Sunday, May 26, 2013

Shrimad BhAgavata in Kannada -Skandha-01-Ch-16(4)


೧. ಸತ್ಯಂ: ಸತ್ಯ ಎಂದರೆ ಯಥಾರ್ಥವನ್ನು ಹೇಳುವ ಪ್ರಾಮಾಣಿಕತೆ. “ಸತ್ಯಂ ಜ್ಞಾನಂ ಅನಂತಂ ಬ್ರಹ್ಮ” ಎಂದು ವೇದದಲ್ಲಿ ಭಗವಂತನನ್ನು ಮೊದಲು ‘ಸತ್ಯ’ ಎನ್ನುವ ಶಬ್ದದಿಂದಲೇ ಹೇಳುತ್ತಾರೆ. ಭಾಗವತದಲ್ಲಿನ ಮೊದಲನೇ ಶ್ಲೋಕದಲ್ಲಿ ಭಗವಂತನನ್ನು ಸ್ತೋತ್ರ ಮಾಡಿರುವುದು ‘ಸತ್ಯಂ ಪರಂ ಧೀಮಹಿ’ ಎಂದು ಸತ್ಯ ಶಬ್ದದಿಂದಲೇ. ಕೃಷ್ಣ ದೇವಕಿಯ ಗರ್ಭದಲ್ಲಿರುವಾಗ ದೇವತೆಗಳು ಭಗವಂತನನ್ನು ಪ್ರಾರ್ಥನೆ ಮಾಡಿರುವುದು ‘ಸತ್ಯ’ ಶಬ್ದದಿಂದ. ಹಾಗಾಗಿ ‘ಸತ್ಯ’ ಎನ್ನುವುದು ಭಗವಂತನ ಅತ್ಯಂತ ಮುಖ್ಯವಾದ ನಾಮಗಳಲ್ಲೊಂದು. ಸತ್ಯ ಎಂದರೆ - ನಿರ್ದುಷ್ಟವಾದ ಆನಂದಾನುಭವ ಸ್ವರೂಪ. ಜೀವನೂ ಕೂಡಾ ನಿರ್ದುಃಖವಾದ ಆನಂದಾನುಭವವನ್ನು ಮೋಕ್ಷದಲ್ಲಿ ಪಡೆಯುತ್ತಾನೆ. ನಮ್ಮಲ್ಲಿಲ್ಲದ್ದನ್ನು ಎಂದೆಂದೂ ಅಳಿಯದಂತೆ ಪಡೆಯುವ ಪ್ರಯತ್ನವೇ ಮೋಕ್ಷ ಸಾಧನೆ. ಹೀಗೆ ಸದಾ ಆನಂದವಾಗಿರುವ ಅಪೂರ್ವ ಗುಣವನ್ನು ಭಗವಂತ ತನ್ನ ಕೃಷ್ಣಾವತಾರದಲ್ಲಿ ನಡೆದು ತೋರಿದ.
ಮೇಲೆ ಹೇಳಿದಂತೆ ಸತ್ಯ ಎಂದರೆ ಪ್ರಾಮಾಣಿಕತೆ. ಜೀವನದಲ್ಲಿ ಸತ್ಯವನ್ನು ಪಾಲಿಸಬೇಕು, ಸುಳ್ಳು ಹೇಳಬಾರದು. ಇಲ್ಲಿ ನಮಗೊಂದು ಪ್ರಶ್ನೆ ಬರುತ್ತದೆ. ಕೃಷ್ಣ ತನ್ನ ಬಾಲ್ಯದಿಂದ ಹಿಡಿದು, ಎಲ್ಲಾ ಹಂತಗಳಲ್ಲೂ ಸುಳ್ಳು ಹೇಳಿದಂತೆ ನಮಗೆ ಕಾಣಿಸುತ್ತದೆ. ತಾಯಿಯ ಬಳಿ ತಾನು ಮಣ್ಣು ತಿಂದಿಲ್ಲ ಎಂದು ಕೃಷ್ಣ ಹೇಳಿದ ಸುಳ್ಳು; ಕಂಸ ಕರೆದ ಬಿಲ್ಲ ಹಬ್ಬಕ್ಕೆ ಹೋಗುವಾಗ ಗೋಪಿಕಾ ಸ್ತ್ರೀಯರಿಗೆ ಇನ್ನು ಕೆಲವೇ ದಿನಗಳಲ್ಲಿ ಬರುತ್ತೇನೆಂದು ಹೇಳಿ ಸುಮಾರು ಐವತ್ತು ವರ್ಷಗಳ ಕಾಲ  ಕೃಷ್ಣ ಹಿಂತಿರುಗಿ ಬಾರದೇ ಇದ್ದದ್ದು; ಮಹಾಭಾರತ ಯುದ್ಧದಲ್ಲಿ ‘ಅಶ್ವತ್ಥಾಮ ಸತ್ತ’ ಎಂದು ಧರ್ಮರಾಯನಿಂದ ಸುಳ್ಳು ಹೇಳಿಸಿ, ದ್ರೋಣಾಚಾರ್ಯರನ್ನು ಕೊಲ್ಲಿಸಿರುವುದು; ಹೀಗೆ ಅನೇಕ ಘಟನೆಗಳನ್ನು ನಾವು ಕೃಷ್ಣನ ಕಥೆಯಲ್ಲಿ ಕಾಣುತ್ತೇವೆ. ಆದರೆ ಭಗವಂತ ಸತ್ಯದ ಸಾಕಾರಮೂರ್ತಿ. ಆತ ಸುಳ್ಳು ಹೇಳಲು ಸಾಧ್ಯವೇ ಇಲ್ಲ. ನಾವು ಭಗವಂತನ ಎತ್ತರವನ್ನು ತಿಳಿಯದೇ, ನಮ್ಮ ನೆಲೆಯಲ್ಲಿ ನೋಡಿದಾಗ, ನಮಗೆ ಇವೆಲ್ಲವೂ ಸುಳ್ಳು ಎನಿಸುತ್ತದೆ. ದೊಡ್ಡವರು ಏನಾಗಿದೆ ಎಂದು ನೋಡಿ ಮಾತನಾಡುವುದಿಲ್ಲ, ಅವರು ಮಾತನಾಡಿದಂತೆ ಎಲ್ಲವೂ ಆಗುತ್ತದೆ. ಆದ್ದರಿಂದ ‘ಕೃಷ್ಣ ಸುಳ್ಳು ಹೇಳಿದ’ ಎಂದು ಆಪಾದನೆ ಮಾಡುವ ಮೊದಲು, ನಾವು ಆತನ ನೆಲೆಯನ್ನು ತಿಳಿಯಬೇಕು. ಆತ ಏಕೆ ಹಾಗೆ ಮಾಡಿದ ಎನ್ನುವುದನ್ನು ವಿಶ್ಲೇಷಿಸಬೇಕು.
ಸತ್ಯ ಎಂದರೆ ಇದ್ದದ್ದನ್ನು ಇದ್ದಂತೆ ಹೇಳುವುದಲ್ಲ. ಯಾವುದನ್ನು ಹೇಳುವುದರಿಂದ ಸಮಾಜಕ್ಕೆ ಹಿತವಾಗುತ್ತದೋ ಅದು ಸತ್ಯ. ಸತ್ಯಕ್ಕೆ ಹೊಸ ಅರ್ಥ-ಆಯಾಮವನ್ನು ಭಗವಂತ ತನ್ನ ಕೃಷ್ಣಾವತಾರದಲ್ಲಿ ನಮಗೆ ತೋರಿಸಿಕೊಟ್ಟಿದ್ದಾನೆ. ರಾಮಾವತಾರದಲ್ಲಿ ಸತ್ಯಕ್ಕೆ ಈ ಅರ್ಥವನ್ನು ಭಗವಂತ ನೀಡಲಿಲ್ಲ. ಅಲ್ಲಿ ದಶರಥ ತನ್ನ ಹೆಂಡತಿಗೆ ಕೊಟ್ಟ ಮಾತಿಗೆ ಬದ್ಧನಾಗಿ, ಇಡೀ ದೇಶಕ್ಕೆ ಅನ್ಯಾಯವಾಗುವಂತಹ ತೀರ್ಮಾನ ತೆಗೆದುಕೊಂಡಾಗ ಭಗವಂತ ದಶರಥನ ತೀರ್ಮಾನದಂತೆಯೇ ನಡೆದ. ಏಕೆಂದರೆ ಅಲ್ಲಿ ಆತನಿಗೆ ಕಾಡಿಗೆ ಹೋಗಿ ಅನೇಕ ಋಷಿ ಮುನಿಗಳ ಉದ್ಧಾರ ಮಾಡಬೇಕಾಗಿತ್ತು. ಆದ್ದರಿಂದ ದಶರಥನ ಪ್ರರಾಬ್ಧದಂತೆ ಎಲ್ಲವೂ ನಡೆಯಿತು. ಆದರೆ ಮಹಾಭಾರತದಲ್ಲಿ ರಾಮಾಯಣಕ್ಕೆ ಉತ್ತರ ರೂಪವಾಗಿ ಸ್ಪಷ್ಟವಾಗಿ ಹೇಳುತ್ತಾರೆ: “ಯಾವತ್ತೂ ಹೆಣ್ಣಿಗೆ ಕೊಟ್ಟ ಮಾತನ್ನು ಮತ್ತು ಮದುವೆ ಕಾಲದಲ್ಲಿ ಒಬ್ಬರಿಗೆ ಕೊಟ್ಟ ಮಾತನ್ನು ಸಮಾಜದ ಹಿತಕ್ಕೋಸ್ಕರ ಮುರಿದರೆ ಅದು ತಪ್ಪಲ್ಲ” ಎಂದು.
ಮೇಲ್ನೋಟದಲ್ಲಿ ನೋಡಿದರೆ “ಅಶ್ವತ್ಥಾಮ ಸತ್ತ ಎಂದು ಹೇಳು” ಎಂದು  ಶ್ರೀಕೃಷ್ಣ  ಧರ್ಮರಾಯನಲ್ಲಿ ಹೇಳಿ ಅನ್ಯಾಯ ಮಾಡಿದ ಎನಿಸುತ್ತದೆ. ಆದರೆ ಇದನ್ನು ಆಳವಾಗಿ ವಿಶ್ಲೇಷಿಸಿದರೆ ಇಲ್ಲಿರುವ ‘ಸತ್ಯ’ ನಮಗೆ  ತಿಳಿಯುತ್ತದೆ. ದ್ರೋಣಾಚಾರ್ಯರು ಒಬ್ಬ ಮಹಾನ್ ದೇವರ್ಷಿ. ಸಾತ್ವಿಕರಾಗಿದ್ದ ಅವರು, ತನ್ನ ಬಾಲ್ಯ ಮಿತ್ರ ದ್ರುಪದನಿಂದ ಅವಮಾನಿತರಾಗಿ ತಾಮಸ ಮಾರ್ಗವನ್ನು ಹಿಡಿದರು. ತನ್ನ ಮಗುವಿಗೆ ಹಾಲುಣಿಸಲು ಒಂದು ಹಸುವನ್ನು ಕೊಡು ಎಂದು ಬಾಲ್ಯದ ಸಲುಗೆಯಲ್ಲಿ ದ್ರುಪದನಲ್ಲಿ ಕೇಳಿದಾಗ, ಆತ ಬಾಲ್ಯದ ಸ್ನೇಹವನ್ನು ತಿರಸ್ಕರಿಸಿದ. ಇದನ್ನೇ ದ್ವೇಷವಾಗಿ ತೆಗೆದುಕೊಂಡ ದ್ರೋಣಾಚಾರ್ಯರು, ಸೇಡಿನಿಂದ ಕುರುವಂಶದ ಗುರುವಾಗಿ ಸೇರಿ, ನಂತರ ಧುರ್ಯೋಧನನ ಅನ್ನದ ಋಣಕ್ಕೆ ಬಿದ್ದು, ಅದನ್ನು ತೀರಿಸುವುದಕ್ಕಾಗಿ ಸಮಾಜ ಧರ್ಮವನ್ನೂ ಮರೆತು, ದಿನಕ್ಕೆ ಹತ್ತು ಸಾವಿರ ಸೈನಿಕರ ರುಂಡ ಚಂಡಾಡುತ್ತೇನೆ ಎಂದು ಪಣತೊಟ್ಟು, ಪಾಪಕೃತ್ಯದ ಪರಾಕಾಷ್ಠೆಯನ್ನು ತಲುಪುತ್ತಿರುವಾಗ, ಕೃಷ್ಣ ಅದನ್ನು ತಡೆದ. ದ್ರೋಣಾಚಾರ್ಯರ ಉದ್ಧಾರ ಅವರ ಸಾವಿನಲ್ಲಿದೆ ಎನ್ನುವುದು ಕೃಷ್ಣನಿಗೆ ತಿಳಿದಿತ್ತು. ಅಂತಹ ಮಹಾನ್ ಜ್ಞಾನಿ ಪುತ್ರಮೋಹಕ್ಕೊಳಗಾಗಿದ್ದುದ್ದು ಇನ್ನೊಂದು ದುರಂತ. ಹಾಗಾಗಿ  ಸಮಾಜದ ಉದ್ಧಾರಕ್ಕಾಗಿ(ದಿನಕ್ಕೆ ಹತ್ತು ಸಾವಿರ ಸೈನಿಕರ ಹತ್ಯೆಯನ್ನು ತಪ್ಪಿಸುವುದರ ಮೂಲಕ), ದ್ರೋಣಾಚಾರ್ಯರ ಉದ್ಧಾರಕ್ಕಾಗಿ(ಅವರಿಂದ ನಡೆಯಲಿದ್ದ ಮಾರಣ ಹೊಮವನ್ನು ತಪ್ಪಿಸಿ), ದ್ರೋಣಾಚಾರ್ಯರ ಪುತ್ರಮೋಹವನ್ನು ಕಳಚಿ(ಅಶ್ವತ್ಥಾಮ ಸತ್ತ ಎಂದು ಹೇಳಿ), ಸಮಾಜದ ಮತ್ತು ದ್ರೋಣಾಚಾರ್ಯರ ಉದ್ಧಾರ ಮಾಡಿದ ಕೃಷ್ಣ. ಇಲ್ಲಿರುವುದು ಕಾರುಣ್ಯ, ದ್ವೇಷವಲ್ಲ. ಇಂತಹ ಲೋಕೋದ್ಧಾರಕ ‘ಸತ್ಯ’ ನಮಗೆ ಮೇಲ್ನೋಟದಲ್ಲಿ ನೋಡಿದರೆ ತಿಳಿಯುವುದಿಲ್ಲ. 

No comments:

Post a Comment