Wednesday, May 22, 2013

Shrimad BhAgavata in Kannada -Skandha-01-Ch-16(2)


ಶೌನಕ ಉವಾಚ--
ಕಸ್ಯ ಹೇತೋರ್ನಿಜಗ್ರಾಹ ಕಲಿಂ ದಿಗ್ವಿಜಯೇ ನೃಪಃ
ನೃದೇವಚಿಹ್ನಧೃಕ್ ಶೂದ್ರಃ ಕೋSಸೌ ಗಾಂ ಯಃ ಪದಾSಹನತ್

“ಪರೀಕ್ಷಿತರಾಜ ಕಲಿಯನ್ನು ದಿಗ್ವಿಜಯ ಕಾಲದಲ್ಲಿ ಗೆದ್ದ” ಎನ್ನುವ ವಿಷಯವನ್ನು ಉಗ್ರಶ್ರವಸ್ಸರಿಂದ ಕೇಳಿದ ಶೌನಕರು: “ಹೇಗೆ ಕಲಿ ಮತ್ತು ಪರೀಕ್ಷಿತರಾಜ ಒಬ್ಬರನ್ನೊಬ್ಬರು ಭೇಟಿಯಾಗುವ ಪ್ರಸಂಗ ಬಂತು? ಕಲಿಯನ್ನು ದಿಗ್ವಿಜಯ ಕಾಲದಲ್ಲಿ ಪರೀಕ್ಷಿತ ಗೆಲ್ಲುವ ಪ್ರಸಂಗ ಯಾವಾಗ ಬಂತು? ಎಂದು ಪ್ರಶ್ನಿಸುತ್ತಾರೆ.
ಇಲ್ಲಿ “ನೃದೇವಚಿಹ್ನಧೃಕ್ ಶೂದ್ರಃ ಕೋSಸೌ” ಎನ್ನುವಲ್ಲಿ “ಅವನು ಯಾರು?” ಎಂದು ಪ್ರಶ್ನಿಸಿದಂತೆ ಕಾಣುತ್ತದೆ. ಆದರೆ ಹಿಂದಿನ ಶ್ಲೋಕದಲ್ಲೇ “ಹಸುವನ್ನು ತುಳಿಯುತ್ತಿದ್ದ ಕಲಿಯನ್ನು ಪರೀಕ್ಷಿತ ಗೆದ್ದ” ಎಂದು ಸ್ಪಷ್ಟವಾಗಿ ಹೇಳಿರುವುದರಿಂದ ಮತ್ತೆ “ಯಾರವನು” ಎನ್ನುವ ಪ್ರಶ್ನೆ ಇಲ್ಲಿ ಕೂಡುವುದಿಲ್ಲ. ಕೋSಸಾ ವಿತ್ಯಾಕ್ಷೇಪಃ ಕಲಿಮಿತ್ಯುಕ್ತತ್ವಾತ್ ಇಲ್ಲಿ  “ಯಾರವನು” ಎನ್ನುವುದು ಆಕ್ಷೇಪ ವಾಚಕ. ಹಸುವನ್ನು ತುಳಿಯಲು ಅವನ್ಯಾರು? ಅವನಿಗೆಷ್ಟು ಧೈರ್ಯ? ಎನ್ನುವ ತಿರಸ್ಕಾರ ವಾಚಕ ಪ್ರಶ್ನೆ ಇದಾಗಿದೆ.

ತತ್ಕ ಕಥ್ಯತಾಂ ಮಹಾಭಾಗ ಯದಿ ವಿಷ್ಣುಕಥಾಶ್ರಯಮ್
ಅಥವಾSಸ್ಯ ಪದಾಂಭೋಜ ಮಕರಂದಲಿಹಾಂ ಸತಾಮ್

“ಕಲಿ ಏಕೆ ಹಾಗೆ ಮಾಡಿದ? ಕಲಿಗೂ ಪರೀಕ್ಷಿತನಿಗೂ ಯುದ್ಧವಾಗುವ ಮೊದಲು ಏನಾಯ್ತು ಎನ್ನುವುದನ್ನು ವಿವರಿಸಿ” ಎಂದು ಶೌನಕರು ಸೂತರಲ್ಲಿ ಕೇಳುತ್ತಾರೆ. ಇಲ್ಲಿ ಶೌನಕರು ಹೇಳುತ್ತಾರೆ: ಈ ವಿಷಯ ಭಗವಂತನ ಮಹಾತ್ಮ್ಯವನ್ನು ಅಭಿವ್ಯಕ್ತಗೊಳಿಸುವ ಕಥೆಯಾಗಿದ್ದರೆ ಅಥವಾ ಭಗವಂತನ ಪಾದವೆಂಬ ತಾವರೆಯ ಮದುರಸವನ್ನು ಹೀರುವ ಸಜ್ಜನರ ಕಥೆಯಾಗಿದ್ದರೆ ಮಾತ್ರ ವಿವರಿಸಿ. ಇಲ್ಲದಿದ್ದರೆ ಬೇಡ” ಎಂದು. ಏಕೆಂದರೆ ಯಾವುದಕ್ಕೂ ಉಪಯೋಗವಿಲ್ಲದ ಮಾತನ್ನಾಡುವುದರಲ್ಲಿ ಯಾವುದೇ ಅರ್ಥವಿಲ್ಲ. ಆದರೆ ಬದುಕಿನ ಒಂದೊಂದು ಕ್ಷಣವನ್ನೂ ಸಾರ್ಥಕಗೊಳಿಸುವ ಭಗವಂತನ ವಿಷಯವನ್ನು ಎಂದೂ ಬಿಡದೇ ಕೇಳಬೇಕು.   

ಕಿಮನ್ಯೈರಸದಾಲಾಪೈರಾಯುಷೋ ಯದಸದ್ ವ್ಯಯಃ
 ಕ್ಷುದ್ರಾಯುಷಾಂ ನೃಣಾಮಂಗ ಮರ್ತ್ಯಾನಾಮೃತಮಿಚ್ಛತಾಮ್

ಇಹೋಪಹೂತೋ ಭಗವಾನ್ ಮೃತ್ಯುಃ ಶಾಮಿತ್ರಕರ್ಮಣಿ
ನ ಕಶ್ಚಿನ್ ಮ್ರಿಯತೇ ತಾವದ್ ಯಾವದಾಸ್ತ ಇಹಾಂತಕಃ

ಏತದರ್ಥಂ ಹಿ ಭಗವಾನಾಹೂತಃ ಪರಮರ್ಷಿಭಿಃ
ಅಹೋ ನೃಲೋಕೇ ಪೀಯೇತ ಹರಿಲೀಲಾಮೃತಂ ವಚಃ

ಇಲ್ಲಿ ಶೌನಕರು  ಹೇಳುತ್ತಾರೆ: “ಇಲ್ಲಿ ಪ್ರವಚನ ನಡೆಯುವಾಗ ಯಾರಿಗೂ ಮೃತ್ಯುವಿನ ಆತಂಕವಿಲ್ಲ. ಆದ್ದರಿಂದ ನೀವು ಯಾವುದೇ ಅವಸರವಿಲ್ಲದೆ ವಿವರವಾಗಿ ಎಲ್ಲವನ್ನೂ ಹೇಳಿ” ಎಂದು. ಶೌನಕರ ಈ ಮಾತಿನ ಹಿಂದೆ ಒಂದು ಹಿನ್ನೆಲೆ ಇದೆ. ನಮಗೆ ತಿಳಿದಂತೆ ಈ ಸಂಭಾಷಣೆ ನಡೆಯುತ್ತಿರುವುದು ನೈಮಿಶಾರಣ್ಯದಲ್ಲಿ. ಅಲ್ಲಿ ನಿತ್ಯ ಪ್ರವಚನ ನಡೆಯುತ್ತಿತ್ತು. ಆ ಕಾಲದಲ್ಲಿ ಅಲ್ಲಿನ ಋಷಿಗಳು  ಭಗವಂತನ ಗುಣಗಾನ ನಡೆಯುವಾಗ ಯಾರೂ ಸಾಯಬಾರದು ಎಂದು ಮೃತ್ಯುದೇವತೆಯನ್ನು ಪ್ರಾರ್ಥಿಸಿ, ಆಹ್ವಾನ ಮಾಡಿ, ಪ್ರತಿಷ್ಠಾಪನೆ ಮಾಡಿದ್ದರು. ಇಲ್ಲಿ ಮೃತ್ಯುದೇವತೆ ಎಂದರೆ ಯಮನಲ್ಲ. ಯಮನ ಅಂತರ್ಗತ ಶಿವ, ಶಿವನ ಅಂತರ್ಗತನಾದ-ನರಸಿಂಹ ಮೃತ್ಯುದೇವತೆ. ಎಲ್ಲಾ ಮಹರ್ಷಿಗಳು ತಮ್ಮ ತಪಃಶಕ್ತಿಯನ್ನು  ಧಾರೆಯರೆದು ನರಸಿಂಹನನ್ನು ಆಹ್ವಾನ ಮಾಡಿ ಅಲ್ಲಿ ಪ್ರತಿಷ್ಠಾಪನೆ ಮಾಡಿದ್ದರು.
ಅಸ್ಥಿರವೂ ಕ್ಷಣಿಕವೂ ಆದ ಈ ಮನುಷ್ಯಲೋಕದಲ್ಲಿ ಕೂಡಾ ಭಗವಂತನ ಗುಣಗಾನ ಎನ್ನುವ ಅಮೃತವನ್ನು ಜನ ಬಯಸಿದಷ್ಟು ಕಾಲ ಸವಿಯಬೇಕು. ಕಲಿಯುಗದಲ್ಲಿ ಕೂಡಾ ಹರಿನಾಮ ವರ್ಚಸ್ಸು ಉಳಿಯಬೇಕು ಎನ್ನುವುದಕ್ಕಾಗಿ ಶೌನಕರು ನರಸಿಂಹನನ್ನು ಪ್ರಾರ್ಥಿಸಿ, ಅವನನ್ನು ಅಲ್ಲಿ ಪ್ರತಿಷ್ಠಾಪನೆ ಮಾಡಿದ್ದರು. “ಆದ್ದರಿಂದ ಇಲ್ಲಿ ಪ್ರವಚನ ನಡೆಯುವಾಗ ಯಾರೂ ಸಾಯುವುದಿಲ್ಲ, ನೀವು ಎಲ್ಲವನ್ನೂ ಅವಸರವಿಲ್ಲದೆ ವಿವರವಾಗಿ ವಿವರಿಸಿ” ಎಂದು ಕೇಳಿಕೊಳ್ಳುತ್ತಾರೆ ಶೌನಕರು.
ಶೌನಕರ ಕೋರಿಕೆಯಂತೆ ಉಗ್ರಶ್ರವಸ್ಸರು ಪರೀಕ್ಷಿತ ರಾಜನ ಕಥೆಯನ್ನು ವಿವರಿಸುತ್ತಾರೆ. ಪರೀಕ್ಷಿತರಾಜ ತಾನು ಅಧಿಕಾರಕ್ಕೆ ಬಂದ ಮೇಲೆ ಇಡೀ ದೇಶವನ್ನು ಸಂಚಾರ ಮಾಡಿದ. ಶ್ರೀಕೃಷ್ಣ ಮತ್ತು ಪಾಂಡವರು ಇಲ್ಲದ ಕಾಲದಲ್ಲಿ ಆಡಳಿತ ಬಿಗಿ ತಪ್ಪದಂತೆ ನೋಡಿಕೊಳ್ಳಲು ಮತ್ತು ಅಧಿಕಾರಿಗಳ ಪ್ರಾಮಾಣಿಕತೆಯನ್ನು ಪರೀಕ್ಷಿಸಲು ಸಮಗ್ರ ದೇಶ ಸಂಚಾರ ಮಾಡಿದ. ಹೀಗೆ ಸಂಚಾರ ಮಾಡುವಾಗ ಆತನಿಗೆ ಅತ್ಯಂತ ಸಂತೋಷಕೊಟ್ಟ ವಿಚಾರವೆಂದರೆ- ಆತ ಹೋದಲ್ಲೆಲ್ಲಾ “ನಾವು ಪಾಂಡವರನ್ನು, ಶ್ರೀಕೃಷ್ಣನನ್ನು ಕಂಡಿದ್ದೇವೆ” ಎಂದು  ಜನ ಹೇಳಿಕೊಳ್ಳುತ್ತಿದ್ದರು. ಊರ ಜನರು ಶ್ರೀಕೃಷ್ಣನ ಬಗೆಗೆ ಹೇಳುವುದನ್ನು ಕೇಳಿ ಪರೀಕ್ಷಿತನಿಗೆ, ತನ್ನನ್ನು ಗರ್ಭದಲ್ಲೇ ರಕ್ಷಿಸಿದ ಶ್ರೀಕೃಷ್ಣನ ಮೇಲೆ ಇನ್ನಷ್ಟು ಭಕ್ತಿ ಹೆಚ್ಚಾಗುತ್ತದೆ.  

No comments:

Post a Comment