Thursday, May 2, 2013

Shrimad BhAgavata in Kannada -Skandha-01-Ch-12(8)


ಹೀಗೆ ನಾರದರು ಧೃತರಾಷ್ಟ್ರನ ತಪಸ್ಸಿನ ಎತ್ತರವನ್ನು ವರ್ಣಿಸಿದ್ದಾರೆ. ತನ್ನ ಮೂಲರೂಪದಲ್ಲಿ ಒಬ್ಬ ಗಂಧರ್ವನಾಗಿರುವ ಧೃತರಾಷ್ಟ್ರ, ಹೇಗೆ ಮೂಲರೂಪದಲ್ಲಿ ಭಗವಂತನನ್ನು ಕಂಡಿದ್ದನೋ ಹಾಗೇ ಇಲ್ಲಿ ತನ್ನ ಕೊನೆಗಾಲದಲ್ಲಿ, ಸಾಧನೆಯ ಮೂಲಕ ಭಗವಂತನನ್ನು ಕಾಣುತ್ತಾನೆ.

ವಿಜ್ಞಾನಾತ್ಮನಿ ಸಂಯೋಜ್ಯ ಕ್ಷೇತ್ರಜ್ಞೇ ಪ್ರವಿಲಾಪ್ಯ ತಮ್
ಬ್ರಹ್ಮಣ್ಯಾತ್ಮಾನಮಾಧಾರೇ ಘಟಾಂಬರಮಿವಾಂಬರೇ ೫೫

ಅಂತ್ಯಕಾಲದಲ್ಲಿ ಧೃತರಾಷ್ಟ್ರ ಸಮಾಧಿ ಸ್ಥಿತಿಯಲ್ಲಿ ಯಾವ ರೀತಿ ಭಗವದ್ ಚಿಂತನೆ ಮಾಡಿದ ಎನ್ನುವುದನ್ನು ಇಲ್ಲಿ ವಿವರಿಸಿದ್ದಾರೆ.  ಧೃತರಾಷ್ಟ್ರ ಮೊದಲು ಇಡೀ ವಿಶ್ವ, ತಾನು ಮತ್ತು ತನ್ನಲ್ಲಿರುವ ಸಮಸ್ತ ಇಂದ್ರಿಯಾಭಿಮಾನಿ ದೇವತೆಗಳು ವಿಜ್ಞಾನಾತ್ಮನಲ್ಲಿ(ಪ್ರಾಣತತ್ತ್ವದಲ್ಲಿ/ಮಹತತ್ತ್ವದಲ್ಲಿ/ಚಿತ್ತಾಭಿಮಾನಿದೇವತೆಯಲ್ಲಿ) ಲಯಹೊಂದಿದಂತೆ  ಅನುಸಂಧಾನ ಮಾಡಿದ. ನಂತರ ಆ ವಿಜ್ಞಾನಾತ್ಮ  ತನ್ನೊಳಗಿರುವ ಕ್ಷೇತ್ರಜ್ಞನಾದ ಭಗವಂತನಲ್ಲಿ ಲಯಹೊಂದಿದಂತೆ ಅನುಸಂಧಾನ ಮಾಡಿದ. ಆ ನಂತರ ಹೇಗೆ ಮಡಿಕೆಯೊಳಗಿರುವ ಆಕಾಶ ಮಡಿಕೆ ಒಡೆದಾಗ ಮಹಾಕಾಶದೊಂದಿಗೆ ಐಕ್ಯವಾಗುತ್ತದೋ ಹಾಗೆ, ತನ್ನೊಳಗಿರುವ ಕ್ಷೇತ್ರಜ್ಞನಾದ ಪರಮಾತ್ಮನನ್ನು, ಸಮಸ್ತ ಬ್ರಹ್ಮಾಂಡವ್ಯಾಪ್ಯನಾದ ಭಗವಂತನ ರೂಪದೊಂದಿಗೆ ಐಕ್ಯವಾಗಿ ಕಂಡ. ಇದು ಅಂತ್ಯಕಾಲದಲ್ಲಿ ಮಾಡಬೇಕಾದ ಒಂದು ವಿಶಿಷ್ಟವಾದ ಧ್ಯಾನ ಪ್ರಕ್ರಿಯೆ.
ಇಲ್ಲಿ “ಘಟಾಂಬರಮಿವಾಂಬರೇ” ಎನ್ನುವ ಉಪಮಾನದ ಹಿಂದೆ ಅನೇಕ ಅದ್ಭುತ ವಿಷಯ ಅಡಗಿದೆ. ಇಲ್ಲಿ ಮೂರು ವಿಧದ ಆಕಾಶದ ವರ್ಣನೆ ಇದೆ. ಇದನ್ನು ಆಚಾರ್ಯರು ತಮ್ಮ ತಾತ್ಪರ್ಯನಿರ್ಣಯದಲ್ಲಿ ಅದ್ಭುತವಾಗಿ ವಿವರಿಸಿದ್ದಾರೆ. ಸಂಕ್ಷಿಪ್ತವಾಗಿ ಹೇಳಬೇಕೆಂದರೆ: ಘಟದ ರಚನೆಗೆ ಕಾರಣವಾದ, ಘಟದ  ಅವಯವಭೂತವಾಗಿರುವ ಆಕಾಶ[ಮಣ್ಣಿನ ಕಣ-ಅಣು-ಪರಮಾಣು-ಅದರ ನಡುವಿನ ಕಣ್ಣಿಗೆ ಕಾಣದ ಆಕಾಶ] ಜೀವ ಇದ್ದ ಹಾಗೆ; ಘಟ ರಚನೆಯಾದಮೇಲೆ, ಘಟದ ಒಳಗೆ ತುಂಬಿರುವ ಭೂತಾಕಾಶ ಬ್ರಹ್ಮಾದಿ ಸಮಸ್ತ ತತ್ತ್ವಾಭಿಮಾನಿ ದೇವತೆಗಳಿದ್ದ ಹಾಗೆ; ಅವ್ಯಾಕೃತಾಕಾಶ ಭಗವಂತನಿದ್ದ ಹಾಗೆ. 

ಧ್ವಸ್ತಮಾಯಾಗುಣೋದ್ರೇಕೋ  ನಿರುದ್ಧಕರಣಾಶಯಃ
ನಿವರ್ತಿತಾಖಿಲಾಹಾರ ಆಸ್ತೇ ಸ್ಥಾಣುರಿವಾಧುನಾ
ತಸ್ಯಾಂತರಾಯೋ ನೈವಾಭೂತ್ ಸನ್ನ್ಯಸ್ತಾಖಿಲಕರ್ಮಣಃ ೫೬

ಧೃತರಾಷ್ಟ್ರ ವಿಶ್ವದಲ್ಲಿ ತುಂಬಿರುವ ವಿರಾಟ್ ರೂಪಿ ಭಗವಂತನನ್ನು ತನ್ನ ಅಂತರ್ಯಾಮಿ ಎಂದು ಧ್ಯಾನಿಸುತ್ತಿದ್ದ. ಪ್ರಕೃತಿಯಲ್ಲಿನ ಗುಣಗಳು ಅವನಲ್ಲಿ ಉದ್ರೇಕಗೊಳ್ಳುತ್ತಿರಲಿಲ್ಲ. ಹೀಗೆ ಸಾಧನೆಯ ಅತ್ಯುನ್ನತ ಸ್ಥಿತಿಯನ್ನು ಆತ ತಲುಪಿದ.
ಎಂತಹ ಆಶ್ಚರ್ಯ. ಸುಮಾರು ನೂರು ವರ್ಷ, ಅತ್ಯಂತ ದುರ್ಬಲ ವ್ಯಕ್ತಿಯಾಗಿ ಬದುಕಿ, ಪುತ್ರಮೋಹದಿಂದ ಅನೇಕ ಅನರ್ಥಕ್ಕೆ ಕಾರಣೀಭೂತನಾಗಿದ್ದ ಧೃತರಾಷ್ಟ್ರ, ಭೀಮನ ಚುಚ್ಚುಮಾತಿನಿಂದಾಗಿ ಅಂತರಂಗ ಪ್ರವೇಶಿಸಿದ.  ಅಂತರಂಗದ ಒಳದೃಷ್ಟಿಯಲ್ಲಿ ಆತ ನೂರು ವರ್ಷಗಳಲ್ಲಿ ಪಡೆಯಲಾಗದ್ದನ್ನು ಮೂರೇ ವರ್ಷದಲ್ಲಿ ಪಡೆದ. ನೂರು ವರ್ಷ ಅದೆಷ್ಟು ಕೆಳಗೆ ಜಾರಿದ್ದನೋ, ಅದೆಲ್ಲವನ್ನೂ ಮೂರೇ ವರ್ಷದಲ್ಲಿ ಮೀರಿ, ಅತ್ಯಂತ ಎತ್ತರಕ್ಕೇರಿದ. ಇದೇ ಒಳಪ್ರಪಂಚದ ಸಾಧನೆಯ ಮಹತ್ವ.
ಧೃತರಾಷ್ಟ್ರನ ಪೂರ್ವವನ್ನು ನೋಡಿದರೆ ಆತ ಒಬ್ಬ ಗಂಧರ್ವ. ಭಗವಂತನನ್ನು ಸಾಕ್ಷಾತ್ಕರಿಸಿಕೊಂಡ ಪುಣ್ಯಜೀವಿ. ಆದರೆ ಯಾವುದೋ ಪ್ರರಾಬ್ಧಕರ್ಮದಿಂದ ಆತ ಭೂಮಿಯಲ್ಲಿ ಕುರುಡನಾಗಿ ಹುಟ್ಟಬೇಕಾಯಿತು. ಹೀಗೆ ಹುಟ್ಟಿದ ಆತ ಕಲಿಯ(ದುರ್ಯೋಧನನ) ಪ್ರೇರಣೆಗೊಳಪಟ್ಟು ಮಾಡಬಾರದ ಕೆಲಸಗಳನ್ನು  ಮಾಡಿದ. ಆದರೆ ಮೂರೇ ವರ್ಷದಲ್ಲಿ ಸಾಧನೆಯ ಹಾದಿಗೆ ಮರಳಿ ಎತ್ತರಕ್ಕೇರಿದ. “ಅವನಿಗೆ ತ್ರಿಗುಣದ ಉದ್ರೆಕವೇ ಇರಲಿಲ್ಲ” ಎನ್ನುತ್ತಾರೆ ನಾರದರು. ಸಮಸ್ತ ಇಂದ್ರಿಯಗಳು, ಮನಸ್ಸು, ಎಲ್ಲವನ್ನೂ ಆತ ಭಗವಂತನಲ್ಲಿ ನಿರೋಧ ಮಾಡಿದ. ಅವು ಭಗವಂತನನ್ನು ಬಿಟ್ಟು ಈಚೆ ಬರದಂತೆ ಸ್ಥಬ್ಧಗೊಳಿಸಿದ. ನೀರು ಕುಡಿಯುವುದನ್ನೂ ಬಿಟ್ಟು, ನಿಶ್ಚಲನಾಗಿ ಮರದಕೊರಡಿನಂತೆ ಧ್ಯಾನ ನಿರತನಾದ.

ಸ ವಾ ಅದ್ಯತನಾದ್ ರಾಜಾ ಪರತಃ ಪಂಚಮೇSಹನಿ
ಕಲೇವರಂ ಹಾಸ್ಯತಿ ಹ ತಚ್ಚ ಭಸ್ಮೀಭವಿಷ್ಯತಿ ೫೭

ನಾರದರು ಹೇಳುತ್ತಾರೆ: “ಇಂದಿಗೆ ಐದು ದಿನಗಳ ಹಿಂದೆ, ಧೃತರಾಷ್ಟ್ರ, ಅನ್ನ-ನೀರನ್ನು ತ್ಯಜಿಸಿ,  ಧ್ಯಾನಮಗ್ನನಾಗಿ ತನ್ನ ದೇಹವನ್ನು ತ್ಯಾಗ ಮಾಡಿದ. ಆತನ  ದೇಹವನ್ನು ಕಾಳ್ಗಿಚ್ಚು ಆವರಿಸಿತು. ಅವರೆಲ್ಲರ ದೇಹ ಬೆಂಕಿಯಲ್ಲಿ ಬಸ್ಮವಾಯಿತು” ಎಂದು. ಅಗ್ನಿಸಂಸ್ಕಾರದ ವ್ಯವಸ್ಥೆಯನ್ನು ಭಗವಂತನೇ ಮಾಡಿದ.

ವಿದುರಸ್ತು ತದಾಶ್ಚರ್ಯಂ ನಿಶಾಮ್ಯ ಕುರುನಂದನ
ಹರ್ಷಶೋಕಯುತಸ್ತಸ್ಮಾದ್ ಗಂತಾ ತೀರ್ಥನಿಷೇವಕಃ ೫೯

ಇನ್ನು ವಿದುರನನ್ನು ನೋಡಿದರೆ ಆತ ತನ್ನ ಜ್ಞಾನದೃಷ್ಟಿಯಿಂದ ಎಲ್ಲವನ್ನೂ ತಿಳಿಯಬಲ್ಲವನಾಗಿದ್ದ. ಕೌರವರ ನಾಶದ ವಿಷಯ ಆತನಿಗೆ ಮೊದಲೇ ತಿಳಿದಿತ್ತು. ಆದ್ದರಿಂದ ಆತ ಎಲ್ಲವನ್ನೂ ತೊರೆದು ತೀರ್ಥಯಾತ್ರೆಗೆ ತೆರಳಿದ. ಈ ಹಿಂದೆ ಹೇಳಿದಂತೆ: ಯಾದವರ ನಾಶದ ವಿಷಯವೂ ಆತನಿಗೆ ತಿಳಿದಿತ್ತು. “ಆತನಿಗೆ ಲೌಕಿಕವಾಗಿ ತಾನು ಮುದ್ದಾಡಿಸಿ ಬೆಳೆಸಿದ ಮಕ್ಕಳು ಕೆಟ್ಟ ದಾರಿ ಹಿಡಿದು ಅಧೋಗತಿ ಹೊಂದುತ್ತಾರಲ್ಲಾ ಎನ್ನುವ ದುಃಖ ಒಂದು ಕಡೆಯಾದರೆ, ಭಗವಂತನ ಸಂಕಲ್ಪವನ್ನು ಕಾಣುವ ವಿಸ್ಮಯ ಇನ್ನೊಂದು ಕಡೆಯಲ್ಲಿತ್ತು” ಎನ್ನುತ್ತಾರೆ ನಾರದರು.

ಇತ್ಯುಕ್ತ್ವಾSಥಾರುಹತ್ ಸ್ವರ್ಗಂ ನಾರದಃ ಸಹತುಂಬುರುಃ
ಯುಧಿಷ್ಠಿರೋ ವಚಸ್ತಸ್ಯ ಹೃದಿ ಕೃತ್ವಾSಜಹಾಚ್ಛುಚಃ ೬೦

ಈ ರೀತಿ ಎಲ್ಲಾ ವಿಚಾರವನ್ನು ಧರ್ಮರಾಯನಿಗೆ ಹೇಳಿ, ಆತನಲ್ಲಿ ಭರವಸೆ ತುಂಬುತ್ತಾರೆ ನಾರದರು. ವಿದುರ ಧರ್ಮರಾಯನಿಗೆ ಹೇಳದೇ ಇದ್ದ ಶ್ರೀಕೃಷ್ಣನ ಅವತಾರ ಸಮಾಪ್ತಿ ವಿಚಾರವನ್ನೂ ಕೂಡಾ ಅವರು ಸೂಕ್ಷ್ಮವಾಗಿ ಧರ್ಮರಾಯನಿಗೆ ಹೇಳುತ್ತಾರೆ. “ಮುಂದೆ ಒಂದು ದಿನ ನೀನೂ ಕೂಡಾ ಹೊರಟು ಹೋಗಬೇಕು” ಎಂದು ಹೇಳುವ ಮೂಲಕ, ಮುಂದೆ ಬರುವ ಸಾವಿನ ಮುನ್ಸೂಚನೆಯನ್ನು ನಾರದರು ಧರ್ಮರಾಯನಿಗೆ ಮನವರಿಕೆ ಮಾಡಿಕೊಡುತ್ತಾರೆ.
ತುಂಬಾ ದುಃಖದಿಂದ ಪರಿತಪಿಸುತ್ತಿದ್ದ ಯುದಿಷ್ಠಿರನಿಗೆ ನಾರದರ ಮಾತಿನಿಂದ ಸಮಾಧಾನವಾಗುತ್ತದೆ. ದುಃಖವನ್ನು ಕಳೆದುಕೊಂಡು ಆತ ನೆಮ್ಮದಿಯ ಉಸಿರನ್ನಾಡುತ್ತಾನೆ.

ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪ್ರಥಮಸ್ಕಂಧೇ ದ್ವಾದಶೋSಧ್ಯಾಯಃ
ಭಾಗವತ ಮಹಾಪುರಾಣದ ಮೊದಲ ಸ್ಕಂಧದ ಹನ್ನೆರಡನೇ ಅಧ್ಯಾಯ ಮುಗಿಯಿತು.
*********

No comments:

Post a Comment