Saturday, May 11, 2013

Shrimad BhAgavata in Kannada -Skandha-01-Ch-14(2)


ರಾಜಂಸ್ತ್ವಯಾSನುಭಿಪೃಷ್ಟಾನಾಂ ಸುಹೃದಾಂ ನಃ ಸುಹೃತ್ಪುರೇ
ವಿಪ್ರಶಾಪವಿಮೂಢಾನಾಂ ನಿಘ್ನತಾಂ ಮುಷ್ಟಿಭಿರ್ಮಿಥಃ೨೨

ವಾರುಣೀಂ ಮದಿರಾಂ ಪೀತ್ವಾ ಮದೋನ್ಮಥಿತಚೇತಸಾಮ್
ಅಜಾನತಾಮಿವಾತ್ಮಾನಂ ಚತುಃಪಂಚಾವಶೇಷಿತಾಃ೨೩

ಪಾಂಡವರ ಆತ್ಮೀಯ ಬಂಧುಗಳಾದ ಯಾದವರಿಗೆ ಏನಾಯಿತು ಎನ್ನುವುದನ್ನು ಅರ್ಜುನ ಯುದಿಷ್ಠಿರನಿಗೆ ವಿವರಿಸುತ್ತಾನೆ. ಸುಮಾರು ಇಪ್ಪತ್ತಾರು ವರ್ಷಗಳ ಹಿಂದೆ, ಗರ್ಭಿಣಿ ಹೆಣ್ಣಿನ ವೇಷ ಧರಿಸಿದ್ದ ಸಾಂಬನನ್ನು ಮುಂದಿಟ್ಟುಕೊಂಡು ಯಾದವರು “ಈಕೆಗೆ ಗಂಡು ಮಗುವಾಗುತ್ತದೋ ಅಥವಾ ಹೆಣ್ಣಾಗುತ್ತದೋ” ಎಂದು ಕೆಲಮಂದಿ ಋಷಿಗಳಲ್ಲಿ ಕೇಳುತ್ತಾರೆ. ಇದರಿಂದ ಕೋಪಗೊಂಡ ವಿಪ್ರರು “ಈತ ಖಂಡಿತವಾಗಿ ಹೆರುತ್ತಾನೆ ಮತ್ತು ಅದರಿಂದ ಇಡೀ ಯಾದವ ಕುಲ ನಾಶವಾಗಲಿದೆ” ಎಂದು ಶಾಪ ಕೊಡುತ್ತಾರೆ. ಋಷಿಗಳ ಶಾಪದಿಂದಾಗಿ ಸಾಂಬ ಕಬ್ಬಿಣದ ಸಲಾಕೆಯೊಂದನ್ನು ಹೆರುತ್ತಾನೆ. ಆಗ ಯಾದವರು ಆ ಸಲಾಕೆಯನ್ನು ಪುಡಿಪುಡಿ ಮಾಡಿ ಸಮುದ್ರಕ್ಕೆ ಚೆಲ್ಲುತ್ತಾರೆ. ಹಾಗೆ ಚಲ್ಲಿದ ಪುಡಿ ಸಮುದ್ರದ ತೆರೆಯಿಂದಾಗಿ ಮರಳಿ ದಡಕ್ಕೆ ಬಂದು ಸೇರುತ್ತದೆ. ಈ ರೀತಿ ಅದು ಬಂದು ಸೇರಿದ ಸ್ಥಳದಲ್ಲಿ  ಒಂದು ಜಾತಿಯ ಮುಳ್ಳಿನ ಗಿಡ ಬೆಳೆಯುತ್ತದೆ.
ಸಮುದ್ರಕ್ಕೆ ಚಲ್ಲಿದ ಕಬ್ಬಿಣದ ಸಲಾಕೆಯ ಪುಡಿಯ ಮಧ್ಯದಲ್ಲಿ ಒಂದು ಕಬ್ಬಿಣದ ಚೂರು ಸೇರಿಕೊಂಡಿದ್ದು ಅದನ್ನು ಮೀನೊಂದು ನುಂಗುತ್ತದೆ. ಆ ಮೀನನ್ನು ಬೆಸ್ತರು ಹಿಡಿದಾಗ ಆ ಕಬ್ಬಿಣದ ಚೂರು ಜರಾ ಎನ್ನುವ ಬೇಡನಿಗೆ ಸಿಗುತ್ತದೆ. ಆತ ಅದನ್ನು ಭೇಟೆಯಲ್ಲಿ ಬಾಣದ ರೂಪದಲ್ಲಿ  ಬಳಸಬಹುದೆಂದು ತನ್ನಲ್ಲಿರಿಸಿಕೊಳ್ಳುತ್ತಾನೆ.
ಶ್ರೀಕೃಷ್ಣ ಯಾದವರೆಲ್ಲರನ್ನು ಪ್ರವಾಸಕ್ಕೆ ಹೋಗಿ ಬನ್ನಿರೆಂದು ಕಳುಹಿಸಿಕೊಡುತ್ತಾನೆ. ಇದು ವಿನೋದಕ್ಕಾಗಿ ಯಾದವರು ಕೈಗೊಂಡ ಪ್ರವಾಸ(Picnic). ಹೀಗೆ ಪ್ರವಾಸದಲ್ಲಿದ್ದಾಗ ಅವರು- ಒಂದು ದಿನ ಸಂಜೆ, ಸಮುದ್ರದ ತಡಿಯಲ್ಲಿ ತಂಗುತ್ತಾರೆ. ಆ ಸಮಯದಲ್ಲಿ ಎಲ್ಲರೂ ವಿನೋದಕ್ಕಾಗಿ ಮಧ್ಯಪಾನ ಮಾಡುತ್ತಾರೆ. [ಶಾಸ್ತ್ರದ ಪ್ರಕಾರ ಕ್ಷತ್ರೀಯರಿಗೆ ಮಾಂಸ ಭಕ್ಷಣೆ ಮತ್ತು ಮದ್ಯಪಾನ ನಿಷೇಧವಲ್ಲ]. ಇಲ್ಲಿ ವಿಪ್ರರ ಶಾಪ ಕೆಲಸ ಮಾಡುತ್ತದೆ. ಮಧ್ಯಪಾನದಿಂದಾಗಿ ಅವರು ತಮ್ಮ ಪ್ರಜ್ಞೆಯನ್ನು ಕಳೆದುಕೊಂಡು ವಿನೋದಕ್ಕಾಗಿ ಜಗಳ ಆರಂಭಿಸುತ್ತಾರೆ. ಆದರೆ ಕ್ಷಣಮಾತ್ರದಲ್ಲೇ ವಿನೋದ ಜಗಳವಾಗಿ, ಜಗಳ ದ್ವೇಷವಾಗಿ, ಅವರು ಸಮುದ್ರದ ತಡಿಯಲ್ಲಿದ್ದ ಮುಳ್ಳಿನ ಗಿಡಗಳನ್ನು ತೆಗೆದುಕೊಂಡು ಹೊಡೆದಾಡಲಾರಂಭಿಸುತ್ತಾರೆ. ಈ ಹೊಡೆದಾಟ ವಿಪರೀತಕ್ಕೆ ತಲುಪಿ ಒಬ್ಬರು ಇನ್ನೊಬ್ಬರನ್ನು ಹೊಡೆದು ಸಾಯಿಸುತ್ತಾರೆ! ಎಂತಹ ವಿಪರ್ಯಾಸ! ಅವರೆಲ್ಲರೂ ಕೂಡಾ ದೈವಾಂಶ ಸಂಭೂತರು. ಆದರೆ ವಿಪ್ರರ ಶಾಪ ಮತ್ತು ಭಗವಂತನ ಸಂಕಲ್ಪದ ಮುಂದೆ ಎಲ್ಲವೂ ನಗಣ್ಯ! ಅವರಿಗೆ ತಾವು ತಪ್ಪು ಮಾಡುತ್ತಿದ್ದೇವೆ ಎನ್ನುವ ಪ್ರಜ್ಞೆಯೂ ಬರಲಿಲ್ಲ. ಒಬ್ಬರಿಗೊಬ್ಬರು ಪರಿಚಯ ಇಲ್ಲದವರ ಹಾಗೆ, ಭಗವಂತನ ಎಚ್ಚರ ಇಲ್ಲದವರಂತೆ ಎಲ್ಲರೂ ಹೊಡೆದಾಡಿಕೊಂಡು ಸತ್ತು ಹೆಣವಾಗಿ ಬೀಳುತ್ತಾರೆ. ಅಲ್ಲಿ ಬದುಕುಳಿದದ್ದು ಎಲ್ಲೋ ಮೂರ್ನಾಲ್ಕು ಮಂದಿ ಮಾತ್ರ.
ದೇವತೆಗಳು ಮನುಷ್ಯರನ್ನು ರಕ್ಷಣೆ ಮಾಡುತ್ತಾರೆ, ಪಾಪ-ಪ್ರಾರಾಬ್ಧ ಇದ್ದಾಗ ಶಿಕ್ಷೆಯನ್ನೂ ಕೊಡುತ್ತಾರೆ. ಯಾರನ್ನು ರಕ್ಷಿಸಬೇಕೆಂದು ಅವರು ತೀರ್ಮಾನ ಮಾಡುತ್ತಾರೋ, ಅವರಿಗೆ ವಿವೇಕವನ್ನು ಕೊಡುತ್ತಾರೆ. ಯಾರು ದಾರಿ ತಪ್ಪಬೇಕಾಗಿರುವುದು ಅವರ ಪ್ರಾರಾಬ್ಧದಲ್ಲಿದೆಯೋ, ಅಂತಹ ಸಂದರ್ಭದಲ್ಲಿ ಅವರಿಗೆ ‘ಯಾವುದು ಸರಿ, ಯಾವುದು ತಪ್ಪು’ ಎನ್ನುವ ತೀರ್ಮಾನ ಮಾಡುವ ಒಳಗಿನ ವಿವೇಕವೇ ಇಲ್ಲವಾಗುವಂತೆ ಮಾಡುತ್ತಾರೆ. ಇದರಿಂದಾಗಿ ನಾವು ಮಾಡುವ ತಪ್ಪು ನಮಗೇ ತಿಳಿಯದಾಗುತ್ತದೆ. ಇಲ್ಲಿ ನಡೆದಿರುವುದೂ ಇಷ್ಟೇ. ಇದು ಅಪರೋಕ್ಷ ಜ್ಞಾನಿಗಳ ಪ್ರರಾಬ್ಧ ಕರ್ಮದ ಫಲಿತಾಂಶ.

ಪ್ರಾಯೇಣೈತದ್ ಭಗವತ ಈಶ್ವರಸ್ಯ ವಿಚೇಷ್ಟಿತಮ್
ಮಿಥೋ ನಿಘ್ನಂತಿ ಭೂತಾನಿ ಭಾವಯಂತಿ ಚ ಯನ್ಮಿಥಃ೨೪

ಯಾದವರು ತಮ್ಮ ಬದುಕಿನ ಪೂರ್ಣ ಭಾಗವನ್ನು ಭಗವಂತನ ಜೊತೆಗೆ ಕಳೆದವರು. ಆದರೂ ಏಕೆ ಹೀಗಾಯ್ತು? “ಇದಕ್ಕೆ ನನ್ನಲ್ಲಿ ವಿವರಣೆ ಇಲ್ಲ” ಎನ್ನುತ್ತಾನೆ ಅರ್ಜುನ. ಎಲ್ಲವೂ ಆ ಭಗವಂತನ ಸಂಕಲ್ಪ. ಯಾವುದೂ ನಮ್ಮ ಕೈಯಲಿಲ್ಲ. ಭಗವಂತ ಸರ್ವಸಮರ್ಥ. ಆತ ನಮ್ಮ ಮನಸ್ಸಿನ ಈಶ (ಮನೀಷಿ). ಪ್ರಪಂಚದಲ್ಲಿ ಬಹುತೇಕ ಎಲ್ಲವೂ ಆತನ  ಇಚ್ಛೆಯಂತೆಯೇ ನಡೆಯುತ್ತದೆ. ಪ್ರಪಂಚದಲ್ಲಿ ಯಾರ ಮೂಲಕವೋ ಯಾರೋ ಹುಟ್ಟುತ್ತಾರೆ.  ಯಾರ ಮೂಲಕವೋ ಯಾರೋ ಸಾಯುತ್ತಾರೆ. ಉದ್ವೇಗದಲ್ಲಿ ಒಬ್ಬರು ಇನ್ನೊಬ್ಬರನ್ನು ನೋಯಿಸಿ ಆನಂತರ ಪಶ್ಚಾತ್ತಾಪಪಡುತ್ತಾರೆ. ತಪ್ಪು ಮಾಡುವಾಗ ತಾನು ಮಾಡುತ್ತಿರುವುದು ಸರಿಯೋ ತಪ್ಪೋ ಎನ್ನುವ ವಿವೇಕವೂ ಇರುವುದಿಲ್ಲ. ಹುಟ್ಟಿಸುವುದು, ರಕ್ಷಿಸುವುದು ಮತ್ತು ಸಾಯಿಸುವುದು ಎಲ್ಲವೂ ಆ ಸರ್ವಸಮರ್ಥ ಭಗವಂತನ ಲೀಲೆ ಎನ್ನುತ್ತಾನೆ ಅರ್ಜುನ.

ಏವಂ ಬಲಿಷ್ಠೈರ್ಯದುಭಿರ್ಮಹದ್ಭಿರಿತರಾನ್ವಿಭುಃ
ಯದೂನ್ ಯದುಭಿರನ್ಯೋನ್ಯಂ ಭೂಭಾರಾನ್ಸಂಜಹಾರ ಹ
ಕಂಟಕಂ ಕಂಟಕೇನೈವ ದ್ವಯಂ ಚಾಪೀಶಿತುಃ ಸಮಮ್೨೬

ಯದುಗಳು ಭೂಮಿಯಲ್ಲಿ ಹುಟ್ಟುವಂತೆ ಮಾಡಿದ ಅವನೇ, ಅವರು ಹುಟ್ಟಿದ ಕಾರ್ಯ ಮುಗಿದಾಗ ಭೂಮಿಗೆ ಭಾರವಾಗುವಂತೆ ಮಾಡಿದ. ಹೀಗೆ ಭೂಮಿಗೆ ಭಾರವಾದವರನ್ನು ಆತನೇ ಸಂಹಾರ ಮಾಡಿದ. ಹೇಗೆ ಮುಳ್ಳನ್ನು ಮುಳ್ಳಿನಿಂದಲೇ ತೆಗೆಯುತ್ತಾರೋ ಹಾಗೆ ಯದುಗಳನ್ನು ಯದುಗಳಿಂದಲೇ ಸಂಹಾರ ಮಾಡಿದ ಶ್ರೀಕೃಷ್ಣ.
ಭಗವಂತನಿಗೆ ಹುಟ್ಟು-ಸಾವಿನಲ್ಲಿ ಯಾವ ಅಂತರವೂ ಇಲ್ಲ. ಏಕೆಂದರೆ ಮೂಲತಃ ಜೀವ ಹುಟ್ಟುವುದೂ ಇಲ್ಲ, ಸಾಯುವುದೂ ಇಲ್ಲ. ಕಾಣುವ ಶರೀರ ಬರುವುದು ಹುಟ್ಟು, ಆ ಶರೀರದಿಂದ ಜೀವ ಕಳಚಿಕೊಳ್ಳುವುದು ಸಾವು. ಹೀಗಾಗಿ ಭಗವಂತ ಎಲ್ಲವನ್ನೂ ನಿರ್ಲಿಪ್ತನಾಗಿ ಮಾಡುತ್ತಾನೆ.
“ಶ್ರೀಕೃಷ್ಣ ಭೂಮಿಯಲ್ಲಿ ತನ್ನ ಅವತಾರ ಸಮಾಪ್ತಿಮಾಡಿದ, ನಾವು ಕೃಷ್ಣನನ್ನು ಕಳೆದುಕೊಂಡೆವು” ಎಂದು ಅರ್ಜುನ ಶೋಕಿಸುತ್ತಾನೆ ಎನ್ನುವಲ್ಲಿಗೆ ಈ ಅಧ್ಯಾಯ ಕೊನೆಗೊಳ್ಳುತ್ತದೆ. ಒಟ್ಟಾರೆ ಹೇಳಬೇಕೆಂದರೆ: ಶ್ರೀಕೃಷ್ಣನ ಅವತಾರ ಸಮಾಪ್ತಿಯಿಂದಾಗಿ ಅರ್ಜುನನಲ್ಲಿ ಉಂಟಾದ ಶೋಕದ ಆವೇಶವನ್ನು ಈ ಅಧ್ಯಾಯ ಚಿತ್ರಿಸಿದೆ.

ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪ್ರಥಮಸ್ಕಂಧೇ ಚತುರ್ದಶೋSಧ್ಯಾಯಃ
ಭಾಗವತ ಮಹಾಪುರಾಣದ ಮೊದಲ ಸ್ಕಂಧದ ಹದಿನಾಲ್ಕನೇ ಅಧ್ಯಾಯ ಮುಗಿಯಿತು.
*********

No comments:

Post a Comment