ಎಂದು ನಿರ್ವೀಕಾರವಾಗಿ ವಿಷಯ ಗ್ರಹಣ ಮಾಡಿದ. ನಾವೂ ಕೂಡಾ ನಮ್ಮ ಜೀವನದಲ್ಲಿ ಕೋಪವನ್ನು ಗೆಲ್ಲಬೇಕು.      
೧೩: ಉಪರತಿ : ಪ್ರಾಪಂಚಿಕ ಭೋಗದಲ್ಲಿ ಅನಾಸಕ್ತಿ ಮತ್ತು ಉತ್ಕೃಷ್ಟವಾದ ಸ್ವರೂಪದಲ್ಲಿ ಸದಾ ಆನಂದವಾಗಿರುವುದು ‘ಉಪರತಿ’. ಇದು ಮೋಕ್ಷ ಸಾಧನೆಯಲ್ಲಿ ನಮ್ಮಲ್ಲಿರಬೇಕಾದ ಗುಣ. ನಾವು ಹೊರಗಿನ ಕ್ಷುದ್ರವಾದ ವಸ್ತುವಿನಿಂದ ಮನಸ್ಸನ್ನು ತಿರುಗಿಸಿ ಎಲ್ಲಕ್ಕಿಂತ ಹಿರಿದಾದ ವಸ್ತುವಿನಮೇಲೆ ಮನಸ್ಸನ್ನು ನೆಲೆಗೊಳಿಸಬೇಕು.
೧೪. ಶ್ರುತಮ್ : ‘ಶ್ರುತಮ್’ ಎಂದರೆ ಸರ್ವ ಶ್ರುತಿಗಳ ಅರಿವು.  ಸಮಸ್ತ ಶಾಸ್ತ್ರವನ್ನು ಚತುರ್ಮುಖನಿಗೆ ಉಪದೇಶ ಮಾಡಿದವ ಭಗವಂತ. ಬೃಹದಾರಣ್ಯಕ ಉಪನಿಷತ್ತಿನಲ್ಲಿ ಹೇಳುವಂತೆ: “ಅಸ್ಯ ಮಹತೋ ಭೂತಸ್ಯ ನಿಃಶ್ವಸಿತಮೇತದ್ಯದೃಗ್ವೇದೋ ಯಜುರ್ವೇದಃ ಸಾಮವೇದೋSಥರ್ವಾಂಗಿರಸ ಇತಿಹಾಸಃ ಪುರಾಣಂ ವಿದ್ಯಾ ಉಪನಿಷದಃ ಶ್ಲೋಕಾಃ ಸೂತ್ರಾಣ್ಯನುವ್ಯಾಖ್ಯಾನಾನಿ ವ್ಯಾಖ್ಯಾನಾನೀಷ್ಟಂ ಹುತಮಾಶಿತಂ ಪಾಯಿತಮ್, ಅಯಂ ಚ ಲೋಕಃ, ಪರಶ್ಚ ಲೋಕಃ, ಸರ್ವಾಣಿ ಚ ಭೂತಾನಿ, ಅಸೈವೈತಾನಿ ಸರ್ವಾಣಿ ನಿಃಶ್ವಸಿತಾನಿ” (ಬೃಹದಾರಣ್ಯಕ-೪-೫-೧೧). ಅಂದರೆ: ಸಮಸ್ತ ಶಾಸ್ತ್ರಗಳೂ ಭಗವಂತನ ಉಸಿರು. ಅವನು ಸರ್ವಶಾಸ್ತ್ರಜ್ಞ. ವೇದ ಎನ್ನುವುದು ಭಗವಂತನ ಉದ್ಗಾರ. ಇಂತಹ ಭಗವಂತನನ್ನು ಸೇರಲು ಪ್ರಯತ್ನಿಸುವ ಸಾಧಕ, ಶ್ರವಣ-ಮನನ-ನಿಧಿಧ್ಯಾಸನದಿಂದ ಶ್ರುತಿಯನ್ನು ಅರಿಯುವ ಪ್ರಯತ್ನ ಮಾಡಬೇಕು.
೧೫). ಜ್ಞಾನಂ: ಭಗವಂತ ಸರ್ವಜ್ಞ. ಅಂತಹ ಭಗವಂತನನ್ನು ಅರಿಯುವ ಪ್ರಯತ್ನವನ್ನು ಪ್ರತಿಯೊಬ್ಬ ಸಾಧಕ ಕೂಡಾ ಮಾಡಬೇಕು.
೧೬). ವಿರಕ್ತಿಃ: ಭಗವಂತ ಸರ್ವವಿರಕ್ತ. ಆತ ಎಲ್ಲವುದರ ಜೊತೆಗೂ ಇರುತ್ತಾನೆ, ಆದರೆ ಯಾವುದೇ ಒಂದರ ಅಭಿಮಾನ ಆತನಿಗಿಲ್ಲ. ಶ್ರೀಕೃಷ್ಣನನ್ನು ನೋಡಿದರೆ ಆತ ೧೬,೧೦೮ ಸ್ತ್ರೀಯರ ಗಂಡ. ಆದರೆ ಆತ ಆಜನ್ಮ ಬ್ರಹ್ಮಚಾರಿ! ಸಾಧಕ ಎಲ್ಲರೊಂದಿಗಿದ್ದರೂ ಕೂಡಾ, ತನ್ನತನವನ್ನು ಕಳೆದುಕೊಳ್ಳದೆ ಭಿನ್ನವಾಗಿರುತ್ತಾನೆ. ಯಾವುದರ ಸ್ಪರ್ಶವೂ ಇಲ್ಲದೆ ಎಲ್ಲರ ಜೊತೆಗೂ ಇರುವುದು ವಿರಕ್ತಿ. ಹೀಗೆ ಎಲ್ಲವನ್ನೂ ಮಾಡುತ್ತಾ ಯಾವುದನ್ನೂ ಅಂಟಿಸಿಕೊಳ್ಳದೆ ಬದುಕುವುದನ್ನು ನಾವು ಕಲಿಯಬೇಕು.

Monday, July 8, 2013

Shrimad BhAgavata in Kannada -Skandha-01-Ch-16(6)

೮-೯. ಶಮ-ದಮ: ಲೋಕದಲ್ಲಿ ಶಮಃ ಅಂದರೆ ಮನಸ್ಸು ಭಗವಂತನಲ್ಲಿ ನೆಲೆಗೊಳ್ಳುವುದು, ದಮ ಅಂದರೆ ಇಂದ್ರಿಯ ನಿಗ್ರಹ. ಇದು ಭಗವಂತನ ಗುಣವಾಗುವುದು ಹೇಗೆ? ಇದಕ್ಕೆ ಆಚಾರ್ಯರು ತಮ್ಮ ಭಾಷ್ಯದಲ್ಲಿ ಉತ್ತರಿಸುತ್ತಾ ಹೇಳುತ್ತಾರೆ: ಶಮಃ ಪ್ರಿಯಾದಿಬುದ್ಧ್ಯುಜ್ಝಾಕ್ಷಮಾ ಕ್ರೋಧಾದ್ಯನುತ್ಥಿತಿಃ ಮಹಾವೀರೋಧಕರ್ತುಶ್ಚ ಸಹನಂ ತು ತಿತಿಕ್ಷಣಂ  ಅಂದರೆ: ಪ್ರಿಯ-ಅಪ್ರಿಯ ಎನ್ನುವ ವಿಭಾಗವೇ ಇಲ್ಲದೇ ಇರುವುದು ಶಮ. ಭಗವಂತನಿಗೆ ಪ್ರಿಯ-ಅಪ್ರಿಯ, ಶತ್ರು-ಮಿತ್ರ ಎನ್ನುವ ವಿಭಾಗವೇ ಇಲ್ಲ. ಏಕೆಂದರೆ ಶಾಸ್ತ್ರಕಾರರು ಹೇಳುವಂತೆ: ಎಲ್ಲವನ್ನೂ ಸೃಷ್ಟಿಸಿರುವವನು ಸತ್ಯಸಂಕಲ್ಪ ಭಗವಂತ. ಆದ್ದರಿಂದ ಅವನಿಗೆ  ಪ್ರಿಯ-ಅಪ್ರಿಯ ಎನ್ನುವ ವಿಭಾಗವಿಲ್ಲ. ನಾವೂ ಕೂಡಾ ಸಾದ್ಯವಾದಷ್ಟು ಈ ಗುಣವನ್ನು ಬೆಳಸಿಕೊಳ್ಳಬೇಕು. ಪ್ರಿಯ-ಅಪ್ರಿಯ ಎಂದು ತಲೆಕೆಡಿಸಿಕೊಳ್ಳದೆ, ಬಂದಿದ್ದನ್ನು ಭಗವಂತನ ಪ್ರಸಾದವೆಂದು ಸ್ವೀಕರಿಸಿ ಮುನ್ನೆಡೆಯುವುದನ್ನು ನಾವು ಕಲಿಯಬೇಕು.
ಇಂದ್ರಿಯಗಳು ಹೇಳಿದಂತೆ ನಾವು ಬದುಕಬಾರದು, ನಾವು ಹೇಳಿದಂತೆ ಇಂದ್ರಿಯಗಳು ಕೇಳಬೇಕು. ಇಂದ್ರಿಯ ನಿಗ್ರಹ ಮಾಡದೆ ಒಳಗಿನ ಯಾವುದೇ ಸಾಧನೆ ಇಲ್ಲ. ನಮ್ಮ ಮನಸ್ಸು ನಮ್ಮ ಹೊರಗಿನ ಇಂದ್ರಿಯಗಳನ್ನು ಅವಲಂಬಿಸಿಕೊಂಡೇ ಯೋಚಿಸುತ್ತದೆ. ಅದು ಯಾವಾಗಲೂ ಬಹಿರ್ಮುಖವಾಗಿರುತ್ತದೆ. ಇಂತಹ ಮನಸ್ಸನ್ನು ಅಂತರ್ಮುಖಗೊಳಿಸಲು ನಾವು  ಹೊರಗಿನ ಇಂದ್ರಿಯಗಳ ಮುಖೇನ ಇಲ್ಲದ ವಿಷಯಗಳು ಒಳ ಹೋಗದಂತೆ ತಡೆಯುವುದೇ ದಮ. ಅಂತಹ ದಮವನ್ನು ನಾವು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಅಂತರಂಗ ಪ್ರಪಂಚದಲ್ಲಿ ಭಗವಂತನನ್ನು ಕಾಣಲು ಪ್ರಯತ್ನಿಸಬೇಕು. ಎಲ್ಲವನ್ನೂ ನಿಗ್ರಹಿಸುವ ಭಗವಂತ ದಮ ಸ್ವರೂಪ.
೧೦. ತಪ/ತಪಸ್ಸು: ಯಾವುದೇ ಒಂದು ಸಂಗತಿಯನ್ನು ಆಳವಾಗಿ ಚಿಂತಿಸಿ, ಅದರ ತಾರ್ಕಿಕ ಯುಕ್ತಾಯುಕ್ತತತೆಯನ್ನು ಯೋಚಿಸಿ, ಮನನಮಾಡಿ, ತಳಸ್ಪರ್ಶಿಯಾಗಿ ಗ್ರಹಣ ಮಾಡುವುದು ತಪಸ್ಸು. ಭಗವಂತ ಚಿಂತನಾಸ್ವರೂಪ. ಅಂತಹ ಭಗವಂತನನ್ನು ನಾವು ಆಳವಾಗಿ ಚಿಂತಿಸಲು ಪ್ರಯತ್ನಿಸಬೇಕು.