೨. ಶೌಚ: ಶೌಚ ಎಂದರೆ ಶುದ್ಧಿ,
ನೈರ್ಮಲ್ಯ. ಭಗವಂತ ನಿತ್ಯ ಶುದ್ಧ. ಆತನಲ್ಲಿ ತ್ರಿಗುಣಗಳ ಸ್ಪರ್ಶವೇ ಇಲ್ಲ. ಜ್ಞಾನಾನಂದಮಯವಾದ
ನಿತ್ಯ ಶುದ್ಧ ಸ್ವರೂಪ ಆತನದು. ನಿತ್ಯ ನಿರ್ಮಲನಾದ ಭಗವಂತನನ್ನು ಸೇರುವುದಕ್ಕೋಸ್ಕರ
ಕಾಯಾ-ವಾಚಾ-ಮನಸಾ ಪ್ರಯತ್ನಿಸಬೇಕು. ಮನಸ್ಸಿನಲ್ಲಿ ಯಾವುದೇ ಕೊಳೆ ಇಟ್ಟುಕೊಳ್ಳದಿರುವುದರಿಂದ
ನಾವು ನಿತ್ಯ ಶುದ್ಧರಾಗಬಹುದು.
೩. ದಯೆ: ದಯೆ ಅಂದರೆ ಅನುಕಂಪೆ. ಯಾರ ಬಗ್ಗೆಯೂ ದ್ವೇಷ ಇಲ್ಲದಿರುವುದು, ಯಾರು ಕಷ್ಟದಲ್ಲಿದ್ದಾರೆ
ಅವರ ಮೇಲೆ ಅನುಕಂಪ ತೋರುವುದು ದಯೆ. ಭಗವಂತ ದುಷ್ಟರಿಗೆ
ಶಿಕ್ಷೆ ಕೊಟ್ಟರೆ, ಸಜ್ಜನರಿಗೆ ರಕ್ಷಣೆ ಕೊಡುತ್ತಾನೆ. ಯಾರು ಸರಿಯಾದ ದಾರಿಯಲ್ಲಿದ್ದಾರೆ ಅವರ ಮೇಲೆ
ದಯೆ ತೋರುವ ಭಗವಂತ, ಯಾರು ಅಪರಾಧಿಗಳೋ ಅವರಿಗೆ ನಿರ್ದಯವಾಗಿ ಶಿಕ್ಷೆ ಕೊಡುತ್ತಾನೆ. ಆದರೆ ಭಗವಂತ ಕೊಡುವ ಶಿಕ್ಷೆಯಲ್ಲೂ
ಕೂಡಾ ಕಾರುಣ್ಯವಿದೆ. ಅವನಿಗೆ ಯಾರ ಮೇಲೂ ದ್ವೇಷವಿಲ್ಲ. ಅವನು ಪರಮ ಕಾರುಣ್ಯಮೂರ್ತಿ. ನಾವೂ ಕೂಡಾ
ಇನ್ನೊಬ್ಬರನ್ನು ದ್ವೇಷಿಸದೇ ದಯೆಯನ್ನು ಬೆಳೆಸಿಕೊಳ್ಳಬೇಕು.
೪. ದಾನ: ಎಲ್ಲರಿಗೂ ಅವರ ಕರ್ಮಕ್ಕನುಗುಣವಾಗಿ ಏನು ಸಿಗಬೇಕೋ, ಅದನ್ನು ದಾನ ಮಾಡುವ ಮಹಾದಾನಿ ಆ
ಭಗವಂತ. ಆತ ಭಕ್ತವತ್ಸಲ. ಭಕ್ತರಿಗೆ ಆತ ತನ್ನನ್ನೇ
ತಾನು ಕೊಟ್ಟುಬಿಡುತ್ತಾನೆ. ಆತ ಸರ್ವಾದಿಷ್ಟಪ್ರದ. ದಾನ ಎನ್ನುವುದು ಆತನ ಮೂಲಭೂತ ಗುಣಗಳಲ್ಲೊಂದು.
ಭಗವಂತನಲ್ಲಿ ಎಲ್ಲವೂ ಇದೆ, ಆದ್ದರಿಂದ ಕೊಡುತ್ತಾನೆ. ಆದರೆ ನಮ್ಮಲ್ಲಿ ಎಲ್ಲವೂ ಇಲ್ಲ. ಆದರೆ ನಮ್ಮಲ್ಲಿ
ಏನಿದೆಯೋ ಅದನ್ನು ಇಲ್ಲದವರಿಗೆ ಮನಪೂರ್ವಕ ಕೊಡುವ ಅಭ್ಯಾಸವನ್ನು ನಾವು ಬೆಳಸಿಕೊಳ್ಳಬೇಕು.
೫. ತ್ಯಾಗ: ಸಾಮಾನ್ಯವಾಗಿ ನಮಗೆ ತಿಳಿದಂತೆ ತ್ಯಾಗ ಅಂದರೆ ಕೊಡುವುದು. ದಾನ ಎಂದರೂ
ಕೊಡುವುದು. ಆದ್ದರಿಂದ ತ್ಯಾಗ ಮತ್ತು ದಾನ ಎನ್ನುವುದು ಸಮಾನ ಅರ್ಥವುಳ್ಳ ಪರ್ಯಾಯ ಶಬ್ದವೆಂಬಂತೆ
ಕಾಣುತ್ತದೆ. ಆದರೆ ಆಚಾರ್ಯರು ‘ತ್ಯಾಗ’ ಎನ್ನುವುದಕ್ಕೆ ಕೊಶವನ್ನು ನೀಡಿದ್ದಾರೆ. ಅವರು ಹೇಳುವಂತೆ: “ಮಿಥ್ಯಾಭಿಮಾನವಿರತಿಸ್ತ್ಯಾಗ
ಇತ್ಯಭಿಧೀಯತೇ”. ಅಂದರೆ ನಮ್ಮಲ್ಲಿರುವ ಅಭಿಮಾನವನ್ನು ಬಿಡುವುದು
ತ್ಯಾಗ. ಭಗವಂತ ಯಾವುದಕ್ಕೂ ಅಭಿಮಾನಿಯಲ್ಲ. ಅವನಿಗೆ ಯಾವುದರ ಮೇಲೂ ಅಭಿಮಾನವಿಲ್ಲ. ನಾವೂ ಕೂಡಾ ನಮ್ಮಲ್ಲಿರುವ
ಅಹಂಕಾರ, ಒಣ ಜಂಭವನ್ನು ಬಿಡಬೇಕು.
೬. ಸಂತೋಷ: ಸಂತೋಷ ಎಂದರೆ ನಿತ್ಯತೃಪ್ತತ್ವ(Contentment).
ಭಗವಂತ ಆಪ್ತಕಾಮ. ಅವನು ಪಡೆಯಬೇಕಾದ್ದು ಯಾವುದೂ ಇಲ್ಲ. ಈ ಗುಣ ಭಗವಂತನಲ್ಲಿ ಪೂರ್ಣಪ್ರಮಾಣದಲ್ಲಿದೆ.
ನಾವು ಆ ಭಗವಂತನ ಅರಿವಿನಿಂದ ಅವನ ಜ್ಞಾನವಲ್ಲದೆ ಇನ್ನೇನೂ ಬೇಡ ಎನ್ನುವ ಸ್ಥಿತಿಯನ್ನು ತಲುಪಬೇಕು.
೭. ಆರ್ಜವಂ: ಆಡಿದಂತೆ ನಡೆದುಕೊಳ್ಳುವುದು(Straight forwardness). ಭಗವಂತ ಅಖಂಡವಾದ
ಜ್ಞಾನಸ್ವರೂಪ. ಆತ ಆರ್ಜವದ ಸಾಕಾರಮೂರ್ತಿ. ನಾವೂ ಕೂಡಾ ನಮ್ಮ ಜೀವನದಲ್ಲಿ ಆರ್ಜವವನ್ನು ಬೆಳೆಸಿಕೊಳ್ಳಲು
ಪ್ರಯತ್ನ ಮಾಡಬೇಕು.
No comments:
Post a Comment