ಮೃತ್ಯುದೂತಃ ಕಪೋತೋSಗ್ನಾವುಲೋಕಃ ಕಂಪಯನ್ಮನಃ ।
ಪ್ರತ್ಯುಲೂಕಶ್ಚ
ಹುಂಕಾರೈರನಿದ್ರೌ ಶೂನ್ಯಮಿಚ್ಛತಃ ॥೧೪॥
ಯುದಿಷ್ಠಿರ ಕಂಡ
ವಿಚಿತ್ರ ಅಪಶಕುನಗಳನ್ನು ಇಲ್ಲಿ ವಿವರಿಸಿದ್ದಾರೆ. ಪಾರಿವಾಳ ಬೆಂಕಿಯಲ್ಲಿ ಕಾಲಿಡುವುದು, ಜೋಡಿ
ಗೂಬೆಗಳು ಎದೆಗೆಡಿಸುವ ನಾದದಿಂದ ಇಡೀ ರಾತ್ರಿ ಹೂಂಕರಿಸುವುದು- ಇವು ಸರ್ವನಾಶದ ಸಂಕೇತ. ಇವು
ನಮ್ಮ ಬಯಕೆಗಳನ್ನು ನಾಶಮಾಡುವ ಶಕುನ. ಈ ಶಕುನಗಳು ವೇದದಲ್ಲಿ ಉಕ್ತವಾಗಿರುವುದನ್ನು ಆಚಾರ್ಯರು
ಉಲ್ಲೇಖಿಸುತ್ತಾರೆ:
ಅಗ್ನೌ ಪದಂ
ಕರೋತಿ
‘ಯದುಲೂಕೋ ವದತಿ ಮೊಘಮೇತದ್
ಯತ್ ಕಪೋತಃ ಪದಮಗ್ನೌಕೃಣೋತಿ’ ಇತಿ ಹಿ ಶ್ರುತಿಃ ॥
ಇಲ್ಲಿ ಪಾರಿವಾಳ
ಬೆಂಕಿಯಲ್ಲಿ ಕಾಲಿಡುವುದು ಎಂದರೆ ಏನು ಎನ್ನುವುದರಲ್ಲಿ ಸ್ವಲ್ಪ ಗೊಂದಲವಿದೆ. ಕೆಲವು
ವ್ಯಾಖ್ಯಾನಕಾರರು ‘ಕನಸಿನಲ್ಲಿ ಪಾರಿವಾಳ ಬೆಂಕಿಯಲ್ಲಿ ಕಾಲಿಟ್ಟಂತೆ ಕಾಣಿಸುವುದು ಮೃತ್ಯುಸೂಚಕ’
ಎಂದಿದ್ದಾರೆ. ಅನಂತತೀರ್ಥರು ತಮ್ಮ ವ್ಯಾಖ್ಯಾನದಲ್ಲಿ ಅಗ್ನಿಶಾಲೆಯಲ್ಲಿ ಯಾಗ ಮುಗಿದಮೇಲೆ
ಹುತಬಸ್ಮದ ಮೇಲೆ ಪಾರಿವಾಳ ನಡೆದಾಡಿದರೆ ಅದು ಮೃತ್ಯುಸೂಚಕ ಶಕುನ ಎಂದು ವ್ಯಾಖ್ಯಾನ
ಬರೆದಿದ್ದಾರೆ. ಆದರೆ ಸಾಮಾನ್ಯವಾಗಿ ಅಪಶಕುನ
ಎಂದರೆ ಅದು ಸ್ವಲ್ಪ ಅಸಹಜ ಘಟನೆಯಾಗಿರುತ್ತದೆ. ಹಾಗಾಗಿ ಪಾರಿವಾಳ ಎಚ್ಚರ ತಪ್ಪಿ ಬೆಂಕಿಯಲ್ಲಿ
ಕಾಲಿಟ್ಟು ಕಾಲು ಸುಟ್ಟುಕೊಂಡರೆ ಅದು ಅನಿಷ್ಠ ಶಕುನ ಎನ್ನಬಹುದು. ಇಲ್ಲಿ ಧರ್ಮರಾಯ ಈ ಎಲ್ಲಾ
ಶಕುನಗಳನ್ನು ಕಂಡು, ಅರ್ಜುನ ಹಿಂತಿರುಗಿ ಬಾರದೇ ಇದ್ದುದರಿಂದ ಗಾಬರಿಗೊಂಡಿದ್ದಾನೆ.
ಧರ್ಮರಾಯ ಭೀಮನಲ್ಲಿ
ತನ್ನ ಅಂತರಂಗದ ತುಮುಲವನ್ನು ಹೇಳಿಕೊಳ್ಳುತ್ತಿರುವಾಗ ಅರ್ಜುನನ ಆಗಮನವಾಗುತ್ತದೆ. ಆತನನ್ನು ನೋಡಿ
ಧರ್ಮಜನಿಗೆ ಬಹಳ ಸಂತೋಷವಾಗುತ್ತದೆ. ಆತ ಒಂದರ ಮೇಲೊಂದು ಪ್ರಶ್ನೆ ಹಾಕಿ, ಯದುವಂಶದ ಬಂಧುಗಳ
ಕ್ಷೇಮ ಸಮಾಚಾರವನ್ನು ಕೇಳುತ್ತಾನೆ.
ಭಗವಾನಪಿ ಗೋವಿಂದೋ
ಬ್ರಹ್ಮಣ್ಯೋ ಭಕ್ತವತ್ಸಲಃ ।
ಕಚ್ಚಿತ್ ಪುರೇ
ಸುಧರ್ಮಾಯಾಂ ಸುಖಮಾಸ್ತೇ ಸುಹೃದ್ ವೃತಃ ॥೩೪॥
ಎಲ್ಲರ ಬಗ್ಗೆ ಕೇಳಿದ
ಧರ್ಮರಾಯ-ಶ್ರೀಕೃಷ್ಣನ ಕುರಿತು ಕೇಳುತ್ತಾನೆ. “ಭೂಮಿಯಲ್ಲಿ ಅವತರಿಸಿದ ಭಗವಂತ, ಗೋವುಗಳ ಪಾಲನೆ ಮಾಡಿದ
ಗೋಪಾಲ, ವೇದವೇದ್ಯ, ಜ್ಞಾನಿಗಳಿಗೆ ಪ್ರಿಯನಾದವ, ಜ್ಞಾನಿಗಳು ಪ್ರೀತಿಸುವ ಶ್ರೀಕೃಷ್ಣ-ಲೋಕಕ್ಕೆ ಕ್ಷೇಮವಾಗುವಂತೆ
ಇದ್ದಾನೆಯೋ” ಎಂದು ಕೇಳುತ್ತಾನೆ ಯುದಿಷ್ಠಿರ.[ಈ ಶ್ಲೋಕವನ್ನು
ಮೇಲ್ನೋಟದಲ್ಲಿ ನೋಡಿದರೆ ಭಗವಾನ್ ಶ್ರೀಕೃಷ್ಣ ಬಂಧು ಬಳಗದೊಂದಿಗೆ ಕ್ಷೇಮವಾಗಿದ್ದಾನೆಯೋ ಎಂದು ಕೇಳಿದಂತಿದೆ.
ಶ್ರೀಕೃಷ್ಣನನ್ನು ಭಗವಂತ ಎಂದು ತಿಳಿದಿದ್ದ ಧರ್ಮರಾಯ ಆ ರೀತಿ ಕೇಳುವ ಸಾಧ್ಯತೆ ಇಲ್ಲ. ಏಕೆಂದರೆ ಭಗವಂತ
ಕ್ಷೇಮವಾಗಿಲ್ಲದೇ ಇರುವ ಪ್ರಸಂಗವಿಲ್ಲ. ಆದ್ದರಿಂದ ಈ ಶ್ಲೋಕದ ಒಳಾರ್ಥವೇ ಬೇರೆ. ಈ ಶ್ಲೋಕ ದರ್ಶನ
ಭಾಷೆಯಲ್ಲಿದೆ. ಇಲ್ಲಿ ಧರ್ಮರಾಯ ಶ್ರೀಕೃಷ್ಣ-ಲೋಕಕ್ಕೆ ಕ್ಷೇಮವಾಗುವಂತೆ, ಭೂಮಿಯಲ್ಲಿ ಪ್ರತ್ಯಕ್ಷವಾಗಿ
ಇದ್ದಾನೆಯೋ ಎಂದು ಕೇಳುತ್ತಿದ್ದಾನೆ.
ಕಚ್ಚಿತ್ ತ್ತೇSನಾಮಯಂ ತಾತ ಭ್ರಷ್ಟತೇಜಾ ವಿಭಾಸಿ ಮೇ ।
ಅಲಬ್ಧಮಾನೋSವಜ್ಞಾತಃ ಕಿಂ ವಾ ತಾತ ಚಿರೋಷಿತಃ ॥೩೯॥
ಧರ್ಮರಾಯ ಇಷ್ಟೆಲ್ಲಾ
ಪ್ರಶ್ನೆ ಹಾಕಿದರೂ ಕೂಡಾ ಅರ್ಜುನ ಮಾತ್ರ ಪೆಚ್ಚು ಮೋರೆ ಹಾಕಿ ಕುಳಿತಿದ್ದ. ಇದನ್ನು ಗಮನಿಸಿದ ಧರ್ಮರಾಯ
ಅರ್ಜುನನ ಕ್ಷೇಮ ಸಮಾಚಾರವನ್ನು ಕೇಳುತ್ತಾನೆ. “ನಿನ್ನ ಮುಖದಲ್ಲಿ ಕಳೆಯೇ ಇಲ್ಲ. ಏನಾಯ್ತು?
ನಿನಗೆ ಸಿಗಬೇಕಾದ ಗೌರವ ಸಿಗಲಿಲ್ಲವೇ? ಯಾರಾದರೂ ನಿನ್ನನ್ನು ತಿರಸ್ಕರಿಸಿದರೇ? ಇತ್ಯಾದಿಯಾಗಿ ಪ್ರಶ್ನಿಸುತ್ತಾನೆ. ಧರ್ಮರಾಯನ ಪ್ರಶ್ನೆಗಳಿಗೆ
ಅರ್ಜುನ ಏನು ಉತ್ತರ ಕೊಟ್ಟ ಎನ್ನುವುದನ್ನು ನಾವು ಮುಂದಿನ ಅಧ್ಯಾಯದಲ್ಲಿ ಕಾಣಬಹುದು.
॥ ಇತಿ ಶ್ರೀಮದ್ಭಾಗವತೇ
ಮಹಾಪುರಾಣೇ ಪ್ರಥಮಸ್ಕಂಧೇ ತ್ರಯೋದಶೋSಧ್ಯಾಯಃ ॥
ಭಾಗವತ ಮಹಾಪುರಾಣದ
ಮೊದಲ ಸ್ಕಂಧದ ಹದಿಮೂರನೇ ಅಧ್ಯಾಯ ಮುಗಿಯಿತು.
*********
No comments:
Post a Comment