Tuesday, May 14, 2013

Shrimad BhAgavata in Kannada -Skandha-01-Ch-15(2)


ನಿಶಮ್ಯ ಭಗವನ್ಮಾರ್ಗಂ ಸಂಸ್ಥಾಂ ಯದುಕುಲಸ್ಯ ಚ
ಸ್ವಃಪಥಾಯ ಮತಿಂ ಚಕ್ರೇ ನಿವೃತ್ತಾತ್ಮಾ ಯುಧಿಷ್ಠಿರಃ

ಶ್ರೀಕೃಷ್ಣನ ಅವತಾರ ಸಮಾಪ್ತಿ ವಿಚಾರ ಕೇಳಿ ಧರ್ಮರಾಯನಿಗೆ ಏನೆನಿಸಿತು ಎನ್ನುವುದನ್ನು ಇಲ್ಲಿ ಸಂಕ್ಷಿಪ್ತವಾಗಿ ವಿವರಿಸಲಾಗಿದೆ. ಯಾದವರು ಒಬ್ಬರಿಗೊಬ್ಬರು ಹೊಡೆದಾಡಿಕೊಂಡು ಸತ್ತ ವಿಚಾರವನ್ನು ಹಾಗೂ ಶ್ರೀಕೃಷ್ಣ ಅವತಾರ ಸಮಾಪ್ತಿ ಮಾಡಿದ ವಿಚಾರವನ್ನು ಅರ್ಜುನನಿಂದ ಕೇಳಿ ಧರ್ಮರಾಯ “ತಾನೂ ಹೊರಟು ಹೋಗಬೇಕು, ಇನ್ನು ಈ ಭೂಮಿಯಲ್ಲಿ ರಾಜ್ಯಭಾರ ಮಾಡುವುದರಲ್ಲಿ ಅರ್ಥವಿಲ್ಲ” ಎಂದು ನಿರ್ಧರಿಸಿದ.
ಇಲ್ಲಿ ವಿಶೇಷ ಏನೆಂದರೆ: ಪಾಂಡವರು ಅನಾರೋಗ್ಯದ ಕಾರಣ ರಾಜ್ಯತ್ಯಾಗ ಮಾಡಿದುದಲ್ಲ; ವಾನಪ್ರಸ್ಥಾಶ್ರಮಮಕ್ಕೆ ಹೋದದ್ದೂ ಅಲ್ಲ. ಅವರು ಭೂಮಿಯಲ್ಲಿ ಇದ್ದದ್ದು ಸಾಕು, ಇನ್ನು ದೇಹತ್ಯಾಗ ಮಾಡಿ ಮೂಲರೂಪ ಸೇರಬೇಕೆಂದು ನಿರ್ಧಾರಮಾಡಿ, ಸ್ವರ್ಗದ ದಾರಿಯಲ್ಲಿ ಪಯಣ ಮಾಡುತ್ತಾರೆ.
ಧರ್ಮರಾಯನ ಮೂಲ ಸ್ವಭಾವವೇ ನಿವೃತ್ತಿಮಾರ್ಗವಾಗಿತ್ತು. ಯುದ್ಧದ ನಂತರ ಆತ “ನನಗೆ ಈ ಸಿಂಹಾಸನ ಬೇಡ, ಭೀಮ ಅಥವಾ ಅರ್ಜುನ ಸಿಂಹಾಸನವನ್ನೇರಲಿ, ನಾನು ಕಾಡಿಗೆ ಹೋಗಿ ತಪಸ್ಸು ಮಾಡುತ್ತೇನೆ” ಎಂದು ಕೇಳಿಕೊಂಡಿದ್ದ. ಆಗ ಶ್ರೀಕೃಷ್ಣ ಮತ್ತು ವೇದವ್ಯಾಸರು “ಇದು ನಿನ್ನ ಕರ್ತವ್ಯ, ನೀನು ರಾಜ್ಯಭಾರ ಮಾಡು” ಎಂದು ಸಲಹೆ ಕೊಟ್ಟಿದ್ದುದಕ್ಕಾಗಿ, ಮೂವತ್ತಾರು ವರ್ಷಗಳ ಕಾಲ ಯಶಸ್ವಿಯಾಗಿ ರಾಜ್ಯಭಾರ ಮಾಡಿದ ಧರ್ಮರಾಯ. ಈಗ ಶ್ರೀಕೃಷ್ಣ ಅವತಾರ ಸಮಾಪ್ತಿ ಮಾಡಿದ ವಿಚಾರ ಕೇಳಿ, ಆತನ ಮನಸ್ಸು ವಿಶೇಷವಾಗಿ ನಿವೃತ್ತಿ ಕಡೆಗೆ ಹರಿಯಿತು. “ಇನ್ನು ನಾನು ಭೂಮಿಯಲ್ಲಿರಬಾರದು, ಹೊರಟುಬಿಡಬೇಕು” ಎಂದು ಆತ ತೀರ್ಮಾನ ಮಾಡಿದ.

ಸ್ವರಾಟ್ ಪೌತ್ರಂ ವಿನೀತಂ ತಮಾತ್ಮನೋSನವಮಂ ಗುಣೈಃ
ತೋಯನೀವ್ಯಾಃ ಪತಿಂ ಭೂಮೇರಭ್ಯಷಿಂಚದ್ ಗಜಾಹ್ವಯೇ

ನಿವೃತ್ತಿ ಮಾರ್ಗದಲ್ಲಿ ಸಾಗಬೇಕೆಂದು ಅನಿಸಿದ ತಕ್ಷಣ ಕ್ಷತ್ರಿಯರು ಹೊರಟುಹೋಗುವಂತಿಲ್ಲ. ಏಕೆಂದರೆ ಅವರ ಮೇಲೆ ಸಿಂಹಾಸನದ ಜವಾಬ್ಧಾರಿ ಇರುತ್ತದೆ. ಹಾಗಾಗಿ ಅದನ್ನು ಒಬ್ಬ ಯೋಗ್ಯ ಉತ್ತರಾಧಿಕಾರಿಗೆ ಒಪ್ಪಿಸದೇ ಧರ್ಮರಾಯ ಹೊರಡುವಂತಿರಲಿಲ್ಲ. ನಮಗೆ ತಿಳಿದಂತೆ ಪಾಂಡವರ ಎಲ್ಲಾ ಮಕ್ಕಳೂ ಸಾವನ್ನಪ್ಪಿದ್ದು,  ಅಲ್ಲಿ ಉಳಿದಿರುವ ಪಾಂಡವರ ಏಕಮಾತ್ರ ವಂಶದ ಕುಡಿ, ಅಭಿಮನ್ಯುವಿನ ಮಗನಾದ ಪರೀಕ್ಷಿತ.
ಮೂವತ್ತಾರು ವರ್ಷ ವಯಸ್ಸಿನ ಪರೀಕ್ಷಿತ ಶಸ್ತ್ರ-ಶಾಸ್ತ್ರ ಪಾರಂಗತನಾಗಿದ್ದು ಸಿಂಹಾಸನವನ್ನೇರಲು ಯೋಗ್ಯನಾಗಿದ್ದ. ಶ್ರೇಷ್ಠ ಪರಂಪರೆಯಲ್ಲಿ ಬೆಳೆದ ಪರೀಕ್ಷಿತ ತುಂಬಾ ವಿನಯಶೀಲನಾಗಿದ್ದ. ಸಜ್ಜೆನಿಕೆ ಮತ್ತು ಗುಣವಂತಿಕೆಯಲ್ಲಿ ತನಗಿಂತ ಪರೀಕ್ಷಿತ ಏನೂ ಕಮ್ಮಿ ಇಲ್ಲ(ಅಧಿಕ-ಉಪಮಾನ)ಎಂಬುದನ್ನು ಗುರುತಿಸಿದ ಧರ್ಮರಾಯ, ಆತನನ್ನು ಸಮುದ್ರವೇ ಸೀಮೆಯಾಗಿರುವ ಭೂಮಿಯ ಸಾಮ್ರಾಟನಾಗಿ ಮಾಡಿ  ಪಟ್ಟಾಭಿಷೇಕ ಮಾಡಿದ.
ಇಲ್ಲಿ ಹಸ್ತಿನಪುರವನ್ನು ‘ಗಜಾಹ್ವಯ’ ಎಂದು ಕರೆದಿದ್ದಾರೆ. ಪಾಂಡವರ ವಂಶಸ್ತನಾಗಿದ್ದ ಹಸ್ತಿ ಎನ್ನುವ ರಾಜನಿಂದ ನಿರ್ಮಾಣಗೊಂಡ ರಾಜಧಾನಿಗೆ ಹಸ್ತಿನಪುರ ಎನ್ನುವ ಹೆಸರು ಬಂತು. ಹಸ್ತಿ ಎಂದರೆ ಆನೆ. ಆನೆಯ ಹೆಸರಿನ ಪುರ- ಹಸ್ತಿನಪುರ ಅಥವಾ ಗಜಾಹ್ವಯ. [ಕೆಲವರು ಇದನ್ನು ‘ಹಸ್ತಿನಾಪುರ’ ಎಂದು ಸಂಬೋಧಿಸುತ್ತಾರೆ. ಆದರೆ ಅದು ಸರಿಯಲ್ಲ. ಏಕೆಂದರೆ ಅದು ಹಸ್ತಿನಃ-ಪುರಂ. ಅಂದರೆ: ಹಸ್ತಿ ಎನ್ನುವ ರಾಜನ ನಗರ. ಆದ್ದರಿಂದ ಹಸ್ತಿನಪುರ].

ಮಧುರಾಯಾಂ ತಥಾ ವಜ್ರಂ ಶೂರಸೇನಪತಿಂ ತತಃ
ಪ್ರಾಜಾಪತ್ಯಾಂ ನಿರೂಪ್ಯೇಷ್ಟಿಮಗ್ನೀನಪಿಬದೀಶ್ವರಃ

ಕೇವಲ ಪರೀಕ್ಷಿತನಿಗೆ ಪಟ್ಟಾಭಿಷೇಕ ಮಾಡಿದರೆ ಮುಗಿದಿಲ್ಲ. ಆ ಕಾಲದಲ್ಲಿ ಅಲ್ಲಿ ಪ್ರಧಾನವಾಗಿ ಎರಡು ವಂಶಗಳಿದ್ದವು. ಅವುಗಳೆಂದರೆ ಯಯಾತಿರಾಜನಿಂದ ಚಂದ್ರವಂಶ ಎರಡು ಕವಲಾಗಿ ಬೆಳೆದು ಬಂದ ಯದುವಂಶ ಮತ್ತು ಕುರುವಂಶ. ಈ ಎರಡು ಕವಲುಗಳಲ್ಲಿ ಒಂದು ಕವಲಿಗೆ ಪರೀಕ್ಷಿತ ಉತ್ತರಾಧಿಕಾರಿಯಾದ. ಆದರೆ ಶ್ರೀಕೃಷ್ಣ ಯದುವಂಶದ ಉತ್ತರಾಧಿಕಾರಿಯನ್ನು ನೇಮಿಸದೇ ಅವತಾರ ಸಮಾಪ್ತಿ ಮಾಡಿದುದರಿಂದ ಯದುವಂಶವನ್ನು ಉಳಿಸುವ ಜವಾಬ್ಧಾರಿ ಕೂಡಾ ಧರ್ಮರಾಯನ ಮೇಲಿತ್ತು. ನಮಗೆ ತಿಳಿದಂತೆ ಯಾದವರೆಲ್ಲರೂ ಹೊಡೆದಾಡಿಕೊಂಡು ಸತ್ತಿದ್ದಾರೆ. ಆದ್ದರಿಂದ ಅಳಿದುಳಿದವರಲ್ಲಿ ಒಬ್ಬ ಯೋಗ್ಯನನ್ನು ಧರ್ಮರಾಯ ಆರಿಸಿ ಪಟ್ಟಾಭಿಷೇಕ ಮಾಡಬೇಕಾಗಿತ್ತು. ಶ್ರೀಕೃಷ್ಣನ ಮಗ ಪ್ರದ್ಯುಮ್ನ, ಪ್ರದ್ಯುಮ್ನನ ಮಗ ಅನಿರುದ್ಧ. ಇವರಿಬ್ಬರೂ ಸತ್ತಿರುವುದರಿಂದ ಅಲ್ಲಿ ಉಳಿದಿದ್ದು ಅನಿರುದ್ಧನ ಮಗ ವಜ್ರ ಎನ್ನುವ ಬಾಲಕ. ಆತನೊಬ್ಬನೇ ಸಿಂಹಾಸನವೇರಲು ಯೋಗ್ಯ ಎನ್ನುವುದನ್ನು ಗುರುತಿಸಿದ ಧರ್ಮರಾಯ, ಮಧುರೆಯಲ್ಲಿ ವಜ್ರನನ್ನು ಯಾದವರ ಉತ್ತರಾಧಿಕಾರಿಯಾಗಿ ಪಟ್ಟಾಭಿಷೇಕ ಮಾಡುತ್ತಾನೆ. ಹೀಗೆ ಪರೀಕ್ಷಿತ ಮತ್ತು ವಜ್ರನನ್ನು ಸಿಂಹಾಸನದಲ್ಲಿ ಕೂರಿಸಿ ಧರ್ಮರಾಯ ಹೊರಡುತ್ತಾನೆ.    

No comments:

Post a Comment