ತ್ರಯೋದಶೋSಧ್ಯಾಯಃ
ಸೂತ ಉವಾಚ--
ಸಂಪ್ರಸ್ಥಿತೇ ದ್ವಾರಕಾಯಾಂ
ಜಿಷ್ಣೌ ಬಂಧುದಿದೃಕ್ಷಯಾ ।
ಜ್ಞಾತುಂ ಮಾಯಾಮನುಷ್ಯಸ್ಯ
ವಾಸುದೇವಸ್ಯ ಚೇಹಿತಮ್ ॥೧॥
ವ್ಯತೀತಾಃ ಕತಿಚಿನ್ಮಾಸಾಸ್ತದಾ
ತು ಶತಶೋ ನೃಪಃ ।
ದದರ್ಶ ಘೋರರೂಪಾಣಿ
ನಿಮಿತ್ತಾನಿ ಭೃಗೂದ್ವಹ ॥೨॥
ಇಲ್ಲಿ ಉಗ್ರಶ್ರವಸ್ಸರು
ಶೌನಕರಿಗೆ ಧೃತರಾಷ್ಟ್ರಾದಿಗಳು ದೇಹತ್ಯಾಗ ಮಾಡಿ ಹದಿನೆಂಟು ವರ್ಷ ಕಳೆದ ನಂತರ ನಡೆದ ಕಥೆಯನ್ನು ವಿವರಿಸುತ್ತಿದ್ದಾರೆ: ಶ್ರೀಕೃಷ್ಣ
ಭೂಮಿಯಲ್ಲಿ ಅವತರಿಸಿ ೧೦೬.೫ ವರ್ಷ ಸಂದಿದೆ. ಧರ್ಮರಾಯನಿಗೆ ಸುಮಾರು ೧೦೮ ವರ್ಷ ವಯಸ್ಸು. ಈ ಸಮಯದಲ್ಲಿ ಅರ್ಜುನ ಯಾದವರನ್ನು ನೋಡಿಕೊಂಡು ಬರಲು ದ್ವಾರಕೆಗೆ ಹೋಗಿದ್ದಾನೆ.
ಹೋಗಿ ಹಲವು ತಿಂಗಳು ಕಳೆದರೂ ಆತ ಹಿಂದಿರುಗಿ ಬಂದಿಲ್ಲ. [ಮಹಾಭಾರತದ ಪ್ರಕಾರ ಅರ್ಜುನ ಏಳು ದಿನಗಳ
ನಂತರ ಹಿಂದಿರುಗಿ ಬರುತ್ತಾನೆ. ಆದರೆ ಇಲ್ಲಿ ಅನೇಕ ತಿಂಗಳುಗಳಾದರೂ ಹಿಂದಿರುಗಿ ಬಂದಿಲ್ಲ ಎಂದಿದ್ದಾರೆ.
ಏಕೆ ಹೀಗೆ ಹೇಳಿದ್ದಾರೆ ಎನ್ನುವುದನ್ನು ಮುಂದೆ ವಿವರಿಸಲಾಗಿದೆ]. ಅರ್ಜುನ ಮರಳಿ ಬಾರದೇ ಇರುವುದರಿಂದ
ಧರ್ಮರಾಯನಿಗೆ ಗೊಂದಲವಾಗುತ್ತದೆ. ಅದೇ ಸಮಯದಲ್ಲಿ ಆತ ಅನೇಕ ಅಪಶಕುನಗಳನ್ನು ಕಾಣುತ್ತಾನೆ.
ನರಿಗಳು ಊರಿಗೆ ಬಂದು ಸೂರ್ಯನಿಗೆ ಅಭಿಮುಖವಾಗಿ ಊಳಿಡುವುದು, ನಾಯಿಗಳು ಆತನ ಮೈಮೇಲೆ ಎಗರಿ ಬರುವುದು, ಇತ್ಯಾದಿ ಅಪಶಕುನಗಳು
ಆತನ ಮನಸ್ಸನ್ನು ಗೊಂದಲಗೊಳಿಸುತ್ತವೆ.
ಕಾಲಸ್ಯ ಚ ಗತಿಂ
ರೌದ್ರಾಂ ವಿಪರ್ಯಸ್ತರ್ತುಧರ್ಮಿಣಃ ।
ಪಾಪೀಯಸೀಂ ನೃಣಾಂ
ವಾರ್ತಾಂ ಕ್ರೋಧಲೋಭಾನೃತಾತ್ಮನಾಮ್ ॥೩॥
ಜಿಹ್ಮಪ್ರಾಯಂ ವ್ಯವಹೃತಂ
ಸಾಧ್ಯಮಿಶ್ರಂ ಚ ಸೌಹೃದಂ ।
ಪಿತೃಮಾತೃಸುಹೃದ್
ಭ್ರಾತೃ ದಂಪತೀನಾಂ ಚ ಕಲ್ಕಿತಾಮ್ ॥೪॥
ಲೋಕಸ್ಥಿತಿಯನ್ನು ಕಂಡೂ
ಧರ್ಮರಾಯನಿಗೆ ಬೇಸರವಾಗುತ್ತದೆ. ಜನರ ವ್ಯವಹಾರದಲ್ಲಿ ಕಪಟತನ, ಒಳಗೊಂದು ಹೊರಗೊಂದು; ವ್ಯಾವಹಾರಿಕ ಸ್ನೇಹ; ತಂದೆ-ತಾಯಿ, ಅಣ್ಣ-ತಮ್ಮ, ಗಂಡ-ಹೆಂಡತಿ
ನಡುವೆ ವಿರಸ; ತಾನು ಹೇಳಿದಂತೆಯೇ ಆಗಬೇಕೆಂದು ಎಲ್ಲರೂ ಬಯಸಿ ಇನ್ನೊಬ್ಬರೊಂದಿಗೆ ಜಗಳ,
ಇತ್ಯಾದಿಯನ್ನು ನೋಡಿ ಧರ್ಮರಾಯ ವ್ಯಾಖುಲನಾಗುತ್ತಾನೆ.
ಏಕೆ ಬದುಕಬೇಕು ಈ ಭೂಮಿಯಲ್ಲಿ ? ಪ್ರಾಯಃ ನಮ್ಮ ಅವಸಾನ ಕಾಲ ಸಮೀಪಿಸುತ್ತಿದೆ ಎಂದು ಯೋಚಿಸುತ್ತಾನೆ
ಆತ. ಹೀಗೆ ಯೋಚಿಸಿ ಯುದಿಷ್ಠಿರ ತನ್ನ ದುಗುಡವನ್ನು ತಮ್ಮನಾದ ಭೀಮಸೇನನಲ್ಲಿ ಹೇಳಿಕೊಳ್ಳುತ್ತಾನೆ.
ಯುಧಿಷ್ಠಿರ ಉವಾಚ--
ಅಪಿ ಸಪ್ತಾಧುನಾ
ಮಾಸಾ ಭೀಮಸೇನ ತವಾನುಜಃ ।
ನಾಯಾತಿ ಕಸ್ಯ ವಾ
ಹೇತೋರ್ನಾಹಂ ವೇದೇದಮಂಜಸಾ ॥೭॥
ಧರ್ಮರಾಯ ಭೀಮನಲ್ಲಿ
ಹೇಳುತ್ತಾನೆ: “ಅರ್ಜುನ ದ್ವಾರಕೆಗೆ ಹೋಗಿ ಏಳು ತಿಂಗಳುಗಳೇ ಕಳೆಯಿತು. ಏಕೆ ಆತ ಹಿಂದಿರುಗಿ ಬಂದಿಲ್ಲ?
ನನಗೇನೂ ಹೊಳೆಯುತ್ತಿಲ್ಲ. ಏನೋ ಅಚಾತುರ್ಯ ನಡೆದು ಹೋಗಿದೆ ಎನಿಸುತ್ತಿದೆ” ಎಂದು
ಅಪಿ ದೇವರ್ಷಿಣಾSSದಿಷ್ಟಃ
ಸ ಕಾಲಃ ಪ್ರತ್ಯುಪಸ್ಥಿತಃ ।
ಯದಾSSತ್ಮನೋSಙ್ಗಮಾಕ್ರೀಡಂ ಭಗವಾನುತ್ಸಿಸೃಕ್ಷತಿ ॥೮॥
ಇಲ್ಲಿ ಧರ್ಮರಾಯ ಹದಿನೆಂಟು
ವರ್ಷಗಳ ಹಿಂದೆ ನಾರದರು ಹೇಳಿದ ಮಾತನ್ನು ನೆನಪಿಸಿಕೊಳ್ಳುವುದನ್ನು ಕಾಣುತ್ತೇವೆ. “ಅಂದು ನಾರದರು
ಹೇಳಿದಂತೆ: ‘ಒಂದು ದಿನ ಭಗವಂತ ಎಲ್ಲವನ್ನೂ ಉಪಸಂಹಾರ ಮಾಡಿ, ತನ್ನ ಅವತಾರವನ್ನು ಸಮಾಪ್ತಿ ಮಾಡಲಿದ್ದಾನೆ.
ಅದಕ್ಕೆ ನಾವೂ ಸಿದ್ಧರಾಗಿರಬೇಕು’ ಎಂದು. ಆ ಕಾಲ ಬಂದೇ
ಬಿಟ್ಟಿತೇ? ನಾವು ಈ ಭೂಮಿಯನ್ನು ಬಿಟ್ಟು ಹೊರಡುವ ಕಾಲ ಸಮೀಪಿಸಿತೇ? ಏಕೆ ಅರ್ಜುನ ಇನ್ನೂ ಬಂದಿಲ್ಲ”
ಎಂದು ತನ್ನ ಅಂತರಂಗದ ದುಗುಡವನ್ನು ಭೀಮನಲ್ಲಿ ಅರುಹಿಕೊಳ್ಳುತ್ತಾನೆ ಧರ್ಮರಾಯ.
ಈ ಹಿಂದೆ ಹೇಳಿದಂತೆ-
ಅರ್ಜುನ ದ್ವಾರಕೆಗೆ ಹೋಗಿ, ಏಳು ದಿನಗಳ ನಂತರ ಹಿಂತಿರುಗಿ ಬಂದಿದ್ದಾನೆ ಎಂದು ಮಹಾಭಾರತದಲ್ಲಿ ಉಕ್ತವಾಗಿದೆ.
ಆದರೆ ಏಕೆ ಭಾಗವತದಲ್ಲಿ ಏಳು ತಿಂಗಳು ಎಂದು ಹೇಳಿದ್ದಾರೆ?
ಈ ಪ್ರಶ್ನೆಗೆ ತಾತ್ಪರ್ಯ ನಿರ್ಣಯದಲ್ಲಿ ಆಚಾರ್ಯರು ಉತ್ತರಿಸಿದ್ದಾರೆ:
ಮಾಸಶಬ್ದೇನಾಹಾನ್ಯುಚ್ಯಂತೇ
। ತಥಾ ಹಿ ಮಹಾಭಾರತೇ ।
ಅಹಸ್ತು ಮಾಸಶಬ್ದೋಕ್ತಂ
ಯತ್ರ ಚಿಂತಾಯುತಂ ವ್ರಜೇತ್ ।
ಏವಂ ವತ್ಸರಭಾದ್ಯಂ
ಚ ವಿಪರೀತೇ ವಿಪರ್ಯಯಃ ।
ಇತಿ ನಾಮ ಮಹೋದದೌ ।
ಮಹಾಭಾರತದಲ್ಲಿ ನಾವು
ಇತಿಹಾಸವನ್ನು ಕಾಣುತ್ತೇವೆ. ಅಂದರೆ ಅಲ್ಲಿ ಹೇಳುವಂತೆ ಅರ್ಜುನ ಎಳೇ ದಿನಗಳಲ್ಲಿ ಹಿಂದಿರುಗಿ ಬಂದಿದ್ದಾನೆ.
ಆದರೆ ಭಾಗವತದಲ್ಲಿ ಏಳು ಮಾಸ ಎಂದಿದೆ. ಇದು ಧರ್ಮರಾಯನ ಮನಃಶಾಸ್ತ್ರವನ್ನು ವಿವರಿಸುವ ಪುರಾಣದ
ಗುಹ್ಯ ಭಾಷೆ. ಅರ್ಜುನ ಹೊರಟುಹೋದ ದಿನದಿಂದ ಧರ್ಮರಾಯನಿಗೆ ಅನೇಕ ಅಪಶಕುನಗಳು ಎದುರಾಗಿವೆ.
ಆದ್ದರಿಂದ ಏನೋ ಅನರ್ಥ ನಡೆದಿದೆ ಎನ್ನುವ ಮುನ್ಸೂಚನೆ ಆತನ ಮನದಲ್ಲಿ ಮೂಡಿದೆ. ಇದರಿಂದಾಗಿ ಆತನಿಗೆ
ಒಂದೊಂದು ದಿನವೂ ಒಂದೊಂದು ಮಾಸದಂತೆ ಕಾಣುತ್ತಿದೆ.ಇಲ್ಲಿ ಧರ್ಮರಾಯ ‘ಏಳು ದಿನಗಳನ್ನು ಏಳು ತಿಂಗಳಿನಂತೆ ಕಳೆದಿದ್ದಾನೆ’
ಎನ್ನುವುದನ್ನು ‘ಸಪ್ತ ಮಾಸ’ ಎಂದು ವಿವರಿಸಿದ್ದಾರೆ ಅಷ್ಟೇ.
No comments:
Post a Comment