Thursday, May 9, 2013

Shrimad BhAgavata in Kannada -Skandha-01-Ch-14(1)


ಚತುರ್ದಶೋSಧ್ಯಾಯಃ


ಬರಸಿಡಿಲಿನಂತೆ ಬಂದೆರಗಿದ ಶ್ರೀಕೃಷ್ಣನ ಅವತಾರ ಸಮಾಪ್ತಿ ವಿಷಯ

ಅರ್ಜುನ ಉವಾಚ--
ವಂಚಿತೋSಹಂ ಮಹಾರಾಜ ಹರಿಣಾ ಬಂಧುರೂಪಿಣಾ
ಯೇನ ಮೇSಪಹೃತಂ ತೇಜೋ ದೇವವಿಸ್ಮಾಪನಂ ಮಹತ್

ಯುದಿಷ್ಠಿರನ ಪ್ರಶ್ನೆಗಳನ್ನು ಕೇಳಿ ಅರ್ಜುನ ಗದ್ಗದಿಸುತ್ತಾ ಹೇಳುತ್ತಾನೆ: ಅಣ್ಣಾ, ನಮ್ಮ ಕಥೆ ಮುಗಿಯಿತು. ಕೃಷ್ಣ ನಮ್ಮನ್ನೆಲ್ಲಾ ಬಿಟ್ಟು ಹೊರಟುಹೋದ. ಕೃಷ್ಣನ ಶ್ರೀರಕ್ಷೆಯಲ್ಲಿ ನಾವು ಮೂರು ಲೋಕದ ವೀರರು ಎಂದು ಖ್ಯಾತಿ ಗಳಿಸಿದ್ದೆವು. ಶ್ರೀಕೃಷ್ಣನ ತೋಳತೆಕ್ಕೆಯಲ್ಲಿದ್ದಾಗ, ಹೇಗೆ ಭಗವದ್ ಭಕ್ತರನ್ನು ಆಸುರೀ ಶಕ್ತಿಗಳು ಘಾಸಿಗೊಳಿಸಲಾರವೋ, ಹಾಗೆ ನಾವು ಶ್ರೀಕೃಷ್ಣನಿಂದ ರಕ್ಷಿಸಲ್ಪಪಟ್ಟೆವು. ಯುದ್ಧದಲ್ಲಿ ಯಾವ ಅತಿರಥ ಮಹಾರಥರ ಬಾಣವೂ ನಮ್ಮನ್ನು ಘಾಸಿಗೊಳಿಸಲಿಲ್ಲ.  ಮಹಾಭಾರತ ಯುದ್ಧದಲ್ಲಿ ನಮಗೆ ಗೆಲುವು ತಂದುಕೊಟ್ಟಿದ್ದು-ನನ್ನ ಗಾಂಢೀವವಾಗಲಿ, ಭೀಮನ ಗದೆಯಾಗಲೀ ಅಲ್ಲ. ಸ್ವಯಂ ಶ್ರೀಕೃಷ್ಣ ನಮ್ಮೊಳಗೆ ನಿಂತು ನಮಗೆ ಜಯ ತಂದುಕೊಟ್ಟ. 

ಪತ್ನ್ಯಾಸ್ತವಾಪಿ ಮಖ ಕ್ಲೈಪ್ತ ಮಹಾಭಿಷೇಕ ಶ್ಲಾಘಿಷ್ಠಚಾರುಕಬರಂ ಕಿತವೈಃ ಸಭಾಯಾಮ್
ಸ್ಪೃಷ್ಟಂ ವಿಕೀರ್ಯ ಪದಯೋಃ ಪತಿತಾಶ್ರುಮುಖ್ಯೋ ಯೈಸ್ತತ್ ಸ್ತ್ರಿಯೋ ನೈಕೃತ ತತ್ ಸವಿಮುಕ್ತಕೇಶ್ಯಃ೧೦

ರಾಜಸೂಯ ಯಾಗ ಮಾಡಿದಾಗ ಸಹಧರ್ಮಿಣಿಯಾಗಿ ಜೊತೆಗೆ ಕುಳಿತ ದ್ರೌಪದಿಗೆ ಯಾಗದ ಕೊನೆಗೆ ಸಮಸ್ತ ತೀರ್ಥದಿಂದ ಋಷಿಗಳು ಅಭಿಷೇಕ ಮಾಡಿದರು. ಆದರೆ ಯಜ್ಞಶೇಷವಾಗಿರುವ ಪವಿತ್ರ ಅಭಿಷೇಕದಿಂದ ಪಾವನವಾಗಿರುವ ಆಕೆಯ ತಲೆ ಮುಡಿಗೆ ಧೂರ್ತ ಜೂಜುಕೋರರು ಕೈಹಾಕಿದರು. ಈ ಸಂದರ್ಭದಲ್ಲಿ ಪಾಂಡವರು ಏನನ್ನೂ ಮಾಡಲು ಸಾಧ್ಯವಾಗದೇ ಅಸಹಾಯಕರಾಗಿ ನೋಡಬೇಕಾಯಿತು. ಆದರೆ ಶ್ರೀಕೃಷ್ಣ ದ್ರೌಪದಿಯನ್ನು  ಆ ಸಂಕಷ್ಟದಿಂದ ಪಾರುಮಾಡಿ ರಕ್ಷಿಸಿದ.
ಧೃತರಾಷ್ಟ ದ್ರೌಪದಿಯಲ್ಲಿ ಏನು ಬೇಕೋ ಕೇಳು ಎಂದಾಗ ಆಕೆ ಕೇಳಿದ್ದು ರಾಜ್ಯವನ್ನಲ್ಲ, ಸಂಪತ್ತನ್ನಲ್ಲ, ಬದಲಿಗೆ ದಾಸತ್ವದಿಂದ ಪಾಂಡವರ ಮುಕ್ತಿ.  ಇದನ್ನು ಕಂಡು ದ್ರೌಪದಿಯನ್ನು ದ್ವೇಷಿಸುತ್ತಿದ್ದ ಕರ್ಣ ಕೂಡಾ ‘ಬೇಷ್’ ಎಂದ. “ದಡ ಸಿಗದ ಕಡಲಲ್ಲಿ ಮುಳುಗಿಯೇ ಹೋಗುತ್ತಿದ್ದ ತನ್ನ ಗಂಡಂದಿರರನ್ನು ಹಡಗಾಗಿ ಬಂದು ದಡ ಹಾಯಿಸಿದ ಮಹಾಮಹಿಳೆ ಇವಳು” ಎಂದು ದ್ರೌಪದಿಯನ್ನು ಹೊಗಳಿದ ಆತ. ಇಷ್ಟೆಲ್ಲಾ ಆದರೂ, ಮತ್ತೆ ಜೂಜಾಡಿ ಸೋತು ಪಾಂಡವರು ಕಾಡಿಗೆ ಹೋಗುವಂತಾಯಿತು. ದ್ರೌಪದಿ ಕೂಡಾ ಪಂಚಪಾಂಡವರೊಂದಿಗೆ ಕಾಡಿಗೆ ಹೋಗುತ್ತಾಳೆ. ಕಾಡಿನಲ್ಲಿ ಕೃಷ್ಣನ ಭೇಟಿಯಾದಾಗ ದ್ರೌಪದಿ ದುಃಖದಿಂದ ಹೇಳುತ್ತಾಳೆ: “ನನಗೆ ಗಂಡಂದಿರರಿಲ್ಲ, ಮಕ್ಕಳಿಲ್ಲ, ಬಂಧು-ಬಾಂಧವರಿಲ್ಲ! ಏಕೆಂದರೆ ಸಭೆಯಲ್ಲಿ ನನ್ನ ಮಾನ ಹೋಗುವ ಸಂದರ್ಭದಲ್ಲಿ ಯಾರೂ ನನ್ನನ್ನು ಕಾಪಾಡಲಿಲ್ಲ. ಆದ್ದರಿಂದ ನಾನೊಬ್ಬ ಅನಾಥ ಮಹಿಳೆ. ಹೆಣ್ಣಿನ ಅವಮಾನದ ನೋವು ನಿನಗೆ ಅರ್ಥವಾಗುವುದೆಂದು ನಂಬಿದ್ದೇನೆ” ಎಂದು ಹೇಳಿ ತನ್ನ ತಲೆಮುಡಿಯನ್ನು ಬಿಚ್ಚಿಹಾಕುತ್ತಾಳೆ ದ್ರೌಪದಿ. ತಲೆಕೂದಲು ಬಿಚ್ಚಿ ಹಾಕುವುದು ವೈದವ್ಯದ ಸಂಕೇತ. ಹೀಗೆ ಬಿಚ್ಚಿದ ತನ್ನ ಮುಡಿಯನ್ನು ಕೃಷ್ಣನ ಪಾದದ ಮೇಲೆ ಹಾಸಿ ದ್ರೌಪದಿ ಶ್ರೀಕೃಷ್ಣನಿಗೆ ನಮಸ್ಕರಿಸುತ್ತಾಳೆ. ಈ ಸಂದರ್ಭದಲ್ಲಿ ಆಕೆಯ ಕಣ್ಣಿನಿಂದ ಒಂದು ಹನಿ ಕಣ್ಣೀರು ಶ್ರೀಕೃಷ್ಣನ ಪಾದದ ಮೇಲೆ ಬೀಳುತ್ತದೆ. ಆ ಕಣ್ಣೀರು ಎಲ್ಲಾ ಕಣ್ಣೀರಿಗಿಂತ ಶ್ರೇಷ್ಠವಾದ ಕಣ್ಣೀರು. ದ್ರೌಪದಿಯ ಕಣ್ಣೀರನ್ನು ಒರೆಸಿದ ಶ್ರೀಕೃಷ್ಣ ಹೇಳುತ್ತಾನೆ: ಯಾರು ನಿನ್ನ ತಲೆಮುಡಿಗೆ ಕೈಇಟ್ಟು ನಿನ್ನ ಮಾನಭಂಗಕ್ಕೆ ಮುಂದಾದರೋ, ಅವರ ಪತ್ನಿಯರು ತಲೆಮುಡಿ ಬಿಚ್ಚುವಂತಾಗುತ್ತದೆ” ಎಂದು.   
“ಇಲ್ಲಿ ಎಲ್ಲವೂ ಶ್ರೀಕೃಷ್ಣನ ಸಂಕಲ್ಪದಂತೆ ನಡೆಯಿತೇ ಹೊರತು ನಮ್ಮ ಪೌರುಷ ಏನೂ ಇಲ್ಲಾ” ಎನ್ನುತ್ತಾ ಅರ್ಜುನ ದ್ವಾರಕೆಯಲ್ಲಿ ನಡೆದ ಇನ್ನೊಂದು ಘಟನೆಯನ್ನು ಧರ್ಮರಾಯನಿಗೆ ವಿವರಿಸುತ್ತಾನೆ:   ಕೃಷ್ಣ ಹೊರಟು ಹೋಗುವಾಗ “ದ್ವಾರಕೆ ಮುಳುಗಲಿದೆ, ಆದ್ದರಿಂದ ನೀನು ಇಲ್ಲಿರುವವರನ್ನು ಕರೆದುಕೊಂಡು ಇಲ್ಲಿಂದ ಹೊರಟುಹೋಗಬೇಕು” ಎಂದು ಹೇಳಿರುತ್ತಾನೆ. ಕೃಷ್ಣನ ಆಜ್ಞೆಯಂತೆ ಅರ್ಜುನ ಎಲ್ಲರನ್ನು ಕರೆದುಕೊಂಡು ಬರುತ್ತಿರುವಾಗ, ದಾರಿಯಲ್ಲಿ ದರೋಡೆಕೋರರು ಅಡ್ಡಗಟ್ಟಿ ಅವರ ಎಲ್ಲಾ ಸಂಪತ್ತನ್ನು ದೋಚುತ್ತಾರೆ! ಯಾವ ಅರ್ಜುನ ಗಾಂಡೀವ ಹಿಡಿದು ನಿರ್ಭಯನಾಗಿ ಹನ್ನೊಂದು ಅಕ್ಷೋಹಿಣಿ ಸೈನ್ಯದ ಮುಂದೆ ಹೊರಾಡಿದ್ದನೋ, ಅದೇ ಅರ್ಜುನನಿಗೆ ಕಾಡಿನಲ್ಲಿ ಒಬ್ಬ ಸಾಮಾನ್ಯ ದರೋಡೆಕೋರರಿಂದ ಜನರನ್ನು ರಕ್ಷಿಸಲು ಸಾಧ್ಯವಾಗುವುದಿಲ್ಲ! 

ತದ್ವೈ ಧನುಸ್ತ ಇಷವಃ ಸ ರಥೋ ಹಯಾಸ್ತೇ ಸೋSಹಂ ರಥೀ ನೃಪತಯೋ ಯತ ಆಮನಂತಿ
ಸರ್ವಂ ಕ್ಷಣೇನ ತದಭೂದಸದೀಶರಿಕ್ತಂ ಭಸ್ಮನ್ಹುತಂ ಕುಹಕರಾದ್ಧಮಿವೋಪ್ತಮೂಷೇ೨೧

ಅರ್ಜುನ ಹೇಳುತ್ತಾನೆ: “ಅದೇ ಗಾಂಡೀವ, ಅದೇ ಬಾಣಗಳು, ಅದೇ ರಥ, ಅದೇ ಕುದುರೆಗಳು. ಯಾರ ಹೆಸರು ಕೇಳಿದರೆ ರಾಜಾದಿರಾಜರು ಶರಣಾಗುತ್ತಿದ್ದರೋ-ಅದೇ ಅರ್ಜುನ. ಆದರೆ ವ್ಯತ್ಯಾಸ ಒಂದೇ. ಅಂದು ಕೃಷ್ಣ ಜೊತೆಗಿದ್ದ, ಇಂದು ಇಲ್ಲ! ಕೃಷ್ಣನನ್ನು ಹೊರತುಪಡಿಸಿದಾಗ ಎಲ್ಲವೂ ಶೂನ್ಯ. ಕೃಷ್ಣನಿಲ್ಲ ಎಂದರೆ ಎಲ್ಲವೂ ಮರುಭೂಮಿಯಲ್ಲಿ ಬಿತ್ತಿದ ಬೀಜದಂತೆ, ಬೂದಿಯಲ್ಲಿ ಹೊಮಮಾಡಿದಂತೆ ವ್ಯರ್ಥ. ಎಲ್ಲಾ ಪರಿಕರಗಳಿದ್ದೂ, ಒಬ್ಬ ಸಾಮಾನ್ಯ ದರೋಡೆಕೋರರನ್ನು ಗೆಲ್ಲಲಾರದೇ ಹೋದೆ  ನಾನು”.  
ಇಲ್ಲಿ ನಮಗೊಂದು ಪ್ರಶ್ನೆ ಬರುತ್ತದೆ. ನಮಗೆ ತಿಳಿದಂತೆ ಮಹಾಭಾರತ ಯುದ್ಧದಲ್ಲಿ ಅಶ್ವತ್ಥಾಮ ನಾರಾಯಣ ಅಸ್ತ್ರ ಪ್ರಯೋಗಿಸಿದ್ದ. ಆಗ ಶ್ರೀಕೃಷ್ಣ ಎಲ್ಲರಲ್ಲೂ ಆ ಅಸ್ತ್ರಕ್ಕೆ ತಲೆಬಾಗುವಂತೆ ಸೂಚಿಸಿ ಪಾಂಡವರನ್ನು ರಕ್ಷಿಸಿದ್ದ. ಕೊನೆಗೆ ಯುದ್ಧಾನಂತರ ಹಿಂದಿರುಗಿ ಬಂದು, ಅರ್ಜುನನನ್ನು ರಥದಿಂದ ಮೊದಲು ಕೆಳಗಿಳಿಸಿ, ಆನಂತರ ಕೃಷ್ಣ ರಥದಿಂದ ಕೆಳಗಿಳಿದ. ಕೃಷ್ಣ ರಥದಿಂದ ಕೆಳಗಿಳಿದಾಗ, ರಥದ ದ್ವಜದಲ್ಲಿದ್ದ ಕಪಿ ಅದೃಷ್ಯನಾದ. ತಕ್ಷಣ  ಆ ರಥ-ಕುದುರೆಗಳು ಎಲ್ಲವೂ ನಾರಾಯಣ ಅಸ್ತ್ರದಿಂದ ಸಂಪೂರ್ಣವಾಗಿ ಬಸ್ಮವಾಯಿತು. ಹೀಗಿರುವಾಗ ಇಲ್ಲಿ ಅರ್ಜುನ ಅದೇ ರಥ, ಅದೇ ಕುದುರೆಗಳು ಎಂದು ಏಕೆ ಹೇಳಿದ್ದಾನೆ? ಈ ಪ್ರಶ್ನೆಗೆ ಆಚಾರ್ಯರು ತಮ್ಮ ತಾತ್ಪರ್ಯ ನಿರ್ಣಯದಲ್ಲಿ ಉತ್ತರಿಸಿದ್ದಾರೆ.

ಸ ರಥೋ ಹಯಾಸ್ತ ಇತಿ ತಾದೃಶಾ ಇತ್ಯರ್ಥಃ, ತ ಇಷವ ಇತೀವ
ಸದೃಶೇ ವಾ ಪ್ರಧಾನೇ ವಾ ಕಾರಣೇ ವಾ ತದಿತ್ಯಯಮ್
ಶಬ್ದಃ ಸಂಘಟತೇ ಭೇದೇ ವಿದ್ಯಮಾನೇSಪಿ ತತ್ವತಃ
ಇತಿ ಬ್ರಹ್ಮತರ್ಕೇ ತದ್ರಥಹಯಾನಾಂ ದಾಹೊಕ್ತೇಃ

ಹೇಗೆ ‘ಅದೇ ಬಾಣ’ ಎಂದರೆ ‘ಅಂತಹದ್ದೇ ಬಾಣ’ ಎಂದರ್ಥವೋ, ಹಾಗೇ- ಇಲ್ಲಿ ‘ಅದೇ ರಥ, ಅದೇ ಕುದುರೆ’ ಎನ್ನುವುದಕ್ಕೆ ‘ಅಂತಹದ್ದೇ ರಥ, ಅಂತಹದ್ದೇ ಕುದುರೆಗಳು’ ಎಂದರ್ಥ. ಈ ರೀತಿ ಅರ್ಥ ಮಾಡಿದಾಗ ಮಾತ್ರ ಇದು ಮಹಾಭಾರತದಲ್ಲಿ ಹೇಳಿರುವ ಕಥೆಗೆ ಕೂಡುತ್ತದೆ.
ಅರ್ಜುನ ಹೇಳುತ್ತಾನೆ: “ಈಗ ನನಗೆ ತಿಳಿಯಿತು. ನಮ್ಮ ಬದುಕಿನಲ್ಲಿ ಎಲ್ಲವೂ ನಡೆದದ್ದು ಶ್ರೀಕೃಷ್ಣನಿಂದಾಗಿ. ಶ್ರೀಕೃಷ್ಣನನ್ನು ಬಿಟ್ಟು ನಮ್ಮ ಬದುಕಿಗೆ ಅರ್ಥವಿಲ್ಲ. ಆದ್ದರಿಂದ ನಾವು ಇಲ್ಲಿರುವುದರಲ್ಲಿ ಅರ್ಥವಿಲ್ಲ. ಕೃಷ್ಣ ನಮ್ಮನ್ನು ಬಿಟ್ಟು ಹೊರಟುಹೋದ- ಇಂತಹ ಸ್ಥಿತಿಯಲ್ಲಿ ನಾನು ಬಂದಿದ್ದೇನೆ” ಎಂದು ತನ್ನ ದುಃಖವನ್ನು ತೋಡಿಕೊಳ್ಳುತ್ತಾನೆ ಅರ್ಜುನ. 

No comments:

Post a Comment