Sunday, May 12, 2013

Shrimad BhAgavata in Kannada -Skandha-01-Ch-15(1)


ಪಂಚದಶೋSಧ್ಯಾಯಃ

ವಾಸುದೇವಾಂಘ್ರ್ಯನುಧ್ಯಾನಪರಿಬೃಂಹಿತರಂಹಸಾ
ಭಕ್ತ್ಯಾ ನಿರ್ಮಥಿತಾಶೇಷ ಕಷಾಯಧಿಷಣೋSರ್ಜುನಃ

ಅರ್ಜುನ ಶ್ರೀಕೃಷ್ಣನ ಜೊತೆಗೇ ಇದ್ದಿದ್ದರೂ ಕೂಡಾ, ಆತ ಭಗವಂತನಿಗೆ ಅತ್ಯಂತ ನಿಕಟವಾದುದ್ದು ಶ್ರೀಕೃಷ್ಣ ಅವತಾರ ಸಮಾಪ್ತಿ ಮಾಡಿದ ಮೇಲೆಯೇ! ಶ್ರೀಕೃಷ್ಣ ಅದೃಶ್ಯನಾದಮೇಲೆ  ಅರ್ಜುನನ ಮನಸ್ಸಿನಲ್ಲಿದ್ದ ಎಲ್ಲಾ ಕೊಳೆ ತೊಳೆದುಹೋಗಿ ಆತ ಪರಿಶುದ್ಧನಾದ. ಸ್ವಯಂ ಅಪರೋಕ್ಷಜ್ಞಾನಿ, ಇಂದ್ರಾಂಶಸಂಭೂತನಾದ  ಆತನಿಗೆ ಶ್ರೀಕೃಷ್ಣ  ಭಗವಂತ ಎನ್ನುವುದು ಮೊದಲೇ ತಿಳಿದಿತ್ತು. ಆದರೂ ಕೂಡಾ  ಪ್ರರಾಬ್ಧಕರ್ಮದಿಂದಾಗಿ ಆಗಾಗ ಆತನ ಮನಸ್ಸು ವಿಚಲಿತವಾಗುತ್ತಿತ್ತು.
ಪ್ರರಾಬ್ಧಕರ್ಮ ಎನ್ನುವುದು ಬಹಳ ಭಯಾನಕ ಬಂಧನ. ಅದು ಎಂತಹಾ ಭಯಾನಕ ಎನ್ನುವುದನ್ನು ಗೀತೆ ಮತ್ತು ವೇದವ್ಯಾಸರ ಅನೇಕ ಗ್ರಂಥಗಳು ಒತ್ತಿಒತ್ತಿ ಹೇಳುತ್ತವೆ. ಇಲ್ಲಿ ಹೇಳುತ್ತಾರೆ: “ಎಲ್ಲಾ ಬಗೆಯಿಂದಲೂ, ಎಲ್ಲವನ್ನೂ ಮರೆತು, ಭಗವಂತನ ಧ್ಯಾನ ಮಾಡುವುದು ಅರ್ಜುನನಿಗೆ ಈಗ ಸಾಧ್ಯವಾಯಿತು”ಎಂದು. ಇದು ಮನಃಶಾಸ್ತ್ರ. ನಾವು ಯಾವುದನ್ನು ಗಾಢವಾಗಿ ಪ್ರೀತಿಸುತ್ತೆವೋ, ಅದು ಹತ್ತಿರದಲ್ಲಿರುವಾಗ ನಮಗೆ ಅದರ ನೆನಪಾಗುವುದಕ್ಕಿಂತ ಹೆಚ್ಚು, ಅದು ಅಗಲಿದಾಗ ನೆನಪಾಗುತ್ತದೆ. ಇಲ್ಲಿ ಅರ್ಜುನನಿಗೆ ಕೂಡಾ ಅದೇ ಅನುಭವವಾಗುತ್ತಿದೆ. ಆತ ಪರಮಮಂಗಳ ಮೂರ್ತಿಯಾಗಿ ಭಗವಂತನನ್ನು ಮನಸ್ಸಿನಲ್ಲಿ ಕಾಣುತ್ತಿದ್ದಾನೆ. ಆತನ ಧ್ಯಾನಶಕ್ತಿ ಹಿಂದೆಂದೂ ಕಾಣದ ಅದಮ್ಯ ವೇಗದಲ್ಲಿ ಚಿಮ್ಮುತ್ತಿದೆ. ಧ್ಯಾನ-ಧ್ಯಾನದಿಂದ ಭಕ್ತಿ; ಭಕ್ತಿಯಿಂದ ಮತ್ತೆ ಧ್ಯಾನ. ಹೀಗೆ ಧ್ಯಾನ-ಭಕ್ತಿಗಳ ಸಮಾಗಮದಲ್ಲಿ ಆತನಲ್ಲಿದ್ದ ಎಲ್ಲಾ ಪ್ರರಾಬ್ಧಕರ್ಮದ ಕೊಳೆ ತೊಳೆದುಹೋಗಿ ಆತನ ಬುದ್ಧಿ ಸ್ವಚ್ಛವಾಗುತ್ತದೆ.
“ಅರ್ಜುನ ಇಂದ್ರಾಂಶಸಂಭೂತ, ಅಪರೋಕ್ಷ ಜ್ಞಾನಿ. ಅಪರೋಕ್ಷಜ್ಞಾನಿಗಳಿಗೆ ಅವರ ಹಿಂದಿನ ಎಲ್ಲಾ ಪಾಪ ನಾಶವಾಗಿರುತ್ತದೆ ಮತ್ತು ಮುಂದೆಂದೂ ಅವರಿಗೆ ಪಾಪ ಅಂಟುವುದಿಲ್ಲ. ಹಾಗಿರುವಾಗ ಅರ್ಜುನನಿಗೆ ಎಲ್ಲಿಂದ ಬಂತು ಈ ಮನಸ್ಸಿನ ಕೊಳೆ” ಎನ್ನುವ ಪ್ರಶ್ನೆ ಇಲ್ಲಿ ನಮಗೆ ಬರಬಹುದು. ಇದಕ್ಕೆ ಉತ್ತರ ಪ್ರಾರಾಬ್ಧಕರ್ಮ. ಪ್ರರಾಬ್ಧಕರ್ಮ ಅಪರೋಕ್ಷ ಜ್ಞಾನಿಯನ್ನೂ ಬಿಡುವುದಿಲ್ಲ. ವೇದವ್ಯಾಸರೇ ಹೇಳಿರುವಂತೆ: “ಪ್ರರಾಬ್ಧಕರ್ಮ ಅಪರೋಕ್ಷ ಜ್ಞಾನದಿಂದ ನಾಶವಾಗುವುದಿಲ್ಲ, ಆದರೆ ಅದರ ವೇಗ ಮಾತ್ರ ಖಂಡಿತವಾಗಿ ಕಡಿಮೆಯಾಗುತ್ತದೆ”. ಇಲ್ಲಿ ಶ್ರೀಕೃಷ್ಣನ ಅಗಲಿಕೆಯ ನಂತರ ಅರ್ಜುನನಲ್ಲಿ ಬೆಳೆದ ಧ್ಯಾನ-ಭಕ್ತಿಯಿಂದಾಗಿ  ಆತನ  ಪ್ರರಾಬ್ಧಕರ್ಮದ ವೇಗ ತ್ರಾಸವಾಗುತ್ತದೆ.

ಗೀತಂ ಭಗವತಾ ಜ್ಞಾನಂ ಯತ್ತತ್ಸಂಗ್ರಾಮಮೂರ್ಧನಿ
ಕಾಲಕರ್ಮತಮೋರುದ್ಧಂ ಪುನರಧ್ಯಗಮದ್ ವಿಭುಃ

ಭಗವದ್ಗೀತೆಯನ್ನು ನೇರವಾಗಿ ಭಗವಂತನಿಂದ ಪಡೆದಮೇಲೂ ಅರ್ಜುನನ ಮನಸ್ಸಿನ ಮೇಲೆ ಒಂದು ಆವರಣ ಇತ್ತು. ಆತ ಗೀತೋಪದೇಶ ಪಡೆದದ್ದು ಯುದ್ಧರಂಗದಲ್ಲಿ. ಆನಂತರ ಸುಮಾರು ಮೂವತ್ತಾರು ವರ್ಷಗಳಲ್ಲಿ ಅನೇಕ ಆಡಳಿತದ ಜವಾಬ್ಧಾರಿ, ಶತ್ರುನಿಗ್ರಹದಂತಹ ಕರ್ಮಗಳ ನಡುವೆ  ಕಾಲಕ್ರಮೇಣ ಗೀತೆಯ ಜ್ಞಾನ ಆತನಲ್ಲಿ ಮುಸುಕಾಯಿತು. ಆತನ ಮನಸ್ಸಿನ ಮೇಲೆ ತಮೋಗುಣದ ಆವರಣ ಸೃಷ್ಟಿಯಾಯಿತು. ಆದರೆ ಆ ಜ್ಞಾನ ಇಂದು ಶ್ರೀಕೃಷ್ಣ ಅವತಾರ ಸಮಾಪ್ತಿ ಮಾಡಿದ ಮೇಲೆ, ಮತ್ತೆ  ಜ್ವಲಂತವಾಗಿ ವ್ಯಕ್ತವಾಯಿತು. ಕೃಷ್ಣನನ್ನು ಕಳೆದುಕೊಂಡ ಅರ್ಜುನ ಗೀತೆಯನ್ನು ಮರಳಿ ಪಡೆದ. ಆತನಲ್ಲಿ ಅಂತಹ ಸಾಮರ್ಥ್ಯ ಇದ್ದುದರಿಂದ ಇದು ಆತನಿಗೆ ಸಾಧ್ಯವಾಯಿತು.

ವಿಶೋಕೋ ಬ್ರಹ್ಮಸಂಪತ್ತ್ಯಾ ಸಂಚ್ಛಿನ್ನದ್ವೈತಸಂಶಯಃ
ಲೀನಪ್ರಕೃತಿನೈರ್ಗುಣ್ಯಾದಲಿಂಗತ್ವಾದಸಂಭವಃ

ಗೀತೆಯನ್ನು ನೇರವಾಗಿ ಶ್ರೀಕೃಷ್ಣನಿಂದ ಪಡೆದಮೇಲೂ, ಅರ್ಜುನನಿಗೆ ಪೂರ್ಣ ಜ್ಞಾನೋದಯವಾಗಿರಲಿಲ್ಲ ಎನ್ನುವುದಕ್ಕೆ ಉತ್ತಮ ಉದಾಹರಣೆ- ಅಭಿಮನ್ಯುವಿನ ಮರಣ. ಆಗ ಅರ್ಜುನ ಬಗೆಬಗೆಯಾಗಿ ರೋಧಿಸುತ್ತಾನೆ. ಶ್ರೀಕೃಷ್ಣ ಹುಟ್ಟು-ಸಾವಿನ ಬಗ್ಗೆ ಚಿಂತಿಸಬಾರದು ಎಂದು ಹೇಳಿದ್ದರೂ ಕೂಡಾ, ತನ್ನ ಮಗ ಸತ್ತಾಗ ಅದನ್ನು ಆತನಿಂದ ತಡೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಆದರೆ ಇಂದು ಶ್ರೀಕೃಷ್ಣನನ್ನು ಕಳೆದುಕೊಂಡ ಅರ್ಜುನ ಗೀತೆಯನ್ನು ಮರಳಿಪಡೆದ. ಹೊರಗೆ ಭಗವಂತ ಕಣ್ಮರೆಯಾದರೂ ಕೂಡಾ, ಅರ್ಜುನ ಆತನನ್ನು ತನ್ನ ಅಂತರಂಗದಲ್ಲಿ ಪಡೆದ. ಆತನ ಬುದ್ಧಿಗೆ ಅಂಟಿದ್ದ ಮುಸುಕು ಇಂದು ಮಾಯವಾಗಿದೆ. ಆತ ಆನಂದಮಯ ಸ್ಥಿತಿಗೆ ತಲುಪಿದ್ದಾನೆ.
ಅಂತರಂಗದಲ್ಲಿ ಭಗವಂತನನ್ನು ಕಾಣುತ್ತಿರುವ ಅರ್ಜುನನಿಗೆ ಭಗವಂತನನ್ನು ಬಿಟ್ಟು ಎರಡನೆಯದು ಯಾವುದೂ ಬೇಡವಾಗಿದೆ. ನಿಶ್ಚಯಾತ್ಮಕವಾದ ಯಥಾರ್ಥ ಜ್ಞಾನದಲ್ಲಿ ಆತ ಕುಳಿತುಬಿಟ್ಟಿದ್ದಾನೆ. ಭಗವಂತನನ್ನು ಬಿಟ್ಟು ಈ ಪ್ರಪಂಚ, ಈ ಬದುಕು, ಬಾಂಧವ್ಯ, ರಾಜ್ಯಾಡಳಿತ, ಯಾವುದೂ ಬೇಡ; ಭಗವಂತನ ಅಂತರಂಗದ ನೆನಪೊಂದೇ ಸಾಕು ಎನ್ನುವ ನಿಶ್ಚಯದಲ್ಲಿ, ಪೂರ್ಣ ಭಗವನ್ಮಯನಾದ ಅರ್ಜುನ. ಇದರಿಂದಾಗಿ ಆತನಲ್ಲಿದ್ದ ಮಾಯೆಯ ಪರೆದೆ ಹೊರಟುಹೋಯಿತು, ಪ್ರಕೃತಿ ಲೀನವಾಯಿತು. ಲಿಂಗಶರೀರದ ಪ್ರಭಾವವೂ ಇಲ್ಲದಾಗಿ, ಗುಣಾತೀತ ಸ್ಥಿತಿಯಲ್ಲಿ ಆತ ನಿಂತುಬಿಟ್ಟ. ಹೀಗೆ ‘ಇನ್ನೆಂದೂ ಮರಳಿ ಪ್ರರಾಬ್ಧಕರ್ಮಕ್ಕೆ ವಶನಾಗುವುದು ಅಸಂಭವ’ ಎನ್ನುವ ಸ್ಥಿತಿಯನ್ನು ಅರ್ಜುನ ಪಡೆದ.

No comments:

Post a Comment