Friday, May 17, 2013

Shrimad BhAgavata in Kannada -Skandha-01-Ch-15(3)


ಪಾಂಡವರ ನಿರ್ಯಾಣ

ವಾಚಂ ಜುಹಾವ ಮನಸಿ ತತ್ಪ್ರಾಣ ಇತರೇ ಪರಮ್
ಧೃತ್ಯಾ ಹ್ಯಪಾನಂ ಸೋತ್ಸರ್ಗಂ ತತ್ಪರತ್ವೇ ಹ್ಯಜೋಹವೀತ್೧೦

ತ್ರಿತ್ವೇ ಹುತ್ವಾSಥ  ಪಂಚತ್ವಂ ತಚ್ಚೈಕತ್ವೇSಜುಹೋನ್ಮುನಿಃ
ಸರ್ವಮಾತ್ಮನ್ಯಜುಹವೀದ್ ಬ್ರಹ್ಮಣ್ಯಾತ್ಮಾನಮವ್ಯಯೇ೧೧

ಹಿಂದೆ ಧೃತರಾಷ್ಟ್ರನ ನಿರ್ಯಾಣ ಕುರಿತು ವಿವರಿಸುವಾಗ ಒಂದು ವಿಧದ ಧ್ಯಾನ ಪ್ರಕ್ರಿಯೆಯ ವಿವರವನ್ನು ನಾವು ನೋಡಿದ್ದೇವೆ. ಇಲ್ಲಿ ಯುಧಿಷ್ಠಿರನ ಮುಖೇನ ಇನ್ನೊಂದು ಅಪೂರ್ವ ಧ್ಯಾನ ಪ್ರಕ್ರಿಯೆಯನ್ನು ಭಾಗವತ  ವಿವರಿಸುತ್ತದೆ. ನಮ್ಮ ದೇಹ ಲಯಹೊಂದುವಾಗ ಹೇಗೆ ನಾವು ಲಯಚಿಂತನೆ ಮಾಡಬೇಕು ಎನ್ನುವುದನ್ನು ಇಲ್ಲಿ ಯುಧಿಷ್ಠಿರನ ಲಯಚಿಂತನೆಯಲ್ಲಿ ಕಾಣಬಹುದು. ಸಮುದ್ರದೊಳಗೆ ಮೀನುಗಳು ಸೇರಿಕೊಂಡಿರುವಂತೆ, ಕೆಳಗಿನ ಕಕ್ಷ್ಯೆದ ದೇವತೆಗಳು ಮೇಲಿನ ಕಕ್ಷ್ಯೆದ ದೇವತೆಗಳೊಂದಿಗೆ ಲಯಹೊಂದಿ, ಕೊನೆಗೆ ಚತುರ್ಮುಖನೊಳಗೆ ಸೇರಿಕೊಂಡು, ಭಗವಂತನಲ್ಲಿ ಲಯಹೊಂದುವುದನ್ನು ಲಯಚಿಂತನೆ ಎನ್ನುತ್ತಾರೆ.
ಯುಧಿಷ್ಠಿರ ತನ್ನ ಎಲ್ಲಾ ಬಾಹ್ಯೇನ್ದ್ರಿಯಗಳನ್ನು ಅಂತರ್ಮುಖಗೊಳಿಸಿದ. ಅಂದರೆ ಕಣ್ಣಿನ ದೇವತೆ ಸೂರ್ಯ(೧೨ ನೇ ಕಕ್ಷ್ಯೆ), ಕಿವಿಯ ದೇವತೆ ಚಂದ್ರ(೧೨ನೇ ಕಕ್ಷ್ಯೆ), ರಸೇನ್ದ್ರಿಯ ದೇವತೆ ವರುಣ(೧೩ನೇ ಕಕ್ಷ್ಯೆ), ತ್ವಗೇನ್ದ್ರಿಯ ದೇವತೆ ವಿತ್ತಪ(೧೮ನೇ ಕಕ್ಷ್ಯೆ), ಮೂಗಿನ ಅಭಿಮಾನಿ ದೇವತೆಗಳಾದ ಆಶ್ವೀದೇವತೆಗಳು(೧೮ನೇ ಕಕ್ಷ್ಯೆ), ವಾಗೀನ್ದ್ರಿಯ ದೇವತೆ ಅಗ್ನಿ(೧೫ನೇ ಕಕ್ಷ್ಯೆ), ಕಾಲಿನ ದೇವತೆ ಜಯಂತ(೧೯ನೇ ಕಕ್ಷ್ಯೆ). ಈ ಎಲ್ಲಾ ದೇವತೆಗಳನ್ನು ಕೈಯ ಅಭಿಮಾನಿ ದೇವತೆ, ಎಂಟನೇ ಕಕ್ಷ್ಯೆದಲ್ಲಿರುವ ಇಂದ್ರನಲ್ಲಿ ಲಯಗೊಳಿಸಿ, ಸಮಸ್ತ ದೇವತೆಗಳನ್ನು ವಾಗ್ದೇವತೆ ಪಾರ್ವತಿಯಲ್ಲಿ (೭ನೇ ಕಕ್ಷ್ಯೆ) ಲಯಗೊಳಿಸಿದ. [ವಾಗ್ದೇವತೆಯಾಗಿ ಅತ್ಯಂತ ಎತ್ತರದ ಕಕ್ಷ್ಯೆದಲ್ಲಿ ಸರಸ್ವತಿ-ಭಾರತಿಯರಿದ್ದಾರೆ. ಆದರೆ ಕೆಳಗಿನ ಕಕ್ಷ್ಯೆದಲ್ಲಿ ಅಗ್ನಿ ಹಾಗೂ ನಂತರ ಪಾರ್ವತಿ ವಾಗ್ದೇವತೆಯರು. ಭಾಗವತದಲ್ಲಿ ಇಂದ್ರಿಯಾಭಿಮಾನಿ ದೇವತೆಗಳು ವಾಗ್ದೇವತೆಯಲ್ಲಿ ಲಯ ಹೊಂದುವುದನ್ನು ಬಿಡಿಸಿ ಹೇಳಿಲ್ಲ. ಇಲ್ಲಿ ವಾಗ್ದೇವತೆ ಪಾರ್ವತಿ, ಮನಸ್ಸಿನ ದೇವತೆ ಶಿವನಲ್ಲಿ ಲಯ ಹೊಂದುತ್ತಾಳೆ ಎನ್ನುವಲ್ಲಿನಿಂದ ಲಯ ಚಿಂತನೆಯ ವಿವರಣೆ ನೀಡಿದ್ದಾರೆ].
ಯುಧಿಷ್ಠಿರ ಮಾತನ್ನು(ಪಾರ್ವತಿಯನ್ನು) ಮನಸ್ಸಿನಲ್ಲಿ(ಶಿವನಲ್ಲಿ) ಲಯಗೊಳಿಸಿರುವುದರಿಂದ, ಮಾತಿಲ್ಲದೆ ಪೂರ್ಣ ಮನನದಲ್ಲಿ ಕುಳಿತ. ಮನೋಭಿಮಾನಿಯಾದ ಶಿವನಿಂದಾಚೆಗೆ ಮುಖ್ಯಪ್ರಾಣದೇವರ ಸಾಕ್ಷಾತ್ ಐದು ರೂಪಗಳಿವೆ. ಅವುಗಳೆಂದರೆ: ಪ್ರಾಣ, ಅಪಾನ, ವ್ಯಾನ, ಉದಾನ ಮತ್ತು ಸಮಾನ.  ಇಲ್ಲಿ ಧರ್ಮರಾಯ ಪ್ರಾಣಶಕ್ತಿಯಲ್ಲಿ ಮನಸ್ಸನ್ನು(ಶಿವನನ್ನು) ಲಯಗೊಳಿಸಿದ. ನಂತರ ಪ್ರಾಣನನ್ನು ಅಪಾನದಲ್ಲಿ ಲಯಗೊಳಿಸಿ, ಶ್ವಾಸೋಚ್ಛ್ವಾಸವನ್ನು ಸ್ಥಬ್ಧಗೊಳಿಸಿದ. ಇದರ ನಂತರದ ಧ್ಯಾನದ ಪ್ರಕ್ರಿಯೆ ತುಂಬಾ ಕಷ್ಟಕರವಾದುದು. ಅದೇನೆಂದರೆ ಪ್ರಾಣಾಪಾನರನ್ನು ವ್ಯಾನನಲ್ಲಿ ಲಯಗೊಳಿಸುವುದು. ಇದು ದೇಹದಲ್ಲಿನ ಸಂಪೂರ್ಣ ಪ್ರಾಣಕ್ರಿಯೆಯನ್ನು ನಿಲ್ಲಿಸಿ ಕುಂಭಕದಲ್ಲಿ ನಿಲ್ಲುವ ಸ್ಥಿತಿ. ಧರ್ಮರಾಯ  ಪ್ರಾಣ-ಅಪಾನ-ವ್ಯಾನ ಈ ಮೂರರ ಸಮಷ್ಟಿಯನ್ನು ಉದಾನ ಮತ್ತು ಸಮಾನರಲ್ಲಿ ಲಯಗೊಳಿಸಿದ. ಹೀಗೆ  ಪ್ರಾಣದೇವರ ಪಂಚರೂಪಗಳನ್ನು ಒಂದರೊಳಗೊಂದು ಆವಿರ್ಭಾವಗೊಳಿಸಿ, ಅದನ್ನು ಅಖಂಡನಾದ ಮುಖ್ಯಪ್ರಾಣದೇವರಲ್ಲಿ ಲಯಗೊಳಿಸಿದ ಯುಧಿಷ್ಠಿರ. ಇಂತಹ ಸ್ಥಿತಿಯಲ್ಲಿ ಮುಖ್ಯಪ್ರಾಣನನ್ನು ಹೃದಯದಲ್ಲಿರುವ ಆತ್ಮನಾಮಕ ಭಗವಂತನಲ್ಲಿ ಹೊಮಿಸಿ, “ನನ್ನ ಬಿಂಬರೂಪದಲ್ಲಿರುವ ಭಗವಂತನೇ  ಇಡೀ ವಿಶ್ವದಲ್ಲಿ ತುಂಬಿರುವ ಭಗವಂತ” ಎಂದು ಸರ್ವಗತನಾದ ಭಗವಂತನಲ್ಲಿ ಅಂತರ್ಯಾಮಿಯಾದ ಭಗವಂತನನ್ನು ಹೋಮಿಸಿದ ಧರ್ಮರಾಜ.   

ಉದೀಚೀಂ ಪ್ರವಿವೇಶಾಶಾಂ ಗತಪೂರ್ವಾಂ ಮಹಾತ್ಮಭಿಃ
ಹೃದಿ ಬ್ರಹ್ಮ ಪರಂ ಧ್ಯಾಯನ್ ನಾವರ್ತೇತ ಗತೋ ಯತಃ೧೩

ಹೀಗೆ ವಿಶ್ವದಲ್ಲಿ ತುಂಬಿರುವ ಅಖಂಡವಾದ ಶಕ್ತಿಯೇ ಬಿಂಬರೂಪನಾಗಿ ತನ್ನೊಳಗೂ ತುಂಬಿದ್ದಾನೆ ಎಂದು ಚಿಂತನೆ ಮಾಡಿ,  ಉತ್ತರಾಭಿಮುಖವಾಗಿ; ಯಾವ ದಾರಿಯಲ್ಲಿ ಹೋದರೆ ಮತ್ತೆ ಮರಳಿ ಬರುವ ಸಂಭವ ಇಲ್ಲವೋ, ಅಂತಹ ದಾರಿಯಲ್ಲಿ ಪರಬ್ರಹ್ಮನನ್ನು ಧ್ಯಾನಿಸುತ್ತಾ ಸಾಗಿದ ಯುಧಿಷ್ಠಿರ.
“ಇಲ್ಲಿ ಯಾವ ಮಾರ್ಗದಲ್ಲಿ ಸಾಗಿದರೆ ಮರಳಿ ಬರುವ ಸಂಭವ ಇಲ್ಲವೋ ಆ ಮಾರ್ಗದಲ್ಲಿ ಸಾಗಿದ” ಎಂದರೆ ‘ಅವರು ಸಾಗಿದ ಮಾರ್ಗ ಮೋಕ್ಷ ಮಾರ್ಗ’ ಎಂದರ್ಥವಲ್ಲ. ಇದು ದೇಹತ್ಯಾಗದ ಒಂದು ವಿಧಾನ ಅಷ್ಟೇ. ಆಚಾರ್ಯರು ತಾತ್ಪರ್ಯ ನಿರ್ಣಯದಲ್ಲಿ ಹೇಳುವಂತೆ: “ನಾವರ್ತೆತ ವೀರಗತಿಮ್”. ಅಂದರೆ: ಎಂತಹ ಪ್ರಸಂಗ ಬಂದರೂ ಮತ್ತೆ ಮರಳಿ ಬರುವ ಪ್ರಶ್ನೆಯೇ ಇಲ್ಲ ಎಂದು ನಿರ್ಧರಿಸಿ, ದೇಹ ಬಿದ್ದುಹೋಗುವ ತನಕ  ಸಾಗುವ ‘ವೀರಗತಿ’.

ತೇ ಸಾಧುಕೃತಸರ್ವಾರ್ಥಾ ಜ್ಞಾತ್ವಾSSತ್ಯಂತಿಕಮಾತ್ಮನಃ
ಮನಸಾ ಧಾರಯಾಮಾಸುರ್ವೈಕುಂಠಚರಣಾಂಬುಜಮ್೧೫

ಧರ್ಮರಾಯನೊಂದಿಗೆ  ದ್ರೌಪದಿ ಮತ್ತು ಇತರ ಪಾಂಡವರು “ತಾವು ಇನ್ನು ಭೂಮಿಯಲ್ಲಿ ಇರುವುದು ತರವಲ್ಲ” ಎಂದು ತೀರ್ಮಾನ ಮಾಡಿ, ಭಗವಂತನನ್ನು ಹೃದಯದಲ್ಲಿ ಹೊತ್ತು, ಉತ್ತರಾಭಿಮುಖವಾಗಿ ಹೊರಡುತ್ತಾರೆ. ತಮ್ಮ ಜೀವಿತ ಕಾಲದಲ್ಲಿ ಭೂಮಿಯಲ್ಲಿದ್ದು ಏನನ್ನು ಮಾಡಬೇಕಿತ್ತೋ ಅದೆಲ್ಲವನ್ನೂ ಮಾಡಿ, ಮನಸ್ಸಿನಲ್ಲಿ ಯಾವ ನೆನಪನ್ನೂ ಹೊತ್ತುಕೊಳ್ಳದೇ, ಮನಸ್ಸನ್ನು ಭಗವಂತನಲ್ಲಿ ನೆಟ್ಟು, ಭಗವನ್ಮಯರಾಗಿ ಸಾಗುತ್ತಾರೆ ಪಾಂಡವರು.

ಇಲ್ಲಿನ ಮುಂದಿನ ಕಥಾಭಾಗ ಸ್ವರ್ಗಾರೋಹಣಪರ್ವ. ಆ ಕಥೆ ಮಹಾಭಾರತದಲ್ಲಿ ವಿವರವಾಗಿ ಬರುತ್ತದೆ. ಉತ್ತರಾಭಿಮುಖವಾಗಿ ಸಾಗುತ್ತಿರುವಾಗ ದ್ರೌಪದಿ, ನಕುಲ-ಸಹದೇವ, ಅರ್ಜುನ, ಭೀಮ ಎಲ್ಲರೂ ತಮ್ಮ ದೇಹತ್ಯಾಗ ಮಾಡಿ ಅವತಾರ ಸಮಾಪ್ತಿ ಮಾಡುತ್ತಾರೆ. ಧರ್ಮರಾಯನನ್ನು ನಾಯಿ ರೂಪದಲ್ಲಿ ಯಮ ಹಿಂಬಾಲಿಸಿ ಪರೀಕ್ಷಿಸುತ್ತಾನೆ. ಪರೀಕ್ಷೆಯಲ್ಲಿ ಗೆದ್ದ ಯುಧಿಷ್ಠಿರ ದೇಹ ಸಮೇತನಾಗಿ ಸ್ವರ್ಗವನ್ನು ಸೇರುತ್ತಾನೆ. ಹೀಗೆ ಪಾಂಡವರ ನಿರ್ಯಾಣವನ್ನು ವಿವರಿಸುವುದರೊಂದಿಗೆ ಈ ಅಧ್ಯಾಯ ಕೊನೆಗೊಳ್ಳುತ್ತದೆ.

ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪ್ರಥಮಸ್ಕಂಧೇ ಪಂಚದಶೋSಧ್ಯಾಯಃ
ಭಾಗವತ ಮಹಾಪುರಾಣದ ಮೊದಲ ಸ್ಕಂಧದ ಹದಿನೈದನೇ ಅಧ್ಯಾಯ ಮುಗಿಯಿತು.
*********

No comments:

Post a Comment