Monday, May 20, 2013

Shrimad BhAgavata in Kannada -Skandha-01-Ch-16(1)


ಷೋಡಶೋSಧ್ಯಾಯಃ

ಸೂತ ಉವಾಚ--
ತತಃ ಪರೀಕ್ಷಿದ್ದ್ವಿಜವರ್ಯಶಿಕ್ಷಯಾ ಮಹೀಂ ಮಹಾಭಾಗವತಃ ಶಶಾಸ ಹ
ಯಥಾ ಹಿ ಸೂತ್ಯಾಮಭಿಜಾತಕೋವಿದಾಃ ಸಮಾದಿಶನ್ವಿಪ್ರ ಮಹದ್ಗುಣಸ್ತಥಾ

ಸ ಉತ್ತರಸ್ಯ ತನಯಾಮುಪಯೇಮ ಇರಾವತೀಮ್
ಜನಮೇಜಯಾದೀಂಶ್ಚತುರಸ್ತಸ್ಯಾಮುತ್ಪಾದಯತ್ ಸುತಾನ್

ಆಜಹಾರಾಶ್ವಮೇಧಾಂಸ್ತ್ರೀನ್ ಗಂಗಾಯಾಂ ಭೂರಿದಕ್ಷಿಣಾನ್
ಶಾರದ್ವತಂ ಗುರುಂ ಕೃತ್ವಾ ದೇವಾ ಯತ್ರಾಕ್ಷಿಗೋಚರಾಃ

ಪಾಂಡವರ ನಂತರ ಪರೀಕ್ಷಿತ ರಾಜ್ಯಭಾರದ ಹೊಣೆ ಹೊತ್ತ. ಉತ್ತರನ ಮಗಳಾದ ಇರಾವತಿಯನ್ನು ಮದುವೆಯಾದ ಆತನಿಗೆ ಜನಮೇಜಯ ಮುಂತಾದ ನಾಲ್ವರು ಮಕ್ಕಳಿದ್ದರು. ಕೃಪಾಚಾರ್ಯರನ್ನು ತನ್ನ ಗುರುವಾಗಿ ಪಡೆದ ಪರೀಕ್ಷಿತ, ತನ್ನ ಆಡಳಿತ ಕಾಲದಲ್ಲಿ ಮೂರು ಅಶ್ವಮೇಧಯಾಗವನ್ನು ಮಾಡಿ ಉತ್ತಮ ರಾಜ್ಯಾಡಳಿತ ನೀಡಿದ.

ನಿಜಗ್ರಾಹೌಜಸಾ ಧೀರಃ ಕಲಿಂ ದಿಗ್ವಿಜಯೇ ಕ್ವಚಿತ್
ನೃಪಲಿಂಗಧರಂ ಶೂದ್ರಂ ಘ್ನಂತಂ ಗೋಮಿಥುನಂ ಪದಾ

ಒಮ್ಮೆ  ಪರೀಕ್ಷಿತರಾಜ ದಿಗ್ವಿಜಯ ಮಾಡುತ್ತಿದ್ದಾಗ,  ‘ಕ್ಷತ್ರಿಯವೇಷ ಧರಿಸಿದ ಶೂದ್ರ’ನಂತೆ ಕಾಣುತ್ತಿದ್ದ ‘ಕಲಿ’, ಒಂದು ಎತ್ತು ಮತ್ತು ಒಂದು ದನವನ್ನು ತನ್ನ ಕಾಲಿನಿಂದ ಒದೆದು ಹಿಂಸಿಸುತ್ತಿರುವ ದೃಶ್ಯವನ್ನು ಕಾಣುತ್ತಾನೆ. ಆತ ಜ್ಞಾನದ ಮಾರ್ಗದಲ್ಲಿ ರಥನೂ(ಧೀರ) ಹಾಗೂ ಧೈರ್ಯಶಾಲಿಯೂ ಆಗಿದ್ದ. ಅಜ್ಞಾನದ ಅಧಿಕಾರವನ್ನು ಜನರ ಮೇಲೆ ಹೇರ ಬಯಸುವ ಕಲಿಯನ್ನು ನಿಗ್ರಹ ಮಾಡುವ ಆತ್ಮವಿಶ್ವಾಸ ಮತ್ತು ಶತ್ರುಗಳನ್ನು ಮಣಿಸುವ  ಶಕ್ತಿ(ಓಜಸ್ಸು) ಪರೀಕ್ಷಿತನಲ್ಲಿತ್ತು.

ಪರೀಕ್ಷಿತನಿಗೆ ಕಲಿಯನ್ನು ನಿಗ್ರಹಮಾಡುವ ಶಕ್ತಿ ಬರಲು ಇನ್ನೊಂದು ಕಾರಣ ಭಗವಂತನ ಅನುಗ್ರಹ.  ಹಿಂದೊಮ್ಮೆ ಭೀಮಸೇನ ಕಲಿಯನ್ನು ನಿಗ್ರಹ ಮಾಡಿದ್ದಾಗ, ಶ್ರೀಕೃಷ್ಣ ಕಲಿಗೆ ಒಂದು ಮಾತನ್ನು ಹೇಳಿದ್ದ: “ನಾನು ಮತ್ತು ಪಾಂಡವರು ಭೂಮಿಯಲ್ಲಿ ಇರುವ ತನಕ ಇಲ್ಲಿ ನಿನ್ನ ಪ್ರಭಾವ ತೋರಬೇಡ; ಅಷ್ಟೇ ಅಲ್ಲ, ಪಾಂಡವರ ಸಂತತಿ ಈ ದೇಶವನ್ನಾಳುವ ತನಕ ನಿನಗೆ ಈ ಭೂಮಿಯಲ್ಲಿ ಪೂರ್ಣಪ್ರಮಾಣದ ಅಧಿಕಾರವಿಲ್ಲ” ಎಂದು. ಹೀಗೆ ಶ್ರೀಕೃಷ್ಣನ ಅನುಗ್ರಹಕ್ಕೆ ಪಾತ್ರನಾದ ಧೀರ ಪರೀಕ್ಷಿತ ಕಲಿಯನ್ನು ನಿಗ್ರಹಿಸಿದ.
ಇಲ್ಲಿ ಕಲಿ ಪರೀಕ್ಷಿತನಿಗೆ ಕಾಣಿಸಿರುವುದು ‘ಕ್ಷತ್ರಿಯವೇಷ ಧರಿಸಿದ ಶೂದ್ರ’ನಂತೆ. ಇದು ಕಲಿಯುಗದ ಚಿತ್ರಣ. “ಕಲಿಯುಗದಲ್ಲಿ ಒಬ್ಬ ಯೋಗ್ಯ ಕ್ಷತ್ರೀಯ ರಾಜ್ಯಭಾರ ಮಾಡುವುದಿಲ್ಲ; ಬದಲಿಗೆ ಕ್ಷತ್ರೀಯ ವೇಷ ತೊಟ್ಟವರು, ಆಡಳಿತ ಸ್ವಭಾವವೇ ಇಲ್ಲದವರು ಆಡಳಿತ ಚುಕ್ಕಾಣಿ ಹಿಡಿಯುತ್ತಾರೆ” ಎನ್ನುವುದನ್ನು ಕಲಿಯ ಈ ರೂಪ ಸೂಚಿಸುತ್ತದೆ.
ಇಲ್ಲಿ ‘ಶೂದ್ರ’ ಎನ್ನುವುದು ಜಾತಿಯನ್ನು ಹೇಳುವ ಪದವಲ್ಲ. ಇದು ‘ವರ್ಣ’ವನ್ನು ಸೂಚಿಸುತ್ತದೆ. ವರ್ಣಗಳು ನಾಲ್ಕು. ಅವುಗಳೆಂದರೆ  ಬ್ರಾಹ್ಮಣ(ಅಧ್ಯಯನ ಮತ್ತು ಅಧ್ಯಾಪನ ಸ್ವಭಾವವುಳ್ಳ ಜನ), ಕ್ಷತ್ರೀಯ(ಆಡಳಿತ ಸ್ವಭಾವವುಳ್ಳ ಜನ), ವೈಶ್ಯ(ಕೃಷಿ, ಹೈನುಗಾರಿಕೆ, ವ್ಯಾಪಾರ ಸ್ವಭಾವವುಳ್ಳ ಜನ) ಮತ್ತು ಶೂದ್ರ(ಸೇವಾ ಸ್ವಭಾವವುಳ್ಳ ಜನ). ಈ ನಾಲ್ಕು ವರ್ಣದ ಜನರನ್ನು  ಪ್ರಪಂಚದ ಎಲ್ಲಾ ಭಾಗದಲ್ಲೂ ಕಾಣಬಹುದು ಮತ್ತು ಈ ನಾಲ್ಕೂ ವರ್ಣದವರು ಮೋಕ್ಷ ಯೋಗ್ಯರು. ಆದರೆ ಆಯಾ ವರ್ಣದವರು ತಮ್ಮ ಸ್ವಭಾವಕ್ಕನುಗುಣವಾದ ಕಸುಬನ್ನು ಮಾಡದೇ, ಇನ್ನೊಂದು ಸ್ವಭಾವದ ವೇಷ ಹಾಕಿಕೊಂಡು ಬದುಕಿದರೆ ಅದು ಅನರ್ಥ.
ಇಲ್ಲಿ ಹೇಳಿದ ಎತ್ತು ಧರ್ಮವನ್ನು ಸೂಚಿಸುತ್ತದೆ ಮತ್ತು ದನ ಭೂಮಿಯನ್ನು ಸೂಚಿಸುತ್ತದೆ. ಇವೆರಡನ್ನೂ ಕಲಿ ಒದೆಯುತ್ತಿದ್ದಾನೆ. ಇದು ಕಲಿಯುಗದಲ್ಲಾಗುವ ಅವ್ಯವಸ್ಥೆಯನ್ನು ಸೂಚಿಸುತ್ತದೆ. ‘ಅಯೋಗ್ಯ’ ಅಧಿಕಾರದಲ್ಲಿ ಕುಳಿತು ದೇಶವನ್ನಾಳುತ್ತಾನೆ; ಮನುಷ್ಯ ಭೂಮಿಗೆ ಭಾರವಾಗಿ ಧರ್ಮವನ್ನು ತುಳಿದು ಅಧರ್ಮಿಯಾಗಿ ಬದುಕುತ್ತಾನೆ. 
ಇಲ್ಲಿ ಉಗ್ರಶ್ರವಸ್ಸರು ಶೌನಕಾದಿಗಳಲ್ಲಿ ಹೇಳುತ್ತಾರೆ: “ಈ ರೀತಿ ಕೆಟ್ಟ ಪ್ರಭಾವ ಬೀರಬಲ್ಲ ಕಲಿಯನ್ನು ಗೆದ್ದು, ಕಲಿಯ  ಪ್ರಭಾವ ತನ್ನ ರಾಜ್ಯದಲ್ಲಾಗದಂತೆ ತಡೆದು, ಸುಮಾರು ಮೂವತ್ತು ವರ್ಷಗಳ ಕಾಲ ಧಾರ್ಮಿಕವಾಗಿ ಆಡಳಿತ ನಡೆಸಿದ ಪರೀಕ್ಷಿತ” ಎಂದು.    

No comments:

Post a Comment