೮-೯. ಶಮ-ದಮ: ಲೋಕದಲ್ಲಿ ಶಮಃ ಅಂದರೆ ಮನಸ್ಸು ಭಗವಂತನಲ್ಲಿ ನೆಲೆಗೊಳ್ಳುವುದು, ದಮ
ಅಂದರೆ ಇಂದ್ರಿಯ ನಿಗ್ರಹ. ಇದು ಭಗವಂತನ ಗುಣವಾಗುವುದು ಹೇಗೆ? ಇದಕ್ಕೆ ಆಚಾರ್ಯರು ತಮ್ಮ
ಭಾಷ್ಯದಲ್ಲಿ ಉತ್ತರಿಸುತ್ತಾ ಹೇಳುತ್ತಾರೆ: ಶಮಃ ಪ್ರಿಯಾದಿಬುದ್ಧ್ಯುಜ್ಝಾಕ್ಷಮಾ ಕ್ರೋಧಾದ್ಯನುತ್ಥಿತಿಃ । ಮಹಾವೀರೋಧಕರ್ತುಶ್ಚ ಸಹನಂ ತು ತಿತಿಕ್ಷಣಂ ॥ ಅಂದರೆ: ಪ್ರಿಯ-ಅಪ್ರಿಯ
ಎನ್ನುವ ವಿಭಾಗವೇ ಇಲ್ಲದೇ ಇರುವುದು ಶಮ. ಭಗವಂತನಿಗೆ ಪ್ರಿಯ-ಅಪ್ರಿಯ, ಶತ್ರು-ಮಿತ್ರ ಎನ್ನುವ
ವಿಭಾಗವೇ ಇಲ್ಲ. ಏಕೆಂದರೆ ಶಾಸ್ತ್ರಕಾರರು ಹೇಳುವಂತೆ: ಎಲ್ಲವನ್ನೂ ಸೃಷ್ಟಿಸಿರುವವನು ಸತ್ಯಸಂಕಲ್ಪ
ಭಗವಂತ. ಆದ್ದರಿಂದ ಅವನಿಗೆ ಪ್ರಿಯ-ಅಪ್ರಿಯ ಎನ್ನುವ
ವಿಭಾಗವಿಲ್ಲ. ನಾವೂ ಕೂಡಾ ಸಾದ್ಯವಾದಷ್ಟು ಈ ಗುಣವನ್ನು ಬೆಳಸಿಕೊಳ್ಳಬೇಕು. ಪ್ರಿಯ-ಅಪ್ರಿಯ ಎಂದು
ತಲೆಕೆಡಿಸಿಕೊಳ್ಳದೆ, ಬಂದಿದ್ದನ್ನು ಭಗವಂತನ ಪ್ರಸಾದವೆಂದು ಸ್ವೀಕರಿಸಿ ಮುನ್ನೆಡೆಯುವುದನ್ನು
ನಾವು ಕಲಿಯಬೇಕು.
ಇಂದ್ರಿಯಗಳು
ಹೇಳಿದಂತೆ ನಾವು ಬದುಕಬಾರದು, ನಾವು ಹೇಳಿದಂತೆ ಇಂದ್ರಿಯಗಳು ಕೇಳಬೇಕು. ಇಂದ್ರಿಯ ನಿಗ್ರಹ ಮಾಡದೆ
ಒಳಗಿನ ಯಾವುದೇ ಸಾಧನೆ ಇಲ್ಲ. ನಮ್ಮ ಮನಸ್ಸು ನಮ್ಮ ಹೊರಗಿನ ಇಂದ್ರಿಯಗಳನ್ನು ಅವಲಂಬಿಸಿಕೊಂಡೇ
ಯೋಚಿಸುತ್ತದೆ. ಅದು ಯಾವಾಗಲೂ ಬಹಿರ್ಮುಖವಾಗಿರುತ್ತದೆ. ಇಂತಹ ಮನಸ್ಸನ್ನು ಅಂತರ್ಮುಖಗೊಳಿಸಲು
ನಾವು ಹೊರಗಿನ ಇಂದ್ರಿಯಗಳ ಮುಖೇನ ಇಲ್ಲದ
ವಿಷಯಗಳು ಒಳ ಹೋಗದಂತೆ ತಡೆಯುವುದೇ ದಮ. ಅಂತಹ ದಮವನ್ನು ನಾವು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು
ಅಂತರಂಗ ಪ್ರಪಂಚದಲ್ಲಿ ಭಗವಂತನನ್ನು ಕಾಣಲು ಪ್ರಯತ್ನಿಸಬೇಕು. ಎಲ್ಲವನ್ನೂ ನಿಗ್ರಹಿಸುವ ಭಗವಂತ
ದಮ ಸ್ವರೂಪ.
೧೦. ತಪ/ತಪಸ್ಸು: ಯಾವುದೇ ಒಂದು ಸಂಗತಿಯನ್ನು ಆಳವಾಗಿ ಚಿಂತಿಸಿ, ಅದರ ತಾರ್ಕಿಕ ಯುಕ್ತಾಯುಕ್ತತತೆಯನ್ನು ಯೋಚಿಸಿ, ಮನನಮಾಡಿ, ತಳಸ್ಪರ್ಶಿಯಾಗಿ ಗ್ರಹಣ ಮಾಡುವುದು ತಪಸ್ಸು. ಭಗವಂತ ಚಿಂತನಾಸ್ವರೂಪ. ಅಂತಹ ಭಗವಂತನನ್ನು ನಾವು ಆಳವಾಗಿ ಚಿಂತಿಸಲು ಪ್ರಯತ್ನಿಸಬೇಕು.
No comments:
Post a Comment